ಕಾಂಗ್ರೆಸ್‌ ಮುಂದೆ 4 ಬೇಡಿಕೆ ಇಟ್ಟ ಜಾರಕಿಹೊಳಿ ಸಹೋದರರು!


ಕಾಂಗ್ರೆಸ್‌ ಮುಂದೆ 4 ಬೇಡಿಕೆ ಇಟ್ಟ ಜಾರಕಿಹೊಳಿ ಸಹೋದರರು! | Oneindia Kannada

ಬೆಂಗಳೂರು, ಸೆಪ್ಟೆಂಬರ್ 12 : ಕರ್ನಾಟಕ ಕಾಂಗ್ರೆಸ್‌ನಲ್ಲಿನ ಚಟುವಟಿಕೆಗಳ ವರದಿ ದೆಹಲಿ ತಲುಪಿದೆ. ಜಾರಕಿಹೊಳಿ ಸಹೋದರರ ಜೊತೆ ಹೈಕಮಾಂಡ್ ನಾಯಕರು ಮಾತುಕತೆ ನಡೆಸಿದ್ದು, ಅಸಮಾಧಾನವನ್ನು ಶಮನಗೊಳಿಸುವ ಸೂಚನೆ ನೀಡಿದ್ದಾರೆ.

ಸತೀಶ್ ಜಾರಕಿಹೊಳಿ ಮತ್ತು ರಮೇಶ್ ಜಾರಕಿಹೊಳಿ ಅವರು ಕಾಂಗ್ರೆಸ್ ಹೈಕಮಾಂಡ್ ಮತ್ತು ಸಮ್ಮಿಶ್ರ ಸರ್ಕಾರದ ಮುಂದೆ 4 ಬೇಡಿಕೆ ಮುಂದಿಟ್ಟಿದ್ದಾರೆ. ಬೇಡಿಕೆಗಳನ್ನು ಈಡೇರಿಸಿದರೆ ಪಕ್ಷದಲ್ಲಿ ಉಳಿಯುತ್ತೇವೆ. ಇಲ್ಲವಾದಲ್ಲಿ ಮುಂದಿನ ನಿರ್ಧಾರ ಎಂದು ಸ್ಪಷ್ಟಪಡಿಸಿದ್ದಾರೆ.

ಉದ್ಯಮ, ರಾಜಕೀಯ : ಜಾರಕಿಹೊಳಿ ಸಹೋದರರ ಪ್ರಭಾವವಿದು!

ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್, ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ ಅವರ ಜೊತೆ ಮಾತುಕತೆ ನಡೆಸಿದಾಗ 4 ಬೇಡಿಕೆಗಳ ಬಗ್ಗೆ ಸ್ಪಷ್ಟವಾಗಿ ಹೇಳಿದ್ದಾರೆ. ಎರಡು ಬೇಡಿಕೆಗೆ ಒಪ್ಪಿಗೆ ನೀಡಿರುವ ನಾಯಕರು ಇನ್ನೆರಡು ಬೇಡಿಕೆ ಪೂರ್ಣಗೊಳಿಸಲು ಕಾಲಾವಕಾಶ ಕೇಳಿದ್ದಾರೆ.

ಬಿಜೆಪಿ ಸೇರಲು 4 ಷರತ್ತು ಹಾಕಿದ ರಮೇಶ್ ಜಾರಕಿಹೊಳಿ!

ವಿದೇಶ ಪ್ರವಾಸದಲ್ಲಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬೆಂಗಳೂರಿಗೆ ವಾಪಸ್ ಬಂದ ಬಳಿಕ ಜಾರಕಿಹೊಳಿ ಸಹೋದರರು ಅಂತಿಮ ತೀರ್ಮಾನವನ್ನು ಪ್ರಕಟಿಸುವ ಸಾಧ್ಯತೆ ಇದೆ. ಬೆಂಗಳೂರಿನಲ್ಲಿ ರಮೇಶ್ ಜಾರಕಿಹೊಳಿ ಭೇಟಿ ಮಾಡಲು ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ನಡೆಸಿದ ಪ್ರಯತ್ನ ಫಲ ಕೊಟ್ಟಿಲ್ಲ.

