ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಯಚೂರು: ಅಸಮರ್ಪಕ ಮಳೆ ಮಧ್ಯೆ ಮುಂಗಾರು ಬಿತ್ತನೆ ಪೂರ್ಣ

By ರಾಯಚೂರು ಪ್ರತಿನಿಧಿ
|
Google Oneindia Kannada News

ರಾಯಚೂರು, ಆಗಸ್ಟ್, 01: ಪ್ರಸಕ್ತ ಸಾಲಿನಲ್ಲಿ ರಾಯಚೂರು ಜಿಲ್ಲೆಯಾದ್ಯಂತ ಅಸಮರ್ಪಕವಾಗಿ ಮಳೆ ಸುರಿದಿದ್ದರಿಂದ ಮುಂಗಾರು ಬಿತ್ತನೆಯು ಆರಂಭದಲ್ಲಿ ಕುಂಠಿತವಾಗಿತ್ತು. ಆದರೆ ಜುಲೈ ಅಂತ್ಯಕ್ಕೆ ಸ್ವಲ್ಪಭಾಗ ಭತ್ತದ ಕ್ಷೇತ್ರ ಹೊರತುಪಡಿಸಿ ಬಹುತೇಕ ಎಲ್ಲ ಕಡೆಗಳಲ್ಲೂ ಬಿತ್ತನೆ ಪೂರ್ಣಗೊಂಡಿದೆ.

ಮೇ ಅಂತ್ಯದಲ್ಲಿ ಸುರಿದ ಮಳಗೆ ಕೆಲವು ರೈತರು ಮುಂಚಿತವಾಗಿ ಬಿತ್ತನೆ ಮಾಡಿದ್ದರು. ಆ ನಂತರದಲ್ಲಿ ಮಳೆ ಕೊರತೆ ಎದುರಾಗಿದ್ದರಿಂದ ರೈತರು ಬೆಳೆಹಾನಿ ಅನುಭವಿಸುವ ಹಂತದಲ್ಲಿದ್ದರು. ಜುಲೈ ಆರಂಭದಲ್ಲಿ ಎಡಬಿಡದೆ ಸುರಿದ ತುಂತುರು ಮಳೆ ಬೆಳೆಗಳಿಗೆ ಆಸರೆಯಾಯಿತು.

ಸ್ವಲ್ಪ ಪ್ರಮಾಣದ ಹಾನಿಯಾದರೂ ಬೆಳೆಗಳು ಮತ್ತೆ ಹಸಿರಾಗಿವೆ. ಹೀಗೆ ತುಂತುರು ಮಳೆ ಮಧ್ಯದಲ್ಲೇ ರೈತರು ಬಿತ್ತನೆ ಕಾರ್ಯ ಪೂರ್ಣಗೊಳಿಸಿದ್ದಾರೆ. ಇದೀಗ ಮಳೆ ಬಿಡುವು ನೀಡಿದ್ದು, ರೈತರು ಕೃಷಿ ಕಾರ್ಯಕ್ಕೆ ಕೂಲಿಕಾರರು ದೊರೆಯುತ್ತಿಲ್ಲ ಎನ್ನುವ ಸಂಕಷ್ಟದಲ್ಲಿದ್ದಾರೆ.

ಈ ಬಗ್ಗೆ ಕಡ್ಗಂದೊಡ್ಡಿ ರೈತ ಲಕ್ಷ್ಮಣಗೌಡ ಮಾತನಾಡಿ, "ರಾಯಚೂರು ತಾಲ್ಲೂಕಿನಲ್ಲಿ ಮಾತ್ರ ಸರಿಯಾಗಿ ಮುಂಗಾರು ಮಳೆ ಸುರಿದಿಲ್ಲ. ಇನ್ನುಳಿದಂತೆ ಲಿಂಗಸುಗೂರು, ಸಿಂಧನೂರು, ಮಸ್ಕಿ, ಸಿರವಾರ ಸೇರಿದಂತೆ ಬಹುತೇಕ ಕಡೆಗಳಲ್ಲಿ ಕಳೆದ ವರ್ಷಕ್ಕಿಂತ ಉತ್ತಮವಾಗಿ ಮಳೆ ಆಗಿದೆ. ಬೇರೆ ಕಡೆಗಳಲ್ಲಿ ಬಿತ್ತನೆ ಕಾರ್ಯಗಳು ಎಲ್ಲ ಮುಗಿದಿವೆ. ಆದರೆ ಕೃಷಿಕಾರ್ಯಕ್ಕೆ ಕೂಲಿಗಳು ಸಿಗುತ್ತಿಲ್ಲ," ಎಂದು ಅಸಮಾಧಾನ ಹೊರಹಾಕಿದರು.

