ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರೈತರೇ ಗಮನಿಸಿ: ರಸಗೊಬ್ಬರ ಗುಣಮಟ್ಟ ಪರೀಕ್ಷಿಸುವ ವಿಧಾನ ಹೇಗೆ?

|
Google Oneindia Kannada News

ರೈತರು ಬಿತ್ತನೆ ಸಮಯದಲ್ಲಿ ಕೊಳ್ಳುವ ರಸಗೊಬ್ಬರದ ಗುಣಮಟ್ಟವನ್ನು ಪರೀಕ್ಷಿಸುವ ವಿಧಾನವನ್ನು ಕರ್ನಾಟಕ ರಾಜ್ಯ ಕೃಷಿ ಇಲಾಖೆ ರೈತರಿಗೆ ತಿಳಿಸಿದೆ. ರೈತರು ಇದರ ಸದುಪಯೋಗ ಪಡೆದುಕೊಳ್ಳಬಹುದಾಗಿದೆ.

ರೈತರು ರಸಗೊಬ್ಬರವನ್ನು ಕೊಳ್ಳುವಾಗ ಗಮನಿಸಬೇಕಾದ ಅಂಶಗಳು

1. ರಸಗೊಬ್ಬರಗಳ ಚೀಲದ ಬಾಯಿಯನ್ನು ಯಂತ್ರದಿಂದ ಹೊಲೆದಿರಬೇಕು.

2. ರಸಗೊಬ್ಬರ ಚೀಲವನ್ನು ತೂಕ ಮಾಡಿಸಿ ತೆಗೆದುಕೊಳ್ಳಬೇಕು.

3. ರಸಗೊಬ್ಬರ ಚೀಲದ ಮೇಲೆ ನಮೂದಿಸಿರುವ ಗರಿಷ್ಠ ಬೆಲೆಗಿಂತ ಹೆಚ್ಚಿನ ಹಣ ಸಂದಾಯ ಮಾಡಬಾರದು.

4. ರಸಗೊಬ್ಬರ ಚೀಲದ ಮೇಲೆ ಕೆಳಕಂಡ ವಿವರಗಳು ಮುದ್ರಿತವಾಗಿರಬೇಕು.

*ರಸಗೊಬ್ಬರವೆಂದು ಮುದ್ರಿತವಾಗಿರಬೇಕು

* ರಸಗೊಬ್ಬರದ ಬ್ರ್ಯಾಂಡ್ ಮತ್ತು ರಸಗೊಬ್ಬರದ ಹೆಸರು

* ರಸಗೊಬ್ಬರದಲ್ಲಿರುವ ಕನಿಷ್ಠ ಶೇಕಡವಾರು ಪೋಷಕಾಂಶಗಳ ವಿವರಗಳು

* ಗರಿಷ್ಠ ಮಾರಾಟ ಬೆಲೆ

* ಗರಿಷ್ಠ ಮತ್ತು ನಿವ್ವಳ ತೂಕ

* ರಸಗೊಬ್ಬರಗಳ ಮಿಶ್ರಣಗಳು, ಸಿಂಗಲ್ ಸೂಪರ್ ಫಾಸ್ಪೇಟ್, ಲಘು ಪೋಷಕಾಂಶಗಳು ಮತ್ತು ಅವುಗಳ ಮಿಶ್ರಣಗಳ ಚೀಲ/ ಡಬ್ಬಗಳ ಮೇಲೆ ಬ್ಯಾಚ್ ಸಂಖ್ಯೆ ಮತ್ತು ರಿಜಿಸ್ಟ್ರೇಶನ್ ಸಂಖ್ಯೆ ನಮೂದಿಸಿರಬೇಕು.

Karnataka State Department Of Agriculture Shares Tips On How To Check Fertilizer Quality

5. ರಸಗೊಬ್ಬರವನ್ನು ಖರೀದಿಸಿದ್ದಕ್ಕೆ ನಮೂನೆ "ಎಂ'ನಲ್ಲಿ ರಸೀದಿಯನ್ನು ಪಡೆಯಬೇಕು. ರಸೀದಿಯಲ್ಲಿ ಖರೀದಿಸಿದ ರಸಗೊಬ್ಬರಗಳ ವಿವರಗಳನ್ನು ತುಂಬಿದ್ದು, ರೈತರ ಸಹಿ ಮತ್ತು ಮಾರಾಟಗಾರರ ಸಹಿ ಇರಬೇಕು.