ಬೆಳಗಾವಿ ಕಾಂಗ್ರೆಸ್ ಅಸಮಾಧಾನ : ರಮೇಶ್ v/s ಡಿ.ಕೆ.ಶಿವಕುಮಾರ್!

ಬೇಡಿಕೆ - 1

ಬೆಳಗಾವಿ ಜಿಲ್ಲಾ ರಾಜಕಾರಣದಲ್ಲಿ ಸಚಿವ ಡಿ.ಕೆ.ಶಿವಕುಮಾರ್ ಸೇರಿದಂತೆ ಯಾವ ನಾಯಕರು ತಲೆ ಹಾಕಬಾರದು. ಬೆಳಗಾವಿ ಜಿಲ್ಲೆಯ ಆಂತರಿಕ ರಾಜಕಾರಣವನ್ನು ನಾವು ನೋಡಿಕೊಳ್ಳುತ್ತೇವೆ ಎಂಬುದು ಮೊದಲ ಬೇಡಿಕೆಯಾಗಿದೆ.

ಬೆಳಗಾವಿ ಪಿಎಲ್‌ಡಿ ಬ್ಯಾಂಕ್ ಚುನಾವಣೆ ಸಮಯದಲ್ಲಿ ಇದೇ ಮಾತನ್ನು ರಮೇಶ್ ಜಾರಕಿಹೊಳಿ ಬಹಿರಂಗವಾಗಿ ಹೇಳಿದ್ದರು. ಜಿಲ್ಲೆಯ ರಾಜಕಾರಣದಲ್ಲಿ ಯಾರೂ ಹಸ್ತಕ್ಷೇಪ ಮಾಡಬಾರದು ಎಂದು ಹೇಳಿದ್ದರು.

ಬೇಡಿಕೆ - 2

ಬೆಳಗಾವಿ ಜಿಲ್ಲೆಯ ರಾಜಕಾರಣದಲ್ಲಿ ನಮ್ಮ ಮಾತಿಗೆ ಆದ್ಯತೆ ನೀಡಬೇಕು. ಜಿಲ್ಲೆಯಲ್ಲಿ ಪಕ್ಷ ಮತ್ತು ಸರ್ಕಾರದ ಹಿತ ಕಾಯುವುದು ನಮ್ಮ ಜವಾಬ್ದಾರಿ.

ಬೆಳಗಾವಿಯಲ್ಲಿ ನಮ್ಮ ಮಾತು ಅಂತಿಮವಾಗಬೇಕು. ನೇಮಕಾತಿ, ಅಧಿಕಾರಿಗಳ ವರ್ಗಾವಣೆ ಸೇರಿದಂತೆ ಯಾವುದೇ ವಿಚಾರದಲ್ಲಿ ಯಾವ ನಾಯಕರು ತಲೆ ಹಾಕಬಾರದು ಎಂಬುದು 2ನೇ ಬೇಡಿಕೆಯಾಗಿದೆ.

ಈ ಬೇಡಿಕೆ ಮೂಲಕ ಜಿಲ್ಲಾ ರಾಜಕಾರಣದಲ್ಲಿ ಬೆಳಗಾವಿ ಗ್ರಾಮಾಂತರ ಕ್ಷೇತ್ರದ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಅವರ ಪ್ರಭಾವವನ್ನು ತಗ್ಗಿಸಲು ಜಾರಕಿಹೊಳಿ ಸಹೋದರರು ಬಯಸಿದ್ದಾರೆ.

ಬೇಡಿಕೆ -3

ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರದಲ್ಲಿ 6 ಸಚಿವ ಸ್ಥಾನಗಳು ಖಾಲಿ ಇವೆ. ಸಂಪುಟ ವಿಸ್ತರಣೆ ಮಾಡುವಾಗ ವಾಲ್ಮೀಕಿ ಸಮುದಾಯದಕ್ಕೆ ಸೇರಿದ ನಾಯಕರಿಗೆ ಸಚಿವ ಸ್ಥಾನವನ್ನು ನೀಡಬೇಕು ಎಂಬುದು ಜಾರಕಿಹೊಳಿ ಸಹೋದರರ 3ನೇ ಬೇಡಿಕೆಯಾಗಿದೆ.

