ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನ. 5ಕ್ಕೆ ಧನು ರಾಶಿಗೆ ಗುರು ಪ್ರವೇಶ: ಮೇಷದಿಂದ ಮೀನದ ತನಕ ರಾಶಿ ಫಲ

By ಪ್ರಕಾಶ್ ಅಮ್ಮಣ್ಣಾಯ
|
Google Oneindia Kannada News

ಧನು ರಾಶಿಗೆ ಗುರು ಪ್ರವೇಶ ಆಗುವುದರಿಂದ ಯಾವ ರಾಶಿಗೆ ಏನು ಫಲ ನೀಡುತ್ತದೆ ಎಂಬುದನ್ನು ತಿಳಿಸುವ ಲೇಖನ ಇದು. ಗುರು ಬಲ ಇದ್ದಲ್ಲಿ ಮದುವೆ ಆಗುತ್ತದೆ. ಮಕ್ಕಳಾಗಲು ಸೂಕ್ತ ಕಾಲ. ಉಪನಯನ ಆಗಬಹುದು. ಸೈಟ್ ಖರೀದಿಸಬಹುದು. ಮನೆ ಕಟ್ಟಬಹುದು. ಹೀಗೆ ಶುಭ ಕಾರ್ಯಗಳನ್ನೇ ಸಾಲಾಗಿ ಹೇಳಿಬಿಡುತ್ತಾರೆ. ಆದರೆ ಜ್ಯೋತಿಷಿಗಳಿಗೆ ಜಾತಕ ತೋರಿಸದೆ ಮುಂದುವರಿಯುವುದು ವಿವೇಕ ಅಲ್ಲ.

2019ರ ನವೆಂಬರ್ 5ಕ್ಕೆ ಧನು ರಾಶಿಗೆ ಗುರು ಗ್ರಹದ ಪ್ರವೇಶ ಆಗುತ್ತದೆ. ಸಾಮಾನ್ಯವಾಗಿ ಒಂದು ರಾಶಿಯಲ್ಲಿ ಒಂದು ವರ್ಷ ಗುರು ಸಂಚಾರ ಇರುತ್ತದೆ. ಆದರೆ ಹಲವು ಬಾರಿ ವೇಗವಾಗಿ ಒಂದು ರಾಶಿಯನ್ನು ದಾಟಿ, ಮತ್ತೊಂದು ರಾಶಿಗೆ ತಲುಪುತ್ತಾನೆ ಗುರು. ನಂತರ ಮತ್ತೆ ಹಿಂದೆ ಇದ್ದ ರಾಶಿಗೆ ಹಿಂತಿರುಗುತ್ತಾನೆ. ಹೀಗೆ ಏನೇ ವೇಗ ಅಂತಾದರೂ ಒಟ್ಟಾರೆ ಲೆಕ್ಕದಲ್ಲಿ ಒಂದು ವರ್ಷ ಒಂದು ರಾಶಿಯಲ್ಲಿ ಇರುತ್ತಾನೆ.

Recommended Video

ಧನು ರಾಶಿಯವರ ಮೇಲೆ ಗುರು ಶನಿ ಪ್ರಭಾವ | ಅವರ ಸ್ಥಿತಿ ಹಾಗು ಮಾಡಬೇಕಾದ ಪರಿಹಾರ? | Oneindia Kannada

2019ರ ನವೆಂಬರ್ 5ಕ್ಕೆ ಧನು ರಾಶಿಗೆ ಗುರು ಪ್ರವೇಶ ಆಗುತ್ತದೆ. ಅಲ್ಲಿಂದ ವೇಗವಾಗಿ ಚಲಿಸಿ, ಮಕರ ರಾಶಿಗೆ ಕೇವಲ (29. 3. 2020) ನಾಲ್ಕು ತಿಂಗಳಲ್ಲಿ ಪ್ರವೇಶ ಆಗುತ್ತದೆ. ಅಲ್ಲಿಂದ ಮತ್ತೆ 30. 6. 2020ಕ್ಕೆ ಧನು ರಾಶಿಗೆ ಪ್ರವೇಶ ಆಗುತ್ತದೆ. 20. 11. 2020ಕ್ಕೆ ಮತ್ತೆ ಮಕರ ರಾಶಿಗೆ ಗುರು ಬರುತ್ತಾನೆ. ಈ ಹಿಂದೆಯೇ ಧನು ರಾಶಿಯಲ್ಲಿ ಕೆಲ ಕಾಲ ಗುರುವಿನ ಸಂಚಾರ ಆಗಿದೆ ಎಂಬುದನ್ನು ನೆನಪಿನಲ್ಲಿ ಇಟ್ಟುಕೊಳ್ಳಬೇಕು.

