• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಜ್ಯೋತಿಷ್ಯ ವಿಶ್ಲೇಷಣೆ: ಈ 'ಪ್ರತಿಷ್ಠಿತ' ಕ್ಷೇತ್ರಗಳಲ್ಲಿ ಯಾರು ಗೆಲ್ಲಬಹುದು?

By ಕಬ್ಯಾಡಿ ಜಯರಾಮಾಚಾರ್ಯ
|
   Lok Sabha Elections 2019 : ಈ 5 ಪ್ರತಿಷ್ಠಿತ ಕ್ಷೇತ್ರಗಳಲ್ಲಿ ಗೆಲುವು ಯಾರಿಗೆ? ಜ್ಯೋತಿಷ್ಯ ವಿಶ್ಲೇಷಣೆ

   ಯುಗಾದಿ ಆರಂಭದಿಂದಲೇ ಲೋಕಸಭಾ ಚುನಾವಣೆ ಚಟುವಟಿಕೆಗಳು ಕಾವೇರಿವೆ. ಏಪ್ರಿಲ್ ಹನ್ನೊಂದನೇ ತಾರೀಕಿನಿಂದ ಆರಂಭವಾಗುವ ಮೊದಲ ಹಂತದ ಮತದಾನ ಪ್ರಕ್ರಿಯೆ ಏಳು ಹಂತಗಳಲ್ಲಿ ನಡೆದು, ಮೇ ಹತ್ತೊಂಬತ್ತನೇ ತಾರೀಕು ಕೊನೆ ಆಗುತ್ತದೆ. ಮೇ ಇಪ್ಪತ್ಮೂರನೇ ತಾರೀಕು ಫಲಿತಾಂಶ ಬರುತ್ತದೆ.

   ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

   ಇಡೀ ದೇಶದಲ್ಲೇ ಯಾವ ಪಕ್ಷ ಅಧಿಕಾರ ಹಿಡಿಯಬಹುದು? ಯಾರಿಗೆ ಮುಂದಿನ ಚುಕ್ಕಾಣಿ ಎಂಬ ಪ್ರಶ್ನೆಗಳು ಇದ್ದರೂ ಕರ್ನಾಟಕದ ಇಪ್ಪತ್ತೆಂಟು ಲೋಕಸಭಾ ಕ್ಷೇತ್ರದಲ್ಲಿ ಬಹಳ ಕುತೂಹಲ ಮೂಡಿಸಿರುವ ಐದು ಸ್ಥಾನಗಳ ಬಗ್ಗೆ ಜ್ಯೋತಿಷ್ಯ ರೀತಿಯಲ್ಲಿ ವಿಶ್ಲೇಷಣೆ ಮಾಡಲಾಗುತ್ತಿದೆ. ಈ ಐದು ಕ್ಷೇತ್ರಗಳಲ್ಲಿ ಯಾರಿಗೆ ಅನುಕೂಲಕರ ಸನ್ನಿವೇಶ ಇದೆ ಎಂಬುದರ ಬಗ್ಗೆ ತುಲನಾತ್ಮಕ ಜಾತಕ ವಿಮರ್ಶೆ ಇಲ್ಲಿದೆ.

   'ಆ ಮೂರು ಕ್ಷೇತ್ರ'ಗಳಲ್ಲಿ ಯಾರಿಗೆ ಮುನ್ನಡೆ ಸಿಗಬಹುದು, ಯಾರು ಫೇವರಿಟ್?

   ಮಂಡ್ಯದಲ್ಲಿ ಕಾಂಗ್ರೆಸ್ ಬೆಂಬಲಿತ ಜೆಡಿಎಸ್ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ವರ್ಸಸ್ ಸುಮಲತಾ, ಬೆಂಗಳೂರು ಉತ್ತರದಲ್ಲಿ ಬಿಜೆಪಿಯ ಡಿ.ವಿ.ಸದಾನಂದ ಗೌಡ ವರ್ಸಸ್ ಕಾಂಗ್ರೆಸ್ ನ ಕೃಷ್ಣ ಬೈರೇಗೌಡ, ಬೆಂಗಳೂರು ದಕ್ಷಿಣದಲ್ಲಿ ಕಾಂಗ್ರೆಸ್ ನ ಬಿ.ಕೆ.ಹರಿಪ್ರಸಾದ್ ವರ್ಸಸ್ ಬಿಜೆಪಿಯ ತೇಜಸ್ವಿ ಸೂರ್ಯ, ಹಾಸನದಲ್ಲಿ ಜೆಡಿಎಸ್ ನ ಪ್ರಜ್ವಲ್ ರೇವಣ್ಣ ವರ್ಸಸ್ ಬಿಜೆಪಿಯ ಎ.ಮಂಜು ಹಾಗೂ ತುಮಕೂರಿನಲ್ಲಿ ಜೆಡಿಎಸ್ ನ ಎಚ್.ಡಿ.ದೇವೇಗೌಡ ವರ್ಸಸ್ ಬಿಜೆಪಿಯ ಜಿ.ಎಸ್.ಬಸವರಾಜ್ ಮಧ್ಯೆ ಹೋರಾಟವಿದೆ.

