ಸೆಪ್ಟೆಂಬರ್ 24ರಿಂದ 30ರ ತನಕ ದ್ವಾದಶ ರಾಶಿಗಳ ವಾರ ಭವಿಷ್ಯ


ಸೆಪ್ಟೆಂಬರ್ 24ರಿಂದ 30ರ ವರೆಗಿನ ಜನ್ಮರಾಶಿಯನ್ನು ಆಧರಿಸಿದ ವಾರಭವಿಷ್ಯ ನೀಡಲಾಗಿದೆ. ಗೋಚಾರ ಫಲಕ್ಕೆ ಅನುಗುಣವಾಗಿ ಫಲಾನುಫಲ ತಿಳಿದುಕೊಳ್ಳಬಹುದು.

ಕನ್ಯಾ ರಾಶಿಗೆ ಗುರು ಪ್ರವೇಶ : ಯಾವ ರಾಶಿಗೆ ಏನು ಫಲ?

ಆಸ್ತಿಕರು ತಮ್ಮ ಜನ್ಮರಾಶಿಗೆ ದಿನ ಹೇಗಿದೆ ಎಂದು ತಿಳಿದು ದಿನಚರಿ ಆರಂಭಿಸುವ ವಾಡಿಕೆ ರೂಢಿಸಿಕೊಂಡಿರುತ್ತಾರೆ. ಏಕೆಂದರೆ, ನಿತ್ಯಭವಿಷ್ಯ ಮುಂದಿನ ಘಟನೆಗಳ ಮುನ್ಸೂಚನೆ ನೀಡುತ್ತವೆ. ಪ್ರತಿಯೊಬ್ಬರೂ ನಿತ್ಯ ಒಂದೊಂದು ತರಹ ದಿನ ಕಳೆಯಬೇಕಾಗುತ್ತದೆ. ಇಡೀ ವಾರ ಹೇಗಿರುತ್ತದೆ ಎಂದು ಸೂಚಿಸುವುದೇ ವಾರಭವಿಷ್ಯ.

ಜನ್ಮನಕ್ಷತ್ರದಿಂದ ತಿಳಿಯಿರಿ ನಿಖರವಾದ ಭವಿಷ್ಯ

ಚಂದ್ರನ ಚಲನೆ ಆಧಾರದಲ್ಲಿ ಹೇಗೆ ನಿತ್ಯಭವಿಷ್ಯವನ್ನು ಕಂಡುಹಿಡಿಯಬಹುದು. ಅದೇ ರೀತಿ ಇತರ ಗ್ರಹ ಹಾಗೂ ಆಯಾ ವಾರದ ಗ್ರಹ ಬದಲಾವಣೆ ಗಮನಿಸಿ, ಜಾತಕ ರೂಪಿಸಿ ರಾಶಿಬಲ ತಿಳಿಯಬಹುದು. ಆದರೆ ಈ ರೀತಿ ಹೇಳುವ ರಾಶಿಬಲಕ್ಕೆ ಗೋಚಾರ, ದಶಾಭುಕ್ತಿಯ ಫಲ ಅನ್ವಯಿಸುವುದಿಲ್ಲ.

ರಾಹುಕಾಲ, ಗುಳಿಕಕಾಲ, ಯಮಗಂಡಕಾಲ

ರಾಶಿ ಒಂದೇ ಆಗಿದ್ದರೂ ಕೂಡ ಪ್ರತಿಯೊಬ್ಬರ ಜನ್ಮಜಾತಕದಲ್ಲಿ ದಶಾಭುಕ್ತಿ, ಗ್ರಹಗಳು ಇರುವ ಮನೆಗಳನ್ನು ಆಧರಿಸಿ ರಾಶಿಬಲವನ್ನು ಹೋಲಿಸಿಕೊಳ್ಳಬೇಕು.

ಮೇಷ: ಒಂಟಿತನ ಕಾಡುವ ಸಾಧ್ಯತೆ ಇದೆ

ಪುರುಷರು: ಪ್ರೀತಿಸುವುದು ದೊಡ್ಡ ಅಪರಾಧ ಅನಿಸುವ ಸಾಧ್ಯತೆ ಇದೆ. ಆದರೆ ತಾತ್ಕಾಲಿಕ ದುಃಖಕ್ಕೆ ಪ್ರಾಮುಖ್ಯ ಕೊಡಬೇಡಿ. ಒಂಟಿತನ ನಿಮ್ಮನ್ನು ಬಹಳ ಕಾಡಬಹುದು. ಜನರ ಮಾತಿನ ಮೇಲಿನ ನಂಬಿಕೆ ಕಡಿಮೆ ಆಗುತ್ತದೆ. ಹಾಲಿನ ಉತ್ಪನ್ನಗಳ ಮಾರಾಟಗಾರರು ಸ್ವಲ್ಪ ಎಚ್ಚರಿಕೆ ವಹಿಸಬೇಕು. ಕೆಲ ವಿಚಾರಗಳಿಗೆ ಬಹಳ ಒತ್ತು ಕೊಡಬೇಕಾಗಿದೆ. ಅವುಗಳನ್ನು ಗಮನಿಸಿ.

ಸ್ತ್ರೀಯರು: ನಿಮ್ಮ ಮೇಲೆ ಇತರ ಸ್ನೇಹಿತೆಯರ ಅಭಿಪ್ರಾಯ ಏನಿದೆ ಎಂಬುದನ್ನು ಅರಿಯುತ್ತೀರಿ. ಆ ನಂತರ ನಿಮ್ಮ ಮನಸಿನಲ್ಲಿ ಒಂದು ಪ್ರಶ್ನೆ ಬಹಳ ಕಾಡುತ್ತದೆ. ಅದಕ್ಕೆ ಉತ್ತರ ಹುಡುಕುವುದರಲ್ಲೇ ವಾರ ಕಳೆದುಹೋಗುತ್ತದೆ.

