ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೇಷ : ಹೊಸ ವರ್ಷದ ತಿಂಗಳುಗಳ ಫಲ ಮತ್ತು ಪರಿಹಾರ

By ನಾಗನೂರಮಠ ಎಸ್ಎಸ್
|
Google Oneindia Kannada News

ಹೊಸ ವರ್ಷಾರಂಭವು ಈ ರಾಶಿಯವರಿಗೆ ಒಂದಿಷ್ಟು ನೆಮ್ಮದಿ ಮತ್ತು ತೃಪ್ತಿ ತಂದಿದೆ ಈಗಾಗಲೇ. "ಶಿಲ್ಪಿ ಸತ್ತರೂ ಶಿಲೆ ಸಾಯಲ್ಲ, ಕವಿ ಸತ್ತರೂ ಕವಿತೆ ಸಾಯಲ್ಲ" ಎಂಬ ಮಾತಿನಂತೆ ಈ ರಾಶಿಯವರು ಏನೇ ಮಾಡಿದರೂ ಅದು ಅಜರಾಮರವಾಗಿರುತ್ತದೆ. ಅಷ್ಟೊಂದು ಹಠ ಮತ್ತು ಸಿದ್ಧಿ ಹೊಂದಿರುವ ಜನ ಇವರು. ಇರಲಿ, ಇಂತಹ ಗುಣವಿರುವ ಈ ರಾಶಿಯವರು ಈ ವರ್ಷದ ತಿಂಗಳುಗಳ ಫಲ ತಿಳಿದುಕೊಂಡು ಅದರಂತೆ ನಡೆದುಕೊಂಡು ಮೇಲ್ಕಂಡ ಮಾತನ್ನು ಸತ್ಯ ಮಾಡಬೇಕು. ಮಾಡಿದರೆ ಜೀವನ ಪಾವನ ಮತ್ತು ಮನುಷ್ಯ ಜನ್ಮದಿಂದ ಮೋಕ್ಷ ಗ್ಯಾರಂಟಿ ಎನ್ನಬಹುದು.

ಸ್ವಲ್ಪ ಕ್ರೂರ ಬುದ್ಧಿ ಮತ್ತು ಸಿಟ್ಟನ್ನು ಕಡಿಮೆ ಮಾಡಿಕೊಂಡರೆ ಈ ರಾಶಿಯವರಷ್ಟು ಒಳ್ಳೆಯವರೇ ಇಲ್ಲವೆನ್ನಬಹುದು. ಇಂತಹ ಗುಣಗಳನ್ನು ಕಡಿಮೆ ಮಾಡಿಕೊಳ್ಳಬೇಕೆಂದರೆ ಕೆಳಕಂಡ ಕೆಲ ಸುಲಭ ಪರಿಹಾರೋಪಾಯಗಳನ್ನು ಮಾಡಿಕೊಂಡು ಜೀವನವನ್ನು ಇನ್ನಷ್ಟು ಸುಂದರವಾಗಿಸಿಕೊಂಡು ಮನೆಯವರಿಗೆ, ನೆರೆಹೊರೆಯವರಿಗೆ ಪ್ರೀತಿಪಾತ್ರರೆನಿಸಿಕೊಂಡು ಈ ಹೊಸ ವರ್ಷವನ್ನು ಆನಂದದಿಂದ ಕಳೆಯಬಹುದು.

ತಿಂಗಳುಗಳ ಪ್ರಕಾರ ಫಲಗಳು : ಜನವರಿ ತಿಂಗಳಿನ ಮೊದಲರ್ಧದಲ್ಲಿ ಹಣಕಾಸಿನ ಸ್ಥಿತಿ ಉತ್ತಮವಾಗಿರುವುದರಿಂದ ಸಹಜವಾಗಿ ಮನದಲ್ಲಿ ನೆಮ್ಮದಿಯಿರುತ್ತದೆ. ನೀವು ಖುಷಿಯಿಂದಿದ್ದರೆ ಮನೆ ಮಂದಿಯೆಲ್ಲ ಸಂತೋಷದಿಂದಿರುತ್ತಾರೆ. ಹೀಗಾಗಿ ಕೌಟುಂಬಿಕ ಜೀವನ ಸುಖಮಯವಾಗಿರುತ್ತದೆ. ಆದರೆ ಕೆಲಸಗಾರರಿಗೆ ಮಾತ್ರ ಸ್ವಲ್ಪ ಒತ್ತಡ ಜಾಸ್ತಿಯಿರುತ್ತದೆ, ಅನಿವಾರ್ಯ. ದುಡಿಯುವವರಿದ್ದರೆ ಹೆಚ್ಚಿನ ಶ್ರಮ ಹಾಕಬೇಕು. ಮಾಲೀಕರಾಗಿದ್ದರೆ ವ್ಯವಹಾರ ಹೆಚ್ಚಿಸಿಕೊಳ್ಳಲು ಸಮಯವನ್ನು ಹೆಚ್ಚು ಸದುಪಯೋಗಪಡಿಸಿಕೊಳ್ಳಬೇಕು. ಹೊಸ ಯೋಜನೆಗಳನ್ನು ಹಾಕಿಕೊಂಡು ಅದರ ಯಶಸ್ಸಿಗೆ ಶ್ರಮ ಪಡಲಾರಂಭಿಸಬೇಕು. [2016 ವರ್ಷ ಭವಿಷ್ಯ : ಮೇಷ ರಾಶಿಗೆ ಮೊದಲರ್ಧ ಸೂಪರ್]

