• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಸೆ. 18ರಿಂದ ಅ. 16 ಅಧಿಕ ಮಾಸದ ವಿಶೇಷ: ವ್ರತಾಚರಣೆಯಿಂದ ಏನೆಲ್ಲ ಫಲ ಗೊತ್ತೆ?

By ಭೀಮಸೇನಾಚಾರ್ ಅಥನೂರು
|

2020ನೇ ಇಸವಿಯಲ್ಲಿ ಇದೇ ತಿಂಗಳ ಸೆಪ್ಟೆಂಬರ್ 18ನೇ ತಾರೀಕಿನಿಂದ ಶುರುವಾದರೆ ಅಕ್ಟೋಬರ್ 16ರ ತನಕ ಅಧಿಕ ಮಾಸ ಇರುತ್ತದೆ. ಈ ಬಾರಿ ಆಶ್ವಯುಜ ಮಾಸದಲ್ಲಿ ಅಧಿಕ ಮಾಸ ಬಂದಿದೆ. 33 ತಿಂಗಳು 16 ದಿನ 4 ಘಳಿಗೆಗೆ ಒಮ್ಮೆ ಅಧಿಕ ಮಾಸ ಬರುತ್ತದೆ. ಅಂದರೆ ಐದು ವರ್ಷಗಳಿಗೆ ಎರಡು ಬಾರಿ ಅಧಿಕ ಮಾಸ ಬರುತ್ತದೆ.

ಈ ಅವಧಿಯಲ್ಲಿ ಮದುವೆ, ಉಪನಯನ ಸೇರಿದಂತೆ ಯಾವುದೇ ಶುಭ ಸಮಾರಂಭಗಳನ್ನು ಮಾಡುವುದಕ್ಕೆ ನಿಷಿದ್ಧ ಇರುತ್ತದೆ. ಇನ್ನು ಅಧಿಕ ಮಾಸ ಎಂದಾದರೆ ರವಿಯ ಸಂಕ್ರಮಣ ಇರುವುದಿಲ್ಲ. ಪ್ರತಿ ಮಾಸವೂ ಇರುವ ರವಿ ಸಂಕ್ರಮಣ ಆ ಬಾರಿ ಇರುವುದಿಲ್ಲ. ಇದನ್ನು ಅಧಿಕ ಮಾಸ ಅಂತಲೂ ಇನ್ನು ಯಾವ ಒಂದೇ ಮಾಸದಲ್ಲಿ ಎರಡು ಬಾರಿ ಸಂಕ್ರಮಣ ಬರುತ್ತದೋ ಅದನ್ನು ಕ್ಷಯ ಮಾಸ ಅಂತಲೂ ಕರೆಯಲಾಗುತ್ತದೆ.

ಭವಿಷ್ಯ: ಸೆ.13ಕ್ಕೆ ಹಿಂದೆಂದೂ ಬಾರದ, ಮುಂದೆಯೂ ಕಾಣದ 'ಅಪರೂಪದ ಗಳಿಗೆ'

ಶುಭ ಸಮಾರಂಭಗಳನ್ನು ಮಾಡದಿರಬಹುದು. ಹಾಗಂತ ಈ ಮಾಸವೇ ಕೆಟ್ಟದ್ದೇ ಅಂದರೆ, ಅದು ತಪ್ಪು. ಏಕೆಂದರೆ ವ್ರತ, ನೇಮ- ನಿಷ್ಠೆಗಳಿಗೆ ಬಹಳ ವಿಶೇಷ ಫಲ ನೀಡುವ ಮಾಸ ಇದು. ಯಾವುದೇ ಒಂದು ನಿರ್ದಿಷ್ಟ ಸಮುದಾಯಕ್ಕೆ ಸೀಮಿತ ಆಗದೆ ಎಲ್ಲರೂ ಇದನ್ನು ಅನುಸರಿಸಬೇಕು. ಹಾಗೆ ಮಾಡಿದಲ್ಲಿ ಅನಂತ ಪುಣ್ಯ ಫಲಗಳನ್ನು ಹೇಳಲಾಗಿದೆ. ಇನ್ನು "ಅಧಿಕಸ್ಯ ಅಧಿಕಂ ಫಲಂ" ಎಂಬ ಮಾತೇ ಇದೆ.

