keyboard_backspace

2022 ರ ಚುನಾವಣೆ: ಉತ್ತರಾಖಂಡ, ಗೋವಾ, ಮಣಿಪುರದ ಆಡಳಿತ ಉಳಿಸಿಕೊಳ್ಳುವತ್ತ ಬಿಜೆಪಿ ಚಿತ್ತ

Google Oneindia Kannada News

ನವದೆಹಲಿ, ಅಕ್ಟೋಬರ್‌ 19: ದೇಶದಲ್ಲಿ ಮುಂದಿನ ವರ್ಷ ಪಂಚ ರಾಜ್ಯಗಳಲ್ಲಿ ವಿಧಾನಸಭೆ ಚುನಾವಣೆಯು ನಡೆಯಲಿದೆ. ಉತ್ತರ ಪ್ರದೇಶ, ಪಂಜಾಬ್‌, ಗೋವಾ, ಉತ್ತರಾಖಂಡ ಹಾಗೂ ಮಣಿಪುರದಲ್ಲಿ 2022 ರಲ್ಲಿ ವಿಧಾನಸಭೆ ಚುನಾವಣೆಯು ನಡೆಯಲಿದೆ. ಕೇಂದ್ರದಲ್ಲಿ ತನ್ನ ಸರ್ಕಾರವನ್ನು ಎರಡನೇ ಬಾರಿಯೂ ಉಳಿಸಿಕೊಳ್ಳುವಲ್ಲಿ ಸಫಲವಾಗಿರುವ ಬಿಜೆಪಿಯು ಈ ಪಂಚ ರಾಜ್ಯಗಳ ಪೈಕಿ ನಾಲ್ಕು ರಾಜ್ಯದಲ್ಲಿ ಆಡಳಿತವನ್ನು ಹೊಂದಿದೆ.

ಕಾಂಗ್ರೆಸ್‌ ಪಂಜಾಬ್‌ನಲ್ಲಿ ಮಾತ್ರ ಆಡಳಿತವನ್ನು ಹೊಂದಿದ್ದು, ಇಲ್ಲಿ ತನ್ನ ಸರ್ಕಾರವನ್ನು ಉಳಿಸಿಕೊಳ್ಳುವುದು ಕಾಂಗ್ರೆಸ್‌ಗೆ ಅತೀ ಅಗತ್ಯವಾಗಿದೆ. ಆದರೆ ಈ ನಡುವೆ ಉತ್ತರ ಪ್ರದೇಶದತ್ತ ಅಧಿಕ ಗಮನ ಹರಿಸಿರುವ ಬಿಜೆಪಿಯು ತನ್ನ ಆಡಳಿತದ ಉತ್ತರಾಖಂಡ, ಗೋವಾ, ಮಣಿಪುರದಲ್ಲಿಯೂ ಚುನಾವಣಾ ತಯಾರಿಯಲ್ಲಿ ಹಿಂದೆ ಏನಿಲ್ಲ. ಆದರೆ ಈ ಚುನಾವಣಾ ಕಾರ್ಯತಂತ್ರದಲ್ಲಿ ಬಿಜೆಪಿ ಕೊಂಚ ಎಡವಿದರೂ ಆಡಳಿತ ಚುಕ್ಕಾಣಿಯು ಬಿಜೆಪಿಯ ಕೈ ಜಾರುವ ಸಾಧ್ಯತೆ ಇದೆ.

2022 ರ ವಿಧಾನಸಭೆ ಚುನಾವಣೆ: ಮತಕ್ಕಾಗಿ ಯುಪಿಯಲ್ಲಿ ಹೀಗಿದೆ ಬಿಜೆಪಿಯ ಕಾರ್ಯತಂತ್ರ..2022 ರ ವಿಧಾನಸಭೆ ಚುನಾವಣೆ: ಮತಕ್ಕಾಗಿ ಯುಪಿಯಲ್ಲಿ ಹೀಗಿದೆ ಬಿಜೆಪಿಯ ಕಾರ್ಯತಂತ್ರ..

