ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಶ್ವಿನಿಯಿಂದ ಚಿತ್ತಾ ನಕ್ಷತ್ರದವರೆಗೆ ಜ್ಯೋತಿಷ್ಯ ರೀತ್ಯಾ ಗುಣ- ಸ್ವಭಾವ

By ಶಂಕರ್ ಭಟ್
|
Google Oneindia Kannada News

Recommended Video

ಜ್ಯೋತಿಷ್ಯ ರೀತ್ಯಾ ಜನ್ಮ ನಕ್ಷತ್ರ ಹಾಗು ಅದರ ಗುಣ ಸ್ವಭಾವಗಳು | Oneindia Kannada

ಜ್ಯೋತಿಷ್ಯ ಪ್ರಕಾರ ಹನ್ನೆರಡು ರಾಶಿಗಳಿವೆ. ಇನ್ನು ಹನ್ನೆರಡು ರಾಶಿಗಳಿಗೆ ಇಪ್ಪತ್ತೇಳು ನಕ್ಷತ್ರ. ಆ ಇಪ್ಪತ್ತೇಳು ನಕ್ಷತ್ರದ ನಾಲ್ಕು ಪಾದಗಳು ಸೇರಿ ನೂರಾ ಎಂಟು ಪಾದಗಳಾಗುತ್ತವೆ. ಅವನ್ನು ಹನ್ನೆರಡು ರಾಶಿಗಳಿಂದ ಭಾಗಿಸಿದರೆ ಪ್ರತಿ ರಾಶಿಗೆ ಒಂಬತ್ತು ಪಾದ ಹಾಗೂ ಮೂರು ನಕ್ಷತ್ರಗಳು ಬರುತ್ತವೆ.

ಹೇಗೆ ರಾಶಿಯ ಆಧಾರದಲ್ಲಿ ಭವಿಷ್ಯವನ್ನು ಹೇಳಬಹುದೋ ಅದೇ ರೀತಿ ಯಾವ ನಕ್ಷತ್ರ ಎಂಬುದರ ಆಧಾರದಲ್ಲಿ ವ್ಯಕ್ತಿಯ ಗುಣ- ಸ್ವಭಾವಗಳನ್ನು ಹೇಳಬಹುದು. ಇಂದಿನ ಲೇಖನದಲ್ಲಿ ಆರು ರಾಶಿಗಳ ಹಾಗೂ ಆ ರಾಶಿಗಳ ವ್ಯಾಪ್ತಿಯ ನಕ್ಷತ್ರಗಳ ಗುಣ-ಸ್ವಭಾವ, ಆ ನಕ್ಷತ್ರಗಳಿಗೆ ಕಾಣಿಸಿಕೊಳ್ಳಬಹುದಾದ ಆರೋಗ್ಯ ಸಮಸ್ಯೆ ಇತ್ಯಾದಿ ವಿಚಾರಗಳನ್ನು ತಿಳಿಸಲಾಗಿದೆ.

ಚುನಾವಣೆ ವರ್ಷದಲ್ಲಿ ಯಾವ ರಾಶಿಯ ರಾಜಕಾರಣಿಗೆ ಯಾವ ಫಲ?ಚುನಾವಣೆ ವರ್ಷದಲ್ಲಿ ಯಾವ ರಾಶಿಯ ರಾಜಕಾರಣಿಗೆ ಯಾವ ಫಲ?

ಅಶ್ವಿನಿಯಿಂದ ಆರಂಭವಾಗಿದ್ದು, ಮೇಷ-ವೃಷಭ- ಮಿಥುನ- ಕರ್ಕಾಟಕ- ಸಿಂಹ- ಕನ್ಯಾ ಹಾಗೂ ತುಲಾ ರಾಶಿಗೆ ಸೇರುವ ಒಂದು ನಕ್ಷತ್ರದವರೆಗೆ ಮಾಹಿತಿ ನೀಡಲಾಗಿದೆ. ಇದು ಸ್ಥೂಲ ಸ್ವರೂಪದಲ್ಲಿ ತಿಳಿಸಿರುವ ಗುಣ ಹಾಗೂ ಸ್ವಭಾವ. ಇದರಲ್ಲಿ ರಾಶಿಯ ಅಧಿಪತಿ, ಲಗ್ನ ಕುಂಡಲಿ, ಲಗ್ನಾಧಿಪತಿ ಇನ್ನೂ ಅನೇಕ ವಿಚಾರಗಳು ಪ್ರಭಾವ ಬೀರುತ್ತವೆ. ಆದರೆ ನಕ್ಷತ್ರ ಆಧಾರಿತ ಗುಣ-ಸ್ವಭಾವ ತೆಗೆದು ಹಾಕುವಂತಿರುವುದಿಲ್ಲ.

ಅಶ್ವಿನಿ ನಕ್ಷತ್ರ

ಅಶ್ವಿನಿ ನಕ್ಷತ್ರ

ಇಪ್ಪತ್ತೇಳು ನಕ್ಷತ್ರಗಳ ಪೈಕಿ ಮೊದಲನೆಯದು ಅಶ್ವಿನಿ ನಕ್ಷತ್ರ. ಇದಕ್ಕೆ ಕೇತು ಅಧಿಪತಿ. ಇನ್ನು ರವಿಯು ಈ ನಕ್ಷತ್ರದಲ್ಲಿ ಪರಮೋಚ್ಚನಾಗಿರುತ್ತಾನೆ. ಇನ್ನು ಈ ನಕ್ಷತ್ರಕ್ಕೆ ರಾಶಿಯಾದ ಮೇಷಕ್ಕೆ ಕುಜನು ಅಧಿಪತಿ. ಅಶ್ವಿನಿ ನಕ್ಷತ್ರದವರು ಇತರರಿಗೆ ಸೇವೆ ಮಾಡಲು ಬಯಸುತ್ತಾರೆ. ವಿನಯವಂತಿಕೆ ಇವರ ಸ್ವಭಾವದಲ್ಲೇ ಇರುತ್ತದೆ. ಸತ್ಯವಂತಿಕೆ ಹಾಗೂ ಕುಟುಂಬವತ್ಸಲರು.

