ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪ್ರೊ. ನಂಜುಂಡಸ್ವಾಮಿ ನಂತರ ರೈತಸಂಘ: ಭಾಗ-1

|
Google Oneindia Kannada News

ಪ್ರೊ. ಎಂ.ಡಿ. ನಂಜುಂಡಸ್ವಾಮಿ ಅವರ ಕಾಲಾನಂತರ ರೈತ ಸಂಘವನ್ನು ಮುನ್ನಡೆಸುವವರಾರು ಎಂಬ ಪ್ರಶ್ನೆ ಎಲ್ಲರಲ್ಲಿಯೂ ಇತ್ತು. ಯಾರು ಏನೇ ಎಣಿಸಿದರೂ ಅದಾಗ ಅವಕಾಶವಿದ್ದದ್ದು ಹಿರಿಯರಾದ ಕೆ.ಟಿ.ಗಂಗಾಧರ್ ಅಥವಾ ಕಾರ್ಯದರ್ಶಿ ಕೋಡಿಹಳ್ಳಿ ಚಂದ್ರಶೇಖರ್. ಇನ್ನಾರೂ ಆ ಸಂದರ್ಭದಲ್ಲಿ ರೇಸಿನಲ್ಲಿರಲಿಲ್ಲ. ತೀರಾ ಹಿರಿಯ ಚೇತನಗಳ ಬಗ್ಗೆ ಮಾತನಾಡುವುದಾದರೆ ಕಡಿದಾಳು ಶಾಮಣ್ಣ, ಬಸವರಾಜ ತಂಬಾಕೆ ವಯೋಸಹಜವಾಗಿ ದಣಿದಿದ್ದರು. ಆಗ ಅತ್ಯುತ್ಸಾಹದಿಂದ ರೈತ ಸಂಘದ ಜವಾಬ್ಧಾರಿ ಹೊತ್ತುಕೊಳ್ಳಲು ಹಠಕ್ಕೆ ಬಿದ್ದಂತೆ ಸುತ್ತಾಡಿದವರು ಕೋಡಿಹಳ್ಳಿ ಚಂದ್ರಶೇಖರ್. ಒಂದು ಕಾಲದಲ್ಲಿ ಪ್ರೊ ಎಂಡಿಎನ್ ಅವರ ಅಚ್ಚುಮೆಚ್ಚಿನ ಹುಡುಗ ಕೂಡಾ.

ಬೆಂಗಳೂರಿನ ಅಂಬೇಡ್ಕರ್ ಭವನದಲ್ಲಿ ಪ್ರೊ. ಶ್ರದ್ಧಾಂಜಲಿ ಸಭೆ ನಡೆದಾಗ ಜನಪರ ಚಳುವಳಿಗಳ ಸಂಗಾತಿ ಮುನಿಚೌಡಪ್ಪ ''ಕೋಡಿಹಳ್ಳಿ ಅಧ್ಯಕ್ಷ ಆಗೋದ್ರ ತುರ್ತಲ್ಲೇ ಓಡಾಡ್ತಿದ್ದಾರೆ ನೋಡು'' ಎಂದು ನನ್ನ ಬಳಿ ಹೇಳಿದ್ದು ಇನ್ನೂ ಕಿವಿಯಲ್ಲಿಯೇ ಗುನುಗುಡುತ್ತಿದೆ. ಅವರ ಉತ್ಸಾಹದ ಬಗ್ಗೆ ನಮಗೇನೂ ಅನುಮಾನಗಳಿರಲಿಲ್ಲ ಕೂಡಾ. ಆದರೆ ಕೋಡಿಹಳ್ಳಿ ಅವರಿಗೆ ಅಧ್ಯಕ್ಷ ಸ್ಥಾನ ಕೊಡುವ ಬಗ್ಗೆ ಅನೇಕ ರೈತ ಮುಖಂಡರಿಗೆ ತಕರಾರಿತ್ತು ಎಂದು ನಮಗೆ ತಿಳಿದಿತ್ತು. ಮುಂದೇನಾಯಿತು? ಓದಿ...