 ಪ್ರಸ್ತುತ ಜಿಲ್ಲೆಯಲ್ಲಿ ಅಧಿಕ ಮಳೆ ಪ್ರಮಾಣ

ಪ್ರಸ್ತುತ ಜಿಲ್ಲೆಯಲ್ಲಿ ಅಧಿಕ ಮಳೆ ಪ್ರಮಾಣ

ಈ ಬಾರಿ ಜಿಲ್ಲೆಯಾದ್ಯಂತ ಒಂದೇ ದಿನ ಅಲ್ಲದಿದ್ದರೂ ಬಿಡುವು ಕೊಟ್ಟು ಮಳೆ ಸುರಿದಿದೆ. ಜುಲೈ 2ನೇ ವಾರ ಒಳಗೆ ಬಿತ್ತನೆ ಕಾರ್ಯಗಳು ಮುಕ್ತಾಯವಾಗಿದ್ದವು. ಹವಾಮಾನ ಇಲಾಖೆ ವರದಿಯ ಪ್ರಕಾರ ಜಿಲ್ಲೆಯಲ್ಲಿ ಜೂನ್‌ ತಿಂಗಳಿನಲ್ಲಿ 100 ಮಿಲಿ ಮೀಟರ್‌ ಮಳೆ ದಾಖಲಾಗಿದೆ. ಜುಲೈನಲ್ಲಿ 135 ಮಿಲಿ ಮೀಟರ್‌ ಸುರಿದಿದೆ. ಬೇರೆ ತಾಲೂಕುಗಳಿಗೆ ಹೋಲಿಸಿದರೆ ಲಿಂಗಸುಗೂರು ಮತ್ತು ದೇವದುರ್ಗ ತಾಲ್ಲೂಕುಗಳಲ್ಲಿ ಅತಿಹೆಚ್ಚು ಮಳೆ ಆಗಿದೆ. ವಾಡಿಕೆಯಂತೆ ಜೂನ್‌, ಜುಲೈನಲ್ಲಿ 175 ಮಿಲಿ ಮೀಟರ್‌ ಮಳೆ ಸುರಿದಿದ್ದು, ವಾಸ್ತವದಲ್ಲಿ ಶೇಕಡಾ 39ಕ್ಕಿಂತ ಅಧಿಕ ಮಳೆಯಾಗಿದೆ ಎನ್ನುವುದು ಹವಾಮಾನ ಇಲಾಖೆಯ ಮಾಹಿತಿಯಾಗಿದೆ.

 ರೈತರಿಗೆ ಕೃಷಿ ಇಲಾಖೆ ಕೊಟ್ಟ ಸಲಹೆ

ರೈತರಿಗೆ ಕೃಷಿ ಇಲಾಖೆ ಕೊಟ್ಟ ಸಲಹೆ

ಜಿಲ್ಲೆಯ ಸಿಂಧನೂರು ತಾಲೂಕಿನ ತುಂಗಭದ್ರಾ ಜಲಾಶಯದಿಂದ ಎಡದಂಡೆ ನಾಲೆಗೆ ನೀರು ಹರಿಸಲಾಗಿದ್ದು, ಉಪಕಾಲುವೆಗಳ ಮೇಲ್ಭಾಗದ ರೈತರು ಭತ್ತ ನಾಟಿ ಕಾರ್ಯ ಆರಂಭಿಸಿದ್ದಾರೆ. ಖುಷ್ಕಿ ಪ್ರದೇಶದಲ್ಲಿಯೂ ವಿವಿಧ ಬೆಳೆಗಳ ಬಿತ್ತನೆ ಆರಂಭವಾಗಿದೆ. ಆದರೆ ಗೊಬ್ಬರ ಸಿಗದೇ ರೈತರು ಪರದಾಡುತ್ತಿದ್ದಾರೆ. ಕೃಷಿ ಪತ್ತಿನ ಸಹಕಾರ ಸಂಘಗಳಿಗೆ ಕೇಳಿದರೆ ಇನ್ನೂ ಗೊಬ್ಬರ ಬಂದಿಲ್ಲವೆಂದು ಹೇಳಿ ರೈತರನ್ನು ಹಿಂದಕ್ಕೆ ಕಳುಹಿಸುತ್ತಿದ್ದಾರೆ. ಹೀಗಾಗಿ ಯಾರನ್ನು ಕೇಳಬೇಕೋ ತಿಳಿಯದಾಗಿದೆ ಎಂದು ಜಂಗಮರಹಟ್ಟಿಯ ರೈತ ಶಂಕರಪ್ಪ ಅಡ್ಡಿ ಆತಂಕ ವ್ಯಕ್ತಪಡಿಸಿದರು.

