• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕೃಷಿಯಲ್ಲಿ ಪ್ರೊಫೆಷನಲಿಸಂ ಯಾವಾಗ ಬರುತ್ತೋ?

By Sushma Chatra
|

ಶ್ಯಾಮಯ್ಯ ಭಟ್ರ ಮನೆಗೆ ಅವತ್ತೊಂದು ದಿನ ಹೊಸದಾಗಿ ತೋಟದ ಕೆಲಸಕ್ಕೆ ಒಂದಿಬ್ಬರು ಹುಡುಗರು ಬಂದರು. ಭಟ್ರೇ ಬೆಂಗಳೂರಲ್ಲಿ ಹೋಟೆಲ್ ಕೆಲ್ಸ ಎಲ್ಲಾ ಮುಚ್ಚಿದೆ. ಸದ್ಯಕ್ಕೆ ಕೊರೊನಾ ಮುಗಿಯೋ ತನ್ಕ ಇವ್ರಿಬ್ರಿಗೊಂದು ಕೆಲಸ ಕೊಡಿ ಅಂತ ಪ್ರತಿದಿನ ಭಟ್ರ ಮನೆಗೆ ಕೆಲಸಕ್ಕೆ ಬರ್ತಿದ್ದವ ಅವರನ್ನು ಕರೆ ತಂದದ್ದು. ಸರಿ ಮಾರಾಯ ಬರಲಿ. ಕೆಲಸ ಇಲ್ಲ ಅಂದ್ರೆ ಯಾರಿಗಾದ್ರು ಜೀವನ ಕಷ್ಟ. ನನ್ನಿಂದ ಉಪಕಾರ ಆಗೋದಾದರೆ ಆಗಲಿ ಅಂದ್ರು ಭಟ್ರು.

   Rashid Khan : ಅಫ್ಘಾನಿಸ್ತಾನ ವಿಶ್ವಕಪ್ ಗೆದ್ದ ನಂತರವೇ ಮದುವೆಯಾಗುತ್ತೇನೆ | Oneindia Kannada

   ತೋಟದ ಕೆಲಸ ಅಂದ್ರೆ ಕೈಯಲ್ಲೊಂದು ಕತ್ತಿ ಯಾವಾಗಲೂ ಇಟ್ಟುಕೊಂಡಿರಬೇಕು. ಅದಕ್ಕಾಗಿ ಕತ್ಕೊಕ್ಕೆ, ಅಂದರೆ ಸೊಂಟಕ್ಕೆ ಕತ್ತಿ ಸಿಕ್ಕಿಸಿಕೊಳ್ಳುವ ಸಾಧನವನ್ನು ಹಿಂದಿನವರೆಲ್ಲಾ ಯಾವಾಗಲೂ ಇಟ್ಟುಕೊಂಡೇ ಇರುತ್ತಿದ್ದರು. ಅದರಲ್ಲಿ ಕತ್ತಿ ಯಾವಾಗಲೂ ನೇತಾಡ್ತಾ ಇರುತ್ತಿತ್ತು. ತೋಟದ ಕೆಲಸ ಮಾಡುವಾಗ ಹಾವು, ಹುಳ-ಹಪ್ಪಟೆ ಅಥವಾ ಮುಳ್ಳಿನ ಸಸ್ಯಗಳು, ತುರಿಕೆ ತರುವ ಸಸ್ಯಗಳು, ಇತ್ಯಾದಿ ಯಾವುದೋ ವಿಷ ಜಂತುಗಳು ಕಂಡರೆ ಕೂಡಲೇ ಕತ್ತಿಯಿಂದ ಕೊಲ್ಲುವುದೋ ಇಲ್ಲ ತಮ್ಮ ರಕ್ಷಣೆಗೆ ಬಳಸಿಕೊಳ್ಳುವುದಕ್ಕೆ ಆಗುತ್ತದೆ ಎಂಬುದು ಇದರ ಉದ್ದೇಶ. ಕತ್ತಿಯನ್ನು ಯಾವಾಗಲೂ ಕೆಲಸ ಮಾಡುವಾಗ ಇಟ್ಟುಕೊಂಡೇ ಇರುವುದು ಒಬ್ಬ ನಿಜವಾದ ಕೆಲಸಗಾರನ ಲಕ್ಷಣ.

   ಹಳ್ಳಿ ಜೀವನ ಅಂದುಕೊಂಡಷ್ಟು ಸುಲಭ ಅಲ್ಲ, ಬಹಳ ಕಷ್ಟ!