ಇನ್ನು ಧನು ರಾಶಿಯು ಅಗ್ನಿತತ್ವ ರಾಶಿ. ಇಲ್ಲಿಗೆ ಗುರು ಬಂದಾಗ ರುದ್ರಸ್ವರೂಪ, ನೃಸಿಂಹ ಸ್ವರೂಪ ಬರುವುದರಿಂದ ಎಲ್ಲಾ ರಾಶಿಯವರೂ ಈ ದೇವರ ಸೇವೆ ಮಾಡಿಕೊಂಡು ಬಂದಲ್ಲಿ ಉತ್ತಮ ಫಲಗಳು ವೃದ್ಧಿಯೂ ಕೆಟ್ಟ ಫಲಗಳ ನಾಶವೂ ಆಗುತ್ತದೆ. ಎಲ್ಲಾ ರಾಶಿಯವರಿಗೂ ಬೇರೆ ಬೇರೆಯಾಗಿ ಹೇಳಬೇಕಾಗಿಲ್ಲ.

Jupiter Transit 2019: ಧನು- ಮಕರ ಗುರು ಸಂಚಾರ ಫಲಾಫಲJupiter Transit 2019: ಧನು- ಮಕರ ಗುರು ಸಂಚಾರ ಫಲಾಫಲ

ಅಲ್ಲದೆ ಆಯಾ ಸಂಪ್ರದಾಯಕ್ಕೆ ತಕ್ಕಂತಹ ಗುರು ಮಠಗಳ ಗುರುಗಳ ಆಶೀರ್ವಾದ, ಮಂತ್ರಾಕ್ಷತೆ, ಗುರು ರಾಘವೇಂದ್ರ ಸ್ವಾಮಿಗಳ ಸ್ಮರಣೆ- ವಂದನೆಗಳನ್ನು ಸಲ್ಲಿಸಿ. ಇನ್ನು ಈ ಗುರು ಸಂಚಾರವನ್ನು ಲಗ್ನದಿಂದಲೂ ನೋಡಬೇಕಾಗುತ್ತದೆ. ಯಾರಿಗೆ ಜನ್ಮ ಜಾತಕದಲ್ಲಿ ಲಗ್ನದಿಂದ ಐದು, ಏಳು, ಒಂಬತ್ತನೇ ರಾಶಿಯಲ್ಲಿ ಗುರು ಇದ್ದಾನೋ ಅಂಥವರಿಗೆ ರಾಶಿ ಪ್ರಕಾರ ಒಂದು ವೇಳೆ ಅನಿಷ್ಟವಿದ್ದರೂ ಲಗ್ನಕ್ಕೆ ಇಷ್ಟ ಆಗಿದ್ದಲ್ಲಿ ದೋಷಗಳ ಫಲ ಕಡಿಮೆಯೇ ಇರುತ್ತದೆ.