Astrology : Yearly horoscope 2016 for Aries, problems and solutions

ಇನ್ನು ಮಹಿಳೆಯರಿಗೆ ಮತ್ತು ವಿದ್ಯಾರ್ಥಿಗಳಿಗೆ ತಾಳ್ಮೆ ಮತ್ತು ಸಹನೆ ಹೆಚ್ಚಿಸಿಕೊಳ್ಳುವ ವರ್ಷವಿದು ಎಂಬುದನ್ನು ಮೊದಲೇ ಹೇಳಲಾಗಿದೆ. ಹೀಗಾಗಿ ಎಷ್ಟೇ ಒತ್ತಡಗಳಿದ್ದರೂ ಮಾನಸಿಕವಾಗಿ ಸ್ಥೈರ್ಯ ಕಳೆದುಕೊಳ್ಳದೇ ಆತ್ಮವಿಶ್ವಾಸ ಹೆಚ್ಚಿಸಿಕೊಳ್ಳಲು. ಆಗದೇ ಇದ್ದರೆ ಮನೆಯಲ್ಲಿಯೇ ಪ್ರತಿನಿತ್ಯ ಕನಿಷ್ಠ 15 ನಿಮಿಷ ಯೋಗಾಭ್ಯಾಸ, ಪ್ರಾಣಾಯಾಮ ಅಥವಾ ವಾಕಿಂಗ್ ರೂಢಿಸಿಕೊಂಡು ಜೀವನ ಪರ್ಯಂತ ಪಾಲಿಸಿಕೊಂಡು ಹೋಗಬೇಕು.

ಇನ್ನು ಜನವರಿಯ ಕೊನೆಯಾರ್ಧವು ತುಂಬಾ ನೆಮ್ಮದಿಯುತವಾಗಿರುತ್ತದೆ. ಆದರೆ, ದೂರ ಪ್ರಯಾಣದ ಯೋಜನೆಗಳನ್ನು ಹಾಕಿಕೊಳ್ಳಬೇಕಾದರೆ ಸೂಕ್ತ ಹಣಕಾಸಿನ ವ್ಯವಸ್ಥೆ ಮಾಡಿಕೊಳ್ಳಬೇಕು. ದುಡಿದು ಉಳಿಸಿದ ದುಡ್ಡಿನಲ್ಲೇ ಇಂತಹ ಕಾರ್ಯಗಳನ್ನು ಮಾಡಬೇಕು. ಸಿಗುತ್ತದೆಯೆಂದು ಸಾಲ-ಸೋಲ ಮಾಡಿಕೊಂಡು ಪ್ರಯಾಣ ಮಾಡುವ ಅವಶ್ಯಕತೆಯಿಲ್ಲ. ಮಡಿಕೇರಿ ಕಡೆಗೆ ಇರುವಂತಹ ಪ್ರಕೃತಿ ಸೌಂದರ್ಯ ಹೊಂದಿರುವ ಪ್ರದೇಶಗಳಿಗೆ ಭೇಟಿ ಕೊಟ್ಟರೆ ಒಳ್ಳೆಯದು. ಕುಟುಂಬದವರೋ ಅಥವಾ ಪ್ರೀತಿಪಾತ್ರ ಸ್ನೇಹಿತರೋ ಜತೆಗಿದ್ದರೆ ಒಳ್ಳೆಯದು.

