ಮೈಷುಗರ್ ನಂಬಿದ ಕಬ್ಬು ಬೆಳೆಗಾರರಿಗೆ ಮತ್ತೆ ಆತಂಕ
ಮಂಡ್ಯ, ಜೂನ್ 18: ಕಬ್ಬು ಬೆಳೆದ ರೈತರ ಬದುಕಿಗೆ ಆಸರೆಯಾಗಬೇಕಾಗಿದ್ದ ಮೈಷುಗರ್ ಕಾರ್ಖಾನೆ ಸದ್ಯಕ್ಕೆ ಉದ್ಧಾರವಾಗುವ ಯಾವ ಲಕ್ಷಣಗಳು ಕಾಣುತ್ತಿಲ್ಲ. ಏಕೆಂದರೆ ಕಾರ್ಖಾನೆಯ ನಿರ್ವಹಣೆ ಮಾಡಲಾಗದ ಸರ್ಕಾರದ ನಿರ್ಲಕ್ಷ್ಯತನದಿಂದಾಗಿ ಇವತ್ತು ಕಾರ್ಖಾನೆ ಕಬ್ಬು ಅರೆಯದ ಪರಿಸ್ಥಿತಿಗೆ ತಲುಪಿದ್ದು, ಇದರಿಂದ ಕಬ್ಬು ಬೆಳೆಗಾರರು ಆಕಾಶದತ್ತ ದೃಷ್ಟಿನೆಟ್ಟು ಅಸಹಾಯಕರಾಗಿ ಕೂರುವಂತಾಗಿದೆ.
ಇತಿಹಾಸ ಪ್ರಸಿದ್ಧ ಸಕ್ಕರೆ ಕಾರ್ಖಾನೆಯೊಂದು ಸರ್ಕಾರದ ನಿರ್ಲಕ್ಷ್ಯ ಮತ್ತು ಭ್ರಷ್ಟಾಚಾರದಿಂದಾಗಿ ಇಂದು ಹೀನಾಯ ಸ್ಥಿತಿಗೆ ಬಂದು ನಿಂತಿದ್ದು, ಇದನ್ನು ನಂಬಿದ್ದ ಕಬ್ಬು ಬೆಳೆಗಾರರ ಸ್ಥಿತಿ ಅಯೋಮಯವಾಗಿದೆ. ಮೈಷುಗರ್ ಗೆ ಶಾಪ ತಟ್ಟಿ ಸುಮಾರು 17 ವರ್ಷಗಳೇ ಕಳೆದು ಹೋಗಿದ್ದು, ಅಲ್ಲಿಂದ ಇಲ್ಲಿವರೆಗೆ ರೋಗಗ್ರಸ್ತವಾಗಿಯೇ ಸಾಗುತ್ತಿದೆ.
ಮೈಷುಗರ್ ನಲ್ಲಿ ಹಣ ದುರುಪಯೋಗ ಬಹಿರಂಗಪಡಿಸುವ ಸವಾಲು!
ಈ ಕಾರ್ಖಾನೆಯ ಅಭಿವೃದ್ಧಿ ಕುರಿತಂತೆ ಅನುದಾನ, ಭರವಸೆ ಎಲ್ಲವೂ ಮುಗಿದು ಹೋಗಿದೆ. ಎಲ್ಲ ಸರ್ಕಾರಗಳು ಇದರ ಉದ್ಧಾರಕ್ಕಿಂತ ಉದ್ಧಾರದ ಹೆಸರಿನಲ್ಲಿ ಕಮಾಯಿ ಮಾಡಿಕೊಂಡಿದ್ದೇ ಜಾಸ್ತಿ ಎಂದರೆ ತಪ್ಪಾಗಲಾರದು. ಈಗಲೂ ಇಲ್ಲಿ ನಡೆದಿದೆ ಎನ್ನಲಾದ ಹಗರಣಗಳ ಬಗೆಗೆ ತನಿಖೆ ನಡೆಸುವಂತೆ ಒತ್ತಾಯಗಳು ಕೇಳಿ ಬರುತ್ತಲೇ ಇದೆ.