ನಕಲಿ ಮತ್ತು ಕಲಬೆರಕೆ ರಸಗೊಬ್ಬರಗಳನ್ನು ಗುರುತಿಸುವ ವಿಧಾನಗಳು
ಭೌತಿಕ ಪರೀಕ್ಷೆ: ಹರಳು ರೂಪದ ರಸಗೊಬ್ಬರಗಳು ಒಂದೇ ಬಣ್ಣ, ಆಕಾರ ಗಾತ್ರದಿಂದ ಕೂಡಿದ್ದು, ಕಣ್ಣಿಗೆ ಕಾಣುವಂಥ ಇತರೆ ಪದಾರ್ಥಗಳು ರಸಗೊಬ್ಬರದಲ್ಲಿ ಇರಬಾರದು, ಹೆಚ್ಚು ಪುಡಿಯಾಗಿರಬಾರದು ಮತ್ತು ಹೆಚ್ಚಿನ ತೇವಾಂಶ ಹೊಂದಿರಬಾರದು.

 ಪಂಜಾಬ್, ಹರಿಯಾಣ, ಕೇರಳ, ಬಿಹಾರ ಸಂಪೂರ್ಣ ಬಂದ್: ಹಲವೆಡೆ ಮಿಶ್ರ ಪ್ರತಿಕ್ರಿಯೆ ಪಂಜಾಬ್, ಹರಿಯಾಣ, ಕೇರಳ, ಬಿಹಾರ ಸಂಪೂರ್ಣ ಬಂದ್: ಹಲವೆಡೆ ಮಿಶ್ರ ಪ್ರತಿಕ್ರಿಯೆ

ನೀರಿನಲ್ಲಿ ಕರಗುವ ಪರೀಕ್ಷೆ
ಕೆಲವು ರಸಗೊಬ್ಬರಗಳು ನೀರಿನಲ್ಲಿ ಸಂಪೂರ್ಣ ಕರಗುತ್ತವೆ. ಅಂತಹ ರಸಗೊಬ್ಬರಗಳನ್ನು ನೀರಿನಲ್ಲಿ ಕರಗಿಸಿದಾಗ ಕರಗದೆ ಇರುವ ಪದಾರ್ಥ ಉಳಿದರೆ ಅದು ಕಲಬೆರಕೆಯಾಗಿರುತ್ತದೆ. ಉದಾಹರಣೆಗೆ, ಯೂರಿಯಾ ಅಮೋನಿಯಂ ಸಲ್ಪೇಟ್, ಅಮೋನಿಯಂ ಕ್ಲೋರೈಡ್, ಮ್ಯೂರಿಯೇಟ್ ಆಫ್ ಪೋಟ್ಯಾಷ್, ಸತುವಿನ ಸಲ್ಪೇಟ್, ಮತ್ತು ಮೆಗ್ನೀಷಿಯಂ ಸಲ್ಪೇಟ್ ಶೇ.100ರಷ್ಟು ನೀರಿನಲ್ಲಿ ಕರಗುವ ರಸಗೊಬ್ಬರಗಳು.

Karnataka State Department Of Agriculture Shares Tips On How To Check Fertilizer Quality

ನೀರಿನಲ್ಲಿ ಕರಗಿಸಿದಾಗ ಆಗುವ ಅನುಭವ
ಕೆಲವು ರಸಗೊಬ್ಬರಗಳು ನೀರಿನಲ್ಲಿ ಕರಗಿಸಿದಾಗ ತಣ್ಣನೆ ಅನುಭವ ನೀಡುತ್ತವೆ. ತಣ್ಣನೆಯ ಅನುಭವ ನೀಡದಿದ್ದಲ್ಲಿ ಅಂತಹ ರಸಗೊಬ್ಬರಗಳಲ್ಲಿ ಕಲಬೆರಕೆಯಾಗಿರುವ ಸಾಧ್ಯತೆಗಳಿರುತ್ತದೆ. ಉದಾಹರಣೆಗೆ, ಯೂರಿಯಾ ಅಮೋನಿಯಂ ಕ್ಲೋರೈಡ್, ಮ್ಯೂರಿಯೇಟ್ ಆಫ್ ಪೋಟ್ಯಾಷ್, ಕ್ಯಾಲ್ಸಿಯಂ ಅಮೋನಿಯಂ ನೈಟ್ರೇಟ್ ಮತ್ತು ಪೋಟ್ಯಾಷಿಯಂ ನೈಟ್ರೇಟ್ ಶೇ.100 ರಷ್ಟು ಕರಗುವ ರಸಗೊಬ್ಬರಗಳು.

