ನವೆಂಬರ್ 2018 - ಕ್ಯಾಲೆಂಡರ್ ಮೇಲೆ ತಿಂಗಳ ರಾಶಿ ಭವಿಷ್ಯ


ಜ್ಯೋತಿಷ್ಯ ಕ್ಯಾಲೆಂಡರನ್ನು ಖ್ಯಾತ ಜ್ಯೋತಿಷಿ ಪಂಡಿತ ಅನುಜ್ ಕೆ. ಶುಕ್ಲಾ ಅವರುನವೆಂಬರ್2018ರ ಪಂಚಾಂಗದ ಆಧಾರದ ಮೇಲೆ ಆಯಾ ರಾಶಿಗೆ ಅನುಗುಣವಾಗಿ ರೂಪಿಸಿದ್ದಾರೆ. ನಿಮ್ಮ ರಾಶಿಗೆ ತಕ್ಕಂತೆ ಅಂದಿನ ದಿನ ನಿಮ್ಮ ಜೀವನದಲ್ಲಿ ಹೇಗಿರುತ್ತದೆ ಎಂಬುದನ್ನು ತಿಳಿದುಕೊಳ್ಳಿ. ಇಂದು ಮಾತ್ರವಲ್ಲ, ನಾಳೆ, ನಾಡಿದ್ದು ಅಥವಾ ಮುಂದಿನ ದಿನ ಹೇಗಿರುತ್ತದೆಂದು ಕೂಡ ಈ ಕ್ಯಾಲೆಂಡರ್ ಮುಖಾಂತರ ತಿಳಿಯಬಹುದು.

ವಾರ ಭವಿಷ್ಯ ಅಥವಾ ತಿಂಗಳ ಭವಿಷ್ಯ ಒಂದು ಬಾರಿ ನೋಡಿ ಮರೆತುಬಿಟ್ಟಿರುತ್ತೇವೆ. ನಾವು ಅವುಗಳನ್ನು ಮರೆತರೂ ಗ್ರಹ, ನಕ್ಷತ್ರ ಮತ್ತು ಕಾಲಚಕ್ರಗಳನ್ನು ನಮ್ಮನ್ನು ಮರೆಯುವುದಿಲ್ಲ. ಭಾರತದ ಪ್ರಾಚೀನ ಜ್ಯೋತಿಷ್ಯಶಾಸ್ತ್ರ ನಮ್ಮ ಜೀವನದೊಂದಿಗೆ ಯಾವತ್ತೂ ಕೂಡಿಕೊಂಡಿರುತ್ತದೆ. ನಿಮ್ಮ ಜೀವನವನ್ನು ಸರಳಗೊಳಿಸುವ ಉದ್ದೇಶದಿಂದ ಜ್ಯೋತಿಷ್ಯ ಕ್ಯಾಲೆಂಡರನ್ನು ಇಲ್ಲಿ ಸಾದರಪಡಿಸುತ್ತಿದ್ದೇವೆ. ನಮ್ಮ ಭವಿಷ್ಯಫಲ ಏನಿದೆ ಎಂದು ಇಲ್ಲಿ ಖುದ್ದಾಗಿ ನಾವೇ ನೋಡಿಕೊಳ್ಳಬಹುದು.

ಚಂದ್ರನ ಚಲನೆಯನ್ನು ಆಧಿರಿಸಿ ರೂಪಿಸಲಾಗಿರುವ ಈ ಕ್ಯಾಲೆಂಡರನ್ನು ನೋಡಿ ಆಯಾ ದಿನ ಪ್ರೇಮ ಪರಿಣಯ ಎಂದು ಹೇಗೆ, ಮನೆ ಕೊಳ್ಳಲು ಯಾವ ದಿನ ಸೂಕ್ತ, ಎಂದು ಧನ ಪ್ರಾಪ್ತಿಯಾಗುತ್ತದೆ, ಯಾವ ದಿನ ಖಿನ್ನತೆ ಆವರಿಸುತ್ತದೆ, ಎಂದು ಸಂತಸದ ಬುಗ್ಗೆ ಉಕ್ಕುತ್ತದೆ ಮುಂತಾದ ವಿಷಯಗಳ ಬಗ್ಗೆ ತಿಳಿಯಬಹುದು. ಎಲ್ಲ ಸಂಗತಿಗಳನ್ನು ಪಂಡಿತರು ವಿವಿಧ ಚಿಹ್ನೆಗಳ ಮುಖಾಂತರ ಅತ್ಯಂತರ ಸರಳವಾಗಿ ತಿಳಿಸಿಕೊಡುತ್ತಾರೆ.

