ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸೋಂಬೇರಿಗಳು ಪೂರ್ವ ಫಾಲ್ಗುಣಿ ನಕ್ಷತ್ರದವರು

By ನಾಗನೂರಮಠ ಎಸ್.ಎಸ್.
|
Google Oneindia Kannada News

ಪೂರ್ವಫಾಲ್ಗುಣಿ ನಕ್ಷತ್ರದಲ್ಲಿ ಜನಿಸಿದವರಿಗೆ ಚರಣಗಳಿಗನುಗುಣವಾಗಿ ಮೋ, ಟಾ, ಟೀ, ಟೂ ಎಂಬುದಾಗಿ ಜನ್ಮನಾಮ ಇಡಬೇಕಾಗುತ್ತದೆ. ಈ ನಕ್ಷತ್ರದ ಎಲ್ಲ ನಾಲ್ಕೂ ಚರಣಗಳಲ್ಲಿ ಜನಿಸಿದವರದು ಸಿಂಹ ರಾಶಿಯಾಗುತ್ತದೆ. ಈ ನಕ್ಷತ್ರದವರು ಯಾವಾಗಲೂ ಆರಾಮವಾಗಿರಬೇಕೆಂದೇ ಬಯಸುತ್ತಿರುತ್ತಾರೆ. ಹೊಟ್ಟೆ ತುಂಬ ಗಡದ್ದಾಗಿ ತಿಂದುಂಡು, ಕಣ್ತುಂಬ ನಿದ್ದೆ ಮಾಡಬೇಕೆನ್ನುವ ಗುಣ ಇವರಲ್ಲಿ ಹುಟ್ಟಿನಿಂದಲೇ ಬಂದದ್ದು.

ಈ ನಕ್ಷತ್ರದವರು ತಮ್ಮ ಜನ್ಮಜಾತಕವನ್ನು ಪರಿಶೀಲಿಸಿಕೊಂಡು ಅದರಲ್ಲಿರುವ ಗ್ರಹಗಳ ವೇಧಾ ಸ್ಥಾನ ಮತ್ತು ತಮ್ಮ ದಶಾಭುಕ್ತಿಯನ್ನು ತಿಳಿದುಕೊಂಡಿಟ್ಟುಕೊಂಡರೆ ಉತ್ತಮ. ಯಾಕೆಂದರೆ ಇದರಿಂದ ಮುಂದಿನ ತಮ್ಮ ಭವಿಷ್ಯದಲ್ಲಿ ಹೊಸದಾದ ಯೋಜನೆಗಳನ್ನು ಮಾಡಲು ಸದುಪಯೋಗವಾಗುತ್ತದೆ. ಚೆನ್ನಾಗಿರಬೇಕೆನ್ನುವವರು ಈ ರೀತಿ ಮಾಡುತ್ತಾರೆ. "ಏನ್ ಬರುತ್ತೋ ಬರ‍್ಲಿ ಬಿಡಿ ಸಾಮಿ, ಅನುಭೋಸಿದ್ರಾಯ್ತು" ಎನ್ನುವ ಕೆಲ ಮಂದಬುದ್ಧಿಯವರಿಗೆ, "ಗಾಳಿಯೊಂದಿಗೆ ಗುದ್ದಾಡಿ ಮೈ ನೋವ್ಯಾಕೆ ಮಾಡಿಕೊಳ್ಳಬೇಕು" ಎಂದು ಸಾಮೇರು ಸುಮ್ಕಾಯ್ತಾರೆ.

ಗುರು ಈ ನಕ್ಷತ್ರದ ಅಧಿಪತಿ. ಇದೇ ಇವರಿಗೆ ಸೌಭಾಗ್ಯವೆನ್ನಬಹುದು. ಸಂಬಂಧಿಕರೊಂದಿಗಿನ ಒಡನಾಟದಿಂದ ಇವರಿಗೆ ಅತ್ಯಾನಂದವಾಗುತ್ತಿರುತ್ತದೆ. ಹೀಗಾಗಿ ಇವರಿಗೆ ಸಂಬಂಧಿಕರ‍್ಯಾರಾದರೂ ಅನ್ಯಾಯ ಮಾಡಿದರೂ, ಇವರು ಮಾತ್ರ ಅವರ ಮೇಲೆ ಸಂಶಯ ಮಾಡದೇ ನಂಬಿಕೆಯನ್ನು ಕಳೆದುಕೊಳ್ಳುವುದಿಲ್ಲ. ಅಷ್ಟೊಂದು ನಂಬಿಕೆ ಇವರಿಗೆ ತಮ್ಮ ರಕ್ತಸಂಬಂಧಿಕರೊಂದಿಗೆ. ['ಸಿಂಹಾ'ಸನದ ಅದೃಷ್ಟವಿರುವ ಮಘಾ ನಕ್ಷತ್ರ!]