   ಈ ಎಲ್ಲ ಮುಖಂಡರ ಜಾತಕಗಳನ್ನು ವಿಮರ್ಶೆ ಮಾಡಿ, ಈ ಭವಿಷ್ಯ ನುಡಿಯಲಾಗುತ್ತಿದೆ. ಅದಕ್ಕೂ ಮುನ್ನ ಒಂದು ವಿಷಯ ಸ್ಪಷ್ಟಪಡಿಸಬೇಕು: ಇವರ ಜಾತಕವನ್ನು ಇಂಟರ್ ನೆಟ್ ನಲ್ಲಿ ಲಭ್ಯವಿರುವ ಮಾಹಿತಿ ಮೂಲಕ ರೂಪಿಸಲಾಗಿದೆ. ಫಲಾಫಲ ಕೂಡ ಅದರ ಆಧಾರದಲ್ಲೇ ಹೇಳಲಾಗಿದೆ.

    ಮಂಡ್ಯ ಲೋಕಸಭಾ ಕ್ಷೇತ್ರ

   ಮಂಡ್ಯ ಲೋಕಸಭಾ ಕ್ಷೇತ್ರ

   ಈ ಕ್ಷೇತ್ರದಲ್ಲಿ ಪ್ರಮುಖ ಸ್ಪರ್ಧೆ ಏರ್ಪಡಬಹುದು ಎಂದು ನಿರೀಕ್ಷಿಸುತ್ತಿರುವ ನಿಖಿಲ್ ಹಾಗೂ ಸುಮಲತಾ ಇಬ್ಬರದೂ ಅನೂರಾಧಾ ನಕ್ಷತ್ರ, ವೃಶ್ಚಿಕ ರಾಶಿ. ಆದ್ದರಿಂದ ಗೋಚಾರ ರೀತಿಯ ಗ್ರಹ ಬಲಾಬಲ ಇಬ್ಬರಿಗೂ ಒಂದೇ ರೀತಿಯಲ್ಲಿ ಇದೆ. ಇಬ್ಬರಿಗೂ ಗುರು ಅನುಕೂಲನಾಗಿ ಇರುತ್ತಾನೆ. ಇಬ್ಬರಿಗೂ ಏಳೂವರೆ ವರ್ಷದ ಸಾಡೇಸಾತ್ ಕೊನೆ ಪಾದದಲ್ಲಿದೆ. ದ್ವಿತೀಯದಲ್ಲಿ ಕೇತು ಹಾಗೂ ಅಷ್ಟಮದಲ್ಲಿ ರಾಹು ತಮ್ಮದೇ ಪ್ರಭಾವ ಬೀರುತ್ತಾರೆ. ಹೀಗಿದ್ದಾಗ ಜನ್ಮ ಜಾತಕದಲ್ಲಿ ಗ್ರಹ ಸ್ಥಿತಿಗಳ ಆಧಾರದಲ್ಲಿ ಫಲಾಫಲ ಹೇಳಬೇಕಾಗುತ್ತದೆ. ಸುಮಲತಾ ಅವರ ಜಾತಕದಲ್ಲಿ ಬುಧನು ಉಚ್ಚನಾಗಿದ್ದಾನೆ. ಅತ ಸ್ವಕ್ಷೇತ್ರದಲ್ಲೂ ಇದ್ದು, ಉಚ್ಚ ಸ್ಥಾನದಲ್ಲೂ ಇದ್ದಾನೆ. ಕುಜನ ಯೋಗ ಫಲದಲ್ಲಿ ಇದ್ದಾನೆ. ಗುರುವು ಬಲಿಷ್ಠನಾಗಿ ಸ್ವಕ್ಷೇತ್ರದಲ್ಲಿ ಇದ್ದಾನೆ. ಶುಕ್ರನು ರಾಜಕೀಯವಾಗಿ ಬಲ ತುಂಬುವಂತೆ ರವಿ ಒಟ್ಟಿಗೆ ಇದ್ದರೂ ಶುಭ ಫಲ ನೀಡುವ ಸ್ಥಿತಿಯಲ್ಲಿ ಇದ್ದಾನೆ. ಚಂದ್ರ ಸ್ಥಾನದ ಮೂಲಕ ಪರಾಮರ್ಶಿಸಿದಾಗ ಜನನ ಕಾಲದ ಜಾತಕ ಅನುಕೂಲ ನಿಖಿಲ್ ಅವರಿಗಿಂತ ಸುಮಲತಾ ಅವರಿಗೆ ಹೆಚ್ಚಿಗೆ ಇದೆ.