ಉತ್ತರಾಖಂಡವು ಈಗ ಒಟ್ಟು 70 ವಿಧಾನಸಭಾ ಸದಸ್ಯರನ್ನು ಆಯ್ಕೆ ಮಾಡಿಕೊಳ್ಳಲು ಸಿದ್ಧವಾಗುತ್ತಿದೆ. ಆದರೆ ಇಲ್ಲಿ ಇಬ್ಬರು ಮುಖ್ಯಮಂತ್ರಿಗಳು ರಾಜೀನಾಮೆ ನೀಡಿರುವ ಹಿನ್ನೆಲೆಯಿಂದಾಗಿ ಇದು ಬಿಜೆಪಿಗೆ ಮುಂದಿನ ಚುನಾವಣೆಯಲ್ಲಿ ತೊಂದರೆ ಉಂಟು ಮಾಡಲಿದೆಯೇ ಎಂಬ ಸಂಶಯಗಳು ಕೂಡಾ ಇದೆ. ಇನ್ನು ಗೋವಾದಲ್ಲಿ 2022 ರ ಫೆಬ್ರವರಿಯಲ್ಲಿ 40 ವಿಧಾನಸಭಾ ಸದಸ್ಯ ಸ್ಥಾನಕ್ಕೆ ಚುನಾವಣೆ ನಡೆಯಲಿದೆ. ಮಣಿಪುರದಲ್ಲಿ 60 ವಿಧಾನಸಭಾ ಸದಸ್ಯ ಸ್ಥಾನಕ್ಕೆ ಚುನಾವಣೆ ನಡೆಯಲಿದೆ. ಈ ಮೂರು ರಾಜ್ಯಗಳಲ್ಲಿ ಬಿಜೆಪಿ ಹೇಗೆ ತಯಾರಿ ನಡೆಸುತ್ತಿದೆ ಹಾಗೂ ಆ ರಾಜ್ಯಗಳಲ್ಲಿ ಯಾವೆಲ್ಲಾ ರಾಜಕೀಯ ಬೆಳವಣಿಗೆಗಳು ನಡೆದಿದೆ ಎಂದು ತಿಳಿಯಲು ಮುಂದೆ ಓದಿ.

 ಉತ್ತರಾಖಂಡದಲ್ಲಿ ಬಿಜೆಪಿ ಆಡಳಿತವನ್ನು ಉಳಿಸಿಕೊಳ್ಳುತ್ತಾ?

ಉತ್ತರಾಖಂಡದಲ್ಲಿ ಬಿಜೆಪಿ ಆಡಳಿತವನ್ನು ಉಳಿಸಿಕೊಳ್ಳುತ್ತಾ?

