• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಯಾವ ಹೋಮದಿಂದ ಏನು ಫಲ? ಶಾಸ್ತ್ರೋಕ್ತವಾಗಿ ಮಾಡುವುದು ಹೇಗೆ?

By ಪಂಡಿತ್ ವಿಠ್ಠಲ ಭಟ್
|

ವಿವಾಹ, ಸಂತಾನ, ಉದ್ಯೋಗ, ಆರೋಗ್ಯ, ಹಣಕಾಸು ಸಮಸ್ಯೆ, ಮಾನಸಿಕ ನೆಮ್ಮದಿ, ವೈವಾಹಿಕ ಅನ್ಯೋನ್ಯತೆ...ಇವೆಲ್ಲ ಇಂದಿನ ದಿನಮಾನದ ಸಾಮಾನ್ಯ ಚಿಂತೆಗಳಾಗಿ ಬಿಟ್ಟಿವೆ. ಇವುಗಳಿಗೆ ಸಂಬಂಧಿಸಿದಂತೆ ಪರಿಹಾರ ಏನು ಎಂದು ಕೇಳುವವರು ಹೆಚ್ಚು.

ಈ ಬಗ್ಗೆಯೇ ಕನಿಷ್ಠ ಹತ್ತು ಮಂದಿಯಾದರೂ ಪ್ರಶ್ನೆ ಕೇಳಿ ಒನ್ಇಂಡಿಯಾ ಕನ್ನಡಕ್ಕೆ ಮೇಲ್ ಕಳಿಸುತ್ತಾರೆ. ಆದ್ದರಿಂದ ಈ ಮೇಲ್ಕಂಡ ಸಮಸ್ಯೆಗಳಿಗೆ ಪರಿಹಾರ ಸೂಚಿಸಿ ಪಂಡಿತ್ ವಿಠ್ಠಲ ಭಟ್ ಈ ಲೇಖನ ಬರೆದಿದ್ದಾರೆ. ಇಲ್ಲಿನ ಪರಿಹಾರ ವಿಚಾರಗಳು ಆಯಾ ವ್ಯಕ್ತಿಯ ನಂಬಿಕೆ ಬಿಟ್ಟಿದ್ದು. ಶಾಂತಿ ಹವನಗಳಿಗೂ- ಆ ನಂತರದ ಸಮಸ್ಯೆ ಪರಿಹಾರಕ್ಕೂ ಒನ್ಇಂಡಿಯಾ ಕನ್ನಡ ಜವಾಬ್ದಾರಿಯಲ್ಲ.

-ಸಂಪಾದಕ

ವಿವಾಹ ಆಗಲಿಲ್ಲ ಎಂದು ಜ್ಯೋತಿಷ್ಯ ಕೇಳುತ್ತಾ ನನ್ನ ಬಳಿ ಬರುವ ಜನರಲ್ಲಿ ಬಹಳ ಜನ ತಡವಾಗಿ ಬಂದಿರುತ್ತಾರೆ. ಅವರ ಜಾತಕದಲ್ಲಿ ವಿವಾಹ ಯೋಗಗಳು ಮುಗಿದು ಹೋಗಿರುತ್ತವೆ ಅಥವಾ ಅತ್ಯಂತ ಬಲಹೀನ ಆಗಿರುತ್ತದೆ. ಪರಿಸ್ಥಿತಿ ಹೀಗಿರುವಾಗ ಎಷ್ಟು ಬೇಗ ಜಾತಕ ನೋಡಲು ನಮಗೆ ಸಿಗುತ್ತದೋ ಅಷ್ಟು ಬೇಗ ನಾವು ಸಮಸ್ಯೆ ಗುರುತಿಸಿ ಪರಿಹರಿಸಬಹುದು.

ಒಳ್ಳೆ ಮುಹೂರ್ತ: ಅಕ್ಷರಾಭ್ಯಾಸ, ಕಿವಿ ಚುಚ್ಚುವುದು, ಗೃಹಾರಂಭಕ್ಕೆ

ಒಂದು ವೇಳೆ ಸಮಯ ಮೀರಿ ಹೋದಾಗ ನಾನು ಸಹ ಏನೂ ಮಾಡಲಾಗದ ಸ್ಥಿತಿಗೆ ಬರುತ್ತದೆ. ಆದರೂ ವಿವಾಹದ ವಿಚಾರದಲ್ಲಿ ಸಮಸ್ಯೆಗಳು ಆಗುತ್ತಾ ಇದೆ, ವಿವಾಹ ಸಿದ್ಧಿ ಆಗುತ್ತಾ ಇಲ್ಲ ಎಂದಾದಲ್ಲಿ ಉತ್ತಮ ವರ ಅಥವಾ ವಧು ಸಿಕ್ಕು ಶೀಘ್ರ ವಿವಾಹ ಸಿದ್ಧಿ ಆಗಲು ಈ ಬಾಲ ಗಣಪತಿ ಹವನ ಅತ್ಯಂತ ಉತ್ತಮ ಆಯ್ಕೆ.

