• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕಬ್ಬಿಣ ತುಂಡು ದಕ್ಷಿಣಕ್ಕೆಸೆದರೆ ಕಷ್ಟ ಪರಿಹಾರ!

By * ಧವಳ
|

ಬಹಳ ಹಿಂದಿನಿಂದಲೂ ಜೋಗಯ್ಯ-ಜೋಗತಿಯರು ಭವಿಷ್ಯ ಹೇಳುವುದರಲ್ಲಿ ಪ್ರಸಿದ್ಧರು. ಅದರಲ್ಲೂ ಗ್ರಾಮೀಣ ಪ್ರದೇಶಗಳಲ್ಲಿ ಇವರ ಪ್ರಭಾವ ಹೆಚ್ಚು. ಅದೇ ರೀತಿ ಬುಡಬುಡಿಕೆಯವರು ಎಂದು ಕರೆಯಲ್ಪಡುವ ಅಲೆಮಾರಿ ಜನಾಂಗದವರು ಸಹ ಒಂದರ್ಥದಲ್ಲಿ ಗ್ರಾಮೀಣ ಪ್ರದೇಶದಲ್ಲಿ ಪ್ರಭಾವ ತೋರಿರುವ ಜೋತಿಷಿಗಳು. ಅವರೆಷ್ಟರ ಮಟ್ಟಿಗೆ ಅಲ್ಲಿ ಜನರ ಬದುಕಲ್ಲಿ ಪ್ರಾಮುಖ್ಯತೆಯನ್ನು ಪಡೆದಿದ್ದಾರೆ ಅಂದ್ರೆ ಅವರು ಹೇಳುವುದೆಲ್ಲ ಸತ್ಯ, ಅವರ ಮಾತೇ ವೇದವಾಕ್ಯ. ಸಾಕಷ್ಟು ಸಂದರ್ಭಗಳಲ್ಲಿ ಅವರ ಮಾತುಗಳು, ನುಡಿಗಳು ಅಸಹಜಗಳ ಸರಮಾಲೆ. ಯಾಕೆಂದ್ರೆ ಅವರ್ಯಾರು ಸೈಂಟಿಫಿಕ್ಕಾಗಿ ಜ್ಯೋತಿಷ್ಯಶಾಸ್ತ್ರ ಅಧ್ಯಯನ ಮಾಡಿದವರಲ್ಲ. ಎಲ್ಲೋ ಅಲ್ಪ ಸ್ವಲ್ಪ ಕಲಿಕೆ ಅದರಲ್ಲೂ ಶೇ. ತೊಂಬತ್ತು ಭಾಗ ಕಲ್ಪನೆ.

ಹೀಗೆ ಒಂದು ಹಳ್ಳಿಯಲ್ಲಿ ಓರ್ವ ಬುಡಬುಡಿಕೆಯವ ಮುಂಜಾನೆ ನಾಲ್ಕರ ವೇಳೆಯಲ್ಲಿ ಬುಡುಬುಡಿಕೆ ಆಡಿಸುತ್ತ ಬಂದ. ನೀವು ಭಿಕ್ಷೆ ನೀಡದೆ ಹೋದರೆ ಒಂದು ತಿಂಗಳ ಒಳಗೆ ಇಡಿ ಊರು ಕಾಯಿಲೆಯಿಂದ ನರಳಿ ನಾಶವಾಗುತ್ತದೆ (ಇದೂ ನಡೆದ ಘಟನೆ) ಎಂದು ನುಡಿದ. ಆ ಮಾತಿಗೆ ಅಲ್ಲಿದ್ದ ಅಮಾಯಕರು ಹೆದರಿ ಕಂಗಾಲಾದರು. ಅವರಲ್ಲೂ ಭಿಕ್ಷೆ ಕೊಟ್ಟವರು ಕೆಲವರು ಮಾತ್ರ. ಆ ಊರಿನ ಗೌಡ ಈ ಬುಡಬುಡಿಕೆಯವನ ಮಾತನ್ನು ಮನದಲ್ಲಿ ಹಾಗೆ ಸ್ಥಿರವಾಗಿ ಇಟ್ಟುಕೊಂಡಿದ್ದರು. ಆತ ಹೇಳಿದ ಒಂದು ತಿಂಗಳ ಗಡುವು ಮೀರಿದ ಬಳಿಕ ಆತನನ್ನು ಹುಡುಕಿ ತಂದು ಊರ ಚಾವಡಿಯಲ್ಲಿ ಕಂಬಕ್ಕೆ ಕಟ್ಟಿ ಹಾಕಿ ಆ ಭವಿಷ್ಯ ನಿಜ ಮಾಡುವಂತೆ ತಿಳಿಸಿದರು. ತುತ್ತು ಕೂಳಿಗಾಗಿ ಈ ವೇಷ ಹಾಕಿದ್ದ ಆ ಬುಡುಬುಡಿಕೆಯವನ ಯಾವ ಮಾತು ಕೇಳದೆ, ಸುಳ್ಳು ಮಾತನ್ನು ಸತ್ಯ ಮಾಡುವಂತೆ ಒತ್ತಾಯಿಸಿದರಂತೆ. ಕೊನೆಗೆ ಆತನಿಗೆ ನೀಡಬೇಕಾದ ಶಿಕ್ಷೆ ನೀಡಿ ಸಾಮಾನ್ಯ ಜನರ ಮನದಲ್ಲಿ ಇದ್ದ ಭಯವನ್ನು ತೊಲಗಿಸಿದರು.

