• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಮಕರ ರಾಶಿಯಲ್ಲಿ ನ. 20ರಿಂದ ಗುರು ಸಂಚಾರ: ದ್ವಾದಶ ರಾಶಿಗಳಿಗೆ ಏನು ಫಲ?

By ಪಂಡಿತ್ ಶ್ರೀ ಗಣೇಶ್ ಕುಮಾರ್
|

ಗುರು ಗ್ರಹವು ಇದೇ ನವೆಂಬರ್ ತಿಂಗಳ 20ನೇ ತಾರೀಕಿನಂದು ತನ್ನ ನೀಚ ಸ್ಥಾನವಾದ ಮಕರ ರಾಶಿಗೆ ಪ್ರವೇಶ ಆಗುತ್ತಿದೆ. ಒಂದು ರಾಶಿಗೆ ಪ್ರವೇಶವಾದಲ್ಲಿ ಒಂದು ವರ್ಷಗಳ ಕಾಲ ಅಲ್ಲಿ ಗುರು ಸಂಚಾರ ಇರುತ್ತದೆ. ಈಗಾಗಲೇ ಈ ವರ್ಷದಲ್ಲಿ ಗುರು ಗ್ರಹ ಕೆಲ ಸಮಯ ಮಕರ ರಾಶಿಯಲ್ಲಿ ಸಮಯ ಕಳೆದಿದ್ದಾಗಿದೆ.

ಆದ್ದರಿಂದ ನವೆಂಬರ್ 20ರಿಂದ ಏಪ್ರಿಲ್ 5ನೇ ತಾರೀಕಿನ ತನಕ ಮಕರ ರಾಶಿಯಲ್ಲಿ ಸಂಚರಿಸುವ ಗುರು, ಆ ನಂತರ ಅಂದರೆ, ಏಪ್ರಿಲ್ ಆರನೇ ತಾರೀಕಿನಿಂದ ಕುಂಭ ರಾಶಿಯನ್ನು ಪ್ರವೇಶಿಸುತ್ತದೆ. ಅಲ್ಲಿಂದ ಮತ್ತೆ ಸೆಪ್ಟೆಂಬರ್ 15ನೇ ತಾರೀಕು ಮಕರ ರಾಶಿಯನ್ನು ಪ್ರವೇಶಿಸಿ, ನವೆಂಬರ್ 20ರ ತನಕ ಇದೇ ರಾಶಿಯಲ್ಲಿ ಇರುತ್ತದೆ.

ಈ ಬಾರಿ ಮಕರದಲ್ಲಿ ರಾಶ್ಯಾಧಿಪತಿ ಶನಿ ಇದ್ದು, ಅದರ ಜತೆಗೆ ಗುರು ಸಂಯೋಗ ಆಗುತ್ತದೆ. ಇದು 60 ವರ್ಷಗಳಿಗೊಮ್ಮೆ ಆಗುವ ಸಂಯೋಗ. ಏಕೆಂದರೆ, ಶನಿ ಗ್ರಹ ಒಂದು ರಾಶಿಯಿಂದ ಮತ್ತೊಂದಕ್ಕೆ ಹೋಗಲು ಎರಡೂವರೆ ವರ್ಷ ತೆಗೆದುಕೊಳ್ಳುತ್ತದೆ. ಹಾಗೆ ನೋಡಿದರೆ, ಮಕರ ರಾಶಿಗೆ ಮೂವತ್ತು ವರ್ಷದ ನಂತರ ಬಂದಿದೆ. ಇನ್ನು ಗುರು ಹನ್ನೆರಡು ವರ್ಷಕ್ಕೆ ಒಮ್ಮೆಯಂತೆ ಅದೇ ರಾಶಿಗೆ ಬರುತ್ತದೆ.

ಆದರೆ, ಎರಡೂ ಗ್ರಹಗಳು ಅದೇ ಸ್ಥಿತಿಯಲ್ಲಿ ಮತ್ತೆ ಹೀಗೆ ಒಟ್ಟಾಗಿರುವುದು ಅರವತ್ತು ವರ್ಷಗಳ ನಂತರ. ದೇಶದ ಆರ್ಥಿಕತೆಗೆ, ಅಭಿವೃದ್ಧಿಗೆ ಹಾಗೂ ಬೆಳವಣಿಗೆಗೆ ಇದು ಪೂರಕವಲ್ಲ. ಇನ್ನು ದೇಶದ ಪ್ರಮುಖ ನಾಯಕರ ಆರೋಗ್ಯ, ಆಯುಷ್ಯಕ್ಕೂ ಕೇಡು ತರುವಂಥ ಸಮಯ ಇದು. ನಾಸ್ತಿಕತೆ, ಗುರು ದ್ರೋಹ, ಗುರು ನಿಂದನೆ ಹೆಚ್ಚಾಗುತ್ತದೆ. ನಿಮ್ಮಲ್ಲಿ ನಾನು ಕೇಳಿಕೊಳ್ಳುವುದೇನೆಂದರೆ, ನೀವು ಯಾವುದೇ ಧರ್ಮ, ಜಾತಿಯವರಾಗಿರಿ. ನಿಮ್ಮ ಪಾಲಿನ ಗುರುಗಳನ್ನು ಆರಾಧನೆ ಮಾಡಿ.

ಅದು ಶೃಂಗೇರಿ ಶಂಕರಾಚಾರ್ಯರಿರಬಹುದು, ರಾಮಾನುಜರು, ರಾಘವೇಂದ್ರರು, ಮಧ್ವಾಚಾರ್ಯರು, ಸಾಯಿಬಾಬ... ಹೀಗೆ ಯಾವುದೇ ಗುರುಗಳ ಆರಾಧನೆ ಮಾಡಿ. ಮನೆಯ, ದೇಶದ ಒಳಿತಿಗಾಗಿ ಪ್ರಾರ್ಥನೆ ಮಾಡಿ. ನಿಮ್ಮ ಜನ್ಮ ಜಾತಕದಲ್ಲಿ ಗುರು ಗ್ರಹ ಎಲ್ಲಿ ಸ್ಥಿತವಾಗಿದೆ ಎಂಬುದನ್ನು ಒಮ್ಮೆ ಪರಿಶೀಲಿಸಿಕೊಳ್ಳಿ. ಅಗತ್ಯ ಇರುವವರು ಕಡ್ಡಾಯವಾಗಿ ಶಾಂತಿ ಮಾಡಿಸಿಕೊಳ್ಳಿ. ಇನ್ನು ಈ ಗುರು ಸಂಚಾರದ ಅವಧಿಯಲ್ಲಿ ದ್ವಾದಶ ರಾಶಿಗಳ ಮೇಲೆ ಆಗುವ ಪ್ರಭಾವ ಏನು ಎಂಬ ಬಗ್ಗೆ ತಿಳಿದುಕೊಳ್ಳಿ.