ನನ್ನ ಅನುಭವವೇ ತಿಳಿಸುವಂತೆ ವಿವಾಹ ಸಿದ್ಧಿಗಾಗಿ ಬಾಲ ಗಣಪತಿ ಹವನ ಮಾಡಿಸಿದ ಶೇಕಡ 90 ಭಾಗ ಎಲ್ಲರಿಗೂ ವಿವಾಹ ಸಿದ್ಧಿ ಆಗಿದೆ. ಇನ್ನು ಮಿಕ್ಕವರು ನಾನು ಹಿಂದೆ ತಿಳಿಸಿದಂತೆ ಜ್ಯೋತಿಷ್ಯ ಕೇಳಲು ಬರುವಾಗಲೇ ಬಹಳ ತಡ ಆಗಿತ್ತು. ಇನ್ನು ಈ ಹವನದ ವಿಚಾರದಲ್ಲಿ ತಿಳಿಯುವುದಾದಲ್ಲಿ ಇದು ಕೇರಳೀಯ ತಂತ್ರದಲ್ಲಿ ಮಾಡುವ ಒಂದು ವಿಶಿಷ್ಟವಾದ ಹವನ.

ಬಾಲ ಗಣಪತಿ ಹವನ

ಬಾಲ ಗಣಪತಿ ಹವನ

ಗಣಪತಿಯನ್ನು ಒಂದು ಚಿಕ್ಕ ಮಗುವಿನ ಸ್ವರೂಪದಲ್ಲಿ ಅವನ ತಾಯಿಯಾದ ಗೌರಿ ಸಹಿತವಾಗಿ ವಿಶಿಷ್ಟವಾದ ಅತ್ಯಂತ ಗೌಪ್ಯವಾದ ಮಂತ್ರಗಳಿಂದ ಆವಾಹನೆ ಮಾಡಿ, ಹವನ ಮುಖಾಂತರ ಆರಾಧಿಸುವ ಈ ಕ್ರಮಕ್ಕೆ ಬಾಲ ಗಣಪತಿ ಹವನ ಎಂದು ಹೇಳುತ್ತಾರೆ. ಈ ಹವನದಲ್ಲಿ ಪಂಚದ್ರವ್ಯ ಅಥವಾ ಅಷ್ಟ ದ್ರವ್ಯದ ಬಳಕೆ ಆಗುತ್ತದೆ. ಈ ಹವನವನ್ನು ಯಾರು ಬೇಕಾದರೂ ಮಾಡಿಸಬಹುದು. ಆದರೆ ಮಾಡುವ ಪುರೋಹಿತರ ವಿಚಾರದಲ್ಲಿ ಬಹಳ ನಿಯಮಗಳು ಇವೆ.

ಮೊದಲನೇಯದಾಗಿ ಬಾಲ ಗಣಪತಿ ಹವನ ಮಾಡುವ ಪುರೋಹಿತರಿಗೆ ಅತ್ಯಂತ ಕ್ಲಿಷ್ಟಕರ ಆದ ಈ ಮಂತ್ರದ ಉಪದೇಶ ಇರಬೇಕು ಹಾಗೂ ಆ ಮಂತ್ರವನ್ನು ಅವರು ಈ ಮೊದಲೇ ಜಪಿಸಿ ಸಿದ್ಧಿ ಮಾಡಿಕೊಂಡು ಬಹಳ ಬಾರಿ ಈ ಹವನ ಮಾಡಿಸಿರಬೇಕು. ಇನ್ನು ಈ ಬಾಲಗಣಪತಿ ಹವನವನ್ನು ಸೂರ್ಯೋದಯದ ಮೊದಲೇ ಮಾಡಬೇಕು. ಅಂದರೆ ಬೆಳಗಿನ ಜಾವ ಬೇಗ ಈ ಪೂಜೆ ಆರಂಭಿಸ ಬೇಕು.