   ಆದರೆ ಈಗಿನವರಲ್ಲಿ ಈ ಅಭ್ಯಾಸ ಇಲ್ಲ. ಈ ವಿಚಾರವನ್ನು ತಮ್ಮ ಕೆಲಸಗಾರರಿಗೆ ಹೇಳಿ ಹೇಳಿ ಶ್ಯಾಮಯ್ಯ ಭಟ್ರು ಬೇಸತ್ತು ಬಿಟ್ಟಿದ್ದರು. ಆದರೂ ಪ್ರತಿಯೊಬ್ಬ ಕೆಲಸಗಾರನಿಗೂ ಕತ್ತಿ ಹಿಡ್ಕೊಳಿ ಅಂತ ಹೇಳೋದನ್ನು ಬಿಟ್ಟಿರಲಿಲ್ಲ. ಆ ಕತ್ತಿ ಹಾಳಾಗಿದ್ದರೆ ಅಕ್ಕಸಾಲಿಗನಿಗೆ ಕೊಟ್ಟು ಬಾಯಿಕಾಸಿ ಇಡುವುದನ್ನು ಯಾವಾಗಲೂ ಮಾಡೋರು.

   ಕತ್ತಿ ಮಸೆದುಕೊಳ್ಳಲು ಕೊಟ್ಟರೆ...

   ಹಾಗೆ ಅವತ್ತು ಹೊಸದಾಗಿ ಬಂದವರಿಬ್ಬರಿಗೂ ಒಂದೊಂದು ಕತ್ತಿ ಕೊಟ್ಟು ಹುಲ್ಲು ಸವರಿಕೊಂಡು ಬರೋಣ ಇಲ್ಲೇ ಕೆಳಗೆ ತೋಟದಲ್ಲಿ ಬೇಕಾದಷ್ಟು ಹುಲ್ಲಿದೆ ಅಂದ್ರು. ಇಗೋ ಕತ್ತಿ ತಗೊಳಿ. ಕತ್ತಿ ಮಸೆದುಕೊಳ್ಳಿ. ನಾನಿನ್ನು ತಿಂಡಿ ತಿಂದಿಲ್ಲ. ನಾನು ತಿಂಡಿ ತಿಂದು ಬರುವೆ ಎಂದು ಹೇಳಿ ತಿಂಡಿಗೆ ಬಂದ್ರು ಭಟ್ರು. ತಿಂಡಿ ಮುಗಿಸಿ ವಾಪಸ್ ಹೋಗುವಾಗ ಇಬ್ರೂ ಕತ್ತಿ ಹಿಡಿದು ಸುಮ್ಮನೆ ನಿಂತಿದ್ರು. ಹುಲ್ಲಿಗೆ ಹೋಗೋಕೆ ಹೇಳಿದ್ನಲ್ಲ. ಯಾಕೆ ನಿಂತಿದ್ದೀರಿ ಅಂದ್ರು ಭಟ್ರು. ಎಲ್ಲಿ ಹೋಗ್ಬೇಕು ಎಂದು ಗೊತ್ತಾಗಲಿಲ್ಲ ಅನ್ನೋ ಉತ್ತರ ಸಿಕ್ತು. ಓಹ್! ಹೊಸದಾಗಿ ಬಂದವರಿಗೆ ತೋಟದ ಅರಿವಿರೋದಿಲ್ಲ ಎಂದು ಅವರೇ ಕರೆದುಕೊಂಡು ಹೋದ್ರು. ಹುಲ್ಲಿರೋ ಜಾಗ ತೋರಿಸಿ ಇಲ್ಲೇ ಸವರಿ ಅಂದ್ರು.

   ಮದುವೆ ಆಗೋ ತನಕ ಮಗ ಸಿಟಿಲಿ ಇರಲಿ, ಆಮೇಲೆ ಮನೆಗೆ ಬರಲಿ

   ಭಟ್ರು ಅಲ್ಲೇ ಸುತ್ತಾಮುತ್ತ ಇದ್ದ ಕಾಳುಮೆಣಸಿನ ಬಳ್ಳಿಗಳನ್ನು ಮೇಲೆತ್ತಿ ಅದನ್ನು ಹಗ್ಗದಿಂದ ಕಟ್ಟುವ ಕೆಲಸ ಪ್ರಾರಂಭಿಸಿದರು. ಹುಲ್ಲು ಸವರಲು ಶುರು ಮಾಡಿದ ಐದು ನಿಮಿಷಕ್ಕೆ ಒಬ್ಬನ ಕತ್ತಿ ಕಲ್ಲಿಗೆ ತಾಗಿ ಎರಡು ತುಂಡಾಯ್ತು. ಭಟ್ರೆ ಕತ್ತಿ ತುಂಡಾಯ್ತು ಅಂದ. ಕತ್ತಿ ಆಗಾಗ ತುಂಡಾಗುವುದು ಸಾಮಾನ್ಯ. ಹಾಗೆಯೇ ಆಗಿರಬಹುದು ಎಂದು, ತಗೋ ನನ್ ಹತ್ತಿರ ಇರೋ ಕತ್ತಿಲಿ ಸವರು ಎನ್ನುತ್ತಾ ತಮ್ಮ ಕತ್ತಿಯನ್ನೇ ಕೊಟ್ರು ಭಟ್ರು.