ವೈಯಕ್ತಿಕ ಭೇಟಿಗಾಗಿ ಸಂಪರ್ಕಿಸಿ

ಪಂಡಿತ್ ಶ್ರೀ ಗಣೇಶ್ ಕುಮಾರ್

ಭಾರತೀಯ ಪ್ರಖ್ಯಾತ ಜ್ಯೋತಿಷಿಗಳು.

ಶ್ರೀ ಪಂಚಮುಖಿ ಜೋತಿಷ್ಯಂ

ಮೈಸೂರು ಸರ್ಕಲ್ (ಶಿರ್ಸಿ ಸರ್ಕಲ್), ಚಾಮರಾಜಪೇಟೆ, ಬೆಂಗಳೂರು. ಮೊ. 98805 33337 .

ಮೇಷ

ಮೇಷ

ನಿಮಗೆ ಮುಂದಿನ ವರ್ಷದ ಏಪ್ರಿಲ್ ಮೊದಲ ವಾರದ ತನಕ ಕರ್ಮ ಸ್ಥಾನದಲ್ಲಿ ಗುರು- ಶನಿ ಸಂಚಾರ ಆಗುತ್ತದೆ. ಉದ್ಯೋಗ ವಿಚಾರದಲ್ಲಿ ನಾನಾ ಕಿರಿಕಿರಿ ಏರ್ಪಡಬಹುದು. ಪಾಪ ಕರ್ಮಾಸಕ್ತಿಗಳು ಹೆಚ್ಚು. ಗುರು- ಹಿರಿಯರ ಬಗ್ಗೆ ಅಸಡ್ಡೆ ತೋರುವಂತೆ ಆಗುತ್ತದೆ. ಯಾವುದೇ ಕಾರಣಕ್ಕೆ ಈ ಅವಧಿಯಲ್ಲಿ ಕೆಲಸ ಬದಲಿಸುವ ಆಲೋಚನೆ ಬೇಡ. ನಿಮ್ಮದಲ್ಲದ ವಸ್ತು, ಹೆಸರು, ಶ್ರಮವನ್ನು ನಿಮ್ಮದಾಗಿಸಿಕೊಳ್ಳುವುದಕ್ಕೆ ಪ್ರಯತ್ನಿಸಬೇಡಿ. ಈ ಅವಧಿಯಲ್ಲಿ ನಿಮ್ಮ ಮೇಲಧಿಕಾರಿಗಳಿಂದ ಕಿರುಕುಳ ಅನುಭವಿಸಬೇಕಾಗುತ್ತದೆ. ಸರಿ- ತಪ್ಪುಗಳನ್ನು ನೋಡದೆ ನಿಮ್ಮನ್ನು ಶಿಕ್ಷೆಗೆ ಗುರಿ ಪಡಿಸಲಿದ್ದಾರೆ. ಇನ್ನು ಏಪ್ರಿಲ್ ನಿಂದ ಸೆಪ್ಟೆಂಬರ್ ಮೊದಲ ಹದಿನೈದು ದಿನದ ತನಕ ಆದಾಯ ಮೂಲದಲ್ಲಿ ಹೆಚ್ಚಳ, ಕೆಲಸದಲ್ಲಿ ಸಕಾರಾತ್ಮಕ ಬದಲಾವಣೆ, ವಿದೇಶ ಪ್ರಯಾಣಕ್ಕೆ ಅವಕಾಶ ಮೊದಲಾದ ಶುಭ ಫಲಗಳನ್ನು ಕಾಣಬಹುದು. ಆ ನಂತರ ನವೆಂಬರ್ ವರೆಗೆ ಮತ್ತೆ ಸಮಸ್ಯೆಗಳು ಕಾಣಿಸಿಕೊಳ್ಳಲಿವೆ. ಆದ್ದರಿಂದ ಈ ಸಮಯ ಯಾವುದು ಎಂಬುದನ್ನು ಗಮನದಲ್ಲಿ ಇಟ್ಟುಕೊಂಡು, ಮುಂದಿನ ಹೆಜ್ಜೆಗಳನ್ನು ಇಡಿ.

ವೃಷಭ

ವೃಷಭ

ಏಪ್ರಿಲ್ ತನಕ ಒಂಬತ್ತನೇ ಮನೆಯಲ್ಲಿ ಗುರು ಮಕರ ರಾಶಿಯಲ್ಲಿ ಸಂಚರಿಸುವಾಗ ತಂದೆಯ ಆರೋಗ್ಯದ ಕಡೆಗೆ ಹೆಚ್ಚಿನ ಗಮನ ವಹಿಸಿ. ಸಣ್ಣ ಪುಟ್ಟ ಸಮಸ್ಯೆಗಳು ಎಂದು ನಿರ್ಲಕ್ಷ್ಯ ಮಾಡಬೇಡಿ. ಇನ್ನು ಪಿತ್ರಾರ್ಜಿತ ಆಸ್ತಿ ವ್ಯಾಜ್ಯಗಳು ಇದ್ದಲ್ಲಿ ಕೋರ್ಟ್ ಮೆಟ್ಟಿಲು ಏರುವ ಸಾಧ್ಯತೆ ಇರುತ್ತದೆ. ನೀವಾಗಿಯೇ ಮುಂದುವರಿದಲ್ಲಿ ದೀರ್ಘ ಕಾಲ ಎಳೆದಾಟ ಆಗಲಿದೆ. ಇನ್ನು ಆಗಬೇಕಾದ ಕೆಲಸಗಳಲ್ಲಿ ತಡವಾಗುತ್ತದೆ. ಅರ್ಧಕ್ಕೆ ನಿಲ್ಲಿಸಿದ್ದ ಕೆಲಸಗಳನ್ನು ಮೊದಲಿನಿಂದ ಶುರು ಮಾಡಬೇಕಾಗುತ್ತದೆ. ವಿದೇಶಗಳಲ್ಲಿ ಕೆಲಸಕ್ಕೆ ಪ್ರಯತ್ನಿಸುತ್ತಿದ್ದಲ್ಲಿ ನಾನಾ ಅಡೆತಡೆಗಳು ಎದುರಾಗುತ್ತವೆ. ಇನ್ನು ಏಪ್ರಿಲ್ ನಿಂದ ಸೆಪ್ಟೆಂಬರ್ ತನಕ ಉದ್ಯೋಗದಲ್ಲಿ ಬಡ್ತಿ, ವಿದೇಶ ಪ್ರಯಾಣ ಯೋಗ, ಮನೆಯಲ್ಲಿ ಶುಭ ಕಾರ್ಯಗಳು, ವೇತನ ಹೆಚ್ಚಳ, ಉದ್ಯೋಗ ಬದಲಾವಣೆಗೆ ಯತ್ನಿಸಿದಲ್ಲಿ ಅನುಕೂಲ, ಸಂತಾನ ಅಪೇಕ್ಷಿತರಿಗೆ ಶುಭ ಸುದ್ದಿ ಮೊದಲಾದ ಶುಭ ಫಲಗಳನ್ನು ಕಾಣಬಹುದು. ಮತ್ತೆ ಸೆಪ್ಟೆಂಬರ್ ನಿಂದ ನವೆಂಬರ್ ತನಕ ಯಾವುದೇ ಮುಖ್ಯ ತೀರ್ಮಾನಗಳನ್ನು ತೆಗೆದುಕೊಳ್ಳಬೇಡಿ.