ಇನ್ನು ಈ ಹವನದಲ್ಲಿ ಪಂಚ ದ್ರವ್ಯ ಅಥವಾ ಅಷ್ಟ ದ್ರವ್ಯವನ್ನು ಮೃಗೀಯ ಮುದ್ರೆಯಲ್ಲಿ ಆಹುತಿ ಹಾಕಬೇಕು ಹಾಗೂ ಒಂದು ಸಾವಿರದ ಎಂಟು ಸಲ ಹಾಕಬೇಕು. ಆದುದರಿಂದ ಈ ಹವನ ಮಾಡಿಸಲು ನಾಲ್ಕೈದು ಜನ ಪುರೋಹಿತರ ಅವಶ್ಯಕತೆ ಇರುತ್ತದೆ. ಅವಿವಾಹಿತ ಸ್ತ್ರೀ ಬಾಲ ಗಣಪತಿಯ ಆರಾಧನೆ ಮಾಡಿ, ರತ್ನದಂಥ ವ್ಯಕ್ತಿ ಗಂಡನಾಗಿ ಲಭಿಸಲಿ ಎಂದು ಪ್ರಾರ್ಥಿಸಿದರೆ, ಅವಿವಾಹಿತ ಪುರುಷನು ಸ್ತ್ರೀ ರತ್ನ ಒಬ್ಬಳು ಸತಿ ಆಗಿ ನನಗೆ ಕರುಣಿಸು ಎಂದು ಪ್ರಾರ್ಥಿಸುವುದು ಪದ್ಧತಿ.

ಸಂತಾನ ಗೋಪಾಲ ಕೃಷ್ಣ ಮಂತ್ರ ಜಪ ಸಹಿತ ಹವನ ಸಹಿತ ಸರ್ಪ ಶಾಂತಿ ಹವನ

ಸಂತಾನ ಗೋಪಾಲ ಕೃಷ್ಣ ಮಂತ್ರ ಜಪ ಸಹಿತ ಹವನ ಸಹಿತ ಸರ್ಪ ಶಾಂತಿ ಹವನ

ಈ ವಿಶಿಷ್ಟ ಹವನವನ್ನು ಸಂತಾನ ಅಪೇಕ್ಷಿತರು ಮಾಡಿಸುವುದು ವಾಡಿಕೆ. ಮದುವೆಯ ಆದಿಯ ಕೆಲ ವರ್ಷಗಳು ಈಗಿನ ಶೈಲಿಯಂತೆ ಇಷ್ಟು ಬೇಗ ನಾವು ಮಕ್ಕಳು ಬೇಡ ಅಂದುಕೊಂಡಿದ್ದೇವೆ ಎಂದು ಹೇಳುತ್ತಾ ಸಂತಾನ ಆಗುವ ಉತ್ತಮ ಸಮಯ ದಾಟಿದ ಮೇಲೆ ನಂತರ ಪ್ರಯತ್ನಿಸಿ ವಿಫಲ ಆಗುವವರ ಸಂಖ್ಯೆ ಇತ್ತೀಚೆಗೆ ಹೆಚ್ಚಾಗಿದೆ.

ಸಂತಾನ ಎಂದರೆ ಒಂದೇ ಕೈಯಲ್ಲಿ ಚಿಟಿಕೆ ಹೊಡೆದಂತೆ ಅಲ್ಲ. ಅದು ಎರಡೂ ಕೈಗಳನ್ನೂ ಬಳಸಿ ಚಪ್ಪಾಳೆ ಹೊಡೆದಂತೆ. ಆದುದರಿಂದ ಗಂಡ ಹಾಗೂ ಹೆಂಡತಿ ಈ ಇಬ್ಬರ ಜಾತಕಗಳೂ ಸಹ ಬೇಕು. ಸಂತಾನ ಆಗುವ ಆ ಉತ್ತಮ ಸಮಯ ಯಾವುದು ಎಂದು ತಿಳಿಯಲು ಜಾತಕಗಳನ್ನು ಪರೀಕ್ಷಿಸಬೇಕಾಗುತ್ತದೆ. ಇಲ್ಲಿಯೂ ಸಹ ಜ್ಯೋತಿಷಿಗಳ ಬಳಿ ಹೋಗುವುದಕ್ಕೆ ತಡ ಮಾಡಬಾರದು ಅಥವಾ ನಾವು ಎಲ್ಲಾ ಪ್ರಯತ್ನ ಪೂಜೆ ಎಲ್ಲಾ ಮಾಡಿಸಿಬಿಟ್ಟಿದ್ದೇವೆ ಎಂದು ಹೇಳುತ್ತಾ ತಡ ಮಾಡುವವರು ಈ ವಿಚಾರದಲ್ಲಿ ಶ್ರದ್ಧೆ- ಗಾಂಭೀರ್ಯ ಇಲ್ಲದವರು ಹಲವರು ಇದ್ದಾರೆ.