   45 ನಿಮಿಷ ಆದರೂ ಒಂದು ಹೊರೆ ಹುಲ್ಲು ಕೊಯ್ಯಲಿಲ್ಲ

   ಸಾಮಾನ್ಯವಾಗಿ ಒಬ್ಬ ಕೆಲಸಗಾರ 30 ನಿಮಿಷಕ್ಕೆ ಬರೋಬ್ಬರಿ ತೂಕ ಇರುವ ಹುಲ್ಲಿನ ಹೊರೆ ಹೊತ್ತು ತರ್ತಾರೆ ಅನ್ನೋದು ಎಷ್ಟೋ ವರ್ಷದಿಂದ ತೋಟದಲ್ಲೇ ಬದುಕು ನಡೆಸಿದ ಭಟ್ರಿಗೆ ಚೆನ್ನಾಗಿ ಗೊತ್ತು. ಎಷ್ಟಂದ್ರು ಹೊಸದಾಗಿ ಬಂದೋರು, ಇರಲಿ ಅಂತ 45 ನಿಮಿಷ ಕಾಯ್ತಾ ಇದ್ರು. ಹುಲ್ಲಿನ ಹೊರೆ ಇಬ್ಬರೂ ಇನ್ನು ಕಟ್ಟಲಿಲ್ಲ. ಹೋಗ್ಲಿ ನಾನೇ ಹೋಗಿ ಹೊರೆ ಕಟ್ತೇನೆ ಎಂದು ಮುಂದೆ ಹೋದ್ರೆ ಇಬ್ಬರೂ ಸವರಿದ ಹುಲ್ಲು ಸೇರಿಸಿದರೂ ಒಂದು ಹೊರೆ ಆಗಲಾರದು. ಏನ್ ಮಾಡೋದು ಹೊಸಬರು, ಇಷ್ಟೇ ಹುಲ್ಲಾದ್ರೆ ಇವತ್ತು ದನಕ್ಕೆ ಸಾಕಾಗೋದಿಲ್ಲ ಹಾಗಾಗಿ ತಾನೇ ಸ್ವಲ್ಪ ಸವರಿಕೊಳ್ಳೋಣ ಎಂದು ನಿರ್ಧರಿಸಿದ ಭಟ್ರು ಸ್ವಲ್ಪ ಕತ್ತಿ ಕೊಡು ಇಲ್ಲಿ ಎಂದು ಇನ್ನೊಬ್ಬನಲ್ಲಿ ಕೇಳಿದ್ರು. ಕತ್ತಿ ಪಡೆದ ಭಟ್ರು ಕಕ್ಕಾಬಿಕ್ಕಿ!!! ಯಾಕಂದ್ರೆ ಕತ್ತಿ ಬಾಯಿ ಮಸೆದುಕೊಳ್ಳೋದು ಬಿಟ್ಟು ಕತ್ತಿಯ ಬೆನ್ನನ್ನು ಮಸೆದು ಬೆಳ್ಳಗೆ ಮಾಡಿಕೊಂಡಿದ್ದ ಪುಣ್ಯಾತ್ಮ! ಹೀಗಿರುವಾಗ ಹುಲ್ಲು ಸವರಿ ಮುಗಿಯೋದು ಹೇಗೆ ಹೇಳಿ. ಅಲ್ಲಿಗೆ ಅವರ ಕೆಲಸದ ಸಾಮರ್ಥ್ಯವನ್ನು ಒಂದು ಮಟ್ಟಕ್ಕೆ ಅರ್ಥೈಸಿಕೊಂಡರು ಭಟ್ರು.