ಈ ನಕ್ಷತ್ರದವರು ಮಹಾನ್ ಚುರುಕು. ಮನೆಯನ್ನು ತುಂಬ ಸ್ವಚ್ಛವಾಗಿಟ್ಟುಕೊಳ್ಳುವುದರಲ್ಲೇ ಸಮಯ ಹೆಚ್ಚು ಕಳೆಯುತ್ತಾರೆ. ಒಂದಿಲ್ಲೊಂದು ಚಟುವಟಿಕೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿರುತ್ತಾರೆ. ಸಂಚಾರಕ್ಕೆ ಸಂಬಂಧಪಟ್ಟ ವಿಚಾರಗಳನ್ನು ನಿಯಂತ್ರಿಸುವ ನಕ್ಷತ್ರವಿದು. ತುಂಬ ಬುದ್ಧಿವಂತರಾದ ಇವರು ಓದಿಕೊಂಡೂ ಇರುತ್ತಾರೆ. ಆ ಕಾರಣಕ್ಕೆ ಅಗಾಧವಾದ ಬುದ್ಧಿಮತ್ತೆ ಇರುತ್ತದೆ.

ಧಾರ್ಮಿಕ ನಂಬಿಕೆ, ತ್ಯಾಗದ ಬುದ್ಧಿ, ಮಹತ್ವಾಕಾಂಕ್ಷೆ, ಸಾಮಾಜಿಕ ಜೀವನದಲ್ಲಿ ಹೆಚ್ಚು ಪಾಲ್ಗೊಳ್ಳುವ ಸ್ವಭಾವ ಈ ನಕ್ಷತ್ರದವರಲ್ಲಿ ಕಾಣಬಹುದು.

ಭರಣಿ ನಕ್ಷತ್ರ

ಭರಣಿ ನಕ್ಷತ್ರ

ಭರಣಿ ನಕ್ಷತ್ರದ ಅಧಿಪತಿ ಯಮ. ಈ ನಕ್ಷತ್ರದ ಶಕ್ತಿಯನ್ನು ಉಗ್ರ ಅಥವಾ ಕ್ರೂರ ಅಂತ ಕರೆಯಲಾಗುತ್ತದೆ. ಈ ನಕ್ಷತ್ರವೂ ಮೇಷ ರಾಶಿಯೇ ಆದರೂ ಶಕ್ರನ ಆಧಿಪತ್ಯಕ್ಕೆ ಒಳಪಡುತ್ತದೆ. ಶಿಸ್ತು, ಸ್ವ ನಿಯಂತ್ರಣ, ಸ್ಥಿರತೆ ಮುಂತಾದವನ್ನು ಸೂಚಿಸುತ್ತದೆ. ಈ ನಕ್ಷತ್ರದಲ್ಲಿ ಜನಿಸಿದವರಿಗೆ ಆಗಿಂದಾಗ್ಗೆ ಮನಸ್ಸಿನಲ್ಲಿ ಕ್ರೂರ ಆಲೋಚನೆಗಳು ಬರುತ್ತವೆ.

ಯಾರಿಗಾದರೂ ಋಣಪಟ್ಟಿರುವ ಗುಣ ಇವರಿಗಿರುವುದಿಲ್ಲ. ಸ್ವಲ್ಪ ಮಟ್ಟಿಗೆ ಕೆಟ್ಟ ಹೆಸರು ಪಡೆಯುತ್ತಾರೆ. ನೀರಿಗೆ ಹೆದರುತ್ತಾರೆ. ತಮ್ಮ ಅಭಿಪ್ರಾಯವನ್ನು ನೇರಾನೇರ ಹೇಳುತ್ತಾರೆ. ಬೇರೆಯವರನ್ನು ಮೆಚ್ಚಿಸುವ ಸಲುವಾಗಿ ತಮ್ಮ ಅಭಿಪ್ರಾಯವನ್ನು ಬದಲಾಯಿಸುವ ಪೈಕಿ ಇವರಲ್ಲ. ಇವರಿಗೆ ಗೊತ್ತಿದ್ದೋ ಗೊತ್ತಿಲ್ಲದೆಯೋ ಗಾಸಿಪ್ ಹಬ್ಬಲು ಕಾರಣರಾಗುತ್ತಾರೆ.

ಈ ನಕ್ಷತ್ರದಲ್ಲಿ ಹುಟ್ಟಿದ ಹೆಣ್ಣುಮಕ್ಕಳು ತಮ್ಮ ಉದ್ಯೋಗ ಹಾಗೂ ವೃತ್ತಿ ಬಗ್ಗೆ ಹೆಚ್ಚು ಗಮನ ಕೇಂದ್ರೀಕರಿಸುತ್ತಾರೆ. ಒಂದು ಗುಂಪಿನ ಮುಖಂಡರಂತೆ ಇರುತ್ತಾರೆ. ಆಕರ್ಷಣಾ ಶಕ್ತಿ, ಬದಲಾಗುವ ಮನಸ್ಥಿತಿ, ವ್ಯಾವಹಾರಿಕ ಆಲೋಚನೆ, ಪ್ರಭಾವ, ಉನ್ನತ ಸ್ಥಾನ ಇವೆಲ್ಲವನ್ನೂ ಭರಣಿ ನಕ್ಷತ್ರದವರು ಪ್ರತಿನಿಧಿಸುತ್ತಾರೆ.

ಕೃತ್ತಿಕಾ ನಕ್ಷತ್ರ

ಕೃತ್ತಿಕಾ ನಕ್ಷತ್ರ

ಕೃತ್ತಿಕಾ ನಕ್ಷತ್ರಕ್ಕೆ ಅಗ್ನಿ ಅಧಿಪತಿ. ಈ ನಕ್ಷತ್ರದ ಒಂದು ಪಾದ ಮೇಷಕ್ಕೂ ಇನ್ನು ಮೂರು ಪಾದ ವೃಷಭಕ್ಕೂ ಹೋಗುತ್ತದೆ. ನಕಾರಾತ್ಮಕವನ್ನು ದಹಿಸುವ ನಕ್ಷತ್ರವಿದು. ಯುದ್ಧ, ಕದನ ಮತ್ತು ವ್ಯಾಜ್ಯಗಳನ್ನು ಕೃತ್ತಿಕಾ ನಕ್ಷತ್ರ ಪ್ರತಿನಿಧಿಸುತ್ತದೆ. ಯಾವುದೇ ವ್ಯಕ್ತಿಯಲ್ಲಿನ ಲೋಪ-ದೋಷ ಹಾಗೂ ತಪ್ಪುಗಳನ್ನು ದಹಿಸಿ, ಶುದ್ಧತೆಯನ್ನು ಕೊಡುವ- ಪ್ರತಿನಿಧಿಸುವ ನಕ್ಷತ್ರ ಇದು.

