ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಒಂದು ಜಿಲ್ಲೆ, ಒಂದು ಉತ್ಪನ್ನ: ಉತ್ತರ ಕನ್ನಡದ ಸಾಂಬಾರು ಪದಾರ್ಥಕ್ಕಿದೆ ಜಗತ್ತಿನಾದ್ಯಂತ ಬೇಡಿಕೆ

|
Google Oneindia Kannada News

ಕಾರವಾರ, ಜನವರಿ 7: ಕೇಂದ್ರ ಸರ್ಕಾರದ 'ಆತ್ಮ ನಿರ್ಭರ ಭಾರತ'ದ ಭಾಗವಾದ 'ಒಂದು ಜಿಲ್ಲೆ, ಒಂದು ಉತ್ಪನ್ನ' ಕಾರ್ಯಕ್ರಮದ ಅಡಿ ಉತ್ತರ ಕನ್ನಡ ಜಿಲ್ಲೆಯಿಂದ ಸಾಂಬಾರು ಪದಾರ್ಥಗಳನ್ನು ಗುರುತಿಸಲಾಗಿದೆ. ಜಿಲ್ಲೆಯಲ್ಲಿ ಅತಿ ಹೆಚ್ಚು ಸಾಂಬಾರು ಪದಾರ್ಥಗಳನ್ನು ಬೆಳೆಯುವ ಕಾರಣದಿಂದಾಗಿ ಇದನ್ನೇ ಆಯ್ಕೆ ಮಾಡಲಾಗಿದೆ.

'ಒಂದು ಜಿಲ್ಲೆ, ಒಂದು ಉತ್ಪನ್ನ' ಈ ಕಾರ್ಯಕ್ರಮವು ಪ್ರಧಾನಮಂತ್ರಿ ಕಿರು ಆಹಾರ ಸಂಸ್ಕರಣ ಉದ್ದಿಮೆ ನಿಯಮ ಬದ್ಧಗೊಳಿಸುವಿಕೆ ಯೋಜನೆ (ಪಿಎಂಎಫ್‌ಎಂಇ)ಯಡಿ ಅನುಷ್ಠಾನಗೊಳ್ಳಲಿದೆ. ಈ ಕಾರ್ಯಕ್ರಮದ ಅನ್ವಯ ಪ್ರತಿ ಜಿಲ್ಲೆಯಲ್ಲೂ ಒಂದೊಂದು ಪ್ರಧಾನ ಬೆಳೆಯನ್ನು ಆಯ್ದು, ಅದಕ್ಕೆ ಹೆಚ್ಚಿನ ಒತ್ತನ್ನು ನೀಡಲಾಗುತ್ತದೆ. ಆ ಬೆಳೆಯನ್ನು ಬೆಳೆಯುವ ಬೆಳೆಗಾರರಿಗೆ ಹೆಚ್ಚಿನ ಸೌಲಭ್ಯಗಳನ್ನು ನೀಡಿ, ಇನ್ನಷ್ಟು ಉತ್ತೇಜನ ನೀಡಲಾಗುತ್ತದೆ. ಆ ಬೆಳೆಯನ್ನಾಧರಿಸಿ ಉದ್ಯಮ ಮಾಡುವವರಿಗೆ ಸಾಲ ಸೌಲಭ್ಯ ಸೇರಿದಂತೆ ಇನ್ನಿತರ ಮೂಲ ಸೌಕರ್ಯಗಳ ವ್ಯವಸ್ಥೆ ಮಾಡಿಕೊಡಲು ಸರ್ಕಾರ ಮುಂದಾಗಲಿದೆ.

