• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ರೇಷ್ಮೆ ಸಚಿವರ ಕ್ಷೇತ್ರದಲ್ಲಿಯೇ ನೇಪಥ್ಯಕ್ಕೆ ಸರಿದ ರೇಷ್ಮೆ ಕೃಷಿ...

|

ಮಂಡ್ಯ, ನವೆಂಬರ್ 21: ರೇಷ್ಮೆ ಸಚಿವರ ಕ್ಷೇತ್ರದಲ್ಲಿಯೇ ರೈತರು ರೇಷ್ಮೆ ಕೃಷಿಯನ್ನು ಕೈಬಿಟ್ಟು ಇತರೆ ಬೆಳೆಗಳತ್ತ ಮುಖ ಮಾಡುತ್ತಿರುವುದು ಕಂಡು ಬರುತ್ತಿದೆ. ಇದು ಮುಂದುವರೆದರೆ, ಮಂಡ್ಯ ಜಿಲ್ಲೆಯಲ್ಲಿ ರೇಷ್ಮೆ ಕೃಷಿ ನೇಪಥ್ಯಕ್ಕೆ ಸರಿಯುವ ದಿನಗಳೂ ದೂರವಿಲ್ಲ.

ಇಲ್ಲಿ ಭತ್ತ, ಕಬ್ಬು ಸೇರಿದಂತೆ ಹಲವು ಬೆಳೆಗಳನ್ನು ಬೆಳೆಯುವ ರೈತರ ನಡುವೆ ಕೆಲವರು ರೇಷ್ಮೆ ಕೃಷಿ ಮಾಡುತ್ತಿದ್ದರು. ಇದರಿಂದ ಒಂದಷ್ಟು ಆದಾಯ ಪಡುತ್ತಿದ್ದರಾದರೂ ಇತ್ತೀಚೆಗಿನ ದಿನಗಳಲ್ಲಿ ರೇಷ್ಮೆ ಬೆಳೆಯುವುದು ಬೆಳೆಗಾರರಿಗೆ ಕಷ್ಟವಾಗುತ್ತಿದೆ. ನಿರೀಕ್ಷಿತ ಆದಾಯವೂ ಬರುತ್ತಿಲ್ಲವಾದ್ದರಿಂದ ಅನಿವಾರ್ಯವಾಗಿ ಬೇರೆ ಬೆಳೆಯತ್ತ ಮನಸ್ಸು ಮಾಡುತ್ತಿರುವುದು ಈಗಿನ ಬೆಳವಣಿಗೆಯಾಗಿದೆ.

ರೇಷ್ಮೆಗೆ ಹೆಸರುವಾಸಿಯಾಗಿದ್ದ ಕೆ.ಆರ್.ಪೇಟೆ

ರೇಷ್ಮೆಗೆ ಹೆಸರುವಾಸಿಯಾಗಿದ್ದ ಕೆ.ಆರ್.ಪೇಟೆ

ಮಂಡ್ಯ ಜಿಲ್ಲೆಯ ಪೈಕಿ ಕೆ.ಆರ್.ಪೇಟೆ ತಾಲೂಕು ರೇಷ್ಮೆ ಕೃಷಿಗೆ ಹೊಂದಿಕೊಳ್ಳುತ್ತಿದ್ದರಿಂದ ಈ ತಾಲೂಕಿನ ಜನ ರೇಷ್ಮೆ ಕೃಷಿಯತ್ತ ಹೆಚ್ಚು ಒಲವು ಹೊಂದಿ ರೇಷ್ಮೆಯನ್ನು ಬೆಳೆಯುತ್ತಿದ್ದರು. ಹೀಗಾಗಿ ರೇಷ್ಮೆ ಕೃಷಿಗೆ ಉತ್ತೇಜನ ನೀಡುವ ಸಲುವಾಗಿ ಕೆ.ಆರ್.ಪೇಟೆಯಲ್ಲಿ ರೇಷ್ಮೆ ಬೆಳೆಯ ಬೇಸಾಯದ ಬಗ್ಗೆ ಸೂಕ್ತ ಮಾಹಿತಿ ಹಾಗೂ ತರಬೇತಿಯನ್ನು ನೀಡಲು ರೇಷ್ಮೆ ತರಬೇತಿ ಕಾಲೇಜು, ರೇಷ್ಮೆ ಚಾಕಿ ಚಾಕಾಣಿಕೆ ಕೇಂದ್ರ ಹಾಗೂ ರೇಷ್ಮೆ ಗೂಡಿನ ಮಾರುಕಟ್ಟೆಯನ್ನು ಸ್ಥಾಪಿಸಲಾಗಿತ್ತು. ಅಷ್ಟೇ ಅಲ್ಲದೆ, ರೇಷ್ಮೆ ಬೇಸಾಯಕ್ಕೆ ಹಾಗೂ ರೇಷ್ಮೆ ಸಾಕಾಣಿಕೆ ಮಾಡುವ ಬೈವೋಲ್ಟೀನ್ ಬಿತ್ತನೆ ಗೂಡಿಗೆ ದಕ್ಷಿಣ ಭಾರತದಲ್ಲಿಯೇ ಕೆ.ಆರ್.ಪೇಟೆ ಹೆಸರುವಾಸಿಯಾಗಿತ್ತು.

