ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತುಲಾ ರಾಶಿಗೀಗ 2ನೇ ಹಂತದ ಸಾಡೇಸಾತಿ

By ನಾಗನೂರಮಠ ಎಸ್.ಎಸ್.
|
Google Oneindia Kannada News

ಸಾಡೇಸಾತಿಯ 1ನೇ ಹಂತ ದಾಟಿ (ಎರಡೂವರೆ ವರ್ಷ) 2ನೇ ಹಂತದಲ್ಲಿ ತುಲಾ ರಾಶಿಯವರು ಇದ್ದಾರೆ. 2ನೇ ಹಂತವೆಂದರೆ ಕುತ್ತಿಗೆಯಿಂದ ನಡದವರೆಗೆ. ದೇಹದ ಯಂತ್ರವೇ ಈ ಸ್ಥಳವಾಗಿರುತ್ತದೆ. ಆದ್ದರಿಂದ ದೇಹದ ಈ ಭಾಗವು ಸಂಪೂರ್ಣ ಶನಿದೇವನಿಂದ ಪರೀಕ್ಷೆಗೊಳಪಡುತ್ತದೆ. ನೀವೇನಾದರೂ ಈ ಹಿಂದೆ ಅದು ಇದು ಅಂಥ ಪುಗ್ಸಟ್ಟೆ ಸಿಗುತ್ತದೆಂದು ತಿಂದಿದ್ದರೆ ನಿಮ್ಮ ದೇಹಕ್ಕೆ ಡಯಾಬಿಟಿಸ್‌ಗೆ ಸ್ವಾಗತ ಮಾಡುವ ಸಮಯ. ಹೃದಯದ ಏರಿಳಿತ ಅಂದರೆ ಬಿಪಿ ಕೂಡ ನಿಮ್ಮ ದೇಹದಲ್ಲಿ ಮನೆಮಾಡಲು ಹಾತೊರೆಯುವ ಸಮಯವಿದು. ಎಚ್ಚರಿಕೆಯಿಂದ "ದೇಹವೇ ದೇಗುಲ" ಎಂಬ ಮಾತಿನಂತೆ ದೇಹ ಕೂಡ ಶುದ್ಧವಾಗಿಟ್ಟುಕೊಳ್ಳಬೇಕು.

ತುಲಾ ರಾಶಿಯಲ್ಲೇ ಮಹಾತ್ಮನು ಇದ್ದಾನೆ. ಇದರಿಂದ ಈ ರಾಶಿಯವರು ಹೆಚ್ಚಾಗಿ ದೈಹಿಕ ಶ್ರಮ ಪಡಬೇಕಾಗುತ್ತದೆ. ಹಣ ಯಾವುದೋ ರೂಪದಲ್ಲಿ ವ್ಯರ್ಥವಾಗುತ್ತಿರುತ್ತದೆ. ಸುಮ್‌ಸುಮ್ನೆ ತಮ್ಮ ಭಾಗ್ಯದಲ್ಲಿಯೇ ಇರದ ವಸ್ತುವನ್ನು ಪಡೆದುಕೊಳ್ಳಲು ಹೆಣಗಾಡುವುದು, ಇದರಿಂದ ಉದ್ವೇಗ, ಆತಂಕ ಮನದಲ್ಲಿ ಮನೆಯೇ ಮಾಡಿಬಿಟ್ಟಿರುತ್ತದೆ. ವ್ಯವಹಾರವಂತೂ ಹಾಳಾಗಿ ಹೋಗೋದೊಂದೇ ಬಾಕಿಯಿರುತ್ತದೆ. ಸಾಲಬಾಧೆ ಈ ರೀತಿ ಮಾಡಿಸಿಬಿಟ್ಟಿರುತ್ತದೆ. ಯಾವಾಗಲೂ ಸುಸ್ತಾದವರಂತೆ ಇರುತ್ತ ಒಂಥರಾ ದರಿದ್ರಗುಣ ಹೆಚ್ಚಾಗಿರುತ್ತದೆ. ಅಪವಾದ, ಆರೋಪ ಬೇಡವೆಂದರೂ ನಿಮಗೆ ಬರುವವೇ. ಮನೆಯಲ್ಲೂ ಕಲಹ, ಪರಮಮಿತ್ರರು, ಬಂಧುಗಳು ಶತೃಗಳಾಗಿ ಪರಿವರ್ತನೆಯಾಗುತ್ತಾರೆ.