ಮಿಥುನ

ಮಿಥುನ

ಏಪ್ರಿಲ್ ತನಕ ಆರೋಗ್ಯ ವಿಚಾರದಲ್ಲಿ ಬಹಳ ಎಚ್ಚರಿಕೆಯಿಂದ ಇರಬೇಕು. ಹಳೆ ಕಾಯಿಲೆಗಳಿದ್ದಲ್ಲಿ ಉಲ್ಬಣ ಆಗುತ್ತದೆ. ಇನ್ನು ನಾನಾ ಕಡೆಗಳಲ್ಲಿ ಅವಮಾನದ ಪಾಲಾಗುತ್ತೀರಿ. ನಿಮ್ಮ ಸಾಮರ್ಥ್ಯದ ಬಗ್ಗೆ ಹೀಗಳಿಕೆ ಮಾತುಗಳನ್ನು ಕೇಳಬೇಕಾಗುತ್ತದೆ. ನಿಮ್ಮದಲ್ಲದ ತಪ್ಪಿಗೆ ನಿಂದನೆಗಳನ್ನು ಕೇಳಬೇಕಾಗುತ್ತದೆ. ದೂರ ಪ್ರಯಾಣ ಮಾಡುವಾಗ ಆಹಾರ ಪಥ್ಯದ ಕಡೆಗೆ ಗಮನ ಇರಲಿ. ಇತರರು ಹೇಳುವ ಬಣ್ಣದ ಮಾತುಗಳಿಗೆ ಪಿಗ್ಗಿ ಬಿದ್ದು, ವಂಚನೆಗೆ ಒಳಗಾಗಬಹುದು. ನಿಮಗೆ ವಹಿಸಿದ ಕೆಲಸಗಳನ್ನು ನೀವೇ ಮಾಡುವುದು ಉತ್ತಮ. ಯಾರ ಮೇಲಾದರೂ ಅತಿಯಾದ ನಂಬಿಕೆ ಇರಿಸಿ, ಮುಂದುವರಿದರೆ ಕಷ್ಟಗಳನ್ನು ಎದುರಿಸಬೇಕಾಗುತ್ತದೆ. ಇನ್ನು ಏಪ್ರಿಲ್ ನಂತರದಲ್ಲಿ ಆಸ್ತಿ ವ್ಯಾಜ್ಯಗಳು ಇದ್ದಲ್ಲಿ ಇತ್ಯರ್ಥ ಆಗುತ್ತದೆ. ನಿಮಗೆ ಬರಬೇಕಾದ ಹಣ ಬರಲಿದೆ. ದೂರ ಪ್ರಯಾಣದಲ್ಲಿ ಲಾಭ, ವಿದೇಶದಲ್ಲಿ ಉದ್ಯೋಗ ಮಾಡುತ್ತಿರುವವರಿಗೆ ಅನುಕೂಲ ಹೀಗೆ ನಾನಾ ಬಗೆಯ ಶುಭ ಫಲಗಳನ್ನು ಕಾಣಬಹುದು. ಆರೋಗ್ಯದಲ್ಲಿ ಚೇತರಿಕೆಯನ್ನೂ ನಿರೀಕ್ಷಿಸಬಹುದು. ಆದರೆ ಸೆಪ್ಟೆಂಬರ್ ನಿಂದ ನವೆಂಬರ್ ವರೆಗೆ ಎಚ್ಚರಿಕೆಯಿಂದ ಇರಬೇಕು. ಗುರುವಿನ ಅನುಗ್ರಹಕ್ಕಾಗಿ ಅಗತ್ಯ ಹವನ, ದಾನ- ಧರ್ಮ ಮಾಡುವುದು ಅಗತ್ಯ.