ರೇಷ್ಮೆ ಬೆಳೆಗಾರರ ಪ್ರತಿಭಟನೆಗೆ ತಲೆ ಬಾಗಿದ ಸರ್ಕಾರ, ಪ್ರೋತ್ಸಾಹ ಧನ ನೀಡಲು ಸಮ್ಮತಿ

ಬೆಳೆಗಾರರನ್ನು ಕಂಗೆಡಿಸಿದ ದರ ಕುಸಿತ

ಬೆಳೆಗಾರರನ್ನು ಕಂಗೆಡಿಸಿದ ದರ ಕುಸಿತ

ಕೆಲವು ವರ್ಷಗಳ ಹಿಂದೆ ರೇಷ್ಮೆ ಗೂಡಿಗೆ ಹೆಚ್ಚಿನ ಬೇಡಿಕೆಯಿದ್ದುದರಿಂದ ಮತ್ತು ಉತ್ತಮ ದರ ದೊರೆಯುತ್ತಿದ್ದರಿಂದ ರೇಷ್ಮೆ ಕೃಷಿ ಮಾಡುತ್ತಿದ್ದ ರೈತರು ನೆಮ್ಮದಿಯಾಗಿಯೇ ಇದ್ದರು. ಆದರೆ ರೇಷ್ಮೆ ದರ ಕುಸಿತ ಬೆಳೆಗಾರರನ್ನು ಕಂಗೆಡಿಸಿತು. ಆದಾಯಕ್ಕಿಂತ ಖರ್ಚು ಹೆಚ್ಚಾಗ ತೊಡಗಿತು. ಇದರೊಂದಿಗೆ ಹೆಣಗಾಡುವುದು ರೈತರಿಗೆ ಕಷ್ಟವಾಯಿತು. ಹೀಗಾಗಿಯೇ ಹೆಚ್ಚಿನ ರೈತರು ರೇಷ್ಮೆ ಕೃಷಿಗೆ ಸಲಾಂ ಹೊಡೆದು ಬೇರೆ ಬೆಳೆಯತ್ತ ಒಲವು ತೋರುತ್ತಿದ್ದು, ಕೆಲವು ಕಡೆಗಳಲ್ಲಿ ತಾವು ಬೆಳೆದಿದ್ದ ಹಿಪ್ಪುನೇರಳೆ ಗಿಡಗಳನ್ನು ಬೇರು ಸಹಿತ ಕಿತ್ತು ಹಾಕಿ ಅಲ್ಲಿ ಶುಂಠಿ ಮತ್ತು ಅರಿಶಿಣ ಬೆಳೆಸುತ್ತಿದ್ದಾರೆ.

ಗಮನಹರಿಸದ ರೇಷ್ಮೆ ಸಚಿವರು

ಗಮನಹರಿಸದ ರೇಷ್ಮೆ ಸಚಿವರು

ಆದರೆ ಅಚ್ಚರಿಯ ವಿಚಾರವೇನೆಂದರೆ ಇದೇ ಕ್ಷೇತ್ರದಿಂದ ಸ್ಪರ್ಧಿಸಿ ಗೆಲುವು ಪಡೆದಿರುವ ಡಾ.ನಾರಾಯಣಗೌಡರು ಸದ್ಯ ಸರ್ಕಾರದಲ್ಲಿ ರೇಷ್ಮೆ ಸಚಿವರಾಗಿದ್ದಾರೆ. ಆದರೆ ಇದುವರೆಗೆ ರೇಷ್ಮೆಗೆ ಸಂಬಂಧಿಸಿದಂತೆ ಅವರಿಂದ ಬೆಳೆಗಾರರಿಗೆ ಅನುಕೂಲವಾಗಿಲ್ಲ. ಇದುವರೆಗೆ ಒಂದೇ ಒಂದು ರೇಷ್ಮೆ ಬೆಳೆ ಕ್ಷೇತ್ರೋತ್ಸವ ನಡೆದಿಲ್ಲ. ಇನ್ನು ಅಧಿಕಾರಿಗಳು ರೇಷ್ಮೆ ಬೆಳೆಯುವ ರೈತರ ಜಮೀನಿಗೆ ಕರೆದೊಯ್ದು ರೈತರ ಸಮಸ್ಯೆಗಳನ್ನು ಸಚಿವರಿಗೆ ಮನವರಿಕೆ ಮಾಡಿಕೊಟ್ಟಿಲ್ಲ. ರೇಷ್ಮೆ ಗೂಡಿನ ಬೇಸಾಯಕ್ಕೆ ಪೂರಕವಾಗಿ ರೇಷ್ಮೆ ಹುಳು ಸಾಕಾಣಿಕೆ ಮನೆಗಳು ಈಗ ಖಾಲಿ ಹೊಡೆಯುತ್ತಿದ್ದರೂ ಸಚಿವರು ಯಾವುದೇ ಕ್ರಮ ಕೈಗೊಂಡಿಲ್ಲ ಎಂಬುದು ರೈತರ ಆರೋಪವಾಗಿದೆ.