Birth star series : Poorva Phalguni nakshatra characteristics

ತುಂಬಾ ಸುಂದರವಾದ, ಐಷಾರಾಮಿ ಜೀವನ ಶೈಲಿಯಲ್ಲಿ ಇವರು ಬದುಕುತ್ತಿರುತ್ತಾರೆ. ಇವರಲ್ಲಿರುವ ಹಲವಾರು ಪ್ರತಿಭೆಗಳು ಎಷ್ಟೋ ಜನರಿಗೆ ಗೊತ್ತೇ ಆಗುವುದಿಲ್ಲ. ಏಕೆಂದರೆ ಇವರಂತೂ ಬಾಯಿಬಿಟ್ಟು ತಮ್ಮ ಬಗ್ಗೆ ಏನನ್ನೂ ಹೇಳಿಕೊಳ್ಳುವುದಿಲ್ಲ. ಹೀಗೇಕೆಂದರೆ ಇವರಲ್ಲಿರುವ ಸೋಮಾರಿತನವಾಗಿರಬಹುದು ಅಥವಾ ನಮ್ಮದನ್ನು ನಾವು ಹೊಗಳಿಕೊಳ್ಳಬಾರದು ಎಂಬ ದೊಡ್ಡ ಗುಣದಿಂದಿರಬಹುದು. ಒಟ್ಟಿನಲ್ಲಿ ಇವರು ತಮ್ಮಲ್ಲಿರುವ ಹಲವಾರು ವಿದ್ಯೆಗಳ ಬಗ್ಗೆ ಎಲ್ಲರೆದುರಿಗೆ ಬಡಾಯಿ ಕೊಚ್ಚಿಕೊಳ್ಳುವುದಿಲ್ಲ.

ಕೆಲವರಿರುತ್ತಾರೆ ಏನೂ ಬರದಿದ್ದರೂ ಎಲ್ಲಾ ನನಗೊತ್ತಿದೆ ಎಂದು ಬೊಂಬಡಾ ಹೊಡಿತೀರ‍್ತಾರೆ. ಪೂರ್ವಫಾಲ್ಗುಣಿ ನಕ್ಷತ್ರದವರು ಇಂಥವರ ಸಾಲಿನಲ್ಲಿರಲ್ಲ. ಎಲ್ಲದರ ಬಗ್ಗೆ ತಮಗೆ ಗೊತ್ತಿದ್ದರೂ ಸಮಯ ಬಂದಾಗ ಮಾತ್ರ ಅದರ ಬಗ್ಗೆ ತಿಳಿಸುತ್ತಾರೆ. ಅಂತಹ ಅಪ್ಪಟ ಸ್ವಾಭಿಮಾನಿ ಮನೋಭಾವದವರಿವರು. ಇವರು ಆಲಸ್ಯತನದಿಂದ ಆರಾಮಾಗಿಯೇ ಇರಬೇಕೆಂದುಕೊಳ್ಳುವವರು. ಹೀಗಾಗಿ ಸ್ವಲ್ವಾನೇ ಕೆಲಸ ಮಾಡಿದರೂ ಉಶ್ಸಪ್ಪ್ ಎಂದು ಕುಳಿತುಕೊಂಡು ಬಿಡುತ್ತಾರೆ ದಣಿವಾಗದಿದ್ದರೂ. ಕೆಲವೊಮ್ಮೆ ಧ್ಯಾನಾಸಕ್ತರಂತೆ ಸುಮ್ಮನೆ ಕುಳಿತುಕೊಳ್ಳುವುದು ಇವರಿಂದ ಬಿಡಲಾಗುವುದಿಲ್ಲ. ಆದರೆ ಮನಸ್ಸಿನಿಂದ ಮಾತ್ರ ತುಂಬಾ ಶುದ್ಧವಾಗಿರುತ್ತಾರೆ. ಎಲ್ಲರನ್ನೂ ಪ್ರೀತಿಸುವಂಥಹ ದೊಡ್ಡ ಹೃದಯ ಇವರಿಗಿರುತ್ತದೆ.

