• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಯಶಸ್ಸಿನ ಕುದುರೆಯ ಮೇಲೆ ಸ್ವಾತಿ ನಕ್ಷತ್ರದವರು

By ನಾಗನೂರಮಠ ಎಸ್.ಎಸ್.
|

ಸ್ವಾತಿ ನಕ್ಷತ್ರದಲ್ಲಿ ಜನಿಸಿದವರದು ತುಲಾ ರಾಶಿ. ಈ ನಕ್ಷತ್ರದ 1ನೇ ಚರಣದವರಿಗೆ ರೂ, 2ನೇದವರಿಗೆ ರೇ, 3ನೇದವರಿಗೆ ರೋ ಹಾಗೂ 4ನೇ ಚರಣದಲ್ಲಿ ಜನಿಸಿದವರಿಗೆ ತಾ ಎಂಬುದಾಗಿ ಜನ್ಮನಾಮ ಬರುತ್ತದೆ.

ಇನ್ನು ಸ್ವಾತಿ ನಕ್ಷತ್ರದವರ ಬಗ್ಗೆ ಹೇಳಬೇಕೆಂದರೆ ಅವರಿಗೇನೇ ಅವರ ಬಗ್ಗೆ ಸಾಕಷ್ಟು ಗೊತ್ತಿದೆ. ಆದರೂ ನಕ್ಷತ್ರದ ಪ್ರಕಾರ ಹೇಗಿರುತ್ತಾರೆ ಎಂಬುದನ್ನು ನೋಡೋಣ. ಬೇಕಿದ್ದವರು ಹೋಲಿಸಿಕೊಂಡು ತಮ್ಮ ಸ್ಪಷ್ಟ ಅಭಿಪ್ರಾಯ ತಿಳಿಸಿದರೆ ಒಳ್ಳೇದು.

ಸಾಮಾನ್ಯವಾಗಿ ನಮ್ಮ ಬಗ್ಗೆ ನಮಗೇನೆ ಜಾಸ್ತಿ ಗೊತ್ತಿರುತ್ತದೆ. ನಮಗಿಂತ ಹೆಚ್ಚೆಂದರೆ ನಮ್ಮ ತಂದೆ-ತಾಯಿಗೆ. ಏಕೆಂದರೆ, ತಂದೆ-ತಾಯಿಯಲ್ಲಿದ್ದ ಸದ್ಗುಣ ಮತ್ತು ದುರ್ಗುಣ ಎರಡೂ ರಕ್ತದಿಂದಲೇ ಬಂದಿರುತ್ತವೆ. ಅದಕ್ಕೆಂದೆ ಕೆಲ ತಾಯಂದಿರು ಮಕ್ಕಳಿಗೆ ಹೇಳೋದು "ನೀನೂ ನಿಮ್ಮಪ್ಪನಂಗೆ ಹಠ ಮಾಡೋದರಲ್ಲಿ ಎತ್ತಿದ ಕೈಯವನು, ಎಷ್ಟೇ ಅಂದರೂ ನಿಮ್ಮಪ್ಪನ ಮಗನಲ್ಲವೇ" ಎಂದು!

