ವೃಶ್ಚಿಕ ರಾಶಿಗೆ ಗುರು ಗ್ರಹ ಪ್ರವೇಶ : ಮೇಷದಿಂದ ಮೀನದವರೆಗೆ ರಾಶಿ ಫಲ


ಅಕ್ಟೋಬರ್ 11, 2018ರಂದು ಗುರು ಗ್ರಹವು ತುಲಾ ರಾಶಿಯಿಂದ ವೃಶ್ಚಿಕ ರಾಶಿ ಪ್ರವೇಶ ಮಾಡಿದೆ. ಆ ರಾಶಿಯಲ್ಲಿ 2019ರ ನವೆಂಬರ್ 5ನೇ ತಾರೀಕಿನ ತನಕ ಸಂಚಾರ ಮಾಡುತ್ತದೆ. ಈ ಮಧ್ಯೆ 2019ರ ಮಾರ್ಚ್ 30ನೇ ತಾರೀಕು ಧನು ರಾಶಿಯನ್ನು ಪ್ರವೇಶಿಸಿ, ಏಪ್ರಿಲ್ 23ನೇ ತಾರೀಕು ವೃಶ್ಚಿಕ ರಾಶಿಗೆ ಮರಳುತ್ತದೆ.

ಧನು ರಾಶಿಯಲ್ಲಿ ಇರುವಾಗ ಇದನ್ನು ವಕ್ರೀ ಗುರು ಸಂಚಾರ ಅಂತ ಕರೆಯಲಾಗುತ್ತದೆ. ಗುರುವು ಒಂದು ರಾಶಿಯಿಂದ ಮತ್ತೊಂದು ರಾಶಿಗೆ ಕ್ರಮಿಸಲು ತೆಗೆದುಕೊಳ್ಳುವ ಅವಧಿ ಒಂದು ವರ್ಷ. ಶನಿ ಗ್ರಹದ (ಎರಡೂವರೆ ವರ್ಷ, ರಾಹು-ಕೇತು ಹೊರತುಪಡಿಸಿ) ನಂತರ ದೀರ್ಘ ಕಾಲ ಒಂದು ರಾಶಿಯಲ್ಲಿ ಸಂಚರಿಸುವ ಗ್ರಹ ಗುರು.

ಯಾವ ದಿಕ್ಕಿಗೆ ತಲೆ ಹಾಕಿ ನಿದ್ರಿಸಿದರೆ ಉತ್ತಮ, ಇಲ್ಲಿದೆ ವಾಸ್ತು ಟಿಪ್ಸ್

ಮದುವೆ, ಸಂತಾನ, ಉನ್ನತ ಶಿಕ್ಷಣ, ಗೃಹ ನಿರ್ಮಾಣ, ಉದ್ಯೋಗ, ಬಡ್ತಿ...ಇಂಥ ವಿಚಾರಗಳಲ್ಲಿ ಗುರುವಿನ ಅನುಗ್ರಹ ಪ್ರಮುಖವಾಗಿರಬೇಕು. ವೃಶ್ಚಿಕ ರಾಶಿಯಲ್ಲಿ ಗುರು ಸಂಚಾರ ಮಾಡುವಾಗ ಮೇಷದಿಂದ ಮೀನರಾಶಿಯವರೆಗೆ ಬೀರುವ ಪರಿಣಾಮ ಏನು ಎಂಬುದನ್ನು ಇಲ್ಲಿ ವಿವರಿಸಲಾಗಿದೆ. ಗುರುವಿನ ಅನುಗ್ಪ್ರಹ ಪಡೆಯಲು ಏನು ಮಾಡಬೇಕು ಎಂಬ ಬಗ್ಗೆ ಇನ್ನೊಂದು ಲೇಖನದಲ್ಲಿ ತಿಳಿಸಿಕೊಡಲಾಗುವುದು.

