keyboard_backspace

ಗೃಹ ಸಚಿವರೇ, ಅಗ್ರಿಗೋಲ್ಡ್ ಬ್ಲೇಡ್ ಸ್ಕೀಮ್ ಸಿಐಡಿ ತನಿಖೆ ಕಥೆ ಏನಾಯ್ತು ಕೇಳಿ?

Google Oneindia Kannada News

ಬೆಂಗಳೂರು, ಆಗಸ್ಟ್ 23 : ಹಣ ದ್ವಿಗುಣಗೊಳಿಸುವ ಆಸೆ ಹುಟ್ಟಿಸಿ ಕರ್ನಾಟಕ ಸೇರಿದಂತೆ ಎಂಟು ರಾಜ್ಯಗಳಲ್ಲಿ 32 ಲಕ್ಷ ಮಂದಿಯಿಂದ ಬರೋಬ್ಬರಿ 7 ಸಾವಿರ ಕೋಟಿ ಮಾಡಿದ್ದು ವಿಜಯವಾಡ ಮೂಲದ ಅವ್ವ ವೆಂಕಟ ರಾಮ ರಾವ್ ಎಂಬ ಮಹಾ ವಂಚಕ. ಏಳು ರಾಜ್ಯ ರಾಜ್ಯ ಸರ್ಕಾರಗಳೇ ಈ ಪ್ರಕರಣಗಳನ್ನು ತನಿಖೆಗೆ ಒಳಪಡಿಸಿ ಬರೋಬ್ಬರಿ ಏಳು ವರ್ಷಗಳೇ ಕಳೆದು ಹೋಯಿತು. ಒಬ್ಬೇ ಒಬ್ಬ ಪ್ರಜೆಗೆ ನ್ಯಾಯ ಸಿಕ್ಕಿಲ್ಲ. ಕರ್ನಾಟಕ ರಾಜ್ಯದಲ್ಲಿ ಅಗ್ರಿಗೋಲ್ಡ್‌ನಿಂದ ವಂಚನೆಗೆ ಒಳಗಾದವರ ಪ್ರಕರಣವನ್ನು ಸಿಐಡಿ ಅಧಿಕಾರಿಗಳು ತನಿಖೆ ನಡೆಸುತ್ತಲೇ ಇದ್ದಾರೆ. ಬರುವಷ್ಟು ದುಡ್ಡಾದರೂ ಕೊಡಿಸಿ ಎಂದು ಸಿಐಡಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದ ಅಗ್ರಿಗೋಲ್ಡ್ ಸಂತ್ರಸ್ತರು ಈಗಲೂ ಚಾತಕ ಪಕ್ಷಿಗಳಂತೆ ಕಾಯುತ್ತಿದ್ದಾರೆ. ಗೃಹ ಸಚಿವರೇ, ಆರ್ಥಿಕ ಅಪರಾಧ ಪ್ರಕರಣಗಳಲ್ಲಿ ಮೋಸ ಹೋದ ಬಡವರಿಗೆ ನ್ಯಾಯ ಕೊಡಿಸುವುದು ನಿಮ್ಮ ಹೊಣೆಗಾರಿಕೆ. ಅಗ್ರಿಗೋಲ್ಡ್ ಅಕ್ರಮದ ವಾಸ್ತವ ಜನರಿಗೆ ತಿಳಿಸಿ ಮುಗ್ಧ ಜನರಿಗೆ ನ್ಯಾಯ ಒದಗಿಸಬಲ್ಲಿರಾ ?