ಇನ್ನು, ನಮ್ಮಲ್ಲಿರುವ ಸದ್ಗುಣ ಮತ್ತು ಕೆಲ ದುರ್ಗುಣಗಳು ನಮಗೇನೆ ಗೊತ್ತಿರುವುದಿಲ್ಲ. ಇವುಗಳನ್ನು ತಿಳಿದುಕೊಳ್ಳಬೇಕೆಂದರೆ ನಮ್ಮನ್ಯಾರು ದ್ವೇಷಿಸುತ್ತಿರುತ್ತಾರೋ ಅವರನ್ನು ನಯವಾಗಿ ಮಾತನಾಡಿಸಿದರಾಯಿತು. ನಮ್ಮಲ್ಲಿರುವ ಸದ್ಗುಣ ಮತ್ತು ದುರ್ಗುಣಗಳನ್ನು ಅವರೇ ಬಾಯಿ ಬಿಡುತ್ತಾರೆ. ಅದೂ ಕೂಡ ಬಣ್ಣ ಹಚ್ಚಿ ಹೇಳುತ್ತಾರೆ. ಆವಾಗ ನಮ್ಮ ತಪ್ಪುಗಳನ್ನು ನಾವು ತಿದ್ದಿಕೊಳ್ಳಬಹುದು. ಇಲ್ಲಾಂದ್ರೆ ನಾವು ಮಾಡುವ ತಪ್ಪುಗಳು ನಮಗೇನೆ ಕೆಲವೊಮ್ಮೆ ಗೊತ್ತಿರುವುದಿಲ್ಲ. ನಮ್ಮನ್ನು ದ್ವೇಷಿಸುವವರು ನಮ್ಮ ವೀಕನೆಸ್ ಮತ್ತು ನಮಗೆ ಅರಿಯದೇ ಇರುವ ಕೆಲವೊಂದು ದುರ್ಗುಣಗಳನ್ನು ನೋಟ್ ಮಾಡಿಟ್ಟುಕೊಂಡಿರುತ್ತಾರೆ. ಹೀಗಾಗಿ ಅವರನ್ನೇ ನಮ್ಮ ಜೀವನ ಬದಲಾಯಿಸಿಕೊಳ್ಳುವ ಅಸ್ತ್ರವಾಗಿ ಬಳಸಿಕೊಳ್ಳುವುದೇ ಸೂಪರ್ ಟೆಕ್ನಿಕ್ ಎನ್ನಬಹುದು. [ತುಲಾ ರಾಶಿ ವರ್ಷ ಭವಿಷ್ಯ]

ಇದೇ ರೀತಿ, ನಮ್ಮ ಜನ್ಮನಕ್ಷತ್ರದಿಂದ ನಮ್ಮ ಇಷ್ಟ-ಕಷ್ಟಗಳನ್ನೂ ಕೂಡ ಗೊತ್ತು ಮಾಡಿಕೊಳ್ಳಬಹುದು. ಅದಕ್ಕೆಂದೇ ಎಷ್ಟೋ ಜನ ಜ್ಯೋತಿಷ್ಯವೆಂಬುದರಲ್ಲಿ ಕುತೂಹಲದಿಂದ ಅತೀವ ಆಸಕ್ತಿ ಹೊಂದಿರುತ್ತಾರೆ. ತಿಳಿದುಕೊಂಡು ಕೆಲವರು ತಮ್ಮ ಜೀವನ ಪಾವನ ಮಾಡಿಕೊಳ್ಳುತ್ತಾರೆ. "ನೆತ್ತಿ ಮೇಲೆ ಕೊಂಬು ಬಂದ" ಕೆಲವರು ನಮ್ಮ ಭವಿಷ್ಯ ನಮ್ಮ ಕೈಯಲ್ಲೇ ಇದೆ ಎಂದು ಹೇಳುತ್ತಾ ತಮ್ಮ ಭವಿಷ್ಯವನ್ನು ತಾವೇ ಹಾಳು ಮಾಡಿಕೊಂಡಿರುತ್ತಾರೆ. ಇಂಥವರ ಉದಾಹರಣೆ ಸಾಕಷ್ಟಿವೆ. ನಿಮ್ಮ ಸುತ್ತಮುತ್ತಲೇ ಇರುತ್ತಾರೆ ಒಮ್ಮೆ ನೋಡಿ ಅರ್ಥ ಮಾಡಿಕೊಂಡು ನಸುನಗಿ ಅವರ ದರಿದ್ರ ಹಣೆಬರಹಕ್ಕೆ.

ಜನ್ಮನಕ್ಷತ್ರ ಮತ್ತು ಜನ್ಮರಾಶಿಯಿಂದ ಹಲವಾರು ವಿಷಯಗಳನ್ನು ತಿಳಿದುಕೊಂಡು ಅದರಂತೆ ನಡೆದುಕೊಂಡು ಲೈಫ್ ಲಕಲಕ ಲಕಲಕ ಹೊಳೆಸಿಕೊಳ್ಳುವವರು ಮಾತ್ರ ಅದೃಷ್ಟವಂತರೆನ್ನಬಹುದು. ಏಕೆಂದರೆ ಜನ್ಮಜಾತಕದಲ್ಲಿ ಯಾರ ಬಲ ಹೇಗಿದೆ ಎಂದು ತಿಳಿದುಕೊಂಡರೆ ನಾವು ಜೀವನವನ್ನು ಬಲಪಡಿಸಿಕೊಳ್ಳಬಹುದು. ['ಅಭಯಹಸ್ತ' ನೀಡುವ ಹಸ್ತಾ ನಕ್ಷತ್ರದವರು]

