ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಕ್ಟೋಬರ್ 11ರ ತನಕ ತುಲಾದಲ್ಲಿ ಗುರು ಸಂಚಾರ, ಆಗಿದ್ದೇನು- ಆಗೋದೇನು?

By ಪಂಡಿತ್ ವಿಠ್ಠಲ ಭಟ್
|
Google Oneindia Kannada News

Recommended Video

Jupiter transition to Libra ( Tula Rashi ) on Sep 12th, Impact on 12 zodiac signs | Watch Video

ಕಳೆದ ವರ್ಷ ಸೆಪ್ಟೆಂಬರ್ ಹನ್ನೆರಡರಂದು ತುಲಾ ರಾಶಿಗೆ ಗುರು ಗ್ರಹದ ಪ್ರವೇಶ ಮಾಡುವ ಮುನ್ನ ಹಾಕಿದ್ದ ಲೇಖನವಿದು. ಹತ್ತಿರ ಹತ್ತಿರ ಒಂದು ವರ್ಷವಾಯಿತು. ಈ ವರ್ಷದ ಅಕ್ಟೋಬರ್ ಹನ್ನೊಂದನೇ ತಾರೀಕು ಗುರು ವೃಶ್ಚಿಕ ರಾಶಿಯನ್ನು ಪ್ರವೇಶ ಮಾಡಲಿದೆ. ಈ ಒಂದು ವರ್ಷ ಏನಾಯಿತು ಹಾಗೂ ಬಾಕಿಯಿರುವ ಒಂದೂವರೆ ತಿಂಗಳಲ್ಲಿ ಏನಾಗಲಿದೆ ಎಂಬುದನ್ನು ಓದಿಕೊಂಡು ಬಿಡಿ.

ಗುರು ಗ್ರಹದ ಸಂಚಾರ ಸಾಧಾರಣವಾಗಿ ಒಂದು ವರ್ಷಗಳ ಕಾಲ ಇರುತ್ತದೆ. ಕೆಲ ಬಾರಿ ತುಂಬ ವೇಗವಾಗಿ ಸಂಚರಿಸುವ ಗುರು ಗ್ರಹ ಮುಂದಿನ ರಾಶಿಗೆ ಪ್ರವೇಶ ಮಾಡಿ, ಆ ನಂತರ ಮತ್ತೆ ವಕ್ರೀ ಆಗಿ ಹಿಂದಿನ ರಾಶಿಗೆ ಮರಳುತ್ತದೆ. ವೃಶ್ಚಿಕ ರಾಶಿಗೆ ಗುರು ಪ್ರವೇಶ ಆದ ಮೇಲೆ ಅಂಥದ್ದೊಂದು ಅನುಭವ ನಿಮಗೆ ಈ ಬಾರಿ ಆಗಲಿದೆ.

ಅದಕ್ಕೂ ಮುನ್ನ ತುಲಾ ರಾಶಿಯಲ್ಲಿನ ಗುರು ಸಂಚಾರ ಫಲಗಳ ಬಗ್ಗೆ ಮತ್ತೊಮ್ಮೆ ನೆನಪಿಸಿಕೊಂಡು ಬಿಡಿ. ಸದ್ಯದಲ್ಲೇ ಒನ್ ಇಂಡಿಯಾ ಕನ್ನಡದಲ್ಲಿ ವೃಶ್ಚಿಕ ರಾಶಿಗೆ ಗುರು ಗ್ರಹ ಪ್ರವೇಶದ ಲೇಖನವನ್ನು ನಿರೀಕ್ಷಿಸಿ.

ಮೇಷ

ಮೇಷ

ಇಷ್ಟು ವರ್ಷದ ಕಷ್ಟ-ತಾಪತ್ರಯ ಕರಗಿ, ನೀವು ಅದೃಷ್ಟವಂತರು ಎಂದು ಧಾರಾಳವಾಗಿ ಕರೆಯಬಹುದು. ಈಗ ತುಲಾ ರಾಶಿಗೆ ಗುರು ಪ್ರವೇಶ ಮಾಡುವುದರಿಂದ ಈ ಪದ ನಿಮಗೆ ಸರಿಯಾಗಿ ಹೊಂದಾಣಿಕೆ ಆಗುತ್ತದೆ.

ಆದರೆ, ಇಷ್ಟು ಕಾಲ ನೀವು ಅನುಭವಿಸಿದ ಕಷ್ಟಗಳು, ಎದುರಿಸಿದ ಪರೀಕ್ಷೆಗಳನ್ನು ನೆನಪು ಮಾಡಿಕೊಂಡರೆ ಈಗಲೇ ಅದೃಷ್ಟದ ಅರಿವು ನಿಮಗೆ ಬಾರದು. ಕ್ರಮೇಣ ಅಂದರೆ ಎರಡು ಮೂರು ತಿಂಗಳು ಕಳೆದಂತೆಲ್ಲಾ ಗೊತ್ತಾಗುತ್ತಾ ಬರುತ್ತದೆ.

ಶಿಕ್ಷಣ ಸಂಸ್ಥೆಯಲ್ಲಿ ಉದ್ಯೋಗಿಗಳಾಗಿದ್ದಲ್ಲಿ ಸಪ್ತಮ ಸ್ಥಾನದ ಗುರು ಗಮನಾರ್ಹ ಬದಲಾವಣೆ ತರುತ್ತಾನೆ. ಉದಾಹರಣೆಗೆ, ಉದ್ಯೋಗ ಕಾಯಂ ಆಗದೆ ಖಾಸಗಿಯಾಗಿ ಸೇವೆ ಸಲ್ಲಿಸುತ್ತಾ ಇದ್ದಲ್ಲಿ ಸರಕಾರಿ ಉದ್ಯೋಗಿ ಆಗಲು ಎಲ್ಲ ಅರ್ಹತೆ ಇದ್ದಲ್ಲಿ ಪ್ರಯತ್ನ ಸಾಫಲ್ಯತೆ ಕಾಣುತ್ತದೆ.

ಹೆಚ್ಚಿನ ಅಧ್ಯಯನ ಮಾಡುವ ಆಸೆ ಇದ್ದು, ಅದಕ್ಕಾಗಿ ವಿದೇಶ ಅಥವಾ ಸ್ವಂತ ಊರು ಬಿಟ್ಟು ಬೇರೆಡೆ ಹೋಗಬೇಕೆಂದು ಪ್ರಯತ್ನ ಮಾಡುತ್ತಿರುವವರಿಗೂ ಕಾರ್ಯ ಸಿದ್ಧಿ ಇದೆ. ಇನ್ನು ನ್ಯಾಯಾಧೀಶ ಹಾಗೂ ವಕೀಲ ವೃತ್ತಿಯಲ್ಲಿ ಇರುವವರಿಗೆ ಉತ್ತಮ.

ಅವಿವಾಹಿತರಿಗೆ ವಿವಾಹ ಸಂಬಂಧಗಳು ಹೆಚ್ಚು ಬರುತ್ತವೆ. ಮದುವೆ ಆಗುವುದು ಅಸಾಧ್ಯ ಎಂದು ಆಸೆ ಬಿಟ್ಟವರಿಗೂ ಒಂದು ಕೊನೆ ಅವಕಾಶ ಇದೆ ಎಂದು ಅನಿಸುತ್ತದೆ.

ಈಗಾಗಲೇ ಮದುವೆ ಆಗಿ, ಬಾಳ ಸಂಗಾತಿಯೊಂದಿಗೆ ಮನಸ್ತಾಪ- ಜಗಳಗಳು ಆಗಿ ಬೇರ್ಪಡುವ ಪರಿಸ್ಥಿತಿ ಇದ್ದವರಿಗೆ ಆ ಎಲ್ಲ ಅಪಾರ್ಥಗಳನ್ನು ದೂರ ಮಾಡಿಕೊಂಡು ಹಿರಿಯರ, ಗುರು ಸಮಾನರ ಮಧ್ಯಸ್ಥಿಕೆಯಲ್ಲಿ ಸಂಧಾನಗಳು ನಡೆಯುತ್ತವೆ. ಮತ್ತೆ ಬಾಳ ಸಂಗಾತಿಯೊಂದಿಗೆ ಕೂಡಿ ಬಾಳುವ ಅವಕಾಶಗಳು ಬರುತ್ತವೆ.

