ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊಡಗಿನ ಬೆಳೆಗಾರರು ಸಾಂಬಾರ ರಾಣಿ ಏಲಕ್ಕಿಯನ್ನು ಕೈಬಿಟ್ಟಿದ್ದೇಕೆ?

|
Google Oneindia Kannada News

ಮಡಿಕೇರಿ, ಜುಲೈ 21: ಸದ್ಯ ಕೊಡಗಿನ ಹೆಚ್ಚಿನ ಕಾಫಿ ಬೆಳೆಗಾರರು ಸಂಕಷ್ಟದಲ್ಲಿದ್ದು, ಇವತ್ತಿನ ಇವರ ಸಂಕಷ್ಟಕ್ಕೆ ಕಾರಣ ಏನು ಎಂಬುದನ್ನು ನೋಡಿದರೆ ಅದು ಸಾಂಬಾರ ರಾಣಿ ಏಲಕ್ಕಿ ಕೃಷಿಯನ್ನು ಕೈಬಿಟ್ಟಿದ್ದು ಎಂಬುದನ್ನು ನಿಸ್ಸಂದೇಹವಾಗಿ ಹೇಳಿ ಬಿಡಬಹುದು.

ಕೊಡಗಿನಲ್ಲಿ ಏಲಕ್ಕಿ ಬೆಳೆಯುತ್ತಿದ್ದ ಜಾಗಗಳಲ್ಲಿ ಈಗ ಕಾಫಿ ತೋಟಗಳು ತಲೆ ಎತ್ತಿ ನಿಂತಿವೆ. ಇಲ್ಲಿದ್ದ ಒತ್ತೊತ್ತಾದ ಮರಗಳು ಮಾಯವಾಗಿವೆ. ಸದಾ ಮಳೆ, ಶೀತ, ಮಂಜು ಮುಸುಕಿಕೊಂಡೇ ಇರುವ ಕೆಲವು ಪ್ರದೇಶಗಳಲ್ಲಿ ಕಾಫಿ ತೋಟಗಳು ಕಾಣಿಸುತ್ತಿವೆಯಾದರೂ ಅವುಗಳಿಂದ ನಿರೀಕ್ಷಿತ ಫಸಲನ್ನು ಪಡೆಯಲಾಗುತ್ತಿಲ್ಲ. ಇದರಿಂದ ಇತ್ತ ಕಾಫಿಯಿಂದ ಹೆಚ್ಚು ಆದಾಯ ಪಡೆಯಲಾಗದೆ ಅತ್ತ ಏಲಕ್ಕಿಯನ್ನು ಬೆಳೆಯಲಾಗದ ಅತಂತ್ರ ಸ್ಥಿತಿ ಇಲ್ಲಿನ ಬೆಳೆಗಾರರದ್ದಾಗಿದೆ.

ಕೊಡಗಿನಲ್ಲಿ ಭಾರೀ ಮಳೆ; ಹಾರಂಗಿಯಿಂದ 5,000 ಕ್ಯೂಸೆಕ್​ ನೀರು ಬಿಡುಗಡೆಕೊಡಗಿನಲ್ಲಿ ಭಾರೀ ಮಳೆ; ಹಾರಂಗಿಯಿಂದ 5,000 ಕ್ಯೂಸೆಕ್​ ನೀರು ಬಿಡುಗಡೆ

ಕಳೆದ ಎರಡು ವರ್ಷಗಳಿಂದ ಅಕಾಲಿಕ ಮತ್ತು ಧಾರಾಕಾರ ಮಳೆಯಿಂದ ಕಾಫಿ ಫಸಲು ನಾಶವಾಗುತ್ತಿದೆ. ವರ್ಷಕ್ಕೊಮ್ಮೆ ಫಸಲು ಕೊಡುವ ಕಾಫಿಯ ಫಸಲು ನಾಶವಾದರೆ ಬೆಳೆಗಾರನ ಕಥೆ ಮುಗಿದಂತೆಯೇ ಏಕೆಂದರೆ ಮತ್ತೆ ಫಸಲು ಪಡೆಯಲು ಮತ್ತೊಂದು ವರ್ಷ ಕಾಯಲೇ ಬೇಕಾಗುತ್ತದೆ.