ಇವರ ಅದೃಷ್ಟವೆಂಗಿರುತ್ತದೆಂದರೆ ಇವರು ತಮ್ಮ ಕುಟುಂಬದ ಸದಸ್ಯರೊಂದಿಗೆ ತುಂಬಾ ಸಂತಸದಿಂದ ಇರುತ್ತಾರೆ. ಕೌಟುಂಬಿಕ ಸುಖ ಇವರಿಗೆ ದೈವ ಕೊಡುಗೆ ಎನ್ನಬಹುದು. ಇವರ ಕುಟುಂಬದವರು ಇವರೆಂಗೇ ಇರಲಿ ಇವರೇ ಬೇಕೆನ್ನುತ್ತಿರುತ್ತಾರೆ. ಪ್ರೀತಿ-ಪ್ರೇಮದ ವಿಷಯದಲ್ಲಿ ಇವರಂಥಾ ಅದೃಷ್ಟವಂತರು ಬೇರಾರಲ್ಲವೆನ್ನಬಹುದು. ಶುಕ್ರ ಈ ನಕ್ಷತ್ರದ ಅಧಿಕಾರಿ ಆಗಿರುವುದರಿಂದ ಇವರಿಗೆ ಮಹಾಲಕ್ಷ್ಮೀಯೇ ಒಲಿದಿರುತ್ತಾಳೆ. ಅಲ್ಲದೇ ಇವರದು ಮನುಷ್ಯ ಗಣವಾದ್ದರಿಂದ ಆಸ್ತಿಕ ಗುಣ ಇವರಲ್ಲಿ ಸಹಜವಾಗಿಯೇ ಇರುತ್ತದೆ.

ಇವರ ಮನಸ್ಸು ಮತ್ತು ಹೃದಯ ತೆರೆದ ಕಿಟಕಿಯಿದ್ದಂತೆ. ಒಳಗಿದ್ದಂಗೆ ಹೊರಗಿರುತ್ತಾರೆ. ಇವರದೊಂದು ಥಿಯರಿ ಏನೆಂದರೆ, ಏನೇ ಮಾಡಿದರೂ ಜಾಸ್ತಿ ಟೈಮ್ ಹೋಗಿರಬಾರದು, ಬೇಗ ಕೆಲಸಾನೂ ಮುಗಿದಿರಬೇಕು, ದಣಿವೂ ಆಗಿರಬಾರದು. ಈ ರೀತಿ ಕೆಲಸದಲ್ಲಿ ಹೊಸ ದಾರಿ ಹುಡುಕಿಕೊಂಡು ಇವರು ಗಪ್‌ಚುಪ್ ಆಗಿ ತಮಗೆ ವಹಿಸಿಕೊಟ್ಟ ಕೆಲಸ ಮಾಡಿ ಮುಗಿಸಿ ಎಲ್ಲರನ್ನೂ ಅಚ್ಚರಿಗೊಳಿಸುತ್ತಾರೆ.

ಇವರು ಕೆಲಸ ಮಾಡಿದ ವೇಗವನ್ನು ನೋಡಿದರೆ, ಹಲವಾರು ಜನರು ಯಾವುದು ಆಗುವುದಿಲ್ಲವೆಂದಿರುತ್ತಾರೋ ಅದನ್ನಿವರು ಸಲೀಸಾಗಿ ಮಾಡಿ ಮುಗಿಸಿ ತಮ್ಮ ಹುಟ್ಟುಗುಣವಾಗಿರುವ "ರೆಸ್ಟ್"ನ್ನು ತೆಗೆದುಕೊಳ್ಳುತ್ತಿರುತ್ತಾರೆ. ಇದೇ ಇವರಲ್ಲಿರುವ ವಿಶಿಷ್ಟವಾದ ವೈಶಿಷ್ಟ್ಯ. ನಯವಾಗಿ ಮಾತನಾಡಿ ನಾಜೂಕಿನಿಂದ ಎಲ್ಲರಿಂದ ಕೆಲಸ ಮಾಡಿಸಿಕೊಳ್ಳುವ ಚಾಕಚಕ್ಯತೆ ಇವರಿಗಿರುವುದರಿಂದ ಅಧಿಕಾರದಲ್ಲಿದ್ದರೆ ಯಶಸ್ಸಿನ ಮೆಟ್ಟಿಲನ್ನು ಹತ್ತುತ್ತಲೇ ಇರುತ್ತಾರೆ. ದೇಹದಿಂದಲೂ ಗಟ್ಟಿಮುಟ್ಟಾಗಿರುವ ಇವರಿಗೆ ಹುಟ್ಟಿನಿಂದಲೇ ಯಾವುದಾದರೊಂದು ಕಲೆ ಒಲಿದಿರುತ್ತದೆ. ಬೇಸರವಾದಾಗ ಅದರಲ್ಲೇ ತಮ್ಮ ಬದುಕಿನ ಸಂತಸದ ಕ್ಷಣಗಳನ್ನು ಕಳೆಯಲು ಇವರಿಗಿಷ್ಟ.

