ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕರ್ನಾಟಕ ಬಜೆಟ್ 2021: ಕೃಷಿ ಕ್ಷೇತ್ರಕ್ಕೆ ಏನು? ಎಷ್ಟು ಹಂಚಿಕೆ ಮಾಡಲಾಗಿದೆ?

|
Google Oneindia Kannada News

ಬೆಂಗಳೂರು, ಮಾರ್ಚ್ 8: ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರು 2021-22ನೇ ಸಾಲಿನ ಆಯವ್ಯಯ ಮಂಡಿಸಿದ್ದು, ಅದರಲ್ಲಿ ಕೃಷಿ ಕ್ಷೇತ್ರಕ್ಕೆ ಪ್ರಾಧಾನ್ಯತೆ ಕೊಟ್ಟಿದ್ದಾರೆ.

ಕೃಷಿ ಹಾಗೂ ಪೂರಕ ಚಟುವಟಿಕೆ

" ಕೃಷಿಕರ ಆದಾಯವನ್ನು 2023ರ ವೇಳೆಗೆ ದ್ವಿಗುಣಗೊಳಿಸುವ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಕನಸನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರವು ಕೇಂದ್ರದೊಂದಿಗೆ ಕೈಜೋಡಿಸಿ ಹಲವು ಕ್ರಮಗಳನ್ನು ಕೈಗೊಂಡಿದೆ."

"ಗುಣಮಟ್ಟದ ಬಿತ್ತನೆ ಬೀಜ ಲಭ್ಯತೆ, ಬೆಳೆ ನಿರ್ವಹಣೆ, ಕೊಯ್ಲೋತ್ತರ ನಿರ್ವಹಣೆ, ಸಂಗ್ರಹಣೆ, ಸಂಸ್ಕರಣೆ ಮಾರಾಟ ಹೀಗೆ ಪ್ರತಿ ಹಂತದಲ್ಲೂ ರೈತರಿಗೆ ಅಗತ್ಯ ಮೂಲಸೌಲಭ್ಯ ಒದಗಿಸಿ ಬೆಂಬಲ ನೀಡಲು ಸರ್ಕಾರ ಬದ್ಧವಾಗಿದೆ" ಎಂದು ಬಿ.ಎಸ್ ಯಡಿಯೂರಪ್ಪ ಬಜೆಟ್ ನಲ್ಲಿ ತಿಳಿಸಿದ್ದಾರೆ.

 Karnataka budget 2021: Major Allocations, Schemes For Agriculture Sector

"ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ರೈತರಿಗೆ ಕೇಂದ್ರ ಸರ್ಕಾರ ವಾರ್ಷಿಕ ತಲಾ 6000 ರೂ.ಗಳ ನೆರವು ನೀಡಿದರೆ, ರಾಜ್ಯ ಸರ್ಕಾರದಿಂದ ತಲಾ 4000 ರೂ.ಗಳ ನೆರವು ನೀಡಲಾಗುತ್ತಿದೆ. ರಾಜ್ಯದಲ್ಲಿ ಇಲ್ಲಿಯವರೆಗೆ 53 ಲಕ್ಷಕ್ಕೂ ಹೆಚ್ಚು ರೈತರಿಗೆ ಈ ಯೋಜನೆ ತಲುಪಿಸಲಾಗಿದೆ" ಎಂದು ಸಿಎಂ ಹೇಳಿದರು.

"ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಂದ ಒಟ್ಟಾರೆ 7730 ಕೋಟಿ ರೂ.ಗಳ ಆರ್ಥಿಕ ನೆರವನ್ನು ವರ್ಗಾಯಿಸಲಾಗಿದೆ. ಈ ಯೋಜನೆಯಡಿ ದೇಶದಲ್ಲಿಯೇ ಅತ್ಯಂತ ಹೆಚ್ಚು ಆಧಾರ್ ದೃಢೀಕೃತ ಮಾಹಿತಿ (ಶೇ.97) ಹಾಗೂ ಆಧಾರ್ ಆಧಾರಿತ ನೇರ ನಗದು ವರ್ಗಾವಣೆಗಾಗಿ (ಶೇ.90) ರಾಜ್ಯವು ಕೇಂದ್ರ ಸರ್ಕಾರದ ಪ್ರಶಸ್ತಿಗೆ ಭಾಜನವಾಗಿದೆ."