 ಅದು ಏಲಕ್ಕಿಯ ಕಾಲವಾಗಿತ್ತು

ಅದು ಏಲಕ್ಕಿಯ ಕಾಲವಾಗಿತ್ತು

ಒಂದೆರಡು ದಶಕಗಳ ಹಿಂದೆ ಕೊಡಗಿನಲ್ಲಿ ಸದಾ ಮಳೆ ಸುರಿಯುತ್ತಿತ್ತು. ಹೆಚ್ಚಿನ ಪ್ರದೇಶಗಳು ಶೀತಮಯವಾಗಿದ್ದವು. ಮರಗಳು ಕೂಡ ಒತ್ತೊತ್ತಾಗಿದ್ದವು. ಇಂತಹ ಪ್ರದೇಶಗಳಲ್ಲಿ ಏಲಕ್ಕಿಯನ್ನು ಹೊರತು ಪಡಿಸಿ ಕಾಫಿ ಬೆಳೆಯಲು ಸಾಧ್ಯವಾಗುತ್ತಿರಲಿಲ್ಲ. ಅವತ್ತಿನ ಮಟ್ಟಿಗೆ ಏಲಕ್ಕಿಗೆ ಉತ್ತಮ ಬೆಲೆಯಿತ್ತಲ್ಲದೆ, ಗಿಡ ನೆಟ್ಟರೆ ಸಾಕಿತ್ತು ಗೊಬ್ಬರ ಹಾಕುವ ಅವಶ್ಯಕತೆ ಇರುತ್ತಿರಲಿಲ್ಲ. ಮಣ್ಣಿನ ಫಲವತ್ತತೆಯನ್ನು ಹೀರಿಕೊಂಡು ಗಿಡ ಬೆಳೆದು ಫಸಲು ನೀಡುತ್ತಿತ್ತು. ಹೀಗಾಗಿ ಕಡಿಮೆ ಖರ್ಚಿನಲ್ಲಿ ಹೆಚ್ಚಿನ ಆದಾಯ ತರುವ ವಾಣಿಜ್ಯ ಬೆಳೆಯಾಗಿ ಎಲ್ಲರಿಗೂ ಆಸರೆಯಾಗಿತ್ತು. ಮನೆಯಲ್ಲಿ ಏಲಕ್ಕಿ ಇದೆ ಎಂದರೆ ಅದೇನೋ ಒಂದು ರೀತಿಯ ಧೈರ್ಯ ಏಲಕ್ಕಿ ಬೆಳೆಗಾರನಲ್ಲಿರುತ್ತಿತ್ತು. ಜತೆಗೆ ಬೇಸಿಗೆಯಲ್ಲಿ ಕಾಫಿ, ಕರಿಮೆಣಸು, ಮಳೆಗಾಲದಲ್ಲಿ ಏಲಕ್ಕಿ ಫಸಲು ಬರುತ್ತಿದ್ದರಿಂದ ಆರ್ಥಿಕ ಪರಿಸ್ಥಿತಿಯೂ ಉತ್ತಮವಾಗಿರುತ್ತಿತ್ತು.

ಏಲಕ್ಕಿ ತೋಟಗಳ ವಿಸ್ತಾರ ಕುಗ್ಗಿವೆ

ಏಲಕ್ಕಿ ತೋಟಗಳ ವಿಸ್ತಾರ ಕುಗ್ಗಿವೆ

ಆದರೆ ಕಳೆದೊಂದು ದಶಕದಿಂದ ಕಾಫಿ ತೋಟಗಳ ವಿಸ್ತಾರ ಹೆಚ್ಚಾಗಿದೆ. ಏಲಕ್ಕಿ ತೋಟಗಳ ಪ್ರಮಾಣ ಇಳಿಕೆಯಾಗಿದೆ. ಇಡೀ ಜಿಲ್ಲೆಯಲ್ಲಿ ಏಲಕ್ಕಿ ಬೆಳೆಯುವವರ ಸಂಖ್ಯೆ ಶೇ.10ಕ್ಕೆ ಬಂದಿದೆ ಎಂದರೂ ತಪ್ಪಾಗಲಾರದು. ಇಷ್ಟಕ್ಕೂ ಆದಾಯ ತರುತ್ತಿದ್ದ ಪ್ರಮುಖ ವಾಣಿಜ್ಯ ಬೆಳೆಯಾಗಿದ್ದ ಏಲಕ್ಕಿ ಕೊಡಗಿನಿಂದ ಗಣನೀಯ ಪ್ರಮಾಣದಲ್ಲಿ ಕಣ್ಮರೆಯಾಗಿದ್ದಾದರೂ ಹೇಗೆ ಎಂಬುದನ್ನು ನೋಡಿದ್ದೇ ಆದರೆ ಅದಕ್ಕೆ ಪ್ರಮುಖ ಕಾರಣ ಏಲಕ್ಕಿಗೆ ತಗುಲಿದ ಕಟ್ಟೆರೋಗ, ಹವಾಮಾನದ ವೈಪರೀತ್ಯ ಮತ್ತು ಕಾಫಿ ಬೆಳೆಯೆಡೆಗಿನ ಆಸಕ್ತಿ ಹೀಗೆ ಪಟ್ಟಿ ಮಾಡುತ್ತಾ ಹೋಗಬಹುದು.