ಇವರು ಕೆಲವೊಮ್ಮೆ ದೊಡ್ಡ ಕೆಲಸಗಳಿಗೆ ಸುಲಭದ ದಾರಿಗಳನ್ನು ಅಂದರೆ "ಶಾರ್ಟ್ ರೂಟ್" ಹುಡುಕಲು ಪ್ರಯತ್ನಿಸುತ್ತ ಕಾಲ ಕಳೆಯುವುದರಿಂದ ಇವರಿಗಾಗದ ಕೆಲವರು "ಲೇಟ್ ಲತೀಫ್" ಎಂದು ಇವರಿಗೆ ಬಿರುದು ಕೂಡ ಕೊಟ್ಟಿರುತ್ತಾರೆ. ಸಂಬಂಧಗಳನ್ನು ಗಟ್ಟಿಮುಟ್ಟಾಗಿಸಿಕೊಂಡೇ ಇರುವ ಇವರು ಯಾರೊಂದಿಗೂ ಮುಖ ಕೆಡಿಸಿಕೊಂಡಿರುವುದಿಲ್ಲ. ತುಂಬಾ ಅರ್ಥಗರ್ಭಿತವಾಗಿ ಮಾತನಾಡುವ ಇವರನ್ನು ಎಲ್ಲರೂ ಗೌರವಿಸುತ್ತಿರುತ್ತಾರೆ. ಹಲವಾರು ಯೋಜನೆಗಳನ್ನು ದೊಡ್ಡಸ್ತಿಕೆಯಿಂದ ನಾನೊಬ್ಬನೇ ಮಾಡುತ್ತೇನೆ ಎಂದು ನಿರ್ಧರಿಸುವ ಇವರಿಗೆ ಅವುಗಳನ್ನು ಪೂರೈಸುವ ಬಲವಿಲ್ಲದೆ ನಿರಾಶೆಯಾಗುತ್ತಿರುತ್ತದೆ. ಹೀಗಾಗಿ ಮನನೊಂದುಕೊಂಡು ತಮ್ಮಷ್ಟಕ್ಕೇ ತಾವೇ ಅವಮಾನವಾಯಿತೆಂದುಕೊಂಡು ಮುಗುಮ್ಮಾಗಿರುತ್ತಾರೆ "ಬಾಲ ಸುಟ್ಟುಕೊಂಡ ಬೆಕ್ಕಿನ" ತರಹ.