ಒಂದು ಜಿಲ್ಲೆ, ಒಂದು ಉತ್ಪನ್ನಕ್ಕೆ ಮೈಸೂರಿನ ಬಾಳೆ, ಕೊಡಗಿನ ಕಾಫಿ ಆಯ್ಕೆಒಂದು ಜಿಲ್ಲೆ, ಒಂದು ಉತ್ಪನ್ನಕ್ಕೆ ಮೈಸೂರಿನ ಬಾಳೆ, ಕೊಡಗಿನ ಕಾಫಿ ಆಯ್ಕೆ

ಅಡಿಕೆಯ ಜೊತೆಗೆ ಸಾಂಬಾರು ಪದಾರ್ಥ

ಅಡಿಕೆಯ ಜೊತೆಗೆ ಸಾಂಬಾರು ಪದಾರ್ಥ

ಅಂದಹಾಗೆ, ಕರಾವಳಿ, ಮಲೆನಾಡು ಹಾಗೂ ಅರೆ ಬಯಲುಸೀಮೆ ಭಾಗವನ್ನು ಹೊಂದಿರುವ ಉತ್ತರ ಕನ್ನಡ ಜಿಲ್ಲೆಯಲ್ಲಿ ಅಡಿಕೆ ಪ್ರಧಾನ ಬೆಳೆಯಾದರೂ, ಅಡಿಕೆಯ ಜೊತೆಗೆ, ಸಾಂಬಾರು ಪದಾರ್ಥಗಳಲ್ಲೊಂದಾದ ಕಾಳು ಮೆಣಸನ್ನು ಅತ್ಯಧಿಕವಾಗಿ ಬೆಳೆಯಲಾಗುತ್ತದೆ. ಜಿಲ್ಲೆಯ ಸರಿಸುಮಾರು 4,110 ಹೆಕ್ಟೇರ್ ಪ್ರದೇಶದಲ್ಲಿ ಕಾಳು ಮೆಣಸು ಬೆಳೆಯಲಾಗುತ್ತಿದ್ದು, ಜಿಲ್ಲೆಯಲ್ಲಿ ಅತ್ಯಧಿಕವಾಗಿ ಶಿರಸಿಯಲ್ಲಿ, ಅಂದರೆ 2,073 ಹೆಕ್ಟೇರ್ ಪ್ರದೇಶದಲ್ಲಿ ಬೆಳೆಯಲಾಗುತ್ತಿದೆ. ಕಾಳು ಮೆಣಸಿನ ಜೊತೆಗೆ ಇನ್ನಿತರ ಸಾಂಬಾರು ಪದಾರ್ಥಗಳ ಬೆಳೆಗಳಾದ ಶುಂಠಿ, ಜಾಯಿಕಾಯಿ, ಚಕ್ಕೆ, ಲವಂಗ, ಯಾಲಕ್ಕಿಯನ್ನೂ ಜಿಲ್ಲೆಯಲ್ಲಿ ಬೆಳೆಯಲಾಗುತ್ತಿದ್ದು, ಈ ಕಾರಣದಿಂದಾಗಿ ಈ ಬೆಳೆಗಾರರಿಗೆ ಇನ್ನಷ್ಟು ಉತ್ತೇಜನ ನೀಡಲು ಸರ್ಕಾರ 'ಒಂದು ಜಿಲ್ಲೆ, ಒಂದು ಉತ್ಪನ್ನ' ಈ ಕಾರ್ಯಕ್ರಮದಡಿ ಸಾಂಬಾರು ಪದಾರ್ಥಗಳನ್ನು ಜಿಲ್ಲೆಯಿಂದ ಆಯ್ಕೆಗೊಳಿಸಿದೆ.