ಬೇರೆಯವರನ್ನು ಟೀಕೆ ಮಾಡುವುದರಲ್ಲಿ, ಕಾಲೆಳೆಯುವುದರಲ್ಲಿ, ತಮಾಷೆ ಮಾಡುವುದರಲ್ಲಿ ಇವರು ಎತ್ತಿದ ಕೈ. ಸಿಟ್ಟಿನ ಸ್ವಭಾವದ ಇವರಿಗೆ ಸ್ನೇಹಿತರು- ಬಂಧುಗಳೆಂಬ ಭೇದವಿಲ್ಲದೆ ಎಲ್ಲರ ಬಳಿ ಜಗಳ ಆಡುತ್ತಾರೆ. ಮಸಾಲೆ ಪದಾರ್ಥಗಳೆಂದರೆ ಅಚ್ಚುಮೆಚ್ಚಾಗಿರುತ್ತದೆ. ಸದಾ ಚಿಂತಿತರಾದಂತೆ ಕಾಣುವ ಇವರಿಗೆ ಕೀರ್ತಿಯೂ ಅಪಾರ ಪ್ರಮಾಣದಲ್ಲಿ ಸಿಗುತ್ತದೆ.

ಇವರ ಊಹಾತ್ಮಕ ಶಕ್ತಿ ಹೆಚ್ಚು. ದೊಡ್ಡ ದೊಡ್ಡ ಕಾರ್ಯಗಳನ್ನು ಮಾಡಲು ಬಯಸುತ್ತಾರೆ. ತಾರ್ಕಿಕ ಆಲೋಚನೆ, ಅನುಮಾನದ ಬುದ್ಧಿ, ಅಸಮತೋಲನ ಅದೃಷ್ಟ, ಉತ್ಸಾಹ, ಧೈರ್ಯವಂತಿಕೆ ಇವೆಲ್ಲ ಈ ನಕ್ಷತ್ರದ ಸ್ವಭಾವ.

ರೋಹಿಣಿ ನಕ್ಷತ್ರ

ರೋಹಿಣಿ ನಕ್ಷತ್ರ

ರೋಹಿಣಿ ನಕ್ಷತ್ರದ ಅಧಿಪತಿ ಸೃಷ್ಟಿಕರ್ತ ಪ್ರಜಾಪತಿ. ಚಂದ್ರನ ಪ್ರಭಾವ ಇರುವ ನಕ್ಷತ್ರ. ಈ ನಕ್ಷತ್ರದವರ ಕಣ್ಣುಗಳು ಆಕರ್ಷಣೀಯವಾಗಿರುತ್ತದೆ. ಇವರು ಧಾರ್ಮಿಕ ಕಾರ್ಯಗಳಲ್ಲಿ ಆಸಕ್ತರು. ಕೃಷಿ ಚಟುವಟಿಕೆಯಿಂದ ಜೀವನ ನಡೆಸುವಂಥವರು. ಉತ್ತಮ ಸಂಧಾನಕಾರರು ಆಗಬಲ್ಲರು. ಕಲೆಯಲ್ಲಿ ಪ್ರತಿಭಾವಂತರು ಹಾಗೂ ಶ್ರಮ ಜೀವಿಗಳಾಗಿರುತ್ತಾರೆ.

ವಾಸ್ತವವಾದಿಗಳು. ಆದರೆ ಗುಫಿನಲ್ಲಿ ಅಥವಾ ತಂಡದಲ್ಲಿ ಕೆಲಸ ಮಾಡುವಾಗ ತಾವು ಹೇಳಿದ್ದೇ ಆಗಬೇಕು ಎಂದು ಹಠ ಹಿಡಿಯಬಾರದು. ಬೇರೆಯವರ ತಪ್ಪನ್ನು ಹುಡುಕುವುದರಲ್ಲಿ, ಆ ಬಗ್ಗೆ ಮಾತನಾಡುವುದರಲ್ಲಿ ವಿಪರೀತ ಆಸಕ್ತಿ ಇರುತ್ತದೆ. ಈ ನಕ್ಷತ್ರದ ಹೆಣ್ಣುಮಕ್ಕಳಿಗೆ ತಮ್ಮ ಶ್ರೀಮಂತಿಕೆಯನ್ನು ತೋರಿಸಿಕೊಳ್ಳುವ ಇಚ್ಛೆ ಹೆಚ್ಚಿರುತ್ತದೆ. ತಮ್ಮ ಕೋಪದಿಂದ ಸಮಸ್ಯೆಗಳನ್ನು ಆಹ್ವಾನಿಸುತ್ತಾರೆ.

ಈ ರಾಶಿಯ ಪುರುಷರ ಕಣ್ಣುಗಳು ಆಕರ್ಷಣೆ ಮಾಡುವಂತೆ ಇರುತ್ತವೆ. ಅಧ್ಯಯನಶೀಲರು, ಪ್ರಭಾವಿಗಳು, ಸದಾ ಪ್ರಯಾಣ ಬಯಸುವವರು, ಕಲಾ ಮನಸ್ಸಿನವರು, ವ್ಯವಹಾರ ಲೆಕ್ಕಾಚಾರದವರು, ಆಧ್ಯಾತ್ಮಿಕ ಆಲೋಚನೆ ಮತ್ತು ತಮ್ಮ ಮನಸ್ಸನ್ನು ಪದೇ ಪದೇ ಬದಲಿಸುವವರಾಗಿರುತ್ತಾರೆ.

ಮೃಗಶಿರಾ ನಕ್ಷತ್ರ

ಮೃಗಶಿರಾ ನಕ್ಷತ್ರ

ಈ ನಕ್ಷತ್ರಕ್ಕೆ ಸೋಮ ಅಧಿಪತಿ. ಮೃಗಶಿರಾ ನಕ್ಷತ್ರದ ಎರಡು ಪಾದ ವೃಷಭ ಹಾಗೂ ಇನ್ನೆರಡು ಪಾದ ಮಿಥುನ ಆಗುತ್ತದೆ. ಈ ನಕ್ಷತ್ರದಲ್ಲಿ ಹುಟ್ಟಿದವರಿಗೆ ದೃಢವಾದ ದೇಹ, ಸಾಧಾರಣ ಬಣ್ಣ ಇರುತ್ತದೆ. ಬೇರೆಯವರ ವಿಚಾರದಲ್ಲಿ ಪ್ರಾಮಾಣಿಕರಾಗಿರುತ್ತಾರೆ. ಇತರರಿಂದಲೂ ಅದೇ ಗುಣವನ್ನು ನಿರೀಕ್ಷೆ ಮಾಡುತ್ತಾರೆ.