ರಾಜ್ಯ ಸಮಿತಿ ಸಭೆ

ರಾಜ್ಯ ಸಮಿತಿ ಸಭೆ

2004ರಲ್ಲಿ ನಡೆದ ರಾಜ್ಯ ಸಮಿತಿ ಸಭೆಯಲ್ಲಿ ಹಿರಿಯರಾದ ಕೆ.ಟಿ ಗಂಗಾಧರ್ ಅಧ್ಯಕ್ಷರಾಗಬೇಕು ಎಂಬ ಆಶಯ ವ್ಯಕ್ತವಾದ ಬೆನ್ನಲ್ಲೆ ಕೆಲವರು ಕೋಡಿಹಳ್ಳಿ ಯಾಕಾಗಬಾರದು ಎಂಬ ಅಭಿಪ್ರಾಯವನ್ನೂ ವ್ಯಕ್ತಪಡಿಸಿದರು. ಅದಾಗ ಚರ್ಚೆಯನ್ನು ಸೂಕ್ಷ್ಮವಾಗಿ ಗಮನಿಸಿದ ರಾಜ್ಯಸಮಿತಿ ಇವರೀರ್ವರನ್ನೂ ಬಿಟ್ಟು ಹಿರಿಯರಾದ ಸುರೇಶ್ ಬಾಬು ಪಾಟೀಲರನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡುವ ನಿರ್ಧಾರ ಕೈಗೊಂಡಿತು. ಸಭೆಯ ತೀರ್ಮಾನಕ್ಕೆ ಎಲ್ಲರೂ ಬದ್ಧರಾದರು. ಆದರೆ ಮನಸ್ಸಿನ ವೇದನೆಗಳು ಉಳಿದಿದ್ದವು. ಇಷ್ಟಾಗಿ ಒಂದೇ ವರ್ಷದ ನಂತರ ಹೊಸಪೇಟೆಯಲ್ಲಿ ನಡೆದ ರಾಜ್ಯ ಸಮಿತಿ ಸಭೆಯಲ್ಲಿ ಸುರೇಶ್ ಬಾಬು ಪಾಟೀಲರನ್ನು ಇಳಿಸಿ ಕೋಡಿಹಳ್ಳಿ ಅಧ್ಯಕ್ಷರೆಂದು ತೀರ್ಮಾನ ಪ್ರಕಟ ಮಾಡಲಾಯಿತು. ಆಗ ಅನೇಕರು ಅಸಮಾಧಾನ ವ್ಯಕ್ತಪಡಿಸಿದ್ದು ಸತ್ಯ. ಹಿರಿಯರಾದ ಕೆ.ಟಿ ಗಂಗಾಧರ್ ಸೇರಿದಂತೆ ಅನೇಕರು ಕೋಡಿಹಳ್ಳಿ ಬಗ್ಗೆ ಸಹಮತ ವ್ಯಕ್ತಪಡಿಸಿರಲಿಲ್ಲ.

ಎರಡು ಬಣವಾದ ರೈತ ಸಂಘ

ಎರಡು ಬಣವಾದ ರೈತ ಸಂಘ

ಒಂದು ಕಡೆ ಕೆ.ಎಸ್. ಪುಟ್ಟಣ್ಣಯ್ಯ ಅವರ ಬಣ, ಇನ್ನೊಂದು ಕಡೆ ಸರ್ವಾನುಮತವಿಲ್ಲದ ಕೋಡಿಹಳ್ಳಿ ಬಣ. ಎರಡು ಬಣಗಳಾದವು. ಇದನ್ನೆಲ್ಲಾ ಗಮನಿಸಿದ ಹಿರಿಯರಾದ ಕಡಿದಾಳು ಶಾಮಣ್ಣ, ಬಸವರಾಜ ತಂಬಾಕೆ, ಪ್ರೊ ರವಿವರ್ಮಕುಮಾರ್ ಇನ್ನಿತರರು ಎರಡೂ ಬಣಗಳನ್ನು ಒಂದು ಮಾಡುವ ಪ್ರಯತ್ನ ಮಾಡಿದರು. ಅವರೆಲ್ಲರ ಕಾಳಜಿ ಹಾಗೂ ಪ್ರಯತ್ನದ ಫಲವಾಗಿ ಮುಂದೆ 2008ರಲ್ಲಿ ಎರಡೂ ಬಣಗಳು ಒಂದಾಗಿ ಆರು ತಿಂಗಳು ಪುಟ್ಟಣ್ಣಯ್ಯ ಮತ್ತೆ ಆರು ತಿಂಗಳು ಕೋಡಿಹಳ್ಳಿ ಅಧ್ಯಕ್ಷರಾಗುವುದೆಂಬ ತೀರ್ಮಾನವಾಯಿತು. ಮೊದಲ ಆರು ತಿಂಗಳು ಅಧ್ಯಕ್ಷರಾಗಿದ್ದ ಪುಟ್ಟಣ್ಣಯ್ಯನವರು ಅಧ್ಯಕ್ಷ ಸ್ಥಾನ ಬಿಟ್ಟುಕೊಡಲು ವಿಳಂಬ ಮಾಡಿದರು.

