ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

5 ಎಕರೆ ಜಮೀನು ಲೀಸ್‌ಗೆ ಪಡೆದು ದಾಳಿಂಬೆ ಬೆಳೆದು 'ಸಿರಿವಂತ'ನಾದ ರೈತ

|
Google Oneindia Kannada News

ಬೆಂಗಳೂರು, ಏಪ್ರಿಲ್ 03: ಕೃಷಿಯಲ್ಲಿ ಒಮ್ಮೆ ಖುಷಿ ಕಂಡುಕೊಂಡರೆ ಜೀವನದಲ್ಲಿ ಒಮ್ಮೆಯೂ ಹಿಂದೆ ತಿರುಗಿ ನೋಡುವ ಅಗತ್ಯ ಬೀಳಲ್ಲ ! ಹೌದು, ಸ್ವತಂತ್ರ ಬದುಕು, ಆರೋಗ್ಯಕರ ಜೀವನಕ್ಕೆ ಅಗತ್ಯ ವ್ಯಾಯಾಮ, ಒಳ್ಳೆಯ ಪರಿಸರ ಜತೆಗೆ ನೆಮ್ಮದಿ ಜೀವನ ಜತೆಗೆ ಒಂದಷ್ಟು ಮಂದಿಗೆ ಅನ್ನ ನೀಡಿದ ಪುಣ್ಯಭಾವ. ಈ ಎಲ್ಲವೂ ಸಿಗುವುದು ಒಟ್ಟಾಗಿ ಸಿಗುವುದು ಕೃಷಿಯಲ್ಲಿಯೇ ! ಶತೃ ನೀಡಿದ ಸಲಹೆಯಿಂದಲೇ ಖಾಸಗಿ ಕಂಪನಿ ಕೆಲಸಕ್ಕೆ ಗುಡ್ ಬೈ ಹೇಳಿ ದಾಳಿಂಬೆ ಕೃಷಿಗೆ ಕೈ ಹಾಕಿದ ರೈತ ಇವತ್ತು ಸಿರಿವಂತನಾಗಿ ಮಾದರಿ ರೈತನಾಗಿ ಹೊರ ಹೊಮ್ಮಿದ್ದಾರೆ. ಐದು ಎಕರೆ ಭೂಮಿಯನ್ನು ಲೀಸ್ ಗೆ ಪಡೆದು ದಾಳಿಂಬೆ ಬೆಳೆದ ರೈತ ಇದೀಗ ಶ್ರೀಮಂತ ರೈತನಾಗಿ ಹೊರ ಹೊಮ್ಮಿದ್ದಾರೆ. ವರ್ಷಕ್ಕೆ ಲಕ್ಷಾಂತರ ರೂಪಾಯಿ ಆದಾಯ ಗಳಿಸುತ್ತಿರುವ ಸಾಮಾನ್ಯ ರೈತನ ಯಶೋಗಾಥೆ ಇಲ್ಲಿದೆ ನೋಡಿ.