ಕಾಳು ಮೆಣಸಿಗಿದೆ ಇತಿಹಾಸ

ಕಾಳು ಮೆಣಸಿಗಿದೆ ಇತಿಹಾಸ

ಪೋರ್ಚುಗೀಸ್ ಪ್ರವಾಸಿಗರು, ಇತಿಹಾಸಕಾರರ ಪ್ರಕಾರ ಜಿಲ್ಲೆಯ ಗೇರುಸೊಪ್ಪೆಯ ರಾಣಿಯೊಬ್ಬಳು 'ಕಾಳು ಮೆಣಸಿನ ರಾಣಿ' ಎಂದೇ ಪ್ರಸಿದ್ಧಳಾಗಿದ್ದಳು. ಶರಾವತಿ ನದಿ ತಟ ಹಾಗೂ ಅರಬ್ಬಿ ಸಮುದ್ರದ ಸಮೀಪದ ಊರಾದ ಗೇರುಸೊಪ್ಪೆಯಲ್ಲಿ 16ನೇ ಶತಮಾನದಲ್ಲಿ ಆಳ್ವಿಕೆ ನಡೆಸಿದ್ದ ಚೆನ್ನಾ ಭೈರಾದೇವಿ ಆಗಿನ ಕಾಲದ ದೊಡ್ಡ ವ್ಯಾಪಾರಸ್ಥೆಯಾಗಿದ್ದಳು. ಅಕ್ಕಿ ಮತ್ತು ಕಾಳು ಮೆಣಸಿನ ಅತ್ಯಧಿಕ ವ್ಯಾಪಾರ- ವಹಿವಾಟು ನಡೆಸುತ್ತಿದ್ದ ಈಕೆ, ಅವುಗಳನ್ನು ಬೃಹತ್ ಪ್ರಮಾಣದಲ್ಲಿ ಕೋಟೆಗಳಲ್ಲಿ ಶೇಖರಣೆ ಮಾಡಿಡುತ್ತಿದ್ದಳು. ಆ ಮೂಲಕ ದೇಶದ ವಿವಿಧ ರಾಜ್ಯಗಳಿಗೆ ಆಗಿನ ಕಾಲದಲ್ಲಿ ಕಾಳು ಮೆಣಸನ್ನು ಸರಬರಾಜು ಮಾಡಿ, ಜಗತ್ತಿನಾದ್ಯಂತ ಅಂದಿನಿಂದಲೇ ಜಿಲ್ಲೆಯಲ್ಲಿ ಸಾಂಬಾರು ಪದಾರ್ಥಗಳ ರುಚಿ ಹತ್ತಿಸಿದ್ದಳು.

ಕ್ವಿಂಟಲ್‌ಗೆ 32 ಸಾವಿರದಷ್ಟು ದರವಿದೆ

ಕ್ವಿಂಟಲ್‌ಗೆ 32 ಸಾವಿರದಷ್ಟು ದರವಿದೆ

ಅಂದಿನಿಂದ ಇಂದಿನವರೆಗೂ ಕಾಳು ಮೆಣಸಿನ ಬೆಳೆಯುವಿಕೆ, ಅದರ ವ್ಯಾಪಾರ- ವಹಿವಾಟು, ರಫ್ತು ನಿಂತಿಲ್ಲ. ಪ್ರತಿವರ್ಷವೂ ಜಿಲ್ಲೆಯ ಕಾಳು ಮೆಣಸಿಗೆ ಬೇಡಿಕೆ ಹೆಚ್ಚುತ್ತಿದ್ದು, ಅದರಂತೆ ಬೆಳೆ ಬೆಳೆದು ರೈತ ಮಾರಾಟ ಮಾಡಿ, ಸಂಪಾದನೆ ಮಾಡುತ್ತಿದ್ದಾನೆ. ಸದ್ಯ ಕೆಜಿಗೆ 320 ರೂ., ಅಂದರೆ ಕ್ವಿಂಟಲ್‌ಗೆ 32 ಸಾವಿರದಷ್ಟು ದರವಿದ್ದು, ಈ ಹಿಂದೊಮ್ಮೆ ಕ್ವಿಂಟಲ್‌ಗೆ ಲಕ್ಷ ರೂಪಾಯಿ ದರ ಬಂದು ಇತಿಹಾಸವಾಗಿತ್ತು. ಹೀಗಾಗಿ ಇಲ್ಲಿನ ರೈತ ಅಡಿಕೆಯ ಜೊತೆಗೆ ಕಾಳು ಮೆಣಸು ಬೆಳೆಯುತ್ತಿದ್ದು, ಅಡಿಕೆ ಕೈಕೊಟ್ಟರೂ ಕಾಳು ಮೆಣಸು ಕೈಬಿಡದು ಎಂದು ನಂಬಿದ್ದಾನೆ.