   ಕತ್ತಿ ಕೆಲಸ ಇವರಿಗೆ ಆಗೋದಿಲ್ಲ. ಬೇರೆ ಕೆಲಸ ಮಾಡಿಸಿಕೊಳ್ಳೋಣ ಎಂದು ಮನೆಗೆ ಕರೆದುಕೊಂಡು ಬಂದು ಒಂದು ಮರಕ್ಕೆ ಹಬ್ಬಿದ್ದ ಬಳ್ಳಿಬದನೆ ಕಾಯಿಗಳನ್ನು ಕೊಯ್ಯಲು ಹೇಳಿದ್ರು. ಅದಕ್ಕಾಗಿ ಮನೆಯಲ್ಲಿದ್ದ ಅಲ್ಯುಮಿನಿಯಂನ 20 ಅಡಿ ಎತ್ತರದ ಏಣಿ ಹಾಕಿಕೊಳ್ಳಲು ಹೇಳಿದ್ರು. ಒಬ್ಬರೇ ಒಂದೇ ಕೈಯಲ್ಲಿ ತರಬಹುದಾದ ಏಣಿಯನ್ನು ಇಬ್ಬರೂ ಸೇರಿ ತಂದ್ರು. ಆಗಲೂ ಭಟ್ರು ಸುಮ್ಮನಾದ್ರು. ಬಳ್ಳಿ ಹಬ್ಬಿದ ಮರಕ್ಕೂ ಇಟ್ಟುಕೊಂಡ್ರು. ಇನ್ನೇನು ಏಣಿ ಹತ್ತುತಾನೆ ಅನ್ನುವಾಗ ಭಟ್ರು ಮಧ್ಯ ಬಾಯಿ ಹಾಕಿ ಕತ್ತಿದೋಟಿ (ಉದ್ದ ಕೋಲಿಗೆ ಸಣ್ಣಕತ್ತಿಯನ್ನು ಹಗ್ಗದಿಂದ ಕಟ್ಟಲಾಗಿರುತ್ತದೆ. ಮರದ ಕಾಯಿಗಳನ್ನು ಕೊಯ್ಯುವುದಕ್ಕೆ ಇದು ಸಹಕಾರಿ) ತಗೋ ಅಂದ್ರು. ಅಲ್ಲಿಗೆ ಅವನಿಗೂ ಓಹ್! ಹೌದಲ್ವಾ ಏಣಿ ಹತ್ತಿದ್ರು ಇದು ನನ್ನ ಕೈಗೆ ಎಟುಕುವುದಿಲ್ಲ. ಕತ್ತಿದೋಟಿ ಬೇಕಾಗುತ್ತದೆ ಅನ್ನುವುದು ಅಂದಾಜಿಗೆ ಬಂದದ್ದು. ಸರಿ ಅದನ್ನು ತಂದುಕೊಂಡ್ರು. ಇನ್ನೇನು ಬೀಳುಬದನೆ ಸರಿಯಾಗಿ ಕೊಯ್ತಾರೆ ಅಂದುಕೊಂಡ ಭಟ್ಟರು ತಮ್ಮ ಇತರೆ ಕೆಲಸಗಾರರು ಮಾಡುತ್ತಿದ್ದ ಕೆಲಸವನ್ನು ಒಮ್ಮೆ ನೋಡಿ ಬರೋಣ ಎಂದು ತೋಟದ ಮತ್ತೊಂದು ದಿಕ್ಕಿಗೆ ನಡೆದರು. ಸ್ವಲ್ಪ ಸಮಯದ ನಂತರ ಭಟ್ಟರು ವಾಪಸ್ ಬಂದ್ರು.