ವೃಷಭ

ವೃಷಭ

ವೃಷಭ ರಾಶಿಯವರಿಗೆ ತುಂಬ ಸ್ಪಷ್ಟವಾಗಿ ಸಮಸ್ಯೆಗಳು ಕಾಣುತ್ತಿವೆ. ಏಕೆಂದರೆ ನಿಮ್ಮ ರಾಶಿಯಿಂದ ಆರನೇ ಮನೆಗೆ ಗುರು ಪ್ರವೇಶ ಆಗುತ್ತದೆ. ಇನ್ನೊಂದೆಡೆ ಶನಿ ನಿಮ್ಮ ರಾಶಿಯಿಂದ ಎಂಟನೆಯ ಮನೆಯಲ್ಲಿ ಅಕ್ಟೋಬರ್ ಇಪ್ಪತ್ತಾರರಿಂದ ಇರುತ್ತಾನೆ.

ಆರರಲ್ಲಿ ಗುರು, ಎಂಟರಲ್ಲಿ ಶನಿ ಉತ್ತಮ ಸ್ಥಿತಿ ಅಲ್ಲ. ಅದರ ದುಷ್ಪರಿಣಾಮಗಳನ್ನು ನೀವು ಎದುರಿಸಲೇ ಬೇಕಾಗುತ್ತದೆ. ಬಹಳ ಮುಖ್ಯವಾಗಿ ಆರೋಗ್ಯ ಹಾನಿಯನ್ನು ಅನುಭವಿಸ ಬೇಕಾಗುತ್ತದೆ. ಈ ಪರಿಸ್ಥಿತಿಯಲ್ಲಿ ಉಂಟಾಗುವ ಆರೋಗ್ಯ ಹಾನಿ ಬಹಳವಾಗಿ ಹೆದರಿಸುತ್ತದೆ.

ಆದರೆ, ಧೈರ್ಯವಾಗಿ ಇರಬೇಕು. ಶನಿ ಹಾಗೂ ಗುರು ಗ್ರಹದ ಆರಾಧನೆಯನ್ನು ತಪ್ಪದೇ ಮಾಡಬೇಕು. ಈ ಆರೋಗ್ಯ ಬಾಧೆಯ ಸಮಸ್ಯೆ ಎಂದರೆ ವೈದ್ಯರಿಗೆ ನಿಮ್ಮ ಆರೋಗ್ಯ ಸಮಸ್ಯೆಗೆ ಕಾರಣ ತಿಳಿಯುವುದಿಲ್ಲ ಅಥವಾ ತಿಳಿದುಕೊಂಡು ನಿಮಗೆ ಔಷಧ ಕೊಟ್ಟರೂ ಆ ಔಷಧಗಳು ಕೆಲಸ ಮಾಡುವುದಿಲ್ಲ.

ಬೆನ್ನು, ಸೊಂಟ ನೋವು ಹಾಗೂ ಮೊಣಕಾಲಿನ ಸಮಸ್ಯೆ ಪ್ರಾರಂಭ ಆಗುತ್ತದೆ. ಅದರ ಪರಿಣಾಮವಾಗಿ ಆಸ್ಪತ್ರೆ ಹಾಗೂ ಔಷಧ ಉಪಚಾರಗಳ ಮೇಲೆ ಖರ್ಚು ಹೆಚ್ಚಾಗಿ ಮಾಡುತ್ತೀರಿ. ಇನ್ನು ಸ್ತ್ರೀಯರು ಬಹಳ ಎಚ್ಚರಿಕೆಯಿಂದ ಇರಬೇಕು. ಕಾರು, ಬಸ್ಸು ಇತ್ಯಾದಿ ವಾಹನ ಚಾಲಕರು ತಮ್ಮ ಉದ್ಯೋಗವನ್ನು ಹೆಚ್ಚಿನ ಶ್ರದ್ಧೆಯಿಂದ ಮಾಡ ಬೇಕು.

ಪ್ರತೀ ದಿನ ವಾಹನ ಚಾಲನೆಗೂ ಮೊದಲು ಎಲ್ಲ ವಿಧದಲ್ಲಿಯೂ ವಾಹನ ಸರಿಯಾಗಿ ಇದೆಯೇ ಎಂದು ಪರೀಕ್ಷಿಸಿಕೊಳ್ಳಬೇಕು. ಹೇಳಿಕೆ ಮಾತುಗಳನ್ನು ನಂಬಿ ನೀವೇ ನಿಮ್ಮ ಮದುವೆ ಹಾಳು ಮಾಡಿಕೊಳ್ಳುತೀರಿ. ನಿಮ್ಮ ವಿಚಾರದಲ್ಲಿ ಇಲ್ಲಸಲ್ಲದ್ದನ್ನು ಹೇಳಿಕೊಟ್ಟು ನಿಶ್ಚಯ ಆಗಿರುವ ಅಥವಾ ಆಗಲಿರುವ ಮದುವೆಯನ್ನು ಹಾಳು ಮಾಡುತ್ತಾರೆ, ಎಚ್ಚರ ಇರಲಿ.

 ಮಿಥುನ

ಮಿಥುನ

ನ್ಯಾಯ- ನೀತಿ ಬಗ್ಗೆ ಹೆಚ್ಚು ಮಾತನಾಡಲು ಪ್ರಾರಂಭಿಸಿರುತ್ತೀರಿ. ಈ ಹಿಂದೆ ನೀವೇ ಮಾಡುತ್ತಿದ್ದ ಮೋಸ ಅಥವಾ ನುಡಿಯುತ್ತಿದ್ದ ಸುಳ್ಳು ಬೇಸರ ಮೂಡಿಸುತ್ತದೆ. ನೀವು ಅದೆಲ್ಲವನ್ನು ಬಿಟ್ಟು ಉತ್ತಮ ಮಾರ್ಗ ಸೇರುತ್ತೀರಿ. ಇನ್ನು ಈ ತುಲಾ ರಾಶಿಗೆ ಗುರು ಸಂಚಾರ ಸಹ ಮಿಥುನ ರಾಶಿಯವರಿಗೆ ಉತ್ತಮ ವಿದ್ಯೆ ಪಡೆಯಲು ಸಹಕಾರಿ ಆಗುತ್ತದೆ.

ಈ ಹಿಂದೆ ಕಾರಣಾಂತರಗಳಿಂದ ವಿದ್ಯಾಭ್ಯಾಸವನ್ನು ಅರ್ಧದಲ್ಲಿಯೇ ನಿಲ್ಲಿಸಿದ್ದಲ್ಲಿ ಈಗ ಮತ್ತೆ ಪ್ರಯತ್ನಿಸಿ, ಯಶಸ್ವಿಯಾಗಿ ವಿದ್ಯೆಯನ್ನು ಪೂರ್ಣಗೊಳಿಸುತ್ತೀರಾ. ಇನ್ನು ಅನಿವಾರ್ಯ ಕಾರಣಗಳಿಂದ ತಮಗೆ ಇಷ್ಟವಾಗಿದ್ದ ವಿದ್ಯಾಭ್ಯಾಸವನ್ನು ಮತ್ತೆ ಮುಂದುವರಿಸಲು ಆಗದವರು ಹೊಸದಾಗಿ ವ್ಯಾಪಾರ ಆರಂಭಿಸಿ, ಯಶಸ್ವಿ ಆಗುವ ಸಾಧ್ಯತೆಗಳು ಹೆಚ್ಚು ಇವೆ.

ಭಾಷಾ ಹಾಗೂ ಅರ್ಥಶಾಸ್ತ್ರದ ವಿದ್ಯಾರ್ಥಿಗಳಿಗೆ ಉತ್ತಮ ಸಮಯ. ಅವಿವಾಹಿತರಿಗೆ ವಿವಾಹದ ಮಾತುಕತೆ ಯಶಸ್ವಿಯಾಗಿ ನಡೆಯಲಿದೆ. ಆದರೆ ಅದಕ್ಕೂ ಮುಖ್ಯವಾಗಿ ವಿವಾಹವಾಗಿ ಬಹಳ ಕಾಲ ಸಂತಾನ ಇಲ್ಲದೇ ಅದಕ್ಕಾಗಿಯೇ ಪ್ರಯತ್ನಿಸುತ್ತಿರುವ ದಂಪತಿಗೆ ಸಿಹಿ ಸುದ್ದಿ ಕೇಳುವ ಯೋಗ ಬರಲಿದೆ.