ಮೇಷ: ಸಂತಾನ ಯೋಗ, ಉದ್ಯೋಗ ಪರಿವರ್ತನೆ

ಮೇಷ: ಸಂತಾನ ಯೋಗ, ಉದ್ಯೋಗ ಪರಿವರ್ತನೆ

ಇದು ಗುರುವಿಗೆ ಕಾರಕ ಕ್ಷೇತ್ರ. ಈ ರಾಶಿಗೆ ಗುರು ವ್ಯಯಾಧಿಪನೂ (ಹನ್ನೆರಡನೇ ಮನೆ ಅಧಿಪತಿ) ಹಾಗೂ ಭಾಗ್ಯಾಧಿಪನೂ (ಒಂಬತ್ತನೇ ಮನೆ ಅಧಿಪತಿ) ಹೌದು. ಈ ಬಾರಿ ಗುರುವು ಈ ರಾಶಿಯ ಭಾಗ್ಯ ಸ್ಥಾನಕ್ಕೆ (ಧನುಸ್ಸು ರಾಶಿಗೆ) ಪ್ರವೇಶಿಸಿ, ಮತ್ತೆ ಕರ್ಮಸ್ಥಾನಕ್ಕೆ (ಮಕರ ರಾಶಿಯಲ್ಲಿ) ಮುಂದುವರಿದು, ವಕ್ರನಾಗಿ ಧನುರಾಶಿಗೆ ಮತ್ತೆ ಬರುತ್ತಾನೆ. ಅಂದರೆ ಈ ರಾಶಿಯವರಿಗೆ ಒಂದೆಡೆ ಭಾಗ್ಯವೂ, ಇನ್ನೊಂದೆಡೆ ಉದ್ಯೋಗ ಪರಿವರ್ತನೆಗಳೂ ಇರುತ್ತವೆ. ಈ ರಾಶಿಯ ಜನ್ಮ, ತೃತೀಯ, ಪಂಚಮ ಸ್ಥಾನಗಳಿಗೆ ಗುರು ದೃಷ್ಟಿ ಇರುತ್ತದೆ. ಆರೋಗ್ಯ ವೃದ್ಧಿ, ಸಂತಾನ ಯೋಗ ಇತ್ಯಾದಿ ಭಾಗ್ಯಗಳೂ ಉದ್ಯೋಗ ಪರಿವರ್ತನೆಯಲ್ಲಿ ಗೊಂದಲಗಳೂ ಇರುತ್ತವೆ. ಜಾತಕದಲ್ಲಿ ಗುರು ಸರಿ ಇದ್ದವರಿಗೆ ಗೊಂದಲಗಳ ಅನುಭವ ಬರಲಾರದು. ಅನನುಕೂಲವಾಗಿ ಇದ್ದವರಿಗೆ ಸ್ವಲ್ಪ ಮಟ್ಟಿನ ಗೊಂದಲಗಳಾದೀತು. ಮಕ್ಕಳ ಅಭಿವೃದ್ಧಿ ವಿಚಾರದಲ್ಲಿ ನೀವು ವಿಶೇಷ ಕಾಳಜಿ ವಹಿಸುವ ಕಾಲ ಇದು. ಮಕ್ಕಳ ಹೆಸರಲ್ಲಿ ಠೇವಣಿ, ಮಕ್ಕಳಿಗೆ ಚಿನ್ನಾಭರಣ ಖರೀದಿ, ಮಕ್ಕಳ ಉನ್ನತ ವ್ಯಾಸಂಗಕ್ಕೆ ಪೂರಕ ವಾತಾವರಣ ಇದಾಗಿದೆ. ವಿದೇಶ ಪ್ರಯಾಣ, ಉದ್ಯೋಗ ವಿಚಾರದಲ್ಲಿ ಇರುವವರು ಈಗಿಂದೀಗಲೇ ಕಾರ್ಯಾಚರಣೆಗೆ ಇಳಿಯಬಹುದಾಗಿದೆ. ಒಟ್ಟಿನಲ್ಲಿ ಗುರುವು ಇನ್ನೆರಡು ವರ್ಷ ಉತ್ತಮ ಫಲದಾಯಕನು.

ವೃಷಭ: ವಾಹನ, ಗೃಹ ಖರೀದಿಯಲ್ಲಿ ಆಸಕ್ತಿ

ವೃಷಭ: ವಾಹನ, ಗೃಹ ಖರೀದಿಯಲ್ಲಿ ಆಸಕ್ತಿ

ಇದು ಗುರುವಿಗೆ ಮಾರಕ ರಾಶಿ. ಈ ರಾಶಿಗೆ ಗುರು ಲಾಭಾಧಿಪನೂ ಹೌದು, ರಂದ್ರ (ಅಷ್ಟಮಾಧಿಪ) ಕೂಡ ಆಗುತ್ತಾನೆ. ಈ ರಾಶಿಯವರಿಗೆ ಈಗ ಅಷ್ಟಮ ಗುರು. ಈವರೆಗೆ ವ್ಯವಹಾರ ಸುಗಮ ಆಗಿದ್ದು, ಮುಂದೆ ಅಷ್ಟಮದಿಂದ ಮುಂದಕ್ಕೆ ಹೋಗುವಲ್ಲಿಯವರೆಗೆ ನಿಧಾನ ಗತಿಗೆ ಹೋಗಲಿದೆ. ಇನ್ನೊಂದೆಡೆ ದ್ವಿತಿಯ ಸ್ಥಾನ ವೀಕ್ಷಣೆ ಮಾಡುವುದರಿಂದ ಕೌಟುಂಬಿಕ ಭಿನ್ನಮತಗಳಿರುತ್ತವೆ. ಈ ರಾಶಿಯ ಚತುರ್ಥ ಸ್ಥಾನ ವೀಕ್ಷಣೆ ಮಾಡುವುದರಿಂದ ವಾಹನ, ಭೂಮಿ, ಗೃಹ ಖರೀದಿಗಳಲ್ಲಿ ಆಸಕ್ತಿ ಬರುತ್ತದೆ. ಯೋಚಿಸಿ ವ್ಯವಹಾರ ಮಾಡಿ, ಕ್ಷೇಮವಿದೆ.