   ಬಳ್ಳಿ ಬದನೆ ಕೀಳಲು ಕೊಟ್ರೆ ಏಣಿ ಗತಿ ಹೀಗಾಯ್ತು

   ವಾಪಸ್ ಬರುವ ವೇಳೆಗೆ ಇಬ್ರೂ ಕೈಕಟ್ಟಿಕೊಂಡು ತಲೆ ಕೆಳಗೆ ಹಾಕಿಕೊಂಡು ನಿಂತಿದ್ರು. ಬುಟ್ಟಿ ನೋಡಿದ್ರು ಭಟ್ರು. ಅದರಲ್ಲಿ ಇದ್ದದ್ದು ಐದಾರು ಬಳ್ಳಿಬದನೆ. ಮರದಲ್ಲಿ ಸುಮಾರು 30ಕ್ಕೂ ಹೆಚ್ಚು ಕಾಯಿಗಳಿದ್ದವು. ಎಲ್ಲವನ್ನು ಕೊಯ್ಯುವುದಕ್ಕೆ ಹೇಳಲಾಗಿತ್ತು. ಆದರೆ ಐದಾರು ಕಾಯಿ ಕೊಯ್ದದ್ದು ಬಿಟ್ರೆ ಉಳಿದವೆಲ್ಲಾ ಮರದಲ್ಲೇ ಇತ್ತು. ಏಣಿ ನೋಡಿದ ಭಟ್ರಿಗೆ ಹಾರ್ಟ್ ಅಟ್ಯಾಕ್ ಆಗ್ಹೊದೊಂದು ಬಾಕಿ. ಯಾಕಂದ್ರೆ ಅಲ್ಯುಮಿನಿಯಂನ ಏಣಿ ಎರಡು ತುಂಡಾಗಿ ಬಿದ್ದಿತ್ತು. ಆಗಿದ್ದೇನು ಅಂದ್ರೆ ಬೀಳು ಬದನೆ ಕೊಯ್ಯಲು ಏಣಿ ಹತ್ತಿದ ಪುಣ್ಯಾತ್ಮ 10 ಫೀಟ್ ಎತ್ತರದಲ್ಲಿ ಏಣಿಯಲ್ಲಿದ್ದ ಒಂದು ಹಗ್ಗವನ್ನು ಮರಕ್ಕೆ ಕಟ್ಟಿಕೊಳ್ಳಲೇ ಇಲ್ಲ. ಸೀದಾ ಏಣಿ ತುದಿಗೆ ಹೋಗಿ ಬದನೆ ಕೊಯ್ಯಲು ದೋಟಿ ಎತ್ತಿದ್ದಾನೆ. ಏಣಿ ಅಲುಗಾಡಿದೆ. ಭಯದಿಂದ ಮರದ ಕೊಂಬೆ ಹಿಡಿದುಕೊಂಡಿದ್ದಾನೆ. ಹಂಗೂ ಹಿಂಗೂ ಕಷ್ಟಪಟ್ಟು ಕೆಳಗೆ ಇಳಿದಿದ್ದಾನೆ. ಆದರೆ ಏಣಿ ಧಸೀಲ್ ಅಂತ ಕೆಳಗೆ ಬಿದ್ದಿದೆ. ಬಿದ್ದ ಫೋರ್ಸಿಗೆ ಏಣಿ ಎರಡು ಹೋಳಾಗಿದೆ.

   ಅಯ್ಯೋ ಏನ್ರೋ ಮಾಡಿದ್ರಿ ಅಂತ ಹೊಟ್ಟೆಯಿಂದ ಬಂದ ಸಿಟ್ಟನ್ನು ಗಂಟಲಿಗೂ ತಂದುಕೊಳ್ಳದೆ ತಲೆ‌ ಚಚ್ಚಿಕೊಂಡ್ರು ಭಟ್ರು. ಯಾಕಂದ್ರೆ ಆ ಏಣಿ ವೆಲ್ಡ್‌ ಮಾಡಿಸಿಕೊಂಡು ಬರೋಕೆ 20 ಕಿಲೋ ಮೀಟರ್ ದೂರದಲ್ಲಿರೋ ಪೇಟೆಗೆ ಹೋಗ್ಬೇಕು. ಅದೂ ಬೈಕಲ್ಲೆ ಇಟ್ಕೊಂಡು ಹೋಗೋಕು ಆಗಲ್ಲ. ಕಾರ್ ನಲ್ಲೋ, ಜೀಪಲ್ಲೋ ಸರ್ಕಸ್ ಮಾಡ್ಕೊಂಡು ತಗೊಂಡ್ ಹೋಗಿ ವೆಲ್ಡ್‌ ಮಾಡಿಸಿಕೊಂಡು ಬರಬೇಕು. ವೆಲ್ಡ್‌ ಮಾಡದೆ ಇದ್ರೆ ಮುಂದೆ ಕೆಲಸಕ್ಕೆ ಬಾರದ ನಿಷ್ಪ್ರಯೋಜಕ ವಸ್ತುವಾಗಿ ಬಿಡುತ್ತದೆ. ಈಗಾಗಲೇ ಸಾವಿರಗಟ್ಟಲೆ ಖರ್ಚು ಮಾಡಿ ಖರೀದಿಸಿದ ಏಣಿ ವರ್ಷವಿಡೀ ಅದೂ ಇದೂ ಅಂತ ಕೃಷಿ ಕೆಲಸಗಳಲ್ಲಿ ಅವರಿಗೆ ಯಾವಾಗಲೂ ಬೇಕಾಗುತ್ತದೆ. ಆದರೆ ಇದನ್ನೇ ಚಿಂತೆ ಮಾಡ್ತಾ ಕೂತ್ರೆ ಕೆಲಸ ಸಾಗುವುದಿಲ್ಲ. ಮುಂದೆ ಯಾವ ಕೆಲಸ ಮಾಡಿಸೋದು ಅಂತ ಯೋಚಿಸಿದ್ರು. ಆದರೆ ಈಗ ಇವರಿಬ್ಬರಿಗೆ ಕೆಲಸ ಹೇಳುವಾಗ ಬಹಳ ಜಾಗರೂಕರಾಗಿರಬೇಕಾದ ಅಗತ್ಯ ಇದೆ ಅನ್ನೋದು ಶ್ಯಾಮಯ್ಯ ಭಟ್ರ ಗಮನಕ್ಕೆ ಬಂದಿತ್ತು.