ಮೇಷ: ಖರ್ಚಿನ ವಿಚಾರದಲ್ಲಿ ಎಚ್ಚರ, ಸಾಲ ಮಾತ್ರ ಬೇಡವೇ ಬೇಡ

ನಿಮ್ಮ ರಾಶಿಯವರಿಗೆ ಒಂಬತ್ತು ಮತ್ತು ಹನ್ನೆರಡನೇ ಸ್ಥಾನಕ್ಕೆ ಗುರುವೇ ಅಧಿಪತಿ. ಒಂಬತ್ತನೇ ಸ್ಥಾನವು ಅದೃಷ್ಟಕ್ಕೆ ಸಂಬಂಧಿಸಿದ್ದು ಹಾಗೂ ಹನ್ನೆರಡನೆಯದು ವ್ಯಯ ಸ್ಥಾನ. ಆ ಎರಡು ಸ್ಥಾನಗಳ ಅಧಿಪತಿಯು ವೃಶ್ಚಿಕ ರಾಶಿಗೆ ಪ್ರವೇಶ ಮಾಡುತ್ತಿದೆ. ಅಂದರೆ ಅದು ಎಂಟನೆ ಮನೆಗೆ. ಮನೆಯ ವಿಚಾರಕ್ಕೆ ಸಂಬಂಧಿಸಿದಂತೆ ಹೆಚ್ಚಿನ ಚಿಂತೆ ಎದುರಾಗುತ್ತದೆ. ಮನೆಯ ಖರ್ಚುಗಳು ನೀವು ಅಂದುಕೊಂಡದ್ದಕ್ಕಿಂತ ತೀರಾ ಹೆಚ್ಚಾಗುತ್ತವೆ.

ನಿಮ್ಮ ಆದಾಯದಲ್ಲಿ ಹಾಗೂ ನಿತ್ಯದ ಖರ್ಚುಗಳನ್ನು ಸಂಭಾಳಿಸುವುದರಲ್ಲಿ ಕಷ್ಟವೇನೂ ಆಗಲಾರದು. ಆದರೂ ಈ ಮುಂದಿನ ವರ್ಷದ ನವೆಂಬರ್ ತನಕ ಸಾಲ ಮಾಡುವುದಕ್ಕೆ ಹೋಗಬೇಡಿ. ಧಾರ್ಮಿಕ ಕಾರ್ಯಕ್ರಮಗಳಿಗೆ ಹಣ ವ್ಯಯ ಮಾಡಬೇಕಾಗಬಹುದು. ಜನ್ಮ ಜಾತಕದಲ್ಲಿ ದಶೆ ಮತ್ತಿತರ ಸಮಸ್ಯೆಗಳೇನೂ ಇಲ್ಲದಿದ್ದರೆ ಆರೋಗ್ಯದ ಬಗ್ಗೆಯೂ ಯೋಚನೆ ಮಾಡುವ ಅಗತ್ಯವಿಲ್ಲ

ವೃಷಭ: ಸಂಬಂಧಗಳು ಗಟ್ಟಿಗೊಳಿಸಲಿರುವ ಗುರು

ವೃಶ್ಚಿಕದಲ್ಲಿ ಸಂಚರಿಸುವ ಗುರುವು ನಿಮಗೆ ಏಳನೇ ಸ್ಥಾನದಲ್ಲಿದ್ದು, ಸಂಬಂಧಗಳನ್ನು ಗಟ್ಟಿಗೊಳಿಸುತ್ತದೆ. ವ್ಯವಹಾರದ ಅಥವಾ ಜೀವನದ ಪಾಲುದಾರರು ಮತ್ತಷ್ಟು ಹತ್ತಿರವಾಗುತ್ತಾರೆ. ವಿವಾಹಿತರಿಗೆ ಬಾಳ ಸಂಗಾತಿ ಜತೆಗೆ ಶಾಂತಿ ಮತ್ತು ಸೌಹಾರ್ದದ ಸಂಬಂಧ ಕಾಯ್ದುಕೊಳ್ಳುವುದು ಸವಾಲಾಗುತ್ತದೆ. ನಿಮ್ಮ ಬಾಳ ಸಂಗಾತಿಯನ್ನು ಖುಷಿಯಾಗಿಡಲು ವಿಶೇಷವಾಗಿ ಏನಾದರೂ ಮಾಡಲೇಬೇಕು. ಪಾಲುದಾರಿಕೆ ವ್ಯವಹಾರ ಮಾಡುತ್ತಿರುವವರು ಕಾರ್ಯ ಚಟುವಟಿಕೆ ಬಗ್ಗೆ ಪಾಲುದಾರರ ಗಮನಕ್ಕೂ ಕಡ್ಡಾಯವಾಗಿ ತನ್ನಿ.