ಯಾವ ಚಿಹ್ನೆ ಏನು ಹೇಳುತ್ತದೆ?

ಹೃದಯ - ಪ್ರೀತಿ ಪ್ರೇಮ ಪ್ರಣಯಕ್ಕೆ ಆ ದಿನ ಅತ್ಯಂತ ಸುದಿನವಾಗಿರುತ್ತದೆ.
ಮಿಂಚು - ಆ ದಿನ ನಿಮ್ಮ ಜೀವನದಲ್ಲಿ ಆಪತ್ತು ಬರಬಹುದು.
ಮನೆ - ಮನೆ ಅಥವಾ ಅಂಗಡಿಯನ್ನು ಆ ದಿನ ಕೊಳ್ಳಬಹುದು ಅಥವಾ ಮಾರಬಹುದು.
ಮುಗುಳ್ನಗೆ - ಆ ದಿನ ನಿಮ್ಮ ಜೀವನದಲ್ಲಿ ಸಂತಸ ಬರಬಹುದು.
ಚಿಂತೆ - ಯಾವುದೋ ವಿಷಯದಲ್ಲಿ ಚಿಂತೆ ಅಥವಾ ಖಿನ್ನತೆ ಆವರಿಸಬಹುದು.
ನಕ್ಷತ್ರ - ಆ ದಿನ ಜೀವನದಲ್ಲಿ ಸೌಭಾಗ್ಯದ ದಿನವಾಗಿರುತ್ತದೆ.
ನಾಣ್ಯ - ನಾಣ್ಯ ಇದ್ದ ದಿನ ಧನ ಲಾಭ ಆಗುವ ಸಂಭವನೀಯತೆ ಇರುತ್ತದೆ.

ಪ್ರತಿದಿನ ಬಿಡುವು ಸಿಕ್ಕಾಗಲೆಲ್ಲ ಈ ಕ್ಯಾಲೆಂಡರನ್ನು ನೋಡಬೇಕೆಂದಿದ್ದರೆ ಈ ಪುಟವನ್ನು ಬುಕ್‌ಮಾರ್ಕ್ ಮಾಡಿಟ್ಟುಕೊಳ್ಳಿ.

ಮೇಷ : ಕೆಟ್ಟ ಘಳಿಗೆ ಸಂಬಂಧವನ್ನೇ ಸುಟ್ಟೀತು

ಅವಮಾನಗಳಾಗುತ್ತಿರುತ್ತವೆ, ತುಚ್ಛೀಕರಿಸಿ ಮಾತನಾಡುತ್ತಾರೆ, ಬೆನ್ನಹಿಂದೆ ಚೂರಿ ಚುಚ್ಚುತ್ತಿರುತ್ತಾರೆ, ಕೋಪ ಉಕ್ಕಿ ಬರುವ ಹಾಗೆ ಜರಿಯುತ್ತಿರುತ್ತಾರೆ, ಇದನ್ನೆಲ್ಲ ನೋಡಿ ಆಕ್ರೋಶ ಜ್ವಾಲಾಮುಖಿಯಾಗಿರುತ್ತದೆ, ಯಾವುದೇ ಕ್ಷಣದಲ್ಲಿ ಸಿಡಿಯುವ ಸಾಧ್ಯತೆಯೂ ಇರುತ್ತದೆ. ಆದರೆ, ಸ್ವಲ್ಪ ತಾಳಿ ತಲೆಯಲ್ಲಿ ತುಂಬಿರುವ ಆಕ್ರೋಶ ಇಳಿದುಹೋಗುವ ಹಾಗೆ ಒಂದು ಕೊಡ ತಣ್ಣೀರು ಸುರಿದುಕೊಳ್ಳಿ. ಒಂದು ಕೆಟ್ಟ ಘಳಿಗೆ, ಒಂದು ಆಡಬಾರದ ಮಾತು, ಒಂದು ಆಕ್ರೋಶದ ಕಿಡಿ ಸಂಬಂಧಗಳನ್ನೇ ಇಡಿಇಡಿಯಾಗಿ ಸುಟ್ಟು ಹಾಕುತ್ತವೆ. ತಾಳ್ಮೆಯಿಂದಿರಿ. ಏಕೆಂದರೆ, ನಮ್ಮ ನುಡಿಗಳಿಂದ ನಾವು ಯಾರನ್ನೂ ಬದಲಾಯಿಸಲು ಸಾಧ್ಯವಿಲ್ಲ, ಅದು ಅವರಿಗೆ ಮನವರಿಕೆಯೂ ಆಗುವುದಿಲ್ಲ. ಗಾಳಿಗೆ ಗುದ್ದಿ ಮೈಕೈ ನೋಯಿಸಿಕೊಳ್ಳುವವರು ನೀವೇ. ನಿಮಗೆ ನೀವೇ ಶತ್ರುಗಳಾಗಬೇಡಿ.