   ಕಾಳುಮೆಣಸಿನ ಬಳ್ಳಿ, ವೀಳ್ಯೆದೆಲೆ ಬಳ್ಳಿ ನೆಡುವ ಕೆಲಸ...

   ಶ್ಯಾಮಯ್ಯ ಭಟ್ರ ಮನೆಗೆ ಕೆಲಸಕ್ಕೆ ಬರುವವರಿಗೆ ಬೆಳಿಗ್ಗೆ 10.30ರ ಸುಮಾರಿಗೆ ಚಹಾ ಕೊಟ್ಟು, ತಿಂಡಿ ಕೊಡುವ ರೂಢಿ ಇದೆ. ಅದೇ ರೀತಿ ಇವರಿಗೂ ತಿಂಡಿ ಕೊಟ್ಟು ನಂತರ ಮುಂದೇನು ಮಾಡಿಸೋದು ಅಂತ ಯೋಚಿಸೋಣ ಅಂದುಕೊಂಡು ತಾವೂ ಒಂದ್ ಗಡದ್ ಚಹಾ ಕುಡಿದು ಆಗಿರೋ ಟೆನ್ಶನ್ ಸ್ವಲ್ಪ ಕಡಿಮೆ ಮಾಡಿಕೊಳ್ಳೋದಕ್ಕೆ ಮುಂದಾದ್ರು ಭಟ್ರು. ಚಹಾ ಕುಡಿಯುವಾಗ ಭಟ್ರಿಗೆ ಕಾಳುಮೆಣಸಿನ ಬಳ್ಳಿ ಮತ್ತು ವೀಳ್ಯದೆಲೆ ಬಳ್ಳಿಯನ್ನು ನೆಡಬೇಕು ಅನ್ನೋದು ನೆನಪಾಯಿತು. ಮಳೆಗಾಲವಾಗಿರೋದ್ರಿಂದ ಈ ಸಮಯದಲ್ಲಿ ಗಿಡ ನೆಡುವುದು ಸಾಮಾನ್ಯ ವಾಡಿಕೆ. ಈ ಸಮಯದಲ್ಲಿ ಗಿಡ ಬೇಗನೆ ಚಿಗುರುತ್ತದೆ ಅನ್ನೋದು ಉದ್ದೇಶ.

   ಬಹಳ ಸುಲಭದ ಕೆಲಸ. ಯಾರು ಬೇಕಿದ್ದರೂ ಮಾಡಬಹುದಾದ ಕೆಲಸ. ತಮ್ಮದೇ ತೋಟದಲ್ಲಿರುವ ಉತ್ತಮ ತಳಿಯ ಬಳ್ಳಿಯನ್ನು ಕತ್ತರಿಸಿ ಬಳ್ಳಿ ಇಲ್ಲದ ಅಡಿಕೆ ಮರದ ಕೆಳಗೆ ನೆಡುವುದು ತಾನೆ ಅನ್ನೋದು ಭಟ್ರ ಆಲೋಚನೆ. ತಿಂಡಿಯಾದ ನಂತರ ಹೊಸ ಹುಡುಗರಿಬ್ಬರಿಗೆ ಅದೇ ಕೆಲಸವನ್ನೇ ಹೇಳಿದರಾಯ್ತು ಅಂದುಕೊಂಡವರು ಅದೇ ಕೆಲಸವನ್ನೇ ಹೇಳಿದರು.

   ಸರಿಯಾಗಿ ಮಾಡ್ತಾರೋ ಇಲ್ವೋ ಅನ್ನೋ ಅನುಮಾನವಿದ್ದಿದ್ದರಿಂದ, ಉತ್ತಮ ತಳಿಯ ಬಳ್ಳಿ ಯಾವುದು? ಯಾವ ಬಳ್ಳಿಯನ್ನು ಕತ್ತರಿಸಿಕೊಳ್ಳಬೇಕು? ಎಷ್ಟು ಉದ್ದ ಕತ್ತರಿಸಿಕೊಂಡು ನೆಡಬೇಕು? ಎಂಬಿತ್ಯಾದಿ ಮಾಹಿತಿ ಕೊಟ್ಟು ಬರೋಕೆ ಅವರ ಜೊತೆಗೆ ತೋಟಕ್ಕೆ ಹೋದ್ರು ಭಟ್ರು. ಸಾಮಾನ್ಯವಾಗಿ ಮರಕ್ಕೆ ಹಬ್ಬಿದ ಬಳ್ಳಿಯನ್ನು ಕತ್ತರಿಸುವುದಿಲ್ಲ. ಕೆಲವೊಮ್ಮೆ ಬಳ್ಳಿ ನೆಲದಲ್ಲೂ ಹಬ್ಬಿರುತ್ತದೆ. ಅವು ತೋಟದಲ್ಲಿ ಕಳೆಯಂತೆ. ಹಾಗಾಗಿ ಅವುಗಳನ್ನೇ ಕತ್ತರಿಸಿಕೊಂಡು ನೆಡಬೇಕು ಎಂದು ತೋರಿಸಿದರು. ಇನ್ನು ಈ ಬಳ್ಳಿ ನೆಡುವಾಗ ಬಳ್ಳಿಯ ಉದ್ದ ಸಾಮಾನ್ಯವಾಗಿ ಆರರಿಂದ ಏಳು ಗಂಟುಗಳಿರುವಂತೆ ಕತ್ತರಿಸಿಕೊಳ್ಳಬೇಕು.