ಈ ನಕ್ಷತ್ರದಲ್ಲಿ ಜನಿಸಿದ ಕೆಲವರು ಸರಕಾರಿ ಹುದ್ದೆ ಗಿಟ್ಟಿಸಿಕೊಂಡರೆ, ಚಲನಚಿತ್ರ ಉದ್ಯಮದಲ್ಲಿ ಕೆಲವರು ಬದುಕು ಕಟ್ಟಿಕೊಂಡಿರುತ್ತಾರೆ. ಸಂಗೀತ ಕ್ಷೇತ್ರಕ್ಕೆ ಕೆಲವರು ತಮ್ಮ ಬದುಕಿನ ಬಂಡಿ ನಡೆಸಲು ಧುಮುಕಿರುತ್ತಾರೆ. ಶೈಕ್ಷಣಿಕ ಕ್ಷೇತ್ರದಲ್ಲಿ ಕೆಲವರಿದ್ದರೆ, ಗೇಣು ಹೊಟ್ಟೆ ತುಂಬಿಸಿಕೊಳ್ಳಲು ಆಟೋಟಗಳ ತರಬೇತುದಾರರಾಗಿರುತ್ತಾರೆ ಕೆಲವರು. ಹಾಗೆಯೇ ಹೆಂಗಸರು ಉಪಯೋಗಿಸುವ ಉತ್ಪನ್ನಗಳ ತಯಾರಿಕೆಯಲ್ಲೂ ಉದ್ಯೋಗಿಗಳಾಗಿರಬಹುದಾದ ಇವರು ಯೋಗ, ರೇಖಿ ತರಬೇತಿ, ಮರುಜನ್ಮದ ತರಬೇತಿ ನೀಡುತ್ತೇನೆ ಎಂದು ತಮ್ಮ ಜೀವನ ಸಾಗಿಸಲು ದಾರಿ ಹುಡುಕಿಕೊಂಡಿರುತ್ತಾರೆ. ರೈತರಾಗಿದ್ದಾರೆ ರೇಷ್ಮೆ ಬೆಳೆದು ಶ್ರೀಮಂತರಾಗಿ ಎಲ್ಲಾ ದೈವೇಚ್ಛೆ ಎಂದುಕೊಳ್ಳುತ್ತಿರುತ್ತಾರೆ.

ಸಂಗೀತ ಕ್ಷೇತ್ರದಲ್ಲಿ ಹೆಚ್ಚಿನ ಒಲವು ಇವರಿಗಿರುವುದರಿಂದ ಕವನ ಬರೆಯುವ ಹೃದಯವೂ ಇವರಲ್ಲಿರುತ್ತದೆ. ಮೃದುಹೃದಯದ ಇವರನ್ನೊಲಿಸುವುದು ತುಂಬಾ ಸುಲಭ. ಸಿಹಿಯೂಟವೆಂದರೆ ಅಚ್ಚುಮೆಚ್ಚು ಇವರಿಗೆ. ಆದರೆ ಊಟದಲ್ಲಿ ಮಾತ್ರ ಬಾಯಿರುಚಿಗೆ ಉಪ್ಪು ಹೆಚ್ಚಿರಬೇಕು ಇವರಿಗೆ. ಕೆಲವೊಮ್ಮೆ ಅಪರಿಚಿತರ ಬಗ್ಗೆ ಸಂಶಯ ಮನದಲ್ಲಿ ಮೂಡಿದರೆ ಅದನ್ನು ಮತ್ತೊಮ್ಮೆ ಮಗದೊಮ್ಮೆ ಪರಿಶೀಲಿಸಿ ತಮ್ಮ ಸಂದೇಹವನ್ನು ನೀಗಿಸಿಕೊಳ್ಳುತ್ತಾರೆ. ಪರದೇಶ ಪ್ರಯಾಣ ಇವರಿಗೆ ಜೀವನದಲ್ಲೊಮ್ಮೆಯಾಗುತ್ತದೆ.

ಮದುವೆಯಾದ ಗಂಡಸರು ಈ ನಕ್ಷತ್ರದವರಾಗಿದ್ದರೆ, ತಮ್ಮ ಹೆಂಡತಿಯ ಸೆರಗು ಹಿಡಿದುಕೊಂಡೇ ಹಿಂದಿಂದೇನೆ ಸುತ್ತುವಂತಹ ಭಂಡರಿವರು. ಇವರದೊಂದು ವಿಶಿಷ್ಟ ಗುಣವೆಂದರೆ ಏನಾದರೂ ಅನಾಚಾರದ ಕೆಲಸ ಅಥವಾ ಅಪರಾಧ ಮಾಡಲು ಇವರನ್ನು ಹುರಿದುಂಬಿಸಿ ಹಣದಾಸೆ ತೋರಿಸಿದರೂ ಕೂಡ ಇವರ ಮನಸ್ಸು ಕರಗಲ್ಲ ಅಷ್ಟೊಂದು ಭಯ ಇವರಿಗೆ ಕಾನೂನಿನ ಬಗ್ಗೆ.

