ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೈಸೂರಿನ ಇಂಜಿನಿಯರಿಂಗ್ ಪದವೀಧರನ ಸಾವಯವ ಕೃಷಿ ಯಶೋಗಾಥೆ

By ಸಂಜಯ್.ಕೆ.ಬೆಳತ್ತೂರು
|
Google Oneindia Kannada News

ಮೈಸೂರು, ನವೆಂಬರ್ 07: ಇಂಜಿನಿಯರಿಂಗ್ ಓದಿ ಇಂಜಿನಿಯರ್ ಆಗಲು ಹೊರಟಿದ್ದ ಇವರನ್ನು ಸೆಳೆದದ್ದು ನೈಸರ್ಗಿಕ ಕೃಷಿ. ಇಂಜಿನಿಯರ್ ಆಗುವ ಆಸೆ ಕೈ ಬಿಟ್ಟು ಕೃಷಿಯೆಡೆಗೆ ಆಕರ್ಷಿತರಾದ ಮೈಸೂರಿನ ಎಚ್.ಡಿ.ಕೋಟೆ ತಾಲ್ಲೂಕಿನ ರಾಮೇನಹಳ್ಳಿ ಗ್ರಾಮದ ಮಹೇಶ್ ಸಾವಯವ ಕೃಷಿಯಲ್ಲಿ ತೊಡಗಿಕೊಂಡು ಯಶಸ್ಸನ್ನೂ ಪಡೆದಿದ್ದಾರೆ.

35 ವರ್ಷದ ಮಹೇಶ್ ಕಳೆದ 15 ವರ್ಷಗಳಿಂದ ಕೃಷಿಗಾಗಿ ತಮ್ಮನ್ನು ಅರ್ಪಿಸಿಕೊಂಡಿದ್ದಾರೆ. ಹೊಸ ಹೊಸ ಪ್ರಯೋಗಳನ್ನು ಮಾಡುತ್ತಿದ್ದಾರೆ. ತಮಗಿರುವ 20 ಎಕರೆ ಜಮೀನಿನಲ್ಲಿ ಸಮಗ್ರ ಕೃಷಿ ಮೂಲಕ ಯಶಸ್ವಿಯಾಗಿದ್ದಾರೆ. ಕೃಷಿಯೊಂದಿಗೆ ಹೈನುಗಾರಿಕೆ, ಮೀನುಗಾರಿಕೆ ಮತ್ತು ಜೇನು ಸಾಕಣಿಕೆಯನ್ನೂ ನಡೆಸುತ್ತಿದ್ದಾರೆ. ಇವರ ಯಶೋಗಾಥೆಯ ಕುರಿತು ಮುಂದೆ ಓದಿ...

ಚರಂಡಿ ನೀರಲ್ಲಿ ಚಿನ್ನದಂಥ ಬೆಳೆ ತೆಗೆದ ಕೋಲಾರದ ಯುವ ರೈತಚರಂಡಿ ನೀರಲ್ಲಿ ಚಿನ್ನದಂಥ ಬೆಳೆ ತೆಗೆದ ಕೋಲಾರದ ಯುವ ರೈತ

 ಇಂಜಿನಿಯರಿಂಗ್ ಪದವೀಧರನ ಸೆಳೆದ ಕೃಷಿ ಕ್ಷೇತ್ರ

ಇಂಜಿನಿಯರಿಂಗ್ ಪದವೀಧರನ ಸೆಳೆದ ಕೃಷಿ ಕ್ಷೇತ್ರ

ಬಾಲ್ಯದಿಂದಲೇ ಪ್ರಕೃತಿ ಮತ್ತು ಕೃಷಿಯಲ್ಲಿ ವಿಶೇಷ ಆಸಕ್ತಿ ಹೊಂದಿದ್ದ ಮಹೇಶ್, ಇಂಜಿನಿಯರ್ ಆಗಿ ಸಾಧನೆ ಮಾಡಬೇಕೆಂದು ಇಂಜಿನಿಯರಿಂಗ್ ಪದವಿಗೆ ಸೇರ್ಪಡೆಯಾದರು. ಆದರೆ ನಂತರ ಆ ಆಸೆಗಿಂತ, ಕೃಷಿಯೇ ಮೇಲು ಎಂದು ಕೃಷಿಯೆಡೆಗೆ ಆಕರ್ಷಿತರಾದರು. ನೈಸರ್ಗಿಕ ಕೃಷಿ ಆರಂಭಿಸಿದರು. ಆರಂಭದ ದಿನಗಳಲ್ಲಿ ನಿರೀಕ್ಷಿಸಿದ ಆದಾಯ ಗಳಿಸಿಲು ಸಾಧ್ಯವಾಗದಿದ್ದಾಗ, ನಿರಾಸೆಯಾಗದೇ ಕೃಷಿ ಇಲಾಖೆ ಅಧಿಕಾರಿಗಳ ಸಲಹೆ ಮೂಲಕ ಸಮಗ್ರ ಮತ್ತು ಸಾವಯವ ಕೃಷಿ ಕಡೆ ಗಮನ ಹರಿಸಿದರು.

