ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರುದ್ರಾಕ್ಷಿಗಳ ಮಹಿಮೆ, ಅವುಗಳ ಧಾರಣೆಯ ಮಹತ್ವ ನಿಮಗೆಷ್ಟು ಗೊತ್ತು?

By ಶ್ರೀನಿವಾಸ ಗುರೂಜಿ
|
Google Oneindia Kannada News

ಎಂದಿನಂತೆ ಈ ದಿನ ಕೂಡ ತುಂಬ ಮುಖ್ಯವಾದ ಮಾಹಿತಿಯೊಂದನ್ನು ನಿಮಗೆ ಒದಗಿಸುತ್ತಿದ್ದೇನೆ. ಅದು ರುದ್ರಾಕ್ಷಿಯ ಬಗೆಗಿನ ಮಾಹಿತಿ. ರುದ್ರಾಕ್ಷಿ ಧಾರಣೆ ಮಾಡುವುದಕ್ಕೆ ಧಾರ್ಮಿಕ ಪ್ರಾಶಸ್ತ್ಯದ ಜತೆಗೆ ಆಯುರ್ವೇದದಲ್ಲೂ ಪ್ರಾಮುಖ್ಯ ಇದೆ. ಅಂದ ಹಾಗೆ ರುದ್ರಾಕ್ಷಿಯನ್ನು ಏಕಮುಖಿ, ದ್ವಿಮುಖಿ, ಪಂಚಮುಖಿ ಹೀಗೆ ವಿವಿಧ ರೀತಿಯಲ್ಲಿ ಗುರುತಿಸಲಾಗುತ್ತದೆ. ಒಂದೊಂದು ಬಗೆಯ ರುದ್ರಾಕ್ಷಿಯನ್ನು ದೇಹದ ನಿರ್ದಿಷ್ಟ ಭಾಗದಲ್ಲೇ ಧರಿಸಬೇಕು.

ರಕ್ತದ ಒತ್ತಡದಿಂದ ಬಳಲುತ್ತಿರುವವರಿಗೆ ರುದ್ರಾಕ್ಷಿ ಧಾರಣೆ ಅತ್ಯುತ್ತಮವಾದ ಪರಿಹಾರ. ತಾಮ್ರದ ತಂಬಿಗೆಯಲ್ಲಿ ರಾತ್ರಿ ಮಲಗುವ ಮುನ್ನ ನೀರಿಟ್ಟು, ಅದರಲ್ಲಿ ರುದ್ರಾಕ್ಷಿಯನ್ನು ಹಾಕಿಡಬೇಕು. ಬೆಳಗ್ಗೆ ರುದ್ರಾಕ್ಷಿಯನ್ನು ಹೊರಗೆ ತೆಗೆದು, ಆ ನೀರನ್ನು ಸೇವನೆ ಮಾಡಿದರೆ ಹಲವು ಬಗೆಯ ಆರೋಗ್ಯ ಸಮಸ್ಯೆಗಳು ನಿವಾರಣೆ ಆಗುತ್ತವೆ. ಆದರೆ ಅದಕ್ಕಾಗಿ ಪಂಚಮುಖ ರುದ್ರಾಕ್ಷಿಯನ್ನು ಬಳಸಬೇಕು.

ಇರಲಿ, ಈ ದಿನ ರುದ್ರಾಕ್ಷಿಗಳಲ್ಲೇ ಆಯ್ದ ಕೆಲವು ರುದ್ರಾಕ್ಷಿಗಳ ಬಗ್ಗೆ ಮಾಹಿತಿ ನೀಡುತ್ತಿದ್ದೇನೆ. ಇದು ಸಿಗುವುದು ಕೂಡ ಬಹಳ ವಿರಳ. ಧರಿಸುವ ಮುನ್ನ ಪಂಚಗವ್ಯದಿಂದ (ಗೋಮಯ, ಹಾಲು, ಮೊಸರು, ತುಪ್ಪ ಹಾಗೂ ಗೋಮೂತ್ರದಿಂದ ತಯಾರಿಸುವಂಥದ್ದು) ಅಭಿಷೇಕ ಮಾಡಬೇಕು. ಧರಿಸುವ ವೇಳೆ ಹೇಳಬೇಕಾದ ಮಂತ್ರ, ನಡೆದುಕೊಳ್ಳಬೇಕಾದ ರೀತಿ ಬಗ್ಗೆ ಗುರುಗಳ ಮೂಲಕವಾಗಿ ತಿಳಿದುಕೊಳ್ಳಬೇಕು.