ಕಚೇರಿಯಲ್ಲಿ ಕೆಲಸ ಮಾಡುವವರು ಅಧಿಕಾರಿಗಳ ಮಾತಿಗೆ ಕಿಂಚಿತ್ತೂ ಅವಮರ್ಯಾದೆ ಮಾಡದೇ ಕೊಟ್ಟ ಕೆಲಸವನ್ನು ಶ್ರದ್ಧೆಯಿಂದ ಮಾಡಿ ಅವರಿಗೂ ಮತ್ತು ನಿಮಗೂ ಹೆಸರು ಮಾಡಿಕೊಳ್ಳಬೇಕು.

ಫೆಬ್ರವರಿಯಿಂದ ಅದೃಷ್ಟದ ದಿನಗಳಾರಂಭವಾಗುವುದರಿಂದ ಭವಿಷ್ಯದ ಯೋಜನೆಗಾಗಿ ಹಣಕಾಸಿನ ವ್ಯವಸ್ಥೆ ಮಾಡಿಕೊಳ್ಳುವ ಉಪಾಯಗಳನ್ನು ತಿಳಿದುಕೊಳ್ಳಬೇಕು. ಆಸ್ತಿ ಮಾಡಿಕೊಳ್ಳಬೇಕೆಂದರೆ ಅಥವಾ ಹೂಡಿಕೆ ಮಾಡಬೇಕೆಂದರೆ ಕಾನೂನು ರೀತ್ಯ ವಿಚಾರಿಸಿ ಹಣ ಹೂಡಬೇಕು. ದೈಹಿಕವಾಗಿ ಹೆಚ್ಚಿನ ಶ್ರಮ ಪಡಲು ಪ್ರಯತ್ನಿಸಬೇಕು. ಅನವಶ್ಯಕ ಕೆಲಸಗಳನ್ನು ಅನರ್ಹ ವ್ಯಕ್ತಿಗಳ ಸ್ನೇಹವನ್ನು ಬಿಟ್ಟು, ಸಮಯವನ್ನು ಒಂಚೂರು ವ್ಯರ್ಥ ಮಾಡದೇ ಪ್ರತಿಕ್ಷಣವನ್ನೂ ಸುವಿನಿಯೋಗಿಸಿಕೊಂಡು ಗುಣದಿಂದ ಮತ್ತು ಹಣದಿಂದ ಶ್ರೀಮಂತರಾಗಲು ಸಿದ್ಧರಾಗಬೇಕು.

ಅಂತಿಂಥ ವ್ಯಕ್ತಿಗಳೊಂದಿಗೆ ಹಣದಾಸೆಗೆ ವ್ಯವಹಾರ ಮಾಡಿಕೊಂಡರೆ ಪ್ರತಿನಿತ್ಯ ಕನಸಿನಲ್ಲಿ ಕಬ್ಬಿಣದ ಕಂಬಿ ಕಾಣಿಸಲಾರಂಭಿಸುತ್ತದೆ. ಹೀಗಾಗಿ ಹುಷಾರಾಗಿರವುದನ್ನು ಕಲಿಯಬೇಕು. ಅಮವಾಸ್ಯೆ ಮತ್ತು ಹುಣ್ಣಿಮೆಯ ದಿನಗಳಂದು ಆದಷ್ಟು ಶಾಂತ ರೀತಿಯಿಂದ ವರ್ತಿಸಬೇಕು. ಏಕೆಂದರೆ ನಮ್ಮ ಕಡೆಗೆ "ಹೊಕ್ಕು ಹುಣ್ಣಿಮೆ ಮಾಡಬೇಕು, ಮಿಕ್ಕಿ ಅಮವಾಸ್ಯೆ ಮಾಡಬೇಕು" ಎಂಬ ಮಾತಿದೆ. ಇದರರ್ಥ ಹುಣ್ಣಿಮೆ ಬರುವ ಮುಂಚೆಯೇ ಮತ್ತು ಅಮವಾಸ್ಯೆ ಮುಗಿದ ಮೇಲೆಯೂ ಮಾನಸಿಕ ಸ್ಥಿರತೆಯನ್ನು ಕಾಯ್ದುಕೊಳ್ಳಬೇಕು.

ಏನೇ ಮಾಡಿದರೂ, ಕೆಲಸ, ಹಣ ಮತ್ತು ಹೆಸರು ಆಗಬೇಕು ಅಂತಾ ಯೋಜನೆಗಳನ್ನು ಹಾಕಿಕೊಂಡು ಯಶಸ್ಸು ಪಡೆದುಕೊಳ್ಳಬೇಕು. ಫೆಬ್ರವರಿ ಕೊನೆಯಾರ್ಧವು ಇದೇ ರೀತಿ ಮುಂದುವರೆಯುತ್ತದೆ. ಆದರೆ, ತಪ್ಪು ಮಾಡದೇ ಜೀವನ ಮಾಡಿಕೊಂಡರೆ ಮಾತ್ರ, ಇಲ್ಲಾಂದ್ರೆ, "ಆಯಿ ಶಪಥ್ ಭಾವು" ಅಂದ್ರು ಯಾರೂ ಕೇಳಂಗಿಲ್ಲ ಎಚ್ಚರಿಕೆಯಿರಲಿ.