ವೃಷಭ : ಸುತ್ತಲಿನ ಗ್ರಹಗಳನ್ನು ನಿಯಂತ್ರಿಸಿ

ಸೂರ್ಯ ಹೇಗೆ ತನ್ನ ಸುತ್ತಲಿನ ಗ್ರಹಗಳನ್ನು ನಿಯಂತ್ರಿಸುತ್ತಿರುತ್ತಾನೋ, ಅದೇ ರೀತಿ ನಿಮ್ಮ ಸುತ್ತಲೂ ಇರುವ ಬಂಧಗಳನ್ನು ಗಟ್ಟಿಯಾಗಿ ಹಿಡಿದುಕೊಳ್ಳುವ, ನಿಯಂತ್ರಿಸುವ ಜವಾಬ್ದಾರಿಯೂ ನಿಮ್ಮ ಮೇಲಿರುತ್ತದೆ. ಆ ಜವಾಬ್ದಾರಿಯಿಂದ ನೀವು ನುಣುಚಿಕೊಳ್ಳಲು ಸಾಧ್ಯವೇ ಇಲ್ಲ. ಇಲ್ಲದಿದ್ದರೆ ಆ ಸುತ್ತಲಿರುವ 'ಗ್ರಹ'ಗಳು ಮಾಡುವ ತಪ್ಪಿಗೆ ನೀವು ಹೊಣೆಗಾರರಾಗುತ್ತೀರಿ. ಸರಿ ಎನಿಸದಿದ್ದಾಗ ತಿದ್ದಿ ತಿಳಿ ಹೇಳುವ ಎಲ್ಲ ಹಕ್ಕೂ ನಿಮಗಿದೆ. ಮೌನಂ ಸಮ್ಮತಿ ಲಕ್ಷಣಂ ಎಂದು ಉಳಿದವರು, ಅವರ ಆಟಗಳಿಗೆ ನೀವು ಸಮ್ಮತಿಸಿದ್ದೀರಿ ಎಂದು ಇನ್ನೂ ಕೆಟ್ಟ ಆಟಗಳನ್ನು ಆಡುವ ಸಾಧ್ಯತೆ ಇರುತ್ತದೆ. ಏನು ಮಾಡಬೇಕೆಂದು ಯೋಚಿಸಿ, ದಿಟ್ಟ ಕಠಿಣ ನಿರ್ಧಾರಕ್ಕೆ ಬನ್ನಿ.