   ಇದರ ಜತೆಗೆ ಸುಮಲತಾ ಅವರ ಜಾತಕ ಫಲದ ಹೆಚ್ಚು ಬುದ್ಧಿವಂತಿಕೆಯಿಂದ ರಾಜಕಾರಣ ಮಾಡಬಲ್ಲರು. ತಮ್ಮ ಮಾತುಗಾರಿಕೆ ಶಕ್ತಿಯಿಂದ ಹೆಚ್ಚು ಸಮರ್ಥವಾಗಿ ಮಾತನಾಡುವ ಶಕ್ತಿ ಈ ಜಾತಕದವರಿಗೆ ಇರುತ್ತದೆ. ಆದ್ದರಿಂದ ಸುಮಲತಾರಿಗೆ ಹೆಚ್ಚಿನ ಬಲ ಇದೆ. ಸುಮಲತಾರಿಗೆ ಬಿಜೆಪಿ ಬೆಂಬಲ ಸೂಚಿಸಿದೆ. ಆ ಕಾರಣಕ್ಕೆ ಇಲ್ಲಿ ನರೇಂದ್ರ ಮೋದಿ ಅವರು ಪ್ರಚಾರಕ್ಕೆ ಬಂದರೆ ಮತ್ತಷ್ಟು ಬಲಿಷ್ಠ ಆಗುತ್ತದೆ.

   ಇನ್ನು ನಿಖಿಲ್ ಬೆಂಬಲಕ್ಕೆ ಕುಮಾರಸ್ವಾಮಿ ಮತ್ತು ದೇವೇಗೌಡರು ನಿಲ್ಲುವುದರಿಂದ ಅವರಿಬ್ಬರ ಜಾತಕದಿಂದ ಬಲ ದೊರೆಯುವ ಸಾಧ್ಯತೆಗಳು ಹೆಚ್ಚಿವೆ. ಇಲ್ಲಿ ಕುಮಾರಸ್ವಾಮಿ, ದೇವೇಗೌಡರು ಸಹ ಪ್ರಚಾರಕ್ಕೆ ತೊಡಗಿಕೊಂಡರೆ ಅವರ ಪಕ್ಷದ ಕೈ ಮೇಲಾಗುತ್ತದೆ. ಒಂದು ವೇಳೆ ಸ್ವತಃ ಮೋದಿ ಅವರು ಇಲ್ಲಿಗೆ ಬಂದರೆ ಸುಮಲತಾರಿಗೆ ಬಲ ಬರುತ್ತದೆ. ಒಂದು ವೇಳೆ ಕುಮಾರಸ್ವಾಮಿ, ದೇವೇಗೌಡರು ಇಲ್ಲಿ ಪರಿಣಾಮಕಾರಿ ಪ್ರಚಾರ ಮಾಡದಿದ್ದರೆ ಸುಮಲತಾರಿಗೇ ಅನುಕೂಲವಾಗುತ್ತದೆ. ಒಟ್ಟಾರೆಯಾಗಿ ಬಲಾಬಲ ಪರಿಶೀಲನೆ ಮಾಡಿದರೆ ಗುರು, ಬುಧ, ರವಿಯ ಅನುಗ್ರಹ ಇರುವ ಸುಮಲತಾರ ಕೈ ಮೇಲಾಗಲಿದೆ.

   ಸುಮಲತಾ ವರ್ಸಸ್ ನಿಖಿಲ್ ಕುಮಾರಸ್ವಾಮಿ; ಯಾರಿಗುಂಟು ಗ್ರಹ ಬಲ?