ಮಿಥುನ: ಸನ್ಮಾನ, ಲಾಭಗಳನ್ನು ಪಡೆಯಬಹುದು

ಮಿಥುನ: ಸನ್ಮಾನ, ಲಾಭಗಳನ್ನು ಪಡೆಯಬಹುದು

ಈ ರಾಶಿಯವರು ಇಷ್ಟರವರೆಗೆ ಅನನುಕೂಲ ಅನುಭವಿಸಿದ್ದರು. ಈಗ ಧನು ರಾಶಿ ಸಂಚಾರದಲ್ಲಿ ಉತ್ತಮ ಫಲ ಸಿಗಲಿದೆ. ಮಿಥುನ ರಾಶಿಗೆ ಗುರು ಸಪ್ತಮದಲ್ಲೂ ತೃತೀಯಕ್ಕೆ ಮತ್ತು ಲಾಭ ಸ್ಥಾನಕ್ಕೆ ಗುರು ದೃಷ್ಟಿ ಇರುವುದರಿಂದ ಈ ರಾಶಿಯವರು ಧನು ರಾಶಿಯಲ್ಲಿ ಗುರು ಸಂಚರಿಸುವವರೆಗೆ ವಿಶೇಷ ಸಾಧನೆಗಳಿಗೆ ಇಳಿಯಬಹುದು ಮತ್ತು ಸನ್ಮಾನ, ಲಾಭಗಳನ್ನೂ ಪಡೆಯಬಹುದು. ಅಂತಹ ಭಾವ ವೃದ್ಧಿಯ ಯೋಗ ಪ್ರಾಪ್ತಿಯಾಗಲಿದೆ. ಅವಿವಾಹಿತರಿಗೆ ವಿವಾಹ ಯೋಗವೂ ಬರಲಿದೆ.

ಕರ್ಕಾಟಕ: ಋಣ ಬಾಧೆಗಳ ನಿವಾರಣೆ

ಕರ್ಕಾಟಕ: ಋಣ ಬಾಧೆಗಳ ನಿವಾರಣೆ

ಈ ವರೆಗೆ ನಿಮಗೆ ಪಂಚಮದಲ್ಲಿ ಗುರು ಇದ್ದ. ಮುಂದೆ ಷಷ್ಟ ಸ್ಥಾನದಲ್ಲಿ ಸಂಚರಿಸುತ್ತಾನೆ. ಇಲ್ಲಿ ಅನನುಕೂಲ ಎಂಬುದಕ್ಕಿಂತ ಷಷ್ಟದ ಫಲ ಸ್ವರೂಪ ಏನು ಎಂದು ತಿಳಿಯಿರಿ. ಋಣ ಬಾಧೆಗಳ ನಿವಾರಣೆ, ಕೋರ್ಟು ಕಚೇರಿ ಸಮಸ್ಯೆ ನಿವಾರಣೆಯೋ ಸೃಷ್ಟಿಯೋ ಆಗಬಹುದು. ವ್ಯಯ ಸ್ಥಾನಕ್ಕೆ ಗುರು ದೃಷ್ಟಿ ಇರುವುದರಿಂದ ಧನ ವ್ಯಯ, ಮೋಕ್ಷಾರ್ಥ ದೇವತಾ ಕಾರ್ಯ, ದೇವಸ್ಥಾನ ದರ್ಶನ ಭಾಗ್ಯಗಳಿವೆ. ಉದ್ಯೋಗ ಪರಿವರ್ತನೆ ಆಗಲಿದೆ. ಇದ್ದ ಕೆಲಸ ಹೋಗುವುದೋ ಬಿಡುವುದೋ ನಡೆಯಬಹುದು. ಹೊಸ ಉದ್ಯೋಗಕ್ಕಾಗಿ ಖರ್ಚಾದೀತು. ಒಟ್ಟಿನಲ್ಲಿ ಯಾವುದೇ ನಿರ್ಧಾರಗಳಿಗೆ ಬರುವುದಾದರೆ ಸಂಬಂಧಿಸಿದ ತಜ್ಞರ ಸಲಹೆ ಪಡೆಯಲೇ ಬೇಕು. ಇಲ್ಲವಾದರೆ ಫಲ ಅನನುಕೂಲಕರ ಆದೀತು.

