ಧಾರವಾಡ, ಆಗಸ್ಟ್ 02 : ಕರ್ನಾಟಕದಲ್ಲಿ ಭಾರತೀಯ ತಂತ್ರಜ್ಞಾನ ಸಂಸ್ಥೆ (ಐಐಟಿ) ಸ್ಥಾಪನೆಯಾಗಬೇಕು ಎಂಬ ಕನಸು ನನಸಾಗಿದೆ. ಧಾರವಾಡದಲ್ಲಿನ ತಾತ್ಕಾಲಿಕ ಕ್ಯಾಂಪಸ್ನಲ್ಲಿ ಸೋಮವಾರದಿಂದ ತರಗತಿಗಳು ಆರಂಭವಾದವು.
ಧಾರವಾಡದ ಜಲಸಂಪನ್ಮೂಲ ಇಲಾಖೆಯ ವಾಲ್ಮಿ ಕಟ್ಟಡದಲ್ಲಿ ಸೋಮವಾರ ಐಐಟಿ ತರಗತಿಗಳು ಆರಂಭವಾದವು. 2016-17ನೇ ಶೈಕ್ಷಣಿಕ ವರ್ಷಕ್ಕೆ 120 ವಿದ್ಯಾರ್ಥಿಗಳಿಗೆ ಪ್ರವೇಶ ನೀಡಲಾಗಿದೆ. 117 ವಿದ್ಯಾರ್ಥಿಗಳು ಮೊದಲ ದಿನ ತರಗತಿಗೆ ಆಗಮಿಸಿದ್ದರು.[ಧಾರವಾಡ ಐಐಟಿ ಉದ್ಘಾಟನೆ ಮುಂದಕ್ಕೆ]
Advertisement
Advertisement
ಸೋಮವಾರ ಮುಂಜಾನೆ ಧಾರವಾಡ ಪೇಡ ನೀಡುವ ಮೂಲಕ ವಿದ್ಯಾರ್ಥಿಗಳನ್ನು ಸ್ವಾಗತಿಸಲಾಯಿತು. ಜುಲೈ 31 ರಂದು ಐಐಟಿ ಉದ್ಘಾಟನೆಗೊಂಡು, ಆಗಸ್ಟ್ 1ರಿಂದ ತರಗತಿಗಳು ಆರಂಭವಾಗಬೇಕಿತ್ತು. ಮಹದಾಯಿ ಹೋರಾಟದ ಕಾರಣ ಉದ್ಘಾಟನೆ ಮುಂದಕ್ಕೆ ಹೋಗಿದ್ದು, ನಿಗದಿಯಂತೆ ತರಗತಿಗಳು ಆರಂಭವಾಗಿವೆ.[ಧಾರವಾಡ ಐಐಟಿಯ ಸ್ಥಳ ಬದಲಾವಣೆ]
8 ವಿದ್ಯಾರ್ಥಿಗಳು ಕನ್ನಡಿಗರು : ಧಾರವಾಡ ಐಐಟಿ ಮೊದಲ ಬ್ಯಾಚ್ನಲ್ಲಿ 120 ವಿದ್ಯಾರ್ಥಿಗಳಿದ್ದಾರೆ. ಕಂಪ್ಯೂಟರ್ ಸೈನ್ಸ್, ಮೆಕ್ಯಾನಿಕಲ್, ಇಲೆಕ್ಟ್ರಿಕಲ್ ವಿಭಾಗಕ್ಕೆ ತಲಾ 40 ರಂತೆ 120 ವಿದ್ಯಾರ್ಥಿಗಳಿಗೆ ಪ್ರವೇಶ ನೀಡಲಾಗಿದೆ. ಇವರಲ್ಲಿ 8 ವಿದ್ಯಾರ್ಥಿಗಳು ಕನ್ನಡಿಗರಾಗಿದ್ದು, ತವರು ನೆಲದಲ್ಲಿಯೇ ಐಐಟಿ ವ್ಯಾಸಂಗ ಆರಂಭಿಸಿದ್ದಾರೆ.
ಜಲಸಂಪನ್ಮೂಲ ಇಲಾಖೆಯ ವಾಲ್ಮಿ ಕಟ್ಟಡದಲ್ಲಿಯೇ ವಿದ್ಯಾರ್ಥಿಗಳಿಗಾಗಿ ಹಾಸ್ಟೆಲ್ ವ್ಯವಸ್ಥೆ ಮಾಡಲಾಗಿದೆ. ಐಐಟಿಯ ಶಾಶ್ವತ ಕ್ಯಾಂಪಸ್ಗೆ 470 ಎಕರೆ ಜಮೀನು ನೀಡಲು ಸಚಿವ ಸಂಪುಟ ಸಭೆಯಲ್ಲಿ ಈಗಾಗಲೇ ಒಪ್ಪಿಗೆ ನೀಡಲಾಗಿದೆ. ಶಾಶ್ವತ ಕ್ಯಾಂಪಸ್ ನಿರ್ಮಾಣಗೊಳ್ಳುವ ತನಕ ತಾತ್ಕಾಲಿಕ ಕಟ್ಟಡದಲ್ಲಿಯೇ ತರಗತಿಗಳು ನಡೆಯಲಿವೆ.