    ತುಮಕೂರು ಲೋಕಸಭಾ ಕ್ಷೇತ್ರ

   ತುಮಕೂರು ಲೋಕಸಭಾ ಕ್ಷೇತ್ರ

   ರಾಷ್ಟ್ರ ರಾಜಕಾರಣದಲ್ಲಿ ತಮ್ಮನ್ನು ಗುರುತಿಸಿಕೊಂಡಿರುವ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಜೆಡಿಎಸ್ ನಿಂದ ಕಣದಲ್ಲಿದ್ದರೆ, ಯಾವುದೇ ಜಾತಿ-ಧರ್ಮದಾಚೆಗೂ ಮತಗಳನ್ನು ಸೆಳೆಯಬಲ್ಲ ಹಿರಿಯ ರಾಜಕಾರಣಿ ಜಿ.ಎಸ್.ಬಸವರಾಜು ಬಿಜೆಪಿಯಿಂದ ಅಖಾಡದಲ್ಲಿ ಇದ್ದಾರೆ. ಬಸವರಾಜು ಅವರದು ಪುಷ್ಯ ನಕ್ಷತ್ರ, ಕರ್ಕಾಟಕ ರಾಶಿ. ಅವರ ಜಾತಕದಲ್ಲಿ ರವಿ ಉಚ್ಚನಾಗಿದ್ದಾನೆ. ರವಿ-ಬುಧ ನೈಪುಣ್ಯ ಯೋಗವಿದೆ. ಗುರು ಬಲಿಷ್ಠನಾಗಿದ್ದಾನೆ. ಜತೆಗೆ ಶಶಿ-ಮಂಗಳ ಯೋಗವಿದೆ. ಸದ್ಯದ ಪರಿಸ್ಥಿತಿಯಲ್ಲಿ ಶನಿ ಅನುಕೂಲ ಸ್ಥಿತಿಯಲ್ಲಿದ್ದಾನೆ. ಫಲಿತಾಂಶ ಪ್ರಕಟ ಆಗುವ ಹೊತ್ತಿಗೆ ಗುರು ಕೂಡ ಅನುಕೂಲಕರ ಸ್ಥಿತಿಯಲ್ಲಿ ಇರುತ್ತಾನೆ. ಒಟ್ಟಾರೆ ನೋಡಿದಾಗ ಗುರು-ಶನಿ ಅನುಕೂಲ ಸ್ಥಿತಿಯಲ್ಲಿ ಇದ್ದರೆ ಚುನಾವಣೆಯಲ್ಲಿ ಅನುಕೂಲಕರವಾದ, ಗೆಲುವಿಗೆ ಸಹಕಾರಿ ಆಗುವ ವಾತಾವರಣ ನಿರ್ಮಾಣ ಆಗುತ್ತದೆ.

   ಇಂಥ ಜಾತಕರಿಗೆ ಸ್ಪರ್ಧೆ ಕೊಡಬಲ್ಲಂಥ ಜಾತಕ ಅಂದರೆ, ರಾಷ್ಟ್ರಮಟ್ಟದ ರಾಜಕಾರಣದಲ್ಲಿ ತಮ್ಮನ್ನು ತಾವು ಗುರುತಿಸಿಕೊಂಡಿರುವ ದೇವೇಗೌಡರದು. ಅವರದು ಪೂರ್ವಾಭಾದ್ರಾ ನಕ್ಷತ್ರ, ಕುಂಭ ರಾಶಿ. ಜಾತಕದಲ್ಲಿ ಗಜ ಕೇಸರಿ ಯೋಗ, ಶಶಿ ಮಂಗಳ ಯೋಗ, ಶುಕ್ರ ಏಕಾದಶ ಯೋಗ ಫಲ, ದಶಮ ಕೇಂದ್ರದಲ್ಲಿ ಬುಧನು ಇರುವಂಥ ಯೋಗ, ಮಹಾಪುರುಷ ಯೋಗ ಫಲಗಳಿವೆ. ಇವರ ಜಾತಕ ರೀತಿಯಾಗಿ ಗೋ‌ಚಾರ ಮೂಲಕ ನೋಡಬೇಕು ಅಂದರೆ, ಗುರು- ಶನಿ ಗ್ರಹಗಳು ಅನುಕೂಲಕರ ಸ್ಥಿತಿಯಲ್ಲಿ ಇದ್ದಾರೆ. ಆದ್ದರಿಂದ ರಾಜಕಾರಣದಲ್ಲಿ ಅನುಕೂಲಕರ ಸ್ಥಿತಿ ಅವರ ಪಾಲಿಗಿದೆ. ಹಾಗೆ ನೋಡಿದರೆ ಬಸವರಾಜು ಅವರಿಗೂ ಅನುಕೂಲಕರ ಸನ್ನಿವೇಶ ಇದೆ.

   ಆದ್ದರಿಂದ ಈ ಕ್ಷೇತ್ರದಲ್ಲಿ ವಿಶೇಷವಾದ ಸ್ಪರ್ಧೆ ಏರ್ಪಡಲಿದೆ. ತುಮಕೂರು ಕ್ಷೇತ್ರದ ಪ್ರಚಾರಕ್ಕೆ ನರೇಂದ್ರ ಮೋದಿ ಅವರೇನಾದರೂ ಬಂದರೆ ಹಾಗೂ ದೇವೇಗೌಡರ ಜಾತಕದಲ್ಲಿ ಹಿತಶತ್ರುಗಳಿಂದಲೇ ಮೋಸ ಆಗುವ ಅಥವಾ ದ್ರೋಹವಾಗುವ ಸಾಧ್ಯತೆ ಇರುವುದರಿಂದ ಅಂಥ ಸನ್ನಿವೇಶದಲ್ಲಿ ಬಸವರಾಜು ಅವರಿಗೆ ಅನುಕೂಲ ಅಗಲಿದೆ. ಏಕೆಂದರೆ, ದೇವೇಗೌಡರಿಗೆ ಈಗ ಚಂದ್ರ ದಶೆ ಹಾಗೂ ಬುಧ ಭುಕ್ತಿ. ಇವರಿಬ್ಬರು ಪರಸ್ಪರ ಶತ್ರುಗಳು. ಇಂಥ ಸಂದರ್ಭದಲ್ಲಿ ತಮ್ಮದೇ ಪಕ್ಷದವರಿಂದ ಅಥವಾ ಸ್ನೇಹಿತರಿಂದ ದ್ರೋಹ ಆಗುವ ಸಾಧ್ಯತೆಗಳಿವೆ. ಬಸವರಾಜು ಕೈ ಮೇಲಾದರೂ ಅಚ್ಚರಿಪಡಬೇಕಿಲ್ಲ. ತೀವ್ರ ಹೋರಾಟವಂತೂ ಕಂಡುಬರುತ್ತದೆ.