ಭಿಕ್ಷುಕರಿಗೆ ಭಿಕ್ಷೆ ನೀಡಿ ಅವರನ್ನು ಪ್ರೋತ್ಸಾಹಿಸಬೇಡಿ ಎಂದು ಸರಕಾರ ಎಷ್ಟೇ ಜಾಗೃತಿ ಮೂಡಿಸಿದರೂ ಇವರು ಮಾತ್ರ ಚಿಲ್ಲರೆ ಕಾಸನ್ನು ಭಿಕ್ಷುಕರಿಗೆಂದೇ ಮೀಸಲಿಡುವ ಕರುಣಾಮಯಿಗಳು. ದೇವಸ್ಥಾನದಲ್ಲಿ ಬಂದ ಭಕ್ತರ ಸೇವೆ ಮಾಡಿದರೆ ದೇವರು ಸಂತುಷ್ಟನಾಗುತ್ತಾನೆ ಎನ್ನುವ ಸೇವಾಮನೋಭಾವ ಇವರಲ್ಲಿರುತ್ತದೆ. ಆದರೆ ಮದುವೆಯಾದ ನಂತರ ನೆಮ್ಮದಿ ಕಳೆದುಕೊಂಡಂತೆ ಆಡುವ ಇವರು, ತಮ್ಮಲ್ಲಿರುವ ವಿಶಿಷ್ಟ ಕಲೆಯೊಂದಿಗೆ ತಮ್ಮ ಕಷ್ಟಗಳನ್ನು ಮರೆಯುತ್ತಾರೆ.

ಈ ನಕ್ಷತ್ರದ ಒಂದನೇ ಚರಣದಲ್ಲಿ ಜನಿಸಿದವರು ಸಾತ್ವಿಕ ಸ್ವಭಾವ ಹೊಂದಿರುತ್ತಾರೆ. ಬಂದಿದ್ದು ಬರಲಿ ಪರಮೇಶ್ವರನ ದಯೆಯೊಂದಿರಲಿ ಎಂದುಕೊಂಡು ಜೀವನ ಮಾಡುವವರು ಇವರು. ಎರಡನೇ ಚರಣದವರು ಸ್ವಲ್ಪ ಮನೋರಂಜನಾ ಪ್ರವೃತ್ತಿ ಹೊಂದಿರುತ್ತಾರೆ. ಹೀಗಾಗಿ ಎಷ್ಟೇ ಖರ್ಚಾದರೂ ಚಿಂತಿಸುವುದಿಲ್ಲ. ಒಟ್ಟಿನಲ್ಲಿ ತಾನು ಸುಂದರವಾಗಿ ಕಾಣಬೇಕು, ತಾನೂ ಕೂಡ ಸುಂದರವಾಗಿರುವುದರೊಂದಿಗೆ ಸಲುಗೆಯಿರಬೇಕು ಎಂದು ಬಯಸುವ ಮುಗ್ಧ ಮನಸ್ಸಿವರದು. ಮೂರನೇ ಚರಣದವರಲ್ಲಿ ಕೆಲವರು ಕೊಂಚ ವಿಕೃತ ಮನಃಸ್ಥಿತಿ ಹೊಂದಿರುತ್ತಾರೆ ಎನ್ನಲಾಗುತ್ತದೆ. ಹಾಸಿಗೆ ಸುಖದಲ್ಲಿವರಿಗೆ ತುಂಬಾ ಇಷ್ಟವಿರುತ್ತದೆಯಂತೆ. ನಾಲ್ಕನೇ ಚರಣದವರು ಮಾತಿಗೆ ತಕ್ಕಂತೆ ನಡೆದುಕೊಳ್ಳುವವರು. ಇವರ ಮಾತು ಕೂಡ ಅಷ್ಟೆ ಸೊಗಸಾಗಿಯೇ ಇರುತ್ತದೆ. ಮತ್ತೊಬ್ಬರ ಮನಸ್ಸನ್ನು ನೋಯಿಸದಂತೆ ಮಾತನಾಡುವ ಇವರ ಸ್ವಭಾವಕ್ಕೆ ಎಲ್ಲರೂ ಮೆಚ್ಚುತ್ತಿರುತ್ತಾರೆ. ಸಂಸಾರದ ಗುಟ್ಟಿನ ವಿಷಯಗಳನ್ನು ಇವರೊಂದಿಗೆ ಹಂಚಿಕೊಂಡರೆ ಇವರು ಅದನ್ನು ಗುಟ್ಟಿನಂತೆ ತಮ್ಮಲ್ಲೆ ಇಟ್ಟುಕೊಂಡು ಮತ್ತೊಬ್ಬರ ಕಿವಿ ಕಚ್ಚುವುದಿಲ್ಲ. ಅಷ್ಟೊಂದು ನಂಬಿಕಸ್ತರು ಇವರು.