ಅಭಿವೃದ್ಧಿಗೊಳಿಸಲು ಸರ್ಕಾರಕ್ಕಿಲ್ಲ ತಾಕತ್ತು
ಇವತ್ತು ಸರ್ಕಾರಕ್ಕೆ ಈ ಕಾರ್ಖಾನೆಯ ಸಂಪೂರ್ಣ ಹೊಣೆಯನ್ನು ಹೊತ್ತು ಮುನ್ನಡೆಸುವುದಕ್ಕೆ ಆಗುತ್ತಿಲ್ಲ. ಹೀಗಾಗಿಯೇ ಖಾಸಗಿಗೆ ಕಾರ್ಯಾಚರಣೆ ಮತ್ತು ನಿರ್ವಹಣೆ (ಒ ಅಂಡ್ ಎಂ) ನೀಡಿ ಕೈತೊಳೆದುಕೊಳ್ಳುವ ಆತುರದಲ್ಲಿದೆ. ಆದರೆ ಅದು ಅಷ್ಟು ಸುಲಭವಾಗಿಲ್ಲ. ಇದಕ್ಕೆ ಹಲವು ಸಂಘಟನೆಗಳು ಬೆಂಬಲ ವ್ಯಕ್ತಪಡಿಸಿದರೆ, ಮತ್ತೆ ಕೆಲವು ಸಂಘಟನೆಗಳು ವಿರೋಧ ವ್ಯಕ್ತಪಡಿಸುತ್ತಿವೆ. ಕಾರ್ಖಾನೆ ಸರ್ಕಾರದ ಸ್ವಾಮ್ಯದಲ್ಲಿಯೇ ನಡೆಯಬೇಕೆಂಬ ಒತ್ತಾಯ ಮಾಡಲಾಗುತ್ತಿದೆ. ಆದರೆ ಈಗಿರುವ ಪರಿಸ್ಥಿತಿಯಲ್ಲಿ ಸರ್ಕಾರ ಸಂಪೂರ್ಣ ಜವಾಬ್ದಾರಿ ಹೊತ್ತು ಕಾರ್ಖಾನೆಯನ್ನು ಮುನ್ನಡೆಸುವುದು ಅನುಮಾನ.

ವಿರೋಧದಿಂದ ಉನ್ನತಮಟ್ಟದ ಸಭೆಗಳು ವಿಫಲ
ಇದುವರೆಗೆ ಈ ಕುರಿತಂತೆ ನಡೆದ ಉನ್ನತಮಟ್ಟದ ಸಭೆಗಳು ವಿಫಲವಾಗಿವೆ. ಒಮ್ಮತಕ್ಕೆ ಬರುವಲ್ಲಿ ಯಾರೂ ತಯಾರಿಲ್ಲ. ಹೀಗಾಗಿ ಹಗ್ಗ ಜಗ್ಗಾಟಗಳ ನಡುವೆ ಕಬ್ಬು ಬೆಳೆದ ರೈತರ ಕಥೆ ಮಾತ್ರ ಅಯೋಮಯವಾಗುತ್ತಿದೆ. ಕಳೆದ ವಿಧಾನ ಸಭಾ ಉಪ ಚುನಾವಣೆ ಸಂದರ್ಭದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಮೈಷುಗರ್ ಮತ್ತು ಪಾಂಡವಪುರ ಸಕ್ಕರೆ ಕಾರ್ಖಾನೆಯನ್ನು ಆರಂಭಿಸುವುದಾಗಿ ಭರವಸೆ ನೀಡಿದ್ದರು. ಅದರಂತೆ ಪಾಂಡವಪುರ ಸಕ್ಕರೆ ಕಾರ್ಖಾನೆಯನ್ನು ನಿರಾಣಿ ಗ್ರೂಪ್ ಗೆ ನೀಡುವ ಮೂಲಕ ಕೈತೊಳೆದುಕೊಂಡರು. ಆದರೆ ಮೈಷುಗರ್ ಒ ಆಂಡ್ ಎಂನ್ನು ಖಾಸಗಿಯವರಿಗೆ ನೀಡುವ ಮೂಲಕ ಪುನರಾರಂಭಿಸುವ ಸಿದ್ಧತೆಯಲ್ಲಿರುವಾಗಲೇ ವಿರೋಧಗಳು ಕೇಳಿ ಬಂದಿದ್ದರಿಂದ ಸ್ಥಗಿತಗೊಳಿಸಲಾಗಿದೆ.
ಮೈಷುಗರ್ ಕಾರ್ಖಾನೆಯ ಗೊಂದಲಕ್ಕೆ ತೆರೆ ಬೀಳುತ್ತಾ?