   ದೇವರ ದಯೆಯಿಂದ ಸುಸೂತ್ರವಾಗಿ ಚುನಾವಣೆ ನಡೆಯಲಿ: ಅಮ್ಮಣ್ಣಾಯ

    ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರ

   ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರ

   ಈ ಕ್ಷೇತ್ರದಲ್ಲಿನ ಸ್ಪರ್ಧೆ ಅತ್ಯಂತ ರೋಚಕವಾಗಿ ಇರುತ್ತದೆ ಎಂದು ಖಚಿತವಾಗಿ ಹೇಳಬಹುದು. ಬಿಜೆಪಿಯಿಂದ ಡಿ.ವಿ.ಸದಾನಂದ ಗೌಡ ಹಾಗೂ ಕಾಂಗ್ರೆಸ್ ನಿಂದ ಕೃಷ್ಣ ಬೈರೇಗೌಡ ಮುಖಾಮುಖಿ ಆಗುತ್ತಿದ್ದಾರೆ. ಸದಾನಂದ ಗೌಡರಿಗೆ ಗಜಕೇಸರಿ ಯೋಗ, ಶಶಿ-ಮಂಗಳ ಯೋಗ ಹಾಗೂ ಬುದ್ಧಿ ಮಾಥುರ್ಯ ಯೋಗ ಇದೆ. ಜನ್ಮ ಜಾತಕದಲ್ಲಿ ಶನಿಯು ಉಚ್ಚನಾಗಿದ್ದಾನೆ. ರವಿಯು ಉಚ್ಚ ಕ್ಷೇತ್ರದಲ್ಲಿದ್ದಾನೆ. ಶುಕ್ರನು ಬಲಿಷ್ಠನಾಗಿದ್ದಾನೆ. ಹೀಗೆ ಉತ್ತಮ ಗ್ರಹ ಗತಿಗಳಿರುವ ಬಲಿಷ್ಠ ಜಾತಕ ಇದು. ಜತೆಗೆ ರಾಜಕೀಯವಾಗಿ ವಿಶೇಷವಾದ ಅದೃಷ್ಟ ತರುವಂಥ ಜಾತಕವಿದು.

   ಸ್ವಾರಸ್ಯಕರ ಸಂಗತಿ ಏನೆಂದರೆ, ಅವರಿಗೆ ಸ್ಪರ್ಧೆ ಒಡ್ಡುತ್ತಿರುವ ಕೃಷ್ಣ ಬೈರೇಗೌಡರಿಗೂ ಜಾತಕದಲ್ಲಿ ಗಜಕೇಸರಿ ಯೋಗ, ಶಶಿ ಮಂಗಳ ಯೋಗ, ಉಚ್ಚ ಶುಕ್ರ ಯೋಗ ಫಲ ಇದೆ. ಜಾತಕದ ಬಲದ ಮೂಲಕ ರಾಜಕಾರಣದಲ್ಲಿ ಸದಾ ಚಾಲ್ತಿಯಲ್ಲಿರುವ ನಾಯಕರಾಗಿ ಇರುತ್ತಾರೆ. ಇವರಿಬ್ಬರದೂ ಅಶ್ವಿನಿ ನಕ್ಷತ್ರ, ಮೇಷ ರಾಶಿ. ಗೋಚಾರ ರೀತಿಯ ಗ್ರಹ ಗತಿಯ ಸಮಸ್ಯೆ ಇಬ್ಬರಿಗೂ ಇದೆ. ಜನ್ಮ ಜಾತಕದ ಪ್ರಕಾರದ ಗ್ರಹ ಬಲ ಇಬ್ಬರಿಗೂ ಇದೆ. ಇಬ್ಬರು ಸಮತೂಕದ ಅದೃಷ್ಟದ ಫಲ ಹೊಂದಿದ್ದಾರೆ. ಆದರೆ ಸದಾನಂದ ಗೌಡರ ಜಾತಕ ಯೋಗ ಫಲ ಕೃಷ್ಣ ಬೈರೇಗೌಡರಿಗಿಂತ ಒಂದು ಗುಲಗಂಜಿ ಹೆಚ್ಚಿಗಿದೆ.