ವಿದ್ಯಾರ್ಥಿಗಳು: ಯಾವುದೇ ಕಾರಣಕ್ಕೂ ಯಾವ ಕೆಲಸವನ್ನೂ ಮುಂದೂಡಬೇಡಿ. ಹಾಗೇನಾದರೂ ಮಾಡಿದಲ್ಲಿ ವೃಥಾ ಖರ್ಚುಗಳು ಹಾಗೂ ಅನಿರೀಕ್ಷಿತ ಓಡಾಟಗಳು ಹೆಚ್ಚಾಗುತ್ತವೆ.

ಪರಿಹಾರ: ಪ್ರತೀ ದಿನ ತಪ್ಪದೇ ಈಶ್ವರ ಅಷ್ಟೋತ್ತರ ಪಠಿಸಿ.

ವೃಷಭ: ಎಲ್ಲ ವಿಧದಲ್ಲಿಯೂ ಉತ್ತಮ ಸಮಯ

ಪುರುಷರು: ನಿಮ್ಮಿಂದ ಸ್ನೇಹಿತರು ಸಹಾಯ ಪಡೆಯುತ್ತಾರೆ. ವಿಶೇಷ ಎಂದರೆ ನಿಮ್ಮಿಂದ ಅಂಥ ಸಹಾಯವನ್ನು ಅವರು ನಿರೀಕ್ಷಿಸಿರುವುದಿಲ್ಲ. ನಿಮ್ಮಲ್ಲಿ ಕೆಲ ವ್ಯಕ್ತಿಗತ ಬದಲಾವಣೆಯನ್ನು ಅಪೇಕ್ಷಿಸಬಹುದು. ಅಧ್ಯಾತ್ಮ, ದೇವರು ಇತ್ಯಾದಿಗಳತ್ತ ಮನಸ್ಸು ಹೆಚ್ಚು ವಾಲುತ್ತದೆ. ಸೌಂದರ್ಯವರ್ಧಕಗಳತ್ತ ಸಹ ಆಸೆ ಹೆಚ್ಚುತ್ತದೆ. ಪರೋಪಕಾರದ ಮನಸ್ಥಿತಿ ಇರುತ್ತದೆ. ನ್ಯಾಯಾಲಯದಲ್ಲಿ ವಿಚಾರಗಳು ಮುಂದೂಡುತ್ತವೆ. ಉತ್ತಮ ಅವಕಾಶಗಳು, ಉತ್ತಮ ಮನಸ್ಥಿತಿ... ನಿಮಗೆ ಎಲ್ಲಾ ವಿಧದಲ್ಲಿಯೂ ಉತ್ತಮವಾಗಿದೆ.

ಸ್ತ್ರೀಯರು: ಮಾರುಕಟ್ಟೆಯಲ್ಲಿ ಹೊಸದಾದ ವಾಹನ ಬಿಡುಗಡೆ ಆಗಿರುವುದು ನಿಮ್ಮ ಗಮನಕ್ಕೆ ಬಂದು, ಅದನ್ನು ಖರೀದಿಸಬೇಕೆಂಬ ಹಂಬಲ, ಆಸೆ ಹೆಚ್ಚಾಗುತ್ತದೆ. ಆದರೆ ಆರ್ಥಿಕ ಸ್ಥಿತಿಗತಿ ಅಥವಾ ಮನೆಯಲ್ಲಿನ ವಾತಾವರಣ ಅನುಕೂಲವಾಗಿ ಇರುವುದಿಲ್ಲ. ಆದುದರಿಂದ ಕಾದು ನೋಡುವ ತಂತ್ರ ಪಾಲಿಸುತ್ತೀರಿ.

ವಿದ್ಯಾರ್ಥಿಗಳು: ಪರೀಕ್ಷೆಗಳನ್ನು ಎದುರಿಸಲು ಅಷ್ಟು ಸೂಕ್ತವಾದ ಸಮಯ ಎಂದು ಅನಿಸುತ್ತಿಲ್ಲ. ತಯಾರಿ ಇನ್ನೂ ಹೆಚ್ಚು ಅವಶ್ಯ ಇದೆ. ಸಮಯಾವಕಾಶ ಕಾಣಿಸುತ್ತಿಲ್ಲ.

ಪರಿಹಾರ: ಅನಾಥಾಶ್ರಮ ಅಥವಾ ವೃದ್ಧಾಶ್ರಮದಲ್ಲಿ ವಸ್ತ್ರ ದಾನ ಹಾಗೂ ಅನ್ನ ದಾನ ಮಾಡಿ.

ಮಿಥುನ: ಬಹಳ ಇಷ್ಟ ಪಡುವ ವ್ಯಕ್ತಿಯ ಭೇಟಿ

ಪುರುಷರು: ದೂರ ಪ್ರಯಾಣವನ್ನು ಇದೇ ವಾರದಲ್ಲಿ ಮಾಡಬೇಕೆಂದು ನಿಶ್ಚಯ ಮಾಡಿದ್ದಲ್ಲಿ ಸ್ವಲ್ಪ ಎಚ್ಚರಿಕೆ ಅವಶ್ಯ ಇದೆ. ನೀರಿನ ವ್ಯತ್ಯಾಸದಿಂದಾಗಿ ಗಂಟಲು ಉರಿ, ನೋವು ಇತ್ಯಾದಿ ಸಮಸ್ಯೆ ಉಂಟಾಗಬಹುದು. ನೀವು ಬಹಳ ಇಷ್ಟ ಪಡುವ ವ್ಯಕ್ತಿಯನ್ನು ಭೇಟಿ ಮಾಡಬಹುದು. ಆತುರಾತುರವಾಗಿ ಎಲ್ಲಿಯೂ ಆರ್ಥಿಕ ಹೂಡಿಕೆ ಮಾಡಬೇಡಿ. ವಾರಾಂತ್ಯಕ್ಕೆ ಸರಿದಂತೆ ನಿಮ್ಮ ಮೇಲೆ ಆರ್ಥಿಕ ಒತ್ತಡ ಹೆಚ್ಚುತ್ತದೆ.