ಉತ್ತರಾಖಂಡದಲ್ಲಿ ಮುಂದಿನ ವರ್ಷ ವಿಧಾನಸಭೆ ಚುನಾವಣೆಯು ನಡೆಯಲಿದೆ. ಪ್ರಸ್ತುತ ಉತ್ತರಾಖಂಡದಲ್ಲಿ ಬಿಜೆಪಿ ಸರ್ಕಾರವಿದೆ. ಬಿಜೆಪಿ ಆಡಳಿತವನ್ನು ತನ್ನ ಕೈಗೆ ಪಡೆದ ಬಳಿಕ ಇಲ್ಲಿ ಎರಡು ಬಾರಿ ಮುಖ್ಯಮಂತ್ರಿ ಬದಲಾವಣೆ ಆಗಿದೆ. ಬಿಜೆಪಿಯ ಆಂತರಿಕ ರಾಜಕೀಯದ ಕಾರಣದಿಂದಾಗಿ ಎರಡೂ ಮುಖ್ಯಮಂತ್ರಿಗಳು ರಾಜೀನಾಮೆ ನೀಡಿದ್ದಾರೆ. 2021 ರ ಮಾರ್ಚ್‌ನಲ್ಲಿ ತ್ರಿವೇಂದ್ರ ಸಿಂಗ್‌ ರಾವತ್‌ ವಿರುದ್ಧದ ಧ್ವನಿಗಳು ಕೇಳಿ ಬಂದ ಕಾರಣದಿಂದಾಗಿ ಮುಖ್ಯಮಂತ್ರಿ ಸ್ಥಾನಕ್ಕೆ ತ್ರಿವೇಂದ್ರ ಸಿಂಗ್‌ ರಾವತ್‌ ರಾಜೀನಾಮೆ ನೀಡಿದರು. ಆ ಬಳಿಕ ತೀರತ್‌ ಸಿಂಗ್‌ ರಾವತ್‌ ಉತ್ತರಾಖಂಡದ ಮುಖ್ಯಮಂತ್ರಿ ಕುರ್ಚಿಗೆ ಏರಿದರು. ಆದರೆ ಬಳಿಕ ತೀರತ್‌ ಸಿಂಗ್‌ ರಾವತ್‌ ಕೂಡಾ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಈ ಕಾರಣದಿಂದಾಗಿ ಬಳಿಕ ಈ ಪುಷ್ಕರ್‌ ಸಿಂಗ್‌ ಧಾಮಿ ಉತ್ತರಾಖಂಡ ಮುಖ್ಯಮಂತ್ರಿ ಆಗಿದ್ದಾರೆ. ಹಾಗೆಯೇ 45 ವರ್ಷ ಪ್ರಾಯದ ಪುಷ್ಕರ್‌ ಸಿಂಗ್‌ ಧಾಮಿ ಯುವ ಮುಖ್ಯಮಂತ್ರಿ ಎಂಬ ಹೆಗ್ಗಳಿಕೆಯನ್ನೂ ಪಡೆದಿದ್ದಾರೆ. ಈ ರೀತಿಯಾಗಿ ಎರಡು ಬಾರಿ ಮುಖ್ಯಮಂತ್ರಿಯನ್ನು ಬದಲಾವಣೆ ಮಾಡಿಕೊಂಡಿರುವ ಬಿಜೆಪಿಯು ಈಗ ಉತ್ತರಾಖಂಡದಲ್ಲಿ ತನ್ನ ಸರ್ಕಾರವನ್ನು ಉಳಿಸಿಕೊಳ್ಳುತ್ತಾ ಎಂಬ ಪ್ರಶ್ನೆ ಮೂಡಿದೆ. ಕಾಂಗ್ರೆಸ್‌ ಮಾತ್ರ ಬಿಜೆಪಿಯು ಈ ರೀತಿಯಾಗಿ ರಾಜಕೀಯ ಅಸ್ಥಿರತೆಯನ್ನು ಸೃಷ್ಟಿ ಮಾಡಿ ಜನರಿಗೆ ತೊಂದರೆ ಉಂಟು ಮಾಡುತ್ತಿದೆ ಎಂದು ಆರೋಪ ಮಾಡಿದೆ. ಈ ನಡುವೆ ಉತ್ತರಾಖಂಡದಲ್ಲಿ ಅಧಿಕವಾಗಿ ಅಧಿಕಾರ ವಿರೋಧಿ ಅಲೆಯು ಹಬ್ಬಿದೆ. ಇನ್ನು ಇತ್ತೀಚೆಗೆ ಉತ್ತರಾಖಂಡ ರಾಜ್ಯ ಸಚಿವ ಯಶ್‌ಪಾಲ್‌ ಆರ್ಯ ತನ್ನ ಸ್ಥಾನಕ್ಕೆ ರಾಜೀನಾಮೆ ನೀಡಿ ಪಕ್ಷವನ್ನು ತೊರೆದು ಕಾಂಗ್ರೆಸ್‌ ಸೇರ್ಪಡೆ ಆಗಿದ್ದಾರೆ. ಅವರ ಪುತ್ರ, ಶಾಸಕ ಸಂಜೀವ ಆರ್ಯ ಕೂಡಾ ಬಿಜೆಪಿಗೆ ಕೈ ಕೊಟ್ಟು ಕಾಂಗ್ರೆಸ್‌ನ ಕೈ ಹಿಡಿದಿದ್ದಾರೆ.