ಒಂದು ತಿಂಗಳ ಕಾಲ ಅಂದರೆ ಮಾರ್ಚ್- ಏಪ್ರಿಲ್ ಮಧ್ಯೆ ವಕ್ರೀ ಗುರು ಸಂಚಾರದ ವೇಳೆ ಸಂಬಂಧಗಳ ವಿಚಾರದಲ್ಲಿ ಆದಷ್ಟೂ ಜಾಗ್ರತೆಯಿಂದ ಇರಿ. ಈ ವರ್ಷದಲ್ಲಿ ಗುರು ಗ್ರಹದಿಂದ ನಿಮ್ಮ ಆರ್ಥಿಕ ಸ್ಥಿತಿಯು ಚೆನ್ನಾಗಿಯೇ ಇರುತ್ತದೆ. ಜತೆಗೆ ಆರೋಗ್ಯದ ವಿಚಾರದಲ್ಲೂ ಗಂಭೀರ ಸಮಸ್ಯೆಗಳು ಇರುವುದಿಲ್ಲ.

ಮಿಥುನ: ವೃತ್ತಿ ಬದುಕಿನ ಅವಕಾಶಗಳು ಗೋಚರ

ನಿಮ್ಮ ರಾಶಿಯಿಂದ ಆರನೇ ಸ್ಥಾನದಲ್ಲಿ ಗುರು ಸಂಚರಿಸಲಿದೆ. ಇದು ಉತ್ತಮ ಸ್ಥಾನವಲ್ಲ. ಬಾಳಸಂಗಾತಿ, ವ್ಯವಹಾರ ಪಾಲುದಾರರ ಜತೆಗೆ ಎಚ್ಚರದಿಂದ ಇರಬೇಕು. ಸಾಧ್ಯವಾದಷ್ಟು ಕೈಯಲ್ಲಿ ಹಣ ಇರುವಂತೆ ನೋಡಿಕೊಳ್ಳಿ. ವೈಯಕ್ತಿಕ ಖರ್ಚಿನ ಪ್ರಮಾಣ ಹೆಚ್ಚಾಗುವ ಸಾಧ್ಯತೆ ಇರುವುದರಿಂದ ಈ ಎಚ್ಚರಿಕೆ. ಮಾಮೂಲಿಯ ಖರ್ಚು ನಿರ್ವಹಿಸಲು ಕಷ್ಟವಾಗದು. ಇನ್ನು ವೃತ್ತಿ ಬದುಕಿನಲ್ಲಿ ಬೆಳವಣಿಗೆ ಕಾಣುತ್ತದೆ.

ಭವಿಷ್ಯದಲ್ಲಿ ಉತ್ತಮ ಅವಕಾಶಗಳಿವೆ ಎಂಬ ಸಂಗತಿ ವೃತ್ತಿ ಬದುಕಿನಲ್ಲಿ ಗೋಚರವಾಗುತ್ತದೆ. ಆರೋಗ್ಯದ ವಿಚಾರ ಗಮನಿಸುವುದಾದರೆ, ಮಧುಮೇಹ ಸಮಸ್ಯೆ ಇರುವವರು ರಕ್ತದಲ್ಲಿನ ಸಕ್ಕರೆ ಪ್ರಮಾಣ ಏರುಪೇರಾಗದಂತೆ ಎಚ್ಚರ ವಹಿಸಬೇಕು. ಇದನ್ನು ಹೊರತು ಪಡಿಸಿದರೆ ಯಾವುದೇ ಪ್ರಮುಖ ಅನಾರೋಗ್ಯ ಸಮಸ್ಯೆಗಳಿಲ್ಲ.

ಕರ್ಕಾಟಕ: ಹಣಕಾಸಿನ ಒಳಹರಿವು ಹೆಚ್ಚಾಗುತ್ತದೆ

ನಿಮ್ಮ ರಾಶಿಯು ಗುರು ಗ್ರಹಕ್ಕೆ ಉಚ್ಚ ಸ್ಥಾನ. ಕರ್ಕಾಟಕ ರಾಶಿಯವರಿಗೆ ಆರು ಹಾಗೂ ಒಂಬತ್ತನೇ ಮನೆಯ ಅಧಿಪತಿ ಗುರು ಗ್ರಹವು ಐದನೇ ಮನೆಯಲ್ಲಿ ಸಂಚರಿಸುತ್ತದೆ. ಹಣಕಾಸು ಒಳ ಹರಿವು ಹೆಚ್ಚಾಗುತ್ತದೆ. ಇಷ್ಟು ಕಾಲ ಹಣಕಾಸಿನ ಸ್ಥಿತಿ ಅಂಥ ಚೆನ್ನಾಗಿರಲಿಲ್ಲ ಅಂತಿದ್ದರೆ ಈಗ ಆರ್ಥಿಕವಾಗಿ ಸದೃಢರಾಗುತ್ತೀರಿ. ಕುಟುಂಬದ ಖರ್ಚುಗಳು ಹೆಚ್ಚಾಗುತ್ತವೆ.