ಮಾರ್ಚ್ ತಿಂಗಳಿನ ಮೊದಲಾರ್ಧ ಹಣದ ವಿಷಯದಲ್ಲಿ ಭಾರಿ ಲಾಭದ ಸಮಯವಾಗಿರುತ್ತದೆ. ಹೀಗಾಗಿ ಹಣದ ವ್ಯವಹಾರ ಮಾಡಲು ಸೂಕ್ತ ಈ ಸಮಯ. ಈ ಬಗ್ಗೆ ಇಷ್ಟದೇವರನ್ನು ಈಗಿನಿಂದಲೇ ಪ್ರಾರ್ಥಿಸಿಕೊಳ್ಳಬೇಕು. ಆದರೆ, "ದೇವರಿಗೆ ಬರ್ತೇನೆ ಅಂತಾ, ಬಡವರಿಗೆ ಕೊಡ್ತೇನೆ" ಅಂತಾ ಹೇಳಬಾರದು. ಹೇಳಿದರೆ ಮಾಡದೇ ಬಿಡಬಾರದು ಇದೊಂದು ವಿಷಯ ಗಮನದಲ್ಲಿಟ್ಟುಕೊಳ್ಳಬೇಕು. ಹಣ ಬಂದಿದೆ ಎಂದು "ರೊಕ್ಕಾ ಇದ್ದಾಗ ದುಂದು, ಇಲ್ಲದಾಗ ಬಂದ್" ಎಂಬ ಪರಿಸ್ಥಿತಿ ಎದುರಾಗದಂತೆ ನೋಡಿಕೊಳ್ಳಬೇಕು. ಪೈಸೆಗೆ ಪೈಸೆ ಲೆಕ್ಕವಿಟ್ಟುಕೊಂಡು ಹಣದ ವ್ಯವಹಾರ ಮಾಡಲಾರಂಭಿಸಬೇಕು ಈ ವರ್ಷ.

ಇದೇ ಈ ತಿಂಗಳಿನ ಕೊನೆಯಾರ್ಧದಲ್ಲಿ ಮನೆ ಹಿರಿಯ ಸದಸ್ಯರ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿಕೊಳ್ಳಬೇಕು. ಅವರ ಆರೋಗ್ಯದಲ್ಲಿ ಕಿಂಚಿತ್ತೂ ಏರುಪೇರಾದರೂ ಕೂಡಲೇ ಸೂಕ್ತ ಚಿಕಿತ್ಸೆ ಕೊಡಿಸಬೇಕು. ಅನುಕೂಲ ಮಾಡಿಕೊಂಡು ನಿಮ್ಮನ್ನೂ ಸೇರಿಸಿಕೊಂಡು ಮನೆಯವರೆಲ್ಲರಿಗೂ ಆರೋಗ್ಯ ವಿಮೆ ಮಾಡಿಸಿಕೊಳ್ಳಬೇಕು ತಪ್ಪಿಸದೇ ಈ ಸಮಯದಲ್ಲಿ.

ಇನ್ನು ಏಪ್ರಿಲ್ ತಿಂಗಳು ಪೂರ್ತಿ ಹಣದ ವಿಷಯದಲ್ಲಿ ನೆಮ್ಮದಿಯಿರುತ್ತದೆ. ಸಾಧ್ಯವಾದಷ್ಟು ದೈವೀ ಕಾರ್ಯದಲ್ಲಿ ಪಾಲ್ಗೊಳ್ಳುವುದನ್ನು ರೂಢಿಸಿಕೊಳ್ಳಬೇಕು. ಆದರೆ, ಒಬ್ಬರೇ ಹೋಗದೇ ಮನೆಮಂದಿಯೆಲ್ಲ ಕನಿಷ್ಠ ವಾರಕ್ಕೊಮ್ಮೆಯಾದರೂ ಕನಿಷ್ಠ ಒಂದು ಗಂಟೆ ದೈವಾರಾಧನೆಗೆ ಮೀಸಲಿಡಬೇಕು. ಹೆಚ್ಚಿನ ಮಾನಸಿಕ ತೊಂದರೆಗಳು ಈ ಸಮಯದಲ್ಲಿ ಕಾಣಿಸುವುದರಿಂದ ಯಾವುದೇ ಅನವಶ್ಯಕ ಜಂಜಡಗಳಿಗೆ ಸಿಲುಕಿಕೊಳ್ಳದೇ ಎಚ್ಚರಿಕೆಯಿಂದ ಜೀವನ ನಡೆಸಲು ಯತ್ನಿಸಬೇಕು. ಕುಟುಂಬದವರೊಂದಿಗೆ ಹೊಂದಾಣಿಕೆಯನ್ನು ಹೆಚ್ಚಿಸಿಕೊಂಡು ಅವರ ಪ್ರೀತಿ-ವಿಶ್ವಾಸ ಗಳಿಸಿಕೊಳ್ಳಬೇಕು.