 ಉತ್ತರಾಖಂಡದಲ್ಲಿ ಬಿಜೆಪಿಯ ಚುನಾವಣಾ ತಯಾರಿ

ಉತ್ತರಾಖಂಡದಲ್ಲಿ ಬಿಜೆಪಿಯ ಚುನಾವಣಾ ತಯಾರಿ

ಇನ್ನು ಉತ್ತರಾಖಂಡದಲ್ಲಿ ಬಿಜೆಪಿಯು ತಯಾರಿಯಲ್ಲಿ ಹಿಂದೆ ಬಿದ್ದಿರುವಂತೆ ಕಾಣುತ್ತಿದೆ. ಬಿಜೆಪಿ ಹೈಕಮಾಂಡ್‌ ಮುಖ್ಯವಾಗಿ ಉತ್ತರ ಪ್ರದೇಶದತ್ತ ಅಧಿಕ ಗಮನ ಹರಿಸಿರುವಂತೆ ಕಾಣುತ್ತಿದೆ. ಆದರೆ ಬಿಜೆಪಿಯು ಇಲ್ಲಿ ಮುಖ್ಯ ನಾಯಕರುಗಳಿಂದ ತಯಾರಿ ನಡೆಸುತ್ತಿರುವ ಮೂಲಕ ಮತ್ತೆ ನಾವೇ ಗೆಲ್ಲುತ್ತೇವೆ ಎಂಬ ವಿಶ್ವಾಸ ಹೊಂದಿರುವಂತೆ ಬಿಂಬಿಸುತ್ತಿದೆ. ಬಿಜೆಪಿಯು ಕಳೆದ 2017 ವಿಧಾನಸಭೆ ಚುನಾವಣೆಯಲ್ಲಿ ಉತ್ತರಾಖಂಡದ ಒಟ್ಟು 70 ವಿಧಾನಸಭೆ ಕ್ಷೇತ್ರದಲ್ಲಿ 57 ಕ್ಷೇತ್ರದಲ್ಲಿ ಗೆಲುವು ಸಾಧಿಸುವ ಮೂಲಕ ತನ್ನ ವಿಜಯ ಪತಾಕೆಯನ್ನು ಉತ್ತರಾಖಂಡದಲ್ಲಿ ಹಾರಿಸಿದೆ. ಶೇಕಡ 47 ಮತವನ್ನು ಬಿಜೆಪಿಯು ಪಡೆದಿದೆ. ಮುಂಬರುವ ಚುನಾವಣೆಯಲ್ಲಿ ಉತ್ತರಾಖಂಡದಲ್ಲಿ ಬಿಜೆಪಿಯು ಕಾಂಗ್ರೆಸ್‌ಗೆ ಎದುರಾಗಿ ನಿಲ್ಲಲು ತಯಾರಿ ನಡೆಸುತ್ತಿದೆ. ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್‌ 11 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ದು ಶೇಕಡ 34 ರಷ್ಟು ಮತವನ್ನು ಗಳಿಸಿದೆ. ಇನ್ನು ಇಲ್ಲಿ ಅರವಿಂದ್‌ ಕೇಜ್ರಿವಾಲ್‌ರ ಆಮ್‌ ಆದ್ಮಿ ಪಕ್ಷವೂ ಕೂಡಾ ಗೆಲುವು ಸಾಧಿಸಿದೆ. ಆದರೆ ಈ ಚುನಾವಣೆಗೆ ಬಿಜೆಪಿಗೆ ಇರುವ ಸವಾಲುಗಳನ್ನು ಅದು ದಾಟಿ ಮುಂಬರಲಿದೆಯೇ ಎಂದು ಕಾದು ನೋಡನಬೇಕಿದೆ. ಎಬಿಪಿ-ಸಿವೋಟರ್‌ ಸಮೀಕ್ಷೆಯು ಮತ್ತೆ ಉತ್ತರಾಖಂಡದಲ್ಲಿ ಬಿಜೆಪಿ ಸರ್ಕಾರ ಬರಲಿದೆ ಎಂದು ಹೇಳಿದೆ. ಬಿಜೆಪಿಗೆ ಇಲ್ಲಿ ಮುಖ್ಯವಾಗಿ ಉದ್ಯೊಗವಕಾಶದ ಕೊರತೆ, ಆರೋಗ್ಯ ವ್ಯವಸ್ಥೆಯಲ್ಲಿನ ಕೊರತೆ, ಕೋವಿಡ್‌ ಎರಡನೇ ಅಲೆಯನ್ನು ಸರಿಯಾಗಿ ನಿರ್ವಹಣೆ ಮಾಡದೆ ಇರುವುದು ಸವಾಲಾಗಿದೆ. ಬಿಜೆಪಿಯು ಇಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಮುದಾಳತ್ವದಲ್ಲಿ ಚುನಾವಣೆ ಎದುರಿಸಲು ಮುಂದಾಗಿದೆ. ಇತ್ತೀಚೆಗೆ ಬಿಜೆಪಿ ರಾಷ್ಟ್ರಾಧ್ಯಕ್ಷ ಬೂತ್‌ ಮಟ್ಟದಲ್ಲಿ ಕಾರ್ಯಕರ್ತರೊಂದಿಗೆ ಮಾತುಕತೆ ನಡೆಸಿದ್ದಾರೆ. ಸಂಸತ್ ಸದಸ್ಯ ಲಾಕೆಟ್ ಚಟರ್ಜಿ ಮತ್ತು ಪಕ್ಷದ ವಕ್ತಾರ ಆರ್ ಪಿ ಸಿಂಗ್ ಅವರು ಚುನಾವಣಾ ಉಸ್ತುವಾರಿ ಪ್ರಲ್ಹಾದ್ ಜೋಶಿ ಜೊತೆಗೆ ಇಲ್ಲಿನ ಚುನಾವಣಾ ಕಾರ್ಯತಂತ್ರವನ್ನು ನೋಡಿಕೊಳ್ಳುತ್ತಿದ್ದಾರೆ.