ಸೂಕ್ಷ್ಮ ಸ್ವಭಾವದವರು, ದೈವಭಕ್ತರು : ಸ್ವಾತಿ ನಕ್ಷತ್ರದವರು ಒಂಥರಾ ನ್ಯಾಯಾಧೀಶರಂತೆ ವರ್ತಿಸುತ್ತಿರುತ್ತಾರೆ. ಇವರು ತುಂಬಾ ಸೂಕ್ಷ್ಮ ಸ್ವಭಾವದವರು. ಯಾರೂ ಕೂಡ ಏನೂ ಅನ್ನುವಂಗಿಲ್ಲ ಇವರಿಗೆ. ಅಂದರೆ ಅವರೊಂದಿಗೆ "ಠೂ" ಬಿಟ್ಟು ತಮ್ಮಷ್ಟಕ್ಕೇ ತಾವೇ ಮನದಲ್ಲೇ ಕೊರಗುತ್ತಿರುತ್ತಾರೆ. ಕರುಣೆ ಮತ್ತು ದಯಾತನ ತುಂಬಿ ತುಳುಕುತ್ತಿರುತ್ತದೆ. ಯಾವುದೇ ಕೆಲಸದಲ್ಲಿರಲಿ ಇವರು ಅದರ ಕೊನೆ ಏನಾಗುತ್ತದೆ ಎಂದು ಮೊದಲೇ ಊಹಿಸಿಕೊಳ್ಳುವ ಜ್ಞಾನಿಗಳಿವರು.

ನ್ಯಾಯಯುತವಾಗಿಯೇ ಜೀವನ ಸಾಗಿಸುವುದರಲ್ಲಿ ತೃಪ್ತಿ ಇರುತ್ತದೆ ಎಂಬುದನ್ನು ಸಾಧಿಸಿ ತೋರಿಸುವ ಛಲವಂತರು ಸ್ವಾತಿ ನಕ್ಷತ್ರದವರು. ಇವರ ಈ ಸದ್ಗುಣಗಳೇ ದುರ್ಗುಣಗಳಿದ್ದವರ ಕಣ್ಣು ಕೆಂಪಗೆ ಮಾಡಿಸುತ್ತಿರುತ್ತದೆ. ಪ್ರತಿಯೊಂದನ್ನೂ ಕೂಲಂಕುಷವಾಗಿ ಪರೀಕ್ಷಿಸಿಯೇ ಮುಂದಡಿ ಇಡುತ್ತಿರುತ್ತಾರೆ. ಇವರಿಗೆ ಸೋಲು ಕಮ್ಮಿನೇ. ಗೆಲುವಿನ ಕುದುರೆ ಏರುತ್ತಲೇ ಇರುತ್ತಾರೆ. ಹೀಗಾಗಿ ಜೀವನದ ಎಲ್ಲ ಹಂತಗಳಲ್ಲಿ ಇವರಿಗೆ ಸಕ್ಸಸ್ ಜಾಸ್ತಿ ಸಿಗುತ್ತಿರುತ್ತದೆ.

ತಮಗಿಷ್ಟವಾದವರಂತೆ ತಾವೂ ಇರಬೇಕು ಎಂದು ಬಯಸುತ್ತಿರುತ್ತಾರೆ. ಯಾವುದಾದರೂ ಕೆಲಸಕ್ಕೆ ನಿಂತರೆ ಅದರಲ್ಲೇ ಹೆಚ್ಚು ತಮ್ಮನ್ನು ತೊಡಗಿಸಿಕೊಳ್ಳುತ್ತಾರೆ. ಊಟ, ನಿದ್ರೆ ಬಿಟ್ಟಾದರೂ ಹಿಡಿದುಕೊಂಡು ಕೆಲಸ ಮುಗಿಸುವುದು ಇವರ ಶಕ್ತಿ. ಕೋಪವನ್ನು ಮಾಡಿಕೊಂಡರೆ ಎಲ್ಲಿ ರಕ್ತ ಸುಡುತ್ತದೋ ಎಂದು ಯಾವಾಗಲೂ ನಗುಮುಖದಿಂದಲೇ ಇರುತ್ತಾರೆ. ಕೋಪ ಬಂದರೆ ಹಿಡಿತಕ್ಕೆ ತರಲು ಹೆಣಗಬೇಕಾಗುತ್ತದೆ ಇವರ ಸುತ್ತಮುತ್ತಲಿದ್ದವರು.