ಮಿಥುನ : ಅವಿತುಕೊಂಡು ಕುಳಿತರೆ ಪ್ರಯೋಜನವಿಲ್ಲ

ನೇರಾನೇರವಾಗಿ ನಿಂತು ವಾದ ಮಾಡುವವರ ಜೊತೆ ಸೆಣೆಸಬಹುದು. ಆದರೆ, ಇತರರ ಮೂಲಕ ಷಡ್ಯಂತ್ರ ಮಾಡಿ, ದೈಹಿಕಕ್ಕಿಂತ ಮಾನಸಿಕವಾಗಿ ತಿವಿಯುವವರ ವಿರುದ್ಧ ಹೇಗೆ ಹೋರಾಟ ಸಾಧ್ಯ? ನಿಮಗಿರುವ ಅಧಿಕಾರ ಕಿತ್ತುಕೊಂಡು ಹಲ್ಲಿಲ್ಲದ ಹಾವಿನಂತೆ ಮಾಡಲು ಕೆಲವರು ಯತ್ನಿಸುತ್ತಿರುತ್ತಾರೆ. ಸುಮ್ಮನಿದ್ದಷ್ಟೂ ಅವರ ಕೈಯಲ್ಲಿನ ಕೋಲು ಬಲವಾಗಿ ಅಪ್ಪಳಿಸಲು ಪ್ರಾರಂಭಿಸುತ್ತದೆ. ತಿರುಗಿಬಿದ್ದರೆ ಹಾವೂ ಸಾಯಲಾರದು ಕೋಲೂ ಮುರಿಯಲಾರದು. ನಂಬಿಕೆ ಇಟ್ಟವರ ಮುಂದೆ ಈ ಸಂಕಷ್ಟಗಳನ್ನು ಹೇಳಿಕೊಂಡರೆ ತಪ್ಪಿಲ್ಲ, ಇದರಿಂದ ಪರಿಣಾಮವೇನೂ ಆಗಲಿಕ್ಕಿಲ್ಲ, ಆದರೆ ಆತ್ಮತೃಪ್ತಿಯಂತೂ ಆಗೇ ಆಗುತ್ತದೆ. ಬಿಲದಲ್ಲಿ ಅವಿತುಕೊಂಡು ಕುಳಿತರೆ ಪ್ರಯೋಜನವಿಲ್ಲ, ಸಿಡಿದೇಳಿ.

ಕರ್ಕಾಟಕ : ಎತ್ತರಕ್ಕೇರಿಸುವ ಒಂದೇ ಎಂಬ ಭಾವ

ನಿಮ್ಮ ಕೈಯಲ್ಲಿ ಏನೂ ಮಾಡಲಾಗದಿದ್ದರೂ ಇಲ್ಲಸಲ್ಲದ್ದನ್ನು ಹೇಳಿ ಇತರರ ನಡುವೆ ಗೊಂದಲ ಸೃಷ್ಟಿಸಲು ಹೋಗಬೇಡಿ. ಎಲ್ಲರನ್ನೂ ಒಂದೇ ರೀತಿ ಕಾಣುವ ಭಾವವಿದೆಯಲ್ಲ ಅದು ನಮ್ಮನ್ನು ಎತ್ತರಕ್ಕೆ ಕೊಂಡೊಯ್ಯುತ್ತದೆ. ಇಲ್ಲದಿದ್ದರೆ, ಮೇಲೆತ್ತಿ ಕರೆದುಕೊಂಡು ಹೋದ ಕೆಲವರು ನಿಮ್ಮನ್ನು ಎತ್ತಿ ಕೆಳಗೆ ಬಿಸಾಕುತ್ತಾರೆ. ಜೀವನಪೂರ್ತಿ ಗಳಿಸಿಕೊಂಡಿರುವ ಗೌರವ ಕಳೆದುಕೊಳ್ಳಲಿಕ್ಕೆ ಕ್ಷಣಾರ್ಧ ಸಾಕು. ನೀವುಂಟು ನಿಮ್ಮ ಆರೋಗ್ಯವುಂಟು ಅಂತ ಇದ್ದುಬಿಡಿ. ಸಮಯಕ್ಕೆ ತಕ್ಕಂತೆ ವೈದ್ಯರಿಂದ ತಪಾಸಣೆ ಮಾಡಿಸುವುದನ್ನು ಮಾತ್ರ ಮರೆಯಬೇಡಿ.