ಆದ್ದರಿಂದ ಸಂಸಾರದ ಖರ್ಚಿಗಾಗಿ ಹೆಚ್ಚಿನ ಹಣವನ್ನು ಮೀಸಲಿಡಬೇಕಾಗುತ್ತದೆ. ಸಂತಾನ ಅಪೇಕ್ಷಿತರಿಗೆ ಗೊಂದಲದ ಸನ್ನಿವೇಶ ಸೃಷ್ಟಿಯಾಗುತ್ತದೆ. ಪ್ರಾಥಮಿಕ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿಗಳಿಗೆ ಈ ಗುರು ಹೆಚ್ಚಿನ ಬಲ ನೀಡುತ್ತಾನೆ. ನೆನಪಿನ ಶಕ್ತಿ ಹೆಚ್ಚಾಗುವ ಮೂಲಕ ಆತ್ಮವಿಶ್ವಾಸ ಮೂಡುತ್ತದೆ. ಒಟ್ಟಾರೆಯಾಗಿ ಆರೋಗ್ಯದಲ್ಲಿ ಮುಖ್ಯ ಸಮಸ್ಯೆಗಳೇನಿಲ್ಲ.

ಸಿಂಹ: ಯಾವುದೇ ಮುಖ್ಯ ತೀರ್ಮಾನ ಮಾಡಬೇಡಿ

ನಿಮ್ಮ ರಾಶಿಗೆ ಐದು ಹಾಗೂ ಎಂಟನೇ ಸ್ಥಾನಾಧಿಪತಿ ಆಗುತ್ತದೆ ಗುರು. ಅಂಥ ಗ್ರಹವು ನಾಲ್ಕನೇ ಮನೆಯಲ್ಲಿ ಸಂಚರಿಸುತ್ತದೆ. ಸಂತಾನ, ಶಿಕ್ಷಣ, ಸಟ್ಟಾ ವ್ಯವಹಾರದ ಮೂಲಕ ಲಾಭ, ಪ್ರೀತಿ ಹಾಗೂ ನಿಕಟ ಸಂಬಂಧವನ್ನು ಈ ಸ್ಥಾನವು ಸೂಚಿಸುತ್ತದೆ. ಮನೆಗೆ-ಸಂಸಾರಕ್ಕೆ ಸಂಬಂಧಿಸಿದ ವಿಚಾರದಲ್ಲಿ ಅಸಮಾಧಾನ ಇರುತ್ತದೆ. ಆದ್ದರಿಂದ ಕೌಟುಂಬಿಕ ವಿಚಾರದಲ್ಲಿ ಸಣ್ಣ-ಪುಟ್ಟದು ಎಂದು ನಿರ್ಲಕ್ಷ್ಯ ಮಾಡಬೇಡಿ.

ಅನಗತ್ಯ ಖರ್ಚುಗಳಾಗುತ್ತಿದ್ದರೆ ಆ ಬಗ್ಗೆ ಎಚ್ಚರ ವಹಿಸಿ, ಹಣ ಉಳಿತಾಯ ಕಡೆಗೆ ಗಮನ ಕೇಂದ್ರೀಕರಿಸಿ. ಅನಿರೀಕ್ಷಿತವಾಗಿ ಅನಾರೋಗ್ಯ ಸಮಸ್ಯೆಗಳು ಎದುರಾಗಬಹುದು. ತಕ್ಷಣವೇ ಅಗತ್ಯ ಚಿಕಿತ್ಸೆ ತೆಗೆದುಕೊಳ್ಳಿ. ಇಲ್ಲದಿದ್ದಲ್ಲಿ ಅದರಿಂದ ಗಂಭೀರ ಸಮಸ್ಯೆಗಳು ಎದುರಾಗುತ್ತವೆ. ಹಣಕಾಸಿನ ವಿಚಾರದಲ್ಲಿ ಯಾವುದೇ ಮುಖ್ಯ ತೀರ್ಮಾನವನ್ನು ತೆಗೆದುಕೊಳ್ಳಬೇಡಿ.