ಇವರಿಗೆ ಯಾವುದೇ ವಿಚಾರವನ್ನು ಬೇಗ ಗ್ರಹಿಸುವ ಸಾಮರ್ಥ್ಯ ಇರುತ್ತದೆ. ಹೊಸ ವಿಚಾರಗಳನ್ನು ಬೇಗ ಕಲಿಯುತ್ತಾರೆ. ಜತೆಗೆ ಊಹಾ ಶಕ್ತಿ ಕೂಡ ಅಧಿಕವಾಗಿರುತ್ತಾದೆ. ಇಟ್ಟು ಗುರಿಯನ್ನು ಸಾಧಿಸುವ ವಿಚಾರದಲ್ಲಿ ಮಹಾನ್ ಗಟ್ಟಿಗರು. ಉನ್ನತ ಸ್ಥಾನದಲ್ಲಿರುವವರು ಪ್ರೀತಿ ಗಳಿಸುತ್ತಾರೆ. ಸತ್ಯವಾದ ದಾರಿಯನ್ನೇ ಅನುಸರಿಸುತ್ತಾರೆ. ಇವರಿಗೆ ಯಾವಾಗಲೂ ಆರ್ಥಿಕ ಹಾಗೂ ವೈಯಕ್ತಿಕ ಸಮಸ್ಯೆಗಳಿರುತ್ತವೆ.

ಈ ನಕ್ಷತ್ರದ ಹೆಣ್ಣುಮಕ್ಕಳು ಮದುವೆ ನಂತರ ಒಂದಿಲ್ಲೊಂದು ಚಟುವಟಿಕೆಯಲ್ಲಿ ತೊಡಗಿಸಿಕೊಂಡಿರುತ್ತಾರೆ. ಸಂಶೋಧನಾ ಕ್ಷೇತ್ರದಲ್ಲಿ ಇವರಿಗೆ ಹೆಚ್ಚಿನ ಆಸಕ್ತಿಯಿರುತ್ತದೆ. ಉನ್ನತ ಸ್ಥಾನ ತಲುಪುತ್ತಾರೆ. ನಿಗೂಢ ವಿದ್ಯೆಗಳನ್ನು ಕಲಿಯುತ್ತಾರೆ. ಇವೆಲ್ಲ ಈ ನಕ್ಷತ್ರದವರ ಲಕ್ಷಣ.

ಆರಿದ್ರಾ ನಕ್ಷತ್ರ

ಆರಿದ್ರಾ ನಕ್ಷತ್ರ

ಆರಿದ್ರಾ ನಕ್ಷತ್ರದ ಅಧಿಪತಿ ರುದ್ರ. ಈ ನಕ್ಷತ್ರದ ಮೇಲೆ ರಾಹು ಪ್ರಬಾವ ಇರುತ್ತದೆ. ಇನ್ನು ರಾಶ್ಯಾಧಿಪತಿ ಬುಧ. ಈ ನಕ್ಷತ್ರದಲ್ಲಿ ಹುಟ್ಟಿದವರು ಮೃದು ಸ್ವಭಾವದವರು. ಸ್ಥಿರ ಮನಸ್ಸಿನವರು. ಶಕ್ತಿಶಾಲಿಗಳು, ತ್ಯಾಗದಿಂದ ಸಂಪಾದಿಸುವವರು, ಅನಾರೋಗ್ಯ , ಭಯ ಹಾಗೂ ಆತಂಕಕ್ಕೆ ತುತ್ತಾಗುವವರು.

ಎಂಥ ಸಂದಿಗ್ಧ ಪರಿಸ್ಥಿತಿಯಲ್ಲೂ ತಣ್ಣಗಿನ ಅಭಿಪ್ರಾಯ ವ್ಯಕ್ತಪಡಿಸಬಲ್ಲ ಇವರು, ತಮ್ಮ ಕಾರ್ಯಯೋಜನೆಯನ್ನು ತಮಗಿರುವ ಪ್ರತಿಕೂಲ ಸ್ಥಿತಿಯಲ್ಲೂ ಜಾರಿಗೆ ತರಬಲ್ಲರು. ಪ್ರಯಾಣಗಳನ್ನು ಯೋಜನೆ ಮಾಡುವಂಥ ಟ್ರಾವೆಲ್ ಏಜೆನ್ಸಿಗಳು ಹಾಗೂ ವಿದೇಶಿಗಳಲ್ಲಿ ಕಾರ್ಯ ನಿರ್ವಹಿಸುವ ಅವಕಾಶ ಇವರದಾಗುತ್ತದೆ.

ವಿಶ್ವಾಸ ತೋರಿಸುವ ಪೈಕಿ ಇವರಲ್ಲ. ಇನ್ನು ಖರ್ಚು ವೆಚ್ಚದ ವಿಚಾರ ಬಂದಾಗ ಮೂರ್ಖರಂತೆ ಹಣ ವ್ಯಯಿಸುತ್ತಾರೆ. ಇವರು ಬದಲಾವಣೆಗೆ ಸದಾ ಸಿದ್ಧರಾಗಿರುತ್ತಾರೆ. ತಮ್ಮದೇ ನಕಾರಾತ್ಮಕ ಧೋರಣೆಗಳನ್ನು ಬದಲಿಸಿಕೊಳ್ಳಲು ಯತ್ನಿಸುತ್ತಾರೆ. ಹೃದಯ ಸಮಸ್ಯೆ, ಲಕ್ವಾ ಹಾಗೂ ಒತ್ತಡಕ್ಕೆ ಸಂಬಂಧಿಸಿದ ಆರೋಗ್ಯ ಸಮಸ್ಯೆಗಳಿಂದ ನರಳುತ್ತಾರೆ.

ಪುನರ್ವಸು ನಕ್ಷತ್ರ

ಪುನರ್ವಸು ನಕ್ಷತ್ರ

ಪುನರ್ವಸು ನಕ್ಷತ್ರದ ಅಧಿಪತಿ ಅದಿತಿ. ಈ ನಕ್ಷತ್ರದ ಮೂರು ಪಾದ ಮಿಥುನ ಹಾಗೂ ಒಂದು ಪಾದ ಕರ್ಕಾಟಕ ರಾಶಿಯಾಗುತ್ತದೆ. ಈ ನಕ್ಷತ್ರವು ಶಕ್ತಿ ಹಾಗೂ ಉತ್ಸಾಹವನ್ನು ನೀಡುತ್ತದೆ. ಊಹಾ ಶಕ್ತಿಯನ್ನು ಹೆಚ್ಚಿಸಿ, ಪ್ರೋತ್ಸಾಹವನ್ನು ತುಂಬುತ್ತದೆ. ಇವರಿಗೆ ಸ್ನೇಹಿತರು ವಿಪರೀತ ಸಂಖ್ಯೆಯಲ್ಲಿ ಇರುತ್ತಾರೆ.