ಜ್ಯೋತಿಷಿಗಳ ಕಾರುಬಾರು : ಈಗ ಅಂತಹುದೇ ಬುಡುಬುಡಿಕೆಯವರ ಸಾಮ್ರಾಜ್ಯ ಆರಂಭ ಆಗಿದೆ, ಅದೂ ದೃಶ್ಯ ಮಾಧ್ಯಮಗಳ ಒಡ್ಡೋಲಗದಲ್ಲಿ. ಟಿವಿಗಳಲ್ಲಿ ಕೆಲವು ಜ್ಯೋತಿಷಿಗಳ ಕಾರುಬಾರು ಆರಂಭ ಆಗಿದೆ. ವೀಕ್ಷಕರಿಗೆ ಜ್ಯೋತಿಷ್ಯ ಸಿಕ್ಕಾಪಟ್ಟೆ ಇಷ್ಟ ಆಗುವ ಫ್ರೂಟ್ ಎಂದು ಅರಿತ ಉದಯವಾಹಿನಿಯವರು ಎಸ್.ಕೆ. ಜೈನ್ ಅವರನ್ನು ಆ ವಾಹಿನಿ ಆರಂಭ ಆದ ಸ್ವಲ್ಪ ದಿನದಲ್ಲಿ ಜನರ ಮುಂದೆ ತಂದಿಟ್ಟರು. ಒಂದು ಸಂತೋಷದ ಸಂಗತಿ ಅಂದ್ರೆ ಜೈನ್ ಅವರು ಯಾವುದೇ ರೀತಿಯ ಅತಿರೇಕದ ಮಾತುಗಳಿಗೆ ಆದ್ಯತೆ ನೀಡ್ತಾ ಇರಲಿಲ್ಲ. ಸಾಕಷ್ಟು ಸರ್ತಿ ಬಹಳಷ್ಟು ವೀಕ್ಷಕರಿಗೆ ಅವರು ಹೆಚ್ಚು ಸರ್ತಿ ತಿಳಿಸ್ತಾ ಇದ್ದ ಏಳರಾಟದ ಶನಿಯ ಸಂಗತಿ ಕಿರಿಕಿರಿ ತಂದರೂ ಹೆಚ್ಚು ಗಲಾಟೆ ಮಾಡುವ ಯಾವ ಸಂಗತಿಯು ಅವರಿಂದ ಹೊರ ಹೊಮ್ಮುತ್ತಿರಲಿಲ್ಲ. ಆ ಮಟ್ಟಿಗೆ ವೀಕ್ಷಕರು ಸೇಫ್!