ಅವರ ಹೆಸರು ಮೋಹನ್. ಹೆಸರುಘಟ್ಟ ಸಮೀಪದ ಶಿವಕೋಟೆ ನಿವಾಸಿ. ಐದು ಎಕರೆ ಬರಡು ಜಮೀನನ್ನು ಲೀಸ್ ಗೆ ಪಡೆದು ಮೂರು ವರ್ಷದ ಹಿಂದೆ ದಾಳಿಂಬೆ ಕೃಷಿ ಕೈಗೊಂಡರು. ಮೂರೇ ವರ್ಷದಲ್ಲಿ ಯಶಸ್ವಿ ರೈತನಾಗಿ ಹೊರ ಹೊಮ್ಮಿರುವ ಮೋಹನ್ ಇದೀಗ ಮೂರನೇ ವರ್ಷದ ದಾಳಿಂಬೆ ಫಸಲು ಪಡೆಯುವ ನಿರೀಕ್ಷೆಯಲ್ಲಿದ್ದಾರೆ. ಬರಡು ನೆಲದಲ್ಲಿ ವಿದೇಶಕ್ಕೆ ರಫ್ತಾಗುವ ಗುಣಮಟ್ಟದ ದಾಳಿಂಬೆ ಬೆಳೆದು ಸಾಧನೆ ಮಾಡಿದ್ದಾರೆ. ಅಯ್ಯೋ ಇವನಿಗೆ ತಲೆ ಕೆಟ್ಟಿದೆಯಾ ? ಕಾಡಲ್ಲಿ ಹೋಗಿ ದಾಳಿಂಬೆ ಹಾಕುತ್ತಿದ್ದಾನೆ. ದುಡ್ಡು ಇದೆಯೇನೋ ಖಾಲಿಯಾದ ಮೇಲೆ ಗೊತ್ತಾಗುತ್ತದೆ' ಎಂದು ಮಾತನಾಡಿದವರು ಇದೀಗ ಮೂಕ ವಿಸ್ಮಿತರಾಗಿದ್ದಾರೆ. ಮನಸೊಂದು ಇದ್ದರೆ, ಇಷ್ಟ ಪಟ್ಟು ಮಾಡಿದರೆ ಕೃಷಿಯ ಬದುಕಿನ ಮುಂದೆ ಎಲ್ಲವೂ ಶೂನ್ಯ ಎಂಬುದನ್ನು ಪ್ರಾಯೋಗಿಕವಾಗಿ ಸಾಧಿಸಿ ತೋರಿಸಿದ್ದಾರೆ ಮೋಹನ್. ಮೋಹನ್ ದಾಳಿಂಬೆ ಕೃಷಿಯ ಯಶೋಗಾಥೆಯನ್ನು ಒನ್ ಇಂಡಿಯಾ ಕನ್ನಡ ಜತೆ ಹಂಚಿಕೊಂಡಿದ್ದಾರೆ.

ಮೋಹನ್ ಮೊದಲು ಮೊಬೈಲ್ ಸಿಮ್ ಮಾರಾಟ ಮಾಡುವ ಡೀಲರ್ ಗಳಿಗೆ ಏರಿಯಾ ಮ್ಯಾನೇಜರ್ ಅಗಿ ಕೆಲಸ ನಿರ್ವಹಿಸುತ್ತಿದ್ದರು. ಹಗಲು ರಾತ್ರಿ ದುಡಿದರೂ ಬರುವ 8 ಸಾವಿರ ಸಂಬಳದಲ್ಲಿ ಜೀವನವಷ್ಟೇ ಸಾಗುತ್ತಿತ್ತು. ಎಷ್ಟು ವರ್ಷ ಈ ರೀತಿ ಕಷ್ಟ ಪಡಬೇಕು ಎಂಬ ಆಲೋಚನೆ. ಕೆಲಸ ಬಿಟ್ಟು ತನ್ನೂರಾದ ಶಿವಕೋಟೆಗೆ ಬಂದರು. ಕೃಷಿ ಮಾಡಲು ಅಗತ್ಯದಷ್ಟು ಜಮೀನು ಕೂಡ ಇರಲಿಲ್ಲ. ಸ್ನೇಹಿತರೊಬ್ಬರ ಹೂವನ್ನು ಕೆ.ಆರ್. ಮಾರ್ಕೆಟ್ ಗೆ ತೆಗೆದುಕೊಂಡು ಹೋಗುವಾಗ ಅದೇ ಗ್ರಾಮದ ರೈತರೊಬ್ಬರು( ಅವರ ಮನೆಗೆ ಶತೃ, ಮೋಹನ್ ಮಿತ್ರ ) ನರ್ಸರಿ ಫಾರ್ಮಿಂಗ್ ಮಾಡುವಂತೆ ಸಲಹೆ ಮಾಡಿದ್ದರು. ಇದಕ್ಕಾಗಿ ಮೋಹನ್ ನಂಬಿದ್ದು ಸಮೀಪದಲ್ಲಿಯೇ ಇರುವ ಭಾರತೀಯ ತೋಟಗಾರಿಕೆ ಸಂಶೋಧನಾ ಸಂಸ್ಥೆ. ಅಲ್ಲಿ ವಿಜ್ಞಾನಿಯೊಬ್ಬರ ಸ್ನೇಹ ಬೆಳಿಸಿಕೊಂಡು ಚಕ್ಕ ಜಾಗದಲ್ಲಿ ನರ್ಸರಿ ಮಾಡಿದರು. ಗುಣಮಟ್ಟದ ಸಸಿಗಳನ್ನು ನೀಡುವ ಮೂಲಕ ಒಂದಷ್ಟು ಆದಾಯ ಗಳಿಸಿದರು. ಆನಂತರ ದಾಳಿಂಬೆ ಬೆಳೆಯುವ ಆಲೋಚನೆ ಮಾಡಿದರು. ಅದಕ್ಕಾಗಿ ಮೂರ್ನಾಲ್ಕು ತಿಂಗಳು ಜ್ಞಾನ ಸಂಪಾದಿಸಿದರು.