ಅಗ್ರಿಗೋಲ್ಡ್ ವಂಚನೆ ಇತಿಹಾಸ

ಅಗ್ರಿಗೋಲ್ಡ್ ವಂಚನೆ ಇತಿಹಾಸ

1995 ರಲ್ಲಿ ಆಂಧ್ರ ಪ್ರದೇಶದ ವಿಜಯವಾಡದಲ್ಲಿ ಅಗ್ರಿಗೋಲ್ಡ್ ಎಂಬ ಸಂಸ್ಥೆಯನ್ನು ಅವ್ವ ವೆಂಕಟರಾಮರಾವ್ ಮತ್ತು ಇತರರು ಸೇರಿ ಹುಟ್ಟು ಹಾಕಿದ್ದರು. ಮಾಸಿಕ ಹಣ ಹೂಡಿಕೆ ಮಾಡಿಸುವ ಸ್ಕೀಮ್‌ಗಳನ್ನು ಸಂಸ್ಥೆ ಪರಿಚಯಿಸಿತ್ತು. ಹೆಚ್ಚು ಬಡ್ಡಿ ಕೊಡುವ ಆಸೆ ಹುಟ್ಟಿಸಿದ್ದರಿಂದ ಲಕ್ಷಾಂತರ ಜನರು, ಅದರಲ್ಲೂ ಹಳ್ಳಿ ಪ್ರದೇಶದ ಜನರೇ ಹೂಡಿಕೆ ಮಾಡಿದ್ದರು. ಹಣ ಹೂಡಿಕೆ ಮಾಡಿದವರಿಗೆ ಕಮೀಷನ್ ಆಸೆ ತೋರಿಸಿ ಲಕ್ಷಾಂತರ ಜನರನ್ನು ಏಜೆಂಟರನ್ನಾಗಿ ನೇಮಿಸಿತು. ಇದ್ದಕ್ಕಿದ್ದಂತೆ ಕಂಪನಿಯಲ್ಲಿ ಹೂಡಿಕೆ ಮಾಡುವರ ಸಂಖ್ಯೆ ಲಕ್ಷಗಳು ದಾಟಿತು. ಇದೇ ಅವಧಿಯಲ್ಲಿ ಅಗ್ರಿಗೋಲ್ಡ್ ಸಂಸ್ಥೆ ರಿಯಲ್ ಎಸ್ಟೇಟ್, ಅಗ್ರಿ ಉತ್ಪನ್ನಗಳನ್ನು ಮಾರುಕಟ್ಟೆಗೆ ಬಿಟ್ಟಿತು. ಅಗ್ರಿ ಫಾರ್ಮಿಂಗ್, ಅಗ್ರಿ ರೆಸಾರ್ಟ್ ಹೀಗೆ ದೇಶದ ಉದ್ದಗಲಕ್ಕೂ ಬಡವರ ಹಣದಲ್ಲಿ ನಾನಾ ವಹಿವಾಟು ಆರಂಭಿಸಿತ್ತು. ಇದು ಜನರ ನಂಬಿಕೆಯನ್ನು ಇನ್ನಷ್ಟು ಗಟ್ಟಿಗೊಳಿಸಿತ್ತು. ಹೀಗಾಗಿ ಹೂಡಿಕೆ ಮಾಡುವ ಪ್ರಮಾಣ ದಿನೇ ದಿನೇ ಹೆಚ್ಚಾಗಿತ್ತು. ಕರ್ನಾಟಕ, ಆಂಧ್ರ ಪ್ರದೇಶ, ತೆಲಂಗಾಣ, ತಮಿಳುನಾಡು, ಒರಿಸ್ಸಾ, ಅಂಡಮಾನ್ ನಿಕೋಬಾರ್ ಸೇರಿದಂತೆ ಎಂಟು ರಾಜ್ಯದ ಜನರು ಹಣದಾಸೆಗೆ ಬಿದ್ದು ಹೂಡಿಕೆ ಮಾಡಿದ್ದರು. ಒಟ್ಟಾರೆ ಸಾರ್ವಜನಿಕರಿಂದ 1995 ರಿಂದ ಸಂಗ್ರಹಿಸಿದ್ದು 7 ಸಾವಿರ ಕೋಟಿ ಎಂದು ಅಂದಾಜಿಸಲಾಗಿದೆ. ಅದರ ಸರ್ಕಾರಿ ಬಡ್ಡಿ ಸೇರಿಸಿದರೂ ವಂಚನೆ ಮೊತ್ತ 20 ಸಾವಿರ ಕೋಟಿ ರೂ. ದಾಟುತ್ತದೆ.