ಸ್ತ್ರೀಯರು: ಖಂಡಿತವಾಗಿ ದೊರೆಯುವುದಿಲ್ಲ ಎಂದು ತಿಳಿದ ಮೇಲೂ ಒಂದು ವಸ್ತುವಿನ ಮೇಲೆ ಆಸೆ ಜಾಸ್ತಿ ಆಗುತ್ತದೆ. ವಿವಾಹಿತೆಯರು ಅತ್ತೆ- ಮಾವನ ಶುಶ್ರೂಷೆ ಚೆನ್ನಾಗಿ ಮಾಡಿ, ಅವರಿಂದ ಭೇಷ್ ಎಂದೆನಿಸಿಕೊಳ್ಳುತ್ತಾರೆ.

ವಿದ್ಯಾರ್ಥಿಗಳು: ಓದುವುದು ಒಂದೇ ಅಲ್ಲದೇ ಇನ್ನೂ ಹಲವು ಕೆಲಸ- ಕಾರ್ಯಗಳು ಮಾಡಲೇಬೇಕಾದ ಅನಿವಾರ್ಯ ನಿಮ್ಮ ಮೇಲೆ ಇರುತ್ತದೆ.

ಪರಿಹಾರ: ಪ್ರತೀ ದಿನ ಬುಧ ಗ್ರಹದ ಅಷ್ಟೋತ್ತರ ಪಠಿಸಿ.

ಕರ್ಕಾಟಕ: ಚಿಕ್ಕ ಪ್ರಮಾಣದಲ್ಲಿ ಧನ ಲಾಭ ಇದೆ

ಪುರುಷರು: ಸಂತಾನ ಅಪೇಕ್ಷಿತರಿಗೆ ಸಿಹಿ ಸುದ್ದಿ ಕೇಳುವ ಯೋಗವಿದೆ. ಸರಕಾರಿ ಉದ್ಯೋಗದಲ್ಲಿ ಇರುವವರು ಬಡ್ತಿ ಅಥವಾ ವರ್ಗಾವಣೆಗಾಗಿ ಪ್ರಯತ್ನಿಸುತ್ತಿದ್ದಲ್ಲಿ ಈ ವಾರ ನಿಮಗೆ ಯಶಸ್ಸು ಲಭಿಸುವ ಲಕ್ಷಣಗಳಿವೆ. ಸದಾ ನಿಮ್ಮ ಸಹಾಯ ಪಡೆಯುತ್ತಿದ್ದ ಸ್ನೇಹಿತರು ಈಗ

ನಿಮಗೆ ಅವಶ್ಯಕತೆ ಇದ್ದಾಗ ನಿಮ್ಮ ಸಹಾಯಕ್ಕೆ ಬಾರದೆ ನಿರಾಸೆ ಮೂಡಿಸುತ್ತಾರೆ. ವಾರಾಂತ್ಯದಲ್ಲಿ ಚಿಕ್ಕ ಪ್ರಮಾಣದಲ್ಲಿ ಧನ ಲಾಭ ಕಂಡುಬರುತ್ತಿದೆ.

ಸ್ತ್ರೀಯರು: ನಿಮ್ಮ ಮಕ್ಕಳು ಮಾಡದ ತಪ್ಪಿಗೆ ಅವರಿಗೆ ನೀವು ಶಿಕ್ಷೆ ನೀಡುತ್ತೀರಿ. ಆ ನಂತರ ವಾರಾಂತ್ಯದಲ್ಲಿ ಅವರ ತಪ್ಪು ಇರಲಿಲ್ಲ ಎಂದು ತಿಳಿದ ಮೇಲೆ ಬೇಸರ ಮಾಡಿಕೊಳ್ಳುತ್ತೀರಿ. ಆದರೆ ಹೊರಗೆ ಅದನ್ನು ವ್ಯಕ್ತಪಡಿಸದೆ ಮುಚ್ಚಿಟ್ಟುಕೊಳ್ಳುತ್ತೀರಿ.

ವಿದ್ಯಾರ್ಥಿಗಳು: ಶಾಲಾ-ಕಾಲೇಜಿನ ಶುಲ್ಕ ಇನ್ನೂ ಪಾವತಿಸದವರಿಗೆ ಸಂಕಟದ ಸಮಯ. ಕೆಲ ಅವಮಾನಗಳು ಇವೆ. ಅದನ್ನು ಹೊರತು ಪಡಿಸಿದರೆ ಸಂಗೀತ ವಿದ್ಯಾರ್ಥಿಗಳಿಗೆ ಅತೀ ಉತ್ತಮ ವಾರ.

ಪರಿಹಾರ: ಪ್ರತೀ ದಿನ ದುರ್ಗಾ ಕವಚ ಸ್ತೋತ್ರ ಶ್ರವಣ ಮಾಡಿ.

ಸಿಂಹ: ಸ್ವಲ್ಪ ಹೆಚ್ಚು ಅನಿಸುವ ಪ್ರಮಾಣದಲ್ಲಿ ಖರ್ಚು

ಪುರುಷರು: ಆಸೆಯೇ ದುಃಖಕ್ಕೆ ಮೂಲ ಎಂಬ ವಾಕ್ಯ ನೆನಪಿಡಿ. ಸಾಲದ ಸುಳಿಯಲ್ಲಿ ಸಿಲುಕುವ ಸಾಧ್ಯತೆಗಳಿವೆ ಎಚ್ಚರ. ಸ್ವಲ್ಪ ಹೆಚ್ಚು ಅನಿಸುವ ಪ್ರಮಾಣದಲ್ಲಿ ಖರ್ಚು ಮಾಡುತ್ತೀರಿ. ಆದುದರಿಂದ ಆ ಖರ್ಚು ದೇವರ ವಿಚಾರದಲ್ಲಿ ಮಾಡಿದರೆ ಇನ್ನೂ ಉತ್ತಮ. ನಿಮ್ಮಿಂದ ಕೆಲ ಬಡವರಿಗೆ ಸಹಾಯ ಆಗುವ ಸಾಧ್ಯತೆಗಳಿವೆ. ಕುಡಿಯುವ ನೀರಿನ ವ್ಯತ್ಯಾಸ ಆಗದಂತೆ ಎಚ್ಚರ ವಹಿಸಿ. ಉದ್ಯೋಗ ಸ್ಥಳದಲ್ಲಿ ಒತ್ತಡ ಹೆಚ್ಚು ಕಾಣಿಸಬಹುದು. ಹೇಳಿಕೆ- ಚುಚ್ಚು ಮಾತುಗಳಿಗೆ ಕಿವಿಗೊಡದೇ ಇದ್ದಲ್ಲಿ ಮಾತ್ರ ಸಂತಸ.