ಈ ವೇಳೆಗಾಗಲೇ ಕೋಡಿಹಳ್ಳಿ ಅವರದ್ದೊಂದು ಬೋಲೆರೋ ಮತ್ತು ಪುಟ್ಟಣ್ಣಯ್ಯನವರದೊಂದು ಸ್ಕಾರ್ಪಿಯೋ ಕಾರು ಬಂದಿದ್ದವು. ಆ ಬಗ್ಗೆ ತನಿಖೆ ಆಗಬೇಕು ಎಂದು ಡಾ. ವೆಂಕಟರೆಡ್ಡಿ, ಸಿ. ಪುಟ್ಟಸ್ವಾಮಿ, ಡಾ. ಚಿಕ್ಕಸ್ವಾಮಿ, ಬಸವರಾಜಪ್ಪ ಮುಂತಾದ ಮುಖಂಡರ ಕೋರ್ ಕಮಿಟಿ ರಚಿಸಲಾಯಿತು. ಚರ್ಚೆ, ಸಭೆ, ತನಿಖೆ ನಡೆಯುತ್ತಲೇ ದಿನಕಳೆದವು. ಅಷ್ಟರಲ್ಲಿ ಬಳ್ಳಾರಿಯ ವೀರಸಂಗಯ್ಯ ಮುಂತಾದವರು ಕೋಡಿಹಳ್ಳಿ ಚಂದ್ರಶೇಖರ್ ಜೊತೆ ಮುನಿಸಿಕೊಂಡಿದ್ದರು.

ಹೊಸ ಸಂಘ ಕಟ್ಟುವ ತೀರ್ಮಾನ

ಹೊಸ ಸಂಘ ಕಟ್ಟುವ ತೀರ್ಮಾನ

2010 ರಲ್ಲಿ ಅಖಿಲ ಭಾರತ ರೈತ ಸಂಘಟನೆಗಳ ಒಕ್ಕೂಟದ ಸಭೆ ಬೆಂಗಳೂರಿನಲ್ಲಿ ಏರ್ಪಾಡಾಗಿದ್ದಾಗ ಹಿಂದೆ ಪ್ರೊ ಇದ್ದಾಗ ಒಟ್ಟಿಗಿದ್ದ, ಪುಟ್ಟಣ್ಣಯ್ಯನವರನ್ನೂ ಒಳಗೊಂಡಂತೆ ಎಲ್ಲರನ್ನೂ ಆಹ್ವಾನಿಸಲಾಯಿತು. ಅಷ್ಟರಲ್ಲಿ ಕೋಡಿಹಳ್ಳಿ ಸಂಘದಿಂದ ಒಂದು ಕಾಲು ತೆಗೆದು ತಾವೇ ಹೊಸ ಸಂಘ ಕಟ್ಟುವ ತೀರ್ಮಾನಕ್ಕೆ ಬಂದಂತಿತ್ತು. ಅಲ್ಲಿಂದಾಚೆಗೆ ಹೊಸ ಸಂಘಗಳು ಹುಟ್ಟುವ ಪರ್ವ ಆರಂಭವಾಯಿತು.