ಕರ್ಕಾಟಕ

ಕರ್ಕಾಟಕ

ಸಂಗಾತಿ ಜತೆಗೆ ಮಾತಿಗೆ ಮಾತು ಬೆಳೆದು ಡೈವೋರ್ಸ್ ತನಕ ಹೋಗುವ ಸಾಧ್ಯತೆ ಇದೆ. ಮಾತನಾಡುವಾಗ ನಾಲಗೆ ಮೇಲೆ ಹಿಡಿತ ಇರಲಿ. ಇನ್ನು ಈಗಾಗಲೇ ವಿವಾಹ ನಿಶ್ಚಯ ಆಗಿದ್ದಲ್ಲಿ ಅದು ಮೂರನೇ ವ್ಯಕ್ತಿಗಳ ಚಾಡಿ ಮಾತುಗಳಿಂದ ಮುರಿದು ಬೀಳುವಂಥ ಸಾಧ್ಯತೆ ಇದೆ. ಆ ಬಗ್ಗೆ ಎಚ್ಚರಿಕೆಯಿಂದ ಇರಬೇಕು. ಪಾರ್ಟನರ್ ಷಿಪ್ ವ್ಯವಹಾರಗಳನ್ನು ಮಾಡುತ್ತಿದ್ದಲ್ಲಿ ಕಾಗದ- ಪತ್ರಗಳ ಕಡೆಗೆ ಲಕ್ಷ್ಯ ವಹಿಸಿ. ಇನ್ನು ಹೊಸದಾಗಿ ಪಾರ್ಟನರ್ ಷಿಪ್ ವ್ಯವಹಾರ ಮಾಡಬೇಕು ಅಂತಿದ್ದರೆ ಮಾಡದಿರುವುದು ಉತ್ತಮ. ಇನ್ನು ಏಪ್ರಿಲ್ ನಂತರ ಸ್ಥೂಲಕಾಯದ ಸಮಸ್ಯೆ ಎದುರಿಸಲಿದ್ದೀರಿ. ನಿಯಮಿತವಾಗಿ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಿ. ಮನೆಯಲ್ಲಿ ತಂದೆ- ತಾಯಿಗೆ ಏನಾದರೂ ಮಧುಮೇಹದಂಥ ಸಮಸ್ಯೆಗಳು ಇದ್ದಲ್ಲಿ ಮಕ್ಕಳು ಕಡ್ಡಾಯವಾಗಿ ಪರೀಕ್ಷೆ ಮಾಡಿಸಿಕೊಳ್ಳಿ. ಅತಿಯಾದ ಆಹಾರ ಸೇವನೆಯಿಂದ ತೊಂದರೆ ಮಾಡಿಕೊಳ್ಳುತ್ತೀರಿ. ನಿಮ್ಮ ನಾಲಗೆಯೇ ಸಮಸ್ಯೆಯ ಮೂಲವಾಗಿರುತ್ತದೆ. ನಿಮ್ಮ ಗುರುಗಳು ಎಂದು ಯಾರಿಗೆ ನಡೆದುಕೊಳ್ಳುತ್ತೀರೋ ಅವರಿಗೆ ವಸ್ತ್ರ ಸಮರ್ಪಣೆ ಮಾಡಿ ಹಾಗೂ ಹಳದಿ ಬಟ್ಟೆಯಲ್ಲಿ ಕಡಲೇಕಾಳು ಕಟ್ಟಿ, ವೀಳ್ಯದೆಲೆ- ಅಡಿಕೆ, ದಕ್ಷಿಣೆ ಸಹಿತ ದಾನ ಮಾಡಿ.

ಸಿಂಹ

ಸಿಂಹ

ಏಪ್ರಿಲ್ ತನಕ ಹಿತಶತ್ರುಗಳಿಂದ ಎಚ್ಚರವಾಗಿರಬೇಕು. ನಿಮ್ಮೆದುರು ನಗುನಗುತ್ತಾ ಮಾತನಾಡಿ, ನಿಮ್ಮ ವಿರುದ್ಧವೇ ಷಶ್ಯಂತ್ರ ನಡೆಸಲಿದ್ದಾರೆ. ಭುಜದ ನೋವು, ಕೈ- ಕಾಲು, ಮಂಡಿ ನೋವು, ಜಠರ ಸಮಸ್ಯೆಗಳನ್ನು ಎದುರಿಸಲಿದ್ದೀರಿ. ಆಗಬೇಕಾದ ಕೆಲಸಕ್ಕೆ ಪದೇಪದೇ ಪ್ರಯತ್ನ ಮಾಡಬೇಕಾಗುತ್ತದೆ. ನಿಮ್ಮ ನೇರವಂತಿಕೆಯ ಮಾತುಗಳನ್ನು ಅಹಂಕಾರ ಎಂದು ಬಿಂಬಿಸುವ ಪ್ರಯತ್ನಗಳಾಗುತ್ತವೆ. ಈಗ ನೀವು ಯಾವುದಾದರೂ ಕಾಂಟ್ರ್ಯಾಕ್ಟ್ ವಹಿಸಿಕೊಂಡಿದ್ದಲ್ಲಿ ಅದನ್ನು ಕೈಬಿಡುವಂತೆ ಮಾಡುವುದಕ್ಕೆ ಏನೇನೋ ಪ್ರಯತ್ನಗಳಾಗುತ್ತವೆ. ನೀವು ಬಹಳ ಗೌರವದಿಂದ ನೋಡುವ ವ್ಯಕ್ತಿಗೆ ನಿಮ್ಮ ಬಗ್ಗೆ ಸಲ್ಲದ ಚಾಡಿ ಮಾತುಗಳನ್ನು ಹೇಳಲಾಗುತ್ತದೆ. ಇನ್ನು ಏಪ್ರಿಲ್ ನಿಂದ ಸೆಪ್ಟೆಂಬರ್ ಮಧ್ಯೆ ವಿವಾಹ ವಯಸ್ಕರಿಂದ ಸೂಕ್ತ ಸಂಬಂಧ ಹುಡುಕಿಕೊಂಡು ಬರುವ ಸಾಧ್ಯತೆ ಇದೆ. ಇನ್ನು ವಿವಾಹಿತರಾಗಿದ್ದು, ಸಂತಾನಕ್ಕೆ ಪ್ರಯತ್ನಿಸುತ್ತಿದ್ದಲ್ಲಿ ಅದರಲ್ಲಿ ಶುಭ ಸುದ್ದಿ ಇದೆ. ವೃತ್ತಿಪರ ಕಾರಣಗಳಿಗಾಗಿ ವಿದೇಶ ಪ್ರಯಾಣ ಮಾಡುವ ಯೋಗ ಇದೆ. ಸೆಪ್ಟೆಂಬರ್ ನಂತರ ನವೆಂಬರ್ ವರೆಗೆ ಕಾನೂನು ವ್ಯಾಜ್ಯಗಳು ಆಗದಂತೆ ನೋಡಿಕೊಳ್ಳಿ.