ಯಾವುದಕ್ಕೂ ಈ ನಕ್ಷತ್ರದವರು ತಮ್ಮಲ್ಲಿರುವ ಇನ್ನೂ ಅನೇಕ ಗುಣಗಳನ್ನು ತಮ್ಮ ಜನ್ಮಜಾತಕ ಮೂಲಕ ತಿಳಿದುಕೊಂಡು ಒಳ್ಳೆಯ ಗುಣಗಳನ್ನು ಬೆಳೆಸಿ ಕೆಟ್ಟ ಗುಣಗಳಿದ್ದರೆ ಬಿಡಬೇಕು. ಜನ್ಮಜಾತಕವೆಂದರೆ ಒಂಥರಾ ಜೀವನದ ಪ್ರೊಫೈಲ್ ಇದ್ದಂಗೆ. "ಕಾಲ ಕೆಟ್ಟೋಗಿದೆ ಸಾಮಿ, ಕೆಟ್ಟೋರಿಗೇನೆ ಕಾಲ ಸಾಮಿ ಈಗ ಎಂದರೆ " ಎಲ್ಲದಕ್ಕೂ ಅಂತ್ಯವೆಂಬುದು ಇರುತ್ತದೆ ಆದರೆ ಕೆಟ್ಟದ್ದು ಬೇಗ ಅಂತ್ಯವಾಗುತ್ತದೆ ಒಳ್ಳೆಯತನ ಶಾಶ್ವತ ಎಂಬುದು ಎಲ್ಲರಿಗೂ ಗೊತ್ತಿದೆಯೆನ್ನಬೇಕಾಗುತ್ತದೆ. ಎಲ್ಲದಕ್ಕೂ ಕಾಲವೇ ಉತ್ತರಿಸುತ್ತದೆ. ಆದರೆ ಸ್ವಲ್ಪ ಕಾಯಬೇಕು ಅಷ್ಟೇ.

"ಉತ್ತರಫಾಲ್ಗುಣಿ ನಕ್ಷತ್ರ ವಿಶೇಷ" ಎಂಬುದು ಮುಂದಿನ ಲೇಖನದಲ್ಲಿ. (ಒನ್‌ಇಂಡಿಯಾ ಕನ್ನಡ)

ನಕ್ಷತ್ರ ಟಿಪ್ಸ್ : ಪ್ರೇಮದಲ್ಲಿ ಸೋತಿದ್ದರೆ ಅದನ್ನೇ ದೊಡ್ಡ ವಿಷಯವನ್ನಾಗಿಸಿಕೊಂಡು ಚಿಂತಿಸುತ್ತಿರಬಾರದು ಇವರು.

ದೈವಕೃಪೆಗೆ : ಅನೀತಿಯಿಂದ ಹಣ ಗಳಿಸಿದವರ ಜತೆ ಪಾಲುದಾರಿಕೆ ಮಾಡಬಾರದು. ಮಾಡಿದರೆ ನಿಮ್ಮ ಹಣವೂ ಹೋದಂಗೇನೆ ಎಂದು ತಿಳಿದುಕೊಳ್ಳಿ ಅಷ್ಟೇ.

ಸಂಪಾದಕರ ಮಾತು : ಓದುಗರು, ಸಾಡೇಸಾತಿ ಬಗ್ಗೆ ಹೆಚ್ಚಿನ ಮಾಹಿತಿ ಪಡೆಯಬಯಸಿದ್ದಲ್ಲಿ, ಯಾವುದೇ ತೊಂದರೆಗಳಿಗೆ ಪರಿಹಾರ ಕಂಡುಕೊಳ್ಳಬಯಸಿದ್ದಲ್ಲಿ ಲೇಖಕರಿಗೆ ನೇರವಾಗಿ ಪೋನಾಯಿಸಿ ತಿಳಿದುಕೊಳ್ಳಬಹುದು (ಲೇಖಕರ ಮೊಬೈಲ್ : 94815 22011)

English summary
Know your future through birth star. Astrologer S.S. Nagnurmath says it is possible to know our exact future by studying birth star mentioned in our horoscope. Here astrologer discusses about characteristics of Poorva Phalguni nakshatra people (Leo zodiac signs).
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X