• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಮಿಶ್ರಬೆಳೆಯಲ್ಲಿ ಯಶಸ್ಸು ಸಾಧಿಸಿ ತೋರಿಸಿದ ಲಕ್ಷ್ಮೀದೇವಮ್ಮ

|

ಮಂಡ್ಯ, ಫೆಬ್ರವರಿ 14: ಹೆಚ್ಚಿನ ರೈತರು ತಮ್ಮ ಜಮೀನಿನಲ್ಲಿ ಹಿರಿಯರು ಮಾಡಿಕೊಂಡು ಬಂದ ಕೃಷಿಯನ್ನೇ ಮುಂದುವರೆಸುವ ಮೂಲಕ ಒಂದೇ ಬೆಳೆಗೆ ಜೋತುಬಿದ್ದು ನಷ್ಟ ಮಾಡಿಕೊಳ್ಳುತ್ತಿದ್ದಾರೆ.

ಮಂಡ್ಯ ಜಿಲ್ಲೆಯ ಕೆ. ಆರ್. ಪೇಟೆ ತಾಲೂಕಿನ ಹೊಸಕೋಟೆ ಗ್ರಾಮದ ರೈತ ಮಹಿಳೆ ಲಕ್ಷ್ಮೀದೇವಮ್ಮ ಮಿಶ್ರ ಬೆಳೆ ಬೆಳೆದು ಗಮನ ಸೆಳೆದಿದ್ದಾರೆ. ಇವರ ಕೃಷಿ ಕ್ರಮ ನೋಡಿದ ರೈತರು ಬೆರಗಾಗುತ್ತಿದ್ದಾರೆ. ಅವರ ಜಮೀನು ಹಲವು ಬೆಳೆಗಳ ಕಣಜವಾಗಿ ಮಾರ್ಪಾಡುಗೊಂಡಿದೆ.

ಕೊಪ್ಪಳ ರೈತನ ಸಾಧನೆ; ಪಪ್ಪಾಯ ಬೆಳೆದು ಒಳ್ಳೆಯ ಆದಾಯ!

ಲಕ್ಷ್ಮೀದೇವಮ್ಮ ಅವರ ಜಮೀನಿಗೆ ಕಾಲಿಟ್ಟರೆ ಹತ್ತು ಎಕರೆ ವಿಸ್ತಾರದಲ್ಲಿ ಬೆಳೆದಿರುವ ಬೆಳೆಗಳು ಅವರ ಯಶೋಗಾಥೆಯನ್ನು ಸಾರುತ್ತಿವೆ. ಅಡಿಕೆ, ತೆಂಗು, ಬಾಳೆ, ಹಿಪ್ಪುನೇರಳೆ, ಪಪ್ಪಾಯ, ಸೀಬೆ, ಚಕ್ಕೆ, ಲವಂಗ, ಜಾಯಿಕಾಯಿ, ಪತ್ರೆ, ಏಲಕ್ಕಿ ಹಾಗೂ ಮೆಕ್ಕೆಜೋಳ ಹಣ್ಣು-ತರಕಾರಿಗಳನ್ನು ಬೆಳೆಯುವುದರೊಂದಿಗೆ ಹೈನುಗಾರಿಕೆಯನ್ನು ಮಾಡುತ್ತಿದ್ದಾರೆ.

ಕೋಲಾರ: 'ರೈತರೊಂದಿಗೆ ಒಂದು ದಿನ' ಕಾರ್ಯಕ್ರಮದಲ್ಲಿ ಕೃಷಿ ಸಚಿವ ಬಿ.ಸಿ ಪಾಟೀಲ್

ಕೃಷಿ ಸಚಿವ ಬಿ. ಸಿ. ಪಾಟೀಲ್ ಮತ್ತು ಜಿಲ್ಲಾ ಉಸ್ತುವಾರಿ ಸಚಿವರಾದ ನಾರಾಯಣಗೌಡ ಅವರು ಸಹ ಲಕ್ಷ್ಮೀದೇವಮ್ಮ ಜಮೀನಿಗೆ ತೆರಳಿ ಕೃಷಿ ವಿಧಾನವನ್ನು ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಕೃಷಿಯೊಂದಿಗೆ ಹೈನುಗಾರಿಕೆಗೂ ಒತ್ತು