ಬಿಸಿ ಮಾಡುವ ಪರೀಕ್ಷೆ
1. ಯೂರಿಯಾ ರಸಗೊಬ್ಬರಗಳನ್ನು ಬಿಸಿ ಮಾಡಿದಾಗ ಸಂಪೂರ್ಣವಾಗಿ ಕರಗಿ ನೀರಾಗುತ್ತದೆ. ಕರಗದೇ ಇರುವ ವಸ್ತು ಉಳಿದರೆ ರಸಗೊಬ್ಬರ ಕಲಬೆರಕೆಯಾಗಿದೆ ಎಂದು ತಿಳಿಯಬಹುದು.

2. ಡಿಎಪಿ ರಸಗೊಬ್ಬರವನ್ನು ಲಭ್ಯವಿರುವ ಒಂದು ತಗಡಿನ ಮೇಲೆ ಬಿಸಿ ಮಾಡಿದಾಗ ಡಿಎಪಿ ಹರಳುಗಳು ಸುಣ್ಣದಂತೆ ಅರಳುತ್ತವೆ. ಮತ್ತು ತಳಕ್ಕೆ ಅಂಟಿಕೊಳ್ಳುತ್ತವೆ. ಡಿಎಪಿ ಹರಳುಗಳು ಅರಳದೇ ತಳಕ್ಕೆ ಅಂಟಿಕೊಳ್ಳದಿದ್ದರೆ ರಸಗೊಬ್ಬರವು ಕಲಬೆರಕೆ/ ನಕಲಿ ಎಂದು ತಿಳಿಯಬಹುದು.

ಪೋಷಕಾಂಶಗಳ ಪರೀಕ್ಷೆ
1. ಸುಟ್ಟ ಸುಣ್ಣದ ಪರೀಕ್ಷೆ (ಸಾರಜನಕದ ಪರೀಕ್ಷೆ) ಅಮೋನಿಯಂ ರೂಪದ ಸಾರಜನಕವಿರುವ ರಸಗೊಬ್ಬರಗಳನ್ನು ಅಂಗೈಯಲ್ಲಿ ತೆಗೆದುಕೊಂಡು ಸ್ವಲ್ಪ ನೀರು ಹಾಕಿಕೊಂಡು ಸುಣ್ಣದಿಂದ (ವೀಳ್ಯೆದೆಲೆ ಅಡಿಕೆ ಜೊತೆ ಹಾಕಿಕೊಳ್ಳುವ ಸುಣ್ಣ) ತೀಡಿದಾಗ ಅಮೋನಿಯಂ ಘಾಟು ವಾಸನೆ ಬರುತ್ತದೆ. ಘಾಟು ವಾಸನೆ ಬರದಿದ್ದರೆ ಅಂತಹ ರಸಗೊಬ್ಬರವು ನಕಲಿ ಗೊಬ್ಬರವಾಗಿರುತ್ತದೆ. ಈ ರೀತಿ 30 ರಸಗೊಬ್ಬರಗಳನ್ನು ಪರೀಕ್ಷೆ ಮಾಡಬಹುದು. ಉದಾಹರಣೆಗೆ, ಡಿಎಪಿ, 16:20, 20:20, 15:15:15, 17:17:17, 19:19:19, 10:26:26, ಅಮೋನಿಯಂ ಸಲ್ಪೇಟ್, ಅಮೋನಿಯಂ ಕ್ಲೋರೈಡ್, ಸಿ.ಎ.ಎನ್ ಮುಂತಾದವುಗಳು.

Karnataka State Department Of Agriculture Shares Tips On How To Check Fertilizer Quality

2. ರಂಜಕದ ಪರೀಕ್ಷೆ: ಸ್ವಲ್ಪ ರಸಗೊಬ್ಬರವನ್ನು ನೀರಿನಲ್ಲಿ ಕರಗಿಸಿ ಸೂಪರ್ ಪಾಸ್ಪೇಟ್ ಮತ್ತು ಡಿಎಪಿ ರಸಗೊಬ್ಬರಗಳಾದಲ್ಲಿ ಸಿಲ್ವರ್ ನೈಟ್ರೇಟ್ ದ್ರಾವಣ ಮತ್ತು ಇತರೆ ಸಾರಜನಕ ಮತ್ತು ರಂಜಕ ಮತ್ತು ಸಂಯುಕ್ತ ಗೊಬ್ಬರ, ಸಾರಜನಕ ರಂಜಕ ಪೊಟ್ಯಾಷ್ ಸಂಯುಕ್ತ ರಸಗೊಬ್ಬರಗಳಿಗೆ ಫೆರಿಕ್ ಕ್ಲೋರೈಡ್ ದ್ರಾವಣ ಹಾಕಿದಾಗ ಹಳದಿ/ ಬಿಳಿ ಮಿಶ್ರಿತ ಹಳದಿ ಬಣ್ಣದ ಕಣಗಳು ಕಂಡುಬರುತ್ತದೆ. ಹಳದಿ ಬಣ್ಣದ ಕಣಗಳು ಕಂಡುಬರದಿದ್ದರೆ ಅದು ನಕಲಿ ರಸಗೊಬ್ಬರವಾಗಿರುತ್ತದೆ.