ಅಷ್ಟೇ ಅಲ್ಲ, ಮಕ್ಕಳ ವಿಚಾರವಾಗಿ ಯಾವುದೇ ವಿಧದ ತೊಂದರೆ, ಸಮಸ್ಯೆ ಅಥವಾ ಚಿಂತೆಗಳು ಈ ಹಿಂದೆ ಇದ್ದಲ್ಲಿ ಸ್ವಲ್ಪ ಕಡಿಮೆ ಆಗಲಿದೆ. ಅನಿವಾರ್ಯವಾಗಿ ಸಾಲಗಳು ಮಾಡಲೇ ಬೇಕಾದ ಸ್ಥಿತಿ ಇದ್ದಲ್ಲಿ ಅನಾಯಾಸವಾಗಿ ಸಾಲ ಸಿಗುತ್ತದೆ. ನಿಮ್ಮ ಮೇಲೆ ಜನಗಳಿಗೆ ನಂಬಿಕೆ ಹೆಚ್ಚಾಗುತ್ತದೆ.

ಆದರೆ, ಆ ನಂಬಿಕೆಯನ್ನು ಎಷ್ಟರ ಮಟ್ಟಿಗೆ ಉಳಿಸಿ, ಬೆಳೆಸಿಕೊಂಡು ಮುಂದೆ ಸಾಗುತ್ತೀರಿ ಎನ್ನುವುದೇ ಪ್ರಧಾನವಾದ ಕಾರಣ ನಿಮಗೆ ಹೆಚ್ಚು ಸಹಾಯ ಲಭಿಸಲಿದೆ.

ಕರ್ಕಾಟಕ

ಕರ್ಕಾಟಕ

ಸಾಮಾನ್ಯವಾಗಿ ಗುರುಗ್ರಹದ ಈ ಚಲನೆಯಿಂದ ಗುರುಬಲದಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ. ಏಕೆಂದರೆ ಈ ಹಿಂದಿನ ವರ್ಷ ಸಹ ನಿಮಗೆ ಗುರುಬಲ ಇರಲಿಲ್ಲ, ಈ ವರ್ಷ ಸಹ ಇರುವುದಿಲ್ಲ. ಆದುದರಿಂದ ಗುರುಬಲದ ದೃಷ್ಟಿಯಿಂದ ನಾವು ಏನೂ ಹೇಳಲು ಆಗದು.

ಆದರೆ, ನಿಮ್ಮ ರಾಶಿಯಿಂದ ಗುರು ಚತುರ್ಥ ಸ್ಥಾನಕ್ಕೆ ಹೋಗುತ್ತಿರುವುದರಿಂದ ಆ ಮನೆಯಲ್ಲಿ ಗುರು ಗ್ರಹ ನೀಡುವ ಫಲ ನಿಮಗೆ ದೊರೆಯಲಿದೆ. ಕಷ್ಟ ಪಟ್ಟು ಸಂಪಾದನೆ ಮಾಡಿದ್ದು, ಅಲ್ಲದೇ ಪಿತ್ರಾರ್ಜಿತ ಆಸ್ತಿ ನಿಮ್ಮ ಬಳಿ ಇದ್ದಲ್ಲಿ ಆ ಸಂಪತ್ತನ್ನು ಹಾಳು ಮಾಡುವ ಅಥವಾ ವ್ಯರ್ಥ ಮಾಡುವ ಸಾಧ್ಯತೆಗಳು ಹೆಚ್ಚು ಇವೆ.

ನಿಮ್ಮ ಸ್ವಯಾರ್ಜಿತ ಆಸ್ತಿಪಾಸ್ತಿಗಳ ವಿಚಾರದಲ್ಲಿ ತೊಂದರೆ ಇಲ್ಲ. ಆದರೆ ಪಿತ್ರಾರ್ಜಿತ ಆಸ್ತಿ ಮಾರಾಟ ಮಾಡುವ ಅನಿಸಿಕೆಗಳು ಇದ್ದಲ್ಲಿ ಪುನಃ ಪರಿಶೀಲನೆ ಮಾಡುವುದು ಉತ್ತಮ. ಇಲ್ಲಿ ಇನ್ನೊಂದು ಸ್ವಾರಸ್ಯಕರ ವಿಚಾರ ಎಂದರೆ, ನಿಮ್ಮ ಕಷ್ಟಾರ್ಜಿತ ಸಂಪಾದನೆ ವೃದ್ಧಿಸುತ್ತದೆ. ಪಿತ್ರಾರ್ಜಿತ ಆಸ್ತಿ ನಾಶ ಆಗುತ್ತದೆ.

ಕೆಲವರಿಗೆ ಆಸ್ತಿ, ಜಮೀನು, ತೋಟ ಇತ್ಯಾದಿಗಳನ್ನು ಸಂಪಾದಿಸಲೇಬೇಕು ಎನ್ನುವ ಹಠ ಸ್ವಭಾವ ಹೆಚ್ಚುತ್ತದೆ ಆ ವಿಚಾರದಲ್ಲಿ ನಿರಂತರ ಪ್ರಯತ್ನಗಳನ್ನು ನಡೆಸುತ್ತಲೇ ಇರುತ್ತೀರಿ. ನಿಮ್ಮ ಅರಿವಿಗೆ ಬಾರದೆಯೇ ಸ್ವಲ್ಪ ಆತುರ ಬುದ್ಧಿ ಹೆಚ್ಚಾಗುತ್ತದೆ.

ಇನ್ನು ಸಂತಾನ ಇಲ್ಲದ ಹಾಗೂ ಇನ್ನು ಸಂತಾನವೇ ಆಗೋದಿಲ್ಲ ಎಂದು ದೃಢೀಕರಣ ಆದ ದಂಪತಿಗೆ ದತ್ತು ಸ್ವೀಕಾರ ಯೋಗ ಸಹ ಈ ಸಮಯದಲ್ಲಿ ಬರುತ್ತದೆ. ಇಲ್ಲಿ ನಿಮ್ಮ ತಂದೆ- ತಾಯಿಂದಿರ ವಿಚಾರ, ಅವರ ಆರೋಗ್ಯ ಹಾಗೂ ಮಾನಸಿಕ ಸ್ಥಿತಿ- ಗತಿಗಳತ್ತ ಹೆಚ್ಚು ಗಮನಹರಿಸಲೇ ಬೇಕು.

ವೃಥಾ ಪ್ರಯಾಣಗಳು ಇತರರಿಗಿಂತ ನಿಮಗೆ ತುಸು ಹೆಚ್ಚು ಆಗುತ್ತದೆ. ಹೊಂದಾಣಿಕೆ ಮಾಡಿಕೊಂಡು ಸಾಗಿದರೆ ಮಾತ್ರ ಅತ್ಯುತ್ತಮ.

ಸಿಂಹ

ಸಿಂಹ

ತುಲಾ ರಾಶಿಯ ಗುರು ಸಂಚಾರ ನಿಮಗೆ ವಿಶೇಷ ಹಾಗೂ ವಿಚಿತ್ರ ಮಿಶ್ರ ಫಲಗಳನ್ನು ನೀಡುತ್ತದೆ. ಏಕೆಂದರೆ, ಈ ಗುರು ಸಂಚಾರ ಒಂದು ದೃಷ್ಟಿಯಿಂದ ಸಮಸ್ಯೆಗಳಿಗೆ ಕಾರಣ. ಇನ್ನೊಂದೆಡೆ ಮಧ್ಯಮದ ಫಲಗಳನ್ನು ನೀಡುತ್ತದೆ. ಇಲ್ಲಿ ಸಮಸ್ಯೆಗಳು ಎಂದು ಹೇಳಲು ಕಾರಣ ಪಂಚಮ ಶನಿಯ ಪ್ರಭಾವ ಪ್ರಾರಂಭ ಆಗಿದೆ.

