ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಬ್ಬು ಬೆಳೆಗಾರರ ಆತ್ಮಹತ್ಯೆ : ಯಾರು, ಏನು ಹೇಳಿದರು?

|
Google Oneindia Kannada News

ಬೆಂಗಳೂರು, ಜೂ. 27 : ಸಕ್ಕರೆ ಕಾರ್ಖಾನೆಗಳಿಂದ ಬಾಕಿ ಹಣ ಪಾವತಿಯಾಗಿಲ್ಲ ಎಂದು ರಾಜ್ಯದಲ್ಲಿ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಜೂ.29ರ ಸೋಮವಾರದಿಂದ ಬೆಳಗಾವಿಯಲ್ಲಿ ಮುಂಗಾರು ಅಧಿವೇಶನ ಆರಂಭವಾಗಲಿದ್ದು, ಸರ್ಕಾರ ಮತ್ತು ಪ್ರತಿಪಕ್ಷ ನಡುವಿನ ಮಾತಿನ ಚಕಮಕಿಗೆ ವೇದಿಕೆ ಸಿದ್ಧವಾಗಿದೆ.

ಗುರುವಾರ ಕಬ್ಬಿನ ಗದ್ದೆಗೆ ಬೆಂಕಿ ಹಾಕಿ, ಅದಕ್ಕೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಮಂಡ್ಯದ ರೈತ ನಿಂಗೇಗೌಡ ಮನೆಗೆ ಶುಕ್ರವಾರ ಅಂಬರೀಶ್, ಬಿ.ಎಸ್.ಯಡಿಯೂರಪ್ಪ, ಎಚ್.ಡಿ.ದೇವೇಗೌಡ ಮುಂತಾದ ನಾಯಕರು ಭೇಟಿ ನೀಡಿದ್ದರು. ಕುಟುಂಬಕ್ಕೆ ಸಾಂತ್ವನ ಹೇಳಿ ಪರಿಹಾರವನ್ನು ನೀಡಿದ್ದಾರೆ. [ಕಬ್ಬಿನ ಗದ್ದೆಗೆ ಬೆಂಕಿ ಹಾಕಿ ಸಾವಿಗೆ ಶರಣಾದ ರೈತ]

ಬಿ.ಎಸ್.ಯಡಿಯೂರಪ್ಪ ಅವರು 50 ಸಾವಿರ ರೂ. ಪರಿಹಾರ ನೀಡಿದ್ದರೆ, ದೇವೇಗೌಡರು 1 ಲಕ್ಷ ರೂ. ಪರಿಹಾರ ವಿತರಣೆ ಮಾಡಿದ್ದಾರೆ ಜತೆಗೆ ನಿಂಗೇಗೌಡರ ಪುತ್ರ ಈರೇಗೌಡ ಮತ್ತು ಅವರ ಪತ್ನಿಗೆ ಜಯದೇವ ಆಸ್ಪತ್ರೆಯಲ್ಲಿ ಉದ್ಯೋಗ ಕೊಡಿಸುವ ಭರವಸೆ ನೀಡಿದ್ದಾರೆ. [ಬೆಳಗಾವಿ ಅಧಿವೇಶನ : ಹೋರಾಟಕ್ಕೆ ಸಜ್ಜಾದ ಕಬ್ಬು ಬೆಳೆಗಾರರು]

ಎಲ್ಲಾ ನಾಯಕರು ಶ್ರೀರಂಗಪಟ್ಟಣ ತಾಲೂಕಿನ ಚಿನ್ನೇನಹಳ್ಳಿ ಗ್ರಾಮದಲ್ಲಿ ಇತ್ತೀಚೆಗೆ ಆತ್ಮಹತ್ಯೆ ಮಾಡಿಕೊಂಡ ರೈತ ರಾಜೇಂದ್ರನ ನಿವಾಸಕ್ಕೂ ಭೇಟಿ ನೀಡಿ ಪರಿಹಾರ ವಿವತರಣೆ ಮಾಡಿದ್ದಾರೆ. ರೈತರ ಆತ್ಮಹತ್ಯೆಗೆ ಸರ್ಕಾರವೇ ಹೊಣೆ ಎಂದು ಜೆಡಿಎಸ್ ಮತ್ತು ಬಿಜೆಪಿ ನಾಯಕರು ಆರೋಪಿಸಿದ್ದಾರೆ. ರೈತ ಆತ್ಮಹತ್ಯೆ ಬಗ್ಗೆ ಯಾರು, ಏನು ಹೇಳಿದರು...

