ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಾತ್ವಿಕ ಸ್ವಭಾವದ ತ್ಯಾಗಮಯಿ ಪುಷ್ಯ ನಕ್ಷತ್ರದವರು

By ನಾಗನೂರಮಠ ಎಸ್.ಎಸ್.
|
Google Oneindia Kannada News

ಶನಿದೇವನು ಸ್ವಾಮಿಯಾಗಿರುವ ಪುಷ್ಯ ನಕ್ಷತ್ರದ ನಾಲ್ಕೂ ಚರಣಗಳಲ್ಲಿ ಜನಿಸಿದವರದು ಕರ್ಕ ರಾಶಿ. ಕ್ರಮವಾಗಿ ಚರಣಗಳಿಗನುಗುಣವಾಗಿ ಇವರಿಗೆ ಹೂ, ಹೇ, ಹೋ, ಡಾ ಎಂಬುದಾಗಿ ಜನ್ಮನಾಮ ಇಡಬೇಕು. ಕರ್ಕ ರಾಶಿ ಅಧಿಪತಿ ಮನಃಕಾರಕ ಚಂದ್ರನಾಗುತ್ತಾನೆ. ಇವರಿಗೆ ಇದೊಂದು ಪ್ಲಸ್ ಪಾಯಿಂಟ್ ಎನ್ನಬಹುದು. ಏಕೆಂದರೆ ಈ ನಕ್ಷತ್ರದ ದೇವತೆ ಗುರುವಿನ ಅಭಯಹಸ್ತ ಇವರಿಗಿರುತ್ತದೆ. ಹೀಗಾಗಿ ಇವರು ಹಲವರಿಗೆ ಗುರುಸ್ವರೂಪವಾಗಿಯೇ ಕಾಣುತ್ತಿರುತ್ತಾರೆ!

ತಮ್ಮ ಕುಟುಂಬದ ಬಗ್ಗೆ ವಿಪರೀತ ಪ್ರೀತಿ ಹೊಂದಿರುವ ಇವರು, ಸಂಬಂಧಿಕರೊಂದಿಗೆ ಉತ್ತಮ ಬಾಂಧವ್ಯ ಹೊಂದಿಕೊಂಡಿರುತ್ತಾರೆ. ಯಾವಾಗಲೂ ಸ್ವಚ್ಛವಾಗಿಯೇ ಎಲ್ಲವೂ ಇರಬೇಕು. ತಾವು ತಿನ್ನೋ ಆಹಾರದಲ್ಲಿ ಏನಾದರೂ ಒಂಚೂರು ಕಸವಿದ್ದರೆ ಭಸ್ಮಾಸುರನಂತೆ ಕೆಂಡಾಮಂಡಲವಾಗುತ್ತಾರೆ. ಫೇಸ್ಬುಕ್ಕೂ ಅದು, ಇದೂ ಅಂತ ತಮ್ಮನ್ನು ತಾವೇ ಮರೆತಿರುತ್ತಾರೆ. ತಮ್ಮ ಜೀವನದಲ್ಲಿನ ಯಾವುದೇ ವಿಷಯಗಳನ್ನು ಮುಚ್ಚಿಟ್ಟಿರಲ್ಲ. ಹೀಗಾಗಿ ಸ್ನೇಹಿತರಿಗೆ ಇವರ ಮೇಲೆ ಎಲ್ಲಿಲ್ಲದ ನಂಬಿಕೆ ಇರುತ್ತದೆ. ಆದ್ದರಿಂದ ಇವರು ತಮ್ಮ ಪರ್ಸನಲ್ ಲೈಫ್ ಬಗೆಗೂ ಸ್ವಲ್ಪ ಜಾಗೃತೆ ವಹಿಸಿಕೊಳ್ಳಬೇಕು. ಯಾಕೆಂದರೆ ತಮಗೆ ಬೇಕಾದಂತಹ ಕೆಲಸ ಇವರಿಂದ ಮಾಡಿಸಿಕೊಂಡು ಆಮೇಲೆ ಬಿಸಾಕೋ ಜನರಿಂದ ಎಚ್ಚರವಾಗಿರಬೇಕಿವರು.