ಗಂಡ ಹಾಗೂ ಹೆಂಡತಿ ಇಬ್ಬರಿಗೂ ಸಂತಾನ ಯೋಗ ಇಲ್ಲದಿದ್ದಾಗಲೂ ಶಾಂತಿ ಹವನ ಮಾಡಿಸಿ, ದಿವ್ಯ ಕ್ಷೇತ್ರಗಳಿಗೆ ಕಳುಹಿಸಿದ ಮೇಲೆ ಸಂತಾನ ಆದ ಉದಾಹರಣೆಗಳು ಅನೇಕ ಇವೆ. ಇನ್ನು ಕೆಲವರಿಗೆ ನೈಜವಾಗಿಯೇ ಆರೋಗ್ಯ ಬಾಧೆ ಆಗಿ ಸಂತಾನ ಆಗುವುದಿಲ್ಲ. ಇನ್ನು ಮೂರನೇದಾಗಿ ಸರಿಯಾದ ಸಮಯದಲ್ಲಿಯೇ ಸಂತಾನಕ್ಕೆ ಪ್ರಯತ್ನ ಮಾಡುತ್ತಿದ್ದೀರಾ ಎಂದಾದಲ್ಲಿ ಆರೋಗ್ಯವಂತ ಮಗು ಬೇಕು ಎಂದು ಈ ಆರಾಧನೆ ಮಾಡಿಸುವುದು ಸೂಕ್ತ.

ಧನ್ವಂತರಿ ಹವನ ಸಹಿತ ಮೃತ್ಯು ಸಂಜೀವಿನಿ ಮಹಾ ಮಂತ್ರ ಹವನ

ಧನ್ವಂತರಿ ಹವನ ಸಹಿತ ಮೃತ್ಯು ಸಂಜೀವಿನಿ ಮಹಾ ಮಂತ್ರ ಹವನ

ಯಾವುದೇ ವಿಧದ ಔಷಧ ಉಪಚಾರಗಳನ್ನು ಮಾಡಿದರೂ ಗುಣ ಆಗದೇ ವ್ಯಾಧಿಗಳು ಹಾಗೇ ಉಳಿದು ಅನಾರೋಗ್ಯ ಕಾಡುತ್ತ ಇದ್ದಾಗ, ವೈದ್ಯರು ತಮ್ಮ ಪ್ರಯತ್ನ ಮಾಡಿಯೂ ರೋಗ ನಿವಾರಣೆ ಆಗುತ್ತಿಲ್ಲ ಎಂದಾದಾಗ, ಅಪಘಾತ ಇತ್ಯಾದಿಗಳಲ್ಲಿ ಮೃತ್ಯು ಭಯದಿಂದ ಪಾರಾಗಲು ಇರುವ ಪ್ರಮುಖವಾದ ದೇವತಾ ಉಪಾಸನೆಯೇ ಈ ಎರಡು ಹವನಗಳು.

ಆಯಾ ಜಾತಕದ ಪ್ರಕಾರ ಇನ್ನೆರಡು ಹವನ ಪರಿಹಾರಗಳನ್ನು ಮಾಡಿಸಿದ ನಂತರ ಗುಣಮುಖರಾದವರು ಇದ್ದಾರೆ. ಆದರೆ ಈ ವಿಚಾರದಲ್ಲಿ ಸಹ ದೈವಾನುಗ್ರಹವೇ ಮುಖ್ಯ. ನಾವು ಕೇವಲ ಭಕ್ತಿಯಿಂದ ಶಾಸ್ತ್ರೋಕ್ತವಾಗಿ ಹವನ- ಪೂಜೆಗಳನ್ನು ಮಾಡಿಸಬಹುದು. ಆದರೆ ಫಲ ದೇವರ ಕೈಯಲ್ಲಿ ಅಷ್ಟೆ. ಇನ್ನು ಇಲ್ಲಿ ಗಮನಿಸ ಬೇಕಾದ ಅಂಶ ಎಂದರೆ, ಸಮಸ್ಯೆಗಳು ಇದ್ದಲ್ಲಿ ಈ ಮೇಲೆ ತಿಳಿಸಿದ ಹವನಗಳೆರಡನ್ನೂ ಒಂದೇ ಸಲ ಮಾಡಿಸಿದಾಗ ಮಾತ್ರ ವಿಶೇಷ ನಿರೀಕ್ಷಿತ ಫಲ ದೊರೆಯುತ್ತದೆ.