ಆದರೆ, ಇಷ್ಟು ದಿನ ದ್ವಿತೀಯ ಸ್ಥಾನದಲ್ಲಿದ್ದ ಗುರು ಬಲದಿಂದಾಗಿ ಕಷ್ಟಗಳು ಕಣ್ಣಿಗೆ ಕಂಡರೂ ಸಹ ಹೆಚ್ಚು ಅನುಭವಕ್ಕೆ ಬರುತ್ತಿರಲಿಲ್ಲ. ಇನ್ನು ಮುಂದೆ ಹಾಗಲ್ಲ. ಗುರು ದ್ವಿತೀಯ ಸ್ಥಾನದಿಂದ ತೃತೀಯಕ್ಕೆ ಹೋಗುತ್ತಿರುವುದರಿಂದ ಗುರುಬಲ ಮುಕ್ತಾಯ ಆಯಿತು. ಹಾಗಾಗಿ ಪಂಚಮ ಶನಿಯಿಂದ ನಿಮ್ಮನ್ನು ಕಾಪಾಡುವ ಶಕ್ತಿಯೊಂದು ಕಡಿಮೆ ಆಗುತ್ತದೆ.

ಇನ್ನು ಮಧ್ಯಮ ಏಕೆಂದರೆ ತೃತೀಯ ಸ್ಥಾನದಿಂದ ಗುರುಬಲ ಇಲ್ಲದಿದ್ದರೂ ಆ ಸ್ಥಾನ ಅಷ್ಟು ಕೆಟ್ಟ ಫಲ ಕೊಡುವುದಿಲ್ಲ. ನೀವು ಸ್ವಲ್ಪ ಹೆಚ್ಚಿಗೆ ಜಿಪುಣರಾಗುತ್ತೀರಿ. ಹೇಗೆ, ಎಲ್ಲಿ ದುಡ್ಡು ಉಳಿಸುವುದು ಎಂದು ಸದಾ ಕಾಲ ತಲೆಯಲ್ಲಿ ಓಡಲು ಪ್ರಾರಂಭ ಆಗುತ್ತದೆ.

ನೀವು ಬರಹಗಾರರು, ಲೇಖಕರು ಆಗಿದ್ದಲ್ಲಿ ಉತ್ತಮ ಅವಕಾಶಗಳು ಲಭಿಸುತ್ತವೆ. ದೇವರ ಮೇಲಿನ ಭಕ್ತಿ, ಶ್ರದ್ಧೆ ವೃದ್ದಿಸುತ್ತವೆ. ಆದರೆ ಸ್ನೇಹಿತರೊಂದಿಗೆ, ಪರಿಚಯಸ್ಥರೊಂದಿಗೆ ವಿತಂಡ ವಾದ ಮಾಡಲು ಹೆಚ್ಚು ಪ್ರಾರಂಭ ಮಾಡುತ್ತೀರಿ.

ನಿಮಗೆ ಗೊತ್ತಿಲ್ಲದ ವಿದ್ಯೆ ಬಹಳ ಗೊತ್ತಿದೆ ಎಂದು ಇತರರನ್ನು ನಂಬಿಸಲು ಸಹ ಹೋಗುತ್ತೀರಿ. ಇನ್ನು ಬಹಳ ಮುಖ್ಯವಾಗಿ ಅರ್ಥ ಮಾಡಿಕೊಳ್ಳಬೇಕಾದ ವಿಚಾರ ಎಂದರೆ, ಇನ್ನೊಂದು ವರ್ಷ ಕಾಲ ನಿಮಗೆ ಹಣ, ಐಶ್ವರ್ಯ ಬಂದರೆ ಉತ್ತಮ ಹೆಸರು, ಕೀರ್ತಿ ಬರುವುದಿಲ್ಲ.

ಇನ್ನು ಹೆಸರು, ಕೀರ್ತಿ ಬೇಕು ಎಂದಾದಲ್ಲಿ ಕೈಯಲ್ಲಿ ಹಣ ಇರುವುದಿಲ್ಲ. ಆದರೆ ಏನಾದರೂ ಆಗಲಿ, ಸಾಲ ಮಾತ್ರ ಯಾರಿಗೂ ಕೊಡಲು ಅಥವಾ ಕೊಡಿಸಲು ಹೋಗದಿರಿ.

ಕನ್ಯಾ

ಕನ್ಯಾ

ಆರ್ಥಿಕವಾಗಿ ಸದೃಢ ಆಗಬೇಕು ಎನ್ನುವ ಬಹಳ ದಿನಗಳ ಕನಸು ನನಸಾಗುವ ಸಮಯ ಇದು. ನಿಮ್ಮಿಂದ ಉತ್ತಮ ದೈವೀ ಕಾರ್ಯಗಳು, ಪೂಜೆ- ಪುನಸ್ಕಾರಗಳು ಇತ್ಯಾದಿ ಹೆಚ್ಚು ನೆರವೇರುತ್ತವೆ. ವ್ಯಾಪಾರಿಗಳಿಗೆ, ಬ್ಯಾಂಕ್ ಉದ್ಯೋಗಿಗಳಿಗೆ, ನ್ಯಾಯವಾದಿಗಳಿಗೆ ಎಲ್ಲರಿಗೂ ಅತ್ಯುತ್ತಮ.

ವ್ಯಾಪಾರಿಗಳು ಅತಿ ಹೆಚ್ಚಿನ ಲಾಭವನ್ನು ಕಾಣಬಹುದು. ನಿಮ್ಮ ಬುದ್ಧಿ ಅತ್ಯಂತ ಚುರುಕಾಗಿ ಓಡುತ್ತದೆ. ಹಾಸ್ಯ ಪ್ರಜ್ಞೆ ಹೆಚ್ಚುತ್ತದೆ. ಸಂತಾನ ಭಾಗ್ಯ ಇಲ್ಲದೇ ಸಂಕಟ, ದುಃಖ ಅನುಭವಿಸುತ್ತಿರುವ ದಂಪತಿ ತಕ್ಕ ಪರಿಹಾರಗಳನ್ನು ಮಾಡಿಕೊಂಡು ಸಂತಾನಕ್ಕಾಗಿ ಪ್ರಯತ್ನಿಸಿದಲ್ಲಿ ಯಶಸ್ಸು ಲಭಿಸುವುದು.

ಈ ಹಿಂದೆ ಯಾರಿಗಾದರೂ ದುಡ್ಡು ಕೊಟ್ಟು ಸಿಕ್ಕಿ ಹಾಕಿಕೊಂಡಿದ್ದಲ್ಲಿ, ಆ ದುಡ್ದು ಮರಳಿ ಬಾರದೆ ಪರದಾಟ ಪಡುತ್ತಿದ್ದರೆ ಮರಳಿ ಬರುವ ಸಮಯ. ಆದರೆ ತಾನಾಗಿಯೇ ಅದು ಬರುವುದಿಲ್ಲ, ನಿಮ್ಮ ಪ್ರಯತ್ನ ಹೆಚ್ಚು ಬೇಕು. ನ್ಯಾಯಾಲಯದಲ್ಲಿ ದಾವೆಗಳನ್ನು ಹೂಡಿದ್ದಲ್ಲಿ ನಿಮಗೆ ಜಯ ಸಿಗುತ್ತದೆ. ಆದರೆ ಅದು ಪಿತ್ರಾರ್ಜಿತ ಆಸ್ತಿ ವಿಚಾರದಲ್ಲಿ ಆಗಿದ್ದಲ್ಲಿ ಆ ಆಸ್ತಿಗಳು ಮಾತ್ರ ಸಿಗದು.

ದಾನ- ಧರ್ಮ ಹೆಚ್ಚು ಮಾಡುತ್ತೀರಿ. ಅವಿವಾಹಿತರು ಇದ್ದಲ್ಲಿ ವಿವಾಹಕ್ಕಾಗಿ ಪ್ರಯತ್ನ ಹೆಚ್ಚು ಮಾಡಿ, ಯಶಸ್ಸು ಸಿಗುವ ಸಾಧ್ಯತೆಗಳು ಇವೆ. ರಾಜಕೀಯದಲ್ಲಿ ಇದ್ದು, ಅಧಿಕಾರಕ್ಕಾಗಿ ಪ್ರಯತ್ನ ಮಾಡುತ್ತ ಇದ್ದಲ್ಲಿ ಅಧಿಕಾರ ಪ್ರಾಪ್ತಿ ಆಗುತ್ತದೆ. ಆದರೆ ಅದಕ್ಕೆ ನೀವು ಇನ್ನೂ ಮೂರ್ನಾಲ್ಕು ತಿಂಗಳು ಕಾಯಬೇಕು.