ಮಾನವೀಯತೆಯನ್ನೇ ಮೈಗೂಡಿಸಿಕೊಂಡಿರುವ ಈ ನಕ್ಷತ್ರದವರು ಬಡ-ಬಗ್ಗರಿಗೆ ಸಿಕ್ಕಾಪಟ್ಟೆ ಸಹಾಯ ಮಾಡಬೇಕೆನ್ನುತ್ತಿರುತ್ತಾರೆ. ಮಾಡುತ್ತಾರೆ ಕೂಡ. ವ್ಯಾಪಾರಿ ಬುದ್ಧಿ ತುಂಬಿ ತುಳುಕುತ್ತಿರುವುದರಿಂದ ಇವರು ಭಾರಿ ನೆನಪಿನ ಶಕ್ತಿ ಹೊಂದಿರುತ್ತಾರೆ ಚಿಕ್ಕಂದಿನಿಂದಲೇ. ಇವರ ಸ್ನೇಹಿತರೆಲ್ಲರಿಗೂ ಇವರೆಂದರೆ ತುಂಬಾ ಇಷ್ಟ. ಇವರಿಲ್ಲದೇನೇ ಯಾವುದೇ ಟ್ರಿಪ್ ಕೂಡ ಹೋಗೋದಿಲ್ಲ ಇವರ ಸ್ನೇಹಿತರು. ಅಷ್ಟೊಂದು ಸಹೃದಯ ಇವರಲ್ಲಿರುತ್ತದೆ.

ಅತ್ಯುತ್ತಮ ಕ್ಯಾರೆಕ್ಟರ್ ಸರ್ಟಿಫಿಕೇಟ್ : ಇವರನ್ನು ಒಲಿಸಲು ತುಂಬಾ ಶ್ರಮ ಪಡಬೇಕು. ಏಕೆಂದರೆ ಗಂಡಾದರೆ ಹೆಣ್ಣಿಗೆ, ಹೆಣ್ಣಾದರೆ ಗಂಡಿಗೆ ಸೇರಲ್ಲ ಇವರು. ಒಬ್ಬರಿಗೊಬ್ಬರು ಕಣ್ಣೇ ಸೇರಿಸಲ್ಲ. ಅಷ್ಟೊಂದು ನಾಜೂಕುತನ ಇವರಲ್ಲಿರುತ್ತದೆ. ತಮ್ಮ ಉತ್ತಮ ಚಟುವಟಿಕೆಗಳಿಂದ ಕುಟುಂಬದಲ್ಲಿ ಮತ್ತು ಎಲ್ಲೆಡೆ ಅತ್ಯುತ್ತಮರು ಎಂದು ಕ್ಯಾರೆಕ್ಟರ್ ಸರ್ಟಿಫಿಕೇಟ್ ಪಡೆದುಕೊಂಡಿರುತ್ತಾರೆ.

"ಒಂದೇ ಮಾತು, ಒಂದೇ ನಿರ್ಧಾರ" ಇವರದು. ಇವರು ಸಾಮಾನ್ಯವಾಗಿ ಕಲಾವಿದರಾಗಿ ಮಿಂಚುತ್ತಿರುತ್ತಾರೆ. ಇನ್ನು ಕೆಲವರು ವ್ಯಾಪಾರಿಗಳಾಗಿ ಮಾದಕ ವಸ್ತುಗಳನ್ನು ಮಾರುವ ಉದ್ಯೋಗದಲ್ಲಿರುತ್ತಾರೆ. ಇನ್ನು ಕೆಲವರು ವೈದ್ಯಕೀಯ ಕ್ಷೇತ್ರದ ಸಲಕರಣೆಗಳನ್ನು ಮಾರುವ ವ್ಯವಹಾರಕ್ಕಿಳಿದಿರುತ್ತಾರೆ. ಎಲೆಕ್ಟ್ರಾನಿಕ್ ಉದ್ಯಮದಲ್ಲಿ ತಮ್ಮ ಭವಿಷ್ಯವನ್ನು ಇವರು ಪರೀಕ್ಷಿಸಿಕೊಳ್ಳುವುದು ಕಮ್ಮೀನೇ ಎನ್ನಬಹುದು. ಆದರೆ ತಾಂತ್ರಿಕತೆ, ಅಂದರೆ ಯಂತ್ರಗಳನ್ನು ನಿರ್ಮಾಣ ಮಾಡುವ ಉದ್ಯೋಗದಲ್ಲಿಯೂ ಇವರು ಮಿಂಚುತ್ತಿರುತ್ತಾರೆ.

