ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಈರುಳ್ಳಿ ಬೆಳೆಗಾರರಿಗೆ ತೋಟಗಾರಿಕೆ ಇಲಾಖೆಯಿಂದ ಸಲಹೆಗಳು

|
Google Oneindia Kannada News

ಕೊಪ್ಪಳ ತೋಟಗಾರಿಕೆ ಇಲಾಖೆ ವತಿಯಿಂದ ಜಿಲ್ಲೆಯ ಈರುಳ್ಳಿ ಬೆಳೆಗಾರರಿಗೆ ಸಲಹೆಗಳನ್ನು ನೀಡಲಾಗಿದೆ.

ಜಿಲ್ಲೆಯಲ್ಲಿ ಕೊಪ್ಪಳ ಹಾಗೂ ಯಲಬುರ್ಗಾ ತಾಲ್ಲೂಕುಗಳ ಎರೆ ಭೂಮಿ ಅಲ್ಲದೇ ಮಸಾರಿ ಭೂಮಿಯಲ್ಲೂ ಈರುಳ್ಳಿಯನ್ನು ಬೆಳೆಯಲಾಗುತ್ತಿದೆ. ಏಕ ಬೆಳೆಯಾಗಿ ಅಲ್ಲದೇ ಮೆಣಸಿನಕಾಯಿ ಜೊತೆಗೆ ಮಿಶ್ರ ಬೆಳೆಯಾಗಿ ಸುಮಾರು 20000 ಕ್ಕೂ ಹೆಚ್ಚಿನ ಎಕರೆ ವಿಸ್ತೀರ್ಣದಲ್ಲಿ ಬೆಳೆಯಾಗುತ್ತಿದೆ.

ಚಿನ್ನದಿಂದಲ್ಲ, ಈರುಳ್ಳಿಯಿಂದ 90 ಲಕ್ಷ ಆದಾಯ ಗಳಿಸಿದ ರೈತ.!ಚಿನ್ನದಿಂದಲ್ಲ, ಈರುಳ್ಳಿಯಿಂದ 90 ಲಕ್ಷ ಆದಾಯ ಗಳಿಸಿದ ರೈತ.!

ಭೀಮಾ ಸೂಪರ್, ಅರ್ಕಾ ಕಲ್ಯಾಣ, ಅಗ್ರಿ ಫೌಂಡೇಶನ್‌ನ ಕೆಂಪು ತಳಿಗಳಲ್ಲದೇ ಅನೇಕ ಖಾಸಗಿ ಕಂಪನಿಗಳ ತಳಿಗಳನ್ನು ಬೆಳೆಯಲಾಗುತ್ತಿದೆ. ಆದರೆ ಅವೈಜ್ಞಾನಿಕ ಬೇಸಾಯ ಕ್ರಮಗಳು ಮತ್ತು ಅಕಾಲಿಕ ಮಳೆ, ವಾಡಿಕೆಗಿಂತ ಹೆಚ್ಚಿನ ಮಳೆ ಮತ್ತು ಮೋಡ ಕವಿದ ವಾತಾವರಣದಿಂದಾಗಿ ರೋಗ ಅಥವಾ ಕೀಟಗಳು ಹೆಚ್ಚಾಗಿ ರೈತರು ನಷ್ಟ ಅನುಭವಿಸುತ್ತಿದ್ದಾರೆ.

Koppal Horticulture Department suggestion to Onion Growers

ಪ್ರಸ್ತುತ ಹಂಗಾಮಿನಲ್ಲಿ ರೈತರು ಬಿತ್ತಿದ ಈರುಳ್ಳಿ ಬೆಳೆ ವಿವಿಧ ಹಂತಗಳಿದ್ದು, ಅನೇಕ ರೋಗ-ಕೀಟಗಳಿಗೆ ತುತ್ತಾಗಿ ರೈತರು ಸಂಕಷ್ಟದಲ್ಲಿದ್ದಾರೆ. ತೋಟಗಾರಿಕೆ ಇಲಾಖೆ ಅಧಿಕಾರಿಗಳು, ಹಾರ್ಟಿಕ್ಲಿನಿಕ್ ವಿಷಯತಜ್ಞರು ಮತ್ತು ತೋಟಗಾರಿಕೆ ಮಹಾವಿದ್ಯಾಲಯ ಮುನಿರಾಬಾದ್‌ನ ವಿಜ್ಞಾನಿಗಳು ಅಳವಂಡಿ ಹೋಬಳಿಯ ವಿವಿಧ ತಾಕಗಳಿಗೆ ಭೇಟಿ ನೀಡಿ ಪರಿಶೀಲಿಸಿದರಲ್ಲದೇ ಇತ್ತೀಚೆಗೆ ಆಯೋಜಿಸಿದ ತೋಟಗಾರಿಕೆ ಅಧಿಕಾರಿಗಳೊಂದಿಗಿನ ಕಾರ್ಯಾಗಾರದಲ್ಲಿ ತೋಟಗಾರಿಕೆ ಕಾಲೇಜು ಮುನಿರಾಬಾದ ವಿಜ್ಞಾನಿಗಳೊಂದಿಗೆ ಚರ್ಚಿಸಿ ಸಸ್ಯ ಸಂರಕ್ಷಣಾ ಕುರಿತು ಸಲಹೆಗಳನ್ನು ನೀಡಿರುತ್ತಾರೆ.