ಕೊಡಗಿನಲ್ಲಿ ಹೆಚ್ಚುತ್ತಿದೆ ಕೊರೊನಾ; ಆದರೂ ಲಾಕ್‌ಡೌನ್ ಯಾಕಿಲ್ಲ?ಕೊಡಗಿನಲ್ಲಿ ಹೆಚ್ಚುತ್ತಿದೆ ಕೊರೊನಾ; ಆದರೂ ಲಾಕ್‌ಡೌನ್ ಯಾಕಿಲ್ಲ?

 ಏಲಕ್ಕಿಗೆ ತಗುಲಿದ ಕಟ್ಟೆರೋಗ

ಏಲಕ್ಕಿಗೆ ತಗುಲಿದ ಕಟ್ಟೆರೋಗ

ಮೊದಲಿಗೆ ಅಲ್ಲಲ್ಲಿ ಕಾಣಿಸಿಕೊಂಡಿದ್ದ ಕಟ್ಟೆರೋಗ ಕ್ರಮೇಣ ಎಲ್ಲೆಡೆಗೆ ಹಬ್ಬಲಾರಂಭಿಸಿತು. ಗಿಡನೆಟ್ಟು ಫಸಲಿಗೆ ಬರುತ್ತಿದ್ದಂತೆಯೇ ಕಟ್ಟೆರೋಗ ತಗುಲರಾಂಭಿಸಿತು. ರೋಗ ತಗುಲಿದ ಗಿಡಗಳು ಬೆಳವಣಿಗೆಯಲ್ಲಿ ಕುಂಠಿತಗೊಂಡು ಗಾತ್ರದಲ್ಲಿ ಚಿಕ್ಕದಾಗಿ, ತೆಳ್ಳನೆಯ ಕೃಶವಾದ ತಾಳುಗಳನ್ನು ಹೊಂದಿ ಚಿಕ್ಕದಾದ ಕೊತ್ತುಗಳನ್ನು (ಪುಷ್ಪ ಗೊಂಚಲು) ಬಿಟ್ಟು ಸದ್ದಿಲ್ಲದೆ ಸತ್ತು ಹೋಗಲಾರಂಭಿಸಿದವು. ಇದು ಬೆಳೆಗಾರನಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿತು.

ಮುಕ್ತ ಮಾರುಕಟ್ಟೆಗೆ ಬಂದ ಕಾಫಿ

ಮುಕ್ತ ಮಾರುಕಟ್ಟೆಗೆ ಬಂದ ಕಾಫಿ

ಆದರೂ ಬೆಳೆಗಾರ ರೋಗದೊಂದಿಗೆ ಹೊಡೆದಾಡುತ್ತಾ ಏಲಕ್ಕಿಯನ್ನು ಬೆಳೆಯುತ್ತಾ ಬಂದಿದ್ದನು. ಆದರೆ ತೊಂಬತ್ತರ ದಶಕದ ನಂತರ ಕಟ್ಟೆರೋಗದ ತೀವ್ರತೆ ಹೆಚ್ಚಾದ ಕಾರಣ ಅದರ ಬಗ್ಗೆ ಆಸಕ್ತಿಯನ್ನು ಬೆಳೆಗಾರ ಕಳೆದುಕೊಳ್ಳತೊಡಗಿದನು. ಅಲ್ಲದೆ ಅದೇ ವೇಳೆಗೆ ಕಾಫಿ ಮಂಡಳಿಯ ಹಿಡಿತದಲ್ಲಿದ್ದ ಕಾಫಿ ಮುಕ್ತ ಮಾರುಕಟ್ಟೆಗೆ ಬಂದಿತು. ಯಾರು ಬೇಕಾದರೂ ಕಾಫಿ ಬೆಳೆಯಬಹುದು ಮತ್ತು ಎಲ್ಲಿ ಬೇಕಾದರೂ ಮಾರಾಟ ಮಾಡುವ ಅವಕಾಶ ದೊರೆಯಿತು.