2022 ರ ವಿಧಾನಸಭೆ ಚುನಾವಣೆ: ಪಂಜಾಬ್‌ ಕಾಂಗ್ರೆಸ್‌ ಬಿಕ್ಕಟ್ಟಿನ ಲಾಭ ಪಡೆಯುತ್ತಾ ಬಿಜೆಪಿ?2022 ರ ವಿಧಾನಸಭೆ ಚುನಾವಣೆ: ಪಂಜಾಬ್‌ ಕಾಂಗ್ರೆಸ್‌ ಬಿಕ್ಕಟ್ಟಿನ ಲಾಭ ಪಡೆಯುತ್ತಾ ಬಿಜೆಪಿ?

 ಗೋವಾದಲ್ಲಿ ಬಿಜೆಪಿಗೆ ಒಂದೆರಡು ಸವಾಲುಗಳಲ್ಲ..!

ಗೋವಾದಲ್ಲಿ ಬಿಜೆಪಿಗೆ ಒಂದೆರಡು ಸವಾಲುಗಳಲ್ಲ..!

ಗೋವಾ ರಾಜ್ಯದಲ್ಲಿ ಪ್ರಸ್ತುತ ಬಿಜೆಪಿಯು ಆಡಳಿತ ನಡೆಸುತ್ತಿದೆ. ಈ ರಾಜ್ಯವೂ ಕೂಡಾ 2022 ರ ವಿಧಾನಸಭೆ ಚುನಾವಣೆಗೆ ಸಿದ್ದವಾಗುತ್ತಿದೆ. ಕಾಂಗ್ರೆಸ್‌ ಇಲ್ಲಿ ವಿರೋಧ ಪಕ್ಷವಾಗಿದೆ. 2017 ಕಾಂಗ್ರೆಸ್‌ ಇಲ್ಲಿನ 40 ವಿಧಾನಸಭೆ ಸ್ಥಾನಗಳ ಪೈಕಿ 17 ಸ್ಥಾನಗಳಲ್ಲಿ ಜಯ ಗಳಿಸಿದ್ದು ಈ ಮೂಲಕವಾಗಿ ಕಾಂಗ್ರೆಸ್‌ ಅತೀ ಅಧಿಕ ಸ್ಥಾನದಲ್ಲಿ ಗೆಲುವು ಸಾಧಿಸಿದೆ. ಬಿಜೆಪಿಯು 13 ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ. ಆದರೆ ದಿಢೀರ್‌ ಆಗಿ, ಬಿಜೆಪಿಯು ಸ್ಥಳೀಯ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಂಡು ಮನೋಹರ್‌ ಪಾರಿಕ್ಕಾರ್‌ ನೇತೃತ್ವದಲ್ಲಿ ಸರ್ಕಾರವನ್ನು ರಚನೆ ಮಾಡಿದೆ. ಗೋವಾದಲ್ಲಿ ಈಗ ಬಿಜೆಪಿಗೆ ಪೈಪೋಟಿ ನೀಡಲು ಆಪ್‌, ತೃಣಮೂಲ ಕಾಂಗ್ರೆಸ್‌ ಹಾಗೂ ಶಿವಸೇನೆಯು ಕೂಡಾ ಸಿದ್ಧವಾಗಿದೆ. ಬಿಜೆಪಿಯು