ಮೇ ತಿಂಗಳಂತೂ ಯಶಸ್ಸಿನ ಮೆಟ್ಟಿಲೇರುತ್ತಿರುವ ಅನುಭವ ಮೂಡಲಾರಂಭಿಸುತ್ತದೆ. ಒಂಥರಾ ಹೊಸ ಬಟ್ಟೆ ಹಾಕಿಕೊಂಡಾಗ ಬರುವ ಅನುಭವ ಮತ್ತು ಮಾನಸಿಕ ನೆಮ್ಮದಿ ಈ ತಿಂಗಳು ಪೂರ್ತಿ ಇರುತ್ತದೆ. ಹೀಗಾಗಿ ಜೀವನ ಸಂತಸದಿಂದ ಕಳೆಯುತ್ತದೆ. ವಾಹನಗಳ ವಿಷಯದಲ್ಲಿ ಮಾತ್ರ ಈ ಸಮಯದಲ್ಲಿ ಜಾಗೃತರಾಗಿಬೇಕು. ಮುಖ್ಯವಾದ ಮತ್ತು ಕೌಟುಂಬಿಕ ಕೆಲಸಗಳನ್ನು ಶುಭವಾರಗಳಲ್ಲಿಯೇ ಮಾಡಿಕೊಳ್ಳಬೇಕು ಯಶಸ್ವಿಯಾಗಬೇಕೆಂದರೆ.

ಕುಟುಂಬದಲ್ಲಿ ಜಗಳಗಳು ಅಥವಾ ವೈಮನಸ್ಸುಗಳಿದ್ದರೆ ಎಲ್ಲರೊಂದಿಗೂ ಹೇಳಿಕೊಂಡು ತಿರುಗದೇ ಮನಸ್ಸಿನಲ್ಲಿಯೇ ಇಟ್ಟುಕೊಂಡು ಅವುಗಳನ್ನು ಪರಿಹರಿಸುವದನ್ನು ಹೇಗೆ ಎಂಬುದನ್ನು ಯೋಚಿಸಿಕೊಳ್ಳಬೇಕು. ಏಕೆಂದರೆ ಸ್ನೇಹಿತರೇ ಈ ಸಮಯದಲ್ಲಿ ವೈರತ್ವ ಸಾಧಿಸಿಕೊಳ್ಳುವದರಿಂದ ನಾವೇ ಏಕೆ ನಮ್ಮ ಸಮಸ್ಯೆಗಳನ್ನು ಹೇಳಿಕೊಂಡು ಸಿಕ್ಕಿ ಹಾಕಿಕೊಳ್ಳಬೇಕು ಎಂಬುದನ್ನು ತಿಳಿದುಕೊಳ್ಳಬೇಕು ಬುದ್ಧಿವಂತರಾಗಿದ್ದರೆ.