ಸಿಂಹ : ಕ್ಷಮಿಸಿ ಚಹಾ ಕುಡಿಯುವುದು ಕೆಟ್ಟ ಚಟವಲ್ಲ

ಜಗತ್ತು ಬದಲಾಗಿದೆ, ಇಂದಿನ ಪೀಳಿಗೆಯ ಜನರ ವರ್ತನೆಗಳು, ಆದ್ಯತೆಗಳು, ಆಯ್ಕೆಗಳು ಬದಲಾಗಿರುತ್ತವೆ. ಚಹಾ ಕಾಫಿ ಕುಡಿಯುವುದು ಕೆಟ್ಟ ಚಟ ಎನ್ನುವ ಕಾಲ ಎಂದೋ ಹೋಗಿದೆ. ನೀವೂ ಅದೇ ಕಾಲದವರಾಗಿದ್ದರೆ ಅಪ್ಡೇಟ್ ಆಗಿ. ಲಗಾಮನ್ನು ಸಡಿಲಬಿಟ್ಟಷ್ಟೂ ಕುದುರೆ ವೇಗವಾಗಿ ಓಡಲು ಆರಂಭಿಸುತ್ತದೆ. ನಿಮ್ಮ ಆವೇಗದ ಜೀವನ, ಸುತ್ತಲೂ ನಡೆಯುತ್ತಿರುವ ವಿದ್ಯಮಾನವನ್ನು ಒಮ್ಮೆ ವಿಮರ್ಶೆ ಮಾಡಿ ನೋಡಿ. ಆತ್ಮವಿಮರ್ಶೆ ಮಾಡಿಕೊಳ್ಳುವ ಸಮಯ ಇದಲ್ಲದಿದ್ದರೂ, ಕಡಿವಾಣವಿಲ್ಲದ ಗೂಳಿಯಂತಾಗಬಾರದು ಬದುಕು. ಅಂದ ಹಾಗೆ, ಮಕ್ಕಳು ಮರಿಗಳು ಏನು ಓದುತ್ತಿದ್ದಾರೆ, ಎಲ್ಲಿಗೆ ಹೋಗುತ್ತಾರೆ, ಯಾರ್ಯಾರನ್ನು ಭೇಟಿಯಾಗುತ್ತಾರೆ? ಗೊತ್ತಾ?

ಕನ್ಯಾ : ಗುರಿಯಿಲ್ಲದ ಜೀವನವೂ ಚೆನ್ನಾಗಿರುತ್ತದೆ

ಹೋಟೆಲಿನ ಮುಂದೆ ಹಾದುಹೋಗುವಾಗ ಸಮೋಸಾ ವಾಸನೆ ಬಂದು ತಕ್ಷಣ ತಿನ್ನುವುದರಲ್ಲಿ ಏನೋ ಮಜಾ ಇರುತ್ತದೆ. ಮನಸು ಸಂಪೂರ್ಣ ಖಾಲಿಯಾದಂಥ ಸಮಯದಲ್ಲಿ ಹೆಗಲಿಗೆ ಒಂದು ಜೋಳಿಗೆ ಹಾಕಿಕೊಂಡು ಮನಸ್ಸು ಬಂದಲ್ಲಿಗೆ ಹೋಗುವುದರಲ್ಲಿಯೂ ಏನೋ ಆನಂದವಿರುತ್ತದೆ. ಬದುಕಿನಲ್ಲಿ ಹೀಗೇ ಇರಬೇಕಂತ ಏನಾದರೂ ನಿಯಮಗಳಿವೆಯಾ? ಅಥವಾ ನೀವೇ ಏನಾದರೂ ಕಟ್ಟಳೆಗಳನ್ನು ಹಾಕಿಕೊಂಡಿದ್ದೀರಾ? ಶೂನ್ಯದಲ್ಲಿಯೇ ಎಂತೆಂಥದೋ ಕಥೆಗಳು ಹುಟ್ಟಿರುತ್ತವೆ, ಯಾವ್ಯಾವುದೋ ಐಡಿಯಾಗಳು ಹೊಳೆದಿರುತ್ತವೆ. ಬದುಕು ಹೀಗೇ ಇರಬೇಕೆಂದು ಬಿಡಬೇಡಿ. ನಿಮ್ಮ ಜೀವನಕ್ಕೆ ನೀವೇ ಮಾಲಿಕರು. ಗುರಿಯರಿಬೇಕೇನೋ ನಿಜ, ಆದರೆ ಗುರಿಯಿಲ್ಲದ ಜೀವನವೂ ಚೆನ್ನಾಗಿರುತ್ತದೆ. ಒಂದು ಸತಿ ಟ್ರೈ ಮಾಡಿ.