ಸಿಂಹ: ಸಾರ್ವಜನಿಕ ಸನ್ಮಾನ, ಪ್ರಶಂಸೆ ಪಡೆಯುವ ಕಾಲವಿದು

ಸಿಂಹ: ಸಾರ್ವಜನಿಕ ಸನ್ಮಾನ, ಪ್ರಶಂಸೆ ಪಡೆಯುವ ಕಾಲವಿದು

ಸಂತಾನ ಅಪೇಕ್ಷಿತರಿಗೆ ಸಂತಾನ ಯೋಗವಿದೆ. ಅದಕ್ಕೆ ಮೊದಲು ಸಂತಾನ ಪ್ರತಿಬಂಧಕ ದೋಷವಿದ್ದಲ್ಲಿ ನಿವಾರಿಸಿಕೊಳ್ಳಬೇಕು. ಸಾರ್ವಜನಿಕ ಪ್ರಶಂಸೆಗಳು, ಸನ್ಮಾನಗಳು ಲಭಿಸುವ ಉತ್ತಮ ಫಲಗಳಿರುತ್ತವೆ. ಇದರ ಜತೆಗೆ ಭಾಗ್ಯಾದಿಗಳೂ ನಿಮಗೆ ಒದಗಲಿವೆ. ಹಿರಿಯರ ಕಾರ್ಯ ಮಾಡುವ ಯೋಗವೂ ಇದೆ. ಆರೋಗ್ಯ ಸುಧಾರಣೆಯಾಗಲಿದೆ. ಇದಲ್ಲದೆ ಜನವರಿಯ ನಂತರ ಶನಿಯೂ ನಿಮಗೆ ಉತ್ತಮ ಫಲದಾಯಕ.ಮಕ್ಕಳ ಉನ್ನತ ವ್ಯಾಸಂಗಕ್ಕೆ, ವಿದೇಶಕ್ಕೆ ಕಳುಹಿಸುವ ವಿಚಾರಕ್ಕೆ ಪ್ರಯತ್ನ ಮಾಡಬಹುದು. ಅದು ಫಲಿಸುತ್ತದೆ. ಮಕ್ಕಳ ಹೆಸರಲ್ಲಿ ಠೇವಣಿ, ಷೇರು ಖರೀದಿಯನ್ನು ಮಾಡಿದರೆ ಫಲದಾಯಕವಾಗುತ್ತದೆ.

ಕನ್ಯಾ: ಭೂ ಖರೀದಿ, ಗೃಹ ನಿರ್ಮಾಣಕ್ಕೆ ಹಣ ಖರ್ಚು

ಕನ್ಯಾ: ಭೂ ಖರೀದಿ, ಗೃಹ ನಿರ್ಮಾಣಕ್ಕೆ ಹಣ ಖರ್ಚು

ಈ ರಾಶಿಗೆ ಚತುರ್ಥ ಗುರು. ಈ ರಾಶಿಯ ಅಷ್ಟಮ, ದಶಮ ಕರ್ಮಸ್ಥಾನ, ವ್ಯಯ ಸ್ಥಾನಕ್ಕೆ ಗುರು ತನ್ನ 5, 7, 9ನೇ ಪೂರ್ಣ ದೃಷ್ಟಿ ಬೀರುತ್ತಾನೆ. ಅಷ್ಟಮಕ್ಕೆ ದೃಷ್ಟಿ ಇದ್ದಾಗ ಮರಣ (ನಷ್ಟ) ಭಯ, ಕರ್ಮಸ್ಥಾನದಲ್ಲಿ ಉದ್ಯೋಗ ಪರಿವರ್ತನೆ, ವ್ಯಯದಿಂದ ಅಧಿಕ ಪ್ರಸಂಗಿ ಖರ್ಚುಗಳಾದೀತು. ನಷ್ಟ- ಭಯದಿಂದ ಅದನ್ನು ಸರಿಪಡಿಸಿಕೊಳ್ಳಲು ವ್ಯರ್ಥ ಖರ್ಚುಗಳಾದೀತು. ಇಲ್ಲಿ ಮುಖ್ಯವಾಗಿ ವ್ಯವಹಾರ ವಿವೇಚನೆಗಳಿರಬೇಕು. ವಾಹನ ಯೋಗ, ಭೂ ಖರೀದಿ, ಗೃಹ ನಿರ್ಮಾಣಾದಿ ಉತ್ತಮ ಕೆಲಸಗಳಿವೆ. ಇದಕ್ಕಾಗಿ ಧನ ವಿನಿಯೋಗಗಳಾಗುತ್ತವೆ.ಮಕ್ಕಳ ವಿಚಾರದಲ್ಲಿ ಅಭಿವೃದ್ಧಿ ಇದೆ. ಉನ್ನತ ವ್ಯಾಸಂಗ, ವಿದೇಶಕ್ಕೆ ಕಳುಹಿಸುವುದಕ್ಕೆ, ಮಕ್ಕಳ ಹೆಸರಲ್ಲಿ ನಿಧಿ ಸ್ಥಾಪಿಸುವಂಥದ್ದಕ್ಕೆ ಈಗಲೇ ಪ್ರಯತ್ನ ಮಾಡಿದರೆ ಮಾರ್ಚ್ ನಂತರ ಉತ್ತಮ ಫಲ ನೀಡುತ್ತದೆ.