ಜೂನ್ ಮತ್ತು ಜುಲೈ ತಿಂಗಳುಗಳು ಸ್ವಲ್ಪ ಸಿಟ್ಟನ್ನು ಹಿಡಿತದಲ್ಲಿಟ್ಟುಕೊಂಡು ಏನೇ ಬಂದರೂ ಸಮಾಧಾನ ಚಿತ್ತದಿಂದ ಎದುರಿಸಬೇಕು. ಏಕೆಂದರೆ ಸಿಟ್ಟು ಹೆಂಗೆ ಬರುತ್ತದೆ ಗೊತ್ತಾಗಲ್ಲ ಆದರೆ ಬಂದ ಸಿಟ್ಟನ್ನು ನಿಯಂತ್ರಿಸಿಕೊಳ್ಳಬೇಕು. ಸಿನಿಮಾ ಶುರುವಾದ ಕೂಡಲೇ ಹೀರೋ ಬರುತ್ತಿದ್ದಂತೆಯೇ ಕರೆಂಟ್ ಹೋದರೆ ಟಾಕೀಜ್ ನಲ್ಲಿರುವ ಅಭಿಮಾನಿಗಳು ಹೇಗೆ ಸಿಳ್ಳೆ-ಕೇಕೆ ಹಾಕುತ್ತಾರೋ ಅದೂ ಕೂಡ ಸಿಟ್ಟೇ. ಆದರೆ, ಕರೆಂಟ್ ಬಂದ ಕೂಡಲೇ ಸಿನೆಮಾ ಆರಂಭವಾಗುತ್ತದೆ. ಆಗ ಸಹಜವಾಗಿ ಸಿಟ್ಟು ಮಾಯವಾಗಿ ಆನಂದದಿಂದ ಸಿನೆಮಾ ನೋಡಲಾರಂಭಿಸುತ್ತಾರೆ. ಅದೇ ರೀತಿ ಜೀವನದಲ್ಲಿ ಸಿಟ್ಟು ಬರುತ್ತಿದ್ದಂತೆಯೇ ಕೂಡಲೇ ಆನಂದವನ್ನು ಹೊಂದಿಕೊಳ್ಳಲು ಪ್ರಯತ್ನಿಸಬೇಕು. ವಿದ್ಯಾರ್ಥಿಗಳಿಗೆ ಮತ್ತು ಮಹಿಳೆಯರಿಗೆ ಈ ಸಮಯ ಉತ್ತಮವಾಗಿರುತ್ತದೆ. ಆದರೆ, ಮಾತಿನಲ್ಲಿ ಹಿಡಿತ ಹೊಂದಿಕೊಂಡಿರಬೇಕು. ನಾಲಿಗೆ ಇದೆ ಎಂದು ಬೇಕಾಬಿಟ್ಟಿ ಮಾತಾಡದೇ ಪ್ರತಿಯೊಬ್ಬರೊಂದಿಗೆ ಸೌಹಾರ್ದತೆಯಿಂದ ವರ್ತಿಸಬೇಕು. ಹಣದ ಸ್ಥಿತಿ ನೆಮ್ಮದಿಯುತವಾಗಿರುತ್ತದೆ. ಚಿಂತೆ ಮಾಡದೇ ಇರುವುದು ಆರೋಗ್ಯಕ್ಕೂ ಒಳ್ಳೆಯದು.

ಆಗಸ್ಟ್ ಮತ್ತು ಸೆಪ್ಟೆಂಬರ್ ತಿಂಗಳುಗಳು ಮಹತ್ವದ ಬದಲಾವಣೆಯ ಸಮಯವಾಗಿದೆ. ಒಂಥರಾ ಜೀವನದ ಹೊಸ ಪರ್ವವೇ ಆರಂಭವಾದಂತಾಗುತ್ತದೆ. ಎಲ್ಲ ಕೆಲಸಗಳಲ್ಲೂ ವಿಳಂಬವೆನಿಸಿಕೊಂಡರು ಕೆಲಸಗಳಾಗುತ್ತಿರುತ್ತವೆ. ಆದರೆ ಸಮಾಧಾನದಿಂದಿರಬೇಕು. ಹಣವನ್ನು ಅತೀ ಅವಶ್ಯವಿದ್ದರೆ ಮಾತ್ರ ಬಳಸಬೇಕು. ಕೆಲಸದಲ್ಲಿರುವವರಿಗೆ ಹೊಸ ಉದ್ಯೋಗದ ಅವಕಾಶ ಬಂದರೆ ಅಥವಾ ಬೇರೆಡೆ ವರ್ಗಾವಣೆ ಆದರೆ ಅಥವಾ ಇದ್ದಲ್ಲಿಯೇ ಹೆಚ್ಚಿನ ಜವಾಬ್ದಾರಿ ಕೊಡುತ್ತೇನೆ ಎಂದರೆ ಸುತಾರಾಂ ಇಲ್ಲ ಎನ್ನದೇ ಒಪ್ಪಿಕೊಳ್ಳಬೇಕು. ಯಾರೊಂದಿಗೂ ಅನವಶ್ಯಕವಾಗಿ ಚರ್ಚೆ ಮಾಡಬಾರದು. ಬೇರೆಯವರ ವಿಷಯಕ್ಕಂತೂ ತಲೆ ಹಾಕಲೇಬಾರದು. ಅತಿಯಾದ ರಹಸ್ಯಗಳನ್ನು ಕಾಪಾಡಿಕೊಳ್ಳಬೇಕು. ಸಹೋದ್ಯೋಗಿಗಳೊಂದಿಗೆ ಸುಮಧುರ ಬಾಂಧವ್ಯ ಇಟ್ಟುಕೊಂಡಿರಬೇಕು.

