ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತಂತ್ರಜ್ಞಾನ ಬಳಸಿ ರೈತರಿಗೆ ಸಂದೇಶ ಕಳಿಸಿದ ಎಸ್ಆರ್ ಪಾಟೀಲ್

By Mahesh
|
Google Oneindia Kannada News

ಬೆಂಗಳೂರು, ಆಗಸ್ಟ್ 03: ರೈತರ ಸರಣಿ ಆತ್ಮಹತ್ಯೆ ಹಿನ್ನೆಲೆಯಲ್ಲಿ ಮಾಹಿತಿ ತಂತ್ರಜ್ಞಾನ ಸಚಿವ ಎಸ್. ಆರ್. ಪಾಟೀಲ್ ಅವರು ತಂತ್ರಜ್ಞಾನ ಬಳಸಿ ರೈತಬಾಂಧವರನ್ನು ಉದ್ದೇಶಿಸಿ ಕಳಿಸಿದ ಸಂದೇಶಗಳು ಸಾಮಾಜಿಕ ಜಾಲ ತಾಣಗಳಲ್ಲಿ ಹರಿದಾಡುತ್ತಿವೆ.

ಪಾಟೀಲ್ ನೀಡಿರುವ ಧ್ವನಿ ಹಾಗೂ ವಿಡಿಯೋ ಸಂದೇಶ ವಾಟ್ಸಪ್, ಫೇಸ್‍ಬುಕ್, ಟ್ವಿಟ್ಟರ್ ಮುಂತಾದ ಸಾಮಾಜಿಕ ತಾಣಗಳಲ್ಲಿ ಸದ್ದು ಮಾಡುತ್ತಿವೆ. ಹಾಗೆಯೇ ಬಾಗಲಕೋಟೆ ಮತ್ತು ವಿಜಯಪುರ ಅವಳಿ ಜಿಲ್ಲೆಗಳ ಮೊಬೈಲ್ ಬಳಕೆದಾರರಿಗೆ ಧ್ವನಿಮುದ್ರಿತ ಸಂದೇಶ ನೇರವಾಗಿ ತಲುಪುತ್ತಿದೆ. ಎದೆಗುಂದಿರುವ ರೈತರಲ್ಲಿ ಆತ್ಮಸ್ಥೈರ್ಯ ತುಂಬಲು ಸಚಿವರು ಕೈಗೊಂಡಿರುವ ವಿನೂತನ ಯತ್ನ ಇದಾಗಿದೆ.

"ನಮಸ್ಕಾರ, ನಾನು ಎಸ್. ಆರ್. ಪಾಟೀಲ್, ಮಾಹಿತಿ ತಂತ್ರಜ್ಞಾನ ಸಚಿವ ಮಾತಾಡ್ತಾ ಇದ್ದೇನೆ ಎಂದು ಆರಂಭವಾಗುವ ಈ ಧ್ವನಿ ಸಂದೇಶದ ಸಾರಾಂಶ ಇಲ್ಲಿದೆ. ಜೊತೆಗೆ ಉಚಿತ ಸಹಾಯವಾಣಿ ಸಂಖ್ಯೆ ಕೂಡಾ ನೀಡಲಾಗಿದೆ.

ಆತ್ಮೀಯ ರೈತ ಬಂಧುಗಳೇ, ಮೇಲಿಂದ ಮೇಲೆ ಘಟಿಸುತ್ತಿರುವ ರೈತರ ಆತ್ಮಹತ್ಯೆಗಳು ನನ್ನ ಮನಸ್ಸನ್ನು ತೀವ್ರ ಘಾಸಿಗೊಳಿಸಿವೆ. ಪ್ರಾಣತೆತ್ತ ರೈತರ ಕುಟುಂಬಗಳಿಗೆ ಸಾಂತ್ವನ ಹೇಳಲು ನನ್ನಲ್ಲಿ ಪದಗಳಿಲ್ಲ. ಆದರೆ ಒಬ್ಬ ರೈತನ ಮಗನಾಗಿ ರೈತರ ಕಷ್ಟ-ಕಾರ್ಪಣ್ಯಗಳನ್ನ ಖಂಡಿತವಾಗಿಯೂ ಅರ್ಥ ಮಾಡಿಕೊಳ್ಳಬಲ್ಲೆ.

l

ನಾವೆಲ್ಲ ರೈತರ ಮಕ್ಕಳು. ದೇಶಕ್ಕೇ ಅನ್ನ ನೀಡಬೇಕಾದವರು. ನಮ್ಮೆಲ್ಲರ ಬದುಕಿನಲ್ಲಿ ಕಷ್ಟ-ನಷ್ಟ, ಸೋಲು-ಗೆಲುವುಗಳು ಸಾಮಾನ್ಯ. ಆರ್ಥಿಕ ಪರಿಸ್ಥಿತಿ ಹದಗೆಟ್ಟಾಗ ಮನುಷ್ಯನೊಬ್ಬ ಒತ್ತಡಕ್ಕೆ ಸಿಲುಕುವುದು ಸಹಜ. ಆದರೆ ಮನಸ್ಸು ದುರ್ಬಲ ಮಾಡಿಕೊಂಡು ವಿಪರೀತ ಕ್ರಮಕ್ಕೆ ಮುಂದಾಗುವುದು ಸರಿಯಲ್ಲ. ಮನೆ ಯಜಮಾನನನ್ನು ಕಳೆದುಕೊಂಡಾಗ ಅದರಿಂದ ಕುಟುಂಬದ ಮೇಲೆ ಆಗುವ ಪರಿಣಾಮ ಘೋರ.