ಆಶ್ಲೇಷಾ, ಮೂಲಾ, ವಿಶಾಖ, ಜ್ಯೇಷ್ಠ ನಕ್ಷತ್ರದಲ್ಲಿ ಹುಟ್ಟಿದವರು ದುರದೃಷ್ಟವಂತರೆ?

ಅಂದರೆ, ಈ ಮಾಸದಲ್ಲಿ ಅದೆಷ್ಟು ದಾನ- ಧರ್ಮಾದಿ ಕಾರ್ಯಗಳನ್ನು ಮಾಡಲಾಗುತ್ತದೋ ಅಷ್ಟು ಉತ್ತಮ ಫಲಗಳು ದೊರೆಯುತ್ತವೆ. ಇನ್ನು ಈ ಅಧಿಕ ಮಾಸಕ್ಕೆ ಪುರುಷೋತ್ತಮ ಸ್ವರೂಪಿಯಾದ ಆ ಭಗವಂತನೇ ಅಧಿಪತಿ. ಎಷ್ಟು ಸತ್ಕರ್ಮಗಳನ್ನು ಮಾಡಲಾಗುತ್ತದೋ ಅಷ್ಟು ಶುಭ ಫಲಗಳು ದೊರೆಯುತ್ತವೆ. ಅಂದರೆ ಏನೇನು ಮಾಡಬೇಕು?

ವ್ರತಾಚರಣೆಯಿಂದ ಅಪರಿಮಿತವಾದ ಫಲ

ವ್ರತಾಚರಣೆಯಿಂದ ಅಪರಿಮಿತವಾದ ಫಲ

ಕೆಲವು ವ್ರತಗಳನ್ನು ಉದಾಹರಣೆಯಾಗಿ ನೀಡಲಾಗಿದೆ. ಇವುಗಳನ್ನು ಮಾಡುವುದರಿಂದ ಅಧಿಕ ಮಾಸದಲ್ಲಿ ಉತ್ತಮ ಫಲ ದೊರೆಯುತ್ತದೆ. ಉದಾಹರಣೆಗೆ: ಧಾರಣ- ಪಾರಣ ವ್ರತ: ಒಂದು ದಿನ ಉಪವಾಸ ಮಾಡಿ, ಮರು ದಿನ ಬೆಳಗ್ಗೆಯೇ ಊಟ ಮಾಡಬೇಕು. ಏಕಭುಕ್ತೌ ವ್ರತ: ದಿನದಲ್ಲಿ ಒಮ್ಮೆ ಮಾತ್ರ ಊಟ ಮಾಡಬೇಕು. ನಕ್ತಭೋಜನ ವ್ರತ (ಸೂರ್ಯಾಸ್ತ ನಂತರ ಊಟ): ಸೂರ್ಯ ಅಸ್ತವಾದ ನಂತರವಷ್ಟೇ ಭೋಜನ ಮಾಡಬೇಕು. ಅಲವಣ ವ್ರತ: ಉಪ್ಪು ಹಾಕಿರದಂಥ ಊಟವನ್ನು ಮಾಡಬೇಕು. ಇನ್ನು ಲಕ್ಷ ಪ್ರದಕ್ಷಿಣೆ, ಲಕ್ಷ ನಮಸ್ಕಾರ, ಲಕ್ಷ ದೀಪ ಹಾಗೂ ಲಕ್ಷ ಬತ್ತಿ ಹಚ್ಚುವ ಮೂಲಕ ದೇವರ ಸ್ಮರಣೆ ಮಾಡಬೇಕು.