ತುಲಾ: ಉನ್ನತಾಧಿಕಾರ, ಜವಾಬ್ದಾರಿಗಳು ಹೆಚ್ಚಾಗಲಿವೆ

ತುಲಾ: ಉನ್ನತಾಧಿಕಾರ, ಜವಾಬ್ದಾರಿಗಳು ಹೆಚ್ಚಾಗಲಿವೆ

ಈ ರಾಶಿಗೆ ತೃತೀಯ (ದುರಿತ ಸ್ಥಾನದಲ್ಲಿ) ಗುರು ಸಂಚಾರ. ಈ ರಾಶಿಯ ಸಪ್ತಮಕ್ಕೆ ಗುರು ದೃಷ್ಟಿ ಬೀರುವುದರಿಂದ ಅವಿವಾಹಿತರಿಗೆ ವಿವಾಹ ಯೋಗ ಪ್ರಾಪ್ತಿಯಾಗಲಿದೆ. ಭಾಗ್ಯಸ್ಥಾನಕ್ಕೆ ಗುರು ದೃಷ್ಟಿ ಇರುವುದರಿಂದ ವ್ಯವಹಾರ ಲಾಭ, ಉನ್ನತಾಧಿಕಾರ, ಜವಾಬ್ದಾರಿಗಳು ಹೆಚ್ಚಾಗಲಿದೆ. ಲಾಭ ಸ್ಥಾನಕ್ಕೂ ದೃಷ್ಟಿ ಇರುವುದರಿಂದ ನಿಮ್ಮ ಸಾಧನೆಗಳಿಗೆ ಪುರಸ್ಕಾರ, ಸಾರ್ವಜನಿಕ ಸನ್ಮಾನ ಇತ್ಯಾದಿ ಶುಭ ಪಲಗಳು ಅಧಿಕ. ಆದರೂ ತೃತೀಯದಲ್ಲಿ ಗುರು ಸಂಚರಿಸುವುದರಿಂದ ಭಯ ಇರುತ್ತದೆ. ಅದಕ್ಕೆ ಹಿಂದೆ ಗುರು, ಮುಂದೆ ಗುರಿ ಇದ್ದರೆ ಎಲ್ಲವೂ ಕ್ಷೇಮ.

ವೃಶ್ಚಿಕ: ಉದ್ಯೋಗ ಬದಲಾವಣೆ ಸಾಧ್ಯತೆ

ವೃಶ್ಚಿಕ: ಉದ್ಯೋಗ ಬದಲಾವಣೆ ಸಾಧ್ಯತೆ

ಈ ರಾಶಿಗೆ ಧನಸ್ಥಾನದಲ್ಲಿ ಸಂಚರಿಸುವ ಗುರುವು ಷಷ್ಟ, ಅಷ್ಟಮ, ಕರ್ಮ ಸ್ಥಾನಗಳನ್ನೂ ಪೂರ್ಣ ದೃಷ್ಟಿಯಿಂದ ವೀಕ್ಷಿಸುತ್ತಾನೆ. ಧನ, ಅಧಿನಾಯಕತ್ವ ಲಭಿಸುವುದರಿಂದ ಅಷ್ಟಮ ದೃಷ್ಟಿಯ ಖರ್ಚುಗಳೂ ಆಗುತ್ತವೆ. ರೋಗಪ್ರದ, ಮರಣ ಭಯ ನೀಡಬಹುದು. ಆದರೂ ಜನವರಿಯ ನಂತರ ನಿಮ್ಮ ಭಯ ನಿವಾರಣೆಯಾಗಲಿದೆ. ಇದರ ಜತೆಗೆ ಉದ್ಯೋಗ ಬದಲಾವಣೆ, ಹೊಸ ಉದ್ಯೋಗ ಪ್ರವೇಶ ಮಾಡುವ ಯೋಗಗಳಿವೆ. ಒಟ್ಟಿನಲ್ಲಿ ಮುಂದಿನ ದಿನಗಳು ನಿಮಗೆ ಉತ್ತಮ ಫಲ ನೀಡುವಂಥದ್ದಾಗಿದೆ. ನಿಮ್ಮ ಕುಟುಂಬ ಸಂಬಂಧದ ಅಂತಃ ಕಲಹಗಳ ರಾಜೀ- ಪಂಚಾಯತಿ ನಡೆಯಲಿದೆ.