ಸಸ್ಯ ಸಂರಕ್ಷಣಾ ಸಲಹೆಗಳು;
ಸ್ಥಳೀಯ ಅಥವಾ ಬಿಡಿ ಬೀಜಗಳನ್ನು ಉಪಯೋಗಿಸಬಾರದು. ಭಾರತೀಯ ತೋಟಗಾರಿಕೆ ಸಂಶೋಧನಾ ಸಂಸ್ಥೆ ಅಭಿವೃದ್ಧಿ ಪಡಿಸಿದ ತಳಿಗಳು ಅಥವಾ ಉತ್ತಮ ಕಂಪನಿಯ ಸಂಕರಣ ತಳಿಗಳನ್ನು ಉಪಯೋಗಿಸಬೇಕು. ಸಸಿಗಳನ್ನು ಬೆಳೆಸಿ ನಾಟಿ ಮಾಡುವುದು ಅತೀ ಸೂಕ್ತ, ಇದರಿಂದ ಬಿತ್ತನೆ ಬೀಜದ ಪ್ರಮಾಣವು ಕಡಿಮೆ ಆಗುತ್ತದೆ. ತಜ್ಞರ ಸಲಹೆಯಂತೆ ನೀರು, ಪೋಷಕಾಂಶಗಳ ನಿರ್ವಹಣೆ ಮಾಡಬೇಕು ಮತ್ತು ಕಳೆನಾಶಕ ಉಪಯೋಗಿಸುವಾಗ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಬೇಕು.

Koppal Horticulture Department suggestion to Onion Growers

ಹೊಲವನ್ನು ಕಸಮುಕ್ತವಾಗಿಡಬೇಕು ಅಲ್ಲದೇ ಶಿಫಾರಿತ ಪ್ರಮಾಣದ ರಾಸಾಯನಿಕ ಗೊಬ್ಬರಗಳ ಬಳಕೆ ಮತ್ತು ಲಘು ಪೋಷಕಾಂಶಗಳ ಬಳಕೆ ಮಾಡುವುದು. ಅರ್ಕಾ ತರಕಾರಿ ಸ್ಪೆಷಲ್ 2 ರಿಂದ 3 ಬಾರಿ ಸಿಂಪರಣೆ ಮಾಡುವುದು.

ಈಗ ಬಹುತೇಕ ಕಡೆ ಥ್ರಿಪ್ಸನುಸಿ, ಬೂಜುತುಪ್ಪಟ ರೋಗ ಹಾಗೂ ನೇರಳೆ ಮಚ್ಛೆ ರೋಗ ಅಲ್ಲದೇ ಬೋರಾನ್, ಸತುವಿನಂತಹ ಲಘು ಪೋಷಕಾಂಶಗಳ ಕೊರತೆ ಕಂಡು ಬಂದು ಬೆಳೆ ಹಾಳಾಗುತ್ತಿದೆ. ತಜ್ಞರ ಸಲಹೆಯಂತೆ ಪೋಷಕಾಂಶಗಳ ನಿರ್ವಹಣೆ ಅತಿವಶ್ಯಕ. ಇದಲ್ಲದೇ ಈಗ ಬೆಳೆಯಲ್ಲಿ ಕಂಡು ಬಂದಿರುವ ಕೀಟ ಹಾಗೂ ರೋಗಗಳ ಹತೋಟಿಗೆ ಈ ಕೆಳಗಿನ ಸಿಂಪರಣೆಗಳನ್ನು ಕೈಗೊಳ್ಳಬೇಕು.