Pomegranate farming success story Bengaluru Based farmer Mohan

ನರ್ಸರಿಯಿಂದ ಬಂದಿದ್ದ ಸ್ವಲ್ಪ ದುಡ್ಡಿನ ಜತೆಗೆ ಸ್ನೇಹಿತರಿಂದ ಸಾಲ ಪಡೆದು ಹೆಸರಘಟ್ಟ ಸಮೀಪ ಐದು ಎಕರೆ ಬರಡು ಜಮೀನು ಹತ್ತು ವರ್ಷ ಲೀಸ್ ಗೆ ಪಡೆದರು. ದಾಳಿಂಬೆ ಬೆಳೆಯಲು ಭೂಮಿಯನ್ನು ಹದಗೊಳಿಸಿದರು. ಮೋಹನ್ ನನ್ನು ನೋಡಿ, ಈತನಿಗೆ ಎಲ್ಲೋ ದುಡ್ಡು ಜಾಸ್ತಿಯಿದೆ. ಖರ್ಚು ಮಾಡೋಕೆ ಬಂದವನೆ. ಕೈ ಸುಟ್ಟುಕೊಂಡ ಮೇಲೆ ಊರು ಬಿಡ್ತಾನೆ ಎಂದೆಲ್ಲಾ ಮಾತನಾಡತೊಡಗಿದರು. ಯಾರ ಮಾತಿಗೂ ಕಿವಿಗೊಡದೇ ಮೂರು ವರ್ಷದ ಹಿಂದೆ ದಾಳಿಂಬೆ ಗಿಡ ನೆಟ್ಟರು. ಇದಕ್ಕಾಗಿ ಬರೋಬ್ಬರಿ 25 ಲಕ್ಷ ರೂ. ವೆಚ್ಚ ಮಾಡಿದರು. ಬಗುವಾ ತಳಿಯ ದಾಳಿಂಬೆ ಗಿಡ ನೆಟ್ಟರು.