Maha Shivaratri Special: Rudrakshi Specialties, Benefits

ಈಗ ರುದ್ರಾಕ್ಷಿಗಳ ಮಹತ್ವ- ವಿಶೇಷವನ್ನು ತಿಳಿದುಕೊಳ್ಳಿ.
* ಏಕಮುಖ ರುದ್ರಾಕ್ಷಿ- ಅತ್ಯಂತ ವಿರಳವಾದ ರುದ್ರಾಕ್ಷಿ ಇದು. ಸ್ವತಃ ಶಿವನೇ ಏಕಮುಖಿ ರುದ್ರಾಕ್ಷಿಯಲ್ಲಿ ಇರುತ್ತಾನೆ ಎಂಬುದು ನಂಬಿಕೆ. ಈ ಏಕಮುಖ ರುದ್ರಾಕ್ಷಿ ಇರುವ ಕಡೆಯಲ್ಲಿ ಜಗತ್ತಿನ ಎಲ್ಲ ಸುಖ- ಸಮೃದ್ಧಿಯೂ ಇರುತ್ತದೆ. ಯಾವುದರ ಭಯವೂ ಇರುವುದಿಲ್ಲ. ಜತೆಗೆ ಈ ರುದ್ರಾಕ್ಷಿಯೂ ಎಲ್ಲ ಪಾಪಗಳನ್ನೂ ತೊಡೆದುಹಾಕುತ್ತದೆ. ಇದರ ಅಧಿಪತಿ ಗ್ರಹ ಸೂರ್ಯ. ಸೋಮವಾರದಂದೇ ಧರಿಸಬೇಕು. ಹೃದಯ ಸಂಬಂಧಿ ಆರೋಗ್ಯ ಸಮಸ್ಯೆ, ರಕ್ತ ದೋಷ, ತಲೆ ನೋವು, ನರ ಸಮಸ್ಯೆ ಸೇರಿದಂತೆ ಹಲವು ಅನಾರೋಗ್ಯ ಸಮಸ್ಯೆ ಇದರಿಂದ ದೂರಾಗುತ್ತದೆ.

ಎಲ್ಲ ವಯಸ್ಕರರು ಇದನ್ನು ಧರಿಸಬಹುದು. ಆದರೆ ಜಾತಕದಲ್ಲಿ ರವಿ ಗ್ರಹದ ದೋಷ ಇದ್ದಲ್ಲಿ ಅದರ ನಿವಾರಣೆಗೆ ಧರಿಸಲಾಗುತ್ತದೆ. ಚಿನ್ನ ಅಥವಾ ಬೆಳ್ಳಿಯಲ್ಲಿ ರುದ್ರಾಕ್ಷಿಯನ್ನು ಕೂರಿಸಿ ಅದನ್ನು ಕುತ್ತಿಗೆಯಲ್ಲಿ ಧರಿಸಬೇಕು ಅಥವಾ ದೇವರ ಮನೆಯಲ್ಲಿ ಇಟ್ಟು ಪೂಜಿಸಬೇಕು. ಏಕಮುಖ ರುದ್ರಾಕ್ಷಿಯನ್ನು ಪೂಜಿಸುವುದರಿಂದ ಹಲವು ಸಮಸ್ಯೆಗಳು ನಿವಾರಣೆಯಾಗುತ್ತವೆ.

* ದ್ವಿಮುಖಿ ರುದ್ರಾಕ್ಷಿ
ದ್ವಿಮುಖಿ ರುದ್ರಾಕ್ಷಿಯ ಅಧಿದೇವತೆ ಅರ್ಧನಾರೀಶ್ವರ. ಕುಟುಂಬದಲ್ಲಿ ಉತ್ತಮ ಬಾಂಧವ್ಯ, ಸ್ನೇಹಿತರು- ಸಂಬಂಧಿಕರ ಜತೆಗೆ ಸೌಹಾರ್ದಯುತವಾದ ಬಂಧ ಏರ್ಪಡುತ್ತದೆ. ಒತ್ತಡ, ಖಿನ್ನತೆ, ನಕಾರಾತ್ಮಕ ಆಲೋಚನೆಯಿಂದ ದೂರ ಇರಲು ಇದರಿಂದ ನೆರವಾಗುತ್ತದೆ. ಈ ರುದ್ರಾಕ್ಷಿಯಿಂದ ಜಾತಕದಲ್ಲಿನ ಚಂದ್ರ ಗ್ರಹ ದೋಷ ನಿವಾರಣೆ ಆಗುತ್ತದೆ. ಕಣ್ಣು, ಕಿಡ್ನಿ, ಜಠರ, ಕರುಳಿಗೆ ಸಂಬಂಧಿಸಿದ ಆರೋಗ್ಯ ಸಮಸ್ಯೆಗಳು ನಿವಾರಣೆ ಆಗುತ್ತವೆ.