ಎಂಟು ರಾಜ್ಯಗಳಲ್ಲಿ ತನಿಖೆ ಆರಂಭ

ಎಂಟು ರಾಜ್ಯಗಳಲ್ಲಿ ತನಿಖೆ ಆರಂಭ

ಹಣ ಹೂಡಿದ್ದವರು ಹಣದಾಸೆಗೆ ಬಿದ್ದು ಹೂಡಿಕೆ ಮಾಡಿದ್ದ ಹಣದ ಮೆಚ್ಯುರಿಟಿಗೆ ಕೊಟ್ಟಿದ್ದ ಅವಧಿ ಮುಗಿತು ಹೋಗಿತ್ತು. 2012 ರಿಂದಲೇ ಅಗ್ರಿಗೋಲ್ಡ್ ನೀಡಿದ್ದ ಚೆಕ್‌ಗಳು ಬೌನ್ಸ್ ಆಗತೊಡಗಿತು. 2014 ರ ವೇಳೆಗೆ ಹಣ ಹೂಡಿಕೆ ಮಾಡಿದ್ದ ಜನರು ವಾಪಸು ಕೇಳಲು ಆರಂಭಿಸಿದರು. ಆಂಧ್ರ ಪ್ರದೇಶದ ವಿಜಯವಾಡದಲ್ಲಿದ್ದ ಕೇಂದ್ರ ಕಚೇರಿ ಮುಂದೆ ಲಕ್ಷಾಂತರ ಜನರು ಪ್ರತಿಭಟನೆ ನಡೆಸಿದರು. ಹಣವೂ ಇಲ್ಲ, ಬಡ್ಡಿಯೂ ಇಲ್ಲ, ಕೊಟ್ಟ ಚೆಕ್‌ಗಳು ಡಸ್ಟ್ ಬಿನ್ ಸೇರಿದವು. ಇಡೀ ದಕ್ಷಿಣ ರಾಜ್ಯದಲ್ಲಿ ಜನರು ಬೀದಿಗೆ ಬಿದ್ದರು. ಆಪ್ತರಿಂದ ನಂಬಿಕಸ್ತರಿಂದ ಹೂಡಿಕೆ ಮಾಡಿಸಿದ್ದವರು ನೇಣುಗಂಬ ಏರಿ ಆತ್ಮಹತ್ಯೆ ಮಾಡಿಕೊಂಡರು. ಸುಮಾರು ತಿಂಗಳು ಹೀಗೆ ಸಾಗುತ್ತಿದ್ದಂತೆ ಅಗ್ರಿಗೋಲ್ಡ್ ಕಂಪನಿ ವಿರುದ್ಧ ವಂಚನೆ ದೂರುಗಳು ದಾಖಲಾದವು.