ಸಾಮಾನ್ಯವಾಗಿ ಊರೂರು ಸುತ್ತಿ ವ್ಯಾಪಾರ ಮಾಡುವುದನ್ನು ಇವರು ಇಷ್ಟಪಡುತ್ತಿರುತ್ತಾರೆ. ಸೌಂದರ್ಯ ಕ್ಷೇತ್ರದಲ್ಲಿ ಇವರು ಕಾಲಿಟ್ಟರೆ ಯಶಸ್ಸು ಇವರಿಗೇನೆ. ಮೊದಲೇ ಶುಕ್ರ ಈ ನಕ್ಷತ್ರದ ಅಧಿಪತಿ. ಸೌಂದರ್ಯ ಪ್ರೇಮಿ ಅವನು. ಇವರೂ ಕೂಡ ಅತಿ ಹೆಚ್ಚು ಸುಂದರವಾಗಿರುತ್ತಾರೆ. ತಾವೂ ಕೂಡ ಸುಂದರವಾಗಿರುವದನ್ನೇ ಬಯಸುತ್ತಿರುತ್ತಾರೆ. ದೇಹದಿಂದಲೂ ಇವರು ಸುಂದರರೂ ಮತ್ತು ಗುಣದಿಂದಲೂ. ಜೊತೆಗೆ ತುಲಾ ರಾಶಿಯ ಚಿಹ್ನೆ ಬೇರೆ ತಕ್ಕಡಿ. ಇದಕ್ಕೆ ತಕ್ಕಂತೆ ಇವರು ತೂಕಬದ್ಧವಾಗಿಯೇ ಜೀವನ ನಡೆಸಿಕೊಂಡು ಹೋಗುವವರಾಗಿರುತ್ತಾರೆ.

"ಹಾಸಿಗೆ ಇದ್ದಷ್ಟು ಕಾಲು ಚಾಚಿ" ಮಲಗಬೇಕ್ಕೆನುವವರು ಇವರು. ಹಣ ಖರ್ಚು ಮಾಡುವಾಗಲೂ ಪೈಸೆಗೆ ಪೈಸೆ ಲೆಕ್ಕ ಇರಬೇಕು. ಅಷ್ಟೊಂದು ಚೌಕಾಸಿ ಬುದ್ಧಿಯವರಿವರು.

ದೇವಗಣದವರಾದ ಇವರಿಗೆ ಅಪಾರ ದೈವಭಕ್ತಿ. ದೇವರ ಮೇಲೆ ಹೆಚ್ಚಿನ ಭಾರ ಹಾಕಿ ತಮ್ಮ ಕೆಲಸವನ್ನು ಅಚ್ಚುಕಟ್ಟಾಗಿ ಮಾಡುತ್ತಿರುತ್ತಾರೆ. ಅತೀ ಹೆಚ್ಚಿನ ಪ್ರಯತ್ನದಿಂದ ತಾವು ಹಿಡಿದ ಕೆಲಸ ಮಾಡುವುದರಿಂದ ಇವರಿಗೆ ಮೊದಲೇ ದೈವಬಲವಿರುತ್ತದೆ, ಜೊತೆಗೆ ಅದೃಷ್ಟ ಕೂಡ ಹುಡುಕಿಕೊಂಡು ಬರುತ್ತದೆ. ಹೀಗಾಗಿ ಇವರು ಮುಟ್ಟಿದ್ದೆಲ್ಲ ಚಿನ್ನವೇ ಸರಿ ಎನ್ನಬಹುದು. ಇದರೊಂದಿಗೆ ಗೋಚಾರ ಮತ್ತು ದಶಾ ಸಮಯ ಚೆನ್ನಾಗಿದ್ದರಂತೂ ಮುಗೀತು ಇವರು ಮಹರಾಜರೇ ಸೈ.