ಅಕ್ಟೋಬರ್ ಮತ್ತು ನವೆಂಬರ್ ತಿಂಗಳಿನಲ್ಲಿ ಮದುವೆಯ ನಿರೀಕ್ಷೆಯಲ್ಲಿದ್ದವರಿಗೆ ಶುಭಸುದ್ದಿ ಸಿಗುತ್ತದೆ. ಹೆಚ್ಚು ಮನಸ್ಸು ಆಧ್ಯಾತ್ಮಿಕತೆಯತ್ತ ವಾಲುವುದರಿಂದ ಇದು ಜೀವನಕ್ಕೆ ಅತ್ಯುತ್ತಮ ಎಂಬುದು ತಿಳಿದುಕೊಳ್ಳುವುದು ಮುಖ್ಯ. ಯಾವುದೇ ವಿಷಯದಲ್ಲಿ ಅಪರಿಚಿತರಿಗೆ ಮತ್ತು ಶತ್ರುತ್ವ ಹೊಂದಿದವರಿಗೆ ಜಾಮೀನು ಆಗುವುದು ಬೇಡ. ಇದೊಂಥರಾ ಹಗ್ಗ ಕೊಟ್ಟು ಕೈ ಕಟ್ಟಿಸಿಕೊಂಡಂತೆ ಮುಂದಾಗಬಹುದು ಎಚ್ಚರಿಕೆಯಿರಲಿ.

ಡಿಸೆಂಬರ್ ತಿಂಗಳು ಆರೋಗ್ಯ ಹದಗೆಡುವ ಸಮಯವಾಗಿರುತ್ತದೆ. ವರ್ಷ ಪೂರ್ತಿ ವಾಕಿಂಗ್ ಮತ್ತು ಯೋಗಾಭ್ಯಾಸ, ಪ್ರಾಣಾಯಾಮ ಮಾಡಿರದಿದ್ದರೆ ನೋವು ಅನುಭವಿಸುವ ಸಮಯವಿದು. ಆರೋಗ್ಯಕ್ಕಾಗಿ ಸಿಕ್ಕಾಪಟ್ಟೆ ಖರ್ಷು ಮಾಡಬೇಕಾಗಿ ಬರಬಹುದಾಗಿದ್ದರಿಂದ ಆರೋಗ್ಯ ವಿಮೆ ಮಾಡಿಸದಿದ್ದರೆ ಸಾಲದ ಮೊರೆ ಹೋಗಬೇಕಾಗುತ್ತದೆ ನೆನಪಿರಲಿ. ದುಶ್ಚಟಗಳನ್ನು ವರ್ಷಾರಂಭದಿಂದ ಬಿಟ್ಟಿದ್ದರೆ ಒಳ್ಳೆಯದು. ಇಲ್ಲವಾದರೆ ಆಸ್ಪತ್ರೆಗೆ ಅಲೆದಾಡುವಂತಾಗುತ್ತದೆ ಎಂಬುದನ್ನು ಮೊದಲೇ ನೋಟ್ ಮಾಡಿಟ್ಟುಕೊಳ್ಳಬೇಕು. ಹಣದ ವಿಷಯದಲ್ಲಿ ನೆಮ್ಮದಿಯಿದ್ದರೂ ಮುಂಬರುವ ಹೊಸ ವರ್ಷಕ್ಕೆ ಇರಲಿ ಎಂದುಕೊಂಡು ಒಂದಿಷ್ಟು ಉಳಿತಾಯ ಮಾಡಿಕೊಂಡಿರಬೇಕು. ಕೈ ಖಾಲಿ ಇಟ್ಟುಕೊಳ್ಳದೇ ಒಂದಿಷ್ಟು ಹಣವನ್ನು ಮಿಕ್ಕಿರಿಸಿಕೊಂಡಿರಬೇಕು.

ಒಟ್ಟಿನಲ್ಲಿ ವರ್ಷಪೂರ್ತಿ ಅರ್ಧ ಸಿಹಿ ಮತ್ತು ಅರ್ಧ ಕಹಿ ಇರುವುದರಿಂದ ಎರಡೂ ಇದ್ದರೆ ಮಾತ್ರ ಜೀವನದ ಸವಿಯನ್ನು ಅನುಭವಿಸಲು ಸಾಧ್ಯ ಎಂಬ ಮಾತನ್ನು ನೆನಪಿಸಿಕೊಂಡು ಈ ರಾಶಿಯವರು ಹೊಸ ವರ್ಷವನ್ನಾರಂಭಿಸಿಬೇಕು ಹುರುಪಿನಿಂದ.