ಕೃಷಿಯೊಂದಿಗೆ ಹೈನುಗಾರಿಕೆಗೂ ಒತ್ತು

ಲಕ್ಷ್ಮೀದೇವಮ್ಮ ಅವರು ಕೃಷಿಯಲ್ಲಿ ಸುಭಾಷ್ ಪಾಳೇಗಾರ್ ಅವರ ಸಾವಯವ ಕೃಷಿ ಪದ್ಧತಿಯನ್ನು ಅಳವಡಿಸಿಕೊಂಡಿದ್ದಾರೆ. ಕೃಷಿ ಜತೆಗೆ ಹೈನುಗಾರಿಕೆಗೆ ಒತ್ತು ನೀಡಿರುವ ಅವರು ಉತ್ತಮ ತಳಿಯ ಸೀಮೆ ಹಸು ಹಾಗೂ ನಾಡ ಹಸುಗಳನ್ನು ಸಾಕಿದ್ದು, ದಿನಕ್ಕೆ ನೂರಾರು ಲೀಟರ್ ಹಾಲನ್ನು ಪಡೆಯುತ್ತಿದ್ದಾರೆ. ಹಾಲನ್ನು ಮಾರಾಟ ಮಾಡಿದರೆ ಹಸುವಿನ ಸೆಗಣಿ ಮತ್ತು ಗಂಜಲವನ್ನು ಜಮೀನಿಗೆ ಗೊಬ್ಬರವಾಗಿ ಬಳಸಿಕೊಳ್ಳುತ್ತಿದ್ದಾರೆ. ಮನೆ ಬಳಕೆಗೆ ಬೇಕಾದ ಗ್ಯಾಸ್ ಕೂಡ ಸೆಗಣಿಯಿಂದಲೇ ಉತ್ಪತ್ತಿಯಾಗುತ್ತದೆ.

ಗಂಜಲ, ಸೆಗಣಿಯೇ ಬೆಳೆಗೆ ಜೀವಾಮೃತ

ಗಂಜಲ, ಸೆಗಣಿಯೇ ಬೆಳೆಗೆ ಜೀವಾಮೃತ

ಹಸುವಿನೊಂದಿಗೆ ಕೋಳಿ ಕುರಿಯನ್ನು ಕೂಡ ಸಾಕಣೆ ಮಾಡುತ್ತಿದ್ದಾರೆ. ಕೃಷಿ ಕಾರ್ಯಕ್ಕೆ ಬೇಕಾದ ಸಲಹೆಗಳನ್ನು ತಪ್ಪದೆ ಕೃಷಿ ತಜ್ಞರಿಂದ ಪಡೆದುಕೊಳ್ಳುತ್ತಿದ್ದಾರೆ. ಜಮೀನಿನಲ್ಲಿ ಮಣ್ಣಿನ ಫಲವತ್ತತೆ ಕಾಪಾಡುವ ನಿಟ್ಟಿನಲ್ಲಿ ಸಾವಯವ ಕೃಷಿಗೆ ಒತ್ತು ನೀಡುತ್ತಿದ್ದಾರೆ. ಹಸುವಿಗೆ ಮೇವಾಗಿ ಆಜೋಲವನ್ನು ಬೆಳೆಯುತ್ತಿದ್ದಾರೆ. ಕ್ರಿಮಿನಾಶಕ ಸಿಂಪಡಣೆ ಮಾಡುವ ಬದಲು ದನಗಳ ಗಂಜಲ ಮತ್ತು ಸೆಗಣಿಯನ್ನು ಬಳಸಿಕೊಂಡು ಜೀವಾಮೃತ ತಯಾರಿಸಿ ಸಿಂಪಡಣೆ ಮಾಡುವ ಮೂಲಕ ಬೆಳೆಗಳನ್ನು ಕೀಟ ಹಾಗೂ ರೋಗಗಳಿಂದ ರಕ್ಷಿಸಿಕೊಳ್ಳುತ್ತಿದ್ದಾರೆ.