ನಾವೇ ಇಲ್ಲವಾದರೆ ನಮ್ಮನ್ನೇ ಅವಲಂಬಿಸಿದ ಹೆಂಡತಿ-ಮಕ್ಕಳ, ತಂದೆ-ತಾಯಂದಿರ ಗತಿಯೇನಾಗಬೇಕು? ಮಕ್ಕಳ ವಿದ್ಯಾಬ್ಯಾಸ, ಅವರ ಭವಿಷ್ಯ ರೂಪಿಸುವ ಗುರುತರ ಜವಾಬ್ಧಾರಿ ನಮ್ಮ ಮೇಲಿದೆ ಎಂಬುದನ್ನು ನಾವು ಮರೆಯಬಾರದು.

ಆತ್ಮಹತ್ಯೆ ಪರಿಹಾರವಲ್ಲ: ಸಮಸ್ಯೆಗಳಿಗೆ ಆತ್ಮಹತ್ಯೆ ಪರಿಹಾರ ಅಲ್ಲವೇ ಅಲ್ಲ. ಹಳ್ಳಕ್ಕೆ ಬಿದ್ದಾಗ ಈಜಬೇಕು. ಇದ್ದು ಜಯಿಸಿಬೇಕು. ನಿಮ್ಮ ಜೊತೆ ನಾವಿದ್ದೇವೆ. ನಾವೆಲ್ಲರೂ ಕೂಡಿಯೇ ಈಗ ಒದಗಿಬಂದಿರುವ ಸಂಕಷ್ಟಗಳಿಗೆ ಪರಿಹಾರ ಕಂಡುಕೊಳ್ಳೋಣ. ರೈತಮಿತ್ರರಲ್ಲಿ ನನ್ನ ಕಳಕಳಿಯ ವಿನಂತಿ. ಖಾಸಗಿ ಬಡ್ಡಿ ಲೇವಾದೇವಿದಾರರಿಂದ ಸಾಲಪಡೆಯುವುದನ್ನು ಆದಷ್ಟು ನಿಲ್ಲಿಸಿ.

ಸಾಲ ಪಡೆಯುವುದು ಅನಿವಾರ್ಯವಾದರೆ ಸಹಕಾರ ಸಂಘಗಳು, ಬ್ಯಾಂಕುಗಳಲ್ಲಿಯೇ ವ್ಯವಹರಿಸಿ. ಯಾವಯಾವ ಬೆಳೆಗೆ ವಿಮೆಸೌಲಭ್ಯ ಇದೆಯೋ ಅದನ್ನು ತಪ್ಪದೇ ಪಡೆದುಕೊಳ್ಳಿ.

ನಾನು ಖಾಸಗಿ ಬಡ್ಡಿ ಲೇವಾದೇವಿದಾರರು ಹಾಗೂ ಉದ್ರಿ ನೀಡುವ ಅಂಗಡಿಕಾರರಲ್ಲಿಯೂ ಕಳಕಳಿಯ ಮನವಿ ಮಾಡುತ್ತೇನೆ. ರೈತನೊಬ್ಬ ಸಂಕಷ್ಟದಲ್ಲಿದ್ದಾಗ ಸಾಲ ಹಿಂತಿರುಗಿಸುವಂತೆ ಇನ್ನಷ್ಟು ಒತ್ತಡ ಹೇರಬೇಡಿ. ಸ್ವಲ್ಪ ಕಾಲಾವಕಾಶ ನೀಡಿ.

ಸ್ವಾಭಿಮಾನಿ ರೈತ ಯಾರ ಋಣದಲ್ಲಿಯೂ ಬದುಕಲು ಇಚ್ಛಿಸುವುದಿಲ್ಲ. ಬೆಳೆ ಕೈಹತ್ತಿದ ತಕ್ಷಣವೇ ನಿಮ್ಮ ಸಾಲವನ್ನು ಮರುಪಾವತಿ ಮಾಡುತ್ತಾನೆ.