ಈಗ ಕಾಡುಗಳಲ್ಲೂ ಬೆಳೆಯಲಾಗುತ್ತಿದೆ

ಈಗ ಕಾಡುಗಳಲ್ಲೂ ಬೆಳೆಯಲಾಗುತ್ತಿದೆ

ಇಲ್ಲಿನ ಕಾಳು ಮೆಣಸಿಗೆ ದೇಶದ ವಿವಿಧೆಡೆ ಬೇಡಿಕೆ ಇದೆ. ಶಿರಸಿ, ಸಿದ್ದಾಪುರ ಭಾಗದಿಂದ ಹೆಚ್ಚಿನ ಪ್ರಮಾಣದಲ್ಲಿ ಕೇರಳಕ್ಕೆ ರಫ್ತಾಗಲಿದ್ದು, ಅಲ್ಲಿಂದ ಮಧ್ಯ ಪ್ರಾಚ್ಯ, ಐರೋಪ್ಯ ರಾಷ್ಟ್ರಗಳಿಗೂ ರಫ್ತಾಗುತ್ತವೆ. ತೋಟಗಾರಿಕಾ ಬೆಳೆಯಾಗಿರುವ ಕಾಳು ಮೆಣಸನ್ನು ಮನೆಯಂಗಳದ ತೋಟಗಳಲ್ಲಿ ಮಾತ್ರವಲ್ಲ, ಬೇಡಿಕೆ ಹೆಚ್ಚಾಗಿರುವ ಕಾರಣ ಈಗ ಕಾಡುಗಳಲ್ಲೂ ಬೆಳೆಯಲಾಗುತ್ತಿದೆ. ಆ ಮೂಲಕ ಆದಾಯದ ಮೂಲವಾಗಿ ಕಾಳು ಮೆಣಸು ಹೊರಹೊಮ್ಮಿದೆ.

ಶುಂಠಿಗೂ ಇದೆ ಬೇಡಿಕೆ

ಶುಂಠಿಗೂ ಇದೆ ಬೇಡಿಕೆ

ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡ ಭಾಗದಲ್ಲಿ ಅತ್ಯಧಿಕವಾಗಿ ಶುಂಠಿ ಬೆಳೆಯಲಾಗುತ್ತದೆ. 4,500 ಎಕರೆಗೂ ಅಧಿಕ ಪ್ರದೇಶದಲ್ಲಿ ಶುಂಠಿ ಬೆಳೆಯಲಾಗುತ್ತಿದೆ. ಕೇರಳದಿಂದ ಬಂದು ಇಲ್ಲಿ ನೆಲೆ ನಿಂತಿದ್ದ ರೈತರು, ಈ ಭಾಗದಲ್ಲಿ ಶುಂಠಿ ಬೆಳೆಯನ್ನು ಪ್ರಾರಂಭಿಸಿದರಾದರೂ, ಈಗ ಜಿಲ್ಲೆಯ ರೈತರೇ ಬೆಳೆದು ಜೀವನ ನಡೆಸುತ್ತಿದ್ದಾರೆ. ಇಲ್ಲಿ ರಗೋಡಿ (ಸಾಮಾನ್ಯ), ಹಿಮಾಚಲ ಹಾಗೂ ಮಹಿಮಾ (ಔಷಧಿಗಳ ತಯಾರಿಕೆಗೆ) ಎಂಬ ಮೂರು ವಿಧದ ಶುಂಠಿಯನ್ನು ಬೆಳೆಯಲಾಗುತ್ತದೆ. ಸಾಮಾನ್ಯ ಶುಂಠಿಗೆ (60 ಕೆಜಿ ಬ್ಯಾಗ್) ಸದ್ಯ 1200ರಷ್ಟು ದರವಿದ್ದು, ಔಷಧಿ ತಯಾರಿಕೆಗಾಗಿಯೇ ಇಲ್ಲಿ ಬೆಳೆಯುವ ಶುಂಠಿಗೆ ಇದರ ದ್ವಿಗುಣ ಬೆಲೆ ಇದೆ.