ಕನ್ಯಾ

ಕನ್ಯಾ

ಏಪ್ರಿಲ್ ತನಕ ನಿಮ್ಮ ರಾಶಿಯ ಐದನೇ ಮನೆಯಲ್ಲಿ ಗುರು ಸಂಚರಿಸುವಾಗ ಮಕ್ಕಳ ಆರೋಗ್ಯದ ಬಗ್ಗೆ ಕಾಳಜಿ ತೆಗೆದುಕೊಳ್ಳಿ. ಇನ್ನು ಗರ್ಭಿಣಿಯರು ಸೂಕ್ತ ಔಷಧೋಪಚಾರವನ್ನು ಅನುಸರಿಸಿ. ವೈದ್ಯರನ್ನು ಅಥವಾ ಔಷಧಗಳನ್ನು ಬದಲಿಸುವಾಗ ಎಚ್ಚರಿಕೆಯಿಂದ ಇರಬೇಕು. ಈ ಅವಧಿಯಲ್ಲಿ ನಿಮ್ಮ ಸಂಬಂಧಿ ಎಂದು ಹೇಳಿಕೊಂಡು ಬರುವವರು ಅಥವಾ ಹೊಸದಾಗಿ ಸ್ನೇಹಿತರಾಗಿ ಸಿಗುವವರ ಬಗ್ಗೆ ಎಚ್ಚರಿಕೆಯಿಂದ ಇರಿ. ನಿಮ್ಮ ಜಾತಕದಲ್ಲಿ ಗುರು ಎಲ್ಲಿ ಸ್ಥಿತವಾಗಿದೆ ಎಂಬುದನ್ನು ಒಮ್ಮೆ ಸರಿಯಾಗಿ ಗಮನಿಸಿಕೊಳ್ಳಿ. ಏಕೆಂದರೆ, ವೈದ್ಯರಿಂದ ಗುರುತಿಸಲು ಸಾಧ್ಯವಾಗದಂಥ ಕೆಲವು ಆರೋಗ್ಯ ಸಮಸ್ಯೆ, ಅದು ಮಾನಸಿಕವೇ ಆಗಿರಬಹುದು ಅಥವಾ ದೈಹಿಕವೇ ಆಗಿರಬಹುದು, ಕಾಣಿಸಿಕೊಳ್ಳುತ್ತದೆ. ಇನ್ನು ಮಕ್ಕಳ ಭವಿಷ್ಯದ ಕುರಿತು ಆತಂಕ ಕಾಣಿಸಿಕೊಳ್ಳುತ್ತದೆ. ನಿಮ್ಮ ಬಗ್ಗೆ ಇಲ್ಲಸಲ್ಲದ ಗಾಸಿಪ್ ಗಳು ಹರಿದಾಡುತ್ತವೆ. ಇನ್ನು ಏಪ್ರಿಲ್ ನಂತರ ಶತ್ರುಗಳ ಕಾಟ ಹೆಚ್ಚಾಗಲಿದೆ. ಈ ಹಿಂದಿನ ಆರೋಗ್ಯ ಬಾಧೆಗಳು ಉಲ್ಬಣಿಸುವ ಸಾಧ್ಯತೆ ಇದೆ. ಕಡ್ಡಾಯವಾಗಿ ಹೆಲ್ತ್ ಇನ್ಷೂರೆನ್ಸ್ ಮಾಡಿಸಿ. ನಿಯಮಿತವಾಗಿ ವ್ಯಾಯಾಮ ಮಾಡಿ. ಅತಿಯಾದ ಆಲೋಚನೆಯಿಂದ ಏನೂ ಪ್ರಯೋಜನ ಇಲ್ಲ, ನೆನಪಿಡಿ.

ತುಲಾ

ತುಲಾ

ನಿಮ್ಮ ರಾಶಿಯಿಂದ ನಾಲ್ಕನೇ ಮನೆಯಲ್ಲಿ ಗುರು ಸಂಚಾರ ಮಾಡುವಾಗ ಅಂದರೆ, ಏಪ್ರಿಲ್ ತನಕ ಸ್ನೇಹಿತರನ್ನು ದೂರ ಮಾಡಿಕೊಳ್ಳುತ್ತೀರಿ. ನಿಮ್ಮ ಅನುಮಾನದ ಪ್ರವೃತ್ತಿ ಹಾಗೂ ಕಠಿಣ ಮಾತುಗಳಿಂದ ಹಿತೈಷಿಗಳನ್ನು ದೂರ ಮಾಡಿಕೊಂಡು, ಕಷ್ಟಕ್ಕೆ ಯಾರೂ ಇಲ್ಲ ಎಂಬಂತೆ ಮಾಡಿಕೊಳ್ಳುತ್ತೀರಿ. ವಾಹನಗಳ ದುರಸ್ತಿಗಾಗಿ ಹೆಚ್ಚಿನ ಖರ್ಚಾಗಲಿದೆ. ದೂರದ ಪ್ರಯಾಣಗಳನ್ನು ಸ್ವಂತ ವಾಹನದಲ್ಲಿ ಮಾಡುವಾಗ ಸರಿಯಾಗಿ ಪರಿಶೀಲನೆ ಮಾಡಿಸಿಕೊಳ್ಳಿ. ಅತಿಯಾದ ವೇಗದ ಚಾಲನೆ ಬೇಡ. ಸುಖದ ಬೆನ್ನು ಹತ್ತಿ ಹೋಗಿ, ಸಮಸ್ಯೆಯನ್ನು ಮೈ ಮೇಲೆ ಹಾಕಿಕೊಳ್ಳುತ್ತೀರಿ. ಸ್ತ್ರೀಯರ ವಿಚಾರದಲ್ಲಿ ನಾಲಗೆ ಹರಿಬಿಡಬೇಡಿ. ನಿಮ್ಮ ವರ್ಚಸ್ಸಿಗೆ ಧಕ್ಕೆ ಆಗಬಹುದು. ಇನ್ನು ಏಪ್ರಿಲ್ ನಂತರ ಸಂತಾನ ಅಪೇಕ್ಷಿತರಿಗೆ ಶುಭ ಸುದ್ದಿ ಇದೆ. ಸೈಟು, ಮನೆ ಖರೀದಿ ಮಾಡಬೇಕು ಎಂದಿದ್ದಲ್ಲಿ ಹಣಕಾಸಿನ ಅನುಕೂಲ ಒದಗಿ ಬರಲಿದೆ. ಹೊಸದಾಗಿ ವ್ಯಾಪಾರ- ವ್ಯವಹಾರ ವಿಸ್ತರಣೆ ಮಾಡಲಿದ್ದೀರಿ. ಆರೋಗ್ಯ ಸಮಸ್ಯೆಗಳು ಇದ್ದಲ್ಲಿ ಚೇತರಿಕೆ ಕಾಣಿಸಿಕೊಳ್ಳುತ್ತದೆ. ಗೆಳೆಯರು, ಸಂಬಂಧಿಕರ ಸಹಾಯದಿಂದ ಅನುಕೂಲಗಳು ಒದಗಿ ಬರಲಿವೆ. ಸೆಪ್ಟೆಂಬರ್ ನಂತರ ನವೆಂಬರ್ ತನಕ ಮಾತಿನ ಮೇಲೆ ನಿಗಾ ಇರಲಿ. ಚಾಡಿ ಮಾತನ್ನು ಕೇಳಬೇಡಿ. ತಾಯಿಯ ಆರೋಗ್ಯದ ಕಡೆಗೆ ಹೆಚ್ಚಿನ ನಿಗಾ ಇರಲಿ.