ವೇದ-ವೇದಾಂತಗಳ ಅಧ್ಯಯನ ಮಾಡುವ ಅವಕಾಶ ಇರುತ್ತದೆ. ಆಭರಣ-ಚಿನ್ನ-ರತ್ನಗಳನ್ನು ಹೊಂದಿರುತ್ತಾರೆ. ಬೂದಿಯಿಂದ ಎದ್ದು ಬರುತ್ತಾರೆ ಎಬ ಮಾತಿದೆಯಲ್ಲಾ ಅದು ಇವರಿಗೆ ಚೆನ್ನಾಗಿ ಒಪ್ಪುತ್ತದೆ. ಎತ್ತರವಾಡ ನಿಲುವು ಹಾಗೂ ಗುಂಡು ಮುಖದವರಾಗಿರುತ್ತಾರೆ. ವಯಸ್ಸಾಗುತ್ತಾ ಸ್ಥೂಲ ಕಾಯದವರಾಗುತ್ತಾರೆ.

ಈ ನಕ್ಷತ್ರದ ಹೆಣ್ಣುಮಕ್ಕಳು ತಾಳ್ಮೆಯಿಂದ ಇರುವಂತೆ ಕಂಡುಬಂದರೂ ತಮ್ಮ ಬುದ್ಧಿವಂತಿಕೆ ತೋರಿಸಿಕೊಳ್ಳುವ ಸಲುವಾಗಿ ಜಗಳ ತೆಗೆಯುತ್ತಾರೆ. ಇದರಿಂದ ಕುಟುಂಬದ ಇತರ ಸದಸ್ಯರ ಜತೆಗೆ ಜಗಳಗಳಾಗುತ್ತವೆ. ತುಂಬ ಆರಾಮದಾಯಕ ಜೀವನ ನಡೆಸುತ್ತಾರೆ. ಆದರೆ ಪದೇಪದೇ ಆರೋಗ್ಯ ಸಮಸ್ಯೆ ಎದುರಿಸಬೇಕಾಗುತ್ತದೆ. ಇನ್ನು ಪುರುಷರು ಪಾಲುದಾರಿಕೆ ವ್ಯವಹಾರ ಬಿಟ್ಟು ಎಲ್ಲದರಲ್ಲೂ ಯಶಸ್ಸು ಪಡೆಯುತ್ತಾರೆ. ಆದರೆ ಜೀವನದಲ್ಲಿ ಕೆಲ ಹಿನ್ನಡೆ ಅನುಭವಿಸುತ್ತಾರೆ. ಸಹಾಯ ಮಾಡುವ ಗುಣ ಇರುತ್ತದೆ.

ಪುಷ್ಯ ನಕ್ಷತ್ರ

ಪುಷ್ಯ ನಕ್ಷತ್ರ

ಪುಷ್ಯ ನಕ್ಷತ್ರದ ಅಧಿಪತಿ ಬೃಹಸ್ಪತಿ. ಈ ನಕ್ಷತ್ರವು ನಮ್ಮ ಪ್ರಯತ್ನವನ್ನು ಹಾಗೂ ಕರ್ಮವನ್ನು ಹೆಚ್ಚಿಸುತ್ತದೆ. ಧಾರ್ಮಿಕ ಹಾಗೂ ಆಧ್ಯಾತ್ಮಿಕ ಅಭ್ಯಾಸಗಳಿಗೆ ಹೇಳಿ ಮಾಡಿಸಿದಂಥ ನಕ್ಷತ್ರ. ಈ ನಕ್ಷತ್ರದಲ್ಲಿ ಜನಿಸಿದವರಿಗೆ ಆರೋಗ್ಯವಂತ ದೇಹ, ತಂದೆ-ತಾಯಿ ಹೇಳಿದಂತೆ ಕೇಳುವ ಬುದ್ಧಿ, ಧಾರ್ಮಿಕ ಮನೋಭಾವ, ವಿನಯವಂತಿಕೆ, ಶ್ರೀಮಂತಿಕೆ- ವಾಹನ ಹೊಂದುವ ಅದೃಷ್ಟ ಇರುತ್ತದೆ.

ಈ ನಕ್ಷತ್ರದವರು ಕಾನೂನನ್ನು ಗೌರವಿಸುತ್ತಾರೆ. ದೇಹದ ಬೆಳವಣಿಗೆಯಲ್ಲಿ ಕುಂಠಿತ, ಹಾರ್ಮೋನ್ ಅಸಮತೋಲನ, ಚರ್ಮ ಹಾಗೂ ಜೀರ್ಣಾಂಗದ ಸಮಸ್ಯೆ, ಕೆಮ್ಮು ಮತ್ತು ಆಸ್ತಮಾದಂಥ ಕಾಯಿಲೆಗೆ ತುತ್ತಾಗುವ ಸಾಧ್ಯತೆ ಇರುತ್ತದೆ. ಅದು ಇವರ ಜೀವನಶೈಲಿ ಮೇಲೆ ಆಧಾರ ಪಟ್ಟಿರುತ್ತದೆ.

ಈ ನಕ್ಷತ್ರದ ಪುರುಷರು ಸಣ್ಣಗೆ -ಉದ್ದಕ್ಕೆ ಇರುತ್ತಾರೆ. ಇನ್ನು ಮಹಿಳೆಯರು ಕುಳ್ಳಗೆ- ಗುಂಡು ಮುಖದವರಾಗಿರುತ್ತಾರೆ. ಭಕ್ತಿಯನ್ನು ಹೊಂದಿರುತ್ತಾರೆ. ಶ್ರೀಮಂತರು, ಅನುಮಾನ- ಮೃದು ಸ್ವಭಾವದವರು, ಎಲ್ಲ ವಿಷಯಗಳ ಬಗ್ಗೆ ಜ್ಞಾನ ಇರುವಂಥವರಾಗಿರುತ್ತಾರೆ.