ಶ್ರೀ ಲಕ್ಷ್ಮೀನಾರಾಯಣ ಹೃದಯ ಪಾರಾಯಣ ಸಹಿತ ಹವನ

ಶ್ರೀ ಲಕ್ಷ್ಮೀನಾರಾಯಣ ಹೃದಯ ಪಾರಾಯಣ ಸಹಿತ ಹವನ

ಅಂಗಡಿ/ಮಳಿಗೆ/ಕಚೇರಿ ಇರುವ ಸ್ಥಳ ಮುಖ ಮಾಡಿರುವ ದಿಕ್ಕು ಇತ್ಯಾದಿ ವಾಸ್ತು ಕಾರಣಗಳಿಂದ ಹಿಡಿದು ವ್ಯಾಪಾರ ಮಾಡುವವರ ಜನ್ಮ ಜಾತಕದ ತನಕ ವ್ಯಾಪಾರದಲ್ಲಿ ಅಭಿವೃದ್ಧಿಗೆ ಸಮಸ್ಯೆಯಾಗಿ ಹತ್ತು ಹಲವು ಕಾರಣಗಳು ಇರುತ್ತವೆ. ಅವುಗಳನ್ನು ಶಾಸ್ತ್ರೋಕ್ತವಾದ ಪದ್ಧತಿಯಲ್ಲಿ ಪರೀಕ್ಷಿಸ ಬೇಕಾಗುತ್ತದೆ.

ವ್ಯಾಪಾರದಲ್ಲಿ ಲಾಭ ಆಗಬೇಕಾದಲ್ಲಿ ಲಕ್ಷ್ಮಿ ದೇವಿಯ ಸಾನ್ನಿಧ್ಯ ಬೇಕು. ಆ ಲಕ್ಷ್ಮೀ ದೇವಿಯ ಒಂದು ವಿಶೇಷ ಆರಾಧನೆ ಈ ಹವನ. ಈ ಪೂಜೆಯ ವಿಶೇಷ ಅಂದರೆ ಲಕ್ಷ್ಮೀ ನಾರಾಯಣ ಇಬ್ಬರನ್ನೂ ನಾವು ಪೂಜಿಸುವುದು. ಸಾಮಾನ್ಯವಾಗಿ ಎಲ್ಲರೂ ಲಕ್ಷ್ಮೀ ದೇವಿಯ ಪೂಜೆ ಮಾತ್ರ ಮಾಡುತ್ತಾರೆ.

ಆದರೆ, ಪುರಾಣಗಳ ಪ್ರಕಾರ ಹಾಗೆ ಮಾಡಬಾರದು. ತನ್ನ ಗಂಡನಾದ ನಾರಾಯಣನನ್ನು ಬಿಟ್ಟು ಕೇವಲ ತನ್ನನು ಮಾತ್ರ ಪೂಜಿಸಿದರೆ ಲಕ್ಷ್ಮೀ ದೇವಿಗೆ ಸಿಟ್ಟು ಬರುತ್ತದೆ ಎಂಬುದಕ್ಕೆ ಉಲ್ಲೇಖಗಳಿವೆ. ಆದುದರಿಂದ ಲಕ್ಷ್ಮೀ ದೇವಿಯ ಹೃದಯ ಸ್ತೋತ್ರ ಮಂತ್ರಗಳ ಜೊತೆ ನಾರಾಯಣ ಹೃದಯ ಸ್ತೋತ್ರ ಮಂತ್ರಗಳನ್ನು ಸೇರಿಸಿ ಮಾಡುವ ಹವನ ಈ ಶ್ರೀ ಲಕ್ಷ್ಮೀ ನಾರಾಯಣ ಹೃದಯ ಹವನ. ಈ ಹವನ ಮಾಡಿಸುವುದರಿಂದ ಆರ್ಥಿಕ ಬಾಧೆಗಳು ನಿವಾರಣೆ ಆಗಿ ವ್ಯಾಪಾರ ಅಭಿವೃದ್ಧಿ ಆಗುತ್ತದೆ ಎಂಬುದು ಶಾಸ್ತ್ರ ವಾಕ್ಯಗಳು.

