• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕನ್ಯಾ ರಾಶಿಯವರಿಗೆ ಮೌನವೇ ಆಭರಣ, ಎಲ್ಲ ಸಮಸ್ಯೆಯಿಂದ ತಪ್ಪಿಸಿಕೊಳ್ರಣ್ಣ

By ಶಂಕರ್ ಭಟ್
|
Google Oneindia Kannada News

ಕನ್ಯಾ ರಾಶಿಯವರಿಗೆ ಗುರು ಬದಲಾವಣೆ ನಂತರ ಹೇಗೆ ಇನ್ನೊಂದು ವರ್ಷದ ಭವಿಷ್ಯ ಎಂದು ತಿಳಿಸುವ ಲೇಖನ ಇದು. ಈ ವರೆಗೆ ಎರಡನೇ ಮನೆಯಲ್ಲಿ ಗುರು ಇತ್ತು. ಅಂದರೆ ತುಲಾ ರಾಶಿಯಲ್ಲಿ ಇದ್ದ ಗುರು ಗ್ರಹ ಮೂರನೇ ಸ್ಥಾನವಾದ ವೃಶ್ಚಿಕಕ್ಕೆ ಪ್ರವೇಶ ಮಾಡಿದೆ. ಇನ್ನು ಶನಿ ಧನು ರಾಶಿಯಲ್ಲಿ, ನಾಲ್ಕನೇ ಮನೆಯಲ್ಲಿ ಬಹಳ ಕಾಲದಿಂದಲೂ ಇದೆ.

ಕನ್ಯಾ ರಾಶಿಯವರ ಮೂಲ ಸ್ವಭಾವಕ್ಕೆ ಒಪ್ಪದ ಸನ್ನಿವೇಶವನ್ನು ಎದುರಿಸಲೇ ಬೇಕಾಗುತ್ತದೆ. ಇವರು ಬಹಳ ಯೋಚನೆ ಮಾಡುವಂಥ, ಸದಾ ಒಂದಿಲ್ಲೊಂದು ಆದಾಯದ ದಾರಿ ಹುಡುಕಿಕೊಳ್ಳುವಂಥ ಮಂದಿ ಇವರು. ಎಲ್ಲಾದರೂ ಸಮಯ ಕಳೆಯಲೇಬೇಕಾದರೂ ಅದರಿಂದ ಏನಾದರೂ ಅದು ಆರ್ಥಿಕವಾದರೂ ಸರಿ, ಮಾನಸಿಕವಾದರೂ ಸರಿ ಒಂದಿಷ್ಟು ಲಾಭ ಆಗಬೇಕು ಎಂದು ಯೋಚಿಸುತ್ತಾರೆ.

ಆದರೆ, ಈಗಿನ ಗ್ರಹಗತಿ ಏನಾಗಿದೆ ಅಂದರೆ ಯಾವ ಕೆಲಸ ಕೂಡ ಒಂದು ಸಲಕ್ಕೆ ಪೂರ್ಣಗೊಳ್ಳುವುದಿಲ್ಲ. ಯಾವಾಗಲೋ ಆಡಿದ ಮಾತನ್ನು ಈಗ ನೆನಪಿಸಿಕೊಂಡು, ಒಬ್ಬೊಬ್ಬರಾಗಿ ಕೈ ಕೊಡಲು ಆರಂಭಿಸುತ್ತಾರೆ. ತೋಳ ಹಳ್ಳಕ್ಕೆ ಬಿದ್ದರೆ ಆಳಿಗೊಂದು ಕಲ್ಲು ಎಂಬ ಮಾತಿದೆಯಲ್ಲಾ ಹಾಗೆ ಆಗಲಿದೆ ನಿಮ್ಮ ಪರಿಸ್ಥಿತಿ.