ಸ್ತ್ರೀಯರು: ಬಹಳ ಜನರನ್ನು ತಪ್ಪು ತಿಳಿಯುತ್ತೀರಿ. ಇನ್ನೂ ಹೇಳಬೇಕು ಎಂದರೆ ಬಹಳ ಹತ್ತಿರದವರನ್ನು ಅಪಾರ್ಥ ಮಾಡಿಕೊಳ್ಳುತ್ತೀರಿ. ಉದಾಹರಣೆಗೆ ನಿಮ್ಮ ತಾಯಿಯ ಮೇಲೆ ಬೇಸರ ಮೂಡಬಹುದು. ನಿಮ್ಮ ಮಾತು- ದನಿಗೆ ಅಮ್ಮ ದನಿಗೂಡಿಸಲಿಲ್ಲ ಎಂಬ ಬೇಸರ.

ವಿದ್ಯಾರ್ಥಿಗಳು: ಏನೂ ಕಷ್ಟಪಡದೇ ಕೇವಲ ಮಾತಿನ ಬಲದಿಂದ ಸುಳ್ಳು ಹೇಳಿ, ಶಿಕ್ಷೆಯಿಂದ ತಪ್ಪಿಸಿಕೊಳ್ಳುವ ಸ್ನೇಹಿತರ ಕಂಡು ಆಶ್ಚರ್ಯ ಪಡುತ್ತೀರಿ. ನಿಮಗೆ ಅರಿವಾಗದಂತೆ ಅಧ್ಯಾಪಕರು ಪರೀಕ್ಷಿಸುತ್ತಾರೆ. ನೀವು ಅದರಲ್ಲಿ ಗೆಲ್ಲುವ ಸಾಧ್ಯತೆಗಳು ಅಧಿಕ.

ಪರಿಹಾರ: ಪ್ರತೀ ದಿನ ನೃಸಿಂಹ ದೇವರ ಅಷ್ಟೋತ್ತರ ಪಠಿಸಿ

ಕನ್ಯಾ: ಜೀವನಾಧಾರಕ್ಕೆ ಹೊಸ ಮಾರ್ಗ ಕಾಣುತ್ತದೆ

ಪುರುಷರು: ಮನಸ್ಸು ಸ್ವಲ್ಪ ಗೊಂದಲಮಯ ಎಂದರೆ ತಪ್ಪಾಗದು. ಆಗುತ್ತಾ ಇರುವುದೆಲ್ಲಾ ಒಳ್ಳೆಯದಕ್ಕೆ, ಎಲ್ಲಾ ಸರಿ ಇದೆ. ಚಿಂತೆ ಮಾಡಬೇಡ ಎಂದು ಒಂದು ಬಾರಿ ಅನಿಸಿದರೆ, ಎಲ್ಲಾ ಎಡವಟ್ಟು ಆಗಿಹೋಗುತ್ತಾ ಇದೆ. ಎಲ್ಲಾ ಮುಗಿಯಿತು ಅಷ್ಟೇ, ಇನ್ನು ಎಂದು ಮತ್ತೊಮ್ಮೆ ಮನಸ್ಸು ಹೆದರಿಸುತ್ತದೆ. ಒಂದು ಸರಿಯಾದ ದೃಢ ನಿರ್ಧಾರ ತೆಗೆದುಕೊಳ್ಳಲಾಗದೆ ಒದ್ದಾಟ ಇದೆ. ದೇವರ ಧ್ಯಾನ ಮಾತ್ರ ನಿಮ್ಮ ಮಾನಸಿಕ ಸಮತೋಲನ ಕಾಪಾಡಬಹುದು. ಕೆಲವರಿಗೆ ಜೀವನಾಧಾರಕ್ಕೆ ಹೊಸ ಮಾರ್ಗ ಕಾಣುತ್ತದೆ. ಆದರೂ ಆ ನಿಟ್ಟಿನಲ್ಲಿ ಪ್ರಯತ್ನ ಕಾಣುತ್ತಾ ಇಲ್ಲ.

ಸ್ತ್ರೀಯರು: ರಚನಾತ್ಮಕ ಕಾರ್ಯಗಳಲ್ಲಿ ಸ್ವಲ್ಪ ತಲ್ಲೀನ ಆಗುತ್ತೀರಿ. ಆದರೆ ಕೆಲವರು ನಗೆಪಾಟಲಿಗೆ ಈಡಾಗಬಹುದು. ಎಲ್ಲೋ ಕಳೆದುಹೋದ ನಿಮ್ಮಲ್ಲಿಯ ಕವಿತ್ವ ಬುದ್ಧಿ ಮತ್ತೆ ಚಿಗುರುತ್ತದೆ. ಹೊಸ ಕವಿತೆಗಳು ಮತ್ತೆ ರಚನೆಗೊಳ್ಳಬಹುದು.

ವಿದ್ಯಾರ್ಥಿಗಳಿಗೆ: ನಿಮ್ಮ ಸಮಸ್ಯೆ ತಿಳಿದಿದೆ, ಅದರ ಪರಿಹಾರ ಸಹ ತಿಳಿದಿದೆ. ಆದರೆ ಸರಿ ಮಾಡಿಕೊಳ್ಳುವತ್ತ ನಿಮ್ಮ ಪ್ರಯತ್ನ ಮಾತ್ರ ಶೂನ್ಯ. ಇನ್ನು ಹಾಸ್ಟೆಲ್ ಅಥವಾ ಕಾಲೇಜಿನ ಕೆಲವರಿಗೆ ಹಿರಿಯ ವಿದ್ಯಾರ್ಥಿಗಳಿಂದ ಕಿರಿಕಿರಿ ಹೆಚ್ಚಾಗುತ್ತಿದೆ ಅನಿಸುತ್ತದೆ.