ಇವರಿಗೆ ಸ್ವಲ್ಪ ಕರುಣೆ, ದಯೆ, ದಾಕ್ಷಿಣ್ಯ, ಭಯ, ಭಕ್ತಿ ಜಾಸ್ತಿ ಇರುತ್ತದೆ. ಇದರ ದುರುಪಯೋಗವನ್ನು ಮತ್ತೊಬ್ಬರು ಮಾಡಿಕೊಳ್ಳಲು ಇವರು ಬಿಡಬಾರದು. ಇದಿಷ್ಟೇ ಅಲ್ಲ, ಇವರು ಸ್ವಲ್ಪ ತುಂಬಾ ಸೂಕ್ಷ್ಮ ಸ್ವಭಾವ, ನಾಚಿಕೆಯ ನಡವಳಿಕೆ ಹೊಂದಿರುತ್ತಾರೆ. ಹೀಗಾಗಿ ಇವರಲ್ಲಿ ವಿರೋಧಿ ಸ್ವಭಾವ ಕಮ್ಮಿ ಇರುತ್ತದೆ. ಶಾಂತ ಸ್ವಭಾವದ ಪುಷ್ಯ ನಕ್ಷತ್ರದವರನ್ನು ಅವರ ಮನೆಯವರು ಕಣ್ಣಲ್ಲಿ ಕಣ್ಣಿಟ್ಟು ಕಾಯುತ್ತ ಅವರನ್ನು ಜಾಗೃತಗೊಳಿಸುತ್ತಿರಬೇಕು. "ಬೆಳ್ಳಗಿದ್ದದ್ದೆಲ್ಲಾ ಹಾಲಾಗಿರಲ್ಲ" ಎಂದು.

Birth star series : Pushya nakshatra characteristics

ತುಂಬಾ ಜ್ಞಾನವಿದ್ದರೂ ಸೊಕ್ಕು ಮಾಡದೇ ಯಾರಿಗೂ ತೋರಿಸಿಕೊಳ್ಳದೇ ಸಂದರ್ಭ ಬಂದಾಗ ಮಾತ್ರ ತಮ್ಮಲ್ಲಿರುವ ಪ್ರತಿಭೆ ಹೊರಹಾಕುವ ಸ್ವಭಾವ ಇವರಿಗಿರುತ್ತದೆ. ಒಂಥರಾ "ಮೂಕ ಬಸವ"ನಂತೆ ಇವರಿರುತ್ತಾರೆ ಎಲ್ಲರೆದುರಿಗೆ. ಆದರೆ ಸಿಟ್ಟಿಗೆದ್ದರೆ "ಬೀದಿ ಬಸವ"ನಾಗುತ್ತಾರೆ. ಯಾವಾಗಲೂ ಆತ್ಮವಿಶ್ವಾಸದಿಂದಲೇ ಇದ್ದುಕೊಂಡು ಜೀವನಕ್ಕೊಂದು ಗುರಿಯಿಟ್ಟುಕೊಂಡೇ ಬದುಕು ಸಾಗಿಸಲು ಇಷ್ಟಪಡುತ್ತಾರೆ. "ಪಾಲಿಗೆ ಬಂದದ್ದೇ ಪಂಚಾಮೃತ" ಎನ್ನುತ್ತಾರೆ ಹೊರತು ಅತಿಯಾಸೆ ಮಾಡುವುದಿಲ್ಲ. ಸಿಗದೇ ಇರೋದನ್ನ ಬಯಸುವುದೇ ಇಲ್ಲ.

ಇವರು ಹೆಚ್ಚಾಗಿ ಹನುಮನ ಮತ್ತು ದುರ್ಗೆಯ ಆರಾಧನೆ ಮಾಡುವುದು ತುಂಬಾ ಒಳ್ಳೆಯದು. ದೇವಗುಣ ಹೊಂದಿರುವ ಇವರ "ಸೌಮ್ಯ" ಸ್ವಭಾವವನ್ನು ಎಲ್ಲರೂ ಪ್ರೀತಿಸುತ್ತಾರೆ. ಆದರೆ ಆ ಪ್ರೀತಿಯಲ್ಲಿ ಒಳಿತೆಷ್ಟು ಕೆಡಕೆಷ್ಟು ಎಂಬುದನ್ನು ಒರೆಗೆ ಹಚ್ಚಬೇಕು. ಇಲ್ಲಾಂದ್ರೆ "ಎಲ್ಲಾ ಕಳಕೊಂಡ ಮೇಲೆ ಏನು ಬಂತು? ಹೋಗಿದ್ದೇನು ಬರುತ್ತಾ?" ಅಂತಾ ಮನೆಯವರಿಂದ ಉಗಿಸಿಕೊಳ್ಳಬೇಕಾಗುತ್ತದೆ. ಇದರಿಂದ ಟೆನ್ಶನ್ ಶುರುವಾಗುತ್ತದೆ.