ಶಿಕ್ಷಣದ ವಿಚಾರದಲ್ಲಿ ಮಾತ್ರ ಉತ್ತಮವಾಗಿ ಇಲ್ಲ. ಇದೇ ವರ್ಷ ಅಥವಾ ಮುಂದಿನ ವರ್ಷ ಒಳಗೆ ಶಿಕ್ಷಣ ಮುಗಿಸಿ ಬಿಡುತ್ತೇನೆ ಎಂದರೆ ಅದು ಕಷ್ಟ ಆದೀತು. ವಿಘ್ನಗಳು ಹೆಚ್ಚು ಆಗಬಹುದು.

ತುಲಾ

ತುಲಾ

ನೀವು ಮಾತ್ರ ನೆಮ್ಮದಿಯ ನಿಟ್ಟುಸಿರು ಬಿಡಲೇಬೇಕು. ಏಕೆಂದರೆ, ಇಷ್ಟು ದಿನ ಹನ್ನೆರಡನೇ ಸ್ಥಾನದ ಗುರು ಹಾಗೂ ದ್ವಿತೀಯದಲ್ಲಿನ ಶನಿ ಪ್ರಭಾವವನ್ನು ಅನುಭವಿಸಿದ್ದೀರಿ. ಈಗ ಈ ಎರಡೂ ಸಮಸ್ಯೆಗಳಿಂದ ಶೀಘ್ರದಲ್ಲಿಯೇ ಹೊರಬರಲಿದ್ದೀರಿ. ಎಲ್ಲೆಡೆ ನಿರಾಕರಣೆ ಹಾಗೂ ಪಟ್ಟ ಶ್ರಮಕ್ಕೆ ತಕ್ಕ ಪ್ರತಿಫಲ ಸಿಗದೆ ಇಷ್ಟು ದಿನ ಕಷ್ಟ ಪಟ್ಟಿದ್ದೀರಿ.

ಆದರೆ, ಇನ್ನು ಆ ಪ್ರಮಾಣದ ಕಷ್ಟಗಳು ಇರುವುದಿಲ್ಲ. ಅಂದರೆ ನಿಮಗೆ ಕಷ್ಟಗಳೇ ಬರುವುದಿಲ್ಲ ಎಂದಲ್ಲ. ಆದರೆ ಈ ಹಿಂದಿನ ಪ್ರಮಾಣ ಅಥವಾ ವಿಧಾನದಲ್ಲಿ ಇರುವುದಿಲ್ಲ. ಇನ್ನು ಆರೋಗ್ಯ ಬಾಧೆಗಳು ಪ್ರಾರಂಭ ಆಗಬೇಕು ಅಷ್ಟೆ. ಅದರಲ್ಲಿಯೂ ಮುಖ್ಯವಾಗಿ ಚರ್ಮ ವ್ಯಾಧಿಗಳು ಇದ್ದಕ್ಕಿದ್ದಂತೆ ಪ್ರಾರಂಭ ಆದಲ್ಲಿ ಆಶ್ಚರ್ಯ ಪಡಬೇಕಿಲ್ಲ.

ಈ ವ್ಯಾಧಿಗಳು ಆಯುರ್ವೇದ ಬಳಕೆಯಿಂದ ಹಾಗೂ ದೇವತಾರಾಧನೆಯಿಂದ ಶೀಘ್ರ ಗುಣಮುಖ ಆಗುತ್ತವೆ. ನಿರುದ್ಯೋಗಿಗಳಿಗೆ ಅವರು ಬಯಸಿದ ದೊಡ್ಡ ಪ್ರಮಾಣದ ಉದ್ಯೋಗ ಅಲ್ಲದಿದ್ದರೂ ಖಾಲಿ ಕುಳಿತುಕೊಳ್ಳದಂತೆ ಒಂದು ಚಿಕ್ಕ ಉದ್ಯೋಗ ಮಾತ್ರ ಲಭಿಸುತ್ತದೆ.

ಕವಿಗಳು, ಲೇಖಕರು, ಬರಹಗಾರರನ್ನು ಗುರುತಿಸಲು ಪ್ರಾರಂಭಿಸುತ್ತಾರೆ. ನಿಮ್ಮ ಶರೀರದಲ್ಲಿ ಪಿತ್ತ ವಿಕಾರ ಆಗುವ ಸಾಧ್ಯತೆಗಳು ಇವೆ. ನೀವು ಯಾರಿಗೂ ತಿಳಿಯದಂತೆ ಕದ್ದೂ ಮುಚ್ಚಿ ಮಾಡುತ್ತಿದ್ದ ವ್ಯವಹಾರಗಳನ್ನು ಈ ತಕ್ಷಣದಿಂದಲೇ ನಿಲ್ಲಿಸದಿದ್ದರೆ ಸಿಕ್ಕಿಬಿದ್ದು ಅವಮಾನ ಅನುಭವಿಸುವ ಸಾಧ್ಯತೆಗಳು ಹೆಚ್ಚು, ಎಚ್ಚರ.

ನಿಮಗೆ ವಿನೋದ ಸ್ವಭಾವ ಹೆಚ್ಚುತ್ತದೆ. ಇನ್ನು ಸೇನೆ ಅಥವಾ ಆರಕ್ಷಕ ವೃತ್ತಿಯಲ್ಲಿ ಇದ್ದಲ್ಲಿ ಅಥವಾ ಸರಕಾರಿ ಅಬಕಾರಿ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಾ ಇದ್ದಲ್ಲಿ ಮಾತ್ರ ತೊಂದರೆ, ಕಷ್ಟಗಳು ವೃದ್ಧಿಸುತ್ತವೆ. ಆದರೆ ವೈದ್ಯ ವೃತ್ತಿಯಲ್ಲಿ ಇರುವವರಿಗೆ ಮಾತ್ರ ಪ್ರಖ್ಯಾತಿ ಸಿಗುವ ಸಾಧ್ಯತೆಗಳು ಹೆಚ್ಚು ಇವೆ.

ವೃಶ್ಚಿಕ

ವೃಶ್ಚಿಕ

ಅನಿವಾರ್ಯವಾಗಿ ನಿಮಗೆ ಅಶುಭ ಫಲಗಳನ್ನೇ ಹೆಚ್ಚು ಹೇಳಬೇಕಾಗಿದೆ. ಕಾರಣ ಈಗ ನಿಮಗೆ ಗುರು ಹನ್ನೆರಡನೇ ಸ್ಥಾನ ಅಂದರೆ ವ್ಯಯಸ್ಥಾನಕ್ಕೆ ಪ್ರವೇಶ ಮಾಡುತ್ತಿದ್ದಾನೆ. ನಂತರ ಅಕ್ಟೋಬರ್ ಇಪ್ಪತ್ತಾರರಿಂದ ಶನಿ ದ್ವಿತೀಯದಲ್ಲಿ ಬರುತ್ತಾನೆ. ಆದುದರಿಂದ ಧನ ಸ್ಥಾನದಲ್ಲಿ ಶನಿ, ವ್ಯಯಸ್ಥಾನದಲ್ಲಿ ಗುರು ಆಗುತ್ತದೆ.

ಇದರಿಂದಾಗಿ ನಿಮ್ಮನ್ನು ದ್ವೇಷ ಮಾಡುವವರ ಸಂಖ್ಯೆಯಲ್ಲಿ ವೃದ್ಧಿ ಆಗುತ್ತದೆ. ನಿಮಗೆ ಅರಿವಿಲ್ಲದೆ ಅವಾಚ್ಯ ಮಾತುಗಳನ್ನು ಆಡಲು ಪ್ರಾರಂಭಿಸುತ್ತೀರಿ. ನಿಮ್ಮ ಹಾಗೂ ನಿಮ್ಮ ಮಕ್ಕಳ ಮಧ್ಯೆ ಭಿನ್ನಾಭಿಪ್ರಾಯ ಬರುವ ಸಾಧ್ಯತೆ ಹೆಚ್ಚಿದೆ. ಮಗ ಜಗಳ ಮಾಡಿಕೊಂಡು ಮನೆ ಬಿಟ್ಟು ಹೋಗಿದ್ದಾನೆ ಎಂದು ವ್ಯಥೆ ಪಡುವ ಬದಲು ನೀವೇ ಸ್ವಲ್ಪ ಸುಧಾರಿಸಿಕೊಂಡರೆ ಉತ್ತಮ.