ಕಂಚಿನ ಪಾತ್ರೆಯಲ್ಲಿ ಅಪ್ಪೂಪ ದಾನ

ಕಂಚಿನ ಪಾತ್ರೆಯಲ್ಲಿ ಅಪ್ಪೂಪ ದಾನ

ಅಧಿಕ ಮಾಸದಲ್ಲಿ ತೀರ್ಥಕ್ಷೇತ್ರ ಸ್ನಾನ ಮಾಡಿದರೆ ಅದರ ಫಲ ಮತ್ತೂ ಹೆಚ್ಚಾಗುತ್ತದೆ. ದೀಪದಾನವನ್ನು ಮಾಡಬೇಕು. ಸಾಧ್ಯವಾದಲ್ಲಿ ಒಂದು ತಿಂಗಳ ಕಾಲ ಮೌನವ್ರತವನ್ನು ಆಚರಿಸಬೇಕು. ಹಾಗೆ ಒಂದು ವೇಳೆ ಆಗದಿದ್ದಲ್ಲಿ ಈ ಒಂದು ಮಾಸದಲ್ಲಿ ಊಟಕ್ಕೆ ಕೂತಾಗಲಾದರೂ ಮೌನ ವ್ರತವನ್ನು ಮಾಡಬೇಕು. ಶನಿ ಮೊದಲಾದ ನವಗ್ರಹ ದೋಷ ಪರಿಹಾರ, ದಾರಿದ್ರ್ಯ ನಾಶಕ್ಕಾಗಿ ಅಪ್ಪೂಪ ದಾನ (ಕಜ್ಜಾಯ ದಾನ) ಮಾಡಬೇಕು. ಧರ್ಮದಲ್ಲಿ ಉಲ್ಲೇಖ ಮಾಡಿರುವ ಪ್ರಕಾರ, ಮೂವತ್ಮೂರು ಅಪ್ಪೂಪವನ್ನು ಸದ್ಬ್ರಾಹ್ಮಣರಿಗೆ ಕಂಚಿನ ಪಾತ್ರೆಯಲ್ಲಿ ಇಟ್ಟು ದಾನ ಮಾಡಬೇಕು. ಆ ಅಪ್ಪೂಪದಲ್ಲಿ ಎಷ್ಟು ರಂಧ್ರಗಳಿರುತ್ತವೋ ಅಷ್ಟು ಸಾವಿರ ವರ್ಷಗಳ ಕಾಲ ದಾನ ಮಾಡಿದವರು ಸ್ವರ್ಗ ಸುಖವನ್ನು ಅನುಭವಿಸುತ್ತಾರೆ ಎಂಬ ಉಲ್ಲೇಖವಿದೆ.