ವೈದ್ಯಕೀಯ ಖರ್ಚುಗಳು ಹೆಚ್ಚಾಗುತ್ತವೆ

ವೈದ್ಯಕೀಯ ಖರ್ಚುಗಳು ಹೆಚ್ಚಾಗುತ್ತವೆ

ನಿಮ್ಮ ಶತ್ರುಗಳು, ಏಳ್ಗೆ ಕಂಡು ಕರುಬುವಂಥವರು ಒಟ್ಟಾಗಿ ನಿಮ್ಮನ್ನು ಹಣಿದು ಹಾಕಲು ಯತ್ನಿಸುತ್ತಾರೆ. ಎಂದೋ ನೀವಾಡಿದ ಮಾತನ್ನು ಈಗ ನಿಮ್ಮ ವಿರುದ್ಧವೇ ತಿರುಗಿಸುತ್ತಾರೆ. ಮಕ್ಕಳ ಆರೋಗ್ಯದ ವಿಚಾರದಲ್ಲಿ ಬಹಳ ಎಚ್ಚರಿಕೆಯಿಂದ ಇರಬೇಕಾದ ಸಮಯ ಇದು. ಸೋಂಕು, ಚರ್ಮಕ್ಕೆ ಸಂಬಂಧಿಸಿದ ಅನಾರೋಗ್ಯ ಸಮಸ್ಯೆಗಳು ಕಾಣಿಸಿಕೊಂಡು, ವೈದ್ಯಕೀಯ ಖರ್ಚುಗಳು ಹೆಚ್ಚಾಗುತ್ತವೆ. ಇನ್ನು ಸ್ವತಃ ನಿಮಗೆ ಅಸಿಡಿಟಿ, ಅಜೀರ್ಣ, ರಕ್ತದೊತ್ತಡದಂಥ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ಮೈಗ್ರೇನ್ ಇರುವಂಥವರು ಸೂಕ್ತ ಔಷಧೋಪಚಾರ ಮಾಡಿಕೊಳ್ಳಿ.

ಸೋದರ ಸಂಬಂಧಿಗಳ ಜತೆ ಮನಸ್ತಾಪ

ಸೋದರ ಸಂಬಂಧಿಗಳ ಜತೆ ಮನಸ್ತಾಪ

ಸೋದರ-ಸೋದರಿ, ಸೋದರ ಸಂಬಂಧಿಗಳ ಜತೆ ಜಗಳ ಅಥವಾ ಮನಸ್ತಾಪ ಆಗುವ ಸಾಧ್ಯತೆಗಳಿವೆ. ಹಣಕಾಸಿನ ವಿಚಾರದಲ್ಲಿ ಕೊಟ್ಟ ಮಾತನ್ನು ಉಳಿಸಿಕೊಳ್ಳಲಾಗದೆ, ನಿಮ್ಮ ಪರಿಸ್ಥಿತಿಯನ್ನು ಅವರು ಅರ್ಥ ಮಾಡಿಕೊಳ್ಳದೆ ಕೆಲ ಮಟ್ಟಿಗೆ ಗೊಂದಲದ ವಾತಾವರಣ ಸೃಷ್ಟಿ ಆಗುತ್ತದೆ. ಈ ಸಮಯದಲ್ಲಿ ಮುಖ್ಯವಾಗಿ ನಿಮ್ಮ ಆರ್ಥಿಕ ಶಿಸ್ತು ಕೈ ಕೊಟ್ಟಿರುವುದು ಹೌದು. ಈಗಷ್ಟೇ ಗುರು ಬಲ ಹೋಗಿರುವುದರಿಂದ ಇನ್ನು ಎರಡು ವರ್ಷ ಯಾವುದೇ ದೊಡ್ಡ ಸಾಲ ತೆಗೆದುಕೊಳ್ಳುವುದು, ವ್ಯಾಪಾರ ಆರಂಭಿಸುವುದು ಮಾಡಬೇಡಿ. ಸವಿಯಾದ ಮಾತನ್ನಾಡಿ, ಆ ನಂತರ ದೊಡ್ಡ ಮಟ್ಟದ ಹಣ ಹೂಡಿಕೆ ಮಾಡಿ, ದಾರಿ ತಪ್ಪಿಸುವವರ ಬಗ್ಗೆ ಎಚ್ಚರ ಇರಲಿ.