ಏನಾದರೂ ಕಲಿಯುತ್ತಲೇ ಇರಬೇಕು ಎಂದು ಹಂಬಲಿಸುವ ಇವರು ತುಂಬಾ ಸಾತ್ವಿಕ ಸ್ವಭಾವದಿಂದಿರುವದರಿಂದ ಎಲ್ಲರಿಗೂ ಇವರ ಬಗ್ಗೆ ಅಪಾರ ಗೌರವ. ತಮ್ಮ ನಡವಳಿಕೆಯಲ್ಲಿ ಯಾವುದೇ ಸ್ವಾರ್ಥತೆ ಇಲ್ಲದಿರುವುದರಿಂದ ಇತರರು ಇವರನ್ನು "ತುಂಬಾ ಮಾನವೀಯತೆ ಇದೆ ನಿಮ್ಮಲ್ಲಿ" ಎಂದು ಕೊಂಡಾಡುತ್ತಿರುತ್ತಾರೆ. ಸ್ವಂತ ಬಲದಿಂದಲೇ ಎಲ್ಲವನ್ನೂ ಸಾಧಿಸಬೇಕು ಎನ್ನುವ ಅಪರಿಮಿತ ದೃಢತೆ ಮತ್ತು ಛಲ ಇವರಿಗೆ ಜನ್ಮದಿಂದಲೇ ಬಂದಿರುತ್ತದೆ.

ಕೆಲವೊಮ್ಮೆ ಅನ್ಯಾಯಕ್ಕೊಳಗಾದವರಿಗೆ ನ್ಯಾಯ ದೊರಕಿಸಲು ಹೋರಾಟ ಮಾಡುವ ಸಂದರ್ಭ ಬಂದರೆ ತಮ್ಮ ಇದ್ದಬದ್ದ ಕೆಲಸವನ್ನೆಲ್ಲಾ ಬಿಟ್ಟು ನಡುರಾತ್ರಿಯಾದರೂ ಸರಿ ಹೊರಟು ನಿಲ್ಲುತ್ತಾರೆ. ಹಣಕಾಸಿನ ಬಗ್ಗೆ ತುಂಬಾ ಅಚ್ಚುಕಟ್ಟಾಗಿ ಲೆಕ್ಕಾಚಾರ ಕೊಡಬೇಕು ಇವರಿಗೆ. ಅಷ್ಟೊಂದು ಹಣದ ವಿಷಯದಲ್ಲಿ ಪರಿಣಿತರು. ಆದರೆ ಕೆಲವೊಂದು ವಿಷಯಗಳಲ್ಲಿ ತಪ್ಪು ತಿಳಿವಳಿಕೆಯಿಂದಾಗಿ ಏನೇನೋ ಬಾಯಿಗೆ ಬಂದಂಗೆ ಮಾತಾಡಿ ಅತ್ಯಮೂಲ್ಯವಾದ ಸ್ನೇಹ ಮತ್ತು ಪ್ರೀತಿ ಕಳಕೊಂಡು ಆಮೇಲೆ ಜೀವನ ಪರ್ಯಂತ ರೋಧಿಸುತ್ತಾರೆ. ಆದ್ದರಿಂದ ಜೀವನದ ಯಾವುದೇ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾದ ಸಂದರ್ಭ ಬಂದರೆ, ಒಂದಿಪ್ಪತ್ತು ಬಾರಿ ಯೋಚಿಸಿಯೇ ಮುಂದಡಿ ಇಡಬೇಕು. ಇಲ್ಲಾಂದ್ರೆ ತಮ್ಮ ಜೀವನವನ್ನು ತಾವೇ ಕೈಯಾರೆ ಹಾಳು ಮಾಡಿಕೊಂಡಂತಾಗುತ್ತದೆ.