ಚತುರ್ಮುಖ ಬ್ರಹ್ಮನಿಗೂ ದಾನದ ಮಹತ್ವ ಹೇಳಲು ಅಸಾಧ್ಯ

ಚತುರ್ಮುಖ ಬ್ರಹ್ಮನಿಗೂ ದಾನದ ಮಹತ್ವ ಹೇಳಲು ಅಸಾಧ್ಯ

ಹೀಗೆ ದಾನ ಮಾಡುವುದರಿಂದ ದಾರಿದ್ರ್ಯ ನಿವಾರಣೆ, ವಂಶಾಭಿವೃದ್ಧಿ ಆಗುತ್ತದೆ. ಸುಮಂಗಲಿಯರಿಗೆ ವೈಧವ್ಯ ಬರುವುದಿಲ್ಲ, ಐಶ್ವರ್ಯ ಪ್ರಾಪ್ತಿ ಆಗುತ್ತದೆ. ಅಧಿಕ ಮಾಸದ ಈ ಎಲ್ಲ ನಿಯಮಗಳು ಎಲ್ಲ ವರ್ಗ, ಜಾತಿಯವರಿಗೂ ಅನ್ವಯ ಆಗುತ್ತದೆ. ಇನ್ನು ಪ್ರಾತಃಕಾಲದಲ್ಲಿ ಶಾಸ್ತ್ರೋಕ್ತವಾಗಿ ಸ್ನಾನ ಮಾಡಿದರೆ, ಸಿಂಹ ರಾಶಿಯಲ್ಲಿ ಗುರು ಇದ್ದಾಗ ಗೋದಾವರಿಯಲ್ಲಿ ಸ್ನಾನ ಮಾಡಿದಾಗ ಯಾವ ಫಲ ಸಿಗುತ್ತದೋ ಅಂಥ ಫಲ ದೊರೆಯುತ್ತದೆ. ಈ ಅಧಿಕ ಮಾಸದಲ್ಲಿ ಕನಿಷ್ಠ ಒಂದು ದಿನ ಭಾಗವತದ ಒಂದು ಶ್ಲೋಕ ಕೇಳಿದರೂ ಅದರಿಂದ ದೊರೆಯುವ ಫಲ ಎಷ್ಟು ಎಂದು ನಾಲ್ಕು ಮುಖಗಳ ಬ್ರಹ್ಮನಿಗೆ ಕೂಡ ಹೇಳಲು ಸಾಧ್ಯವಿಲ್ಲ. ಅಷ್ಟು ಅಪಾರವಾಗಿ ಇರುತ್ತದೆ.

ದಂಪತಿಗೆ ಊಟ ಹಾಗೂ ದಾನ

ದಂಪತಿಗೆ ಊಟ ಹಾಗೂ ದಾನ

ಅಧಿಕ ಮಾಸದಲ್ಲಿನ ಅಮಾವಾಸ್ಯೆ, ಹುಣ್ಣಿಮೆ, ದ್ವಾದಶಿ ಹಾಗೂ ವೈಧೃತಿ, ವ್ಯತೀಪಾತ ಯೋಗಗಳಲ್ಲಿ ದಂಪತಿಯನ್ನು ಊಟಕ್ಕೆ ಕರೆದು, ಅವರಿಗೆ 33ರ ಸಂಖ್ಯೆಯಲ್ಲಿ ದಾನವನ್ನು ಮಾಡಬೇಕು. ಮೊದಲೇ ಹೇಳಿದಂತೆ 33 ಅಪ್ಪೂಪ, ಹಣ್ಣು, ದೀಪ, ವಸ್ತ್ರ ದಾನ ಮಾಡಿದಲ್ಲಿ ಬಹಳ ಶ್ರೇಷ್ಠವಾದ ಫಲಗಳು ದೊರೆಯುತ್ತವೆ. ದಾನ- ಧರ್ಮಾದಿಗಳಿಗೆ ಯಾವ ಕಾಲವೂ ನಿಷಿದ್ಧವಲ್ಲ. ಆದರೆ ಕೆಲವು ಪರ್ವ ಕಾಲದಲ್ಲಿ ಅದರ ಫಲವು ಅದೆಷ್ಟೋ ಪಟ್ಟುಗಳು ಹೆಚ್ಚಾಗುತ್ತವೆ. ಆದ್ದರಿಂದ ದಾನಕ್ಕೆ ಸ್ಥಳ ಹೇಗೆ ಮುಖ್ಯವೋ ಅದೇ ರೀತಿ ಕಾಲವೂ ಮುಖ್ಯ. ಈಗ ಕಣ್ಣೆದುರು ಅಧಿಕ ಮಾಸ ಇದೆ. ಇದನ್ನು ಸದುಪಯೋಗ ಮಾಡಿಕೊಳ್ಳಿ. ಎಲ್ಲರಿಗೂ ಒಳಿತಾಗಲಿ.

English summary
Adhika Masam in 2020 start from September 18th and ends on October 16th. Here is the importance and significance of Adhika masam.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X