2012 ರಲ್ಲಿ ಮುರುಘಾಮಠ ಪ್ರೊ ಎಂಡಿಎನ್ ಅವರಿಗೆ ಮರಣೋತ್ತರ ''ಬಸವಶ್ರೀ'' ಪ್ರಶಸ್ತಿ ಘೋಷಿಸಿತು. ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಬಣಗಳ ಪ್ರತಿಷ್ಠೆ ಬಿಟ್ಟು ಎಲ್ಲಾ ರೈತ ಮುಖಂಡರೂ ಸೇರಿದ್ದರು. ಅಂದು ಮುರುಘಾಶ್ರೀಗಳು ನೀವೆಲ್ಲಾ ಪ್ರೊ ಎಂಡಿಎನ್ ಅವರಿಗೆ ಯಾವ ರೀತಿ ಶ್ರದ್ಧಾಂಜಲಿ ಸಲ್ಲಿಸುತ್ತೀರಿ. ಹೀಗೇ ಬಿಡಿಬಿಡಿಯಾಗಿ ಕೆಲಸ ಮಾಡುತ್ತೀರೋ ಒಂದಾಗುತ್ತೀರೋ ಎಂಬ ಪ್ರಶ್ನೆಗೆ ಮೊದಲಿಗೆ ಚುಕ್ಕಿ ನಂಜುಂಡಸ್ವಾಮಿ ಹಾಗೂ ಪಚ್ಚೆ ನಂಜುಂಡಸ್ವಾಮಿ ಜೊತೆಯಾಗಿರುತ್ತೇವೆಂದು ಕೈಎತ್ತುವ ಮೂಲಕ ಗ್ರೀನ್ ಸಿಗ್ನಲ್ ನೀಡುತ್ತಾರೆ. ವೇದಿಕೆಯಲ್ಲಿದ್ದ ಎಲ್ಲರೂ ಹೌದೆಂದಾಗ 'ಆ ಕೆಲಸವನ್ನು ತಾವೇ ಮಾಡುವುದಾಗಿ, ಸಭೆಗಳನ್ನು ನಡೆಸುವುದಾಗಿ ಮುರುಘಾ ಶ್ರೀಗಳು ಜವಾಬ್ಧಾರಿ ವಹಿಸಿಕೊಳ್ಳುತ್ತಾರೆ. ಅಂತೆಯೇ ಸಭೆಗಳು ನಡೆದು ಅದೊಂದು ದಿನ ತೀರ್ಮಾನ ಪ್ರಕಟಿಸುವ ಘಳಿಗೆ ಬರುತ್ತದೆ. ಅಂದು ಕೆ.ಎಸ್.ಪುಟ್ಟಣ್ಣಯ್ಯ ಅವರನ್ನು ಗೌರವಾಧ್ಯಕ್ಷರಾಗಿಯೂ, ಕೋಡಿಹಳ್ಳಿ ಚಂದ್ರಶೇಖರ್ ಅವರನ್ನು ಅಧ್ಯಕ್ಷರನ್ನಾಗಿಯೂ ಹೆಚ್ ಆರ್ ಬಸವರಾಜಪ್ಪನವರನ್ನು ಕಾರ್ಯಧ್ಯಕ್ಷರನ್ನಾಗಿಯೂ ಆಯ್ಕೆ ಮಾಡಿ ತೀರ್ಮಾನ ಪ್ರಕಟಿಸುತ್ತಾರೆ.