   ಕೊನೆ ಕ್ಷಣದ ತನಕ ಜಿದ್ದಾಜಿದ್ದಿ ಪೈಪೋಟಿ ಕಂಡುಬರುತ್ತದೆ. ಸದಾನಂದ ಗೌಡರಿಗೆ ನರೇಂದ್ರ ಮೋದಿ ಅವರ ಜಾತಕದ ಬೆಂಬಲವೂ ದೊರೆಯುವುದರಿಂದ ಅನುಕೂಲ ಸನ್ನಿವೇಶ ದೊರೆಯುತ್ತದೆ. ಆದರೆ ಕೃಷ್ಣ ಬೈರೇಗೌಡರು ತೀವ್ರ ಪ್ರತಿರೋಧ ಒಡ್ಡುತ್ತಾರೆ. ಅಂತಿಮವಾಗಿ ಇಲ್ಲಿ ಜನ್ಮ ಜಾತಕದ ಬಲ ಇರುವುದರಿಂದ ಸದಾನಂದ ಗೌಡರ ಕೈ ಮೇಲಾಗುವ ಸಾಧ್ಯತೆಗಳಿವೆ. ಇಲ್ಲಿ ಹೊರಬೀಳುವ ಫಲಿತಾಂಶ ಸ್ವಾರಸ್ಯಕರವಾಗಿರುತ್ತದೆ.

   ಬೆಂಗಳೂರು ಉತ್ತರ ಕ್ಷೇತ್ರಕ್ಕೆ ಉತ್ತರಾಧಿಕಾರಿ ಯಾರು?

    ಹಾಸನ ಲೋಕಸಭಾ ಕ್ಷೇತ್ರ

   ಹಾಸನ ಲೋಕಸಭಾ ಕ್ಷೇತ್ರ

   ಇಲ್ಲಿನ ಪ್ರಮುಖ ಸ್ಪರ್ಧಿಗಳು ಎಂದು ಪರಿಗಣಿಸಿರುವುದು ಜೆಡಿಎಸ್ ನ ಪ್ರಜ್ವಲ್ ರೇವಣ್ಣ ಹಾಗೂ ಬಿಜೆಪಿಯ ಎ.ಮಂಜು ಅವರನ್ನು. ಪ್ರಜ್ವಲ್ ರೇವಣ್ಣ ಅವರ ಲಭ್ಯ ಜನ್ಮ ದಿನಾಂಕ್ ಹಾಗೂ ಇಟ್ಟಿರುವ ಹೆಸರು ಗಮನಿಸಿದರೆ ವ್ಯತ್ಯಾಸ ಇರುವಂತೆ ಗೋಚರಿಸುತ್ತದೆ. ಹೆಸರಿನ ಪ್ರಕಾರ ಅವರದು ಚಿತ್ತಾ ನಕ್ಷತ್ರ, ಕನ್ಯಾ ರಾಶಿ ಆಗುತ್ತದೆ. ಏಕೆಂದರೆ ದೇವೇಗೌಡರ ಕುಟುಂಬದಲ್ಲಿ ಎಲ್ಲರ ಹೆಸರೂ ನಕ್ಷತ್ರದ ನಾಮದ ಪ್ರಕಾರವೇ ಇರುವುದರಿಂದ ಹಾಗೆ ಗ್ರಹಿಸಬಹುದು. ಇನ್ನು ಜನ್ಮ ದಿನಾಂಕದ ಆಧಾರದಲ್ಲಿ ನೋಡುವುದಾದರೆ ಅಶ್ವಿನಿ ನಕ್ಷತ್ರ, ಮೇಷ ರಾಶಿ ಆಗುತ್ತದೆ. ಈ ಎರಡು ರಾಶಿಯ ಪೈಕಿ ಯಾವುದೇ ರಾಶಿಯಾದರೂ ಗುರು ಬಲದ ಕೊರತೆ ಕಾಡುತ್ತದೆ. ಜತೆಗೆ ಶನಿಯ ಅನುಗ್ರಹ ಕೂಡ ಇಲ್ಲ. ಮೇಷ ರಾಶಿಯಾದರೆ ನವಮ ಶನಿ, ಕನ್ಯಾ ರಾಶಿಯಾದರೆ ಚತುರ್ಥ ಶನಿ ಆಗುತ್ತದೆ. ರಾಹು-ಕೇತುಗಳು ಸಹ ಅನುಕೂಲಕರ ಸ್ಥಿತಿಯಲ್ಲಿ ಇಲ್ಲ. ಈ ರೀತಿಯ ಸನ್ನಿವೇಶ ಪ್ರಜ್ವಲ್ ರೇವಣ್ಣ ಅವರ ಜಾತಕದ್ದಾಗಿದೆ.