 ಕಾಫಿ ತೋಟವಾಗಿ ಮಾರ್ಪಾಡು

ಕಾಫಿ ತೋಟವಾಗಿ ಮಾರ್ಪಾಡು

ಅದಾಗಲೇ ಏಲಕ್ಕಿಯೊಂದಿಗೆ ಹೆಣಗಾಡಿ ಸುಸ್ತಾಗಿದ್ದ ಬೆಳೆಗಾರ ಏಲಕ್ಕಿ ತೋಟವನ್ನು ಕಾಫಿ ತೋಟವನ್ನಾಗಿ ಮಾರ್ಪಡಿಸಿದನು. ಅದೇ ವೇಳೆಗೆ ಸಾವಿರಾರು ರುಪಾಯಿ ದರವಿದ್ದ ಏಲಕ್ಕಿಯ ಬೆಲೆಯೂ ಕುಸಿಯತೊಡಗಿತ್ತು. ಇದಲ್ಲೆದರ ಕಾರಣದಿಂದಾಗಿ ಏಲಕ್ಕಿ ಕೃಷಿಯಿಂದ ದೂರವಾದ ಬೆಳೆಗಾರರು ಕಾಫಿಯತ್ತ ಆಕರ್ಷಿತರಾಗಿ ಏಲಕ್ಕಿ ತೋಟಗಳಲ್ಲಿದ್ದ ಮರಗಳನ್ನು ತೆರವುಗೊಳಿಸಿ ಕಾಫಿ ತೋಟವನ್ನಾಗಿ ಮಾರ್ಪಡಿಸಿದರು.

 ಬೆಳೆಗಾರರ ಬಳಿ ಏಲಕ್ಕಿಯೇ ಇಲ್ಲ

ಬೆಳೆಗಾರರ ಬಳಿ ಏಲಕ್ಕಿಯೇ ಇಲ್ಲ

ಈಗ ಅಳಿದುಳಿದ ಕಡೆಗಳಲ್ಲಿ ಏಲಕ್ಕಿ ಕಂಡು ಬರುತ್ತಿದೆಯಾದರೂ ಅದನ್ನು ಆಸಕ್ತಿಯಿಂದ ಬೆಳೆಸುವವರ ಸಂಖ್ಯೆ ಕಡಿಮೆಯಾಗಿದೆ. ಜತೆಗೆ ಮೊದಲಿನಂತೆ ಫಸಲು ದೊರೆಯುತ್ತಿಲ್ಲ. ಹಳೆಯ ತಳಿಗಳು ಮಾಯವಾಗಿವೆ. ಅವುಗಳಿಂದ ಹೆಚ್ಚಿನ ಇಳುವರಿ ಪಡೆಯಲು ಸಾಧ್ಯವಿಲ್ಲ ಎಂಬುದನ್ನು ಅರಿತ ಕೆಲವು ಬೆಳೆಗಾರರು ನೆಲ್ಯಾಣಿ ಎಂಬ ಹೊಸತಳಿಯನ್ನು ಬೆಳೆಸುವ ಪ್ರಯತ್ನ ಮಾಡುತ್ತಿದ್ದಾರೆ. ಇದೀಗ ಏಲಕ್ಕಿಗೆ ಉತ್ತಮ ದರವಿದ್ದು, ಕೆ.ಜಿ ಗೆ ಒಂದೂವರೆ ಸಾವಿರಕ್ಕೂ ಹೆಚ್ಚು ದರವಿದೆ. ಆದರೆ ಬೆಳೆಗಾರರ ಬಳಿ ಏಲಕ್ಕಿಯೇ ಇಲ್ಲದಾಗಿದೆ. ಹಿಂದೆ ಏಲಕ್ಕಿ ಬೆಳೆಯುತ್ತಿದ್ದ ಪ್ರದೇಶವನ್ನೆಲ್ಲ ಕಾಫಿ ತೋಟವನ್ನಾಗಿ ಮಾರ್ಪಡಿಸಿದ ಬೆಳೆಗಾರರು ಏಲಕ್ಕಿಗೆ ಹೆಚ್ಚಾಗುತ್ತಿರುವ ದರವನ್ನು ನೋಡಿ ವೈಜ್ಞಾನಿಕವಾಗಿ ಬೆಳೆಯುವ ಬಗ್ಗೆ ಚಿಂತನೆ ಮಾಡುತ್ತಿದ್ದಾರೆ.

English summary
Coffee plantations are now growing in the fields of cardamom in Kodagu.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X