ಇದಕ್ಕಾಗಿ ವಿಜ್ಞಾನಿಗಳ ಸಲಹೆಯಂತೆ ಮೊದಲನೇಯದಾಗಿ ಪ್ರೊಫಿನೋಫಾನ್ 50 ಇ.ಸಿ. 2 ಮೀ.ಲೀ. ಜೊತೆಗೆ ಮ್ಯಾಂಕೋಜೇಬ್ 45 ಶಿಲೀಂಧ್ರನಾಶಕವನ್ನು 2 ಗ್ರಾಂ. 1 ಲೀ. ನೀರಿಗೆ ಬೆರೆಸಿ ಸಿಂಪಡಿಸಬೇಕು. ಬೋರಾನ ಎನ್ನುವ ಲಘು ಪೋಷಕಾಂಶವನ್ನು 1 ಗ್ರಾಂ. 1 ಲೀ. ನೀರಿಗೆ ಬೆರೆಸಿ ಸಿಂಪಡಿಸಬೇಕು. ಥ್ರಿಪ್ಸ್ ನುಸಿ ಹತೋಟಿಗಾಗಿ ಫಿಪ್ರೋನಿಲ್ 1 ಮಿ.ಲೀ. 1 ಲೀ. ನೀರಿಗೆ ಬೆರೆಸಿ ಸಿಂಪಡಿಸಬೇಕು.

Koppal Horticulture Department suggestion to Onion Growers

ಬೂಜುತುಪ್ಪಟ ರೋಗ ಇದ್ದಲ್ಲಿ ಟೆಬುಕೋನಾಜೋಲ 43 ಎಸ್.ಸಿ. 1 ಮೀ.ಲೀ. 1 ಲೀ. ನೀರಿಗೆ ಬೆರೆಸಿ ಸಿಂಪಡಿಸಬೇಕು. ಈರುಳ್ಳಿ ಬೆಳೆಯಲ್ಲಿ ಬರುವ ಅಂತ್ರಕ್ನೋಸ್ ಅಥವಾ ಚಿಬ್ಬು ರೋಗ ನಿರ್ವಹಣೆಗಾಗಿ ಡೈಫೆನಕೊನಾಜೋಲ್ 1 ಮಿ.ಲೀ. 1 ಲೀ. ನೀರಿಗೆ ಬೆರೆಸಿ ಸಿಂಪಡಿಸಬೇಕು.

ಇದಲ್ಲದೇ ಸಂಯುಕ್ತ ಶಿಲೀಂದ್ರನಾಶಕವಾದ ಟೆಬುಕೋನಾಜೋಲ + ಟ್ರೆಂಫ್ಲಾಕ್ಸಿಸ್ಟಾರ್ಬಿನ್(ನೆಟಿವೊ) ನ್ನು 0.50 ಗ್ರಾಂ. 1 ಲೀ. ನೀರಿಗೆ ಬೆರೆಸಿ ಪರ್ಯಾಯವಾಗಿ ಸಿಂಪಡಿಸಬೇಕು.

ನೇರಳೆ ಮಚ್ಛೆ ರೋಗ ಹಾಗೂ ತಿರುಗಣೆ ರೋಗದ ನಿರ್ವಹಣೆಗಾಗಿ ಕ್ಯಾಪ್ಟನ್ + ಹೆಕ್ಸಾಕೋನಾಜೋಲ್ 2 ಗ್ರಾಂ. ಅಥವಾ ಮ್ಯಾಂಕೋಜೇಬ್ + ಟ್ರೆಂಸೈಕ್ಲಜೋಲ್ 2 ಗ್ರಾಂ. 1 ಲೀ. ನೀರಿಗೆ ಬೆರೆಸಿ ಸಿಂಪಡಿಸಬೇಕು.

Koppal Horticulture Department suggestion to Onion Growers

ಹೆಚ್ಚಿನ ಮಾಹಿತಿಗಾಗಿ ತೋಟಗಾರಿಕೆ ಉಪನಿರ್ದೇಶಕರ ಕಛೇರಿ, ಜಿ.ಪಂ., ಕೊಪ್ಪಳ-08539-231530 ಹಾಗೂ ಆಯಾ ತಾಲ್ಲೂಕ ಕಛೇರಿಗಳನ್ನು ಅಥವಾ ಹಾರ್ಟಿಕ್ಲಿನಿಕ್ ವಿಷಯ ತಜ್ಞರನ್ನು (ಮೊ. ಸಂ.9482672039) ಸಂಪರ್ಕಿಸಬಹುದಾಗಿದೆ.

ಅಲ್ಲದೇ, ಮುನಿರಾಬಾದ ತೋಟಗಾರಿಕೆ ಮಹಾವಿದ್ಯಾಲಯದ ಸಸ್ಯ ರೋಗ ವಿಜ್ಞಾನಿ ಡಾ. ರಾಘವೇಂದ್ರ ಆಚಾರಿ (ಮೊ.ಸಂ. 9448876730), ಇವರನ್ನು ಸಂಪರ್ಕಿಸಬಹುದು ಎಂದು ಕೊಪ್ಪಳ ತೋಟಗಾರಿಕೆ ಇಲಾಖೆ ಪ್ರಕಟಣೆ ತಿಳಿಸಿದೆ.

English summary
Koppal Horticulture Department has released suggestions and tips to district Onion Growers.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X