ಪರಿಹಾರ: ಪ್ರತಿ ದಿನ ಲಕ್ಷ್ಮೀ ನಾರಾಯಣ ಹೃದಯ ಸ್ತೋತ್ರ ಪಠಿಸಿ ಅಥವಾ ಶ್ರವಣ ಮಾಡಿ.

ತುಲಾ: ದೂರ ಪ್ರಯಾಣ ಮಾಡಬೇಕೆಂಬ ಆಸೆ ಬಲವಾಗಿ ಮೂಡುತ್ತದೆ

ಪುರುಷರು: ಬಹಳ ಕಡಿಮೆ ಸಮಯದಲ್ಲಿ ಹೆಚ್ಚು ಕೆಲಸಗಳನ್ನು ಮಾಡಿ ಮುಗಿಸಲೇಬೇಕಾದ ಅನಿವಾರ್ಯ ಕಾಣಿಸುತ್ತಾ ಇದೆ. ದೂರ ಪ್ರಯಾಣ ಮಾಡಬೇಕೆಂಬ ಆಸೆ ಬಲವಾಗಿ ಬರುತ್ತದೆ. ನಿತ್ಯ ಜೀವನದ ಕೆಲ ಪ್ರಮುಖ ಘಟ್ಟಗಳಲ್ಲಿ ಬದಲಾವಣೆ ಬೇಕೇಬೇಕು ಅನಿಸಲು ಪ್ರಾರಂಭ ಆಗುತ್ತದೆ. ಹಾಲು ಹಾಗೂ ಹಾಲಿನ ಉತ್ಪನ್ನಗಳ ಮಾರಾಟಗಾರರಿಗೆ ಸ್ವಲ್ಪ ನಷ್ಟ ಕಾಣಿಸುತ್ತಿದೆ. ನೀವು ಈ ಹಿಂದೆ ಸಹಾಯ ಮಾಡಿದವರು ಈಗ ಸಹಾಯ ಮಾಡಲು ಬರುತ್ತಾರೆ ಎಂದು ತಿಳಿಯಬೇಡಿ. ನಿಮ್ಮ ಶ್ರಮ ಮಾತ್ರ ನಿಮಗೆ.

ಸ್ತ್ರೀಯರು: ಸ್ನೇಹಿತೆಯರು ನಿಮ್ಮನ್ನು ಬಹಳ ನಗಿಸುತ್ತಾರೆ. ಸಂತಸದಿಂದ ಸಮಯ ಕಳೆಯಬಹುದು. ಇನ್ನು ಉದ್ಯೋಗ ಸ್ಥಳದಲ್ಲಿ ನಿಮ್ಮ ಮೇಲೆ ವಿಶ್ವಾಸ ಇಟ್ಟು, ದೊಡ್ಡ ಕೆಲಸ ಒಂದು ಒಪ್ಪಿಸುವ ಸಾಧ್ಯತೆಯನ್ನು ತಳ್ಳಿಹಾಕುವಂತೆ ಇಲ್ಲ.

ವಿದ್ಯಾರ್ಥಿಗಳು: ನೃತ್ಯ ಅಥವಾ ಸಂಗೀತ ಕಲಿಯುವ ಆಸೆ ನಿಮಗೆ ಕಾಣಿಸುತ್ತದೆ. ಆದರೆ ಗಣಿತ ನಿಮಗೆ ತಲೆ ಸುತ್ತುವಂತೆ ಮಾಡುವುದರಲ್ಲಿ ಸಂಶಯವಿಲ್ಲ. ಅದರ ಪರಿಣಾಮವಾಗಿ ಯಾವುದೂ ಬೇಡ, ಸದ್ಯ ಇದೊಂದು ಗಣಿತ ಅರ್ಥ ಆದರೆ ಸಾಕು ಅನಿಸುತ್ತದೆ.

ಪರಿಹಾರ: ಪ್ರತೀ ದಿನ ಮಹಾ ಗಣಪತಿ ದೇಗುಲಕ್ಕೆ ಹೋಗಿ ಅಲ್ಲಿ ದೇವರಿಗೆ ಕನಿಷ್ಠ ನೂರೆಂಟು ಗರಿಕೆ ಸಮರ್ಪಿಸಿ.

ವೃಶ್ಚಿಕ: ಸರಕಾರಿ ಉದ್ಯೋಗದಲ್ಲಿ ಇರುವವರಿಗೆ ಪ್ರಾಮುಖ್ಯ ಬರುತ್ತದೆ

ಪುರುಷರು: ಸರಕಾರಿ ಉದ್ಯೋಗದಲ್ಲಿ, ಸೇವೆಗಳಲ್ಲಿ ಇರುವವರಿಗೆ ಬಹಳ ಪ್ರಾಮುಖ್ಯ ಬರಲಿದೆ. ಬೇಡಿಕೆ ಬರಲಿದೆ. ಹಣ ಮಾಡಲು ಆಗದೇ ಇದ್ದರೂ ಅಧಿಕಾರ ಚೆನ್ನಾಗಿ ಚಲಾಯಿಸುತ್ತೀರಿ. ಹತಾಶ ಮನೋಭಾವ ಕೆಲ ವಿಚಾರಗಳಲ್ಲಿ ಬಹಳವಾಗಿ ಕಾಡಬಹುದು ಆದರೆ ನಿರಂತರವಾಗಿ ಅಲ್ಲ. ಪ್ರತಿ ಬಾರಿಯೂ ನಿಮ್ಮಿಂದ ಹೊಸತನ್ನು ಬಯಸುವ ಸಮಾಜಕ್ಕೆ ನೀವು ಉತ್ತರ ಕೊಡಲಾಗದ ಸ್ಥಿತಿ. ನಿಮಗೆ ಅರಿವಿಲ್ಲದೆ ಕೆಲ ಅನುಚಿತ ವರ್ತನೆಗಳು ನಿಮ್ಮಿಂದ ಆಗಬಹುದು. ವ್ಯಾಪಾರಿಗಳು ತಮ್ಮ ಹೂಡಿಕೆ ವಿಚಾರದಲ್ಲಿ ಹೆಚ್ಚಿನ ಎಚ್ಚರಿಕೆ ವಹಿಸಬೇಕು.