ಅದೇ ವೇಳೆಗೆ ಎಲ್ಲಾ ರಾಜ್ಯಗಳಲ್ಲಿ ಅಗ್ರಿಗೋಲ್ಡ್ ಕಂಪನಿ ವಿರುದ್ಧ ಸರಣಿ ದೂರುಗಳು ದಾಖಲಾದವು. ಅಗ್ರಿಗೋಲ್ಡ್ ಸಂಸ್ಥೆಯ ಕಚೇರಿಗಳಿಗೆ ನುಗ್ಗಿ ಗಲಾಟೆ ಮಾಡಿದರು. ಹಣ ಕಟ್ಟಿಸಿದ್ದ ಏಜೆಂಟರು ಊರು ಬಿಟ್ಟು ತಲೆ ಮರೆಸಿಕೊಂಡರು. ಇದೇ ಹಂತದಲ್ಲಿ ಅಗ್ರಿಗೋಲ್ಡ್ ಕಂಪನಿ ಜನರಿಂದ ಅಕ್ರಮವಾಗಿ ಹಣ ಸಂಗ್ರಹಿಸಿ ವಂಚನೆ ಮಾಡುತ್ತಿದೆ ಎಂಬ ಸಂಗತಿಯನ್ನು ಸೆಬಿ ಬಹಿರಂಗಪಡಿಸಿತ್ತು. ಅಗ್ರಿಗೋಲ್ಡ್ ಸಂಸ್ಥೆ ವಿರುದ್ಧ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗಿತ್ತು. ಹೈದರಾಬಾದ್ ಹೈಕೋರ್ಟ್‌ ಸಿಐಡಿ ತನಿಖೆಗೆ ವಹಿಸಿತ್ತು. ಹೀಗೆ ಬೆಳಕಿಗೆ ಬಂದ ಅಕ್ರಮ ವರ್ಷಗಳಾದರೂ ತನಿಖೆ ಹಾದಿಯಲ್ಲಿಯೇ ಸಾಗಿದೆ. ಹೈದರಾಬಾದ್‌ನಲ್ಲಿ ಅಕ್ರಮ ಬೆಳಕಿಗೆ ಬರುತ್ತಿದ್ದಂತೆ, ಕರ್ನಾಟಕದಲ್ಲಿ ಅಗ್ರಿಗೋಲ್ಡ್ ಅಕ್ರಮದ ತನಿಖೆಯನ್ನು ಸಿಐಡಿ ತನಿಖೆ ನಡೆಸುತ್ತಿದೆ.

ಕರ್ನಾಟಕದಲ್ಲಿ 3 ಲಕ್ಷ ಮಂದಿ ಮೋಸ

ಕರ್ನಾಟಕದಲ್ಲಿ 3 ಲಕ್ಷ ಮಂದಿ ಮೋಸ

ಅಗ್ರಿಗೋಲ್ಡ್ ಬ್ಲೇಡ್ ಸ್ಕೀಮ್ ನಂಬಿ ಕರ್ನಾಟಕದಲ್ಲಿ ಮೂರು ಲಕ್ಷಕ್ಕೂ ಅಧಿಕ ಮಂದಿ ಹೂಡಿಕೆ ಮಾಡಿದ್ದರು. ಹತ್ತು ಸಾವಿರದಿಂದ 20 ಸಾವಿರ ಹೂಡಿಕೆ ಮಾಡಿಸಿಕೊಳ್ಳುವ ಬ್ಲೇಡ್ ಸ್ಕೀಮ್ ಪರಿಚಯಿಸಿ ಬಡವರಿಂದ ಹೂಡಿಕೆ ಮಾಡಿಸಿಕೊಂಡು ಬಾಂಡ್‌ಗಳನ್ನು ನೀಡಿತ್ತು. ಹಣ ಹೂಡಿಕೆ ಮಾಡಿದವರೇ ಏಜೆಂಟರಾಗಿ ಪರಿವರ್ತನೆಗೊಂಡಿದ್ದರು. ಹೀಗಾಗಿ ಹೂಡಿಕೆ ಮಾಡಿದವರೇ ಹಣದಾಸೆಗೆ ಬಿದ್ದು ಬಡವರಿಂದಲೇ ಸಾವಿರಾರು ಕೋಟಿ ಹೂಡಿಕೆ ಮಾಡಿಸಿದ್ದರು. ಯಾವಾಗ ಅಕ್ರಮ ಬಯಲಿಗೆ ಬಂತೂ ಪ್ರಮುಖ ಏಜೆಂಟರು ಊರು ಬಿಟ್ಟರು. ಇನ್ನೂ ಕೆಲವರು ಆತ್ಮಹತ್ಯೆಗೆ ಶರಣಾದರು. ಆಂಧ್ರ ಪ್ರದೇಶದಲ್ಲಿ ಅಗ್ರಿಗೋಲ್ಡ್ ನಲ್ಲಿ ಹೂಡಿಕೆ ಮಾಡಿ ಆತ್ಮಹತ್ಯೆ ಮಾಡಿಕೊಂಡವರಿಗೆ ಅಂದಿನ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಮೂರು ಲಕ್ಷ ರೂ. ಪರಹಾರ ನೀಡುವುದಾಗಿ ಘೋಷಣೆ ಮಾಡಿದ್ದರು. ಅವ್ವ ವೆಂಕಟರಾವ್ ಎಂಬ ವಂಚಕ ಮಾಡಿದ ಪ್ಲಾನ್‌ಗೆ ಎಂಟು ರಾಜ್ಯದ 32 ಲಕ್ಷ ಜನ ಬೀದಿಗೆ ಬಿದ್ದರು. ಎಷ್ಟೋ ಸಲ ಸಿಐಡಿ ಅಧಿಕಾರಿಗಳ ಮುಂದೆ ಪ್ರತಿಭಟನೆ ನಡೆಸಿದರು. ಈಗಲೂ ಚಾತಕ ಪಕ್ಷಿಗಳಿಂದ ಅಸಲಾದರೂ ಕೈಗೆ ಸಿಗಲಿ ಎಂದು ಕಾಯುತ್ತಿದ್ದಾರೆ.