ವೃಶ್ಚಿಕ

ವೃಶ್ಚಿಕ

ಏಪ್ರಿಲ್ ತನಕ ನಿಮ್ಮ ರಾಶಿಗೆ ಮೂರನೇ ಮನೆಯಲ್ಲಿ ಗುರು ಗ್ರಹ ಸಂಚಾರ ಇರುತ್ತದೆ. ಸೋದರ- ಸೋದರಿಯರ ಜತೆಗೆ ಮನಸ್ತಾಪ ಎದುರಾಗಲಿದೆ. ಇದು ವೈಚಾರಿಕವಾದ ಭಿನ್ನಾಭಿಪ್ರಾಯವಾದರೂ ಆಗಿರಬಹುದು ಅಥವಾ ಈ ಹಿಂದಿನ ಮನಸ್ತಾಪ ಈಗ ಮತ್ತೆ ಹೆಚ್ಚಾಗುವಂತೆ ಆಗಬಹುದು. ನಿಮ್ಮ ಏಳ್ಗೆಯು ಇತರರನ್ನು ಕಣ್ಣು ಕುಕ್ಕುವಂತೆ ಮಾಡುತ್ತದೆ. ಏಕಾಗ್ರತೆ ಕಳೆದುಕೊಂಡು, ಉದ್ಯೋಗ ಸ್ಥಳದಲ್ಲಿ ಕೆಲವು ತಪ್ಪುಗಳಾಗಲಿವೆ. ಆಲಸ್ಯದಿಂದ ನಿರ್ಲಕ್ಷ್ಯ ಮಾಡಿದ ಕೆಲಸಕ್ಕೆ ವಿಪರೀತ ಪ್ರಾಮುಖ್ಯತೆ ಬರಲಿದೆ. ನಿಮ್ಮ ಬದಲಿಗೆ ಇತರರನ್ನು ಬೆಳೆಸುವಂಥ ಪ್ರಯತ್ನಗಳಾಗುತ್ತವೆ. ಮನೆಯಲ್ಲಿ ಮಾತಿಗೆ ಬೆಲೆ ಇಲ್ಲ ಎಂಬ ಭಾವನೆ ಮೂಡುತ್ತದೆ. ತುಂಬ ಆಪ್ತರೆಂದು ನಂಬಿಕೊಂಡು ಹಂಚಿಕೊಂಡಿದ್ದ ಖಾಸಗಿ ವಿಚಾರಗಳು ಸಾರ್ವಜನಿಕವಾಗುವ ಸಾಧ್ಯತೆಗಳಿವೆ. ಆದ್ದರಿಂದ ಯಾರನ್ನಾದರೂ ಪೂರ್ತಿಯಾಗಿ ನಂಬುವ ಮುನ್ನ ಒಂದಕ್ಕೆ ನಾಲ್ಕು ಬಾರಿ ಆಲೋಚನೆ ಮಾಡಿ. ಇನ್ನು ಏಪ್ರಿಲ್ ನಂತರ ಸೆಪ್ಟೆಂಬರ್ ವರೆಗೆ, ನಾನು ಮಾಡಿದ್ದೇ ಸರಿ ಎಂಬ ಧೋರಣೆ, ಅಹಂಕಾರ ನಿಮ್ಮಲ್ಲಿ ಹೆಚ್ಚಾಗಲಿದೆ. ಇದರಿಂದ ಆಪ್ತರನ್ನು ದೂರ ಮಾಡಿಕೊಳ್ಳುವಂತಾಗುತ್ತದೆ. ಆದ್ದರಿಂದ ಸಲಹೆ- ಸೂಚನೆ, ಟೀಕೆ, ವಿಮರ್ಶೆಗಳನ್ನು ಮುಕ್ತ ಮನಸ್ಸಿನಿಂದ ಸ್ವೀಕರಿಸಿ.