ಚಿಕ್ಕ ಮಕ್ಕಳು ಅಥವಾ ವಿದ್ಯಾರ್ಥಿಗಳು ಬಹಳ ಎಚ್ಚರಿಕೆಯಿಂದ ಇರಬೇಕು. ದುರ್ಜನರ ಸಹವಾಸದಿಂದ ಹೀನ ಕಾರ್ಯಗಳನ್ನು ಮಾಡಲು ಪ್ರಚೋದನೆ ಲಭಿಸುತ್ತದೆ. ನಿಮಗೆ ಅರಿವು ಇಲ್ಲದಂತೆ ಆಲಸ್ಯ ಬುದ್ಧಿ ಸಹ ಹೆಚ್ಚಾಗುತ್ತದೆ. ಇಂದು ಮಾಡಬೇಕಾದ ಕೆಲಸವನ್ನು ಈಗಲೇ ಮಾಡು ಎಂದು ಸಾರುತ್ತಿದ್ದ ನೀವು ಈಗಲೇ ಮಾಡಬೇಕಾದ ಕೆಲಸವನ್ನೂ ಮಾಡದೇ ತಪ್ಪಿಸಿಕೊಳ್ಳಲು ದಾರಿ ಹುಡುಕುತ್ತೀರಿ.

ಅಧಿಕಾರದಲ್ಲಿ ಇರುವವರು ಅದನ್ನು ಕಳೆದುಕೊಳ್ಳುವ ಭೀತಿ ಇದೆ. ಇತರರು ನಿಮ್ಮ ಸೇವೆ ಮಾಡುವ ಸಮಯ ಮುಗಿದು ನೀವೇ ಎಲ್ಲರ ಸೇವೆ ಮಾಡುವ ಸ್ಥಿತಿ ಬಂದರೂ ಆಶ್ಚರ್ಯ ಇಲ್ಲ!

ದೇವರ ಮೇಲಿನ ಭಕ್ತಿ ಈ ಹಿಂದಿಗಿಂತಲೂ ಗಣನೀಯ ಪ್ರಮಾಣದಲ್ಲಿ ಕ್ಷೀಣಿಸುತ್ತದೆ. ಎಷ್ಟು ಪೂಜೆ ಮಾಡಿದರೂ ಪ್ರಯೋಜನ ಇಲ್ಲ ಎಂಬ ರೀತಿಯಲ್ಲಿ ಮಾತನಾಡಲು ಪ್ರಾರಂಭಿಸುತ್ತೀರಿ. ನಿಮ್ಮ ಮಾತು, ನಡೆ- ನುಡಿಗಳಲ್ಲಿ ನಾಸ್ತಿಕತೆ ಕಾಣುತ್ತದೆ. ಅದು ಎಲ್ಲರಲ್ಲಿಯೂ ಆಶ್ಚರ್ಯ ಹುಟ್ಟಿಸುತ್ತದೆ.

ಧನುಸ್ಸು

ಧನುಸ್ಸು

ಕೇವಲ ಗುರು ಸಂಚಾರ ಮಾತ್ರ ದೃಷ್ಟಿಯಲ್ಲಿ ಇಟ್ಟುಕೊಂಡು ನೋಡಿದರೆ ಮಾತ್ರ ನಿಮಗೆ ಉತ್ತಮ ಫಲವನ್ನು ತರುತ್ತಿದೆ. ಏಕೆಂದರೆ ನಿಮ್ಮ ರಾಶಿಯಿಂದ ಹನ್ನೊಂದನೇ ಸ್ಥಾನವಾದ ತುಲಾ ರಾಶಿಗೆ ಗುರು ಸಂಚಾರ ಆಗುತ್ತಿರುವುದರಿಂದ ನಿಮಗೆ ಗುರು ಬಲ ತರುತ್ತದೆ.

ಈ ಗುರುಬಲದಿಂದಾಗಿ ನಿಮಗೆ ಶನಿ ಗ್ರಹದ ಸದ್ಯದ ಸ್ಥಾನದಿಂದ ಇರುವ ಸಾಡೇ ಸಾತ್ ದುಷ್ಪ್ರಭಾವದಿಂದ ಸಾಕಷ್ಟು ರಕ್ಷಣೆ ಸಿಗಲಿದೆ. ಜತೆಗೆ ನೆಮ್ಮದಿ ನೀಡಲಿದೆ. ವ್ಯಾಪಾರದಲ್ಲಿ ಲಾಭ ಕಾಣಬಹುದು. ಸಹಜ ಸ್ವಾಭಾವಿಕವಾಗಿ ಆರ್ಥಿಕ ಸ್ಥಿತಿ ಉತ್ತಮ ಆಗಲಿದೆ.

ಬರಿಗೈಯಿ೦ದ ಎಷ್ಟು ಅಷ್ಟು ಹಣ ಕೂಡಿಡಲು ಅವಕಾಶ ಲಭಿಸುತ್ತದೆ. ನಿಮ್ಮನ್ನು ಇಷ್ಟು ದಿನ ಕಾಡುತಿದ್ದ ಒಂದು ವಿಧ ವಿಚಿತ್ರ ಭಯ ಏನಿದೆ ಅದು ದೂರವಾಗಲಿದೆ. ಮುಂದೆ ಏನೋ, ಹೇಗೋ ಎನ್ನುತ್ತಿದ್ದ ನೀವು ಈಗ ಏನೂ ತೊಂದರೆ ಇಲ್ಲ, ಎಲ್ಲ ಸರಿ ಹೋಗುತ್ತದೆ ಎನ್ನಲು ಪ್ರಾರಂಭಿಸುತ್ತೀರಿ.

ಸಮಸ್ಯೆ ಅಂದರೆ ನಿಮ್ಮ ಮಕ್ಕಳ ಸಾಧನೆ ಸಮಾಧಾನ ತರುವುದಿಲ್ಲ. ಇನ್ನೂ ಏನೋ ಆಗಬೇಕಿತ್ತು ಎಂದು ಮನಸ್ಸು ಚಡಪಡಿಸುತ್ತದೆ. ಇನ್ನು ಬಹಳ ಕಾಲದಿಂದ ವಾಹನ ಖರೀದಿ ಮಾಡುವ ಕನಸು ಕಂಡವರು ಈಗ ಪ್ರಯತ್ನಿಸಬಹುದು. ಇಲ್ಲಿ ದ್ವಿಚಕ್ರ ವಾಹನ ಅಥವಾ ಕಾರು ಎಂಬ ಭೇದಗಳಿಲ್ಲ. ನಿಮಗೆ ಆಸೆ ಇರುವ ವಾಹನ ನೀವು ಖರೀದಿಸಬಹುದು.

ಒಂದು ಪಕ್ಷ ವಾಹನ ಖರೀದಿಯ ಆಸೆ, ಯೋಚನೆ ಆಗಲಿ ಇಲ್ಲದವರಿಗೂ ತಮ್ಮ ಉದ್ಯೋಗ ಸ್ಥಳದಲ್ಲಿ ಆ ಸೌಕರ್ಯವನ್ನು ಒದಗಿಸಲಾಗುತ್ತದೆ. ಆದುದರಿಂದ ಆ ವಿಧಾನದಲ್ಲಿ ಸಹ ವಾಹನದಲ್ಲಿ ಸಂಚರಿಸುವ ಯೋಗ ಬರುತ್ತದೆ.

ಉತ್ತಮ ಮಿತ್ರರನ್ನು ಪಡೆಯುತ್ತೀರಿ. ನಿಮ್ಮಲ್ಲಿ ಉದಾರ ಬುದ್ಧಿ ಹೆಚ್ಚಾಗುತ್ತದೆ. ಸಹಾಯ ಮಾಡುವ ಮನೋಭಾವ ಈ ಹಿಂದೆಯೂ ಇತ್ತು. ಈಗ ಇನ್ನೂ ಹೆಚ್ಚಾಗಬಹುದು.