ಕೃಷಿಗೆ ಆಧುನಿಕ ಯಂತ್ರಗಳ ಬಳಕೆ

ಕೃಷಿಗೆ ಆಧುನಿಕ ಯಂತ್ರಗಳ ಬಳಕೆ

ಇನ್ನು ಸಂಪ್ರದಾಯ ಕೃಷಿ ಜತೆಗೆ ಆಧುನಿಕ ಕೃಷಿ ಕಡೆಗೂ ಒಲವು ತೋರಿರುವ ಅವರು ಆಧುನಿಕ ಯಂತ್ರಗಳನ್ನು ಬಳಸಿ ಕೃಷಿ ಮಾಡುತ್ತಿದ್ದಾರೆ. ಇದರಿಂದ ಕೂಲಿ ಖರ್ಚಿನ ವೆಚ್ಛವನ್ನು ತಗ್ಗಿಸಿದ್ದಾರೆ. ಬೇಸಾಯವೆಂದರೆ ಗ್ರಾಮೀಣ ಪ್ರದೇಶದಲ್ಲಿ ನೀ ಸಾಯ, ನಾ ಸಾಯ ಎಂಬ ಮಾತಿದೆ. ಆದರೆ ಶ್ರಮಪಟ್ಟು ದುಡಿಯುವುದರೊಂದಿಗೆ ಜತೆಗೆ ಮಿಶ್ರ ಕೃಷಿ ಮಾಡುವ ಮೂಲಕ ಆ ಮಾತನ್ನು ಸುಳ್ಳಾಗಿಸಿದ್ದಾರೆ. ಅಷ್ಟೇ ಅಲ್ಲದೆ ಕೃಷಿ ಸಹವಾಸವೇ ಬೇಡವೆಂದು ಕೈಚೆಲ್ಲಿ ಕುಳಿತವರಿಗೆ ಭೂಮಿ ತಾಯಿಯನ್ನು ನಂಬಿದರೆ ಯಾವತ್ತೂ ಆಕೆ ಕೈಬಿಡುವುದಿಲ್ಲ ಎಂಬುದನ್ನು ತೋರಿಸಿಕೊಟ್ಟಿದ್ದಾರೆ.

ನೂರಾರು ಕೃಷಿಕರಿಗೆ ಮಾರ್ಗದರ್ಶನ

ನೂರಾರು ಕೃಷಿಕರಿಗೆ ಮಾರ್ಗದರ್ಶನ

ರೈತರು ಸಾಮಾನ್ಯವಾಗಿ ಭತ್ತ ಮತ್ತು ಕಬ್ಬನ್ನು ಹೊರತುಪಡಿಸಿದರೆ ಬೇರೆ ಯಾವುದೇ ಬೆಳೆ ಬೆಳೆಯಲು ಹಿಂದೇಟು ಹಾಕುತ್ತಾರೆ. ಹೀಗಿರುವಾಗ ಧೈರ್ಯ ಮಾಡಿ ಮಿಶ್ರವಾಗಿ ವಾಣಿಜ್ಯ ಬೆಳೆಯನ್ನು ಬೆಳೆಯುವ ಮೂಲಕ ಇತರೆ ರೈತರಿಗೆ ಯಶಸ್ಸಿನ ಮಾರ್ಗವನ್ನು ತೋರಿಸಿಕೊಟ್ಟಿದ್ದಾರೆ. ಕೃಷಿಯಲ್ಲಿ ಸಾಧನೆಯನ್ನು ಮಾಡಿರುವ ಅವರನ್ನು ಹಲವು ರೈತರು ಹುಡುಕಿಕೊಂಡು ಬರುತ್ತಿದ್ದು ಮಾರ್ಗದರ್ಶನ ಪಡೆದುಕೊಂಡು ತೆರಳುತ್ತಿದ್ದಾರೆ. ಇವರ ಸಾಧನೆಯನ್ನು ತಿಳಿದ ಕೃಷಿಸಚಿವ ಬಿ. ಸಿ. ಪಾಟೀಲ್ ಮತ್ತು ಜಿಲ್ಲಾ ಉಸ್ತುವಾರಿ ಸಚಿವರಾದ ನಾರಾಯಣಗೌಡ ಅವರು ಜಮೀನಿಗೆ ತೆರಳಿ ಕೃಷಿ ವಿಧಾನವನ್ನು ನೋಡಿ ಮೆಚ್ಚುಗೆ ವ್ಯಕ್ತಪಡಿಸಿರುವುದು ವಿಶೇಷವಾಗಿದೆ.

English summary
Mandya district K. R.Pete farmer Lakshmi Devamma model for others. Lakshmi Devamma adopted Subhash Palekar natural farming policy.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X