SR Patil

ಮಿತ್ರರೇ, ಸಮೂಹ ಸನ್ನಿಗೆ ಒಳಗಾದವರಂತೆ ಎಲ್ಲರೂ ಒಂದೇ ಬೆಳೆಯನ್ನು ಬೆಳೆಯುವುದು ಬೇಡ. ನಿರ್ದಿಷ್ಟ ಕೃಷಿ ಉತ್ಪನ್ನಗಳಿಗೆ ಇರುವ ಬೇಡಿಕೆ ಹಾಗೂ ಪೂರೈಕೆ ಪ್ರಮಾಣದಲ್ಲಿ ಇರುವ ವ್ಯತ್ಯಾಸವನ್ನು ತಿಳಿದುಕೊಂಡು ಬೇಡಿಕೆಗೆ ಅನುಗುಣವಾಗಿ ಬಿತ್ತನೆ ಮಾಡೋಣ.

ಹಾಗೆಯೇ ನೀರಿನ ಲಭ್ಯತೆ, ನಮ್ಮಲ್ಲಿನ ಮಣ್ಣು, ಹವಾಗುಣಕ್ಕೆ ತಕ್ಕಂತೆ ಆದಷ್ಟು ಕಡಿಮೆ ವೆಚ್ಚದಲ್ಲಿ ಬೇರೆ-ಬೇರೆ ಬೆಳೆ ಬೆಳೆಯೋಣ. ಇದಕ್ಕಾಗಿ ಕೃಷಿ ತಜ್ಞರ ಹಾಗೂ ಸಂಬಂಧಪಟ್ಟ ಇಲಾಖೆಗಳ ಸಲಹೆ-ಸೂಚನೆಗಳನ್ನ ಪಡೆಯೋಣ. ಹೀಗಾದಾಗ ಬೇಸಾಯ ಖಂಡಿತವಾಗಿಯೂ ಲಾಭದಾಯಕ ವೃತ್ತಿಯಾಗಲು ಸಾಧ್ಯ.

ರೈತರಿಗಾಗಿ ತಂತ್ರಾಂಶ: ರೈತರ ಉಪಯೋಗಕ್ಕೆ ನಾವು ಕೂಡಾ 'ನಮ್ಮ ರೈತ' ಎಂಬ ತಂತ್ರಾಂಶ ಆಧಾರಿತ ಸಾಧನವೊಂದನ್ನು ಖಾಸಗಿಯಾಗಿ ಅಭಿವೃದ್ಧಿಪಡಿಸಿದ್ದೇವೆ. ಬಾಗಲಕೋಟೆ ಹಾಗೂ ವಿಜಯಪುರ ಅವಳಿ ಜಿಲ್ಲೆಗಳ 1500 ಹಳ್ಳಿಗಳಲ್ಲಿ ರೈತ ಮಂಡಳಿಗಳನ್ನು ರಚಿಸಿ ಉಚಿತವಾಗಿ 'ನಮ್ಮ ರೈತ' ಟ್ಯಾಬ್ ಗಳನ್ನು ನೀಡಿದ್ದೇವೆ.

ಇದರಲ್ಲಿ ಕೃಷಿಗೆ ಸಂಬಂಧಿಸಿದ ಬಹುತೇಕ ಸಮಸ್ಯೆಗಳಿಗೆ ಮಾಹಿತಿ, ಪರಿಹಾರ ಒದಗಿಸುವ ಪ್ರಯತ್ನ ಮಾಡಿದ್ದೇವೆ. ಇದಕ್ಕಾಗಿ ಒಂದು ಕಾಲ್ ಸೆಂಟರ್ ಕೂಡಾ ಸ್ಥಾಪಿಸಿದ್ದೇವೆ. ತಮಗೆ ಏನೇ ಸಮಸ್ಯೆ ಇದ್ದರೂ ದಯವಿಟ್ಟು ದೂರವಾಣಿ ಸಂಖ್ಯೆ 08354-233755 ಕ್ಕೆ ಕರೆಮಾಡಿ.

ರೈತ ಬಂಧುಗಳೇ ನಿಮ್ಮಲ್ಲಿ ನಾನು ಮತ್ತೊಮ್ಮೆ ಕಳಕಳಿಯಿಂದ ವಿನಂತಿ ಮಾಡುತ್ತೇನೆ. ಮನಸ್ಸನ್ನು ದುರ್ಬಲ ಮಾಡಿಕೊಂಡು ಅನುಚಿತ ಕ್ರಮಕ್ಕೆ ಮುಂದಾಗುವುದು ಬೇಡ. ನಾವೆಲ್ಲರೂ ಒಟ್ಟಾಗಿ ನಮ್ಮ ಮಕ್ಕಳಿಗೆ ಭವ್ಯ ಭವಿಷ್ಯವನ್ನ ಕಟ್ಟಿಕೊಡೋಣ. ಇದು ನಮ್ಮ ಸಂಕಲ್ಪವಾಗಲಿ. ನಮಸ್ಕಾರ.

English summary
Karnataka Minister for Information and Technology, Bio technology, Planning SR Patil has introduced a toll-free number, audio and video clip for the benefit of farmers. Minister Patil has also made a appeal to farmers in distress not to resort to any extreme step.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X