ಸತೀಶ್ ಜಾರಕಿಹೊಳಿ ಅವರು ಸಚಿವರಾಗಲಿದ್ದಾರೆಯೇ? ಕಾದು ನೋಡಬೇಕು. ಸತೀಶ್ ಜಾರಕಿಹೊಳಿ ಸೇರದಿದ್ದರೆ ಯಾರ ಹೆಸರನ್ನು ಸೂಚಿಸಲಿದ್ದಾರೆ? ಎಂಬುದು ಕುತೂಹಲಕ್ಕೆ ಕಾರಣವಾಗಿದೆ.

ಬೇಡಿಕೆ - 4

ಒಂದು ಸಚಿವ ಸ್ಥಾನ ಮಾತ್ರವಲ್ಲ. ನಮ್ಮ ಬೆಂಬಲಿತ 4 ಶಾಸಕರಿಗೆ ಉತ್ತಮ ನಿಗಮ-ಮಂಡಳಿಗಳ ಅಧ್ಯಕ್ಷ ಸ್ಥಾನವನ್ನು ನೀಡಬೇಕು ಎಂದು ಜಾರಕಿಹೊಳಿ ಸಹೋದರರು ಬೇಡಿಕೆ ಇಟ್ಟಿದ್ದಾರೆ.

ನಮ್ಮ ಜೊತೆ 11 ಶಾಸಕರು ಇದ್ದಾರೆ ಎಂದು ರಮೇಶ್ ಜಾಕಿಹೊಳಿ ಅವರು ಹೇಳುತ್ತಿದ್ದಾರೆ. ಪ್ರಮುಖವಾದ ನಿಗಮ-ಮಂಡಳಿಗಳಿಗೆ ಅವರು ಬೇಡಿಕೆ ಇಡಬಹುದು. ನಿಗಮ-ಮಂಡಳಿ ನೇಮಕಾತಿ ಹಲವು ದಿನದಿಂದ ಬಾಕಿ ಉಳಿದಿದೆ.

ಎರಡು ಬೇಡಿಕೆಗೆ ಒಪ್ಪಿಗೆ

ಕಾಂಗ್ರೆಸ್ ನಾಯಕರು ಜಾರಕಿಹೊಳಿ ಸಹೋದರರ 2 ಬೇಡಿಗೆ ಒಪ್ಪಿಗೆ ನೀಡಿದ್ದಾರೆ. ಆದರೆ, ಇನ್ನೆರಡು ಬೇಡಿಕೆಗಳನ್ನು ಈಡೇರಿಸಲು ಕಾಲಾವಕಾಶ ಕೇಳಿದ್ದಾರೆ. ಸಂಪುಟ ವಿಸ್ತರಣೆ ಮತ್ತು ನಿಗಮ-ಮಂಡಳಿ ನೇಮಕದ ಬಗ್ಗೆ ಜೆಡಿಎಸ್ ನಾಯಕರ ಜೊತೆ ಕಾಂಗ್ರೆಸ್ ಚರ್ಚೆ ಮಾಡಬೇಕು. ಆದ್ದರಿಂದ, ಕಾಲಾವಕಾಶ ಕೇಳಲಾಗಿದೆ.

ಸಿದ್ದರಾಮಯ್ಯ ಅವರು ವಿದೇಶದಿಂದ ಬಂದ ಬಳಿಕ ಸಮನ್ವಯ ಸಮಿತಿ ಸಭೆ ನಡೆಯಲಿದ್ದು, ಆಗ ಕೆ.ಸಿ.ವೇಣುಗೋಪಾಲ್ ಅವರು ಪಕ್ಷದಲ್ಲಿನ ಬೆಳವಣಿಗೆಗಳ ಕುರಿತು ಚರ್ಚೆ ನಡೆಸುವ ಸಾಧ್ಯತೆ ಇದೆ.

Have a great day!
Read more...

English Summary

Ramesh Jarkiholi and Satish Jarkiholi put 4 demand for party leader's and Congress-JD(S) alliance government to stay with alliance government.