   ಹುಡುಗರು ನೆಟ್ಟ ಬಳ್ಳಿ ನೋಡಿದ ಭಟ್ರಿಗೆ ಆಕಾಶ ಕಳಚಿ ಬಿದ್ದಂತಾಗಿತ್ತು

   ಹೌದು, ವೀಳ್ಯದೆಲೆ ಮತ್ತು ಕಾಳುಮೆಣಸಿನ ಬಳ್ಳಿಯಲ್ಲಿ ನಮ್ಮ ಬೆರಳಿನಲ್ಲಿ ಮೂಳೆಯ ಗಂಟುಗಳಿರುವಂತೆ ಅಥವಾ ಕಬ್ಬಿನ ಜಲ್ಲೆಯಲ್ಲಿ ಗಂಟುಗಳಿರುತ್ತದಲ್ಲ ಹಾಗೆಯೇ ಇರುತ್ತದೆ. ಅದರಲ್ಲಿ ಮೂರು ಗಂಟುಗಳಷ್ಟು ಉದ್ದವನ್ನು ನೆಲದಲ್ಲಿ ಹುಗಿಯಬೇಕು. ಇನ್ನುಳಿದ ಮೂರು ಗಂಟು ಮರಕ್ಕೆ ತಾಗಿಕೊಂಡಿರುವಂತೆ ಕಟ್ಟಬೇಕು. ಹೀಗೆ ಮಾಡಿದರೆ ಕೆಲವೇ ದಿನಕ್ಕೆ ನೆಟ್ಟ ಬಳ್ಳಿ ಚಿಗುರಲು ಪ್ರಾರಂಭಿಸುತ್ತದೆ. ಇದೆಲ್ಲವನ್ನೂ ವಿವರಿಸಿ ಒಂದಷ್ಟು ಬಳ್ಳಿಯನ್ನು ಕತ್ತರಿಸಿಟ್ಟು ಬಂದರು ಭಟ್ರು. ಇದೇನು ಕಷ್ಟದ ಕೆಲಸವಲ್ಲ. ಹಾರೆಯಲ್ಲಿ ಒಂದು ಅಗೆತ ಹಾಕಿ ಬಳ್ಳಿ‌ ಇಟ್ಟು ಪುನಃ ಮಣ್ಣು ಮುಚ್ಚಿದರೆ ಆಯ್ತಲ್ಲ ಅನ್ನೋದು ಅವರ ಯೋಚನೆ. ಆದರೆ ಈ ಕೆಲಸದಲ್ಲೂ ಯಡವಟ್ಟಾಗುತ್ತದೆ ಎಂದೂ ಭಟ್ಟರು ಕನಸು ಮನಸಲ್ಲೂ ಎಣಿಕೆ ಮಾಡಿರಲಿಲ್ಲ.

   ಸ್ವಲ್ಪ ಸಮಯ ಬಿಟ್ಟು ಹೋಗಿ ಹುಡುಗರು ನೆಟ್ಟ ಬಳ್ಳಿಗಳನ್ನು ನೋಡಿದ ಭಟ್ರಿಗೆ ಆಕಾಶ ಕಳಚಿ ಬಿದ್ದಂತಾಗಿತ್ತು. ಅವರಿಬ್ಬರಿಗೂ ಎರಡೆರಡು ಬಾರಿಸಿ ಬಿಡಬೇಕು ಅನ್ನುವಷ್ಟು ಕೋಪ ಬಂದದ್ದು ಸುಳ್ಳಲ್ಲ. ಯಾಕಂದ್ರೆ ಎಲ್ಲಾ ಬಳ್ಳಿಯನ್ನು ತಲೆಕೆಳಗೆ ಮಾಡಿ ಹುಗಿದು ಇಟ್ಟಿದ್ರು ಪುಣ್ಯಾತ್ಮರು. ಆ ಬಳ್ಳಿಗಳು ಬದುಕುವ ಹಾಡುಂಟೇ ಹೇಳಿ!?