ಗೋವಾದಲ್ಲಿ ಮತ್ತೆ ಸರ್ಕಾರವನ್ನು ರಚನೆ ಮಾಡಲು ಈ ಮೂರು ಪಕ್ಷ ಮಾತ್ರವಲ್ಲದೇ ಕಾಂಗ್ರೆಸ್‌ನ ವಿರುದ್ಧವಾಗಿ ಕಾರ್ಯತಂತ್ರ ರೂಪಿಸಬೇಕಾಗಿದೆ. ಬಿಜೆಪಿಯ ಮೈತ್ರಿ ಪಕ್ಷಗಳು ಆಗಿದ್ದ, ವಿಜಯ್ ಸರ್ದೇಸಾಯಿ ಅವರ ಗೋವಾ ಫಾರ್ವರ್ಡ್ ಪಾರ್ಟಿ ಹಾಗೂ ಸುದಿನ್ ಧವಳಿಕರ್ ಅವರ ಮಹಾರಾಷ್ಟ್ರವಾದಿ ಗೋಮಂತಕ್ ಪಾರ್ಟಿ ಈಗ ಎ‌ನ್‌ಡಿಎ ಕೂಟದಿಂದ ಹೊರ ನಡೆದಿದೆ. ಹಾಗಾಗಿ ಬಿಜೆಪಿಯು ಈಗ ಒಂಟಿಯಾಗಿ ಇಲ್ಲಿ ಚುನಾವಣೆ ಎದುರಿಸಬೇಕಾಗಿದೆ. ಇನ್ನು ಈ ನಡುವೆ ಕೋವಿಡ್‌ ನಿರ್ವಹಣೆಯಲ್ಲಿನ ಲೋಪದ ಹಿನ್ನೆಲೆ ಬಿಜೆಪಿಯ ವಿರುದ್ಧ ಜನರ ಆಕ್ರೋಶವು ಇದೆ. ಮುಖ್ಯವಾಗಿ ಬಿಜೆಪಿಯು ಮನೋಹರ್‌ ಪಾರಿಕ್ಕಾರ್‌ರಂತಹ ಮುಖ್ಯ ನಾಯಕರನ್ನೇ ಕಳೆದುಕೊಂಡಿದೆ. ಇಲ್ಲಿನ ಚುನಾವಣೆಯ ಜವಾಬ್ದಾರಿಯನ್ನು ಬಿಜೆಪಿಯು ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್‌ ಅವರಿಗೆ ನೀಡಿದೆ. ದೇವೇಂದ್ರ ಫಡ್ನವೀಸ್‌ ಗೊವಾ ರಾಜ್ಯದ ರಾಜಕೀಯದ ಬಗ್ಗೆ ಹೆಚ್ಚಾಗಿ ತಿಳಿದಿದ್ದಾರೆ. ಇಲ್ಲಿನ ಚುನಾವಣೆಯ ಕಾರ್ಯತಂತ್ರವನ್ನು ನೋಡಿಕೊಳ್ಳುವಲ್ಲಿ ದೇವೇಂದ್ರ ಫಡ್ನವೀಸ್‌ಗೆ ಕೇಂದ್ರ ಸಂಸ್ಕೃತಿ ಸಚಿವ ಜಿ ಕಿಶನ್ ರೆಡ್ಡಿ ಮತ್ತು ಸೂರತ್ ಸಂಸದ ದರ್ಶನಾ ಜರ್ದೋಷ್ ಜೊತೆಯಾಗಿದ್ದಾರೆ.