ಪಾಪಿ ಮುಂಡೇವಾ... : ಯಾವಾಗ ಉದಯ ಗ್ರೂಪ್ನ ಒಂದಷ್ಟು ಜನ ಕಸ್ತೂರಿವಾಹಿನಿಯ ಬಾಗಿಲು ತಟ್ಟಿದರೋ ಆಗ ಶುರುವಾಯ್ತು ಅರ್ಥಹೀನ ಜೋತಿಷ್ಯಶಾಸ್ತ್ರ. ನರೇಂದ್ರ ಬಾಬು ಶರ್ಮ ಹೇಳಿದ್ದೂ ಹೇಳಿದ್ದೆ. ಮಹಿಳಾ ವೀಕ್ಷಕರು ಅದನ್ನು ಫಾಲೋ ಮಾಡಿದ್ದೂ ಮಾಡಿದ್ದೆ. ಮೊಟ್ಟಮೊದಲು ಈ ಜೋತಿಷಿಯ ಹೆಚ್ಚು ಪಾಪ್ಯುಲರ್ ಆಗಿದ್ದು ಆಷಾಡ ಮಾಸದಲ್ಲಿ ಗೂಬೆ ವಿಗ್ರಹಕ್ಕೆ ಪೂಜೆ ಮಾಡುವ ವ್ರತ. ಪುರಾಣಗಳಲ್ಲಿ ಬಿಳಿ ಗೂಬೆಯ ಉಲ್ಲೇಖವಿದೆ. ಕೇವಲ ಭಾರತೀಯರು ಮಾತ್ರವಲ್ಲ ಏಷ್ಯ ದೇಶಗಳಲ್ಲಿ ಗೂಬೆಯು ಲಕ್ಷ್ಮಿಯ ಪ್ರತೀಕ ಅಥವಾ ಸಂಪತ್ತಿನ ರೂಪ ಎಂದು ನಂಬುತ್ತಾರೆ. ಕೇವಲ ಅದರ ಪೂಜೆ ಮಾಡುತ್ತಾ ಕೂರುವ ಸಂಪ್ರದಾಯ ಅಲ್ಲಿಲ್ಲ, ಬದಲಿಗೆ ತಾವು ಕೈಗೊಂಡ ಕಾರ್ಯದಲ್ಲಿ ಯಶಸ್ಸು ಸಿಗಲಿ ಎನ್ನುವ ನಿಟ್ಟಿನಲ್ಲಿ ಗೂಬೆಯ ಪೂಜೆ ಮಾಡ್ತಾರೆ. ಆದರೆ ಬ್ರಹ್ಮಾಂಡ ಜೋತಿಷಿ, "ಪಾಪಿ ಮುಂಡೆವಾ ನೀವೇನಾದರೂ ಗೂಬೇ ಪೂಜೆ ಮಾಡಲಿಲ್ಲ ಅಂದ್ರೆ ನಾಶ ಆಗಿ ಹೋಗ್ತೀರಿ" ಎನ್ನುವ ಟ್ಯಾಗ್ ಲೈನ್ ಸೇರಿಸಿದ್ದೆ ತಡ ರಾಶಿ ರಾಶಿ ಗೂಬೆಗಳು ಮಾರಾಟ, ತನಗಿಷ್ಟು ಪಾಪ್ಯುಲಾರಿಟಿ ಸಿಕ್ತು ಎಂದು ಖುದ್ದು ಗೂಬೆ ರೋಮಾಂಚನ ಆಗುವಷ್ಟು!

