ಇಡಿ ಬಂಧನ ಭೀತಿಯಿಂದ ಡಿಕೆಶಿ ಸೇಫ್? ಕಾಂಗ್ರೆಸ್ಸಿನ ಆ ಆಪತ್ಬಾಂಧವ ಯಾರು?


ಡಿ ಕೆ ಶಿವಕುಮಾರ್ ರನ್ನ ಇಡಿ ಬಂಧನ ಭೀತಿಯಿಂದ ಪಾರು ಮಾಡಿದ ಆ ಆಪತ್ಬಾಂಧವ ಯಾರು?

ಹಣ್ಣು ಕೆಂಪಗಿದ್ದರೆ, ಮರಕ್ಕೆ ಕಲ್ಲು ಹೊಡೆಯುವುದು ಸಹಜ, ಎಲ್ಲವನ್ನೂ ದೇವರು ನೋಡುತ್ತಿದ್ದಾನೆಂದು, ತಮ್ಮ ಬಂಧನದ ಸುದ್ದಿಯ ಬಗ್ಗೆ ಎರಡು ದಿನದ ಹಿಂದೆ ಮಾರ್ಮಿಕವಾಗಿ ಹೇಳಿಕೆ ನೀಡಿದ್ದ ಸಚಿವ ಡಿ ಕೆ ಶಿವಕುಮಾರ್, ಸೋಮವಾರ (ಸೆ 10) ದೆಹಲಿಯಲ್ಲಿ ತಮ್ಮ ಮಾತಿನ ಧಾಟಿಯನ್ನೇ ಬದಲಿಸಿದ್ದರು.

ಸೋಮವಾರ ಬೆಳಗ್ಗೆ ಡಿ ಕೆ ಶಿವಕುಮಾರ್ ಬಂಧನ ಸಾಧ್ಯತೆ ಎಂದು ಮಾಧ್ಯಮಗಳಲ್ಲಿ ಸುದ್ದಿಯಾಗಿತ್ತು, ಅದಕ್ಕೆ ಸರಿಯಾಗಿ ಅವರ ಸಹೋದರ ಡಿ ಕೆ ಸುರೇಶ್ ತುರ್ತು ಪತ್ರಿಕಾಗೋಷ್ಠಿಯನ್ನೂ ಕರೆದಿದ್ದರು. ಶನಿವಾರ ನಡೆದ ಎಲ್ಲಾ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಗಮನಿಸಿದ್ದ ಡಿಕೆಶಿ, ಭಾನುವಾರ ಇದ್ದಕ್ಕಿದ್ದಂತೇ ಅಜ್ಞಾತಸ್ಥಳಕ್ಕೆ ತೆರಳಿ, ಅಲ್ಲಿಂದಲೇ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಆಗಮಿಸಿ, ದೆಹಲಿ ವಿಮಾನ ಹತ್ತಿದ್ದರು.

ಬಂಧನ ಭೀತಿ ಇಲ್ಲ : ವರಸೆ ಬದಲಿಸಿದ ಡಿ.ಕೆ.ಶಿವಕುಮಾರ್

ಸೋಮವಾರ, ರಾಜ್ಯದ ನಿಯೋಗದೊಂದಿಗೆ ಪ್ರಧಾನಿಯವರನ್ನು ಭೇಟಿಯಾಗುವ ಮುನ್ನ, ಇಡಿ, ಐಟಿ ಮತ್ತು ಸಿಬಿಐ ದಾಳಿಯ ವಿಚಾರದಲ್ಲಿ, ಡಿ ಕೆ ಶಿವಕುಮಾರ್ ಭರ್ಜರಿ ಪೂರ್ವತಯಾರಿ ನಡೆಸಿಕೊಂಡಿದ್ದರು. ಪಕ್ಷದ ಹಲವು ಹಿರಿಯ ಮುಖಂಡರು, ಕಾನೂನು ತಜ್ಞರನ್ನು ಡಿಕೆಶಿ ಭೇಟಿಯಾಗಿ, ಸಲಹೆಗಳನ್ನು ಪಡೆದುಕೊಂಡಿದ್ದರು.

ಪಕ್ಷದ ಮುಖಂಡರಿಂದ ಸಿಕ್ಕ ಬೆಂಬಲಕ್ಕೋ ಏನೋ, ಎರಡು ದಿನದ ಹಿಂದೆ ಡಿಕೆಶಿ ನೀಡಿದ್ದ ಹೇಳಿಕೆಗೂ, ದೆಹಲಿಯಲ್ಲಿ ನೀಡಿದ್ದ ಹೇಳಿಕೆಗೂ ಬಹಳ ವ್ಯತ್ಯಾಸವಿದ್ದವು. 'ನನಗೆ ಯಾವುದೇ ಬಂಧನದ ಭೀತಿ ಇಲ್ಲ' ಎನ್ನುವ ಖಡಕ್ ಹೇಳಿಕೆ ಡಿಕೆ ಶಿವಕುಮಾರ್ ಕಡೆಯಿಂದ ಬಂದಿತ್ತು.