ಒಂದಿಷ್ಟು ಪರಿಹಾರಗಳು : ಶನಿದೇವಾಲಯದಲ್ಲಿ ಎಳ್ಳೆಣ್ಣೆ ಬತ್ತಿ ಹಚ್ಚುವುದು ಮತ್ತು ಎಳ್ಳೆಣ್ಣೆ ಕೊಡುವುದು, ಬಡವರಿಗೆ, ಅನಾಥರಿಗೆ, ವೃದ್ಧರಿಗೆ, ಅಂಧರಿಗೆ, ಅಂಗವಿಕಲರಿಗೆ, ಅನ್ನದಾಸೋಹದ ಸ್ಥಳಗಳಿಗೆ ದುಡಿದು ಉಳಿಸಿದ ದುಡ್ಡಿನಲ್ಲಿ ಒಂಚೂರು ಕೊಡಬೇಕು.

ಯಾವತ್ತೂ ಶಂಭೋಲಿಂಗನಾರಾಧನೆಯನ್ನು ಆರೋಗ್ಯಕ್ಕಾಗಿ, ಗಣಪನನ್ನು ಸಂಕಷ್ಟ ಪರಿಹಾರಕ್ಕಾಗಿ, ಹನುಮನನ್ನು ಧೈರ್ಯಕ್ಕಾಗಿ, ವೇಂಕಪ್ಪನನ್ನು ಆರ್ಥಿಕ ಸಬಲತೆಗಾಗಿ, ದುರ್ಗಾದೇವಿಯನ್ನು ದುಷ್ಟರಿಂದ ಮತ್ತು ಕೆಟ್ಟವರಿಂದ ರಕ್ಷಿಸಿಕೊಳ್ಳಲು ಹಾಗೂ ದತ್ತಾತ್ರೇಯ ಮತ್ತು ರಾಘವೇಂದ್ರರನ್ನು ಒಳ್ಳೆಯ ಮನಸ್ಸಿಗಾಗಿ ಆರಾಧನೆ ಮಾಡುತ್ತಲೇ ಇರಬೇಕು ತಪ್ಪಿಸದೇ.

ಪ್ರತಿ ದಿನ ದೇವಾಲಯಕ್ಕೆ ಹೋಗಲೇ ಬೇಕಂತಿಲ್ಲ. ಮನೆಯಲ್ಲಿಯೇ ಕನಿಷ್ಠ ಒಂದ್ಹತ್ತು ನಿಮಿಷ ದೇವರಿಗಾಗಿ ಮೀಸಲಿಡಬೇಕು. ದೇವಾಲಯದಲ್ಲಿ ಕಾಣಿಕೆಯನ್ನು ಹುಂಡಿಯಲ್ಲಿಯೇ ಹಾಕಬೇಕು. ಅಪ್ಪಿತಪ್ಪಿಯೂ ಭಿಕ್ಷುಕರಿಗೆ ಭಿಕ್ಷೆಯನ್ನು ಹಾಕಬಾರದು. ಹಾಕಲೇಬೇಕೆನಿಸಿದರೆ ಹಣದ ಬದಲು ತಿನ್ನಲು ಏನಾದರೂ ಕೊಡಿಸಿ ಸಾಕು. ಭಿಕ್ಷೆ ಹಾಕುವುದೊಂದು ಪಾಪ ಎಂಬುದನ್ನು ನೆನಪಿಟ್ಟುಕೊಳ್ಳಬೇಕು. ಭಿಕ್ಷೆ ಹಾಕಿ ಪುಣ್ಯ ಕಟ್ಟಿಕೊಳ್ಳುತ್ತಿದ್ದೇನೆ ಎಂದುಕೊಳ್ಳುವುದು ತಪ್ಪು ಕಲ್ಪನೆ ಗೊತ್ತಿರಲಿ.

ಮುಂದಿನ ಲೇಖನದಲ್ಲಿ : ವೃಷಭ ರಾಶಿಯ 2016 ವರ್ಷ ಫಲ ಹೀಗಿದೆ.

English summary
Astrology : Yearly horoscope 2016. Wonderful year is ahead of Aries Zodiac sign people. But they should change their lifestyle to eat the fruits of hard work. We can prepare better for our future and lead happy life by studying our horoscope and knowing yearly predictions in advance. Astrologer SS Naganurmath presents Yearly astrology 2016 according to Zodiac Signs.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X