 ಬಿಜೆಪಿಗೆ ಮತ್ತೆ ಒಲಿಯಲಿದೆಯೇ ಮಣಿಪುರ

ಬಿಜೆಪಿಗೆ ಮತ್ತೆ ಒಲಿಯಲಿದೆಯೇ ಮಣಿಪುರ

ಈ ಎಲ್ಲಾ ರಾಜ್ಯಗಳ ನಡುವೆ ಮಣಿಪುರವು ಬಿಜೆಪಿಗೆ ಮತ್ತೆ ಒಲಿಯಲಿದೆಯೇ ಎಂದು ಮುಂದಿನ ಚುನಾವಣೆಯಲ್ಲಿ ನಾವು ಕಾದು ನೋಡಬೇಕಿದೆ. ಮಣಿಪುರದಲ್ಲಿ ಒಟ್ಟು 60 ವಿಧಾನಸಭೆ ಕ್ಷೇತ್ರಗಳು ಇದೆ. ಕಳೆದ 2017 ರ ವಿಧಾನಸಭೆ ಚುನಾವಣೆಯಲ್ಲಿ ಈ 60 ವಿಧಾನಸಭೆ ಕ್ಷೇತ್ರಗಳ ಪೈಕಿ ಬಿಜೆಪಿಯು 21 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದೆ. ಬಳಿಕ ಸ್ಥಳೀಯ ಪಕ್ಷ ನಾಗಾ ಪೀಪಲ್ಸ್ ಫ್ರಂಟ್ ಮತ್ತು ನ್ಯಾಷನಲ್ ಪೀಪಲ್ಸ್ ಪಾರ್ಟಿ (ಎನ್‌ಪಿಪಿ) ಜೊತೆ ಸೇರಿ ಸರ್ಕಾರವನ್ನು ರಚನೆ ಮಾಡಿದೆ. ಆದರೆ ಮುಂಬರುವ ಚುನಾವಣೆಯಲ್ಲಿ ನ್ಯಾಷನಲ್ ಪೀಪಲ್ಸ್ ಪಾರ್ಟಿ (ಎನ್‌ಪಿಪಿ) ಪ್ರತ್ಯೇಕವಾಗಿ ಸ್ಪರ್ಧೆಗೆ ಇಳಿಯಲಿದೆ ಎಂದು ವರದಿಯಾಗಿದೆ. ಹಾಗೆಯೇ ಮಣಿಪುರದ ಹೆಚ್ಚಿನ ಕ್ಷೇತ್ರದಲ್ಲಿ ಎನ್‌ಪಿಪಿ ತನ್ನ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಲಿದೆ. ಪ್ರಸ್ತುತ ಎನ್‌ಪಿಪಿಯ ನಾಲ್ವರು ಶಾಸಕರುಗಳು ಇದ್ದಾರೆ. ಈ ಪೈಕಿ ಇಬ್ಬರು ಕೇಂದ್ರದ ಬಿಜೆಪಿ ನೇತೃತ್ವದ ಸರ್ಕಾರದಲ್ಲಿ ಸಚಿವರು ಆಗಿದ್ದಾರೆ. ಬಿಜೆಪಿಯು ಈಗ ಮಣಿಪುರದಲ್ಲಿ ಒಬಿಸಿ ನಾಯಕ ಹಾಗೂ ಕೇಂದ್ರ ಪರಿಸರ ಸಚಿವ ಭೂಪೇಂದರ್ ಯಾದವ್‌ರನ್ನು ಚುನಾವಣಾ ಉಸ್ತುವಾರಿ ಆಗಿ ನೇಮಕ ಮಾಡಿದೆ. ಇತ್ತೀಚೆಗೆ ಗೃಹ ಸಚಿವ ಅಮಿತ್ ಶಾ ಮತ್ತು ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ ಅವರು ಮುಂಬರುವ ವಿಧಾನಸಭಾ ಚುನಾವಣೆಯ ಕುರಿತು ಮಣಿಪುರ ಮುಖ್ಯಮಂತ್ರಿ ಎನ್ ಬಿರೇನ್ ಸಿಂಗ್ ಮತ್ತು ಇತರ ಪಕ್ಷದ ನಾಯಕರೊಂದಿಗೆ ಸಮಾಲೋಚನೆ ನಡೆಸಿದರು. ಬಿಜೆಪಿ ಪ್ರಧಾನ ಕಾರ್ಯದರ್ಶಿ ಬಿಎಲ್ ಸಂತೋಷ್, ಚುನಾವಣಾ ಉಸ್ತುವಾರಿ ಯಾದವ್ ಮತ್ತು ಪಕ್ಷದ ವಕ್ತಾರ ಸಂಬಿತ್ ಪಾತ್ರಾ ಕೂಡ ಸಭೆಯಲ್ಲಿ ಹಾಜರಿದ್ದರು. ಬಿಜೆಪಿ ನಾಯಕರು ರಾಜ್ಯದ ರಾಜಕೀಯ ಪರಿಸ್ಥಿತಿ ಕುರಿತು ಚರ್ಚಿಸಿದ್ದಾರೆ.

(ಒನ್‌ಇಂಡಿಯಾ ಸುದ್ದಿ)

English summary
Assembly Polls 2022: BJP Strategy In Uttarakhand, Goa and Manipur. Explained here, Read on.
Related News
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X