ಈ ರುದ್ರಾಕ್ಷಿಯನ್ನು ಒಂದೋ ಕುತ್ತಿಗೆಯಲ್ಲಿ ಧರಿಸಬಹುದು. ಅಂದರೆ ಪೆಂಡೆಂಟ್ ರೀತಿಯಲ್ಲಿ ಧರಿಸಬಹುದು. ಅಥವಾ ಕೈನಲ್ಲಿ ಬ್ರೇಸ್ ಲೆಟ್ ರೀತಿಯಲ್ಲಿ ಹಾಕಿಕೊಳ್ಳಬಹುದು. ಇಲ್ಲದಿದ್ದಲ್ಲಿ ದೇವರ ಮನೆಯಲ್ಲಿಟ್ಟು ಪೂಜೆ ಮಾಡಬಹುದು.

* ತ್ರಿಮುಖಿ ರುದ್ರಾಕ್ಷಿ
ಮಕ್ಕಳಲ್ಲಿ ಪದೇಪದೇ ಜ್ವರ, ಯಕೃತ್ತಿನ ಸಮಸ್ಯೆ, ಒತ್ತಡ ಅಥವಾ ಖಿನ್ನತೆ, ರಕ್ತದೊತ್ತಡದ ನಿಯಂತ್ರಣಕ್ಕೆ ಈ ರುದ್ರಾಕ್ಷಿ ಧಾರಣೆ ಉತ್ತಮ. ಇದನ್ನು ಧರಿಸುವುದರಿಂದ ಪೂರ್ವ ಜನ್ಮದಲ್ಲಿ ಮಾಡಿದ ಪಾಪಗಳ ನಿವಾರಣೆ ಆಗುತ್ತದೆ. ಈ ರುದ್ರಾಕ್ಷಿಯನ್ನು ಗಂಗಾಜಲ, ಹಸಿ ಹಾಲಿನಿಂದ ಪೂಜಿಸಿ, ಕುತ್ತಿಗೆಯಲ್ಲಿ ಧರಿಸಬೇಕು.

ಈ ರುದ್ರಾಕ್ಷಿಯ ಎಲ್ಲ ನಕಾರಾತ್ಮಕ ಶಕ್ತಿಗಳನ್ನು ನಾಶ ಪಡಿಸುತ್ತದೆ. ಕ್ರಿಯೇಟಿವಿಟಿಗೆ ಉತ್ತೇಜನ ನೀಡುತ್ತದೆ. ಕುಜನ ದೋಷವನ್ನು ನಿವಾರಣೆ ಮಾಡುತ್ತದೆ. ಕಾಯಿಲೆ, ದೌರ್ಬಲ್ಯ, ಆಲಸ್ಯ, ಕೀಳರಿಮೆಯಿಂದ ಬಳಲುತ್ತಿರುವವರು ಈ ರುದ್ರಾಕ್ಷಿಯನ್ನು ಧರಿಸಿದರೆ ಉತ್ತಮ ಫಲಿತಾಂಶ ಕಾಣಬಹುದು.

* ಚತುರ್ಮುಖ ರುದ್ರಾಕ್ಷಿ
ಥೈರಾಯ್ಡ್ ಸಮಸ್ಯೆ ಇರುವವರಿಗೆ, ಮಾನಸಿಕ ಸಮಸ್ಯೆಯಿಂದ ನರಳುತ್ತಿರುವವರಿಗೆ, ಮರೆವಿನ ಕಾಯಿಲೆ, ಉಗ್ಗು ಇತ್ಯಾದಿ ಆರೋಗ್ಯ ಸಮಸ್ಯೆಗಳಿಗೆ ಇದರ ಧಾರಣೆಯಿಂದ ಫಲಿತಾಂಶ ದೊರೆಯುತ್ತದೆ. ಚತುರ್ಮುಖ ಬ್ರಹ್ಮನನ್ನು ಈ ರುದ್ರಾಕ್ಷಿ ಪ್ರತಿನಿಧಿಸುತ್ತದೆ. ಈ ರುದ್ರಾಕ್ಷಿ ಧರಿಸುವುದರಿಂದ ಮಾನಸಿಕ ಶಕ್ತಿ ವೃದ್ಧಿಸುತ್ತದೆ.

ಈ ರುದ್ರಾಕ್ಷಿಯನ್ನು ಕೆಂಪು ಬಣ್ಣದ ದಾರದಲ್ಲಿ ಕಟ್ಟಿ ಧರಿಸಬೇಕು. ಅದಕ್ಕೂ ಮುನ್ನ ಗಂಗಾ ಜಲ, ಹಸಿ ಹಾಲಿನಲ್ಲಿ ಅಭಿಷೇಕ ಮಾಡಬೇಕು. ವಿದ್ಯಾರ್ಥಿಗಳು, ಶಿಕ್ಷಕರು, ಸಂಶೋಧಕರು... ಮಾನಸಿಕವಾಗಿ ಹೆಚ್ಚಿನ ಶ್ರಮ ಬೇಡುವ ಕಾರ್ಯಗಳಲ್ಲಿ ತೊಡಗಿದವರು ಇದನ್ನು ಧರಿಸಿದಲ್ಲಿ ಉತ್ತಮ ಫಲ ದೊರೆಯುತ್ತದೆ.