"ಪ್ರಧಾನಮಂತ್ರಿ ಫಸಲ್ ಭೀಮಾ ಯೋಜನೆ, ಪ್ರಧಾನಮಂತ್ರಿ ಸಿಂಚಾಯಿ ಯೋಜನೆ ಮುಂತಾದ ಕೇಂದ್ರದ ಯೋಜನೆಗಳನ್ನು ಅನುಷ್ಠಾನಗೊಳಿಸಲು ಸರ್ಕಾರ ಕ್ರಮವಹಿಸಿದೆ. ಪ್ರಸಕ್ತ ಸಾಲಿನಲ್ಲಿ ಪ್ರಧಾನಮಂತ್ರಿ ಫಸಲ್ ಭೀಮಾ ಯೋಜನೆಗೆ 900 ಕೋಟಿ ರೂ.ಗಳನ್ನು ಹಾಗೂ ಪ್ರಧಾನಮಂತ್ರಿ ಸಿಂಚಾಯಿ ಯೋಜನೆಗೆ 831 ಕೋಟಿ ರೂ.ಗಳನ್ನು ಒದಗಿಸಲಾಗಿದೆ."

"ರಾಜ್ಯ ಸರ್ಕಾರವು ಕೃಷಿ ಉತ್ಪನ್ನಗಳಿಗೆ ಮುಕ್ತ ಮಾರುಕಟ್ಟೆ ಸೌಲಭ್ಯ ಒದಗಿಸಲು ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ಮಾಡಲಾಗಿದೆ. ರೈತರ ಮೇಲಿನ ಹೊರೆಯನ್ನು ಕಡಿಮೆ ಮಾಡಲು ಮಾರುಕಟ್ಟೆ ಶುಲ್ಕವನ್ನು ಶೇ.1.5 ರಿಂದ ಶೇ.0.60ಗೆ ಇಳಿಸಲಾಗಿದೆ. ಇದಲ್ಲದೇ, ಕೃಷಿ ಉತ್ಪನ್ನ ಸಂಗ್ರಹಣೆ ಹಾಗೂ ಸಂಸ್ಕರಣೆಗೆ ಕೂಡ ಆದ್ಯತೆ ನೀಡಿದೆ."

" ಜನರಿಗೆ ಆರೋಗ್ಯಕರ ಹಾಗೂ ರಸಾಯನಿಕ ಮುಕ್ತ ಕೃಷಿ ಮತ್ತು ತೋಟಗಾರಿಕಾ ಉತ್ಪನ್ನಗಳನ್ನು ದೊರಕಿಸಲು ಹಾಗೂ ಸಾವಯುವ ಕೃಷಿಯನ್ನು ಉತ್ತೇಜಿಸಲು 500 ಕೋಟಿ ರೂ.ಗಳ ಯೋಜನೆಯನ್ನು ರೂಪಿಸಲಾಗುವುದು."

"ಕೃಷಿ ನವೋದ್ಯಮಗಳ ಮತ್ತು ಸಣ್ಣ ಹಾಗೂ ಮಧ್ಯಮ ಕೈಗಾರಿಕೆಗಳ ಸ್ಥಾಪನೆಗೆ ಅವಕಾಶ ಕಲ್ಪಿಸಲು ಹಾಗೂ ಸ್ಥಳೀಯ ಉತ್ಪನ್ನಗಳ ಸಂಸ್ಕರಣೆಗೆ ಉತ್ತೇಜನ ನೀಡಲು ವಿಜಯಪುರ ಜಿಲ್ಲೆಯ ಇಟ್ಟಂಗಿಹಾಳ ಗ್ರಾಮದಲ್ಲಿ ಆತ್ಮನಿರ್ಭರ ಭಾರತ ಅಭಿಯಾನ ಯೋಜನೆಯಡಿ ಆಹಾರ ಪಾರ್ಕನ್ನು ಸ್ಥಾಪಿಸಲಾಗುವುದು."

"ಕೃಷಿ ವಿಶ್ವವಿದ್ಯಾಲಯಗಳಲ್ಲಿ ರೈತರ ಮಕ್ಕಳಿಗೆ ನೀಡುತ್ತಿರುವ ಮೀಸಲಾತಿಯನ್ನು ಶೇ.40 ರಿಂದ ಶೇ.50ಕ್ಕೆ ಹೆಚ್ಚಿಸಲಾಗುವುದು."