ರೇಷ್ಮೆ ಫಾರಂ ಜಾಗವನ್ನು ಮಾವು ಸಂಸ್ಕರಣ ಘಟಕಕ್ಕೆ ನೀಡಲು ಮುಂದಾದ ರಾಮನಗರ ಜಿಲ್ಲಾಡಳಿತ

ಪ್ರಯೋಜನಕ್ಕೆ ಬಾರದ ತರಬೇತಿ ಶಾಲೆ

ಪ್ರಯೋಜನಕ್ಕೆ ಬಾರದ ತರಬೇತಿ ಶಾಲೆ

ಕ್ಷೇತ್ರದ ಮಾಜಿ ಶಾಸಕರಾದ ಮಂಡ್ಯದ ಗಾಂಧಿ ಮಾಜಿ ಸ್ಪೀಕರ್ ಕೃಷ್ಣ ಅವರು ಹಿಂದಿನ ಮುಖ್ಯಮಂತ್ರಿಗಳಾದ ಎಸ್.ಆರ್.ಬೊಮ್ಮಾಯಿ ಅವರ ಸಚಿವ ಸಂಪುಟದಲ್ಲಿ ರೇಷ್ಮೆ ಮತ್ತು ಪಶುಸಂಗೋಪನಾ ಖಾತೆಗಳ ಸಚಿವರಾಗಿದ್ದಾಗ ತಾಲೂಕಿನ ರೈತರಿಗೆ ಅನುಕೂಲವಾಗಲೆಂದು ಕೃಷ್ಣರಾಜಪೇಟೆ ಪಟ್ಟಣದ ಹೊರವಲಯದ ಚನ್ನರಾಯಪಟ್ಟಣ-ಮೈಸೂರು ರಾಜ್ಯ ಹೆದ್ದಾರಿಯಲ್ಲಿ ಚಿಕ್ಕೋನಹಳ್ಳಿ ಬಳಿ ರೇಷ್ಮೆ ತರಬೇತಿ ಶಾಲೆಯನ್ನು ಸ್ಥಾಪಿಸಿದ್ದರು. ಆದರೆ ಇಂದು ಅನುದಾನ, ಸಿಬ್ಬಂದಿ ಹಾಗೂ ಹಣಕಾಸಿನ ಕೊರತೆಯಿಂದ ಉಪಯೋಗಕ್ಕೆ ಬಾರದಂತಾಗಿದೆ.

ಕುಗ್ಗುತ್ತಿರುವ ರೇಷ್ಮೆ ಕೃಷಿ ವ್ಯಾಪ್ತಿ

ಕುಗ್ಗುತ್ತಿರುವ ರೇಷ್ಮೆ ಕೃಷಿ ವ್ಯಾಪ್ತಿ

ಕೆ.ಆರ್.ಪೇಟೆ ಪಟ್ಟಣದ ಮೈಸೂರು ರಸ್ತೆಯಲ್ಲಿ ರೇಷ್ಮೆ ಗೂಡಿನ ಮಾರುಕಟ್ಟೆಯಿದ್ದರೂ ಇಲ್ಲಿ ಯಾವುದೇ ರೀತಿಯ ಮಾರಾಟ, ವ್ಯವಹಾರ ನಡೆಯದ ಕಾರಣ ತಾವು ಬೆಳೆದ ರೇಷ್ಮೆಗೂಡನ್ನು ಇಲ್ಲಿನ ರೈತರು ಮಾರಾಟ ಮಾಡಲು ರಾಮನಗರಕ್ಕೆ ಹೋಗಬೇಕಾಗಿದೆ. ಅಲ್ಲಿ ದಲ್ಲಾಳಿ ಮತ್ತು ಮಧ್ಯವರ್ತಿಗಳ ಹಾವಳಿ ಹಾಗೂ ತೂಕದಲ್ಲಿ ಮೋಸ, ಉತ್ತಮ ದರ ನೀಡದೆ ವಂಚನೆ ಹೀಗೆ ಹತ್ತಾರು ಸಮಸ್ಯೆಗಳು ಅವರನ್ನು ಕಾಡುತ್ತಿರುವ ಕಾರಣದಿಂದ ರೇಷ್ಮೆ ಕೃಷಿಯ ಸಹವಾಸವೇ ಬೇಡ ಎಂಬ ತೀರ್ಮಾನಕ್ಕೆ ಕೆಲವು ರೈತರು ಬಂದಿದ್ದು, ಪರಿಣಾಮ ರೇಷ್ಮೆ ಕೃಷಿಯ ವ್ಯಾಪ್ತಿ ಕುಗ್ಗುತ್ತಾ ಬರುತ್ತಿದೆ.

English summary
Farmers in Silk minister Narayana Gowda district are leaving silk farming and turning to other crops. If this continues, the silk farming in Mandya district may disappear in few days
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X