ಕನ್ಯಾ: ಮೆಚ್ಚಿನವರ ಜತೆ ಸಮಯ ಕಳೆಯುವ ಸಂತಸದ ಸಮಯ

ನಿಮ್ಮ ರಾಶಿಗೆ ನಾಲ್ಕು ಮತ್ತು ಏಳನೇ ಸ್ಥಾನಾಧಿಪತಿ ಗುರುವು ಮೂರನೇ ಮನೆಯಲ್ಲಿ ಸಂಚರಿಸುತ್ತದೆ. ಸಂತಸದ ಸಮಯವಿದು. ವ್ಯಾಪಾರಿಗಳು- ವೃತ್ತಿಪರರು ಹತ್ತಿರದ ಪ್ರಯಾಣವೊಂದನ್ನು ಮಾಡಿ ಮಾರಾಟ ಹೆಚ್ಚಳ ಆಗುವಂತೆ ನೋಡಿಕೊಳ್ಳುತ್ತಾರೆ. ಹೊಸದಾಗಿ ಸಂಬಂಧವೊಂದರ ಸ್ವರೂಪ ಅಂತಿಮಗೊಳ್ಳುತ್ತದೆ. ಇದರಿಂದ ಒಟ್ಟಾರೆಯಾಗಿ ನಿಮಗೆ ವಿಶ್ವಾಸ ಹೆಚ್ಚುತ್ತದೆ.

ಬಾಳಸಂಗಾತಿಯ ಜತೆಗೆ ಉತ್ತಮವಾದ ಸಮಯ ಕಳೆಯುತ್ತೀರಿ. ನೀವು ತುಂಬ ಮೆಚ್ಚಿಕೊಳ್ಳುವ ವ್ಯಕ್ತಿಗಳ ಸಮೀಪದಲ್ಲೇ ಇರುವಂಥ ಅವಕಾಶ ಸಿಗುತ್ತದೆ. ಗುರು ಗ್ರಹವು ಧನುಸ್ಸು ರಾಶಿಯಲ್ಲಿ ವಕ್ರೀ ಸಂಚಾರ ಮಾಡುವಾಗ ಉದ್ಯೋಗ, ವೃತ್ತಿ ಅಥವಾ ಆರ್ಥಿಕ ವಿಷಯಗಳಿಗೆ ಸಂಬಂಧಿಸಿದಂತೆ ಯಾವುದೇ ಮುಖ್ಯ ನಿರ್ಧಾರ ಮಾಡಬೇಡಿ. ಈ ವರ್ಷ ಆರೋಗ್ಯದಲ್ಲಿ ಪ್ರಮುಖ ಸಮಸ್ಯೆಗಳೇನಿಲ್ಲ.

ತುಲಾ: ಸಂಬಳದಲ್ಲಿ ಏರಿಕೆ, ಉತ್ತಮ ಅವಕಾಶಗಳು ಕಾಣುತ್ತಿವೆ

ನಿಮ್ಮ ರಾಶಿಯ ಮೂರನೇ ಹಾಗೂ ಅರನೇ ಮನೆಯ ಅಧಿಪತಿ ಗುರು. ಇದೀಗ ಎರಡನೇ ಸ್ಥಾನದಲ್ಲಿ ಸಂಚರಿಸುತ್ತದೆ. ಉದ್ಯಮಿಗಳು ಅಥವಾ ವ್ಯಾಪಾರಸ್ಥರಾಗಿ ತುಂಬ ದೊಡ್ಡ ಮಟ್ಟದ ವ್ಯವಹಾರವೊಂದು ಅಂತಿಮ ಹಂತದಲ್ಲಿದ್ದರೆ ಅದು ನಿಮ್ಮ ಪರವಾಗಿ ಆಗುತ್ತದೆ. ಉದ್ಯೋಗ ಕ್ಷೇತ್ರದಲ್ಲೂ ಉತ್ತಮ ಅವಕಾಶಗಳು ಕಾಣಿಸಿಕೊಳ್ಳುತ್ತವೆ. ಸಂಬಳದಲ್ಲೂ ಏರಿಕೆ ಕೂಡ ಆಗಬಹುದು.

ದೀರ್ಘ ಕಾಲದ ಅನಾರೋಗ್ಯದಿಂದ ಬಳಲುತ್ತಿರುವವರಿಗೆ ಪರ್ಯಾಯ ಔಷಧಿಯೊಂದು ದೊರೆತು, ಈಗಿನ ಸಮಸ್ಯೆಯಿಂದ ಮುಕ್ತಿ ಸಿಗುತ್ತದೆ. ಉಳಿದಂತೆ ವರ್ಷದ ಬಹುತೇಕ ಭಾಗ ಯಾವುದೇ ಆರೋಗ್ಯ ಸಮಸ್ಯೆ ಆಗುವುದಿಲ್ಲ. ಈ ಗುರುವಿನ ಸಂಚಾರದಿಂದ ಹಣಕಾಸಿನ ಒಳಹರಿವು ಹೆಚ್ಚಾಗುತ್ತದೆ. ಆರ್ಥಿಕ ಸ್ಥಿತಿಯಲ್ಲಿ ಚೇತರಿಕೆ ಕಂಡು, ಬಲಿಷ್ಠರಾಗುತ್ತೀರಿ.