ಸ್ತ್ರೀಯರು: ಸಿಕ್ಕಿದ್ದರಲ್ಲಿಯೇ ತೃಪ್ತರಾಗುವುದು ಹೇಗೆ ಎನ್ನುವುದನ್ನು ಕಲಿಯುತ್ತೀರಿ. ಜೀವನದಲ್ಲಿ ಕಲಿತದ್ದು ಬಹಳ ಇದೆ. ಆದರೆ ಅವುಗಳನ್ನು ಅಳವಡಿಸಿಕೊಳ್ಳುವ ಸಮಯ ಎಂದರೆ ತಪ್ಪಲ್ಲ. ಆರೋಗ್ಯ ಬಾಧೆ ಕೆಲ ಮಟ್ಟಿಗೆ ನಿಮ್ಮ ನಿತ್ಯದ ಕಾರ್ಯಚಟುವಟಿಕೆಗಳಿಗೆ ತೊಂದರೆ ಕೊಡಬಹುದು.

ವಿದ್ಯಾರ್ಥಿಗಳು: ನೀವು ಯಾರಿಂದ ಪಾಠ ಮಾಡಿಸಿಕೊಳ್ಳಬೇಕು ಎಂದು ಅಂದುಕೊಂಡಿದ್ದರೋ ಅವರು ನಿಮಗೆ ಸಿಗುವುದು ಅಥವಾ ಈಗಲೇ ಸಿಗುವುದು ಅನುಮಾನ. ಅಷ್ಟೇ ಅಲ್ಲ, ನೀವು ಮುಖ್ಯವಾಗಿ ಹಾಸಿಗೆ ಇದ್ದಷ್ಟೇ ಕಾಲು ಚಾಚುವ ಬುದ್ಧಿ ಈಗಿಂದಲೇ ರೂಢಿ ಮಾಡಿಕೊಳ್ಳುವುದು ಉತ್ತಮ.

ಪರಿಹಾರ: ಪ್ರತೀ ದಿನ ಮಹಾಲಕ್ಷ್ಮಿ ಅಷ್ಟಕ ಪಠಿಸಿ.

ಧನುಸ್ಸು: ಮೇಲಧಿಕಾರಿಗಳನ್ನು ಹೊಗಳಬೇಕಾದ ಅನಿವಾರ್ಯ

ಪುರುಷರು: ಸಂಗೀತಗಾರರು ಅಥವಾ ವಿಶೇಷವಾಗಿ ಹಾಡುಗಾರರು ಗಂಟಲಿನ ಸಮಸ್ಯೆ ಎದುರಿಸ ಬೇಕಾಗಬಹುದು, ಎಚ್ಚರ. ವ್ಯಾಪಾರಿಗಳು ಸಾಲ ನೀಡಲು ಹೋಗದಿರಿ. ಪ್ರಮುಖವಾದ ವಿಚಾರಗಳಲ್ಲಿ ನಿಮ್ಮನ್ನು ಹಾಗೂ ನಿಮ್ಮ ಸಾಧನೆಯನ್ನು ಮರೆಯಲಾಗುತ್ತದೆ. ಆ ವಿಚಾರ ನಿಮಗೆ ಬಹಳ ದುಃಖ ನೀಡುತ್ತದೆ. ಉಳಿದಂತೆ ವ್ಯಾಪಾರಿಗಳಿಗೆ ದೊಡ್ಡ ನಷ್ಟ ಕಾಣುತ್ತಿಲ್ಲ. ಯಾರಿಗೂ ತಿಳಿಯದಂತೆ ಸಾಲ ಕೊಡಬೇಡಿ ಮರಳಿಬರುವುದಿಲ್ಲ. ಉದ್ಯೋಗದಲ್ಲಿ ಇರುವವರಿಗೆ ಮೇಲಧಿಕಾರಿಗಳನ್ನು ಹೊಗಳಬೇಕಾದ ಅನಿವಾರ್ಯ ಬರುತ್ತದೆ.

ಸ್ತ್ರೀಯರು: ಅಪ್ಪನಿಂದ ದೂರ ಇದ್ದಲ್ಲಿ ಅವರ ನೆನಪು ಬಹಳ ಕಾಡುತ್ತದೆ. ಅವರು ಈಗ ಇಲ್ಲಿ ಇದ್ದಿದ್ದರೆ ಎಷ್ಟು ಚೆನ್ನಾಗಿ ಇರುತ್ತಿತ್ತು ಎಂದು ಅನಿಸುತ್ತದೆ. ವಿವಾಹ ಪ್ರಯತ್ನಗಳು ಸಫಲತೆ ಕಾಣುತ್ತವೆ. ಗೃಹಿಣಿಯರಿಗೆ ತವರು ಮನೆಯಿಂದ ಲಾಭ ಇದೆ.

ವಿದ್ಯಾರ್ಥಿಗಳು: ಶ್ರಮ ಇಲ್ಲದೇ ಯಾವ ಯಶಸ್ಸು ಸಹ ಲಭಿಸುವುದಿಲ್ಲ ಎನ್ನುವ ಸತ್ಯ ಅರಿವಿಗೆ ಬರುತ್ತದೆ.

ಪರಿಹಾರ: ಪ್ರತೀ ದಿನ ಶ್ರೀರಾಮ ಹಾಗೂ ಹನುಮಂತ ದೇವರ ಅಷ್ಟೋತ್ತರ ಪಠಿಸಿ.