ಆಶ್ಲೇಷಾ ನಕ್ಷತ್ರ

ಆಶ್ಲೇಷಾ ನಕ್ಷತ್ರ

ಈ ನಕ್ಷತ್ರದ ಅಧಿಪತಿ ಸರ್ಪ. ಕೇತುವಿನ ಜನ್ಮ ನಕ್ಷತ್ರ. ಶತ್ರುಗಳಿದ್ದಲ್ಲಿ ಈ ನಕ್ಷತ್ರ ಸಹಾಯ ಮಾಡುತ್ತದೆ. ಜತೆಗೆ ಸಿಟ್ಟಿನ ಸ್ವಭಾವವನ್ನು ನೀಡುತ್ತದೆ. ಈ ನಕ್ಷತ್ರದ ಶಕ್ತಿಯನ್ನು ಹೇಗೆ ಬಳಸುತ್ತಾರೆ ಎಂಬ ಆಧಾರದಲ್ಲಿ ಅವಲಂಬಿತವಾಗಿರುತ್ತದೆ. ಸುಖಾಸುಮ್ಮನೆ ಪ್ರಯಾಣ ಮಾಡುವವರಾಗಿರುತ್ತಾರೆ. ದುಷ್ಟ ಕೆಲಸಗಳಿಗೆ ಹಣ ವ್ಯಯ ಮಾಡುವ ಸನ್ನಿವೇಶ ಎದುರಾಗುತ್ತದೆ.

ಲೈಂಗಿಕ ಆಸಕ್ತಿ ಹೆಚ್ಚಿರುತ್ತದೆ. ರೋಗ ನಿರೋಧಕ ಶಕ್ತಿ ಕಡಿಮೆ ಇರುತ್ತದೆ. ಮಧ್ಯವಯಸ್ಸಿನಲ್ಲಿ ದೇಹದ ತೂಕ ಹೆಚ್ಚಾಗುತ್ತದೆ. ಇವರು ಯಶಸ್ವಿ ರಾಜಕಾರಣಿಗಳಾಗುವ ಸಾಧ್ಯತೆಗಳಿವೆ. ಗುರು, ಕುಜ, ರವಿ ಗ್ರಹಗಳ ಸ್ಥಿತಿ ಜನ್ಮ ಜಾತಕದಲ್ಲಿ ಚೆನ್ನಾಗಿದ್ದರೆ ಮುತ್ಸದ್ದಿಗಳಾಗುತ್ತಾರೆ. ಸೊಗಸಾದ ಮಾತುಗಾರರಾಗಿರುತ್ತಾರೆ.

ಈ ನಕ್ಷತ್ರದ ಹೆಣ್ಣುಮಕ್ಕಳು ಶತ್ರುಗಳನ್ನು ತಮ್ಮ ನಯವಾದ ಮಾತುಗಳಿಂದ ಗೆಲ್ಲಬಲ್ಲವರಾಗಿರುತ್ತಾರೆ. ಆಡಳಿತಾತ್ಮಕ ಕೆಲಸಗಳಲ್ಲಿ ಎತ್ತಿದ ಕೈ ಆಗಿರುತ್ತಾರೆ. ಇನ್ನು ಪುರುಷರು ತಮ್ಮ ಅಭಿಪ್ರಾಯಗಳನ್ನು ಸ್ಫುಟವಾಗಿ ತಿಳಿಸುತ್ತಾರೆ. ಸ್ವಲ್ಪ ಗ್ಯಾನ ಬಂದ ಗಿರಾಕಿಗಳು. ಸಿಟ್ಟು, ಒರಟು ಮಾತು, ಶ್ರೀಮಂತಿಕೆ, ಧಾರ್ಮಿಕ ಮನೋಭಾವ ಮತ್ತು ಹಿಡಿದ ಕೆಲಸದಲ್ಲಿ ನಿಧಾನ ಇವೆಲ್ಲ ಇವರ ಗುಣಗಳು.

ಮಖಾ ನಕ್ಷತ್ರ

ಮಖಾ ನಕ್ಷತ್ರ

ಮಖಾ ನಕ್ಷತ್ರದ ಅಧಿಪತಿ ಪಿತೃ ದೇವತೆಗಳು. ಬೆಳಕು ಹಾಗೂ ದೀಪದ ಸಂಕೇತವಿದು. ಈ ನಕ್ಷತ್ರದಲ್ಲಿ ಹುಟ್ಟಿದವರು ಗಟ್ಟಿ ಹೃದಯದವರು. ತಂದೆಗೆ ಗೌರವ ನೀಡುವಂಥವರು. ಓದಿಕೊಂಡಿರುವಂಥವರು. ಪ್ರತಿಭಾವಂತರು ಹಾಗೂ ಜೀವನದಲ್ಲಿ ಹಲವು ವಿಚಾರದಲ್ಲಿ ವಿಜಯಿಶಾಲಿಗಳು. ಈ ನಕ್ಷತ್ರದವರು ಹಿರಿಯರು ಮತ್ತವರ ಅನುಭವವನ್ನು ಗೌರವಿಸುತ್ತಾರೆ.

ನೇರ ಮಾತಿನ ಇವರು, ಇತರರಿಗೆ ಕೇಡು ಬಯಸುವವರಲ್ಲ. ಅದೇ ರೀತಿ ಇತರರು ಕೇಡು ಬಯಸಿದರೆ ಸಹಿಸಿಕೊಂಡು ಸುಮ್ಮನೆ ಇರುವ ಪೈಕಿಯೂ ಅಲ್ಲ. ಇವರು ಸ್ವಂತ ವ್ಯವಹಾರ ಮಾಡಿದರೆ ಪದೇಪದೇ ಅಪಜಯ ಕಾಣಬೇಕಾಗುತ್ತದೆ. ಈ ನಕ್ಷತ್ರದವರಿಗೆ ಆಸ್ತಮಾ, ಎಪಿಲೆಪ್ಸಿ ಅಥವಾ ಕ್ಯಾನ್ಸರ್ ನಂಥ ಆರೋಗ್ಯ ಸಮಸ್ಯೆಗಳು ಎದುರಾಗುತ್ತವೆ.

ಈ ನಕ್ಷತ್ರದ ಪುರುಷರಿಗೆ ಉತ್ತಮ, ನಂಬಿಕಸ್ತ ಪತ್ನಿ ಸಿಗುತ್ತಾರೆ. ಈ ನಕ್ಷತ್ರದ ಹೆಣ್ಣುಮಕ್ಕಳು ಧಾರ್ಮಿಕ ಮನೋಭಾವದವರು, ಪತಿಯ ಇಚ್ಛೆಗೆ ತಕ್ಕಂತೆ ನಡೆದುಕೊಳ್ಳುವವರು, ಗುಪ್ತಾಂಗ ಸಮಸ್ಯೆಗಳನ್ನು ಅನುಭವಿಸುವವರು ಆಗಿರುತ್ತಾರೆ. ಸಂಪತ್ತಿನ ಮೇಲೆ ಹಿಡಿತ ಹೊಂದಿರುತ್ತಾರೆ. ಸಮಾಜ ಸೇವಾ ಕಾರ್ಯಗಳಲ್ಲಿ ಆಸಕ್ತರಾಗಿರುತ್ತಾರೆ.