ಮುಂದೆ ಏನಾಗುತ್ತೋ ಗೊತ್ತಿಲ್ಲ: ಏನಿದು ಡಿಕೆಶಿ ಹೇಳಿಕೆಯ ಹಿಂದಿನ ಗೂಢಾರ್ಥ?

ಮೋದಿ ಭೇಟಿಯ ಮುನ್ನಾದಿನ ಡಿ ಕೆ ಶಿವಕುಮಾರ್, ಕಾಂಗ್ರೆಸ್ಸಿನ ಹಲವು ಹಿರಿಯ ಮುಖಂಡರನ್ನು ಭೇಟಿಯಾಗಿದ್ದರು. ರಾಹುಲ್ ಗಾಂಧಿಯವರ ಬಳಿಯೂ ನಿಮ್ಮ ವಿಷಯವನ್ನು ತಲುಪಿಸುವುದಾಗಿ ಹಿರಿಯ ಮುಖಂಡರೊಬ್ಬರಿಂದ ಬಂದಿದ್ದರಿಂದ ಡಿ ಕೆ ಶಿವಕುಮಾರ್ ಸದ್ಯ ನಿರಾಳರಾಗಿದ್ದಾರೆ.

ಅಭಿಶೇಕ್ ಸಿಂಘ್ವಿ, ಕಪಿಲ್ ಸಿಬಲ್

ಡಿ ಕೆ ಶಿವಕುಮಾರ್ ತಮ್ಮ ದೆಹಲಿ ಭೇಟಿಯ ವೇಳೆ, ಎಐಸಿಸಿ ಖಜಾಂಜಿ ಅಹಮದ್ ಪಟೇಲ್, ಕಾನೂನಾತ್ಮಕವಾಗಿ ಸಲಹೆ ನೀಡುವ ಅಭಿಶೇಕ್ ಸಿಂಘ್ವಿ, ಕಪಿಲ್ ಸಿಬಲ್ ಮುಂತಾದವರನ್ನು ಡಿ ಕೆ ಶಿವಕುಮಾರ್ ಭೇಟಿಯಾಗಿದ್ದರು. ಭೇಟಿಯ ಸಂದರ್ಭದಲ್ಲಿ ಎಲ್ಲವನ್ನೂ ಎಳೆಎಳೆಯಾಗಿ ಬಿಡಿಸಿ, ಒಂದು ವೇಳೆ ಜಾರಿ ನಿರ್ದೇಶನಾಲಯಯಿಂದ (ಇಡಿ) ಸಮನ್ಸ್ ಜಾರಿಯಾದರೆ ಹೇಗೆ, ಮುಂದಿನ ಹೆಜ್ಜೆಯಿಡಬೇಕು ಎನ್ನುವ ಟಿಪ್ಸ್ ಪಡೆದಿದ್ದಾರೆ ಎನ್ನುವ ಮಾಹಿತಿಯಿದೆ.

ಯಾವುದೇ ತೊಂದರೆ ಬಂದರೂ, ಪಕ್ಷ ನಿಮ್ಮ ಜೊತೆ ಇರುತ್ತೆ

ಅಹಮದ್ ಪಟೇಲ್ ಅವರ ಜೊತೆ ಸುದೀರ್ಘ ಚರ್ಚೆ ನಡೆಸಿದ ಡಿಕೆಶಿ, ಸಮ್ಮಿಶ್ರ ಸರಕಾರ, ರಾಜ್ಯ ಬಿಜೆಪಿ ಘಟಕದ ಆಗುಹೋಗುಗಳು ಮತ್ತು ಕೇಸಿನ ವಿಚಾರದ ಬಗ್ಗೆ ಮಾತನಾಡಿದ್ದಾರೆ. ಯಾವುದೇ ತೊಂದರೆ ಬಂದರೂ, ಪಕ್ಷ ನಿಮ್ಮ ಜೊತೆ ಇರುತ್ತೆ ಎನ್ನುವ ಭರವಸೆ ಅಹಮದ್ ಪಟೇಲ್ ಕಡೆಯಿಂದ ಡಿಕೆಶಿಗೆ ಬಂದಿದೆ ಎನ್ನುವ ಸುದ್ದಿಯಿದೆ. ಖುದ್ದು, ಅಹಮದ್ ಪಟೇಲ್ ಕಾಂಗ್ರೆಸ್ಸಿನ ಲೀಗಲ್ ಶೆಲ್ ಜೊತೆ ಮಾತುಕತೆ ನಡೆಸಿದ್ದಾರೆ.

ಬಂಧನ ಭೀತಿಯ ಬಗ್ಗೆ ಡಿಕೆ ಶಿವಕುಮಾರ್ ಏನು ಹೇಳಿದರು?