   ಇನ್ನು ಎ.ಮಂಜು ಅವರ ಜಾತಕ ಮಾಹಿತಿ ನೋಡುವುದಾದರೆ, ಒಂದೋ ಮೂಲಾ ನಕ್ಷತ್ರ ಧನುಸ್ಸು ರಾಶಿ ಅಥವಾ ಪೂರ್ವಾಷಾಢ ನಕ್ಷತ್ರ ಧನುಸ್ಸು ರಾಶಿ ಆಗುತ್ತದೆ. ಆ ಪ್ರಕಾರ ಗೋಚಾರ ರೀತಿಯಾಗಿ ಅವರಿಗೂ ಅನುಕೂಲಕರ ಸನ್ನಿವೇಶ ಇಲ್ಲ. ಆದರೆ ಜನ್ಮ ಜಾತಕದ ಪ್ರಕಾರ ಇವರಿಗೆ ಗಜಕೇಸರಿ ಯೋಗ, ಶಶಿ ಮಂಗಳ ಯೋಗ ಫಲ ಇತ್ಯಾದಿ ಮಹಾಪುರುಷ ಯೋಗ ಫಲಗಳಿವೆ. ವರ್ಚಸ್ವಿ ರಾಜಕೀಯ ನಾಯಕರಾಗಿ ಬೆಳೆಯುವ ಅವಕಾಶ ಇವರಿಗೆ ಹೆಚ್ಚಿದೆ. ಇಬ್ಬರೂ ಅಭ್ಯರ್ಥಿಗಳಿಗೂ ಗೋಚಾರ ಚೆನ್ನಾಗಿಲ್ಲದಿರುವ ಸಂದರ್ಭದಲ್ಲಿ ಜನ್ಮ ಜಾತಕದ ಪರಿಣಾಮ ನೋಡಬೇಕಾಗುತ್ತದೆ. ಆಗ ಎ.ಮಂಜು ಅವರ ಕೈ ಮೇಲಾಗುತ್ತದೆ. ಪ್ರಜ್ವಲ್ ರೇವಣ್ಣ ಹೆಚ್ಚು ಶ್ರಮ ಹಾಕಬೇಕಾಗುತ್ತದೆ.

   ಆದರೆ, ಪ್ರಜ್ವಲ್ ರೇವಣ್ಣ ಅವರ ಬೆನ್ನಿಗೆ ದೇವೇಗೌಡರು ಅಖಾಡಕ್ಕೆ ಇಳಿದು, ರೇವಣ್ಣ ಕೂಡ ಹೆಚ್ಚು ಶ್ರಮ ಹಾಕಲೇಬೇಕು. ಹಾಗೆ ಇಬ್ಬರೂ ಶ್ರಮ ಹಾಕಿದರೆ ಮಾತ್ರ ಅನುಕೂಲ ಆಗುತ್ತದೆ. ಏಕೆಂದರೆ ರೇವಣ್ಣ ಅವರದು ತುಲಾ ರಾಶಿ ಹಾಗೂ ದೇವೇಗೌಡರದು ಕುಂಭ ರಾಶಿ. ಇಬ್ಬರೂ ಪ್ರಜ್ವಲ್ ಪರ ಶ್ರಮಿಸಲೇ ಬೇಕು. ಆಗ ಮುನ್ನಡೆ ದೊರೆಯುತ್ತದೆ.