ವೃಶ್ಚಿಕ: ವಾಸ್ತವ ಸ್ಥಿತಿ ಒಪ್ಪಿಕೊಳ್ಳಿ, ಪ್ರಗತಿಯಿದೆ

ನಿಮ್ಮ ರಾಶಿಗೆ ಎರಡು ಮತ್ತು ಐದನೇ ಸ್ಥಾನಾಧಿಪತಿ ಗುರು. ಇದೀಗ ನಿಮ್ಮದೇ ಜನ್ಮ ರಾಶಿಯಲ್ಲಿ ಸಂಚಾರ ಮಾಡುತ್ತದೆ. ವಾಸ್ತವವನ್ನು ಒಪ್ಪಿಕೊಳ್ಳುವ ಮನಸ್ಥಿತಿ ಬರುತ್ತದೆ. ಈಗಿನ ಮನಸ್ಥಿತಿಯ ಸಹಾಯದಿಂದ ವೃತ್ತಿ ಮತ್ತು ಆರ್ಥಿಕ ವಿಷಯಕ್ಕೆ ಸಂಬಂಧಿಸಿದಂತೆ ಪ್ರಗತಿ ಕಾಣಲು ಪ್ರಯತ್ನಿಸಿ. ಆರ್ಥಿಕ ಸ್ಥಿತಿ ಉತ್ತಮವಾಗಿ ಬಲಿಷ್ಠರಾಗುತ್ತೀರಿ.

ಕುಟುಂಬಕ್ಕೆ ಸಂಬಂಧಿಸಿದಂತೆ ಖರ್ಚುಗಳು ಹೆಚ್ಚಾಗುತ್ತವೆ. ವಿವಾಹ ವಯಸ್ಕರರು, ಮದುವೆಗೆ ಪ್ರಯತ್ನಿಸುತ್ತಿರುವವರಿಗೆ ಅಂದುಕೊಂಡ ಕೆಲಸ ಕೈಗೂಡುತ್ತದೆ. ಇನ್ನು ಸಂತಾನ ಅಪೇಕ್ಷಿತರಿಗೆ ಕೂಡ ಉತ್ತಮ ಸಮಯವಿದು. ದೈಹಿಕ ಆರೋಗ್ಯದಲ್ಲೂ ಯಾವ ಹೊಸ ಸಮಸ್ಯೆಯೂ ಕಾಣುತ್ತಿಲ್ಲ. ಆದ್ದರಿಂದ ನೆಮ್ಮದಿಯಾಗಿರಬಹುದು.

ಧನು: ಸಿಕ್ಕಾಪಟ್ಟೆ ಖರ್ಚಾಗುತ್ತದೆ, ಎಚ್ಚರವಾಗಿರಿ

ನಿಮ್ಮ ರಾಶಿ ಹಾಗೂ ನಾಲ್ಕನೇ ಮನೆಯ ಅಧಿಪತಿ ಗುರು. ಇದೀಗ ವೃಶ್ಚಿಕದಲ್ಲಿ ಅಂದರೆ ಹನ್ನೆರಡನೇ ಸ್ಥಾನದಲ್ಲಿ ಸಂಚರಿಸುತ್ತದೆ. ಇದರಿಂದ ಖರ್ಚಿನಲ್ಲಿ ಸಿಕ್ಕಾಪಟ್ಟೆ ಹೆಚ್ಚಳವಾಗುತ್ತದೆ. ವೈಯಕ್ತಿಕ ಹಾಗೂ ಅನಿರೀಕ್ಷಿತ ಖರ್ಚುಗಳ ಬಗ್ಗೆ ಗಮನ ಇರಿಸಿ. ಭವಿಷ್ಯಕ್ಕೆ ಹಣ ಉಳಿಸುವ ಅಗತ್ಯವಿದೆ ಎಂಬುದು ಮನಗಂಡರೆ ಅನಾಹುತ ತಡೆಯಬಹುದು.