ಹೊಟೆಲ್ ಉದ್ಯಮ ಹಾಗೂ ಆಹಾರ ಪೂರೈಕೆಗೆ ಸಂಬಂಧಪಟ್ಟ ಕ್ಷೇತ್ರಗಳಲ್ಲಿ ಇವರು ತಮ್ಮ ಬದುಕು ಕಟ್ಟಿಕೊಳ್ಳಬಹುದು. ಕೆಲವರು ರಾಜಕಾರಣಿಗಳು, ಮಾನಸಿಕ ವೈದ್ಯರು, ಧರ್ಮ ಪ್ರಚಾರಕರು, ಶಿಕ್ಷಣ ಕ್ಷೇತ್ರ, ಮಕ್ಕಳ ಕಾಳಜಿ ಮಾಡುವಂತಹ ಆಶ್ರಮ ಮುಂತಾದ ಕ್ಷೇತ್ರಗಳಲ್ಲಿ ತಮ್ಮನ್ನು ಹೆಸರುವಾಸಿಯಾಗಿಸಿಕೊಳ್ಳುತ್ತಾರೆ. ಇವರಿಗೆ ಸಂಗೀತ, ನೃತ್ಯ, ಯಕ್ಷಗಾನ ಇದ್ದರೆ ಒಂದು ಹೊತ್ತು ಊಟ ಮಾಡಿದಷ್ಟೇ ಖುಷಿಯಾಗುತ್ತದೆ. ಹೀಗಾಗಿ ಮನರಂಜನಾ ಕಾರ್ಯಕ್ರಮಗಳಲ್ಲಿ ತಾವು ಭಾಗವಹಿಸದಿದ್ದರೂ ಅದನ್ನು ನೋಡಲಾದರೂ ಕೂಡ ಕಷ್ಟಪಟ್ಟು ಹೋಗುವ ಹುಂಬತನ ಇವರಲ್ಲಿರುತ್ತದೆ.

ಅಲ್ಲದೇ ಆವಾಗಾವಾಗ ತಮಗಿಷ್ಟವಾದ ಪರಿಚಯದ ಸ್ಥಳಗಳಿಗೆ ಪ್ರಯಾಣ ಬೆಳೆಸಲು ಪ್ಲಾನ್ ಮಾಡುತ್ತಿರುತ್ತಾರೆ. ತಮ್ಮ ಸಾಕು ಪ್ರಾಣಿಗೆ ಏನಾದರೊಂದು ಕೊಡಿಸಿ ಅದರ ಸಂತಸ ನೋಡಿ ಇವರು ಕಿಸಕ್ಕನೇ ನಕ್ಕು ತಮ್ಮ ಹೃದಯ ಹಗುರ ಮಾಡಿಕೊಳ್ಳುತ್ತಾರೆ. ಹೊಸದಾದ ಕೆಲಸ ಶುರು ಮಾಡಲು ಇವರಿಗೆ ತುಂಬಾ ಉತ್ಸುಕತೆ ಇರುತ್ತದೆ. ಇದ್ದ ಹಣದಲ್ಲೇ ಸಂತಸಮಯವಾಗಿ ಜೀವನ ಮಾಡುವ ಪರಿ ಇವರಿಗೆ ಗೊತ್ತಿರುತ್ತದೆ. ತಮಗೆ ಬೇಕಾದಂತಹದ್ದನ್ನು ರುಚಿಕರವಾಗಿ ಮಾಡಿಕೊಂಡು ತಿನ್ನುವುದು ಇವರಿಗಿಷ್ಟ. ಸ್ವತಃ ತಾಯಿ ಪ್ರೇಮದಂತಹ ಪ್ರೀತಿಯನ್ನು ತಮಗಿಷ್ಟವಾದವರಿಗೆ ನೀಡುತ್ತಾರೆ. ಆದರೆ ಯಾವುದೇ ಕಾರ್ಯಕ್ರಮಗಳಲ್ಲಿ ಚಿಕ್ಕಪುಟ್ಟ ವಿಷಯಗಳಿಗೆ ಸಂಬಂಧಿಕರೊಂದಿಗೆ ಮುಖ ಕೆಡಿಸಿಕೊಳ್ಳುವುದನ್ನು ಇವರು ಕಮ್ಮಿ ಮಾಡಿಕೊಳ್ಳಬೇಕು.