ಧನು: ಹಿರಿಯರಿಂದ ಭಾಗ್ಯ ಪ್ರಾಪ್ತಿ ಯೋಗವಿದೆ

ಧನು: ಹಿರಿಯರಿಂದ ಭಾಗ್ಯ ಪ್ರಾಪ್ತಿ ಯೋಗವಿದೆ

ರಾಶ್ಯಾಧಿಪನೇ ತನ್ನ ಮೂಲ ತ್ರಿಕೋಣ ರಾಶಿಯಲ್ಲಿ ಇರುತ್ತಾನೆ. "ಜನ್ಮೇ ಗುರು ದುಃಖದಾಯಕ" ಎಂಬಂತೆ ಸ್ವಲ್ಪ ದುಃಖ ನೀಡಬಹುದು. ಆರೋಗ್ಯದ ಕಡೆ ಗಮನ ಇರಲಿ. ಸಂತಾನ ಅಪೇಕ್ಷಿತರಿಗೆ ಸಂತಸದ ಸಮಯ. ಈ ವಿಚಾರದಲ್ಲೇ ಸ್ವಲ್ಪ ದುಃಖ ನೀಡಬಹುದು. ಈಗ ಬೇಕಾದಂತಹ ಔಷದೋಪಚಾರಗಳಿದ್ದರೂ ಎಚ್ಚರಿಕೆಯಿಂದ ಇರಬೇಕು. ಅವಿವಾಹಿತರಿಗೆ ಕಂಕಣ ಬಲವೂ ಇರುತ್ತದೆ. ಮಕ್ಕಳ ಆರೋಗ್ಯದ ವಿಚಾರದಲ್ಲಿ ಗಮನ ಹೆಚ್ಚಾಗಿರಲಿ. ಯಾವುದನ್ನೂ ಬೇಜವಾಬ್ದಾರಿಯಿಂದ ನೋಡಬೇಡಿ. ಹಿರಿಯರಿಂದ ಭಾಗ್ಯ ಪ್ರಾಪ್ತಿಗಳಿವೆ.ಮಕ್ಕಳ ವಿದ್ಯಾಭ್ಯಾಸ, ಉನ್ನತ ವ್ಯಾಸಂಗ, ಮಕ್ಕಳ ಭವಿಷ್ಯ ನಿಧಿ ಸ್ಥಾಪನೆ, ಷೇರು ಖರೀದಿ, ಸ್ವರ್ಣಾಭರಣ ಖರೀದಿ ಇತ್ಯಾದಿ ಮಕ್ಕಳ ಅಭಿವೃದ್ಧಿ ಕಾರ್ಯಗಳಿಗೆ ಇದು ಸಕಾಲ.

ಮಕರ: ಗೃಹ, ಭೂಮಿ, ವಾಹನ ಖರೀದಿಸುವ ಯೋಗ

ಮಕರ: ಗೃಹ, ಭೂಮಿ, ವಾಹನ ಖರೀದಿಸುವ ಯೋಗ

ಈ ರಾಶಿಗೆ ವ್ಯಯದಲ್ಲಿ ಗುರು. ಖರ್ಚು- ವೆಚ್ಚಗಳು ಅಧಿಕ. ತಪ್ಪು ಸಂದೇಶಗಳು, ವಿರುದ್ಧವಾಗುವಂತಹ ಸಲಹೆಗಳೂ ಬರಬಹುದು. ವಿಮರ್ಶೆ ಮಾಡದೆ ಮುಂದುವರಿದರೆ ದುರ್ವ್ಯಯಗಳಾದೀತು. ವಿವಾಹ ಯೋಗ ಇದ್ದವರಿಗೆ ವಿವಾಹ ಮುಂದೂಡುವ ಸನ್ನಿವೇಶಗಳು ಇದಿರಾದಾವು. ಗೃಹ, ಭೂಮಿ, ವಾಹನ ಖರೀದಿಸುವ ಯೋಗಗಳಿವೆ. ಅಷ್ಟಮಕ್ಕೆ ಗುರು ದೃಷ್ಟಿ ಇರುವುದರಿಂದ ದುರ್ವಾರ್ತೆ ಕೇಳಬೇಕಾದೀತು. ಆದರೆ ವಿಚಲಿತರಾಗಬೇಡಿ.