ಅಘೋರ ಹವನ ಸಹಿತ ಕೃತ್ರಿಮ ಆಕರ್ಷಣ ಉಚ್ಚಾಟನೆ ಸಹಿತ ರಕ್ಷಾಕರ ಸುದರ್ಶನ ಹವನ

ಅಘೋರ ಹವನ ಸಹಿತ ಕೃತ್ರಿಮ ಆಕರ್ಷಣ ಉಚ್ಚಾಟನೆ ಸಹಿತ ರಕ್ಷಾಕರ ಸುದರ್ಶನ ಹವನ

ಶತ್ರುಗಳು ಯಾರಿಗೆ ತಾನೆ ಇರುವುದಿಲ್ಲ ಹೇಳಿ? ಸದ್ಯದ ಸಾಮಾಜಿಕ ಮನಸ್ಥಿತಿ, ಪರಿಸ್ಥಿತಿ ನೋಡಿದಾಗ ಅಜಾತ ಶತ್ರು ಆದವರು ತೀರಾ ವಿರಳ. ಇಲ್ಲಿ ಎರಡು ವಿಧದ ಸಮಸ್ಯೆ: ಒಂದು ನಮ್ಮ ಶತ್ರು ಯಾರು ಎನ್ನುವುದು ನಮಗೆ ತಿಳಿದಿರುವುದಿಲ್ಲ, ಇನ್ನೊಂದು ಒಂದು ಪಕ್ಷ ನಮಗೆ ಶತ್ರು ಯಾರು ಎಂದು ತಿಳಿದಿದ್ದರೂ ಅವರ ಮನಸ್ಸು ನಮ್ಮ ಹತೋಟಿಯಲ್ಲಿ ಇರದ ಕಾರಣ ನಮ್ಮ ಮೇಲೆ ಅವರು ಯಾವುದೇ ವಿಧದ ದುಷ್ಟ ಮಾಟ- ಮಂತ್ರ ಮಾಡಿದರೂ ಅದನ್ನು ತಡೆಯಲು ಆಗದು.

ಆದರೆ, ಅವರು ಮಾಡಿದ ತಂತ್ರ ನಮ್ಮ ಮೇಲೆ ಕೆಟ್ಟ ಪರಿಣಾಮ ಬೀರದಂತೆ ದಿಗ್ಬಂಧನ ಮಾಡಿಕೊಳ್ಳಬಹುದು. ಇನ್ನು ನಾವು ನಿತ್ಯ ಹಲವಾರು ಜಾಗಗಳಿಗೆ ಹೋಗಿ ಬರುತ್ತಾ ಇರುವುದರಿಂದ ಅಲ್ಲಿನ ಪರಿಶುದ್ಧತೆ ಬಗ್ಗೆ ತಿಳಿಯದು. ನಾವು ಅರಿಯದೇ ಕೆಟ್ಟ ಜಾಗಗಳಿಗೆ ಹೋದಲ್ಲಿ ಕೆಟ್ಟ ಶಕ್ತಿ ಆವರಿಸಬಹುದು. ಹಾಗೆ ಆದಲ್ಲಿ ಸಹ ನಮಗೆ ಸಮಸ್ಯೆ ಆಗುತ್ತದೆ.

ಆದರೆ, ಈ ಶತ್ರು ಬಾಧೆ ತನ್ಮೂಲಕ ಆಗುವ ಮಾಟ- ಮಂತ್ರ ಅಥವಾ ಭೂತ ಪ್ರೇತಾದಿ ಬಾಧೆಗಳು ಏನೇ ಇರಲಿ ಕೇರಳೀಯ ತಂತ್ರದಲ್ಲಿ ಕೃತ್ರಿಮ ಆಕರ್ಷಣೆ ಉಚ್ಚಾಟನೆ ಸಹಿತ ರಕ್ಷಾಕರ ಸುದರ್ಶನ ಹವನ ಹಾಗೂ ಅಘೋರ ರುದ್ರ ಹವನ, ಅಘೋರಾಸ್ತ್ರ ಹವನ ಇತ್ಯಾದಿಗಳನ್ನು ಶಾಸ್ತ್ರೋಕ್ತವಾಗಿ ಮಾಡಿಸಿದಲ್ಲಿ ಪರಿಹಾರ ಶತ ಸಿದ್ಧ. ಆದರೆ ಈ ಒಂದು ಕಾರ್ಯಕ್ರಮಾ ಮಾಡಿಸುವಾಗ ಗೌಪ್ಯತೆ ಬಹಳ ಮುಖ್ಯ. ಈ ಕಾರ್ಯಕ್ರಮ ಮಾಡಿಸುವುದಾಗಿ ನಿರ್ಧಾರ ಮಾಡಿದ ಮೇಲೆ ಮಾಡಿ ಮುಗಿಸುವ ತನಕ ಯಾರಿಗೂ ತಿಳಿಸಬಾರದು.