ಹಗಲು ರಾತ್ರಿ ಎನ್ನದೇ ಮಗುವಿನಂತೆ ಅವನ್ನು ಹಾರೈಕೆ ಮಾಡಿದರು. ಮೊದಲ ಫಸಲಿನಲ್ಲಿಯೇ 27 ಲಕ್ಷ ರೂ. ಬಂತು. ಎಲ್ಲಾ ಸಾಲಗಳು ತೀರಿ ಹೋದವು. ಎರಡನೇ ಬೆಳೆಯಲ್ಲಿ ಸುಮಾರು ಐವತ್ತು ಲಕ್ಷ ರೂಪಾಯಿ ಕೈ ಸೇರಿತು. ಮೋಹನ್ ಹರಿಸಿದ್ದ ಬೆವರಿನ ಹನಿಗಳಿಗೆ ಬಹುದೊಡ್ಡ ಫಲ ಸಿಕ್ಕಿ ಆಗಿತ್ತು. ಇದೀಗ ಮೂರನೇ ಬೆಳೆ ನಿರೀಕ್ಷೆಯಲ್ಲಿದ್ದಾರೆ. ಅದು ಎರಡನೇ ವರ್ಷದ ಫಸಲಿಗಿಂತಲೂ ಹೆಚ್ಚು ಫಲ ಕೊಡುವ ವರ್ಷ. ಅವತ್ತು ಮೋಹನ್ ನನ್ನು ಮನಸಿನಲ್ಲಿ ಹುಚ್ಚ ಎಂದು ಭಾವಿಸಿದ್ದ ಜನರಿಗೆ ಇದೀಗ ಮೋಹನ್ ಅವರ ಹಿಂದೆ ಬಿದ್ದು, ನಮಗೂ ದಾಳಿಂಬೆ ಕೃಷಿ ಹೇಳಿಕೊಡಿ ಎಂದು ದಂಬಾಲು ಬಿದ್ದಿದ್ದಾರೆ. ಇನ್ನು ಹತ್ತು ವರ್ಷಗಳ ಕಾಲ ಕೈತುಂಬಾ ಆದಾಯ. ಎಂಟು ಸಾವಿರ ನಂಬಿ ಕೆಲಸದಲ್ಲಿ ಇದ್ದರೆ, ಬಹಶಃ ಬೆಂಗಳೂರಿನ ಯಾವುದೋ ಒಂದು ಮೂಲೆಯಲ್ಲಿ ಬಾಡಿಗೆ ಮನೆಯಲ್ಲಿ ಜೀವನ ಸಾಗಿಸುತ್ತಿದ್ದೆ ಎಂದು ನೆನಪಿಸಿಕೊಳ್ಳುತ್ತಾರೆ ಮೋಹನ್.

Pomegranate farming success story Bengaluru Based farmer Mohan

ಇನ್ನು ಕೃಷಿ ಬಗ್ಗೆ ಮನಸು ಬಿಚ್ಚಿ ಮಾತನಾಡುವ ಮೋಹನ್, ನಮ್ಮ ರೈತರಲ್ಲಿ ಇಚ್ಛಾ ಶಕ್ತಿ ಕೊರತೆ ಇದೆ. ಯಾವುದೇ ಬೆಳೆ ಇರಲಿ, ಮಗುವಿನಂತೆ ಹಾರೈಕೆ ಮಾಡಿದರೆ ನಷ್ಟದ ಪ್ರಶ್ನೆಯೇ ಇಲ್ಲ. ಗುಣಮಟ್ಟದ ಬೆಳೆ ತೆಗೆಯಬೇಕು. ವಿಜ್ಞಾನಿಗಳ ಸಹಾಯದಲ್ಲಿ ಅವನ್ನು ಹಾರೈಕೆ ಮಾಡಬೇಕು. ನಾನು ದಾಳಿಂಬೆ ತೋಟ ಮಾಡಲು ಹೋದಾಗ ಎಲ್ಲರೂ ಆಡಿಕೊಂಡರು. ಇದೀಗ ಅವರೇ ಬಂದು ತೋಟದ ಬಗ್ಗೆ ಮಾಹಿತಿ ಕೇಳುತ್ತಿದ್ದಾರೆ. ಮೊದಲು ಶ್ರದ್ಧೆಯಿಂದ ಕೃಷಿ ಮಾಡಬೇಕು. ಇವತ್ತಿನ ದಿನಗಳಲ್ಲಿ ಸರ್ಕಾರ ನೀಡುವ ಸ್ಕೀಮ್ ಗಳನ್ನು ನಂಬಿ ಯಾವ ಬೆಳೆ ಬೆಳೆಯಲು ಸಾಧ್ಯವಿಲ್ಲ.