ಸ್ವಲ್ಪ ಜಿಪುಣತನವಿರುವ ಇವರು ಹೊಟ್ಟೆ ತುಂಬಿ ಬಿರಿಯುವಂಗೆ ಊಟ ಮಾಡುವುದಿಲ್ಲ. ಯಾರೇನೆ ಅಂದರೂ ಅದನ್ನು ಕೂಲಂಕುಷವಾಗಿ ಯೋಚಿಸಿ ತಮ್ಮದೇನಾದರೂ ತಪ್ಪಿದ್ದರೆ ಕೂಡಲೇ ತಿದ್ದಿಕೊಳ್ಳುತ್ತಾರೆ. ತ್ಯಾಗಮಯಿಯೆನಿಸಿಕೊಳ್ಳುವ ಇವರು ಯಾವಾಗಲೂ ಪವಿತ್ರವಾಗಿರಬೇಕೆಂದು ಬಯಸುತ್ತಾರೆ. ಆದಾಯ ಕರ ಇಲಾಖೆಯಂತೂ ಇವರಿಗೆ ಹೇಳಿ ಮಾಡಿಸಿದಂತಹ ಕೆಲಸದ ಕ್ಷೇತ್ರ ಎನ್ನಬಹುದು.

ಆದರೆ ಕೆಲವೊಮ್ಮೆ ವಿನಾಕಾರಣ ಏನೇನೋ ಯೋಚಿಸಿ ಗೊಂದಲದಲ್ಲಿ ಸಿಕ್ಕಿಹಾಕಿಕೊಂಡು ಹೊರಬರಲು ಒದ್ದಾಡುತ್ತಿರುತ್ತಾರೆ. ಆದರೆ ಮರ್ಯಾದೆಗಂಜಿ ಯಾರಿಗೂ ಇದ್ದ ಪರಿಸ್ಥಿತಿಯನ್ನು ಹೇಳುವುದಿಲ್ಲ ಇದೊಂದು ನ್ಯೂನ್ಯತೆ ಇವರಲ್ಲಿದೆ. ಆದರೆ ಇವರು ಬಯಸಿದಂಗೆ ಇವರ ಸ್ನೇಹಿತರು ಇರಬೇಕು ಎಂದು ಬಯಸುತ್ತಾರೆ. ಹೀಗಾಗಿ ಸ್ನೇಹಿತರನ್ನೂ ಕೂಡ ಇವರು ಶತ್ರುಗಳ ತರಹ ನಡೆಸಿಕೊಳ್ಳುತ್ತಾರೆ. ಆದರೂ ಸ್ನೇಹಿತರ ಹಾಗೂ ತನ್ನನ್ನು ನಂಬಿದವರ ಬಗ್ಗೆ ತುಂಬಾ ಕಾಳಜಿ ವಹಿಸುವುದು ಇವರಿಗೆ ಬಿಡಲಾಗುವುದಿಲ್ಲ. ಇವರು ಎಲ್ಲರನ್ನೂ ಪ್ರೇಮದಿಂದಲೇ ಕಾಣುವದರಿಂದ ಇವರ ಬಗ್ಗೆ ಕೆಲವರು ಅಪಾರ್ಥ ಕೂಡ ಮಾಡಿಕೊಳ್ಳುತ್ತಾರೆ.

ತಲೆಯಲ್ಲಿ ಏನೋ ಸಂಬಂಧಪಡದ ವಿಷಯಕ್ಕೆ ಹುಳು ಬಿಟ್ಟಿಕೊಂಡಿರುತ್ತಾರೆ. ಹೀಗಾಗಿ ತುಂಬಾ ಸುಂದರವಾಗಿದ್ದರೂ ಕೂಡ ಮುಖ ಸಪ್ಪೆಯಾಗಿಯೇ ಕಾಣುತ್ತದೆ. ಏನಾದರೂ ರಿಸ್ಕ್ ತೆಗೆದುಕೊಳ್ಳುವ ಸಂದರ್ಭ ಬಂದರೆ ಸುಲಭವಾಗಿ ಸೋಲೊಪ್ಪಿಕೊಂಡು ತಮ್ಮನ್ನೂ ಒಪ್ಪಿಸಿಕೊಂಡು ಬಿಡುತ್ತಾರೆ ಇದು ಇವರಲ್ಲಿರುವ ದೊಡ್ಡ ದೌರ್ಬಲ್ಯ.