ಜಾರಿ ನಿರ್ದೇಶನಾಯಲ ಆಸ್ತಿ ಜಪ್ತಿ

ಜಾರಿ ನಿರ್ದೇಶನಾಯಲ ಆಸ್ತಿ ಜಪ್ತಿ

ಬೇನಾಮಿ ವಹಿವಾಟು ನಡೆಸಿದ ಅಗ್ರಿಗೋಲ್ಡ್ ಸಂಸ್ಥೆ ವಿರುದ್ಧ ಕೇಸು ದಾಖಲಿಸಿದ್ದ ಜಾರಿ ನಿರ್ದೇಶನಾಲಯದ 2020 ಡಿಸೆಂಬರ್‌ನಲ್ಲಿ ಅಗ್ರಿಗೋಲ್ಡ್ ಸಂಸ್ಥೆಗೆ ಸೇರಿದ 4109 ಕೋಟಿ ಮೌಲ್ಯದ ಆಸ್ತಿಗಳನ್ನು ಜಪ್ತಿ ಮಾಡಿಕೊಂಡಿತು. ಅಗ್ರಿಗೋಲ್ಡ್ ಸಂಸ್ಥೆಗೆ ಸೇರಿದ ಆಂಧ್ರ ಪ್ರದೇಶದ ಅಮ್ಯೂಸ್ಮೆಂಟ್ ಪಾರ್ಕ್ ಆಸ್ತಿ, ಕರ್ನಾಟಕ, ತೆಲಂಗಾಣ, ಒರಿಸ್ಸಾ ತಮಿಳುನಾಡು ರಾಜ್ಯದಲ್ಲಿ ಹೊಂದಿರುವ ಸುಮಾರು 2809 ಆಸ್ತಿಗಳು ಮಟ್ಟುಗೋಲು ಆಗಿವೆ. ಸಂಸ್ಥೆಗೆ ಸೇರಿದ ಸುಮಾರು 4109 ಕೋಟಿ ರೂಪಾಯಿ ಮೌಲ್ಯದ ಆಸ್ತಿ ಜಪ್ತಿ ಮಾಡಲಾಗಿದೆ ಎಂದು ಜಾರಿ ನಿರ್ದೇಶನಾಲಯ ಹೇಳಿಕೊಂಡಿತ್ತು.ಅಕ್ರಮ ಹಣ ವರ್ಗಾವಣೆ ಮಾಡಿದ ಆರೋಪ ಕುರಿತು ಅಗ್ರಿಗೋಲ್ಡ್‌ ಸಂಸ್ಥೆ ವಿರುದ್ಧ ಜಾರಿ ನಿರ್ದೇಶನಾಲಯ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದೆ. ಇದೇ ಆರೋಪಕ್ಕೆ ಸಂಬಂಧಿಸಿದಂತೆ ಎರಡು ದಿನದ ಹಿಂದಷ್ಟೇ ಸಂಸ್ಥೆಯ ಮುಖ್ಯಸ್ಥ ಅವ್ವ ವೆಂಕಟ ರಾಮರಾವ್, ಅವ್ವ ವೆಂಕಟ ಶೇಷು ಹಾಗೂ ಮತ್ತೊಬ್ಬ ನಿರ್ದೇಶಕನನ್ನು ಇಡಿ ಅಧಿಕಾರಿಗಳು ಬಂಧಿಸಿದ್ದರು. ಸಾರ್ವಜನಿಕರು ಹೂಡಿಕೆ ಮಾಡಿದ್ದ ಹಣವನ್ನು ಅಕ್ರಮವಾಗಿ ತಮ್ಮ ಒಡೆತನದ ಕಂಪನಿಗಳಿಗೆ ವರ್ಗಾವಣೆ ಮಾಡಿದ ಆರೋಪ ಕುರಿತು ಸಾಕ್ಷಾಧಾರಗಳನ್ನು ಸಂಗ್ರಹಿಸಿದ್ದ ಇಡಿ ಅಧಿಕಾರಿಗಳು ಮೂವರನ್ನು ಬಂಧಿಸಿದ್ದರು. ಅವರ ಬಂಧನದ ಬೆನ್ನಲ್ಲೇ ಇದೀಗ ನಾಲ್ಕು ಸಾವಿರ ಕೋಟಿ ಮೌಲ್ಯದ ಆಸ್ತಿಯನ್ನು ಇಡಿ ಅಧಿಕಾರಿಗಳು ಮುಟ್ಟುಗೋಲು ಹಾಕಿಕೊಂಡಿದ್ದರು.