ಮಾತಿನ ಮೇಲೆ ಹಿಡಿತ ಇರಲಿ

ಮಾತಿನ ಮೇಲೆ ಹಿಡಿತ ಇರಲಿ

ಇನ್ನು ನಾಲ್ಕನೇ ಸ್ಥಾನದಲ್ಲಿರುವ ಶನಿ ನಿಮ್ಮ ಮಾತಿಗೆ ಅಹಂಕಾರದ ಧ್ವನಿಯೊಂದನ್ನು ನೀಡುತ್ತದೆ. ಹೇಳಬೇಕಾದ ವಿಚಾರದಲ್ಲಿ ಸ್ಪಷ್ಟತೆ ಇದ್ದರೂ ನಿಮ್ಮ ಬಗ್ಗೆ ದುರಭಿಪ್ರಾಯ ಮೂಡುತ್ತದೆ. ಭೂ ವ್ಯವಹಾರಗಳನ್ನು ಕೆಲ ಕಾಲ ಕೈಗೆತ್ತಿಕೊಳ್ಳದಿರಿ. ಎಂಥ ಆಕರ್ಷಕ ಅವಕಾಶ ಬಂದರೂ ಸಾಲ-ಸೋಲ ಮಾಡಿ, ಉಳಿತಾಯದ ಹಣಕ್ಕೆ ಕೈಯಿಡಬೇಡಿ. ಎಲ್ಲವೂ ಕೆಟ್ಟ ಫಲಗಳೇ ಎಂದು ಬೇಸರ ಪಟ್ಟುಕೊಳ್ಳುವ ಅಗತ್ಯವಿಲ್ಲ. ಅನಿರೀಕ್ಷಿತವಾಗಿ ಕೆಲವು ಧನಾಗಮ ಆಗುತ್ತದೆ. ಆದರೆ ಅದನ್ನು ಉಳಿತಾಯ ಮಾಡುವುದಕ್ಕೆ ನಿಮ್ಮಿಂದ ಸಾಧ್ಯವಾಗುವುದಿಲ್ಲ. ಅದರಲ್ಲೂ ಅದೃಷ್ಟ ಪರೀಕ್ಷೆ ಮಾಡುವಂಥ ವ್ಯವಹಾರವೊಂದು ಕೈ ಹಿಡಿಯುತ್ತದೆ. ಆದರೆ ನೀವು ಅದರ ಬೆನ್ನಟ್ಟಬೇಡಿ.