ಈ ನಕ್ಷತ್ರದ ಒಂದನೇ ಚರಣದಲ್ಲಿ ಜನಿಸಿದವರು ಒತ್ತಡದಿಂದ ಮಾನಸಿಕವಾಗಿ ಕುಗ್ಗುತ್ತಿರುತ್ತಾರೆ. ಆದ್ದರಿಂದ ಇವರು ಎಲ್ಲ ವಿಷಯಗಳನ್ನು ಮನಸ್ಸಿಗೆ ಹಚ್ಚಿಕೊಳ್ಳಬಾರದು. ತಮಗೆ ಸಂಬಂಧಪಟ್ಟದ್ದನ್ನು ಮಾತ್ರ ಸ್ವಲ್ಪ ಚಿಂತಿಸಿ ನಂತರ ಕಣ್ತುಂಬ ನಿದ್ದೆ ಮಾಡಬೇಕು. ನಿದ್ದೆ ಮಾಡದೇ ಚಿಂತಿಸುವುದರಲ್ಲೇ ರಾತ್ರಿ ಕಳೆಯಬಾರದು.

ಎರಡನೇ ಚರಣದವರು ತುಂಬಾ ಮೂಡಿಯಾಗಿರುತ್ತಾರೆ. ತಮ್ಮ ಲೋಕದಲ್ಲೇ ಮುಳಗಿದವರಂತೆ ಇರುವುದರಿಂದ ಇತರರು ಇವರನ್ನು ತುಂಬಾ ಬುದ್ಧಿಜೀವಿಗಳು ಎಂದು ಮೂದಲಿಸುತ್ತಿರುತ್ತಾರೆ. ಈ ಮಾತಿಗೆ ತಕ್ಕಂತೆ ಬುದ್ಧಿವಂತಿಕೆ ಹಾಗೂ ಗಂಭೀರತೆ ಇವರಲ್ಲಿರುತ್ತದೆ.

ಮೂರನೇ ಚರಣದವರು ಎಲ್ಲವನ್ನೂ ಬ್ಯಾಲೆನ್ಸ್ ಮಾಡುವಂತಹ ಚತುರತೆ ಹೊಂದಿರುತ್ತಾರೆ. ಅಂದರೆ ಏಕಕಾಲದಲ್ಲಿ ಮಲ್ಟಿಟಾಸ್ಕಿಂಗ್ ತರಹ ಯೋಚನೆ ಮತ್ತು ನಡವಳಿಕೆಯನ್ನು ತೋರುತ್ತಾರೆ. ನಾಲ್ಕನೇ ಚರಣದವರು ಸ್ವಲ್ಪ ಬೇಜವಾಬ್ದಾರಿಯಿಂದ ಅವಸರದ ಪ್ರವೃತ್ತಿ ಹೊಂದಿರುತ್ತಾರೆ. ಇದರಿಂದ ಮಾಡುವ ಕೆಲಸದಲ್ಲಿ ಎಡವಟ್ಟು ಮಾಡಿಕೊಂಡು ತಮ್ಮಷ್ಟಕ್ಕೆ ತಾವೇ ಶಿಕ್ಷಿಸಿಕೊಳ್ಳುವಂತಹ ಸೈಕಿಕ್ ಇವರು. ಆದ್ದರಿಂದ ಮನದ ಹತೋಟಿಯನ್ನಿಟ್ಟುಕೊಳ್ಳಲು ಇವರು ಪ್ರಯತ್ನಿಸುತ್ತಿರಬೇಕು.