3. ಪೊಟ್ಯಾಷ್ ಪರೀಕ್ಷೆ: ಪೋಟ್ಯಾಷ್ ಅಂಶವಿರುವ ರಸಗೊಬ್ಬರವನ್ನು ನೀರಿನಲ್ಲಿ ಕರಗಿಸಿ ಎರಡು ಹನಿ ಕೋಬಾಲ್ಟ್ ನೈಟ್ರೇಟ್ ದ್ರಾವಣವನ್ನು ಹಾಕಿದಾಗ ಹಳದಿ ಬಣ್ಣದ ಕಣಗಳು ಕಂಡುಬರುತ್ತದೆ. ರಸಗೊಬ್ಬರವು ನಕಲಿಯಾಗಿದ್ದರೆ ಕೋಬಾಲ್ಟ್ ನೈಟ್ರೇಟ್‍ನೊಂದಿಗೆ ಹಳದಿ ಬಣ್ಣದ ಕಣಗಳು ಕಂಡು ಬರುವುದಿಲ್ಲ, ಬರೀ ದ್ರಾವಣದ ಬಣ್ಣ ಕಂಡು ಬಂದರೆ ರಸಗೊಬ್ಬರ ನಕಲಿಯಾಗಿದೆ ಎಂದು ತಿಳಿಯಬಹುದು.

ಪೊಟ್ಯಾಷ್ ಗೊಬ್ಬರಗಳನ್ನು ಕೊಡುವುದರಿಂದ ಆಗುವ ಪ್ರಯೋಜನಗಳು
ನಾವು ಪ್ರತಿ ಸಲವೂ ಜಮೀನಿನಲ್ಲಿ ಬೆಳೆ ಬೆಳೆದುಕೊಂಡಾಗ ಆ ಬೆಳೆಯು ಜಮೀನಿನಲ್ಲಿರುವ ಎಲ್ಲಾ ಪೋಷಕಾಂಶಗಳನ್ನು ಸಾಕಷ್ಟು ಪ್ರಮಾಣದಲ್ಲಿ ಉಪಯೋಗಿಸಿಕೊಳ್ಳುತ್ತದೆ. ನಮ್ಮ ರೈತರು ಹಲವು ಸಂದರ್ಭಗಳಲ್ಲಿ ಪೊಟ್ಯಾಷ್ ಗೊಬ್ಬರಗಳನ್ನು ಭೂಮಿಗೆ ಕೊಡುವುದಿಲ್ಲ. ಸಾರಜನಕ ಹಾಗೂ ರಂಜಕ ಗೊಬ್ಬರಗಳನ್ನು ಕೊಡುವುದರ ಜೊತೆಗೆ ಪೊಟ್ಯಾಷ್ ಗೊಬ್ಬರವನ್ನೂ ಸಮತೋಲನ ಪ್ರಮಾಣದಲ್ಲಿ ಕೊಟ್ಟೇ ಕೊಡಬೇಕು.

ಪೊಟ್ಯಾಷ್ ಅಂಶದ ಪ್ರಯೋಜನಗಳು:
* ಇದು ಬೇರುಗಳ ಬೆಳವಣಿಗೆಯನ್ನು ವೃದ್ಧಿಗೊಳಿಸುವ ರಂಜಕಾಂಶಕ್ಕೆ ಪೂರಕವಾಗಿ ತನ್ನ ಕಾರ್ಯ ನಿರ್ವಹಿಸುತ್ತದೆ. ಇದರಿಂದ ಬೇರುಗಳು ಹೆಚ್ಚು ಆಳದಲ್ಲಿ ದೊರಕುವ ತೇವಾಂಶವನ್ನು ಹಾಗೂ ಪೋಷಕಾಂಶಗಳನ್ನು ಪಡೆಯಲು ಅನುಕೂಲವಾಗುತ್ತದೆ.