ಇರುವ ಅವಕಾಶಗಳನ್ನು ಬಳಸಿಕಂಡು ಕೃಷಿ ಮಾಡಿದರೆ ಯಾವುದೂ ಬೇಕಾಗಿಲ್ಲ. ಮೂರು ವರ್ಷದಲ್ಲಿ ಈ ಪರಿಯ ಯಶಸ್ಸು ಸಾಧಿಸುತ್ತೇನೆ ಎಂಬ ನಂಬಿಕೆ ನನಗೆ ಇರಲಿಲ್ಲ. ನನಗೆ ಶ್ರದ್ಧೆ ಮತ್ತು ಪ್ರಾಮಾಣಿಕ ಶ್ರಮ ಬಿಟ್ಟರೆ ನನ್ನ ಬಳಿ ಏನೂ ಇರಲಿಲ್ಲ. ಇದೀಗ ಸರ್ಕಾರಿ ಉದ್ಯೋಗದಲ್ಲಿರುವ ಸಂಬಂಧಿಕರೇ ಬಂದು ನಾನು ಕೆಲಸ ಬಿಡ್ತೀನಿ ನನಗೊಂದು ತೋಟ ಮಾಡಿಕೊಡು ಎಂದು ಕೇಳುತ್ತಿದ್ದಾರೆ. ಒಬ್ಬ ರೈತನಾಗಿ ಯಸಸ್ಸು ಸಾಧಿಸುವ ಇಚ್ಛಾಶಕ್ತಿ ಜತೆಗೆ ಕೃಷಿಯನ್ನು ಅಷ್ಟೇ ಪ್ರೀತಿಸಬೇಕು. ನಮ್ಮ ಮನೆಗೆ ಶತೃ ಆಗಿದ್ದರೂ, ನನಗೆ ಮಿತ್ರನಾಗಿದ್ದ ವ್ಯಕ್ತಿ ನೀಡಿದ್ದ ಪುಟ್ಟ ಸಲಹೆ ಕೃಷಿಗೆ ಇಳಿಯಲು ಪ್ರೇರಣೆ ಆಯಿತು ಎಂದು ನೆನಪಿಸಿಕೊಳ್ಳುತ್ತಾರೆ.

Pomegranate farming success story Bengaluru Based farmer Mohan

ಇನ್ನು ನಾನು ಬೆಳೆದ ದಾಳಿಂಬೆ ವಿದೇಶಕ್ಕೆ ರಫ್ತಾಗುತ್ತದೆ. ನಮ್ಮ ಮಾರುಕಟ್ಟೆಯಲ್ಲಿ ಮೂರು ಮತ್ತು ನಾಲ್ಕನೇ ದರ್ಜೆ ದಾಳಿಂಬೆ. ನಾನು ಬೆಳೆಯುವ ದಾಳಿಂಬೆ ಮೊದಲೇ ದರ್ಜೆ. ಬಾಂಗ್ಲಾ ಸೇರಿದಂತೆ ನಾನಾ ದೇಶಗಳಿಗೆ ರಫ್ತಾಗುತ್ತದೆ. ದೈಹಿಕ ಆರೋಗ್ಯದ ಜತೆಗೆ ನೆಮ್ಮದಿ ಜೀವನವಿದೆ. ನಾನು ಧೈರ್ಯ ಮಾಡಿ ಮಾಡಿದ ಸಾಹಸದ ಫಲ ನನಗೆ ಸಿಕ್ಕಿದೆ. ಯಾವುದೇ ಕೃಷಿಯಾಗಿರಲಿ ಶ್ರದ್ಧೆಯಿಂದ ಮಾಡಬೇಕು. ಅದರ ಆಳ- ಅಗಲ ಅರಿತು ಯೋಜನೆ ರೂಪಿಸಿಕೊಂಡರೆ ಯಶಸ್ಸು ಕಟ್ಟಿಟ್ಟ ಬುತ್ತಿ ಎನ್ನುತ್ತಾರೆ ಮೋಹನ್.

English summary
Pomegranate farming success story Bengaluru Based farmer Mohan. Know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X