ಅಗ್ರಿಗೋಲ್ಡ್ ಆಸ್ತಿ ಹರಾಜಿಗೆ ನೋಟ್ ಬ್ಯಾನ್ ಹೊಡೆತ

ಅಗ್ರಿಗೋಲ್ಡ್ ಆಸ್ತಿ ಹರಾಜಿಗೆ ನೋಟ್ ಬ್ಯಾನ್ ಹೊಡೆತ

ಅಗ್ರಿಗೋಲ್ಡ್ ಸಂಸ್ಥೆಯಿಂದ ಮೋಸ ಹೋದ ಜನರಿಗೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಆಂಧ್ರ ಪ್ರದೇಶ ಸರ್ಕಾರ ದಿಟ್ಟ ಹೆಜ್ಜೆಗಳನ್ನು ಆರಂಭದಲ್ಲಿ ಇಟ್ಟಿತು. ಆನಂತರ ಅದೂ ಮುಗುಚಿ ಬಿತ್ತು. ಅಗ್ರಿಗೋಲ್ಡ್ ಸಂಸ್ಥೆ ಖರೀದಿಸಿದ್ದ 16 ಸಾವಿರ ಎಕರೆ ಜಮೀನನನ್ನು ಆಂಧ್ರ ಸರ್ಕಾರ ಹರಾಜು ಪ್ರಕ್ರಿಯೆಗೆ ಮುಂದಾಗಿತ್ತು.. ಅದೇ ವೇಳೆ ದೇಶದಲ್ಲಿ ಐದು ನೂರು ರೂ. ಹಾಗೂ ಒಂದು ಸಾವಿರ ಮುಖ ಬೆಲೆಯ ನೋಟ್ ಬ್ಯಾನ್ ಹೊಡೆತಕ್ಕೆ ಸಿಲುಕಿದ್ದರಿಂದ ಯಾರೂ ಆ ಜಮೀನು ಖರೀದಿಗೆ ಮುಂದಾಗಲಿಲ್ಲ. ಹೀಗಾಗಿ ಅದು ಕೂಡ ನೇಪಥ್ಯಕ್ಕೆ ಸರಿಯಿತು. ಹೀಗಾಗಿ ಹಣ ಕಳೆದುಕೊಂಡು ಹದಿನಾಲ್ಕು ವರ್ಷಗಳ ಅಜ್ಞಾತವಾಸಿಗಳಿಗೆ ಹಣ ಸಿಗುವ ಭರವಸೆ ಸಿಕ್ಕಿಲ್ಲ.