ನೀರಿಲ್ಲದ ನೆಲದಲ್ಲಿ ಸಹಜ ಕೃಷಿಯಿಂದ ಗೆದ್ದ ಕೋಲಾರದ ರೈತನೀರಿಲ್ಲದ ನೆಲದಲ್ಲಿ ಸಹಜ ಕೃಷಿಯಿಂದ ಗೆದ್ದ ಕೋಲಾರದ ರೈತ

 ಜಮೀನಿನಲ್ಲಿ ತೋಟಗಾರಿಕಾ ಬೆಳೆಗಳು

ಜಮೀನಿನಲ್ಲಿ ತೋಟಗಾರಿಕಾ ಬೆಳೆಗಳು

ಜಮೀನಿನಲ್ಲಿ 4 ಎಕರೆಯಲ್ಲಿ 208 ತೆಂಗಿನ ಮರಗಳು, 2 ಎಕರೆಯಲ್ಲಿ ನೇಂದ್ರಬಾಳೆ ಹಣ್ಣು, ಏಲಕ್ಕಿ, ಪಚ್ಚಬಾಳೆ, 1 ಎಕರೆಯಲ್ಲಿ ವೀಳ್ಯದ ಎಲೆ, 50 ಸಪೋಟ ಮರ, 50 ಕ್ಕಿಂತ ಹೆಚ್ಚಿನ ಹಲಸು, ಬೀಟೆಹುಣ್ಣೆ, ಹೆಬ್ಬೇವು ಮತ್ತು ಕಹಿಬೇವು ಮರಗಳು, ರಾಗಿ, ಜೋಳ, ಭತ್ತ, ಶುಂಠಿ, ತರಕಾರಿ, ಹೂ ಸೇರಿದಂತೆ ಮುಂತಾದ ತೋಟಗಾರಿಕೆ ಬೆಳೆಗಳನ್ನು ಬೆಳೆಯಲಾಗುತ್ತಿದೆ. ಕೃಷಿ ಇಲಾಖೆ ವತಿಯಿಂದ 21 ಮೀಟರ್ ಉದ್ದದ 3 ಕೃಷಿ ಹೊಂಡಗಳನ್ನು ನಿರ್ಮಿಸಿ ಮಳೆನೀರನ್ನು ಸಂಗ್ರಹಿಸಿ ಕೃಷಿ ಮಾಡುವ ಜೊತೆಗೆ ಮೀನು ಸಾಕಾಣಿಕೆ ಮಾಡುತ್ತಿದ್ದಾರೆ.

 ಮೀನು ಸಾಕಣಿಕೆಯಿಂದ 10 ಲಕ್ಷ ಲಾಭ

ಮೀನು ಸಾಕಣಿಕೆಯಿಂದ 10 ಲಕ್ಷ ಲಾಭ

20 ಜೇನು ಸಾಕಣಿಕೆ, 12 ಹಸು ಸಾಕಣಿಕೆ ಹಾಗೂ 4 ಎಕರೆಯಲ್ಲಿ ಮೀನು ಸಾಕಾಣಿಕೆಯನ್ನು ಮಹೇಶ್ ಕೈಗೊಂಡಿದ್ದಾರೆ. ಜೊತೆಗೆ 'ಹೊನ್ನೇರು ಮೀನುಮರಿ ಪಾಲನಾ ಕೇಂದ್ರ' ಸ್ಥಾಪಿಸಿ ಎಂಟು ವರ್ಷಗಳಿಂದ ನಡೆಸಿಕೊಂಡು ಬರುತ್ತಿದ್ದಾರೆ. ಮೀನುಗಾರಿಕೆ ಇಲಾಖೆ ವತಿಯಿಂದ ಕಬಿನಿಯಲ್ಲಿ ಮೀನು ಮರಿಗಳನ್ನು ಖರೀದಿಸಿ ಅವುಗಳನ್ನು ಬೆಳೆಸಿ ಮಾರಾಟ ಮಾಡುತ್ತಾರೆ. ಇಲ್ಲಿ ಕಾಟ್ಲಾ, ರೇವು, ಹುಲ್ಲುಗೆಂಡೆ, ಬ್ರಿಗಲ್, ಸಮಂತಗೆಂಡೆ ಹಾಗೂ ಮುಂತಾದ ಮೀನು ಸಾಕಿ ಮಾರಾಟ ಮಾಡುತ್ತಿದ್ದಾರೆ. ಇದರಿಂದ ಇಲ್ಲಿಯವರೆಗೆ 10 ಲಕ್ಷದವರೆಗೆ ಆದಾಯ ಗಳಿಸಿದ್ದಾರೆ.