ಆಮೇಲೆ ಶುರು ಆಯ್ತು ಕಟರ್ ಕಟರ್ ಎನ್ನುವ ಉಪದೇಶಗಳು. ಆ ಚಾನೆಲ್ ಮುಗಿದ ಬಳಿಕ ಮತ್ತೊಂದು ಕಡೆ ಬಂದ ಕಟರ್ ಕಟರ್ ಗೆ ಗಮನ ಹೋಗಿದ್ದು ಹೆಣ್ಣು ಮಕ್ಕಳ ನೈಟಿ ಮೇಲೆ. ಅದೂ ಹಾಳ್ ಬಿದ್ದು ಹೋಗ್ಲಿ ಅಂದ್ರೆ ಆತ ತಿಳಿಸುತ್ತಿದ್ದ ವಿಚಿತ್ರ ಸಂಪ್ರದಾಯ ಪೂಜೆಗಳನ್ನು ಈವರೆಗೆ ಯಾರೂ ಕೇಳಿಲ್ಲ, ಕಂಡಿಲ್ಲ. ಒಂರ್ಥದಲ್ಲಿ ಹಾರರ್ ಕಥೆಯಲ್ಲಿ ಬರುವ ಮಾಂತ್ರಿಕನಂತೆ. ಸಾಮಾನ್ಯವಾಗಿ ವ್ರತನೇಮಗಳು ಎಂದಿಗೂ ಮಾನಸಿಕ ಭೀತಿ ಉಂಟು ಮಾಡುವಂತೆ ಇರುವುದಿಲ್ಲ, ಆದ್ರೆ ಈತ ಹೇಳುವ ಪ್ರತಿಯೊಂದು ಸಂಗತಿ ಭಯಕ್ಕೆ ಸಮೀಪ ಆದುದ್ದು.

ದೇವರಿಗೇ ಭವಿಷ್ಯ : ಈಗ ನರೇಂದ್ರ ಕಣ್ಣಿಗೆ ಇಡೀ ಭೂಮಂಡಲ ಬಿದ್ದಿದೆ. ಅದರ ನಾಶದ ಬಗ್ಗೆ! ವಿಜ್ಞಾನಿಗಳ ವಿಷಯ ಪಕ್ಕಕ್ಕೆ ಇಡಿ, ಭೂಮಿಯನ್ನು ಸೃಷ್ಟಿಸಿದ ದೇವರಿಗೇ ಈತ ಭವಿಷ್ಯ ಹೇಳುವಷ್ಟರ ಮಟ್ಟಿಗೆ ಬೆಳೆದಿದ್ದಾರೆ! ಇತ್ತೀಚೆಗೆ ದೀಪ ಬೆಳಗಿಸುವ ಕೆಲಸ ಮಾಡಿದ ಉದಾಹರಣೆಯೇ ಉತ್ತಮ ಸಾಕ್ಷಿ. ಭಾರತ ಬಿಟ್ಟು ವಿಶ್ವವೆಲ್ಲ ಮುಳುಗುತ್ತದೆ ಎನ್ನುವ ಈ ಜೋತಿಷಿಯ ಮಾತು ಅತ್ಯಂತ ಹಾಸ್ಯಾಸ್ಪದ ಹಾಗೂ ಅರ್ಥಹೀನ. ಭೀತಿ ಹುಟ್ಟಿಸುವ ಈ ರೀತಿಯ ಸಂಗತಿಗಳಿಂದ ಆ ವಾಹಿನಿಯ ಟೀಆರ್ಪಿ ಜ್ವರ ಏರಿದಂಗೆ ಏರ್ತಾ ಇದೆ. ಆದರೆ ಜ್ವರ ಜಾಸ್ತಿ ದಿನ ಇದ್ರೆ ಅದು ಬೇರೆ ಕಾಯಿಲೆ ರೂಪದಲ್ಲಿ ಬದಲಾಗುತ್ತದೆ ಎನ್ನುವುದು ವಾಹಿನಿಯವರ ಗಮನಕ್ಕೆ ಯಾಕೆ ಬಂದಿಲ್ಲ ಎನ್ನುವುದೇ ಆಶ್ಚರ್ಯ. ಈಗ ಪ್ರಳಯ ಆಗುತ್ತದೆ ಎನ್ನುವ ಮಾತು ಪದೇಪದೇ ಹೇಳುತ್ತಾ ಭೀತಿ ಹುಟ್ಟಿಸಿರುವ ಈ ಜೋತಿಷಿ, ಎಂದು ಪ್ರಜ್ಞಾವಂತ ಊರ ಗೌಡನ ಕಣ್ಣಿಗೆ ಬೀಳ್ತಾರೋ ಅಲ್ಲಿವರೆಗೂ ಈತನ ಕಟರ್ ಕಟರ್ ಮಾತು ಕೇಳಬೇಕಾದ ದುರಾದೃಷ್ಟ ವೀಕ್ಷಕರಿಗೆ!