ಆಗ ಬಡಗಲಪುರ ನಾಗೇಂದ್ರ ಅವರು ಸಂಘಕ್ಕೊಂದು ಸಂವಿಧಾವಿದೆ, ನಮಗೊಂದು ರಾಜ್ಯ ಸಮಿತಿ ಇದೆ. ಇದೆಂಥದು ಮಠದಲ್ಲಿ ತೀರ್ಮಾನ ಆಗುವುದು ಎಂದು ತಕರಾರು ತೆಗೆಯುತ್ತಾರೆ. ಅದರ ಮುಂದುವರಿಕೆ ಭಾಗವಾಗಿ ಹೊಸ ಸಮಿತಿ ರಚಿಸಲು ದಾವಣಗೆರೆಯಲ್ಲಿ ಪ್ರತ್ಯೇಕ ಸಭೆ ಕರೆಯಲಾಗುತ್ತದೆ. ಈ ಸಭೆಯಲ್ಲಿ ಸಂಘದ ಹುದ್ದೆಗಳಿಗೆ ಮಠದಲ್ಲಿ ಆಯ್ಕೆಯಾಗಿದ್ದ ಆರೋಪಕ್ಕಾಗಿ ಪುಟ್ಟಣ್ಣಯ್ಯ, ಕೋಡಿಹಳ್ಳಿ ಹಾಗೂ ಬಸವರಾಜಪ್ಪನವರಿಗೆ ಒಂದು ವರ್ಷ ಸಾಮಾನ್ಯ ಕಾರ್ಯಕರ್ತರಂತೆ ಕೆಲಸ ಮಾಡಬೇಕೆಂಬ ತೀರ್ಮಾನವಾಗುತ್ತದೆ. ಜೊತೆಗೆ ಚಾಮರಸ ಮಾಲಿ ಪಾಟೀಲ್ ಅವರನ್ನು ಮೂರು ವರ್ಷದ ಅವಧಿಗೆ ಅಧ್ಯಕ್ಷ ಎಂದು ಘೋಷಿಸಲಾಗುತ್ತದೆ.

ಚಳವಳಿ ಮುನ್ನೆಡೆಸುವ ಸಂಕಲ್ಪ

ಚಳವಳಿ ಮುನ್ನೆಡೆಸುವ ಸಂಕಲ್ಪ

ಚಾಮರಸ ಮಾಲಿ ಪಾಟೀಲರ ಅಧಿಕಾರಾವಧಿ ಮುಗಿದು ತುಸು ಕಾಲದ ನಂತರ ಪುಟ್ಟಣ್ಣಯ್ಯ ಅವರನ್ನು ಸಂಘದ ವರಿಷ್ಠರು ಎಂದು ಘೋಷಿಸಿ, ಕೆ.ಟಿ. ಗಂಗಾಧರ್ ಅವರನ್ನು ಅಧ್ಯಕ್ಷರನ್ನಾಗಿ ಆಯ್ಕೆಮಾಡಲಾಗುತ್ತದೆ. ದಿನಕಳೆದಂತೆ ಹಿಂದಿನ ಪದಾಧಿಕಾರಿಗಳು ಹಾಗೂ ಮುಂದೆ ಅಧ್ಯಕ್ಷ ಸ್ಥಾನವನ್ನು ಪಡೆಯಬೇಕೆಂಬ ಆಶೆಯುಳ್ಳ ಮುಖಂಡರು ಗಂಗಾಧರ್ ಅವರನ್ನು ಹಿಮ್ಮೆಟ್ಟಿಸಲು ಯೋಜಿಸಿದರು. ಅದೇ ಸಂದರ್ಭದಲ್ಲಿ ಗಂಗಾಧರ್ ಅವರ ಕುಟುಂಬದಲ್ಲಿ ಆದ ಸಾವು ನೋವುಗಳು ಮತ್ತು ಅವರ ಅನಾರೋಗ್ಯ ಕೂಡಾ ಅವರ ವಿರುದ್ಧ ಪಿತೂರಿ ಮಾಡಿದವರಿಗೆ ನೆರವಾದವು. ಆ ಸಂದರ್ಭವನ್ನೇ ಬಳಸಿಕೊಂಡು ಅದಾಗ ಮುಂದಿನ ರಾಜ್ಯ ಸಮಿತಿ ಸಭೆಯಲ್ಲಿ ಬಡಗಲಪುರ ನಾಗೇಂದ್ರ ಅಧ್ಯಕ್ಷರೆಂಬ ತೀರ್ಮಾನ ಹೊರಬಿದ್ದಾಯ್ತು. ನಾಗೇಂದ್ರ ಆಯ್ಕೆ ಆದ ಪ್ರಕ್ರಿಯೆಯನ್ನು ವಿರೋಧಿಸಿ ಕೆ.ಟಿ ಗಂಗಾಧರ್ ಸೇರಿದಂತೆ ಅದಾಗ ಕಾರ್ಯಾಧ್ಯಕ್ಷರಾಗಿದ್ದ ಚುಕ್ಕಿ ನಂಜುಂಡಸ್ವಾಮಿ ರಾಜೀನಾಮೆ ಕೊಟ್ಟು ಸಮಿತಿಯಿಂದ ಹೊರಬರುತ್ತಾರೆ.