ದೊಡ್ಡ ಮಟ್ಟದ ಹಣಕಾಸು ವ್ಯವಹಾರವನ್ನು ಮಾಡಬೇಡಿ. ಈ ವರೆಗೆ ಯಾವುದಾದರೂ ಆರೋಗ್ಯ ಸಮಸ್ಯೆ ಕಾಡುತ್ತಿದ್ದಲ್ಲಿ ಅದರಿಂದ ಚೇತರಿಸಿಕೊಳ್ಳಲು ಗುರುವಿನ ಅನುಗ್ರಹ ಸಿಗಲಿದೆ. ಉದ್ಯೋಗಕ್ಕೆ ಸಂಬಂಧಿಸಿದಂತೆ ಎಲ್ಲ ಆರಾಮವಾಗಿದೆ ಎಂಬ ಕಾರಣಕ್ಕೆ ಹೆಚ್ಚು ಶ್ರಮ ಹಾಕದೆ ಬಿಟ್ಟರೆ ಅಪಾಯ ಎದುರಾಗುತ್ತದೆ, ಹುಷಾರು.

ಮಕರ: ಹಣಕಾಸಿನ ಸ್ಥಿತಿ ಉತ್ತಮವಾಗುತ್ತದೆ

ನಿಮ್ಮ ರಾಶಿಗೆ ಗುರುವ ಹನ್ನೆರಡು ಮತ್ತು ಮೂರನೇ ಸ್ಥಾನಕ್ಕೆ ಅಧಿಪತಿ. ಇದೀಗ ಹನ್ನೊಂದನೇ ಮನೆಯಲ್ಲಿ ಗುರು ಸಂಚಾರ ಆಗುತ್ತದೆ. ಇದರಿಂದ ಆರ್ಥಿಕವಾಗಿ ಲಾಭ ಕಾಣುತ್ತೀರಿ. ಹಣಕಾಸಿನ ಸ್ಥಿತಿ ಉತ್ತಮವಾಗುತ್ತದೆ. ನಿಮ್ಮ ಹತ್ತಿರದ ಸಂಬಂಧಿಗಳ ಜತೆಗೆ ಉತ್ತಮ ಸಮಯ ಕಳೆಯುತ್ತೀರಿ. ನೀವು ತುಂಬ ಇಷ್ಟಪಡುತ್ತಿದ್ದವರ ಜತೆಗೆ ಮನಸ್ತಾಪ ಆಗಿದ್ದರೆ ಅದನ್ನು ನಿವಾರಿಸಿಕೊಳ್ಳುತ್ತೀರಿ.

ಬಹಳ ಕಾಲದಿಂದ ಅಂದುಕೊಳ್ಳುತ್ತಿದ್ದ ನಿಮ್ಮ ಆಸೆಯು ಹನ್ನೊಂದನೇ ಮನೆಯಲ್ಲಿ ಸಂಚರಿಸುವ ಗುರುವು ಈಡೇರಿಸುತ್ತಾನೆ. ಇನ್ನು ಆರೋಗ್ಯದ ವಿಚಾರಕ್ಕೆ ಬಂದರೆ, ಯಾವುದೇ ಹೊಸ ಸಮಸ್ಯೆಗಳು ಎದುರಾಗುವುದಿಲ್ಲ. ಆದ್ದರಿಂದ ನೆಮ್ಮದಿ ಆಗಿರಬಹುದು. ಈ ಅವಧಿಯಲ್ಲಿ ಸಂಗ್ರಹವಾಗುವ ಹಣವನ್ನು ಉಳಿತಾಯ ಮಾಡಿಟ್ಟುಕೊಳ್ಳಿ. ಭವಿಷ್ಯಕ್ಕೆ ಬೇಕಾಗುತ್ತದೆ.

ಕುಂಭ: ಉದ್ಯೋಗ- ಆರ್ಥಿಕ ವಿಚಾರದಲ್ಲಿ ಪ್ರಗತಿ

ನಿಮ್ಮ್ ರಾಶಿಗೆ ಎರಡು ಮತ್ತು ಹನ್ನೊಂದನೇ ಸ್ಥಾನಾಧಿಪತಿ ಗುರು. ಇದೀಗ ಹತ್ತನೇ ಸ್ಥಾನದಲ್ಲಿ ಸಂಚರಿಸುವ ಬೃಹಸ್ಪತಿ ಉದ್ಯೋಗ ಹಾಗೂ ಆರ್ಥಿಕ ವಿಚಾರದಲ್ಲಿ ಅನುಗ್ರಹ ಮಾಡುತ್ತಾನೆ. ಆರ್ಥಿಕವಾಗಿ ಸದೃಢರಾಗುತ್ತೀರಿ. ಉದ್ಯಮಿಗಳು ಹಾಗೂ ವ್ಯಾಪಾರಸ್ಥರು ದೊಡ್ಡ ಮಟ್ಟದ ವ್ಯವಹಾರವನ್ನು ಅಂತಿಮಗೊಳಿಸಿ, ಗೆಲುವಿನ ನಗೆ ಬೀರುತ್ತೀರಿ.