ಮಕರ

ಮಕರ

ಗುರು ತುಲಾ ರಾಶಿ ಪ್ರವೇಶ ಮೂಲಕ ನೀವು ಗುರುಬಲವನ್ನು ಕಳೆದುಕೊಳ್ಳುತ್ತಾ ಇದ್ದೀರಿ. ಆದರೆ ಚಿಂತೆ ಪಡುವ ಅವಶ್ಯಕತೆ ಇಲ್ಲ. ಏಕೆಂದರೆ ಗುರು ಬಲವನ್ನು ಕಳೆದುಕೊಂಡ ಇತರೆ ರಾಶಿಯವರಂತೆ ನಿಮಗೆ ಸಮಸ್ಯೆ ಇಲ್ಲ.

ಗುರು ನಿಮ್ಮ ರಾಶಿಯಿಂದ ಇಷ್ಟು ದಿನ ಭಾಗ್ಯಸ್ಥಾನದಲ್ಲಿ ಇದ್ದು, ಈಗ ಗುರು ಸಂಚಾರ ದಶಮಕ್ಕೆ ಅಂದರೆ ಹತ್ತನೇ ಮನೆಗೆ ಆಗುತ್ತಿದೆ. ನಿಮ್ಮ ಯಶಸ್ಸಿಗೆ ಅಥವಾ ಕೀರ್ತಿಗೆ ಯಾವುದೇ ಕುಂದು ಕೊರತೆಗಳು ಆಗದು. ನೀವು ಮಾಡುತ್ತಿರುವ ಉದ್ಯೋಗದಲ್ಲಿ ಅಭಿವೃದ್ದಿ ಆಗುತ್ತದೆ. ಕೆಲವರಿಗೆ ಬಡ್ತಿ ಸಹ ಸಿಗಬಹುದು.

ಏನೇ ಆಗಲಿ ಉದ್ಯೋಗ ಸ್ಥಳದಲ್ಲಿ ಹೆಚ್ಚಿನ ಗೌರವ- ಮರ್ಯಾದೆ ಲಭಿಸುತ್ತದೆ. ಉದ್ದೇಶಪೂರ್ವಕ ನಿಮಗೆ ಅವಮಾನ ಮಾಡಬೇಕು ಎಂದುಕೊಂಡು ಪ್ರಯತ್ನಿಸಿದರೂ ಅಂಥವರಿಗೆ ಯಶಸ್ಸು ಇಲ್ಲ. ರಾಜಕೀಯ ಕ್ಷೇತ್ರದಲ್ಲಿ ಇರುವವರಿಗೆ ಸ್ವಲ್ಪ ಉತ್ತಮ. ನಿಮ್ಮನ್ನು ಗುರುತಿಸುವ, ನಿಮ್ಮ ಕೆಲಸ- ಕಾರ್ಯ ಸಾಧನೆಗಳನ್ನು ಗುರುತಿಸುವ ಜನ ಹೆಚ್ಚಾಗುತ್ತಾರೆ.

ಆದರೆ, ಇಲ್ಲಿ ನೆನಪಿನಲ್ಲಿ ಇಟ್ಟುಕೊಳ್ಳಬೇಕಾದ ವಿಚಾರ ಎಂದರೆ ಮಕರ ರಾಶಿಯ ಸ್ತ್ರೀಯರಿಗೆ ಸ್ವಾಭಾವಿಕವಾಗಿ ಉತ್ತಮ ಸ್ಥಿತಿ ಇದ್ದರೂ ಪುರುಷರು ಮಾತ್ರ ಸ್ತ್ರೀಯರಿಂದ, ಅವರಿಗೆ ಸಂಬಂಧಿಸಿದ ಜಗಳ- ಮನಸ್ತಾಪ ಇತ್ಯಾದಿ ವಿಚಾರಗಳಿಂದ ಆದಷ್ಟು ದೂರ ಇರಬೇಕು.

ಗುರು ಬಲ ಇದ್ದಾಗ ಸಂತಾನ ಆಗಲಿಲ್ಲ. ಈಗ ಇನ್ನು ಗುರು ಬಲ ಸಹ ಮುಗೀತು. ಇನ್ನು ಸಂತಾನ ಅಗದು ಎನ್ನುವ ವಿಚಿತ್ರ ಚಿಂತೆಗಳಿದ್ದಲ್ಲಿ ಅದನ್ನೆಲ್ಲಾ ಬಿಡಿ. ನಿಮಗೆ ಈಗ ಗುರು ಬಲ ಇಲ್ಲದಿದ್ದರೂ ಸಹ ಸಂತಾನ ಭಾಗ್ಯಕ್ಕೆ ಏನೂ ತೊಂದರೆ ಆಗುವುದಿಲ್ಲ.

ಸರಕಾರಿ ಉದ್ಯೋಗದಲ್ಲಿ ಇರುವವರಿಗೆ ಮೇಲಧಿಕಾರಿಗಳೊಂದಿಗೆ ಉತ್ತಮ ಬಾಂಧವ್ಯ ಹಾಗೂ ರಾಜಕೀಯ ಕ್ಷೇತ್ರದಲ್ಲಿ ಇರುವವರರೊಟ್ಟಿಗೆ ಒಡನಾಟ ಪ್ರಾರಂಭ ಆಗುತ್ತದೆ. ಇನ್ನು ಸಹೋದರರ ಸಹಾಯ, ಸಹಕಾರ ಲಭಿಸುತ್ತದೆ.

ವಿವಾಹ ಆಗದ ಸಹೋದರಿ ಇದ್ದಲ್ಲಿ ಅವರ ಮದುವೆ ಮಾಡಲು ನಿಮಗೆ ಶಕ್ತಿ ಬರುತ್ತದೆ.

ಕುಂಭ

ಕುಂಭ

ಅನಾರೋಗ್ಯ ಹಾಗೂ ನಾನಾ ವಿಧದ ಬಾಧೆ- ಕಷ್ಟಗಳನ್ನು ಅಷ್ಟಮದ ಗುರುವಿನಿಂದಾಗಿ ಹಿಂದಿನ ವರ್ಷದಿಂದ ಈಗಿನ ತನಕ ಅನುಭವಿಸಿದ ನಿಮಗೆ ಈಗ ಗುರುಬಲ ಪ್ರಾರಂಭವಾಗಿ ಶಕ್ತಿ, ಚೈತನ್ಯ ತುಂಬುತ್ತದೆ. ಸ್ತ್ರೀಯರು ಹೆಚ್ಚು ಅವಮಾನಗಳನ್ನು ಹಾಗೂ ಪುರುಶರು ಹೆಚ್ಚು ಆರೋಗ್ಯ ಬಾಧೆಗಳನ್ನು ಈ ತನಕ ಅನುಭವಿಸಿದ್ದೀರಿ. ಇನ್ನು ಆರೋಗ್ಯ ಸುಧಾರಿಸುತ್ತಾ ಬರುತ್ತದೆ.

ಕ್ರಮೇಣವಾಗಿ ನಿಮಗೆ ಆಗುತ್ತಿದ್ದ ಅವಮಾನಗಳೂ ಕಡಿಮೆ ಆಗುತ್ತಾ ಬರುತ್ತದೆ. ಇಲ್ಲಿಯ ತನಕ ಪರಿಸ್ಥಿತಿಯನ್ನು ನೋಡಿ ಮಾತನಾಡುತಿದ್ದ ನೀವು ಈಗ ಹೆಚ್ಚು ಸತ್ಯ ಹೇಳಲು ಆರಂಭಿಸುತ್ತೀರಿ. ನಿಮ್ಮೊಂದಿಗೆ ಏನೂ ಮುಚ್ಚುಮರೆ ಇಲ್ಲದೆ ಮಾತನಾಡುವವರನ್ನು ಇಷ್ಟ ಪಡುತ್ತೀರಿ.