Libra in 2nd phase of Sade Sati

ಸರಕಾರದಿಂದ ತೊಂದರೆ ಶುರುವಾಗುತ್ತದೆ, ಮನಃಶಾಂತಿಗಾಗಿ ಹಲವೆಡೆ ಪ್ರಯಾಣಿಸುವವರಿದ್ದರೆ ವಾಹನಗಳಿಂದ ಅಪಘಾತದ ಸಂಭವವಿರುವುದರಿಂದ ಯಾವಾಗಲೂ ಪಾರಾಗುತ್ತಲಿರಬೇಕು ನೆನಪಿಟ್ಟುಕೊಳ್ಳಿ. ಆದರೂ ತುಲಾ ರಾಶಿಯವರಿಗೆ ನೆಮ್ಮದಿಯೂ ಸಿಗುತ್ತದೆ. ಅದನ್ನು ಸಾಡೇಸಾತಿ ಯಾವ ಪಾದದಲ್ಲಿ ಇದೆ ಎಂಬುದನ್ನು ಅರಿತುಕೊಂಡಾಗ. ನಿಮ್ಮ ಕರ್ಮಫಲವನ್ನೂ ಒಮ್ಮೆ ಯೋಚಿಸಿಕೊಳ್ಳಿ. ಸುಲಭವಾಗಿ ಗೊತ್ತಾಗುತ್ತದೆ ನಿಮಗೆ ಬರಲಿರುವ ಕಷ್ಟಗಳ ಪರಿ ಎಂಥಹದಿರಬಹುದು ಎಂದು.

ಶಾಪ ಮತ್ತು ಹಾರೈಕೆ : ಏಕೆಂದರೆ "ವೇದ ಸುಳ್ಳಾಗಬಹುದು, ಗಾದೆ ಸುಳ್ಳಾಗಲಾರದು" ಎಂಬ ಮಾತು ನಿಮಗೆ ಗೊತ್ತಿರಬಹುದು. "ನೊಂದವರು ಶಾಪ ಕೊಡುವ ಅವಶ್ಯಕತೆಯಿಲ್ಲ, ಉಂಡವರು ಹರಸುವ ಅವಶ್ಯಕತೆಯಿಲ್ಲ" ಈ ಗಾದೆಮಾತಿನ ಗೂಢಾರ್ಥವನ್ನು ತಿಳಿದುಕೊಳ್ಳಿ. ಉಂಡವರ ಹಾರೈಕೆ ಹಾಗೂ ನೊಂದವರ ಶಾಪ ಆಟೋಮ್ಯಾಟಿಕ್ ಆಗಿ ನಿಮ್ಮ ಕರ್ಮಫಲದಲ್ಲಿ ಡೆಪಾಸಿಟ್ ಆಗಿರುತ್ತದೆ.

ಹೀಗಾಗಿ ಯೋಚಿಸಿ, ನೀವು ಎಷ್ಟು ಜನರ ಕುಟುಂಬಗಳನ್ನು ನೊಂದುಕೊಳ್ಳುವಂತೆ ಮಾಡಿದ್ದೀರಿ. ಹಾಗೂ ಎಷ್ಟು ಕುಟುಂಬಗಳು ನಿಮ್ಮಿಂದ ಹೊಟ್ಟೆ ತುಂಬ ಊಟ ಮಾಡಿ ನಿಮ್ಮನ್ನು ಹರಸಿದ್ದಾರೆ ಎಂಬುದನ್ನು. ಅರ್ಥವಾಗುತ್ತದೆ ನೀವು ಎಂಥವರು ಎಂಬುದು. ಗೊತ್ತಾಗದಿದ್ದರೆ ಶನಿಮಹಾತ್ಮ ತೋರಿಸುತ್ತಾನೆ ನಿಮ್ಮನ್ನು ನಿಮಗೆ.

ಇನ್ನು ಎಷ್ಟೋ ಜನರು ಹೆಣ್ಣುಬಾಕರಿರುತ್ತಾರೆ. ಶನಿದೇವ ಇಂಥವರ ಜೀವನವನ್ನೇ ಅತಂತ್ರ ಮಾಡಿ ಇತ್ತ ಸಾಯುವ ಹಾಗೂ ಇಲ್ಲ ಅತ್ತ ಬದುಕಿ ಬಾಳುವಂತೆಯೂ ಇಲ್ಲ ಹಾಗೆ ಮಾಡುತ್ತಾನೆ. ಇವರ ಕುಟುಂಬದವರಂತೂ ಬೀದಿಪಾಲು ಆಗುವ ಪರಿಸ್ಥಿತಿಯೂ ಬರುತ್ತದೊಮ್ಮೆ. ಈ ವಿಷಯದಲ್ಲಿ ಶನಿದೇವ ರುದ್ರನಿಗಿಂತಲೂ ಉಗ್ರವಾಗಿ ಶಿಕ್ಷಿಸುತ್ತಾನೆ ಎಂಬುದು ಅರಿತುಕೊಳ್ಳಿ.