280 ಕೋಟಿ ರೂ. ಬೆಲೆ ಬಾಳುವ ಆಸ್ತಿ
ದಿನ ಕಳೆದಂತೆ ಪರ ವಿರೋಧಗಳು ಹೆಚ್ಚಾಗುತ್ತಿದ್ದು, ಇದು ಸದ್ಯಕ್ಕೆ ಇತ್ಯರ್ಥಕ್ಕೆ ಬರುವ ಲಕ್ಷಣಗಳು ಕಾಣುತ್ತಿಲ್ಲ. ಇದರಿಂದ ಕಾರ್ಖಾನೆ ಶೀಘ್ರ ಪ್ರಾರಂಭವಾಗುತ್ತದೆ ಎಂಬ ನಂಬಿಕೆಯಲ್ಲಿದ್ದ ಕಬ್ಬು ಬೆಳೆಗಾರರು ಮತ್ತೊಮ್ಮೆ ಆತಂಕ ಪಡುವ ಪರಿಸ್ಥಿತಿ ಬಂದೊದಗಿದೆ. ಸುಮಾರು 280 ಕೋಟಿ ಬೆಲೆ ಬಾಳುವ ಮೈಷುಗರ್ ಖಾಸಗಿಯವರ ಪಾಲಾದರೆ ಮುಂದೆ ಸಂಕಷ್ಟ ಎದುರಿಸಬೇಕಾಗಬಹುದು ಎಂಬುದು ಜಿಲ್ಲೆಯ ಕೆಲವು ಜನಪ್ರತಿನಿಧಿಗಳು, ಸಂಘ, ಸಂಸ್ಥೆಗಳು, ರೈತಪರ ಸಂಘಟನೆಗಳ ಆತಂಕವಾಗಿರುವುದರಿಂದ ಅವರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಈ ನಡುವೆ ಕೆಲವು ಸಂಘಟನೆಗಳು ಮತ್ತು ಜನಪ್ರತಿನಿಧಿಗಳು ಒ ಅಂಡ್ ಎಂಗೆ ಸಹಮತ ತೋರುತ್ತಿದ್ದಾರೆ. ಆದರೂ ಜಿಲ್ಲೆಯಲ್ಲಿ ಒಮ್ಮತಕ್ಕೆ ಬಾರದೆ ನಾಯಕರು ಪ್ರತಿಷ್ಠೆ ತೋರುತ್ತಿರುವುದು ಮೈಷುಗರ್ ಆರಂಭಕ್ಕೂ ತೊಡಕಾಗುತ್ತಿದೆಯಲ್ಲದೆ, ರೈತರು ಸಂಕಷ್ಟ ಅನುಭವಿಸುವಂತೆ ಮಾಡಿದೆ.

ಕಬ್ಬು ಬೆಳೆದ ರೈತರಿಗೆ ದ್ರೋಹ
ಇನ್ನು ಒ ಅಂಡ್ ಎಂ ಅನ್ನು ವಿರೋಧಿಸುವವರಿಗೆ ಸರ್ಕಾರ ಮಣಿಯುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಕಾರಣ ಈಗಾಗಲೇ ಖಜಾನೆ ಖಾಲಿ ಮಾಡಿಕೊಂಡಿರುವ ಸರ್ಕಾರ ಮತ್ತೆ ಕೋಟ್ಯಂತರ ರೂಪಾಯಿಯನ್ನು ಸುರಿದು ಮೈಷುಗರ್ ಕಾರ್ಖಾನೆಯನ್ನು ಪುನಶ್ಚೇತನಗೊಳಿಸಿ ಕಬ್ಬು ಅರೆಯಲು ಆರಂಭಿಸುವುದು ಕನಸಿನ ಮಾತು. ಆದ್ದರಿಂದ ಪರ-ವಿರೋಧ ಮಾಡುವ ಎಲ್ಲ ನಾಯಕರು, ಸಂಘಟನೆಗಳು, ರೈತಪರ ಸಂಘಗಳು ಒಂದೆಡೆ ಕುಳಿತು ತೀರ್ಮಾನ ಕೈಗೊಳ್ಳಲೇಬೇಕಾಗಿದೆ. ಇಲ್ಲದೆ ಹೋದರೆ ಕಬ್ಬು ಬೆಳೆದ ರೈತರಿಗೆ ದ್ರೋಹ ಮಾಡಿದಂತಾಗುತ್ತದೆ.