ಉದ್ಯೋಗಸ್ಥರು ಬಡ್ತಿ ಹಾಗೂ ಸಂಬಳ ಏರಿಕೆ ಎರಡನ್ನೂ ನಿರೀಕ್ಷಿಸಬಹುದು. ಇನ್ನು ಕೆಲಸ ಬದಲಿಸಬೇಕು ಎಂದು ಯೋಚನೆ ಮಾಡುತ್ತಿದ್ದವರಾಗಿದ್ದಲ್ಲಿ ಈಗ ಆತ್ಮವಿಶ್ವಾಸದಿಂದ ಪ್ರಯತ್ನಿಸಬಹುದು. ಅಂದುಕೊಂಡ ಕೆಲಸ ಆಗುತ್ತದೆ. ಹಲವು ವಿಷಯಗಳಲ್ಲಿ ಪ್ರಗತಿ ಕಾಣುತ್ತದೆ. ಇನ್ನು ಆರೋಗ್ಯ ಸ್ಥಿತಿ ಉತ್ತಮವಾಗಿರುತ್ತದೆ.

ಮೀನ: ದುಡ್ಡುಕಾಸಿನ ವಿಚಾರದಲ್ಲಿ ಎಚ್ಚರವಾಗಿರಿ

ನಿಮಗೆ ರಾಶಿಗೆ ಹಾಗೂ ಹತ್ತನೇ ಸ್ಥಾನಕ್ಕೆ ಗುರು ಗ್ರಹವೇ ಅಧಿಪತಿ. ವೃಶ್ಚಿಕದಲ್ಲಿನ ಗುರು ಸಂಚಾರ ನಿಮ್ಮ ಪಾಲಿಗೆ ಬಹಳ ಮುಖ್ಯವಾದದ್ದು. ಏಕೆಂದರೆ ಮೀನದಿಂದ ಒಂಬತ್ತನೇ ಸ್ಥಾನದಲ್ಲಿ ಗುರು ಗ್ರಹದ ಸಂಚಾರ ಇರುತ್ತದೆ. ದುಡ್ಡು ಕಾಸಿನ ವಿಚಾರಕ್ಕೆ ಸಂಬಂಧಿಸಿದಂತೆ ಎಚ್ಚರವಾಗಿ ಇರಬೇಕಾಗುತ್ತದೆ. ಅನಗತ್ಯವಾಗಿ ದುಡ್ಡಿನ ವಿಚಾರದಲ್ಲಿ ಅಪಾಯವನ್ನು ಮೈ ಮೇಲೆ ಎಳೆದುಕೊಳ್ಳಬೇಡಿ.

ವ್ಯಾಪಾರಿಗಳು-ಉದ್ಯಮಿಗಳು ಹೆಚ್ಚಿನ ಶ್ರಮ ಹಾಕಬೇಕಾಗುತ್ತದೆ. ಉದ್ಯೋಗಸ್ಥರಿಗೆ ಒತ್ತಡ ಎದುರಾಗಲಿದೆ. ನಿಗದಿತ ಸಮಯದೊಳಗೆ ಕೆಲಸ ಮುಗಿಸಲಾಗದೆ ಹೆಚ್ಚು ಹೊತ್ತು ಕಚೇರಿಯಲ್ಲಿ ಕಳೆಯಬೇಕಾಗುತ್ತದೆ. ಉದ್ಯೋಗಸ್ಥರು ತಮ್ಮ ಕೆಲಸದ ಬಗ್ಗೆಯೇ ಚಿಂತೆಗೆ ಈಡಾಗುತ್ತಾರೆ. ಆರೋಗ್ಯದ ವಿಚಾರದಲ್ಲಿ ಹೆಚ್ಚು ಎಚ್ಚರಿಕೆಯಿಂದ ಇರುವುದು ಮುಖ್ಯ.

Have a great day!
Read more...

English Summary

Jupiter transition impact on zodiac signs. Transit of planet Jupiter, harbinger of love and biggest planet in the solar system, will surely have big impact on your life. The transit in Scorpio zodiac sign will be from 11ht October 2018 to 5th November 2019.