ಶಾರ್ಟ್ ಕಟ್ ಹಾದಿ ಬೇಡವೇಬೇಡ : ಕೆಲವರು ಜೀವನದಲ್ಲಿ ಗೆಲುವಿಗಾಗಿ ಶಾರ್ಟ್‌ಕಟ್ (ಅಡ್ಡದಾರಿ) ಹಾದಿಯಲ್ಲಿ ಸಾಗುತ್ತಿರುತ್ತಾರೆ. ಯಾರೇನೇ ಹೇಳಿದರೂ ಕೇಳದೆ, ಇದೇ ರೀತಿ ಮಾಡುತ್ತ ಶಾರ್ಟ್‌ಕಟ್‌ನಿಂದಲೇ ಬೇಗನೆ ಹೋಗುತ್ತಾರೆ. ನಾವೂ ಹೋಗುವವರೇ. ಆದರೆ ಶಾರ್ಟ್‌ಕಟ್ ಹಾದಿಯಲ್ಲಿ ಹೋದವರು ಅವಸರದಿಂದ ಬೇಗ ಬೇಗನೇ ಹೊರಟು ಹೋಗುತ್ತಾರೆ. ಕಷ್ಟಪಟ್ಟು ಹೋಗುವವರು ನಿಧಾನವಾಗಿ ಬಾಳಿ ಬದುಕಿ ಜೀವನವನ್ನು ಆನಂದಿಸಿ ಹೋಗುತ್ತಾರೆ ಅಷ್ಟೆ. ಅರ್ಥವಾಗಿರಬಹುದು ನಿಮಗೆ ಎಲ್ಲಿಗೆ ಹೋಗುವುದು ಎಂಬ ಕಠೋರವಾದ ಸತ್ಯ.

ಕೆಲವರು ದುಷ್ಟತನದಿಂದ ಮಹಾತ್ಮರನ್ನೇ ಕೆಣಕಿ ಅವರಲ್ಲಿ ತಪ್ಪು ಹುಡುಕಿ ಪರಮಾತ್ಮನ ಬಳಿ ಹೋಗುತ್ತಾರೆ. ಆದರೆ ಅವರವರ ಕರ್ಮ ಎಂದುಕೊಂಡು ಸುಮ್ಮನಾಗಬೇಕು ಅಷ್ಟೇ. "ಮನೆಯೇ ಮೊದಲ ಪಾಠ ಶಾಲೆ" ಎಂಬ ಮಾತಿನಂತೆ ಮನೆಯಲ್ಲಿನ ಉತ್ತಮ ಸಂಸ್ಕಾರದಿಂದ ಕಷ್ಟದಲ್ಲಿದ್ದವರಿಗೆ ಸಹಾಯ ಮಾಡಿ ದೊಡ್ಡವರೆನಿಸಿಕೊಂಡರೆ ಶನಿದೇವನಿಗೆ ನಿಮ್ಮಷ್ಟು ಪ್ರೀತಿಪಾತ್ರರು ಯಾರೂ ಇಲ್ಲ. ಧಾರಾಳವಾಗಿ ನಿಮಗೆ ಸುಖ, ಶಾಂತಿ, ನೆಮ್ಮದಿ, ವೈಭವಯುತ ಜೀವನಕ್ಕೆ ಏನು ಬೇಕೋ ಎಲ್ಲದನ್ನೂ ದಯಪಾಲಿಸುತ್ತಾನೆ ಶನಿದೇವ.

ಇತರರಿಗೆ ಸಹಾಯ ಮಾಡಿ ಶನಿದೇವನಿಂದ ದೊಡ್ಡವರೆನಿಸಿಕೊಳ್ಳೋದು ಒಳ್ಳೆಯದಾ ಅಥವಾ ಬೇರೆಯವರ ಮನೆಮುರುಕು ಕೆಲಸ ಮಾಡುತ್ತ ಶನಿದೇವನಿಂದ ಶಿಕ್ಷೆ ಪಡೆದುಕೊಳ್ಳುವಂತ ದಡ್ಡರಾಗುವುದು ಒಳ್ಳೆಯದಾ ಎಂಬುದನ್ನು ತೀರ್ಮಾನಿಸಿಕೊಳ್ಳಿ.