ಮಕರ: ಹೆಚ್ಚು ಶಾರೀರಿಕ ಆಯಾಸ ಮಾಡಿಕೊಳ್ಳಬೇಡಿ

ಪುರುಷರು: ಕಾಲು ಹಾಗೂ ಸೊಂಟದಲ್ಲಿ ಹೆಚ್ಚು ನೋವು ಅನುಭವಿಸುವ ಯೋಗ ಫಲ ಕಾಣುತ್ತಿದೆ. ಹೆಚ್ಚು ಶಾರೀರಿಕ ಆಯಾಸ ಮಾಡಿಕೊಳ್ಳಬೇಡಿ. ಇತ್ತ ಉದ್ಯೋಗವೂ ಅಲ್ಲ, ಅತ್ತ ವ್ಯಾಪಾರವೂ ಅಲ್ಲದೇ ಚಿಕ್ಕಪುಟ್ಟ ಸ್ವಂತ ವೃತ್ತಿ ಮಾಡುತ್ತಾ ಇದ್ದವರಿಗೆ ಸ್ವಲ್ಪ ಕಷ್ಟದ ಸಮಯ. ಆದರೆ ರಿಯಲ್ ಎಸ್ಟೇಟ್ ಮಾಡಿಕೊಂಡಿರುವವರಿಗೆ ಉತ್ತಮ ಸಮಯ. ನೀವೇ ಸ್ವತಃ ವಾಹನ ಓಡಿಸುವ ಅನಿವಾರ್ಯ ಇಲ್ಲದಿದ್ದರೆ ಇತರರಿಗೆ ಅವಕಾಶ ಮಾಡಿಕೊಟ್ಟು, ನೀವು ಹಿಂದೆ ಕುಳಿತರೆ ಅತ್ಯುತ್ತಮ. ನೀವು ನಂಬುವವರು ನಿಮ್ಮನ್ನು ನಂಬುವುದಿಲ್ಲ. ಇದರಿಂದ ಸ್ವಲ್ಪ ಕಷ್ಟ ಆಗುತ್ತದೆ.

ಸ್ತ್ರೀಯರು: ಮಾಸಿಕ ಋತು ಚಕ್ರ ಇದೇ ಸಮಯದಲ್ಲಿ ಬರುವುದಾದಲ್ಲಿ ಸ್ವಲ್ಪ ಎಚ್ಚರಿಕೆ ಅವಶ್ಯ ಕಾಣಿಸುತ್ತಿದೆ ಯಾವುದೇ ಸ್ವಯಂ ಔಷಧ ಮಾಡಬೇಡಿ. ಅನಿವಾರ್ಯವಾಗಿ ಮಾಡುವುದಾದರೂ ಆಯುರ್ವೇದ ಬಳಸಿ. ಧನ ಲಾಭ ಇದೆ. ಆದರೆ ನಿಮ್ಮ ಮಕ್ಕಳೊಂದಿಗೆ ಕಲಹ ಯೋಗ ಸಹ ಕಾಣಿಸುತ್ತಿದೆ.

ವಿದ್ಯಾರ್ಥಿಗಳು: ಶಾಲೆ ಅಥವಾ ಕಾಲೇಜು ಸ್ನೇಹಿತರೊಂದಿಗೆ ಸೇರಿ ಸುತ್ತಾಡಲು ಹೋಗಬಹುದು. ನಿಮಗೆ ಹೆಚ್ಚಿನ ಪ್ರಶ್ನೆಗಳು ಲಭಿಸುವ ಯೋಗವಿದೆ. ಉತ್ತರ ಕೊಟ್ಟೂ ಕೊಟ್ಟೂ ಸುಸ್ತಾಗಿಬಿಡುತ್ತೀರಿ.

ಪರಿಹಾರ: ಪ್ರತೀ ದಿನ ದತ್ತಾತ್ರೇಯ ವಜ್ರ ಕವಚ ಸ್ತೋತ್ರ ಪಠಿಸಿ.

ಕುಂಭ: ನ್ಯಾಯಾಲಯದಲ್ಲಿ ನಿಮ್ಮ ಪರವಾಗಿ ತೀರ್ಪು ಕೇಳುವ ಯೋಗ

ಪುರುಷರು: ಸಹೋದರರಲ್ಲಿ ಬಿರುಕು ಕಾಣಿಸುತ್ತಿದೆ. ಅದಕ್ಕೆ ಕಾರಣ ಹೆಣ್ಣು ಅಥವಾ ಹೊನ್ನು. ಈ ಎರಡರಲ್ಲಿ ಒಂದು ಎಂದು ಕಾಣಿಸುತ್ತಿದೆ. ನ್ಯಾಯಾಲಯದಲ್ಲಿ ನಿಮ್ಮ ಪರವಾಗಿ ತೀರ್ಪು ಕೇಳುವ ಯೋಗ ಇದೆ. ಅನವಶ್ಯಕವಾದ ವಿಚಾರ ಒಂದಕ್ಕೆ ಕೈ ಹಾಕಿ, ಸ್ವಲ್ಪ ಅವಮಾನ ಎದುರಿಸಬಹುದು. ವ್ಯಾಪಾರಕ್ಕಾಗಿ ಮಾಡುವ ದೂರ ಪ್ರಯಾಣ ಯಶಸ್ಸನ್ನು ನೀಡುತ್ತದೆ. ಉದ್ಯೋಗ ಮಾಡುತ್ತಿರುವ ಸ್ಥಳದಲ್ಲಿ ನಡೆಯುವ ರಾಜಕೀಯಗಳು ನಿಮ್ಮ ಮನಸ್ಸಿಗೆ ಬೇಸರ ಮೂಡಿಸುತ್ತವೆ. ನಿಮ್ಮ ಸ್ನೇಹಿತರೂ ಗುಂಪುಗಾರಿಕೆ ಮಾಡುತ್ತಿರುವುದು ಕಾಣುತ್ತೀರಿ.