ರೈತರೂ ಕೈತುಂಬ ಸಂಪಾದನೆ ಮಾಡುತ್ತಿದ್ದಾರೆ

ರೈತರೂ ಕೈತುಂಬ ಸಂಪಾದನೆ ಮಾಡುತ್ತಿದ್ದಾರೆ

ಹಿಮಾಚಲ ಮತ್ತು ಮಹಿಮಾ ಒಣ ಶುಂಠಿಯನ್ನಾಗಿ ಫೆಬ್ರುವರಿ, ಮಾರ್ಚ್ ತಿಂಗಳಲ್ಲಿ ತೆಗೆದು, ಕೇರಳ ಸೇರಿದಂತೆ ವಿವಿಧ ರಾಜ್ಯಗಳಿಗೆ ರಫ್ತು ಮಾಡಲಾಗುತ್ತದೆ. ಈ ಎಲ್ಲಾ ಸಾಂಬಾರು ಪದಾರ್ಥಗಳಿಗೆ ಸಾಕಷ್ಟು ಬೇಡಿಕೆ ಇದ್ದು, ರೈತರೂ ಕೈತುಂಬ ಸಂಪಾದನೆ ಮಾಡುತ್ತಿದ್ದಾರೆ ನಿಜ. ಆದರೆ, ಹವಾಮಾನ ಕೈಕೊಟ್ಟರೆ, ಕೀಟ, ಆನೆ ಸೇರಿದಂತೆ ಕಾಡುಪ್ರಾಣಿಗಳು ದಾಳಿ ಇಟ್ಟರೆ ಆ ವರ್ಷ ರೈತನಿಗೆ ಲಾಭಕ್ಕಿಂತ ನಷ್ಟವೇ ಹೆಚ್ಚಿರಲಿದೆ.

ಆತ್ಮನಿರ್ಭರ ಭಾರತ ಅಭಿಯಾನದ ಅಂಗ

ಆತ್ಮನಿರ್ಭರ ಭಾರತ ಅಭಿಯಾನದ ಅಂಗ

ಕೇಂದ್ರ ಸರಕಾರದ ಪಿಎಮ್‌ಎಫ್‌ಎಂಇ ಯೋಜನೆಯಡಿ ಆಹಾರ ಸಂಸ್ಕರಣಾ ಉದ್ದಿಮೆಗಳನ್ನು ಸ್ಥಾಪಿಸಲು ಇಚ್ಚಿಸುವ ಆಸಕ್ತರಿಗೆ ಸಹಾಯಧನ ನೀಡಲಾಗುವುದು ಎಂದು ಜಿಲ್ಲಾ ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಹೊನ್ನಪ್ಪಗೌಡ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಆತ್ಮನಿರ್ಭರ ಭಾರತ ಅಭಿಯಾನದ ಅಂಗವಾಗಿ ಕೇಂದ್ರ ಸರ್ಕಾರ ಪ್ರಧಾನಮಂತ್ರಿಗಳ ಅತಿಸಣ್ಣ ಆಹಾರ ಸಂಸ್ಕರಣಾ ಉದ್ದಿಮೆಗಳ ನಿಯಮಬದ್ಧಗೊಳಿಸುವಿಕೆ (ಪಿಎಮ್‌ಎಫ್‌ಎಂಇ) ಯೋಜನೆ ಜಾರಿಗೆ ತಂದಿದ್ದು, ಈ ಯೋಜನೆಯಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸಂಸ್ಕರಣಾ ಘಟಕವನ್ನು ಉನ್ನತೀಕರಿಸಲು ಒಂದು ಜಿಲ್ಲೆ- ಒಂದು ಉತ್ಪನ್ನ ಆಧಾರದ ಮೇಲೆ ಜಿಲ್ಲೆಗೆ ಸಾಂಬಾರು ಉತ್ಪನ್ನ ಆಯ್ಕೆಯಾಗಿದೆ.