ಯಾವ ಚರಣಕ್ಕೆ ಹೇಗೆ ? : ಈ ನಕ್ಷತ್ರದ ಒಂದನೇ ಚರಣದವರು ಸ್ವೇಚ್ಛಾಚಾರಿಗಳಾಗಿರುತ್ತಾರೆ. ತಾವು ಏನು ಮಾಡುತ್ತಾರೋ ಅದೇ ಅಂತಿಮ ಇವರಿಗೆ. ಮಾತಿನಲ್ಲಿ ಹಿಡಿತ ಹೊಂದಿದವರಾಗಿರುತ್ತಾರೆ. ಮುತ್ತಿನಂಥ ಮಾತನಾಡುವುದು ಇವರಿಗೆ ಸಿದ್ಧಿಸಿರುತ್ತದೆ. ಮಾತಿನಲ್ಲೇ ಹೊಟ್ಟೆ ತುಂಬಿಸಬಲ್ಲರು. ಅಷ್ಟೊಂದು ಮಧುರ ಇವರ ಮಾತುಗಳು. ಕೇಳುಗರಿಗೆ ಇವರೊಂದಿಗೆ ಮಾತನಾಡಲು ತುಂಬಾ ಇಷ್ಟ. ಬುದ್ಧಿ ಓಡಿಸುವುದರಲ್ಲೂ ಇವರದು ಎತ್ತಿದ ಕೈ. ಮಾತು ಚೆನ್ನ, ಬುದ್ಧಿಯೂ ಚೆನ್ನ ಇವರದು.

ಎರಡನೇ ಚರಣದವರು, ಸುರಸುಂದರಾಗಿರುತ್ತಾರೆ. ಏನೇ ಮಾಡಿದರೂ ಹತ್ತತ್ತು ಬಾರಿ ಯೋಚಿಸುತ್ತಿರುತ್ತಾರೆ. ಮುಂದಾಗುವ ಲಾಭ-ನಷ್ಟಗಳನ್ನು ಮೊದಲೇ ಲೆಕ್ಕಾಚಾರ ಹಾಕುತ್ತಾರೆ. ಇವರಿಂದ ದುಡ್ಡ ಬಿಚ್ಚಿಸುವುದು ಸವಾಲೇ ಸರಿ. ಏಕೆಂದರೆ ಗಂಭೀರತೆಯಿಂದಲೇ ಇರಲು ಇವರು ಬಯಸುವುದರಿಂದ ಇವರ ಎದುರು ಮಾತನಾಡಲು ಕೆಲವರು ಬೆವರುತ್ತಿರುತ್ತಾರೆ.

ಮೂರನೇ ಚರಣದವರು ಸ್ವಲ್ಪ ಉದಾರಿಗಳಾಗಿರುತ್ತಾರೆ. ಆದರೆ ಯಾರಿಗೆ ಉಪಕಾರ ಮಾಡಬೇಕು ಎಂಬುದನ್ನು ಅರಿಯದ ಮುಠ್ಠಾಳತನ ಇವರಲ್ಲಿರುತ್ತದೆ. ನೊಂದವರಿಗೆ ಮತ್ತು ಇಲ್ಲದವರಿಗೆ ಸಹಾಯ ಮಾಡಬೇಕೆನ್ನುವುದನ್ನು ಇವರು ಅರಿತಿರುವುದಿಲ್ಲ. ಹೀಗಾಗಿ ಕೆಲ ಕೆಟ್ಟವರು ಇವರನ್ನು ದುರುಪಯೋಗ ಮಾಡಿಕೊಂಡು ಇವರನ್ನು ಮೂರ್ಖರನ್ನಾಗಿಸುತ್ತಿರುತ್ತಾರೆ. ಇದರಿಂದ ಕೆಲವೊಮ್ಮೆ ಇವರಿಗೇ ನಷ್ಟವೇ ಹೆಚ್ಚಾಗುತ್ತಿರುತ್ತದೆ. ಆದ್ದರಿಂದ ಕೋಪದಿಂದ ವರ್ತಿಸುವ ಬದಲು ಚಾಣಾಕ್ಷತೆಯಿಂದ ಇವರು ವರ್ತಿಸುತ್ತಿರಬೇಕು ಎಲ್ಲರೊಂದಿಗೆ.