ಕುಂಭ: ನಿಮ್ಮ ಪಾಲಿಗೆ ಅದೃಷ್ಟದ ದಿನಗಳು

ಕುಂಭ: ನಿಮ್ಮ ಪಾಲಿಗೆ ಅದೃಷ್ಟದ ದಿನಗಳು

ನಿಮ್ಮ ರಾಶಿಗೆ ಲಾಭದಲ್ಲಿ ಗುರು ಸಂಚಾರ ಕಾಲ. ಉನ್ನತಾಧಿಕಾರ, ಸಾರ್ವಜನಿಕರಿಂದ ಪ್ರಶಂಸೆ, ಸನ್ಮಾನಗಳ ಯೋಗಗಳಿವೆ. ಅವಿವಾಹಿತರಾಗಿದ್ದರೆ ವಿವಾಹ ಯೋಗ ಕೂಡಿ ಬರಲಿದೆ. ನಿಮ್ಮ ಸಾಧನೆಗಳು ಅಂದರೆ ಸಂಶೋಧನೆ, ಪಿ.ಎಚ್ ಡಿ., ಮುಂತಾದವಕ್ಕೆ ಪೂರಕ ವಾತಾವರಣವೋ ಅಥವಾ ಪದವಿಯೋ ಪ್ರಾಪ್ತಿಯಾಗಲಿದೆ. ರಾಜಕಾರಣಿಗಳಿಗೆ ಉನ್ನತ ಪೀಠಾಧಿಕಾರ ಸಿಗಲಿದೆ. ಜನವರಿಯವರೆಗೆ ಶನಿಯೂ ಲಾಭದಲ್ಲಿ ಇರುವುದರಿಂದ 2019ನೆಯ ಕೊನೆ ಭಾಗ ನಿಮಗೆ ಅದೃಷ್ಟದ ದಿನಗಳನ್ನು ನೀಡಲಿದೆ.ನಿಮಗೆ ಲಭಿಸಿದ ಲಾಭಾದಿಗಳನ್ನು ಮಕ್ಕಳ ಅಭಿವೃದ್ಧಿಗಾಗಿ ವಿನಿಯೋಗಿಸಲು ಸಕಾಲ ಇದು. ಧನಾಗಮನ ಇದೆ. ಆದರೆ ಅದರ ಸದ್ವಿನಿಯೋಗವನ್ನೂ ಅರಿತುಕೊಳ್ಳಬೇಕು. ಮಕ್ಕಳ ಹೆಸರಿನಲ್ಲಿ ಸ್ವರ್ಣಾಭರಣ ಖರೀದಿ, ಷೇರು ವ್ಯವಹಾರ, ಉನ್ನತ ವ್ಯಾಸಂಗದ ವಿಚಾರ, ವಿದೇಶಕ್ಕೆ ವ್ಯಾಸಂಗಕ್ಕೆ ಕಳುಹಿಸಲು ಇದು ಸರಿಯಾದ ಕಾಲವಾಗುತ್ತದೆ.

ಮೀನ: ಉದ್ಯೋಗ ಬಡ್ತಿ ಸಿಗುವ ಅವಕಾಶ, ಅತ್ಯುತ್ತಮ ದಿನಗಳು

ಮೀನ: ಉದ್ಯೋಗ ಬಡ್ತಿ ಸಿಗುವ ಅವಕಾಶ, ಅತ್ಯುತ್ತಮ ದಿನಗಳು

ಮೀನ ರಾಶಿಗೆ ಗುರು ಕರ್ಮದಲ್ಲಿ ಸಂಚರಿಸುವುದರಿಂದ ಉದ್ಯೋಗ ಬಡ್ತಿ, ವರ್ಗಾವಣೆ ಸಿಗಲಿದೆ. ನಿರುದ್ಯೋಗಿಗಳಿಗೆ ಇದು ಉದ್ಯೋಗ ಪರ್ವ ಕಾಲ. ಕುಟುಂಬ ಸೌಖ್ಯ, ಕೌಟುಂಬಿಕ ಭಿನ್ನಮತಗಳಿದ್ದರೆ ಅದಕ್ಕೊಂದು ಸುಖಾಂತ್ಯ ಸಿಗಲಿದೆ. ಸಾಲ ಮಾಡಿ ಉದ್ಯೋಗ ಮಾಡಲಿಚ್ಛಿಸುವವರಿಗೆ, ಕೋರ್ಟು ಕಚೇರಿ ಅಲೆದಾಟ ಮಾಡುವವರಿಗೆ ಉತ್ತಮ ಫಲ ಸಿಗಲಿದೆ. ಜನವರಿಯ ನಂತರ ಶನಿಯೂ ಬದಲಾಗುವುದರಿಂದ ನಿಮಗಿದು ಅಭಿವೃದ್ಧಿ ಸೂಚಕವೇ ಆಗಿರುತ್ತದೆ. ಗೃಹ, ವಾಹನ, ಭೂ ಖರೀದಿ ಯೋಗಗಳಿವೆ.

English summary
Auspicious planet Jupiter enter Sagittarius on November 5th 2019. Here is the impact of Jupiter transit on 12 Zodiac sign Aries, Taurus, Gemini, Cancer, Leo, Virgo, Libra, Scorpio, Sagittarius, Capricorn, Aquarius, Pisces.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X