ತುಲಾ : ಆರೋಗ್ಯ ವಿಮೆಗಳನ್ನು ಮಾಡಿಸಿಟ್ಟುಕೊಳ್ಳಿ

ಆರೋಗ್ಯಕ್ಕಿಂತ ಉತ್ತಮವಾದ ಭಾಗ್ಯ ಇನ್ನಾವುದಿದೆ? ನಿಮ್ಮದೇ ಆಗಲಿ, ನಿಮ್ಮ ಸಂಗಾತಿಯ ಆರೋಗ್ಯವನ್ನೇ ಆಗಲಿ ಕಡೆಗಣಿಸಬೇಡಿ. ನಿಮ್ಮ ಪಾಠ, ಪ್ರವಚನ, ಕರ್ತವ್ಯವನ್ನೆಲ್ಲ ಬದಿಗಿಟ್ಟು ಆರೋಗ್ಯ ದಿವಿನಾಗಿರುವಂತೆ ಕಾಪಾಡಿಕೊಳ್ಳಿ. ಸಾಧ್ಯವಾದರೆ, ನಿಮ್ಮ ದೈನಂದಿನ ಜಪತಪಗಳನ್ನೆಲ್ಲ ಕೆಲದಿನಗಳ ಮಟ್ಟಿಗೆ ತ್ಯಜಿಸಿ ಸಣ್ಣದಾದ ಪ್ರವಾಸ ಕೈಗೊಳ್ಳಿ. ಮನಸ್ಸಿಗೆ ಮತ್ತು ದೇಹಕ್ಕೆ ಹಿತಕರವಾಗಿರುತ್ತದೆ. ಯಾವುದಕ್ಕೂ ಇಂದಿನ ಜೀವನಕ್ಕೆ ತಕ್ಕಂಥ ಆರೋಗ್ಯ ವಿಮೆಗಳನ್ನು ಮಾಡಿಸಿಟ್ಟುಕೊಳ್ಳಿ. ಹಣ ವಿನಾಕಾರಣ ಖರ್ಚಾಗುತ್ತದೆಂಬ ತಾತ್ಸಾರ ಬೇಡ.

ವೃಶ್ಚಿಕ : ಕೆಟ್ಟ ಶಕ್ತಿಗಳನ್ನು ಸಾಕಿ ಸಲುಹಬೇಡಿ

ಜೀವನದಲ್ಲಿ ಎದುರಾಗುವ ಸಣ್ಣಸಣ್ಣ ಹಿನ್ನಡೆಗಳು ಮುಂದಿನ ಜಿಗಿತಕ್ಕೆ ದಿಕ್ಸೂಚಿಯಾಗಿರುತ್ತವೆ. ಆ ಹಿನ್ನಡೆಗಳಿಂದ ದಿಕ್ಕೆಡಬಾರದು, ಅದನ್ನು ಸೋಲೆಂದೂ ಭಾವಿಸಬಾರದು. ಬದಲಾಗಿ, ಇನ್ನೂ ಉತ್ತಮ ಸಿದ್ಧತೆಗೆ ನಮ್ಮನ್ನು ತೊಡಗಿಸಿಕೊಳ್ಳಬೇಕು. ಸ್ಥಿತಪ್ರಜ್ಞತೆ ಕಳೆದುಕೊಂಡಷ್ಟೂ ನಮ್ಮ ವ್ಯಕ್ತಿತ್ವ ಅನಾವರಣಗೊಳ್ಳುತ್ತಾ ಹೋಗುತ್ತದೆ. ಕೆಟ್ಟ ಶಕ್ತಿಗಳನ್ನು ಸಾಕುವವರು ಮತ್ತು ಆವಾಹಿಸಿಕೊಳ್ಳುವವರು ನಾವೇ ಆಗಬಾರದು. ಸುಂದರವಾದ ಬದುಕನ್ನು ಆನಂದಿಸಲು ಏನೇನು ಬೇಕೋ ಅವೆಲ್ಲ ನಮ್ಮ ವ್ಯಕ್ತಿತ್ವದಲ್ಲಿಯೇ ಅಡಕವಾಗಿರುತ್ತವೆ. ಒಂದೊಂದಾಗಿ ಬಳಸಿಕೊಳ್ಳಿ. ಸಣ್ಣಪುಟ್ಟ ಆನಂದಗಳನ್ನು ಆನಂದಿಸಲು ಮರೆಯಬೇಡಿ.