ನಾಲ್ಕನೇ ಚರಣದವರು ಮಹಾನ್ ದೈವಭಕ್ತರಾಗಿರುತ್ತಾರೆ. ಕುಟುಂಬದಲ್ಲಿನ ಹಿರಿಯರಿಗೆ ಮತ್ತು ಎಲ್ಲೆ ಹೋದರೂ ಅಲ್ಲಿದ್ದ ಹಿರಿಯರಿಗೆ ತುಂಬಾ ಗೌರವಾದರ ಕೊಡುವ ಸದ್ಗುಣಗಳನ್ನು ಹೊಂದಿರುತ್ತಾರೆ. ಕೆಲಸದಲ್ಲಿಯೂ ಕೂಡ ತಮ್ಮ ಬಾಸ್ಗೆ ತುಂಬಾ ಬೆಲೆ ಕೊಡುತ್ತಿರುತ್ತಾರೆ ಅವರೆಂಗೇ ಇರಲಿ. ಇವರಿಗೆ ಮಾತ್ರ ಬಾಸ್ ಬೇಕು. ಅಷ್ಟೊಂದು ಸದ್ಭುದ್ಧಿ ಇವರಲ್ಲಿರುತ್ತದೆ. ನ್ಯಾಯ, ನೀತಿ, ಧರ್ಮದಿಂದ ಬಾಳುವುದು ಮುಖ್ಯ ಎನ್ನುತ್ತಿರುತ್ತಾರೆ.

ಈ ನಕ್ಷತ್ರದವರು ಪ್ರತಿ ವರ್ಷದ ತಮ್ಮ ಜನ್ಮದಿನದಂದು ಅನ್ನದಾಸೋಹ ನಡೆಯುವ ದೇವಾಲಯಗಳಲ್ಲಿ ಅಕ್ಕಿ, ಬೆಲ್ಲ, ಅವರೆಕಾಳು ನೀಡಬೇಕು ತಮ್ಮ ಕೈಲಾದಷ್ಟು.

ನಕ್ಷತ್ರ ಟಿಪ್ಸ್ : ಶನಿಸಾಡೇಸಾತಿಯು ಮೂರನೇ ಹಂತದಲ್ಲಿ ಕಾಲಿರಿಸಿದೆ. ಆದ್ದರಿಂದ ಕಾಲಿನ ಬಗ್ಗೆ ಜಾಗೃತೆ ವಹಿಸಿಕೊಳ್ಳಬೇಕು.

ವಿಶಾಖಾ ನಕ್ಷತ್ರ ವಿಶೇಷ ಎಂಬುದು ಮುಂದಿನ ಲೇಖನದಲ್ಲಿ (ಒನ್ಇಂಡಿಯಾ ಕನ್ನಡ)

ಸಂಪಾದಕರ ಮಾತು : ಓದುಗರು, ಸಾಡೇಸಾತಿ ಬಗ್ಗೆ ಹೆಚ್ಚಿನ ಮಾಹಿತಿ ಪಡೆಯಬಯಸಿದ್ದಲ್ಲಿ, ಯಾವುದೇ ತೊಂದರೆಗಳಿಗೆ ಪರಿಹಾರ ಕಂಡುಕೊಳ್ಳಬಯಸಿದ್ದಲ್ಲಿ ಲೇಖಕರಿಗೆ ನೇರವಾಗಿ ಪೋನಾಯಿಸಿ ತಿಳಿದುಕೊಳ್ಳಬಹುದು (ಲೇಖಕರ ಮೊಬೈಲ್ : 94815 22011)

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Know your future through birth star. Astrologer S.S. Nagnurmath says it is possible to know our exact future by studying birth star mentioned in our horoscope. Here astrologer discusses about characteristics of Swati nakshatra people (Libra zodiac signs).
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more