ಈ ಕುರಿತು ಹಲವಾರು ಕೃಷಿ ಪತ್ತಿನ ಸಹಕಾರ ಸಂಘಗಳ ಮುಖ್ಯಸ್ಥರನ್ನು ಕೇಳಿದಾಗ ಶೇಕಡಾ 25ರಷ್ಟು ಗೊಬ್ಬರ ಪೂರೈಕೆಯಾಗಿದೆ. ಇನ್ನು ಶೇಕಡಾ 75ರಷ್ಟು ಗೊಬ್ಬರ ಮುಂದಿನ ವಾರ ಬರಬಹುದು ಎಂದು ನಿರೀಕ್ಷಿಸಲಾಗಿದೆ ಎಂದು ತಿಳಿಸಿದರು.

ನಂತರ ಕೃಷಿ ಇಲಾಖೆಯ ಸಹಾಯಕ ನಿರ್ದೇಶಕಿ ಪ್ರಿಯಾಂಕ ಅವರನ್ನು ಸಂಪರ್ಕಿಸಿದಾಗ ಗೊಬ್ಬರದ ಕೊರತೆ ಏನು ಇಲ್ಲ. ಆರಂಭದಲ್ಲಿ ಸ್ವಲ್ಪ ಮಟ್ಟಿಗೆ ತೊಂದರೆ ಕಂಡು ಬಂದಿರುವುದು ನಿಜ. ಕೆಲವರು ಹೆಚ್ಚಿನ ಪ್ರಮಾಣದಲ್ಲಿ ಸಂಗ್ರಹಿಸಿ ಇಟ್ಟುಕೊಳ್ಳುವುದರಿಂದ ಗೊಬ್ಬರದ ಕೊರತೆಯಾಗಿದೆ ಎಂದು ಅನಿಸುತ್ತಿದೆ. ಅಗತ್ಯಕ್ಕೆ ಅನುಗುಣವಾಗಿ ಬಳಸಿದರೆ ಯಾವುದೇ ತೊಂದರೆ ಆಗುವುದಿಲ್ಲ. ಹೆಚ್ಚಿನ ಪ್ರಮಾಣದ ಗೊಬ್ಬರ ಬಿಡುಗಡೆಯಾಗಿದ್ದು, ಅದನ್ನು ರೈತರಿಗೆ ಪೂರೈಸುವುದಾಗಿ ಭರವಸೆ ಕೊಟ್ಟಿದ್ದಾರೆ.

 ರೈತರಿಗೆ ವಿತರಿಸಿದ ಗೊಬ್ಬರ ಎಷ್ಟು?

ರೈತರಿಗೆ ವಿತರಿಸಿದ ಗೊಬ್ಬರ ಎಷ್ಟು?

ಮಾನ್ವಿ ತಾಲೂಕಿನಲ್ಲಿ ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ಭತ್ತದ ನಾಟಿ ಕಾರ್ಯ ನಡೆದಿದೆ. ನಿರಂತರ ಜಿಟಿಜಿಟಿ ಮಳೆ ಸುರಿದ ಕಾರಣ ಸೂರ್ಯಕಾಂತಿ ಬೆಳೆ ಹಾನಿಗೀಡಾಗಿದೆ.

ಮಳೆಯಿಂದ ಹಳ್ಳಕೊಳ್ಳಗಳು ತುಂಬಿ ಹರಿದ ಕಾರಣ ದಂಡೆಯಲ್ಲಿನ ಜಮೀನುಗಳು ಜಲಾವೃತವಾಗಿ ರೈತರು ಸಂಕಷ್ಟ ಅನುಭವಿಸುವಂತಾಗಿದೆ. ಕೆಲವು ಕಡೆ ಹತ್ತಿ ಮತ್ತು ತೊಗರಿ ಬೆಳವಣಿಗೆ ಹಂತದಲ್ಲಿದ್ದು, ರಸಗೊಬ್ಬರಕ್ಕೆ ಬೇಡಿಕೆ ಹೆಚ್ಚಿದೆ. ವಿಶೇಷವಾಗಿ ಡಿಎಪಿ ರಸಗೊಬ್ಬರದ ಬೇಡಿಕೆ ಹೆಚ್ಚಾಗಿದೆ. ರೈತರಿಗೆ ರಿಯಾಯಿತಿ ದರದಲ್ಲಿ ಸಹಕಾರ ಸಂಘಗಳ ಮೂಲಕ ಪ್ರತಿ ಪಹಣಿಗೆ ಅನುಗುಣವಾಗಿ 3 ಚೀಲ ಅಂದರೆ 150 ಕೆ.ಜಿ ಡಿಎಪಿ ರಸಗೊಬ್ಬರ ಮಾತ್ರ ವಿತರಿಸುತ್ತಿರುವುದು ಅಸಮಾಧಾನಕ್ಕೆ ಕಾರಣವಾಗಿದೆ. ಡಿಎಪಿಗೆ ಪರ್ಯಾಯವಾಗಿ ಕಾಂಪ್ಲೆಕ್ಸ್ ಹಾಗೂ ನ್ಯಾನೊ ಯೂರಿಯಾ ರಸಗೊಬ್ಬರ ಬಳಸುವಂತೆ ಕೃಷಿ ಅಧಿಕಾರಿಗಳು ಸಲಹೆ ನೀಡುತ್ತಿದ್ದಾರೆ. ಆದರೆ ರೈತರು ಡಿಎಪಿ ರಸಗೊಬ್ಬರ ಪೂರೈಕೆಗೆ ಒತ್ತಾಯಿಸುತ್ತಿದ್ದಾರೆ.