ಅಲ್ಲಿಂದಾಚೆಗೆ ಗಂಗಾಧರ್ ಹಾಗೂ ಚುಕ್ಕಿ ನಂಜುಂಡಸ್ವಾಮಿ ಈರ್ವರೂ ಅಧ್ಯಕ್ಷ ಸ್ಥಾನಕ್ಕಿರುವ ಪೈಪೋಟಿ, ಕುರ್ಚಿಯ ಅಮಲು ಇವೆಲ್ಲಾ ಬೇಡವೆಂದು ಪ್ರತಿಯೊಬ್ಬ ಮುಖಂಡರಿಗೂ ವಿವಿಧ ಜವಾಬ್ಧಾರಿಗಳನ್ನು ಹಂಚಿ, ಸಾಮೂಹಿಕ ನಾಯಕತ್ವದ ಸಂಘವೇ ಇದಕ್ಕೆ ಉತ್ತರ ಎಂದು ತೀರ್ಮಾನಿಸಿ ಚಳವಳಿ ಮುನ್ನೆಡೆಸುವ ಸಂಕಲ್ಪ ಮಾಡುತ್ತಾರೆ.

ರೈತ ಸಂಘ ಸಾಮೂಹಿಕ ನಾಯಕತ್ವ

ರೈತ ಸಂಘ ಸಾಮೂಹಿಕ ನಾಯಕತ್ವ

ಇಷ್ಟೆಲ್ಲದರ ನಡುವೆ ಕಳೆದ ಒಂದು ದಶಕದಲ್ಲಿ ಕೋಡಿಹಳ್ಳಿ ಚಂದ್ರಶೇಖರ್ ಸೇರಿದಂತೆ ಅವರೊಟ್ಟಿಗಿದ್ದ ಚಳವಳಿ ಕಾರ್ಯಕರ್ತರನೇಕರು ಹೊಸ ಸಂಘಗಳನ್ನು ಕಟ್ಟಿಕೊಂಡು ಎಲ್ಲರೂ ರಾಜ್ಯಾಧ್ಯಕ್ಷರಾಗಿಬಿಟ್ಟಿದ್ದಾರೆ. ಆದಾಗ್ಯೂ ಎಂಡಿಎನ್ ಅಧ್ಯಕ್ಷತೆಯ ರೈತ ಸಂಘ ಸಾಮೂಹಿಕ ನಾಯಕತ್ವವೇ ಲೇಸೆಂದು ತೀರ್ಮಾನಿಸಿ ಚಳುವಳಿ ಮುನ್ನೆಡೆಸಿದೆ. ಮುಂದುವರೆದು ಕೆ.ಟಿ ಗಂಗಾಧರ್, ಚುಕ್ಕಿ ನಂಜುಂಡಸ್ವಾಮಿ, ಚಿತ್ರನಟ ಅಶೋಕ್, ಎನ್.ಡಿ.ಸುಂದರೇಶ್ ಅವರ ಮಗ ಸುಧಾಂಶು, ಹಿರಿಯ ರೈತ ಮುಖಂಡರಾದ ಶ್ರೀಮತಿ ಅನುಸೂಯಮ್ಮ, ಹಿರಿಯ ಚೇತನ ಸುರೇಶ್ ಬಾಬು ಪಾಟೀಲರು, ಹಾವೇರಿಯ ರಾಮಣ್ಣ ಕೆಂಚಲ್ಲೇರ ಇವರೆಲ್ಲರನ್ನೂ ಒಳಗೊಂಡಂತೆ ಸಾಮೂಹಿಕ ನಾಯಕತ್ವದಡಿಯಲ್ಲಿ ರೈತಸಂಘದ ರಾಜ್ಯ ಸಂಚಾಲನಾ ಸಮಿತಿ ರಚನೆಯಾಗಿದೆ. ಇದು ಈ ಕ್ಷಣದ ವಾಸ್ತವ.

English summary
Karnataka State Farmers Association Former President MD Nanjundaswamy. What happened and Who is going to lead raitha Sangha. Know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X