 ಘಟಕಗಳನ್ನು ಸ್ಥಾಪಿಸುವವರಿಗೆ ಸಹಾಯಧನ

ಘಟಕಗಳನ್ನು ಸ್ಥಾಪಿಸುವವರಿಗೆ ಸಹಾಯಧನ

ಇದಕ್ಕೆ ಸಂಬಂಧಪಟ್ಟಂತೆ ಸಾಂಬಾರು ಬೆಳೆಗಳ ವರ್ಗೀಕರಣ, ಶ್ರೇಣಿಕರಣೆ, ಬ್ಯಾಂಡಿಂಗ್, ಲೇಬಲಿಂಗ್, ಮಾರುಕಟ್ಟೆ ಬೆಂಬಲ ಮತ್ತು ರಫ್ತಿಗೆ ಪ್ರೋತ್ಸಾಹ ನೀಡುವ ಮೂಲಕ ಅಂತಹ ವ್ಯಕ್ತಿ ಅಥವಾ ಸಂಸ್ಥೆಗಳನ್ನು ಉದ್ದಿಮೆದಾರರನ್ನಾಗಿ ರೂಪಿಸಲು ಯೋಜಿಸಲಾಗಿದೆ. ಹೀಗಾಗಿ ಈ ಯೋಜನೆಯಡಿ ಹೊಸದಾಗಿ ಸಂಸ್ಕರಣಾ ಘಟಕಗಳು, ಮಾರಾಟ ಮತ್ತು ರಫ್ತು ಘಟಕಗಳನ್ನು ಸ್ಥಾಪಿಸುವವರಿಗೆ ಸಹಾಯಧನ ನೀಡಲಾಗುತ್ತಿದೆ.

ಕೃಷಿ ಮತ್ತು ತೋಟಗಾರಿಕೆಯ ಕಚೇರಿಗಳಲ್ಲಿ ಅರ್ಜಿ

ಕೃಷಿ ಮತ್ತು ತೋಟಗಾರಿಕೆಯ ಕಚೇರಿಗಳಲ್ಲಿ ಅರ್ಜಿ

ಕಿರು ಆಹಾರ ಸಂಸ್ಕರಣಾ ಉದ್ದಿಮೆಗಳ ಸ್ಥಾಪನೆಗೆ ಅವಶ್ಯಕವಾದ ತರಬೇತಿ, ಡಿಪಿಆರ್ ತಯಾರಿಕೆ, ಬ್ಯಾಂಕ್ ಸಾಲ, ಮಾರುಕಟ್ಟೆ ಬೆಂಬಲ, ಕೈ ಆಸರೆ ಬೆಂಬಲ, ಜಿಎಸ್‌ಟಿ, ಉದ್ಯೋಗ ಆಧಾರ, ಎಫ್‌ಎಸ್‌ಎಸ್‌ಐ ಪ್ರಮಾಣಪತ್ರ ದೊರಕಿಸಿಕೊಡಲು ಸಂಪನ್ಮೂಲ ವ್ಯಕ್ತಿ ಸುಜಯ ಭಟ್‌ರ ಮೊಬೈಲ್ ಸಂಖ್ಯೆ: 94822 87323ಗೆ ಸಂಪರ್ಕಿಸಬಹುದು. ಆಸಕ್ತ ಫಲಾನುಭವಿಗಳು, ಸಂಘ- ಸಂಸ್ಥೆಗಳು, ಎಫ್.ಪಿ.ಒ, ಸ್ವ-ಸಹಾಯ ಗುಂಪುಗಳ ಸದಸ್ಯರು, ಒಕ್ಕೂಟಗಳು, ಸಹಕಾರಿ ಸಂಸ್ಥೆಗಳು ಅರ್ಜಿ ಸಲ್ಲಿಸುವ ಮೂಲಕ ಈ ಯೋಜನೆಯಲ್ಲಿ ಪಾಲ್ಗೊಳ್ಳಲು ಅವಕಾಶವಿದೆ. ಅರ್ಜಿಯನ್ನು ಕೃಷಿ ಮತ್ತು ತೋಟಗಾರಿಕೆಯ ತಾಲ್ಲೂಕು ಕಚೇರಿಗಳಲ್ಲಿ ಸಲ್ಲಿಸಬಹುದಾಗಿದ್ದು, ಹೆಚ್ಚಿನ ಮಾಹಿತಿಗಾಗಿ ಕೃಷಿ ಹಾಗೂ ತೋಟಗಾರಿಕೆ ಇಲಾಖೆಗಳನ್ನು ಸಂಪರ್ಕಿಸಬಹುದು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

English summary
Spices are identified from the Uttara Kannada district for a 'One district, One product project.' It has been selected because of the growing more of spices in the district.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X