ಹೂಡಿಕೆ ಮಾಡದಿರುವುದು ಉತ್ತಮ

ಹೂಡಿಕೆ ಮಾಡದಿರುವುದು ಉತ್ತಮ

ವಿದ್ಯಾರ್ಥಿಗಳಿಗೆ ಓದಿನಲ್ಲಿ ಆಸಕ್ತಿ ಕಡಿಮೆ ಆಗುತ್ತದೆ. ಇದೆಂಥ ಶಿಕ್ಷಣ ಸಂಸ್ಥೆಯನ್ನು ಆರಿಸಿಕೊಂಡೆ, ಈ ಕೋರ್ಸ್ ನನಗಲ್ಲ ಎಂದೆಲ್ಲ ಅನಿಸುತ್ತದೆ. ಅದಕ್ಕೆ ತಕ್ಕಂತೆ ಸಲಹೆ ಕೊಡುವ ಸ್ನೇಹಿತರ ಈ ಸಮಯಕ್ಕೆ ಜತೆಯಾಗುತ್ತಾರೆ. ನೆನಪಿಡಿ, ಈಗ ಸ್ವಲ್ಪ ಮೈ ಮರೆತರೂ ನಿಮ್ಮ ಜೀವನದ ನಾಲ್ಕೈದು ವರ್ಷ ವ್ಯರ್ಥ ಆಗುತ್ತದೆ. ಅಪ್ಪ-ಅಮ್ಮ ಹೇಳುವ ಮಾತನ್ನು ಕೇಳಿ. ಹಿರಿಯರ ಮಾರ್ಗದರ್ಶನದಂತೆ ನಡೆದುಕೊಳ್ಳಿ. ಷೇರು ಮಾರುಕಟ್ಟೆಯಲ್ಲಿ ಹಣ ಹೂಡಿಕೆ ಮಾಡಿದಂಥವರು ನಗದು ಒಟ್ಟು ಮಾಡಿಕೊಂಡು, ಬ್ಯಾಂಕ್ ನಲ್ಲಿ ಹಾಕಿಟ್ಟುಕೊಳ್ಳುವುದು ಉತ್ತಮ. ಮತ್ತೆ ನಿಮ್ಮ ಅದೃಷ್ಟದ ಕಾಲ ಬಂದಾಗ ಹೂಡಿಕೆ ಮಾಡಬಹುದು.

ಗುರು ಹಾಗೂ ಶನಿಯ ಆರಾಧನೆ

ಗುರು ಹಾಗೂ ಶನಿಯ ಆರಾಧನೆ

ಗುರು ಹಾಗೂ ಶನಿಯ ಆರಾಧನೆ ಮಾಡುವುದು ಈ ಸಂದರ್ಭದಲ್ಲಿ ಬಹಳ ಮುಖ್ಯ. ನನಗೆ ಎಲ್ಲ ಗೊತ್ತಿದೆ ಎಂಬ ಧೋರಣೆ ಅಪಾಯಕಾರಿ ಆಗಿ ಪರಿಣಮಿಸುತ್ತದೆ. ಆಸ್ತಿ ವ್ಯಾಜ್ಯಗಳು ಇದ್ದಲ್ಲಿ ಮಾತುಕತೆ ಮೂಲಕವೇ ಬಗೆಹರಿಸಿಕೊಳ್ಳಿ. ಯಾವ ಕಾರಣಕ್ಕೂ ಕೋರ್ಟ್-ಕಚೇರಿಗೆ ಹೋಗಬೇಡಿ. ಈಗಾಗಲೇ ವ್ಯಾಜ್ಯ ನಡೆಯುತ್ತಿದೆ ಎಂದಾದಲ್ಲಿ ಸಂಧಾನದ ಮೂಲಕ ಬಗೆಹರಿಸಿಕೊಳ್ಳಲು ಪ್ರಯತ್ನಿಸಿ. ನಿಮಗೆ ಸ್ವಲ್ಪ ನಷ್ಟ ಆಗುವಂತೆ ಕಂಡುಬಂದರೂ ಹಟ ಹಿಡಿಯದೆ ರಾಜಿ ಮಾಡಿಕೊಳ್ಳುವುದು ಉತ್ತಮ. ಸ್ನೇಹಿತರ ಸಂಸ್ಥೆ, ಪರಿಚಯಸ್ಥರು ಕೆಲಸ ಮಾಡುವ ಕಂಪನಿ ಎಂಬ ಏಕೈಕ ಕಾರಣಕ್ಕೆ ಕೆಲಸ ಬದಲಿಸುವ ತೀರ್ಮಾನ ಕೈಗೊಳ್ಳಬೇಡಿ. ನಿಮ್ಮ ಹಿರಿಯ ಅಧಿಕಾರಿಗಳ ಜತೆಗೆ ವಾಗ್ವಾದ ಮಾಡಿಕೊಳ್ಳಬೇಡಿ.

English summary
Jupiter entered Scorpio on October 11th. How Jupiter and Saturn will impact on Virgo moon sign? Here is the complete analysis according to vedic astrology.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X