ಈ ನಕ್ಷತ್ರದವರು ಹುಟ್ಟುವಾಗಲೇ ಶನಿದಸೆಯಿರುತ್ತದೆ. ಹೀಗಾಗಿ ಇವರು ಬಾಲ್ಯಾವಸ್ಥೆಯನ್ನು ಮನಃಪೂರ್ವಕವಾಗಿ ಕಳೆಯಲಾಗುವುದಿಲ್ಲದ್ದು ಒಂದು ವಿಷಾದನೀಯ ಸಂಗತಿ. ಆದರೆ ಇವರು ಪುಣ್ಯ ಪಾಪವೆಂದು ಲೆಕ್ಕಾಚಾರದ ಜೀವನ ಮಾಡುತ್ತಿರುತ್ತಾರೆ. ಶನಿದೇವನು ಇವರಿಗೆ ತುಂಬಾ ಒಳಿತನ್ನೂ ಮಾಡುವುದರಿಂದ ಇವರು ತಮ್ಮ ಜನ್ಮಜಾತಕದ ಮೂಲಕ ಒಳಿತಿನ ಸಮಯವನ್ನು ಸದುಪಯೋಗ ಪಡಿಸಿಕೊಳ್ಳಬೇಕು.

ಕೆಲವು ಜನ "ಶಾನೇ ಹಾರಾಡ್ತಾನೆ ಏನೂ ಆಚರಣೆ ಮಾಡದ ಕೂಚುಭಟ್ ಇವನ್ಯಾವ್ ನಕ್ಷತ್ರದಾಗೆ ಹುಟ್ಟಿದಾನೋ ಏನೋ" ಎಂದು ತಮಗಾಗದವನನ್ನು ಬೇಕಾಬಿಟ್ಟಿಯಾಗಿ ಬೈಯುತ್ತಿರುವುದನ್ನು ನೀವು ಕೇಳಿರಬಹುದು. ಹೌದು, ಇದಕ್ಕೆಂದೇ ನಮ್ಮನ್ನು ನಾವೇ ಹೊಗಳಿಕೊಳ್ಳಬಾರದು. ಜನರು ಹೊಗಳಿ ನಮ್ಮ ಬಗ್ಗೆ ಹೇಳಬೇಕು. ಆವಾಗಲೇ ನಮ್ಮ ಸಾಮರ್ಥ್ಯ ಗೊತ್ತಾಗೋದು ಇಲ್ಲಾಂದ್ರೆ ಈ ರೀತಿ ಹಿಂದೆ ಬೈಯಿಸಿಕೊಳ್ಳಬೇಕಾಗುತ್ತದೆ ಎಂಬುದನ್ನು ಎಲ್ಲರ ನಡುವೆ ಜೀವಿಸುವವರು ಅರಿತುಕೊಳ್ಳಬೇಕು.

"ಆಶ್ಲೇಷಾ ನಕ್ಷತ್ರ ವಿಶೇಷ" ಎಂಬುದು ಮುಂದಿನ ಲೇಖನದಲ್ಲಿ. (ಒನ್‌ಇಂಡಿಯಾ ಕನ್ನಡ)

ನಕ್ಷತ್ರ ಟಿಪ್ಸ್ : ಈ ನಕ್ಷತ್ರದವರು ಎಂತಹ ಪರಿಸ್ಥಿತಿಯಲ್ಲೂ ಸಹ ಮಾನಸಿಕ ಸ್ಥಿಮಿತ ಕಳೆದುಕೊಳ್ಳಬಾರದು.

ದೈವಕೃಪೆಗೆ : ನಾಸ್ತಿಕರಿಗೆ ಯಾವುದೇ ರೀತಿಯಿಂದ ಹಣದ ಸಹಾಯ ಮಾಡಬಾರದು.

ಸಂಪಾದಕರ ಮಾತು : ಓದುಗರು, ಸಾಡೇಸಾತಿ ಬಗ್ಗೆ ಹೆಚ್ಚಿನ ಮಾಹಿತಿ ಪಡೆಯಬಯಸಿದ್ದಲ್ಲಿ, ಯಾವುದೇ ತೊಂದರೆಗಳಿಗೆ ಪರಿಹಾರ ಕಂಡುಕೊಳ್ಳಬಯಸಿದ್ದಲ್ಲಿ ಲೇಖಕರಿಗೆ ನೇರವಾಗಿ ಪೋನಾಯಿಸಿ ತಿಳಿದುಕೊಳ್ಳಬಹುದು (ಲೇಖಕರ ಮೊಬೈಲ್ : 94815 22011)

English summary
Know your future through birth star. Astrologer S.S. Nagnurmath says it is possible to know our exact future by studying birth star mentioned in our horoscope. Here astrologer discusses about characteristics of Pushya nakshatra people (Cancer zodiac signs).
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X