ಕಬ್ಬಿಣ ಪಾದ : ಸಾಡೇಸಾತಿಯಲ್ಲಿ ಮಹಾತ್ಮನು ಕಬ್ಬಿಣ ಪಾದ, ತಾಮ್ರ, ಬೆಳ್ಳಿ ಮತ್ತು ಬಂಗಾರ ಪಾದಗಳೆಂಬ ನಾಲ್ಕು ಹಂತಗಳಲ್ಲಿ ತನ್ನ ಪ್ರಭಾವ ತೋರುತ್ತಾನೆ. ಕಬ್ಬಿಣ ಪಾದದಲ್ಲಿ ಕಷ್ಟಗಳ ಸರಮಾಲೆಯೇ ಸುತ್ತಿಕೊಂಡು ಬಿಟ್ಟಿರುತ್ತದೆ. ಶನಿದೇವನ ಕೆಟ್ಟ ಪ್ರಭಾವ ಎಷ್ಟರಮಟ್ಟಿಗೆ ನಿಮ್ಮ ಮೇಲಾಗುತ್ತಿದೆ ಎಂಬುದನ್ನು ಕಬ್ಬಿಣ ಪಾದದಲ್ಲಿ ಬಂದ ಸಂಕಷ್ಟ ಅನುಭವಿಸಿದಾಗಲೇ ಗೊತ್ತಾಗುವುದು. ಎಷ್ಟು ಶ್ರಮ ಪಟ್ಟರೂ ಫಲ ಸಿಗುವುದೇ ಇಲ್ಲ. ಒಂಥರಾ "ಗುಡ್ಡಕ್ಕೆ ಮಣ್ಣು ಹೊತ್ತಂಗೆ"!

ಸೋಲಿನ ಸರಮಾಲೆಗಳನ್ನು ಅನುಭವಿಸುವಾಗ ಗೆಲುವೆಂಬುವುದೇ ಮರೀಚಿಕೆಯಾಗಿರುವುದರಿಂದ ಒಂದು ಸಣ್ಣ ಗೆಲುವು ಕೂಡ ಅಪಾರ ಸಂತಸ, ಆನಂದ ನೀಡುತ್ತದೆ. ಮಾನಸಿಕ ಗೊಂದಲ, ಒತ್ತಡ ಎಲ್ಲ ರೀತಿ ಸಮಸ್ಯೆ ತಲೆಗೆ ತುಂಬಿಕೊಂಡು ಒಂಥರಾ ಚಿಂತಾಕ್ರಾಂತರಾಗಿ ಏನಾಗುತ್ತಿದೆ ನನಗೆ? ಎಲ್ಲಿಗೆ ಬಂದಿದೆ ನನ್ನ ಜೀವನ? ಮುಂದೆ ಹೇಗೆ? ಎಂದು ಚಿಂತಿಸುತ್ತ ಕುಳಿತುಕೊಳ್ಳುವ ಹಾಗೆ ಆಗುತ್ತದೆ.

ಇನ್ನು ಈ ಸಮಯದಲ್ಲಿ 10 ರುಪಾಯಿ 100 ರುಪಾಯಿಯಷ್ಟು ದೊಡ್ಡದಾಗಿ ಕಾಣುತ್ತದೆ ಎಂದರೆ ಅರ್ಥ ಮಾಡಿಕೊಳ್ಳಬಹುದು ಹಣಕಾಸಿನ ಪರಿಸ್ಥಿತಿ ಎಲ್ಲಿಗೆ ಬಂದಿರುತ್ತದೆ ಎಂದು. ನಿಮ್ಮಲ್ಲಿ ಎಷ್ಟೇ ದುಡ್ಡಿದ್ದರೂ ಕೈಗೇನೆ ಸಿಗಲ್ಲ, ಇದ್ದ ದುಡ್ಡೂ ಕೂಡ ಖರ್ಚಾಗಿ ಮತ್ತೆ ಖಾಲಿ ಕೈ! ಈ ಸಮಯದಲ್ಲಿ ನೆಮ್ಮದಿ, ಸಂತೋಷ, ಕೌಟುಂಬಿಕ ಸುಖಕ್ಕಾಗಿ ದೇವರಲ್ಲಿ ಭಿಕ್ಷೆ ಬೇಡುವ ಹಾಗೆ ಆಗುತ್ತದೆ. ಕಬ್ಬಿಣ ಶನಿದೇವನ ಅಚ್ಚುಮೆಚ್ಚಿನ ಲೋಹವಾಗಿರುವುದರಿಂದ ಈ ಪಾದಗಳಲ್ಲಿ ಬಂದಾಗ ಬರೋಬ್ಬರಿ ತನ್ನ ಪ್ರಭಾವ ತೋರಿಸುತ್ತಾನೆ.