ಸ್ತ್ರೀಯರು: ನಿಮ್ಮ ಸ್ನೇಹಿತೆ ಹೇಡಿತನ ಹಾಗೂ ದಡ್ಡತನದಿಂದ ನಿರ್ಧಾರ ತೆಗೆದುಕೊಳ್ಳುತ್ತಾ ಇದ್ದಾಳೆ ಅನಿಸುತ್ತದೆ. ಆದರೆ ನಿಮ್ಮ ಸಲಹೆಗೆ ಬೆಲೆ ಇರುವುದಿಲ್ಲ. ಕೆಲವರ ದ್ವಂದ್ವ ಮಾತು ಹಾಗೂ ನೀತಿ ನಿಮಗೆ ಬೇಸರ ಮೂಡಿಸುತ್ತದೆ. ಕುಟುಂಬದಲ್ಲಿ ನಿಮ್ಮ ಮಾತಿಗೆ ಬೆಲೆ ಇರುತ್ತದೆ.

ವಿದ್ಯಾರ್ಥಿಗಳು: ಸ್ಪರ್ಧೆಗಳು ಇದ್ದಲ್ಲಿ ಭಾಗವಹಿಸಿ. ಯಶಸ್ಸು ಕಾಣಿಸುತ್ತಿದೆ.

ಪರಿಹಾರ: ಮುತ್ತೈದೆಗೆ ಅರಿಶಿನ- ಕುಂಕುಮ ಹಾಗೂ ಫಲ- ತಾಂಬೂಲ ಕೊಟ್ಟು ನಮಸ್ಕರಿಸಿ. ಶುಭ ಆಗುತ್ತದೆ.

ಮೀನ: ದುಂದು ವೆಚ್ಚ ಆಗದಂತೆ ಎಚ್ಚರ ವಹಿಸಿ

ಪುರುಷರು: ಶರೀರದಲ್ಲಿ ಕಫ ಪಕೃತಿಯ ವ್ಯತ್ಯಾಸದಿಂದಾಗಿ ಆರೋಗ್ಯ ಸಮಸ್ಯೆ ಸ್ವಲ್ಪ ಕಾಡಬಹುದು. ಪ್ರತಿ ದಿನ ಬಿಸಿ ನೀರು ಮಾತ್ರ ಕುಡಿಯುವುದನ್ನು ರೂಢಿಯಲ್ಲಿ ಇಟ್ಟುಕೊಂಡರೆ ಉತ್ತಮ. ಕೆಲವರು ಹೊಸದಾಗಿ ಸ್ನೇಹಿತರಾಗುತ್ತಾರೆ. ಆದರೆ ಹಳೆಯ ಸ್ನೇಹಿತರೊಂದಿಗೆ ಚಿಕ್ಕ ಮನಸ್ತಾಪ ಆಗಬಹುದು. ವಾಗ್ವಾದ ಮಾಡದೇ ನೀವು ಸ್ವಲ್ಪ ಸುಧಾರಿಸಿಕೊಂಡರೆ ಎಲ್ಲ ಶಮನ ಆಗುತ್ತದೆ. ಉದ್ಯೋಗಿಗಳಿಗೆ ದಿನಂಪ್ರತಿ ಒಂದೇ ಕೆಲಸ ಮಾಡಿ ಬೇಜಾರಾಗಿ ಮನಸ್ಸು ಸ್ವಲ್ಪ ಬದಲಾವಣೆ ಬಯಸುತ್ತದೆ. ಆರ್ಥಿಕವಾಗಿ ಸದೃಢವೇ ಇರುತ್ತೀರಿ. ಆದರೂ ದುಂದು ವೆಚ್ಚ ಆಗದಂತೆ ಎಚ್ಚರ ವಹಿಸಿ.

ಸ್ತ್ರೀಯರು: ನಿಮಗೆ ಮಾನಸಿಕ ಕಿರುಕುಳ ನೀಡುವ ವೃಥಾ ಪ್ರಯತ್ನ ನಡೆಯುತ್ತದೆ. ಆದರೆ ಅದಕ್ಕೆ ನೀವು ಅಂಜುವ ಯಾವುದೇ ಸ್ಥಿತಿ ಕಾಣುತ್ತಿಲ್ಲ! ಅಡುಗೆ ಮನೆಯಲ್ಲಿ ಅಡುಗೆ ಮಾಡುವಾಗ ಅಥವಾ ಯಾವುದೇ ಸಂದರ್ಭದಲ್ಲಿ ಬಿಸಿ ಕುದಿಯುವ ಎಣ್ಣೆ , ಬೆಂಕಿ ಇತ್ಯಾದಿಗಳಿಂದ ದೂರ ಇರಿ.

ವಿದ್ಯಾರ್ಥಿಗಳು: ನಿತ್ಯ ನಿಮ್ಮ ಶಾಲಾ- ಕಾಲೇಜುಗಳಿಗೆ ಹೋಗುವಾಗ ಹಾಗೂ ಹಿಂತಿರುಗಿ ಬರುವಾಗ ಖರ್ಚು ಜಾಸ್ತಿ ಮಾಡುತ್ತೀರಿ. ಮನಸಿನಲ್ಲಿ ಹಲವು ದ್ವಂದ್ವಗಳು ಕಾಡಲಿವೆ. ಯಾವುದು ಸರಿ, ಯಾವುದು ತಪ್ಪು ನಾನು ಮಾಡುತ್ತಿರುವುದು ಸರಿಯೋ ತಪ್ಪೋ ತಿಳಿಯದೆ ಒದ್ದಾಡುತ್ತೀರಾ.

ಪರಿಹಾರ: ಪ್ರತೀ ದಿನ ಹನುಮಂತ ದೇಗುಲಕ್ಕೆ ಹೋಗಿ ಪ್ರದಕ್ಷಿಣೆ ನಮಸ್ಕಾರ ಮಾಡಿ.

Have a great day!
Read more...

English Summary

Read your Weekly forecast on the horoscope provided by Oneindia Kannada. We provide online free weekly prediction including your personal, professional and love life.