ಸದ್ಯ ಇಡಿಯಿಂದ ಡಿ ಕೆ ಶಿವಕುಮಾರ್ ಅವರಿಗೆ ತೊಂದರೆಯಿಲ್ಲ

ಆಪ್ತರ ಮೂಲಕ ಜಾರಿ ನಿರ್ದೇಶನಾಲಯದ ಅಧಿಕಾರಿಗಳಿಂದ ಅಹಮದ್ ಪಟೇಲ್ ಮಾಹಿತಿ ಕಲೆಹಾಕಿದ್ದಾರೆ. ಕೆಲವೊಂದು ಮೂಲಗಳ ಪ್ರಕಾರ, ಸದ್ಯ ಇಡಿಯಿಂದ ಡಿ ಕೆ ಶಿವಕುಮಾರ್ ಅವರಿಗೆ ತೊಂದರೆಯಿಲ್ಲ. ಗುಜರಾತ್ ನಿಂದ ರಾಜ್ಯಸಭೆ ಪ್ರವೇಶಿಸಲು ಸಹಾಯ ಮಾಡಿದ, ಡಿ ಕೆ ಶಿವಕುಮಾರ್ ಅವರಿಗೆ, ಏನೇ ಬಂದರೂ ನಿಮ್ಮ ಬೆನ್ನ ಹಿಂದೆ ನಾನು ಮತ್ತು ಪಕ್ಷ ಇರುತ್ತದೆ ಎಂದು ಅಭಯ ನೀಡಿ ಕಳುಹಿಸಿದ್ದಾರೆ, ಆ ಮೂಲಕ ಅಹಮದ್ ಪಟೇಲ್ ಅಂದು ಮಾಡಿದ ಸಹಾಯಕ್ಕೆ ಋಣ ಸಂದಾಯ ಮಾಡಿದ್ದಾರೆ.

ಡಿಕೆಶಿ ನಿವಾಸ/ಕಚೇರಿಯ ಮೇಲೆ ಐಟಿ ದಾಳಿ ನಡೆದಿತ್ತು

ಅಹಮದ್ ಪಟೇಲ್ ಗೆ ರಾಜಕೀಯ ಮರುಹುಟ್ಟು ನೀಡಲು ಡಿಕೆಶಿ ಸಹೋದರರು ಸಹಾಯ ಮಾಡಿದ ನಂತರ, ಸಹೋದರರ ಮೇಲೆ ಐಟಿ/ಇಡಿ ಕುಣಿಕೆ ಜಾಸ್ತಿಯಾಗಿತ್ತು. ಅದೇ ಸಮಯದಲ್ಲಿ ಡಿಕೆಶಿ ನಿವಾಸ/ಕಚೇರಿಯ ಮೇಲೆ ಐಟಿ ದಾಳಿ ನಡೆದಿತ್ತು. ಆದರೆ, ಏನೇ ತೊಂದರೆ ಎದುರಾದರೂ, ಹೈಕಮಾಂಡ್ ವಹಿಸಿದ್ದ ಕೆಲಸವನ್ನು ಸಮರ್ಥವಾಗಿ ನಿಭಾಯಿಸಿ, ಸೋನಿಯಾ ಆಪ್ತವಲಯದಲ್ಲಿ ಡಿಕೆಶಿ ಸೈ ಎನಿಸಿಕೊಂಡಿದ್ದರು.

ರೋಗ ಬಂದಾಗ, ಡಾಕ್ಟರ್ ಗಿಂತ ರೋಗಿಯನ್ನೇ ಭೇಟಿ ಮಾಡಬೇಕಾಗುತ್ತದೆ

ಕೆಲವೊಮ್ಮೆ ರೋಗ ಬಂದಾಗ, ಡಾಕ್ಟರ್ ಗಿಂತ ರೋಗಿಯನ್ನೇ ಭೇಟಿ ಮಾಡಬೇಕಾಗುತ್ತದೆ ಎಂದು ನವದೆಹಲಿಯಲ್ಲಿ ಹೇಳಿಕೆ ನೀಡಿದ ಡಿ ಕೆ ಶಿವಕುಮಾರ್ ಸದ್ಯದ ಮಟ್ಟಿಗೆ ನಿರಾಳರಾದಂತೆ ಕಾಣಿಸುತ್ತಿದೆ. ಪೆಟ್ಟು ತಿಂದರಷ್ಟೇ ವಿಗ್ರಹವಾಗಲು ಸಾಧ್ಯ ಎನ್ನುವ ಡಿ ಕೆ ಶಿವಕುಮಾರ್, ಐಟಿ/ಇಡಿ ದಾಳಿಯ ವಿಚಾರದಲ್ಲಿ ಹೈಕಮಾಂಡ್ ವಲಯದಲ್ಲಿ ದಿನದಿಂದ ದಿನಕ್ಕೆ ಪ್ರಬಲರಾಗುತ್ತಿರುವುದು ಸ್ಪಷ್ಟ.

Have a great day!
Read more...

English Summary

Is Karnataka Minister DK Shivakumar and his brother cum MP DK Suresh is safe from Enforcement Directorate arrest for time being? Who is the god father in Congress for D K Shivakumar brothers.