ಇನ್ನು ಕೆಲವರಿಗಂತೂ ಕಬ್ಬಿಣಗಳ ಸರಳುಗಳ ಹಿಂದೆ ಕೂಡ ಹೋಗುವ ಪರಿಸ್ಥಿತಿ ಬರುತ್ತದೆ. ಆದರೆ ಶನಿದೇವನ ಕೃಪಾಕಟಾಕ್ಷ ಪಡೆದುಕೊಂಡರೆ ಎಂಥಹ ಕಠಿಣ ಪರಿಸ್ಥಿತಿಯಲ್ಲಿದ್ದರೂ ಹೊರಬರಹುದು. ಯಾವುದಕ್ಕೂ ವ್ಯಕ್ತಿಗತ ಜಾತಕ ಪರಿಶೀಲನೆ ಮಾಡಿದಾಗಲೇ ಗೊತ್ತಾಗುವುದು ಬಿಡುಗಡೆ ಭಾಗ್ಯ ಎಂದಾಗುವುದು ಎಂದು. ಶನಿದೇವನ ಪ್ರಭಾವದಿಂದ ಪಾರಾಗುವ ದಾರಿಗಳಿದ್ದರೂ ಕೂಡ ಕೆಲವೊಮ್ಮೆ ಉಪಯೋಗಿಸಿಕೊಳ್ಳುವ ಪರಿ ಗೊತ್ತಾಗುವುದಿಲ್ಲ. ಅಷ್ಟೊಂದು ಮಂಕು ಬಡಿದಿರುತ್ತದೆ ಮನಕ್ಕೆ.

ವೃಶ್ಚಿಕ ರಾಶಿಗೆ ಸಾಡೇಸಾತಿ 2ನೇ ಹಂತ ಹೇಗಿರುತ್ತೆ ಮತ್ತು ಶನಿದೇವನ ತಾಮ್ರ ಪಾದದ ಮಹತ್ವ ಏನು? ಎಂಬುದು ಮುಂದಿನ ಲೇಖನದಲ್ಲಿ. (ಒನ್‌ಇಂಡಿಯಾ ಕನ್ನಡ)

ಶನಿದೇವನ ಕೃಪೆಗೆ :

"ಜಗದೀಶ, ಸರ್ವೇಶ, ಮಲ್ಲೇಶ, ಗೌರೀಶ
ನೂರಾರು ಹೆಸರು ಶಿವನಿಗೆ |
ನೂರಾರು ಹೆಸರು ನಂಜುಂಡೇಶ್ವರನಿಗೆ
ಇರುವನು ನೆನದವರ ಮನದಾಗೆ"

ಈ ಭಕ್ತಿಗೀತೆ ನೀವು ಕೇಳಿರಬಹುದು. ಒಮ್ಮೆ ಮನದಲ್ಲೇ ಮೆಲುಕು ಹಾಕಿ ಈ ಗೀತೆಯನ್ನು. ಮನೆಯಲ್ಲಿ ಬೆಳಗಿನ ಹೊತ್ತು ಭಕ್ತಿಗೀತೆಗಳ ಕ್ಯಾಸೆಟ್ ಹಾಕಿರಿ.

ಸಂಪಾದಕರ ಮಾತು : ಓದುಗರು, ಸಾಡೇಸಾತಿ ಬಗ್ಗೆ ಹೆಚ್ಚಿನ ಮಾಹಿತಿ ಪಡೆಯಬಯಸಿದ್ದಲ್ಲಿ, ಯಾವುದೇ ತೊಂದರೆಗಳಿಗೆ ಪರಿಹಾರ ಕಂಡುಕೊಳ್ಳಬಯಸಿದ್ದಲ್ಲಿ ಲೇಖಕರಿಗೆ ನೇರವಾಗಿ ಪೋನಾಯಿಸಿ ತಿಳಿದುಕೊಳ್ಳಬಹುದು (ಲೇಖಕರ ಮೊಬೈಲ್ : 94815 22011)

English summary
Sade Sati series 18 : Impact of Sade Sati on zodiac signs. Libra in 2nd phase of Sade Sati. At this point, Lord Shani takes control of body part Libra people from neck to waist. But, don't worry. Worship Shani and think only good to everyone.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X