ಸಿಐಡಿ ಅಧಿಕಾರಿಗಳ ಮತ್ತು ಗೃಹ ಇಲಾಖೆ ನಿರ್ಲಕ್ಷ್ಯ

ಸಿಐಡಿ ಅಧಿಕಾರಿಗಳ ಮತ್ತು ಗೃಹ ಇಲಾಖೆ ನಿರ್ಲಕ್ಷ್ಯ

ನೆರೆ ಆಂಧ್ರ ಪ್ರದೇಶದಲ್ಲಿ ಅಗ್ರಿಗೋಲ್ಡ್ ಸಂಸ್ಥೆಗೆ ಸೇರಿದ ಆಸ್ತಿಗಳನ್ನು ಹರಾಜು ಪ್ರಕ್ರಿಯೆ ಮುಗಿದಿದೆಯೇ ? ರಾಜ್ಯದಲ್ಲಿ ಎಷ್ಟು ಮಂದಿ ಮೋಸ ಹೋದವರು ಇದ್ದಾರೆ. ಅವರಿಗೆ ಪರಿಹಾರ ಕೊಡಿಸಲು ನೆರೆ ರಾಜ್ಯದ ಅಧಿಕಾರಿಗಳ ಜತೆ ಯಾವ ರೀತಿ ಸಹಕರಿಸಬೇಕು. ಕಾನೂನಾತ್ಮಕವಾಗಿ ಅಗ್ರಿಗೋಲ್ಡ್ ನಿಂದ ಮೋಸ ಹೋದವರಿಗೆ ಪರಿಹಾರ ಕೊಡಿಸಲು ಇರುವ ಮಾರ್ಗಗಳೇನು ? ಅವುಗಳ ಜಾರಿ ಹೇಗೆ ? ಕರ್ನಾಟಕದಲ್ಲಿ ಅಗ್ರಿಗೋಲ್ಡ್ ಸಂಸ್ಥೆಗೆ ಸೇರಿದ ಆಸ್ತಿಯನ್ನು ಪರಭಾರೆ ಮಾಡಿ ರಾಜ್ಯದಲ್ಲಿ ಮೋಸ ಹೋದವರಿಗೆ ನ್ಯಾಯ ಕೊಡಿಸುವ ಸಣ್ಣ ಪ್ರಯತ್ನ ಕೂಡ ಕಾಣುತ್ತಲ್ಲ ಅಗ್ರಿಗೋಲ್ಡ್ ಸಂಸ್ಥೆ ತನಿಖೆ ನಡೆಸುತ್ತಿದ್ದ ತನಿಖಾಧಿಕಾರಿಗಳು ಬದಲಾದರೇ ಹೊರತು ಬಡವರ ಹಣೆಬರಹ ಇನ್ನೂ ಬದಲಾಗಿಲ್ಲ. ಈಗಲಾದರೂ ಕಾಲಮಿತಿಯಲ್ಲಿ ತನಿಖೆ ನಡೆಸಿ ಅಗ್ರಿಗೋಲ್ಡ್ ನಿಂದ ಮೋಸ ಹೋದವರಿಗೆ ನ್ಯಾಯ ಕೊಡಿಸುವ ನಿಟ್ಟಿನಲ್ಲಿ ಗೃಹ ಸಚಿವರು ದಿಟ್ಟ ಕ್ರಮ ಕೈಗೊಳ್ಳುವರೇ ಕಾದು ನೋಡಬೇಕು.

English summary
Agrigold scam in Karnataka: 32 lakh people cheated in 8 states, innocent people waiting for justice from past Eight years know more
Related News
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X