ಧನುಸ್ಸು

ಧನುಸ್ಸು

ಏಪ್ರಿಲ್ ತನಕ ಎರಡನೇ ಮನೆಯಲ್ಲಿ ಗುರು ಗ್ರಹದ ಸಂಚಾರ ಇರುತ್ತದೆ. ನಿಮ್ಮದೇ ಹಣ ಕೈ ತಲುಪುವುದಕ್ಕೆ ನಾನಾ ಸಮಸ್ಯೆ, ಪಡಿಪಾಟಲುಗಳನ್ನು ಪಡಬೇಕಾಗುತ್ತದೆ. ಸರ್ಕಾರದಿಂದ ಆಗಬೇಕಾದ ಬಿಲ್ ನಲ್ಲಿ ವಿಪರೀತ ವಿಳಂಬ ಆಗಲಿದೆ. ಅನಗತ್ಯವಾಗಿ ಹಣ ಖರ್ಚಾಗಲಿದೆ. ಇದರಿಂದ ಮಾನಸಿಕ ನೆಮ್ಮದಿ ಹಾಳಾಗುತ್ತದೆ. ಕೆಲವು ಸಲ ಪ್ರತಿಷ್ಠೆಗಾದರೂ ಖರ್ಚು ಮಾಡಬೇಕಾದ ಸನ್ನಿವೇಶಗಳು ಎದುರಾಗಲಿವೆ. ಉನ್ನತ ವಿದ್ಯಾಭ್ಯಾಸಕ್ಕಾಗಿ ಹೆಚ್ಚಿನ ಖರ್ಚಾಗಲಿದೆ. ಅಡೆತಡೆಗಳನ್ನು ನಿವಾರಿಸಿಕೊಳ್ಳುವ ಸಲುವಾಗಿ ಕೈಯಿಂದ ಹಣ ಕಳೆದುಕೊಳ್ಳುತ್ತೀರಿ. ಇನ್ನು ಏಪ್ರಿಲ್ ನಿಂದ ಸೆಪ್ಟೆಂಬರ್ ತನಕ ಸಂಬಂಧಿಕರು, ಅದರಲ್ಲೂ ಸೋದರ ಸಂಬಂಧಿಗಳು ನಿಮ್ಮಿಂದ ನೆರವು ಕೇಳಿಕೊಂಡು ಬರಲಿದ್ದಾರೆ. ಈ ಸಂದರ್ಭದಲ್ಲಿ ನಿಮ್ಮ ಧೋರಣೆ, ಮಾತು ಹೇಗಿರುತ್ತದೆ ಎಂಬುದು ಬಹಳ ಮುಖ್ಯವಾಗುತ್ತದೆ. ಎಲ್ಲವನ್ನೂ ಅನುಮಾನದ ದೃಷ್ಟಿಯಿಂದ ನೋಡುವುದು ಸರಿಯಲ್ಲ. ಈ ಹಿಂದಿನ ನಿಮ್ಮ ಅನುಭವಗಳು ಕಲಿಸಿದ ಪಾಠವನ್ನು ಸದುಪಯೋಗ ಮಾಡಿಕೊಳ್ಳಿ. ಸೆಪ್ಟೆಂಬರ್ ನಂತರ ನವೆಂಬರ್ ವರೆಗೂ ಶ್ರಮ ಹಾಕದೆ ನಿಮ್ಮದೇ ದುಡ್ಡಾದರೂ ಕೈ ಸೇರುವ ಸಾಧ್ಯತೆ ಕಡಿಮೆ ಇರುತ್ತದೆ.

ಮಕರ

ಮಕರ

ಏಪ್ರಿಲ್ ತನಕ ನಿಮ್ಮದೇ ರಾಶಿಯಲ್ಲಿ ಗುರು ಸಂಚಾರ ಇರುತ್ತದೆ. ಜನ್ಮ ಗುರು ದುಃಖದಾಯಕ ಎಂಬ ಮಾತಿದೆ. ನಾನಾ ಬಗೆಯ ದುಃಖಗಳನ್ನು ಅನುಭವಿಸುತ್ತೀರಿ. ಹಾಗಂತ ಅದಕ್ಕೆ ಪರಿಹಾರ ಹುಡುಕಿಕೊಂಡು ತಪ್ಪು ಹಾದಿಯನ್ನು ತುಳಿಯಬೇಡಿ. ವಿವಾಹಿತ ಪುರುಷರು ಅದರಾಚೆಗಿನ ಸ್ತ್ರೀ ಸಂಬಂಧಗಳ ಕಡೆಗೆ ಆಕರ್ಷಿತರಾಗುವ ಸಾಧ್ಯತೆ ಇದೆ. ಇನ್ನು ಅವಿವಾಹಿತರಿಗೆ ಹಳೇ ಪ್ರೇಮ ಪ್ರಕರಣ ಮರುಕಳಿಸಬಹುದು ಅಥವಾ ವಿವಾಹ ಬಾಹಿರ ಸಂಬಂಧಗಳ ಕಡೆಗೆ ಮನಸ್ಸು ವಾಲಬಹುದು. ಆ ಬಗ್ಗೆ ಎಚ್ಚರಿಕೆಯಿಂದ ಇರಬೇಕು. ಇನ್ನು ತೂಕ ಹೆಚ್ಚಾಗುವ ಅಥವಾ ಮಾನಸಿಕ ಆರೋಗ್ಯ ಸಮಸ್ಯೆ ಕಾಣಿಸಿಕೊಳ್ಳಬಹುದು. ಆ ನಂತರ, ಅಂದರೆ ಏಪ್ರಿಲ್ ನಂತರ ಹಣಕಾಸಿನ ಹರಿವು ಚೆನ್ನಾಗಿರುತ್ತದೆ. ನಿಮಗೆ ಬರಬೇಕಾದ ಹಣ ಬರಲಿದೆ. ಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯಲಿದೆ. ಈ ಸಮಯದಲ್ಲಿ ಕಡ್ಡಾಯವಾಗಿ ಉಳಿತಾಯ ಮಾಡಿ. ವಯಸ್ಸಿಗೆ ಮೀರಿದ ವೈರಾಗ್ಯ ತಾಳಬೇಡಿ. ಇನ್ನು ಸೆಪ್ಟೆಂಬರ್ ನಂತರ ನವೆಂಬರ್ ವರೆಗೆ ಮತ್ತೆ ಹಣಕಾಸಿಗೆ ತೊಂದರೆ, ಅವಮಾನ ಮತ್ತಿತರ ಅಶುಭ ಫಲಗಳನ್ನು ಅನುಭವಿಸುತ್ತೀರಿ. ಮಂತ್ರಾಲಯ, ಶೃಂಗೇರಿ ಸೇರಿದಂತೆ ನೀವು ಯಾವ ಗುರುಗಳಿಗೆ ನಡೆದುಕೊಳ್ಳುತ್ತೀರಿ ಆ ಕ್ಷೇತ್ರದ ದರ್ಶನ ಮಾಡಿ.