ಮುಖ್ಯಮಂತ್ರಿ ದೃಢ ನಿಲುವು ತೆಗೆದುಕೊಳ್ಳಲಿ

ಮುಖ್ಯಮಂತ್ರಿ ದೃಢ ನಿಲುವು ತೆಗೆದುಕೊಳ್ಳಲಿ

'ರೈತರಿಗೆ ಬಾಕಿ ಹಣ ಪಾವತಿ ಮಾಡುವ ವಿಚಾರದಲ್ಲಿ ರೈತರ ಮಗನಾದ ಸಿದ್ದರಾಮಯ್ಯ ಅವರು ದೃಢ ನಿಲುವು ತೆಗೆದುಕೊಳ್ಳಬೇಕು. ಕೇಂದ್ರದಿಂದ ಅನುದಾನ ತರುತ್ತೀರೋ?, ರಾಜ್ಯದ ಬೊಕ್ಕಸದಿಂದ ನೀಡುತ್ತೀರೋ? ತಿಳಿಯದು, ರೈತರಿಗೆ ಬಾಕಿ ಹಣವನ್ನು ಪಾವತಿ ಮಾಡಲು ಕ್ರಮ ಕೈಗೊಳ್ಳಬೇಕು' ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಹೇಳಿದ್ದಾರೆ.

ಸಿದ್ದರಾಮಯ್ಯ ಅವರಿಗೆ ಹೈಕಮಾಂಡ್ ಬುದ್ಧಿ ಹೇಳಲಿ

ಸಿದ್ದರಾಮಯ್ಯ ಅವರಿಗೆ ಹೈಕಮಾಂಡ್ ಬುದ್ಧಿ ಹೇಳಲಿ

'ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕಾಂಗ್ರೆಸ್ ಹೈಕಮಾಂಡ್ ನಾಯಕರು ಬುದ್ಧಿ ಹೇಳಲಿ, ಇಂತಹ ಬೇಜವಾಬ್ದಾರಿ ಮುಖ್ಯಮಂತ್ರಿಗಳನ್ನು ನಾನು ಕಂಡಿಲ್ಲ' ಎಂದು ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ. 'ಮೊದಲು ಸರ್ಕಾರ ಶಾಸಕ, ಸಚಿವರ ಒಡೆತನ ಕಾರ್ಖಾನೆಗಳನ್ನು ವಶಕ್ಕೆ ಪಡೆದು, ಬಾಕಿ ಹಣವನ್ನು ಪಾವತಿ ಮಾಡಲಿ' ಎಂದು ಬಿಎಸ್‌ವೈ ಒತ್ತಾಯಿಸಿದ್ದಾರೆ.

ರಾಜಕೀಯ ಮಾಡಲು ಬಂದಿಲ್ಲ

ರಾಜಕೀಯ ಮಾಡಲು ಬಂದಿಲ್ಲ

'ಸಾವಿನ ವಿಚಾರದಲ್ಲಿ ರಾಜಕೀಯ ಮಾಡಲು ರೈತನ ಮನೆಗೆ ಬಂದಿಲ್ಲ. ಶವ ಇಟ್ಟುಕೊಂಡು ರಾಜಕೀಯ ಮಾಡಲು ಇಲ್ಲಿಗೆ ಬಂದಿಲ್ಲ. ಮೃತ ರೈತನ ಕುಟುಂಬಕ್ಕೆ 10 ಲಕ್ಷ ಪರಿಹಾರ ನೀಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿದ್ದೇನೆ. ಸಿದ್ದರಾಮಯ್ಯ ಅವರ ಸಲಹೆಯಂತೆಯೇ ಮೃತ ನಿಂಗೇಗೌಡ ಕುಟುಂಬಕ್ಕೆ ಸಾಂತ್ವನ ಹೇಳಿದ್ದೇನೆ' ಎಂದು ವಸತಿ ಸಚಿವ ಅಂಬರೀಶ್ ಹೇಳಿದರು.