ಧನುಸ್ಸು : ಆತ್ಮವಿಮರ್ಶೆ ಮಾಡಿಕೊಳ್ಳಲು ಸಕಾಲ

ಯಾವುದೇ ವ್ಯಕ್ತಿಯ ನಡವಳಿಕೆ, ಬದುಕುವ ರೀತಿಯ ಆಧಾರದ ಮೇಲೆ ಅವರನ್ನು ತೀರ್ಮಾನಿಸಲು ಹೋಗಬಾರದು. ಹೇಳಿದ್ದು ಸುಳ್ಳಾಗಬಹುದು, ಕೇಳಿದ್ದು ಸುಳ್ಳಾಗಬಹುದು. ನಿಧಾನಿಸಿ ಯೋಚಿಸಿದಾಗ ನಿಜವು ತಿಳಿವುದು. ನಮ್ಮ ಜೀವನವೇ ಒಂದು ಬಿಳಿ ಕ್ಯಾನ್ವಾಸಿನಂತೆ. ಅದರ ಮೇಲೆ ಕಪ್ಪು ಚುಕ್ಕೆ ಬರುವಂತೆ ಮಾಡಿಕೊಳ್ಳುವವರೂ ನಾವೇ, ಬಣ್ಣಬಣ್ಣದ ಚಿತ್ತಾರಗಳನ್ನು ಬಿಡಿಸಿ ಆನಂದ ನೀಡುವವರೂ ನಾವೇ. ಆಯಾ ಸಂದರ್ಭಗಳಿಗೆ ತಕ್ಕಂತೆ ಹೊಂದಿಕೊಂಡು ಹೋಗುವ, ದೊಡ್ಡತನ ಪ್ರದರ್ಶಿಸುವ ಗುಣವನ್ನು ಬೆಳಿಸಿಕೊಳ್ಳಿ. ಆತ್ಮವಿಮರ್ಶೆ ಮಾಡಿಕೊಳ್ಳಲು, ತಪ್ಪಾಗಿದ್ದರೆ ನಿವೇದಿಸಿಕೊಳ್ಳಲು ಇದು ಸಕಾಲ. ಇತರರ ಮಾತುಗಳಿಗೆ ಕಿವಿಗೊಟ್ಟು ನಮ್ಮತನವನ್ನು ಕಳೆದುಕೊಳ್ಳುವಂಥ ಮೂರ್ಖತನ ಎಂದೂ ಮಾಡದಿರಿ.

ಮಕರ : ಭವಬಂಧನಗಳಿಂದ ಕಳಚಿಕೊಂಡು ಹೋದಾಗ

ಗಂಡ ನನ್ನವನಲ್ಲ, ಹೆಂಡತಿ ನನ್ನವಳಲ್ಲ, ಮಕ್ಕಳು ನಮ್ಮವರಲ್ಲ, ಸ್ನೇಹಕ್ಕೂ ನನಗೂ ಸಂಬಂಧವೇ ಇಲ್ಲ ಎಂದು ಇರಲು ಸಾಧ್ಯವೆ? ಆಸೆಗಳ ದಾಸರು ನಾವು. ಎಲ್ಲವೂ ಇರಬೇಕೆಂದು ಬಯಸುತ್ತೇವೆ. ಸಿಕ್ಕಾಗ ಸಂತೋಷಪಡುವುದೂ ಇಲ್ಲ, ಸಿಗದಿದ್ದಾಗ ನಿರ್ಲಿಪ್ತರಾಗಿ ಇರುವುದೂ ಇಲ್ಲ. ಆದರೆ, ವಿಚಾರ ಮಾಡಿ. ಎಲ್ಲ ಭವಬಂಧನಗಳಿಂದ ಕಳಚಿಕೊಂಡು ಹೋದಾಗ ಮಾತ್ರ ನಾವು ಅನಿರ್ವಚನೀಯ ಆನಂದವನ್ನು ಅನುಭವಿಸುತ್ತೇವೆ. ಇದು ಯಾವುದೇ ತಪಸ್ಸು, ಧ್ಯಾನದಿಂದ ಸಾಧಿಸುವುದಂಥದ್ದಲ್ಲ. ಮನಸ್ಸು ಮಾಡಿದರೆ ಏನೂ ಸಾಧಿಸಬಹುದು.