ಪುಬ್ಬಾ ನಕ್ಷತ್ರ

ಪುಬ್ಬಾ ನಕ್ಷತ್ರ

ಈ ನಕ್ಷತ್ರದ ಅಧಿಪತಿ ಅರ್ಯಮಾ. ಪುಬ್ಬಾ ನಕ್ಷತ್ರವು ಅದೃಷ್ಟವನ್ನು ಸೂಚಿಸುತ್ತದೆ. ಈ ನಕ್ಷತ್ರದಲ್ಲಿ ಜನಿಸಿದವರು ಧೈರ್ಯವಂತರಾಗಿರುತ್ತಾರೆ. ಬುದ್ಧಿವಂತರಾಗಿದ್ದರೂ ಸ್ವಲ್ಪ ದ್ರೋಹ ಬುದ್ಧಿ ಇರುತ್ತದೆ. ನಿರ್ದಾಕ್ಷಿಣ್ಯ ಸ್ವಭಾವ ಇರುತ್ತದೆ. ದೊಡ್ಡ ಮುಖದ ಇವರು ಸಾಮಾನ್ಯವಾಗಿ ಸುಂದರವಾಗಿರುತ್ತಾರೆ.

ಇವರಿಗೆ ಯಾವುದೇ ವ್ಯವಹಾರದಲ್ಲಿ ಸರಕಾರಕ್ಕೆ ಮೋಸ ಮಾಡುವುದು, ತೆರಿಗೆ ಕದಿಯುವಂಥ ವ್ಯವಹಾರಗಳು ಇಷ್ಟವಾಗಲ್ಲ. ಸ್ವತಂತ್ರವಾಗಿ ಕೆಲಸ ಮಾಡಲು ಇವರು ಇಷ್ಟಪಡುತ್ತಾರೆ. ಆ ಕಾರಣಕ್ಕೆ ಇವರ ಮೇಲಧಿಕಾರಿಗಳಿಗೆ ತಮ್ಮ ಮಾತು ಕೇಳುತ್ತಿಲ್ಲವಲ್ಲ ಎಂಬ ಕಾರಣಕ್ಕೆ ಅಸಹನೆ ಉಂಟಾಗುತ್ತದೆ.

ತಲೆನೋವು, ಶ್ವಾಸಕೋಶದ ಸಮಸ್ಯೆ, ಅಧಿಕ ರಕ್ತದೊತ್ತಡದಿಂದ ಬಳಲುವ ಸಾಧ್ಯತೆ ಇರುತ್ತದೆ. ಯಾವುದೇ ಕಾನೂನುಬಾಹಿರ ಚಟುವಟಿಕೆಗಳನ್ನು ಸುಮ್ಮನೆ ನೋಡುತ್ತಾ ನಿಲ್ಲುವುದು ಇವರಿಂದ ಸಾಧ್ಯವಿಲ್ಲ. ಆಸ್ತಮಾ, ಉಸಿರಾಟದ ತೊಂದರೆ, ಹಲ್ಲಿನ ಸಮಸ್ಯೆ, ಹೊಟ್ಟೆಗೆ ಸಂಬಂಧಿಸಿದ ತೊಂದರೆಗಳನ್ನು ಎದುರಿಸುತ್ತಾರೆ.

ಉತ್ತರಾ ನಕ್ಷತ್ರ

ಉತ್ತರಾ ನಕ್ಷತ್ರ

ಈ ನಕ್ಷತ್ರದ ಅಧಿಪತಿ ಭಗ, ಸಂತೃಪ್ತಿಯ ಅಧಿದೇವತೆ. ಈ ನಕ್ಷತ್ರದ ಒಂದು ಪಾದ ಸಿಂಹ ಹಾಗೂ ಮೂರು ಪಾದ ಕನ್ಯಾ ರಾಶಿಗೆ ಸೇರುತ್ತದೆ. ಈ ನಕ್ಷತ್ರದಲ್ಲಿ ಹುಟ್ಟಿದವರಿಗೆ ದಾನ-ಧರ್ಮದ ಗುಣ ಇರುತ್ತದೆ. ಉದಾರ ಹೃದಯಿಗಳಾಗಿರುತ್ತಾರೆ. ತಾಳ್ಮೆ ಇರುತ್ತದೆ. ಕೀರ್ತಿ ಗಳಿಸುತ್ತಾರೆ. ನೇರಾನೇರ ಮಾತಿನವರಾಗಿರುತ್ತಾರೆ.

ದೃಢವಾದ ದೈಹಿಕ ರಚನೆ, ಉತ್ತಮ ದೃಷ್ಟಿ, ಮಹತ್ವಾಕಾಂಕ್ಷೆ ಇವರ ಸಹಜ ಗುಣಗಳು. ಉತ್ತಮ ವೈವಾಹಿಕ ಜೀವನ ಅನುಭವಿಸುವ ಇವರ ಕೌಟುಂಬಿಕ ಜೀವನ ನೆಮ್ಮದಿಯಾಗಿರುತ್ತದೆ. ನಿರ್ಮಾಣ ವಲಯ, ಹಾಸ್ಪಿಟಾಲಿಟಿ, ಇವೆಂಟ್ ಮ್ಯಾನೇಜ್ ಮೆಂಟ್, ಪ್ರಚಾರ, ಮ್ಯಾನೇಜ್ ಮೆಂಟ್ ಈ ಕ್ಷೇತ್ರಗಳಿಗೆ ಹೇಳಿ ಮಾಡಿಸಿದಂಥವರು.

ಈ ನಕ್ಷತ್ರದಲ್ಲಿ ಹುಟ್ಟಿದವರು ಹಲ್ಲಿನ ಸಮಸ್ಯೆ, ಗ್ಯಾಸ್ಟ್ರಿಕ್ ಮತ್ತು ದೈಹಿಕ ಸಮಸ್ಯೆಗಳನ್ನು ಅನುಭವಿಸುತ್ತಾರೆ.