   ಇಷ್ಟೆಲ್ಲ ಆದ ಮೇಲೆ ಇವರಿಗೆ ಸಂಬಳ ಎಷ್ಟು ಕೊಡೋದು ಅಂತ ಯೋಚಿಸ್ತಾ ಕೂತಿದ್ರು ಭಟ್ರು. ಸಿಟ್ಟಿನ ಕೈಯಲ್ಲಿ ಮೂಗು ಕತ್ತರಿಸಿಕೊಂಡ್ರೆ ನನ್ನ ಮೂಗೇ ಗಾಯ ಆಗೋದು. ಹಾಗಾಗಿ ಇನ್ನೊಂದು ವಾರ ನೋಡೋಣ ಆಮೇಲೆ ಸಂಬಳ ನಿರ್ಧರಿಸಿದರೆ ಆಯ್ತು ಎಂದು ನಿರ್ಧಾರ ಮಾಡಿದ್ರು.

   ಕೃಷಿಯಲ್ಲಿ ಪ್ರೊಫೆಷನಲಿಸಂ ಯಾವಾಗ ಬರುತ್ತೋ...

   ಸಂಜೆ ಆಯ್ತು. ಕೆಲಸ ಬಿಡುವ ಸಮಯ ಬಂತು. ಕೈಕಾಲು ತೊಳೆದು ಕೆಲಸ ಬಿಟ್ಟ ಹುಡುಗರು ಭಟ್ರೆ ನಮಗೆ ದುಡ್ಡು ಬೇಕು ಅಂತ ಭಟ್ರ ಮುಖಕ್ಕೆ ಹೊಡೆದ ಹಾಗೆ ಕೇಳಿಯೇ ಬಿಟ್ರು. ಇವತ್ತಷ್ಟೇ ಕೆಲಸಕ್ಕೆ ಬಂದಿದಿರ, ಹೋಟೆಲ್ಲು, ಕಂಪೆನಿಯಲ್ಲೆಲ್ಲಾ ಕೆಲಸಕ್ಕೆ ಹೋದ್ರೆ ಹೀಗೆ ಒಂದೇ ದಿನ ಕೆಲಸ ಮಾಡಿದ್ರೆ ದುಡ್ಡು ಕೊಡ್ತಾರಾ ಎಂದು ಕೇಳಿದಕ್ಕೆ "ಈಗೆಲ್ಲಾ ಕಂಪೆನಿ ಎಲ್ಲಿದೆ ಎಲ್ಲಾ ಮುಳುಗಿ ಹೋಗಿದ್ಯಲ್ಲ" ಎಂದು ಭಟ್ರ ಮುಖಕ್ಕೆ ಹೊಡೆದ ಹಾಗೆ ಉತ್ತರಿಸಿದರು ಹುಡುಗರು. ಅಲ್ಲಿಗೆ ಆ ಹುಡುಗರ ವಿರಾಟರೂಪ ದರ್ಶನ ಭಟ್ರಿಗೆ ಆಗಿತ್ತು. ಕೃಷಿಯಲ್ಲಿ ಪ್ರೊಫೆಷನಲಿಸಂ ಯಾವಾಗ ಬರುತ್ತೋ ಎಂದು ಗೊಣಗಿಕೊಳ್ಳುತ್ತಾ ಅಂದಿನ ಸಂಬಳವನ್ನು ತಂದುಕೊಟ್ರು ಭಟ್ರು. ಕಡಿಮೆ‌ ಸಂಬಳವಲ್ಲ. ಅನುಭವಿ ಕೆಲಸಗಾರನಿಗೆ ಸಿಗುವ ಸಂಬಳವೇ ಅವರಿಗೂ ಆಗಬೇಕು!!!

   ಆ ಒಂದು ದಿನವಿಡೀ ಆ‌ ಇಬ್ಬರು ಹುಡುಗರಿಂದ ತನಗಾದ ನಷ್ಟವನ್ನು ಭಗವಂತಾ ನೀನೇ ತುಂಬಿಸಿಕೊಡಬೇಕು ಎಂದು ಹೇಳ್ತಾ ಸಂಧ್ಯಾ ವಂದನೆಗೆ ನಡೆದರು ಶ್ಯಾಮಯ್ಯ ಭಟ್ರು.

   English summary
   Here is a story of two young men who returned from city to village due to coronavirus and what they try to do without experience in agriculture
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X
   We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more