ಸಿರವಾರ ತಾಲೂಕಿನಲ್ಲಿ ಮುಂಗಾಳು ಮಳೆ ವಿಳಂಬವಾದ ನಂತರ ರೈತರು ಹತ್ತಿ ಸೇರಿದಂತೆ ವಿವಿಧ ಬೆಳೆಗಳನ್ನು ಬೆಳೆದಿದ್ದಾರೆ. ಕಳೆದ ವಾರದಿಂದ ಸತತವಾಗಿ ಸುರಿಯುತ್ತಿರುವ ತುಂತುರು ಮಳೆಯಿಂದಾಗಿ ಹೊಲಗಳಲ್ಲಿ ಬೆಳೆಗಿಂತ ಕಸವೇ ಹೆಚ್ಚಾಗಿ ಬೆಳೆದಿದ್ದು, ಕಸ ಕೀಳಲು ಕೂಲಿಕಾರರ ಬೆನ್ನು ಬೀಳುವಂತಾಗಿದೆ. ಕೂಲಿಕಾರರ ಖರ್ಚಿಗಿಂತಲೂ ಅಧಿಕ ಹಣವನ್ನು ಕಳೆ ನಾಶಕ, ರಾಸಾಯನಿಕಕ್ಕಾಗಿ ವ್ಯಯಿಸುವಂತ ಪರಿಸ್ಥಿತಿ ನಿರ್ಮಾಣವಾಗಿದೆ. ರೈತರು ನಾಟಿ ಮಾಡಿದ ಬೆಳೆಗಳಿಗೆ ರಸಗೊಬ್ಬರ ಮೊದಲಿಗೆ ಕಡಿಮೆಯಾದರೂ, ನಂತರ ಬೇಕಾದಷ್ಟು ರಸಗೊಬ್ಬರ ಸಿಗುತ್ತದೆ ಎಂದು ಕೃಷಿ ಅಧಿಕಾರಿಗಳು ತಿಳಿಸಿದ್ದಾರೆ.

 ಒಟ್ಟು ಎಷ್ಟು ಹೆಕ್ಟೇರ್‌ಗೆ ಬಿತ್ತನೆ?

ಒಟ್ಟು ಎಷ್ಟು ಹೆಕ್ಟೇರ್‌ಗೆ ಬಿತ್ತನೆ?

ರಾಯಚೂರು 1,00,209 , ಮಾನ್ವಿ 60,394 , ಸಿರವಾರ 39,843, ದೇವದುರ್ಗ 1,20,704 , ಲಿಂಗಸೂಗೂರು 56,681 , ಮಸ್ಕಿ 74,197 ಮತ್ತು ಸಿಂಧನೂರು 81,343 ಸೇರಿ ಒಟ್ಟು 5.35,471 ಹೆಕ್ಟೇರ್‌ ಬಿತ್ತನೆಯಾಗಿದೆ. ಮಳೆ ಬಿದ್ದಿರುವ ಕಡೆಗಳಲ್ಲಿ ಹಂತ ಹಂತವಾಗಿ ರೈತರು ಬಿತ್ತನೆ ಮಾಡಿದ್ದಾರೆ. ಸದ್ಯ ಕೆಲವು ಜಮೀನುಗಳಲ್ಲಿ ರೈತರು ಕಳೆ ತೆಗೆಯುವುದಕ್ಕೆ ಕಾಯುತ್ತಿದ್ದಾರೆ. ಇನ್ನು ಕೆಲವೆಡೆ ಸತತವಾಗಿ ಮಳೆ ಆರ್ಭಟಿಸುತ್ತಿದ್ದು, ಬೆಳೆ ನಾಶದಿಂದ ರೈತರು ಸಂಕಷ್ಟ ಅನುಭವಿಸುವಂತಾಗಿದೆ ಎಂದು ಜಕ್ಕಲದಿನ್ನಿ ರೈತ ಅಮರೇಶ್‌ ಅಸಮಾಧಾನ ವ್ಯಕ್ತಪಡಿಸಿದರು.

English summary
Monsoon sowing was initially hampered during the current season due to inadequate rainfall across Raichur district. But by the end of July, sowing has been completed in almost all areas except a small paddy field. know more,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X