"ಡ್ರೈ ಬನಾನ"; ಬಾಳೆ ಉಳಿಸಿಕೊಳ್ಳಲು ಬಳ್ಳಾರಿ ರೈತನ ವಿನೂತನ ಪ್ರಯೋಗ

 ಇಲಿ, ಕಪ್ಪೆ ಕಾಟಕ್ಕೆ ಮಹೇಶ್ ಹೊಸ ತಂತ್ರ

ಇಲಿ, ಕಪ್ಪೆ ಕಾಟಕ್ಕೆ ಮಹೇಶ್ ಹೊಸ ತಂತ್ರ

ಕೃಷಿ ಸಮಸ್ಯೆಗೆ ನೈಸರ್ಗಿಕ ಪರಿಹಾರ ಹುಡುಕುವ ಮಹೇಶ್, ನೈಸರ್ಗಿಕ ಗೊಬ್ಬರಸುವ ಮೂಲಕ ನೈಸರ್ಗಿಕವಾಗಿ ಪರಿಹಾರ ಕಂಡುಕೊಳ್ಳುತ್ತಾರೆ. ಇಲಿಗಳು ಬೆಳೆಗಳನ್ನು ನಾಶ ಮಾಡುವುದನ್ನು ಹಾಗೂ ಮೀನುಗಳನ್ನು ಕಪ್ಪೆಗಳು ತಿನ್ನುವುದನ್ನು ತಡೆಗಟ್ಟಲು ಹೊಲದಲ್ಲಿ ಮತ್ತು ಮೀನು ಸಾಕಣಿಕೆ ತೋಟಿಗೆ ತಾವೇ ಹಿಡಿದ ಹಾವುಗಳನ್ನು ಬಿಟ್ಟಿದ್ದಾರೆ. ಈ ಮೂಲಕ ಬೆಳೆ ರಕ್ಷಣೆ ಮಾಡುತ್ತಿದ್ದಾರೆ. ಇದುವರೆಗೂ ಒಟ್ಟು 200 ಹಾವುಗಳನ್ನು ಹಿಡಿದು ತಮ್ಮ ಜಮೀನಿನಲ್ಲಿ ಬಿಟ್ಟುಕೊಂಡು ತಾವು ಬೆಳೆದ ಬೆಳೆಗಳನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

"12 ವರ್ಷಗಳಿಂದಲೂ ರಾಸಾಯನಿಕ ಗೊಬ್ಬರ ಬಳಸಿಲ್ಲ"

''ಪಕ್ಷಿಗಳಿಂದ ಬೆಳೆ ರಕ್ಷಿಸಿಕೊಳ್ಳಲು ಜಮೀನಿನಲ್ಲಿ ಆಲದ ಮರ ಮತ್ತು ಚೇರಿಮರಗಳನ್ನು ಬೆಳೆಸಿದ್ದಾರೆ. "ಯಾವುದೇ ಬೆಳೆ ಬೆಳೆಯುವ ಮೊದಲೇ ಬೆಳೆಯ ಸಂಪೂರ್ಣ ಮಾಹಿತಿ ತಿಳಿದುಕೊಳ್ಳುತ್ತೇನೆ. ಇದಕ್ಕಾಗಿ ನಿತ್ಯ 4 ಗಂಟೆಗಳ ಕಾಲ ಅಧ್ಯಯನ ಮಾಡುತ್ತೇನೆ. ರಾಸಾಯನಿಕ ಗೊಬ್ಬರ ಹಾಕದೆ ಮಣ್ಣಿನ ಫಲವತ್ತತೆ ಹೆಚ್ಚಿಸಲು ಪ್ರಯತ್ನಿಸುತ್ತೇನೆ. ಹಸು ಸಗಣಿ, ಕೋಳಿ ಮತ್ತು ಮೀನು ಸಾಕಣಿಕೆಯಿಂದ ದೊರೆಯುವ ತ್ಯಾಜ್ಯದಿಂದ ಗೊಬ್ಬರ ತಯಾರಿಸುತ್ತೇನೆ. ಕಳೆದ 12 ವರ್ಷಗಳಿಂದಲೂ ಯಾವುದೇ ರಾಸಾಯನಿಕ ಗೊಬ್ಬರ ಸಿಂಪಡಿಸಿಲ್ಲ'' ಎನ್ನುತ್ತಾರೆ ಮಹೇಶ್.