ಸಕ್ಕರೆ ಕಾರ್ಖನೆ ಬಂದ್ ಮಾಡಿ

ಸಕ್ಕರೆ ಕಾರ್ಖನೆ ಬಂದ್ ಮಾಡಿ

'ರೈತರಿಗೆ ಕಾರ್ಖಾನೆಗಳು ಕೊಡಬೇಕಿರುವ ಬಾಕಿ ಹಣವನ್ನು ಬೆಳಗಾವಿ ಅಧಿವೇಶನದೊಳಗೆ ಪಾವತಿಸಿ' ಎಂದು ವಿಧಾನಪರಿಷತ್ ಪ್ರತಿಪಕ್ಷ ನಾಯಕ ಕೆ.ಎಸ್.ಈಶ್ವರಪ್ಪ ಒತ್ತಾಯಿಸಿದ್ದಾರೆ. ಇಲ್ಲದಿದ್ದಲ್ಲಿ ಅಧಿವೇಶನ ನಡೆಸಲು ಅವಕಾಶ ಕೊಡುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ. ಕಾರ್ಖಾನೆ ಬಂದ್‌ ಮಾಡಿ ರೈತರ ಬಾಕಿ ಹಣವನ್ನು ನೀಡಿ, ಇಲ್ಲವಾದರೆ ಸರ್ಕಾರದ ಖಜಾನೆಯಿಂದ ಪಾವತಿಸಿ ಎಂದು ಈಶ್ವರಪ್ಪ ಹೇಳಿದ್ದಾರೆ.

ರೈತರ ಆತ್ಮಹತ್ಯೆಗೆ ಸರ್ಕಾರವೇ ಹೊಣೆ

ರೈತರ ಆತ್ಮಹತ್ಯೆಗೆ ಸರ್ಕಾರವೇ ಹೊಣೆ

'ರಾಜ್ಯದಲ್ಲಿ ಕಬ್ಬು ಬೆಳೆಗಾರರ ಆತ್ಮಹತ್ಯೆಗೆ ಸರ್ಕಾರವೇ ನೇರ ಹೊಣೆ' ಎಂದು ಕೇಂದ್ರ ಕಾನೂನು ಸಚಿವ ಡಿ.ವಿ.ಸದಾನಂದ ಗೌಡ ಆರೋಪಿಸಿದ್ದಾರೆ. 'ರಾಜ್ಯ ಸರ್ಕಾರವೇ ನೇರವಾಗಿ ಕಬ್ಬು ಬೆಳೆಗಾರರಿಗೆ ಬಾಕಿ ಹಣ ಪಾವತಿಸಲು ಮುಂದಾಗಬೇಕು. ಕಬ್ಬು ಬೆಳೆಗಾರರ ಸಮಸ್ಯೆ ಕುರಿತಂತೆ ವಿಧಾನಮಂಡಲದಲ್ಲಿ ವ್ಯಾಪಕ ಚರ್ಚೆ ನಡೆಸುವ ಸರ್ಕಾರ ಸೂಕ್ತ ಪರಿಹಾರ ಒದಗಿಸುವಲ್ಲಿ ವಿಫ‌ಲವಾಗುತ್ತಿದೆ' ಎಂದು ಸದಾನಂದ ಗೌಡರು ದೂರಿದ್ದಾರೆ.

ಅವೈಜ್ಞಾನಿಕ ನಿರ್ಧಾರವೇ ಆತ್ಮಹತ್ಯೆಗೆ ಕಾರಣ

ಅವೈಜ್ಞಾನಿಕ ನಿರ್ಧಾರವೇ ಆತ್ಮಹತ್ಯೆಗೆ ಕಾರಣ

'2013ರಲ್ಲಿ ಸಕ್ಕರೆ ಖಾತೆ ಸಚಿವರಾಗಿದ್ದ ಪ್ರಕಾಶ್ ಹುಕ್ಕೇರಿ ಅವರು ತೆಗೆದುಕೊಂಡ ಅವೈಜ್ಞಾನಿಕ ನಿರ್ಧಾರಗಳೇ ರೈತರ ಆತ್ಮಹತ್ಯೆಗೆ ಕಾರಣ, ಕಬ್ಬು ಬೆಳೆಗಾರರ ಸಮಸ್ಯೆ ಬೃಹದಾಕಾರವಾಗಿ ಬೆಳೆಯಲು ಅವರೇ ಹೊಣೆ' ಎಂದು ಬಿಜೆಪಿ ನಾಯಕ ಉಮೇಶ್ ಕತ್ತಿ ಆರೋಪಿಸಿದ್ದಾರೆ.

English summary
Sugar cane farmer committed suicide in Mandya, Mysuru and Belagavi in Karnataka. Who said, what about farmer suicide.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X