ಇನ್ನು ಸ್ವಲ್ಪ ಜವಾಬ್ದಾರಿ ಹೆಚ್ಚಾಗುತ್ತಿದೆ ಅನಿಸುತ್ತದೆ. ನಿಮ್ಮ ದುಡಿಮೆಯ ಆವಶ್ಯಕತೆ ಕುಟುಂಬಕ್ಕೆ ಎಷ್ಟರ ಮಟ್ತಿಗೆ ಇದೆ ಎಂದು ಅರಿಯುತ್ತೀರಿ. ಇದೇ ವಿಚಾರ ಹೆಚ್ಚು ಮಾಡುತ್ತಾ ಕೆಲವರು ಉದ್ಯೋಗದಲ್ಲಿ ಸಂಪಾದನೆ ಸಾಲದೇ ಆ ಕೆಲಸ ಬಿಟ್ಟು ವ್ಯಾಪಾರ ಮಾಡುವ ಆಲೊಚನೆಗಳನ್ನು ಸಹ ಮಾಡುತ್ತಾರೆ.

ನಿಮ್ಮ ಮಕ್ಕಳ ವಿಚಾರದಲ್ಲಿ ಹೆಚ್ಚು ಚಿಂತೆ ಮಾಡುತ್ತಾ ಇರುತ್ತೀರಿ. ಅವರ ಭವಿಷ್ಯ ರೂಪಿಸುವತ್ತ ನಿಮ್ಮ ಗಮನ ಹೆಚ್ಚಾಗುತ್ತದೆ. ರಾಜಕೀಯ ಕ್ಷೇತ್ರದಲ್ಲಿ ಇರುವವರಿಗೆ ಅಧಿಕಾರ ಪ್ರಾಪ್ತಿ. ಮಂತ್ರಿ ಆಗುವ ಸಂಭವ ಹೆಚ್ಚು ಇರುತ್ತದೆ. ಅತಿ ಕಡಿಮೆ ಪ್ರಯತ್ನ ಅಥವಾ ಪ್ರಯತ್ನವೇ ಇಲ್ಲದೇ ಪ್ರಖ್ಯಾತರಾಗುತ್ತೀರಿ. ಒಳ್ಳೆಯ ಹೆಸರು ಬರುತ್ತದೆ.

ಹೊಟ್ಟೆಗೆ ಸಂಬಂಧಿಸಿದ ಕಾಯಿಲೆ ಇದ್ದು, ಔಷಧ ಇಷ್ಟು ದಿನ ಕೆಲಸ ಮಾಡುತ್ತಾ ಇರಲಿಲ್ಲ ಎಂದಾದಲ್ಲಿ ಉತ್ತಮ ವೈದ್ಯರು, ವೈದ್ಯ ಪದ್ಧತಿ ಲಭಿಸಿ ಶೀಘ್ರ ಗುಣ ಮುಖರಾಗುತ್ತೀರಿ. ಅವಿವಾಹಿತರಿಗೆ ವಿವಾಹ ಭಾಗ್ಯ ಬರಲು ಇನ್ನೂ ಸ್ವಲ್ಪ ತಡ ಇದೆ.

ಮೀನ

ಮೀನ

ಒಂದು ವರ್ಷದಿಂದ ಸಪ್ತಮದಲ್ಲಿ ಗುರು ಇದ್ದು, ಪೂರ್ಣ ಗುರುಬಲ ಲಭಿಸಿ ಎಲ್ಲ ವಿಧದ ಸಮಸ್ಯೆಗಳಿಂದ ನಿರಾಯಾಸವಾಗಿ ಪಾರಾಗುತ್ತಿದ್ದ ನಿಮಗೆ ಇನ್ನು ಸದ್ಯ ಒಂದು ವರ್ಷ ಕಾಲ ಆ ಸೌಭಾಗ್ಯ ಇಲ್ಲ.

ನಿಮ್ಮ ರಾಶಿಯಿಂದ ಗುರು ಎಂಟನೇ ಮನೆಗೆ ಪ್ರವೇಶ ಆಗುತ್ತಿರುವುದರಿಂದ ನೀವು ಹಲವಾರು ವಿಚಾರಗಳಲ್ಲಿ ಎಚ್ಚರಿಕೆಯಿಂದ ಇರಬೇಕಾಗುತ್ತದೆ. ಅದರಲ್ಲಿ ಪ್ರಮುಖವಾಗಿ ಆರೋಗ್ಯ! ಇನ್ನು ಒಂದು ವರ್ಷ ಕಾಲ ಆರೋಗ್ಯವನ್ನು ಬಹಳ ಜೋಪಾನವಾಗಿ ನೋಡಿಕೊಳ್ಳಬೇಕು. ಅದರಲ್ಲಿಯೂ ಅಸಿಡಿಟಿ, ಗ್ಯಾಸ್ಟ್ರಿಕ್, ಅಜೀರ್ಣ ಮುಂತಾದ ಸಮಸ್ಯೆ ಇದ್ದಲ್ಲಿ ಆಹಾರ ಪದ್ಧತಿ ಸರಿ ಮಾಡಿಕೊಳ್ಳಿ.

ಅನಿವಾರ್ಯ ಇಲ್ಲದಿದ್ದರೆ ದೂರ ಪ್ರಯಾಣಗಳನ್ನು ವರ್ಜಿಸಿ. ನಿಮಗೆ ರೂಢಿ ಇಲ್ಲದ ಹವಾಮಾನ ಇರುವ ಸ್ಥಳಗಳಿಗೆ ಭೇಟಿ ಮಾಡಬೇಡಿ. ಬಡತನ ನಿಮಗೆ ಕಾಡಬಹುದು. ಕೈಯಲ್ಲಿ ಈ ಹಿಂದಿನಂತೆ ಹೆಚ್ಚು ದುಡ್ದು ಓಡಾಡುವುದಿಲ್ಲ.

ಸಾಲ ಕೊಡಲು ಅಥವಾ ಕೊಡಿಸಲು ಹೋಗಬೇಡಿ. ಕೆಲ ಅಪವಾದಗಳು ನಿಮ್ಮ ಮೇಲೆ ಬಂದು ಮಾನಸಿಕ ಸ್ಥೈರ್ಯ ಕುಗ್ಗಬಹುದು. ಕೆಲವರಿಗೆ ಅವರಿಗೆ ಇಷ್ಟ ಇಲ್ಲದ ಕಾರ್ಯವನ್ನು ಒತ್ತಾಯ ಮಾಡಿ, ಅನಿವಾರ್ಯ ಸೃಷ್ಟಿಸಿ ಮಾಡಿಸಲಾಗುತ್ತದೆ.

ಇಲ್ಲಿ ಶುಭ ಫಲವನ್ನು ಸಹ ನೋಡುವುದಾದಲ್ಲಿ ನಿಮಗೆ ಅಪಮೃತ್ಯು ಭಯ ಇರುವುದಿಲ್ಲ. ಪ್ರಾಣಾಂತಕ ಅಥವಾ ಮಾರಣಾಂತಿಕ ಇದ್ದರೂ ಪ್ರಾಣಕ್ಕೆ ಕುತ್ತಿಲ್ಲ. ಇಲ್ಲಿ ಚಿಂತೆ ಮಾಡುವ ವಿಚಾರ ಎಂದರೆ ನಿಮ್ಮವರೇ ಶತ್ರುಗಳು ಆಗುತ್ತಾರೆ ಎನ್ನುವುದು.

ಎಷ್ಟೇ ಕಷ್ಟ ಆದರೂ ಸದ್ಯ ಇರುವ ಕೆಲಸ ಬಿಟ್ಟು ಹೊಸ ಉದ್ಯೋಗ ಹುಡುಕುವ ಸಾಹಸ ಮಾಡಬೇಡಿ. ಹೊಸದಾಗಿ ವ್ಯಾಪಾರ ಪ್ರಾರಂಭಿಸುವ ಆಲೋಚನೆಗಳು ಇರುವವರು ಒಮ್ಮೆ ನಿಮ್ಮ ಜಾತಕ ಪರಿಶೀಲನೆ ಮಾಡಿಸಿ. ದುಡುಕಿನಲ್ಲಿ ನಿರ್ಧಾರ ತೆಗೆದುಕೊಳ್ಳುವ ಬುದ್ಧಿ ತಕ್ಷಣ ಬಿಡಬೇಕು.

English summary
Jupiter transition impact on zodiac signs. Transit of planet Jupiter, harbinger of love and biggest planet in the solar system, will surely have big impact on your life. The transit in Libra zodiac sign will be from 12th September 2017 to 11th October 2018.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X