   ಲೋಕಸಭೆ ಕದನ 2019: ಹಾಸನ ಲೋಕಸಭಾ ಕ್ಷೇತ್ರದ ಪರಿಚಯ

    ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರ

   ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರ

   ಈ ಕ್ಷೇತ್ರದಿಂದ ಮೇಲ್ನೋಟಕ್ಕೆ ಸ್ಪರ್ಧೆ ಎನಿಸುವಂತೆ ಇರುವುದು ಬಿಜೆಪಿಯ ತೇಜಸ್ವಿ ಸೂರ್ಯ ಹಾಗೂ ಕಾಂಗ್ರೆಸ್ ಅಭ್ಯರ್ಥಿ ಬಿ.ಕೆ.ಹರಿಪ್ರಸಾದ್ ಮಧ್ಯೆ. ತೇಜಸ್ವಿ ಸೂರ್ಯ ಅವರ ಜನ್ಮ ದಿನಾಂಕ ಹಾಗೂ ಅವರ ಜನ್ಮ ನಕ್ಷತ್ರಕ್ಕೆ ಇಟ್ಟ ಹೆಸರು ಅಂದುಕೊಳ್ಳುವುದಾದರೆ ವಿಶಾಖ ನಕ್ಷತ್ರ, ತುಲಾ ರಾಶಿ ಆಗುತ್ತದೆ. ಬಿ.ಕೆ.ಹರಿಪ್ರಸಾದ್ ಅವರದು ಪುನರ್ವಸು ನಕ್ಷತ್ರ, ಕರ್ಕಾಟಕ ರಾಶಿ ಆಗುತ್ತದೆ. ಗೋಚಾರ ರೀತಿಯಲ್ಲಿ ನೋಡುವುದಾದರೆ ಹರಿಪ್ರಸಾದ್ ಗಿಂತ ತೇಜಸ್ವಿ ಸೂರ್ಯ ಅವರ ಸ್ಥಿತಿ ಉತ್ತಮವಾಗಿದೆ. ಗುರು-ಶನಿ ಗ್ರಹಗಳು ಅನುಕೂಲವಾಗಿವೆ. ದಶಾ- ಭುಕ್ತಿ ಕಾಲವೂ ಅನುಕೂಲಕರವಾಗಿದೆ. ತೇಜಸ್ವ್ ಅವರ ಜನ್ಮ ಜಾತಕದಲ್ಲಿ ಗುರು ಗ್ರಹ ಉಚ್ಚವಾಗಿದೆ. ರಾಜಕೀಯ ಕಾರಕರಾದ ಗ್ರಹಗಳು ಬಲಿಷ್ಠವಾಗಿವೆ. ಅವರೊಬ್ಬ ಪ್ರಬುದ್ಧ ರಾಜಕಾರಣಿ ಆಗಿ, ಉಚ್ಛ್ರಾಯ ಸ್ಥಿತಿಗೆ ಹೋಗುವ ಎಲ್ಲ ಅವಕಾಶಗಳಿವೆ. ಅದೇ ರೀತಿ ಹರಿಪ್ರಸಾದ್ ಜಾತಕದ ಪ್ರಕಾರ ಹೇಳುವುದಾದರೆ ಇವರು ರಾಜಕೀಯದಲ್ಲಿ ಗಣ್ಯರಾಗುವುದರಲ್ಲಿ ಅನುಮಾನವಿಲ್ಲ.

   ಆದರೆ, ಜನ ಬೆಂಬಲ ಪಡೆಯುವುದರಲ್ಲಿ ಹಿನ್ನಡೆ ಅನುಭವಿಸುತ್ತಾರೆ. ಆ ಕಾರಣಕ್ಕೆ ಹರಿಪ್ರಸಾದ್ ಗಿಂತ ತೇಜಸ್ವಿ ಸೂರ್ಯ ಅವರ ಜಾತಕ ಬಲ ಹೆಚ್ಚಾಗಿದೆ. ಆದ್ದರಿಂದ ಅವರಿಗೆ ಹೆಚ್ಚು ಜನ ಬೆಂಬಲ ದೊರೆಯುವ ಸಾಧ್ಯತೆ ಇದೆ. ಬಿ.ಕೆ.ಹರಿಪ್ರಸಾದ್ ಜಾತಕ ಪರಿಶೀಲನೆ ಮಾಡಿದರೆ ಸುಲಭವಾಗಿ ಸೋಲು ಒಪ್ಪಿಕೊಳ್ಳುವ ಜಾಯಮಾನದವರಲ್ಲ. ತುಂಬ ಕಠಿಣವಾದ ಸ್ಪರ್ಧೆ ನೀಡಿಯೇ ನೀಡುತ್ತಾರೆ. ಕೊನೆಯ ತನಕ ಜಿದ್ದಾಜಿದ್ದಿನಿಂದ ಕೂಡಿರುವ ಈ ಕ್ಷೇತ್ರದ ಸ್ಪರ್ಧೆಯು ರೋಚಕವಾಗಿ ಇರುತ್ತದೆ. ಆದರೆ ಬಿಜೆಪಿ ತೇಜಸ್ವಿ ಸೂರ್ಯ ಅವರಿಗೆ ಹಲವು ರೀತಿಯಲ್ಲಿ ಅನುಕೂಲ ಸನ್ನಿವೇಶಗಳಿವೆ.

   ಜ್ಯೋತಿಷಿ ಕಬ್ಯಾಡಿ ಜಯರಾಮಾಚಾರ್ಯ ಅವರ ವೈಯಕ್ತಿಕ ಭೇಟಿಗಾಗಿ ಸಂಫರ್ಕ ಸಂಖ್ಯೆ 9535616938

   ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

   English summary
   Mandya, Tumakuru, Hassan, Bengaluru South and Bengaluru North prestigious LS constituencies of Karnataka. Who has more chance to win here? Here is an astrology analysis by Astrologer Kabiyadi Jayarama Acharya.

   Oneindia ಬ್ರೇಕಿಂಗ್ ನ್ಯೂಸ್,
   ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X
   We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more