* ಪಂಚ ಮುಖ ರುದ್ರಾಕ್ಷಿ
ಇದು ತುಂಬ ಸಾಮಾನ್ಯವಾಗಿ ದೊರೆಯುವ ರುದ್ರಾಕ್ಷಿಯ ಬಗೆ. ಜಪ ಮಾಲೆಯಾಗಿಯೂ ಇದನ್ನು ಧರಿಸುತ್ತಾರೆ. ಸ್ಥೂಲಕಾಯದ ಸಮಸ್ಯೆ, ಕಿವಿ ಸಮಸ್ಯೆ, ಮಧುಮೇಹ ಇತ್ಯಾದಿ ಆರೋಗ್ಯ ಸಮಸ್ಯೆಗಳಿಗೆ ಇದರಿಂದ ಪರಿಹಾರ ದೊರೆಯುತ್ತದೆ. ಜತೆಗೆ ರಕ್ತದೊತ್ತಡ ನಿಯಂತ್ರಣಕ್ಕೆ ಬರುತ್ತದೆ. ಮೃತ್ಯುಭಯ ನಿವಾರಣೆ ಆಗುತ್ತದೆ. ಒಂದು ಲೋಟ ನೀರಿನಲ್ಲಿ ಪಂಚಮುಖಿ ರುದ್ರಾಕ್ಷಿಯನ್ನು ರಾತ್ರಿ ಮಲಗುವ ಮುನ್ನ ಹಾಕಿಟ್ಟು, ಬೆಳಗ್ಗೆ ಎದ್ದ ಮೇಲೆ ರುದ್ರಾಕ್ಷಿಯನ್ನು ತೆಗೆದಿಟ್ಟು, ಖಾಲಿ ಹೊಟ್ಟೆಯಲ್ಲಿ ಆ ನೀರನ್ನು ಕುಡಿದರೆ ಆರೋಗ್ಯ ಸಮಸ್ಯೆಗಳು ನಿವಾರಣೆ ಆಗುತ್ತವೆ.

ಪಂಚಮುಖಿ ರುದ್ರಾಕ್ಷಿಯನ್ನು ಶಿವಲಿಂಗಕ್ಕೆ ಮುಟ್ಟಿಸಿ, ಆ ನಂತರ ಕೆಂಪು ದಾರದಲ್ಲಿ ಧರಿಸಬೇಕು. ಅಧ್ಯಾತ್ಮ, ಉತ್ತಮ ಆರೋಗ್ಯ ಹಾಗೂ ಮಾನಸಿಕ ಶಾಂತಿಗೆ ಇದು ಪೂರಕ.

ಒಟ್ಟಿನಲ್ಲಿ ಇನ್ನೂ ಕೆಲ ಬಗೆಯ ರುದ್ರಾಕ್ಷಿಗಳಿದ್ದು, ಅವುಗಳ ಉಪಯೋಗ ಮತ್ತು ಫಲಗಳೂ ಇವೆ. ಧರಿಸುವ ಮುನ್ನ ನಿಮ್ಮ ಸಮಸ್ಯೆ ಏನು ಮತ್ತು ಅಪೇಕ್ಷೆ ಏನು ಎಂಬ ಬಗ್ಗೆ ಸೂಕ್ತವಾದ ಗುರುಗಳಲ್ಲಿ ತಿಳಿಸಿ, ರುದ್ರಾಕ್ಷಿಯನ್ನು ಧರಿಸಿ. ಯಾವಾಗ ಮತ್ತು ಎಷ್ಟು ಮುಖದ ರುದ್ರಾಕ್ಷಿ ಹಾಗೂ ಧರಿಸುವ ಕ್ರಮವನ್ನು ಕೇಳಿ ತಿಳಿದುಕೊಳ್ಳಿ. ಎಲ್ಲರಿಗೂ ಶುಭವಾಗಲಿ. ಆ ಪರಶಿವನ ಅನುಗ್ರಹ ಆಗಲಿ.

ಯಾವುದೇ ಮಾರ್ಗದರ್ಶನಕ್ಕೆ, ಸೂಕ್ತ ಜಾತಕ ವಿಶ್ಲೇಷಣೆಗೆ ವೈಯಕ್ತಿಕವಾಗಿ ಭೇಟಿಗೆ ಮೊಬೈಲ್ ಫೋನ್ ಸಂಖ್ಯೆ 9886665656- 9886155755 ಸಂಪರ್ಕಿಸಿ.

English summary
Maha Shivaratri special article about Rudrakshi. What are the types, benefits and significance of Rudrakshi explained here.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X