ರವಿ, ಶನಿ ಸಹಿತ ನಿಮ್ಮ ಜಾತಕದ ಪ್ರಕಾರ ಕರ್ಮಾಧಿಪತಿ ಗ್ರಹಕ್ಕೆ ಶಾಂತಿ ಹವನ

ರವಿ, ಶನಿ ಸಹಿತ ನಿಮ್ಮ ಜಾತಕದ ಪ್ರಕಾರ ಕರ್ಮಾಧಿಪತಿ ಗ್ರಹಕ್ಕೆ ಶಾಂತಿ ಹವನ

ಉದ್ಯೋಗ ಹುಡುಕುತ್ತಿರುವ ಕೆಲವರಿಗೆ ಗುರುಬಲ ಅಥವಾ ದಶಾ ಭುಕ್ತಿಯ ಫಲದಂತೆ ಉದ್ಯೋಗ ಲಭಿಸುವ ಯೋಗಗಳು, ಅನುಕೂಲಕರ ದಿನಗಳು ಎಂದು ಇರುತ್ತವೆ. ಆದರೆ ಅದು ಬರುವ ಸಮಯ ವ್ಯಕ್ತಿಯಿಂದ ವ್ಯಕ್ತಿಗೆ ಭಿನ್ನವಾದ ಕಾಲವಾಗಿರುತ್ತದೆ. ಅದಿಲ್ಲದೆ ನಾವು ಮಾಡುವ ಪ್ರಯತ್ನಗಳು ಸಾಮಾನ್ಯವಾಗಿ ನಿಷ್ಫಲ ಆಗುತ್ತವೆ.

ಇನ್ನು ಈಗಾಗಲೇ ಉದ್ಯೋಗದಲ್ಲಿ ಇರುವವರು ಬೇರೆ ಉದ್ಯೋಗ ಸಂಪಾದಿಸಲು ಪ್ರಸಕ್ತ ಇರುವ ಉದ್ಯೋಗಕ್ಕೆ ರಾಜೀನಾಮೆ ನೀಡುತ್ತಾರೆ. ಆದರೆ ಅವರ ಜಾತಕದ ಪ್ರಕಾರ ಹಾಗೆ ರಾಜೀನಾಮೆ ನೀಡಲು ಇದು ಸೂಕ್ತ ಸಮಯ ಹೌದೋ ಅಲ್ಲವೋ ಪರೀಕ್ಷಿಸ ಬೇಕಾಗುತ್ತದೆ.

ಪ್ರಸಕ್ತ ಇರುವ ಉದ್ಯೋಗದಲ್ಲಿಯೂ ನೆಮ್ಮದಿ ಇರಲು, ಬಡ್ತಿ ಸಿಗಲು ಅಥವಾ ಉದ್ಯೋಗ ನಿಮಿತ್ತ ವಿದೇಶ ಪ್ರಯಾಣಕ್ಕೆ ಜಾತಕ ಅನುಕೂಲ ಇರಬೇಕು. ಅದೆಲ್ಲ ಇಲ್ಲದಿದ್ದರೆ ಅಥವಾ ಸಮಸ್ಯೆಗಳು ಉದ್ಯೋಗದಲ್ಲಿ ಇದ್ದರೆ ಕಡ್ಡಾಯವಾಗಿ ತಕ್ಷಣ ರವಿ ಹಾಗೂ ಶನಿಶಾಂತಿ ಹವನ ಸಹಿತ ಜಾತಕದ ಪ್ರಕಾರ ಕರ್ಮಾಧಿಪತಿ ಯಾವ ಗ್ರಹ ಎಂದು ತಿಳಿದು, ಅದಕ್ಕೆ ಸರಿಯಾದ ಹವನ ಶಾಂತಿ ಮಾಡಿಸಬೇಕು.