ತುಕ್ಕುಹಿಡಿದ ಶಾಸ್ತ್ರಗಳು : ಇಂತಹುದೇ ವಾತಾವರಣವನ್ನು ಮತ್ತೋರ್ವ ಜೋತಿಷಿ ಆರಂಭ ಮಾಡಿದ್ದಾರೆ. ಜ್ಯೋತಿಷಿ ಸಚ್ಚಿದಾನಂದರ ಮಾತಿನ ಪ್ರಕಾರ, ಸ್ವಲ್ಪವಾದರೂ ತುಕ್ಕು ಹಿಡಿದ ಕಬ್ಬಿಣದ ತುಂಡನ್ನು ಪ್ರಾಯಶಃ ದಕ್ಷಿಣ ದಿಕ್ಕಿಗೆ ಎಸೆದರೆ ಕಷ್ಟಗಳು ಪರಿಹಾರ ಆಗುತ್ತವೆ. ತುಕ್ಕು ಹಿಡಿದ ಕಬ್ಬಿಣದ ಲಾಂಗ್, ಮಚ್ಚುಗಳು ಪಾತಕಲೋಕವನ್ನು ಆಳುತ್ತವೆ ಎನ್ನುವ ಸಂಗತಿ ಓದಿದ್ದೆ. ಆದರೆ ಈ ತುಕ್ಕುಹಿಡಿದ ಶಾಸ್ತ್ರಗಳು ಅದೆಷ್ಟು ಮನೆಯವರ ಬದುಕಲ್ಲಿ ಬಿರುಗಾಳಿ ತರುತ್ತದೆಯೋ ಗೊತ್ತಿಲ್ಲ. ಇಂತಹುದೇ ಟಿವಿ ಜೋತಿಷಿ ಒಬ್ಬರು ಕಳೆದೆರಡು ತಿಂಗಳ ಹಿಂದೆ ಒಂದು ಮಂಗಳವಾರ (ಡೇಟ್ ಹೇಳಿದ್ದರು) ದ್ರಾಕ್ಷಿ ತಿನ್ನಬಾರದು, ತಿಂದರೆ ತೊಂದರೆ ತಪ್ಪಿದ್ದಲ್ಲ ಎಂದು ಹೇಳಿದ್ದರು. ಆ ದಿನ ದ್ರಾಕ್ಷಿ ಬೆಳೆಗಾರರಿಗೂ ಒಳ್ಳೇದಲ್ಲ!

ವೈಜ್ಞಾನಿಕವಾಗಿ ಸಾಕಷ್ಟು ಅಭಿವೃದ್ಧಿ ಹೊಂದುತ್ತಿರುವ ಈ ಯುಗದಲ್ಲಿ ಕಲ್ಪನೆಯ-ಅತಿರೇಕಗಳ ಭವಿಷ್ಯ ನುಡಿಗಳನ್ನು ಹೇಳುವವರ ಸಂಖ್ಯೆಯು ಅಭಿವೃದ್ಧಿ ಆಗ್ತಾ ಇದೆ. ಇದು ಯಾವ ದಿಕ್ಕಿನತ್ತ ಸಾಗುತ್ತದೆ, ಅದಕ್ಕೆ ಪರಿಹಾರ ಅನ್ನುವುದು ಇಲವೇ ಎನ್ನುವುದೇ ಈಗ ಕಾಡುತ್ತಿರುವ ಪ್ರಶ್ನೆ. ಈ ರೀತಿಯ ಅತಿರೆಕಿಗಳಿಗೆ ಕಡಿವಾಣ ಹಾಕುವ ಶಕ್ತಿ ಸಾಮಾನ್ಯರಿಗೆ ಇದೆ, ಅವರು ಎಚ್ಚೆತ್ತುಕೊಂಡರೆ ಅಸಹಜ ಭಾಗಳಿಂದ ಮುಕ್ತರಾಗಬಹುದು!

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
It is well known fact that Indians are more superstitious than any other part of the world. Astrologers like Narendra Babu Shama, especially in Kannada TV channels are taking full advantage of people who believe in astrology and not in science. Who will bell these astrologers?
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more