ಹಸ್ತಾ ನಕ್ಷತ್ರ

ಹಸ್ತಾ ನಕ್ಷತ್ರ

ಹಸ್ತಾ ನಕ್ಷತ್ರದ ಅಧಿಪತಿ ಸವಿತೃ. ಗುರಿಯನ್ನು ತಲುಪುವ ಮತ್ತು ವೇಗವಾಗಿ ಅದನ್ನು ಸಾಧಿಸುವ ಶಕ್ತಿ ನೀಡುತ್ತದೆ. ಈ ನಕ್ಷತ್ರದಲ್ಲಿ ಹುಟ್ಟಿದವರು ಪ್ರಖ್ಯಾತರಾಗುತ್ತಾರೆ. ಧಾರ್ಮಿಕ ಮನೋಭಾವದವರಾಗುತ್ತಾರೆ. ಬ್ರಾಹ್ಮಣರು ಹಾಗೂ ವಿದ್ವಾಂಸರನ್ನು ಗೌರವಿಸುವವರಾಗುತ್ತಾರೆ. ಮತ್ತು ಸಂಪತ್ತನ್ನು ಸಂಗ್ರಹಿಸುತ್ತಾರೆ.

ಇವರು ಎತ್ತರಕ್ಕೆ ಹಾಗೂ ಸಣ್ಣಗೆ ಇರುತ್ತಾರೆ. ಇತರರನ್ನು ಗೆಲ್ಲುವುದು ಇವರಿಗೆ ಸಲೀಸಾಗುತ್ತದೆ. ಇವರು ಯಾವುದೇ ಕೆಲಸಕ್ಕಾದರೂ ಸೂಕ್ತರಾಗುತ್ತಾರೆ. ಇವರಿಗೆ ಯಾವುದೇ ಉನ್ನತ ಶಿಕ್ಷಣ ಸಿಗದಿದ್ದರೂ ವಹಿಸಿದ ಜವಾಬ್ದಾರಿಯನ್ನು ನಿರ್ವಹಿಸಬಲ್ಲವರಾಗಿರುತ್ತಾರೆ. ಊಹಾತ್ಮಕ ಶಕ್ತಿ ಹೆಚ್ಚಿರುತ್ತದೆ.

ಎಲ್ಲ ವಿಚಾರವನ್ನು ಚೆನ್ನಾಗಿ ನಿರ್ವಹಿಸಬಲ್ಲವರಾಗಿರುತ್ತಾರೆ. ಪ್ರಯಾಣ ಹೆಚ್ಚು ಮಾಡಬೇಕಾದ ಕೆಲಸಗಳಲ್ಲಿ ಸಾಧನೆ ಮಾಡಬಲ್ಲವರಾಗುತ್ತಾರೆ. ಶ್ವಾಸಕೋಶ ಸಮಸ್ಯೆ, ಕೆಮ್ಮು, ಆಸ್ತಮಾ, ಹೆಚ್ಚಿನ ರಕ್ತದೊತ್ತಡ, ಹೃದಯ ಸಂಬಂಧಿ ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಾರೆ. ಪ್ರತಿಭಾವಂತರು, ವಾಸ್ತವವಾದಿಗಳು, ತ್ಯಾಗ ಮನೋಭಾವದವಾಗಿರುತ್ತಾರೆ.

ಚಿತ್ತಾ ನಕ್ಷತ್ರ

ಚಿತ್ತಾ ನಕ್ಷತ್ರ

ಚಿತ್ತಾ ನಕ್ಷತ್ರದ ಅಧಿಪತಿ ತ್ವಸ್ಟ. ಈ ನಕ್ಷತ್ರದ ಎರಡು ಪಾದ ಕನ್ಯಾ ಹಾಗೂ ಇನ್ನೆರಡು ಪಾದ ತುಲಾ ರಾಶಿ ಆಗುತ್ತದೆ. ಈ ನಕ್ಷತ್ರವು ಸಂಪತ್ತನ್ನು ಪ್ರತಿನಿಧಿಸುತ್ತದೆ. ಈ ನಕ್ಷತ್ರದಲ್ಲಿ ಹುಟ್ಟಿದವರಿಗೆ ಶತ್ರುಗಳನ್ನು ಗೆಲ್ಲುವ ಛಾತಿ ಇರುತ್ತದೆ. ರಾಜಕೀಯದಲ್ಲಿ ಅಪಾರ ಜ್ಞಾನ ಇರುತ್ತದೆ. ಬುದ್ಧಿವಂತಿಕೆ ಇರುತ್ತದೆ.

ಉತ್ತಮವಾದ ಆರೋಗ್ಯ ಹೊಂದಿ, ಇವರ ಸಹಜ ವಯಸ್ಸಿಗಿಂತ ಚಿಕ್ಕ ವಯಸ್ಸಿನವರಂತೆ ಕಾಣುತ್ತಾರೆ. ಒಂದು ವೇಳೆ ಈ ನಕ್ಷತ್ರದವರ ಜಾತಕದಲ್ಲಿ ನೆಪ್ಚೂನ್ ಬಲವಾಗಿದ್ದರೆ ಭವಿಷ್ಯದಲ್ಲಿ ಏನು ಸಂಭವಿಸುತ್ತದೆ ಎಂಬುದು ಸ್ವಪ್ನದ ಮೂಲಕ ಇವರಿಗೆ ತಿಳಿಯುತ್ತದೆ. ಉನ್ನತ ಶಿಕ್ಷಣ ಪಡೆಯುತ್ತಾರೆ. ಜೀವನದುದ್ದಕ್ಕೂ ಅಧ್ಯಯನಶೀಲರಾಗಿರುತ್ತಾರೆ.

ಕಿಡ್ನಿ, ಬ್ಲಾಡರ್, ಮಾನಸಿಕ ಅಸಮತೋಲನ ಮುಂತಾದ ಸಮಸ್ಯೆಗಳು ಎದುರಾಗುವ ಸಾಧ್ಯತೆ ಇರುತ್ತದೆ. ಒಳ್ಳೆ ಹಣ ಸಂಪಾದಿಸುತ್ತಾರೆ. ಜಾದೂಗಾರರಾಗುವ ಸಾಧ್ಯತೆ ಇರುತ್ತದೆ. ಬುದ್ಧಿವಂತಿಕೆ ಹಾಗೂ ಗಟ್ಟಿ ಮನಸ್ಸಿರುತ್ತದೆ.

ಮುಂದುವರಿಯುವುದು

English summary
Characteristics of the persons on the basis of birth star according to astrology by well known astrologer Shankar Bhat.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X