ಕುಂಭ

ಕುಂಭ

ಏಪ್ರಿಲ್ ತನಕ ಹನ್ನೆರಡನೇ ಮನೆಯಲ್ಲಿ ಗುರು ಸಂಚಾರ ಇರುತ್ತದೆ ಹಾಗೂ ಆ ನಂತರ ಸೆಪ್ಟೆಂಬರ್ ವರೆಗೆ ಜನ್ಮ ಗುರು ಮತ್ತು ನವೆಂಬರ್ ತನಕ ವ್ಯಯ ಗುರುವಿನ ಸಂಚಾರ. ಖರ್ಚು ಖರ್ಚು ಖರ್ಚು. ನಿಮ್ಮ ಪಾಲಿಗೆ ಖರ್ಚಿನ ಸಮಯ ಇದು. ಅದರಲ್ಲೂ ಆರೋಗ್ಯ ಸಮಸ್ಯೆಗಳು ಉಲ್ಬಣಿಸಿ, ವೈದ್ಯಕೀಯ ವೆಚ್ಚಗಳು ಹೆಚ್ಚಾಗಲಿವೆ. ಸಂಬಂಧಿಕರು, ಸ್ನೇಹಿತರು ನಿಮ್ಮ ಬಳಿ ಹಣ ಇಲ್ಲ ಎಂಬ ಕಾರಣಕ್ಕೆ ಅವಮಾನ ಮಾಡುವ ಯೋಗ ಇದೆ. ಯಾರಿಗೂ ಜಾಮೀನಾಗಿ ನಿಲ್ಲಬೇಡಿ. ಆ ಸಾಲಕ್ಕೆ ನೀವೇ ಹೊಣೆಗಾರರಾಗಿ ಕೈಯಿಂದ ಹಣ ಕಳೆದುಕೊಳ್ಳುವಂತಾಗುತ್ತದೆ. ಚೀಟಿ ವ್ಯವಹಾರ ನಡೆಸುತ್ತಿರುವವರು ಸಾಧ್ಯವಾದಷ್ಟು ವ್ಯವಹಾರದ ಪ್ರಮಾಣ ಕಡಿಮೆ ಮಾಡಿಕೊಳ್ಳಿ. ಇನ್ನು ಯಾರನ್ನೋ ನಂಬಿ, ಕೆಲಸ ಕೊಡಿಸುತ್ತಾರೆ ಎಂದು ಹಣ ನೀಡಬೇಡಿ. ಕಡಿಮೆ ಬೆಲೆ ಚಿನ್ನ- ಬೆಳ್ಳಿ ಸಿಗುತ್ತದೆ ಎಂಬ ಅತ್ಯಾಸೆಯಲ್ಲಿ ಹಣ ಕಳೆದುಕೊಳ್ಳಬೇಡಿ. ಮಾನಸಿಕವಾಗಿ ನಾನಾ ಚಿಂತೆಗಳು ನಿಮ್ಮನ್ನು ಕಾಡಬಹುದು. ಸಂಗಾತಿಯ ಸ್ಪಂದನೆ ಬಗ್ಗೆ ಬೇಸರ ಉಂಟಾಗುತ್ತದೆ. ಕೆಲ ಸಮಯ ಸಂಗಾತಿಯಿಂದ ದೂರ ಇರುವಂಥ ಸನ್ನಿವೇಶ ಕೂಡ ಎದುರಾಗಬಹುದು. ನಿಮಗೆ ಸಂಬಂಧ ಪಡದ ವಿಚಾರದಲ್ಲಿ ತಲೆ ಹಾಕಬೇಡಿ.

ಮೀನ

ಮೀನ

ಏಪ್ರಿಲ್ ತನಕ ಗುರು ಮಕರ ರಾಶಿಯಲ್ಲಿ ಸಂಚರಿಸುವಾಗ ವ್ಯಾಪಾರಸ್ಥರು, ವ್ಯವಹಾರಸ್ಥರು ಹಣಕಾಸು ವಿಚಾರದಲ್ಲಿ ಎಚ್ಚರಿಕೆಯಿಂದ ಇರಬೇಕು. ದೊಡ್ಡ ಮಟ್ಟದ ವ್ಯವಹಾರ ಕೊಡುತ್ತಾರೆ ಎಂಬ ಕಾರಣಕ್ಕೆ ಸಾಲ ನೀಡಿದರೆ ಅದು ವಾಪಸಾಗುವುದು ತಡವಾಗುತ್ತದೆ ಅಥವಾ ಬರುವುದೇ ಇಲ್ಲ. ಇನ್ನು ವಿದೇಶಗಳಲ್ಲಿ ಉದ್ಯೋಗಕ್ಕೆ ಪ್ರಯತ್ನಿಸುತ್ತಿದ್ದಲ್ಲಿ ಯಾರನ್ನೋ ನಂಬಿಕೊಂಡು ಹಣ ನೀಡಬೇಡಿ. ಸೇಲ್ಸ್, ಮಾರ್ಕೆಟಿಂಗ್ ನಲ್ಲಿ ಕಾರ್ಯ ನಿರ್ವಹಿಸುವವರು ಬಹಳ ಕಷ್ಟಪಟ್ಟು, ಗುರಿ ತಲುಪುವಂತಾಗುತ್ತದೆ. ಮುಖದ ಸೌಂದರ್ಯದ ಕಡೆಗೆ ಹೆಚ್ಚಿನ ಗಮನ ನೀಡಿ. ಕ್ರೀಮ್, ಲೋಶನ್, ಪೌಡರ್ ಬಳಸುವಾಗ ಅಲರ್ಜಿ ಆಗಿ, ಅದರಿಂದ ಸಮಸ್ಯೆಗಳನ್ನು ಎದುರಿಸುವಂತಾಗುತ್ತದೆ. ಇನ್ನು ಏಪ್ರಿಲ್ ನಂತರ ಸೆಪ್ಟೆಂಬರ್ ವರೆಗೆ ಖರ್ಚಿನ ಪ್ರಮಾಣದಲ್ಲಿ ಹೆಚ್ಚಳ ಆಗಲಿದೆ. ಸ್ನೇಹಿತರು, ಸಂಬಂಧಿಕರು ಪಡೆದಿದ್ದ ಸಾಲಕ್ಕೆ ನೀವು ಜಾಮೀನುದಾರರಾಗಿ ನಿಂತಿದ್ದಲ್ಲಿ ಹಣ ಹಿಂತಿರುಗಿಸಬೇಕಾಗುತ್ತದೆ. ಸೆಪ್ಟೆಂಬರ್ ನಂತರ ನವೆಂಬರ್ ವರೆಗೆ ಯಾವುದೇ ಹೊಸ ಹೂಡಿಕೆ ಮಾಡದಿದ್ದಲ್ಲಿ ಉತ್ತಮ. ಲಾಭ ಬಂದ ತಕ್ಷಣ ಅದನ್ನು ನಗದು ಮಾಡಿಕೊಂಡು, ಖಾತೆಯಲ್ಲಿ ಹಣ ಇಟ್ಟುಕೊಳ್ಳುವ ಕಡೆಗೆ ಗಮನ ನೀಡಿ.

English summary
Jupiter transit in Capricorn Effects on Zodiac Signs in Kannada: The Venus transit in Leo will take place on 20th November 2020.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X