 ಯುವಕರಿಗೆ ಸ್ಫೂರ್ತಿಯಾಗಿರುವ ಮಹೇಶ್

ಯುವಕರಿಗೆ ಸ್ಫೂರ್ತಿಯಾಗಿರುವ ಮಹೇಶ್

ಸತತ ಐದು ವರ್ಷಗಳಿಂದಲೂ ಸಾವಯವ ಕೃಷಿಯಲ್ಲಿ ಉತ್ತಮ ಇಳುವರಿ ಪಡೆಯುತ್ತಿರುವುದನ್ನು ಗುರುತಿಸಿದ ಸ್ವಾಮಿ ವಿವೇಕಾನಂದ ಯೂತ್ ಮೂವ್ ಮೆಂಟ್ ಸಂಸ್ಥೆಯು ಮಹೇಶ್ ಅವರಿಗೆ 'ಯುವ ಕೃಷಿಕ' ಎಂದು ಪ್ರಶಸ್ತಿ ನೀಡಿ ಗೌರವಿಸಿದೆ. 2014 ಮತ್ತು 2019ರ ರೈತ ದಸರಾದಲ್ಲಿ ಉತ್ತಮ ಕೃಷಿಕ ಪ್ರಶಸ್ತಿ ಪಡೆದಿದ್ದಾರೆ. ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ 'ಉತ್ಸಾಹಿ ಯುವ ಕೃಷಿಕ' ಎಂದು ಗೌರವಿಸಲಾಗಿದೆ. ಜನಧ್ವನಿ ಬಾನುಲಿ ಕೇಂದ್ರ ಸೇರಿದಂತೆ ಅನೇಕ ಸಂಘ-ಸಂಸ್ಥೆಗಳು ಇವರ ಸಾಧನೆ ಗುರುತಿಸಿ ಸನ್ಮಾನಿಸಿವೆ.
''ಏಕಬೆಳೆ ಪದ್ಧತಿ ತ್ಯಜಿಸಿ ಬಹುಬೆಳೆ ಮತ್ತು ಮಿಶ್ರಬೆಳೆ ಪದ್ಧತಿಯಿಂದ ಲಾಭ ಗಳಿಸಬಹುದು. ಸಾವಯವ ಕೃಷಿ ಪದ್ಧತಿ ಅನುಸರಿಸುವುದರಿಂದ ಯಾವ ರೈತನೂ ಯಾವುದೇ ಕಾರಣಕ್ಕೂ ಆತ್ಮಹತ್ಯೆಯ ದಾರಿ ತುಳಿಯುವುದಿಲ್ಲ. ಇದಕ್ಕೆ ನಾನೇ ಉದಾಹರಣೆ'. ಜೊತೆಗೆ ಬೆಲೆ ಆಧಾರಿತ ಬೆಳೆಗಳು ಮತ್ತು ಕುಟುಂಬ ನಿರ್ವಹಣೆಗೆ ಬೇಕಾಗುವ ಬೆಳೆ ಬೆಳೆದು ಮೌಲ್ಯವರ್ಧಿತ ಬೆಲೆಗೆ ಮಾರಾಟ ಮಾಡಬೇಕು'' ಎಂದು ಸಲಹೆ ನೀಡುತ್ತಾರೆ ಮಹೇಶ್. ಹೆಚ್ಚಿನ ಮಾಹಿತಿಗೆ: 9845748514 ಸಂಪರ್ಕಿಸಿ.

English summary
Mahesh of Ramanahalli village in Mysuru succeeded in organic farming. He has studied engineering but attracted towards agriculture field. Here is his success story,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X