ಕುಂಭ : ಬದುಕಿನ ನಾನಾ ಆಯಾಮಗಳನ್ನು ಕಂಡುಕೊಳ್ಳಿ

ಯಾಕಪ್ಪಾ ಬೇಕು ಈ ಬದುಕು ಅಂತ ಎಷ್ಟೋ ಬಾರಿ ಅಂದುಕೊಂಡಿರುತ್ತೇವೆ. ಆದರೆ, ಆ ಬದುಕಿನ ಸೆಳೆತಕ್ಕೊಳಗಾಗಿ ಆ ಪ್ರವಾಹದಲ್ಲಿಯೇ ಈಜುತ್ತ ಮುಳುಗುತ್ತ ಇರುತ್ತೇವೆ. ಎಲ್ಲೋ ಸ್ನೇಹ, ಬಂಧುವೆಂಬ ಆಸರೆಗೆ ಹುಡುಕಾಡುತ್ತಿರುತ್ತೇವೆ. ಆದರೆ, ನೀವಾಗಿಯೇ ಎಂದಾದರೂ ಪ್ರವಾಹಕ್ಕೆ ಬಿದ್ದಿದ್ದೀರಾ? ಆ ಧೈರ್ಯವಿಲ್ಲದ ಮೇಲೆ ಬದುಕಿದ್ದರೂ ಏನು ಪ್ರಯೋಜನ? ರಿಸ್ಕ್ ತೆಗೆದುಕೊಂಡವನು ಮಾತ್ರ ಬದುಕಿನ ನಾನಾ ಆಯಾಮಗಳನ್ನು ಕಂಡುಕೊಳ್ಳಲು ಸಾಧ್ಯ. ಇಲ್ಲದಿದ್ದರೆ, ಇದ್ದೇ ಇದೆ ಯಾವುದೋ ಒಂದು ಬಸ್ಸು, ಒಂದು ರೈಲು. ವಾಪಸ್ಸು ಅದೇ ಮನೆಗೆ ಕರೆದುಕೊಂಡು ಬಂದಿರುತ್ತದೆ.

ಮೀನ : ಅಲ್ಪನಿಗೆ ಐಶ್ವರ್ಯ ಬಂದರೆ...

ಅಲ್ಪನಿಗೆ ಐಶ್ವರ್ಯ ಬಂದರೆ ಅರ್ಧ ರಾತ್ರಿಲಿ ಕೊಡೆ ಹಿಡಿದನಂತೆ... ಎಂಬ ಗಾದೆ ನಿಮಗೆ ಅನ್ವಯವಾಗದಂತೆ ನೋಡಿಕೊಳ್ಳಿ. ಚೆಂಡು ವಾಪಸ್ ನಿಮ್ಮ ಕೈಗೆ ಬಂದಾಗ ಯಾವುದೋ ಗೋಡೆಗೆ ಬಡಿದು ನಿಮ್ಮ ಕೈಗೆ ಬಂದಿದೆ ಎಂಬುದನ್ನು ಮರೆಯಬೇಡಿ. ಎಷ್ಟೇ ಎತ್ತರಕ್ಕೆ ಬೆಳೆದರೂ, ಎಷ್ಟೇ ಗಳಿಸಿದರೂ, ಎಷ್ಟೇ ವಯಸ್ಸಾದರೂ ಅಮ್ಮ ಅಪ್ಪನಿಗೆ ನಾವು ಮಕ್ಕಳೇ. ತಲೆಯಲ್ಲಿ ಅಹಂಕಾರ ತುಂಬಿಕೊಂಡಷ್ಟೂ ತಲೆ ಹೆಗಲ ಮೇಲೆ ಇರುವುದಿಲ್ಲ, ಕಾಲು ನೆಲವನ್ನು ಮುಟ್ಟುತ್ತಿರುವುದಿಲ್ಲ. ಇದನ್ನೇ ಚಾಲೆಂಜಿಂಗ್ ಆಗಿ ತೆಗೆದುಕೊಳ್ಳಿ. ದಿಕ್ಕುತಪ್ಪಿದ ಜೀವನವನ್ನು ಸರಿದಾರಿಗೆ ತರಲು ಪ್ರಯತ್ನಿಸಿ. ಸುಖ, ಸಂತೋಷ, ನೆಮ್ಮದಿಗಳನ್ನು ಹಣದಿಂದ ಕೊಳ್ಳಲು ಸಾಧ್ಯವಿಲ್ಲ, ಪ್ರಯತ್ನಿಸಲೂ ಬೇಡಿ.

Have a great day!
Read more...

English Summary

The calendars specially designed by astrologer Pandit Anuj K. Shukla shows days when the Moon, Sun, and planets favour particular zodiac sign. Astro Calendar for Aries, Taurus, Gemini, Cancer, Leo, Virgo, Libra, Scorpio, Sagittarius, Capricorn, Aquarius and Pisces.