* ಸಸ್ಯಗಳು ಶಕ್ತಿಯುತವಾಗಿ ಬೆಳೆಯಲು ಸಹಾಯ ಮಾಡುವುದರಿಂದ ಮಳೆಗಾಳಿಗೆ ಬೀಳುವುದನ್ನು ತಡೆಗಟ್ಟುತ್ತದೆ.

* ಇತರೆ ಪೋಷಕಾಂಶಗಳು ಸಸ್ಯಗಳಿಗೆ ಸುಲಭವಾಗಿ ಲಭಿಸುವ ಹಾಗೆ ಮಾಡುತ್ತದೆ.

* ಸಸ್ಯಗಳಿಗೆ ಕೀಟ ಹಾಗೂ ರೋಗಗಳ ಬಾಧೆಯನ್ನು ತಡೆದುಕೊಳ್ಳುವ ಶಕ್ತಿ ಒದಗಿಸುತ್ತದೆ.

* ಒಂದು ವೇಳೆ ಬೆಳೆಗೆ ಸಾರಜನಕದ ಅಂಶ ಜಾಸ್ತಿಯಾಗಿ ದುಷ್ಪರಿಣಾಮವುಂಟಾಗುವ ಸಂದರ್ಭಗಳನ್ನು ಪೊಟ್ಯಾಷ್ ಅಂಶವು ತಪ್ಪಿಸುತ್ತದೆ.

* ಆದುದರಿಂದ ವಿವಿಧ ಬೆಳೆಗಳಿಗೆ ರಾಸಾಯನಿಕ ಗೊಬ್ಬರಗಳನ್ನು ಕೊಡುವಾಗ ಶಿಫಾರಸು ಮಾಡಿದ ಪ್ರಮಾಣದಲ್ಲಿ ಹಾಗೂ ಸಮತೋಲನ ಪ್ರಮಾಣದಲ್ಲಿ ಕೊಡಬೇಕು. ಯಾವುದೇ ಒಂದು ಪೋಷಕಾಂಶವನ್ನು ಬೆಳೆಗಳಿಗೆ ಒದಗಿಸದೇ ಇದ್ದರೂ ಬೆಳೆಗಳ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗುತ್ತದೆ.

* ಹೊಗೆಸೊಪ್ಪು ಮುಂತಾದ ಬೆಳೆಗಳಿಗೆ ಪೊಟ್ಯಾಷ್ ಅಂಶವನ್ನು ಸಲ್ಫೇಟ್ ಆಫ್ ಪೊಟ್ಯಾಷ್ ರೂಪದಲ್ಲಿ ಒದಗಿಸಬೇಕಲ್ಲದೇ, ಮ್ಯೂರಿಯೇಟ್ ಆಫ್ ಪೊಟ್ಯಾಷ್ ರಸಗೊಬ್ಬರ ರೂಪದಲ್ಲಿ ಪೊಟ್ಯಾಷ್ ಅಂಶವನ್ನು ಒದಗಿಸಬಾರದು.

* ಶಕ್ತಿಮಾನ್ ಮುಸುಕಿನ ಜೋಳ, ಶಕ್ತಿಮಾನ್ ಜೋಳ, ರಾಗಿ, ಭತ್ತ ಮತ್ತು ಬೇಳೆಕಾಳು ಮತ್ತಿತರೆ ಬೆಳೆಗಳಿಗೆ ಪೊಟ್ಯಾಷ್ ಅಂಶವನ್ನು ಮ್ಯೂರಿಯೇಟ್ ಆಫ್ ಪೊಟ್ಯಾಷ್ ರಸಗೊಬ್ಬರ ರೂಪದಲ್ಲಿ ಕೊಡಬಹುದು.

ಹೆಚ್ಚಿನ ಮಾಹಿತಿಗಾಗಿ ತಮ್ಮ ಸಮೀಪದ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿಗಳನ್ನಾಗಲಿ ಅಥವಾ ತಾಲ್ಲೂಕು ಸಹಾಯಕ ಕೃಷಿ ನಿರ್ದೇಶಕರನ್ನು ಸಂಪರ್ಕಿಸುವುದು. ಕಿಸಾನ್ ಕಾಲ್ ಸೆಂಟರ್ (1800 180 1551) ಅಥವಾ ರೈತ ಸಹಾಯವಾಣಿ (1800 425 3553)ಗೆ ಶುಲ್ಕ ರಹಿತ ಕರೆ ಮಾಡಿ ಮಾಹಿತಿಯನ್ನು ಪಡೆಯಬಹುದು.

English summary
The Karnataka State Department of Agriculture has informed farmers about the quality testing of fertilizer purchased at the time of sowing.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X