ಶಾಸ್ತ್ರ ಅರಿತವರಿಂದಲೇ ಹವನ ಮಾಡಿಸಿ

ಶಾಸ್ತ್ರ ಅರಿತವರಿಂದಲೇ ಹವನ ಮಾಡಿಸಿ

ಇನ್ನು ಈ ಹವನ ಮಾಡಿಸುವಾಗ ಶ್ರದ್ಧೆ ಬಹಳ ಮುಖ್ಯ. ಎಲ್ಲವನ್ನೂ ಆರ್ಥಿಕ ದೃಷ್ಟಿಕೋನದಲ್ಲಿ ನೋಡಲು ಬರುವುದಿಲ್ಲ. ಹಾಗೆಂದು ಪ್ರಸಕ್ತ ಪ್ರಪಂಚದಲ್ಲಿ ಅದಿಲ್ಲದೇ ಜೀವನ ಇಲ್ಲ. ನೀವು ಬೆಂಗಳೂರು, ಕರ್ನಾಟಕ, ಭಾರತ ಅಥವಾ ವಿದೇಶ ಎಲ್ಲಿ ಇದ್ದರೂ ಸಹ ಕೇವಲ ನಿಮ್ಮ ಹೆಸರು (ತಿಳಿದಿದ್ದಲ್ಲಿ ನಿಮ್ಮ ಗೋತ್ರ ನಕ್ಷತ್ರ ರಾಶಿ) ಸಂಕಲ್ಪ ಮಾಡಿ, ನಿಮಗೆ ಇರುವ ಸಮಸ್ಯೆ ಪರಿಹಾರ ಆಗಲಿ ಎಂದು ಪ್ರಾರ್ಥಿಸಿ ಶಾಂತಿ, ಹವನ ಮಾಡಿಸಬಹುದು ಹಾಗೂ ಪ್ರಸಾದ ರೂಪದಲ್ಲಿ ಹವನದ ಭಸ್ಮ, ಹೂವು, ತುಳಸಿ, ಗಂಧ, ಬಿಲ್ವ ಪತ್ರೆ ಇತ್ಯಾದಿ ಪಡೆಯಬಹುದು.

ನೆನಪಿಡಿ, ಮೇಲೆ ತಿಳಿಸಿದ ಈ ಎಲ್ಲಾ ಹವನ ಪರಿಹಾರಗಳನ್ನು ಅದರ ಬಗ್ಗೆ ಸಂಪೂರ್ಣ ಮಾಹಿತಿ ಇರುವ ಪುರೋಹಿತರಿಂದಲೇ ಮಾಡಿಸುವುದು ಉತ್ತಮ. ಮೂಲ ಮಂತ್ರಗಳ ಉಪದೇಶ ಇಲ್ಲದವರಿಂದ ಹವನ ಮಾಡಿಸಿದರೆ ಫಲ ಸಿಗುವುದು ಕಷ್ಟ. ಹವನ ಮಾಡುವಾಗ ಯಾವ ತುಪ್ಪ ಬಳಸುತ್ತಿದ್ದಾರೆ ಎನ್ನುವುದರಿಂದ ಹಿಡಿದು ಎಲ್ಲಾ ಪದಾರ್ಥಗಳ ಗುಣ ಮಟ್ಟ ಉತ್ತಮ ಇರಬೇಕು ಹಾಗೂ ಅವುಗಳನ್ನೇ ಯಜ್ಞಕ್ಕೆ ಸಮರ್ಪಿಸಬೇಕು.

ನಾವು ಹೇಗೆ ಉತ್ತಮ ಗುಣ ಮಟ್ಟದ ಆಹಾರ ಸ್ವೀಕರಿಸುತ್ತೇವೆಯೋ ಭಗವಂತನಿಗೂ ಉತ್ತಮ ಗುಣಮಟ್ಟದ ಪದಾರ್ಥಗಳನ್ನು ಸಮರ್ಪಿಸಬೇಕು. ಹೀಗೆ ನೀವು ಪರಿಹಾರ ಮಾಡಿಸುವುದು ಎಷ್ಟು ಮುಖ್ಯವೋ, ಅದನ್ನು ಹೇಗೆ ಮಾಡಿಸುತ್ತಿದ್ದೀರಿ ಎನ್ನುವುದೂ ಅಷ್ಟೇ ಮುಖ್ಯ. ನಾನು ಒಬ್ಬ ಪುರೋಹಿತನಾಗಿ ನಿತ್ಯ ಹವನಗಳನ್ನು ಮಾಡಿಸುತ್ತಾ ಇರುತ್ತೇನೆ ಹಾಗೂ ಇತರೆಡೆ ಹೇಗೆ ಎನ್ನುವುದನ್ನು ಕಾಣುತ್ತಾ ಇರುತ್ತೇನೆ ಆದುದರಿಂದ ಇಷ್ಟೆಲ್ಲಾ ಹೇಳಬೇಕಾಯಿತು.

ಸಂಪರ್ಕಕ್ಕಾಗಿ: ವಿಠ್ಠಲ ಭಟ್ಟರು ಕೆಕ್ಕಾರು, ಮೊಬೈಲ್ ಫೋನ್ ಸಂಖ್ಯೆ 9845682380.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Astrologers suggests pooja's and homa's as remedies for various problems. But people should know the procedure of those homa's and pooja's. At least they should consult expert priest. Here is the guidance by Oneindia Kannada astrologer Pandit Vittala Bhat.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more