"ರೈತರು ಮಿತವ್ಯದಲ್ಲಿ ಆಧುನಿಕ ಕೃಷಿ ಪದ್ಧತಿ ಅಳವಡಿಸಿಕೊಳ್ಳಲು ನೆರವಾಗುವಂತೆ ಕೃಷಿ ಯಂತ್ರಧಾರೆ ಕೇಂದ್ರಗಳನ್ನು ಬಲಪಡಿಸಲಾಗುವುದು. ಈ ಉದ್ದೇಶಕ್ಕಾಗಿ ಯಂತ್ರೋಪಕರಣಗಳನ್ನು ಒದಗಿಸಲಾಗುವುದು. ವಿವಿಧ ಕೃಷಿ ಬೆಳೆಗಳನ್ನು ಒಕ್ಕಲು ಮಾಡಲು ಕಂಬೈನ್ಡ್ ಹಾರ್ವೆಸ್ಟರ್ ಗಳನ್ನೂ ಸಹ ಪೂರೈಸಲಾಗುವುದು."

"ಕೃಷಿ ಯಾಂತ್ರೀಕರಣ ಯೋಜನೆಯಡಿ ಸಣ್ಣ ಟ್ರ್ಯಾಕ್ಟರ್ ಗಳಿಗೆ ಸಹಾಯಧನ ನೀಡುತ್ತಿದ್ದು, ಇದನ್ನು 25-45 PTO HP ಟ್ರ್ಯಾಕ್ಟರ್ ಗಳಿಗೂ ವಿಸ್ತರಿಸಲಾಗುವುದು."

"ದ್ವಿದಳ ಧಾನ್ಯಗಳ ಉತ್ಪಾದನೆಯನ್ನು ಹೆಚ್ಚಿಸಲು ಬಿತ್ತನೆ ಬೀಜ ಹಾಗೂ ಹಸಿರೆಲೆ ಗೊಬ್ಬರದ ವಿತರಣೆ ಮಾಡಿ ಸಾವಯುವ ಇಂಗಾಲ ಹೆಚ್ಚಿರುವ ಅಭಿಯಾನ ಕಾರ್ಯಕ್ರಮವನ್ನು 75 ಕೋಟಿ ರೂ. ವೆಚ್ಚದಲ್ಲಿ ಮುಂದಿನ ಐದು ವರ್ಷಗಳಲ್ಲಿ ಅನುಷ್ಠಾನಗೊಳಿಸಲಾಗುವುದು. ಈ ಉದ್ದೇಶಕ್ಕೆ 2021-22ನೇ ಸಾಲಿನಲ್ಲಿ 10 ಕೋಟಿ ರೂ, ಅನುದಾನವನ್ನು ಒದಗಿಸಲಾಗುವುದು."

"ಆತ್ಮನಿರ್ಭರ ಭಾರತ ಅಭಿಯಾನ ಯೋಜನೆಯಡಿಯಲ್ಲಿ ಪ್ರಧಾನಮಂತ್ರಿಗಳ ಕಿರು ಆಹಾರ ಸಂಸ್ಕರಣೆ ಉದ್ದಿಮೆಗಳ ನಿಯಮಬದ್ಧಗೊಳಿಸುವಿಕೆ ಯೋಜನೆ ಹಾಗೂ ಇತರ ಕಾರ್ಯಕ್ರಮಗಳಡಿಯಲ್ಲಿ ಶೇ.35ರಷ್ಟು ಸಹಾಯಧನವನ್ನು ವಿವಿಧ ಚಟುವಟಿಕೆಗಳಾದ ಶೀತಲಗೃಹ ನಿರ್ಮಾಣ, ಕೊಯ್ಲೋತ್ತರ ನಿರ್ವಹಣೆ ಮತ್ತು ಸಂಸ್ಕರಣಾ ಘಟಕಗಳ ಸ್ಥಾಪನೆಗೆ ನೀಡಲಾಗುತ್ತಿದೆ. ಈ ಸಹಾಯಧನವನ್ನು ಶೇ.50ಕ್ಕೆ ಹೆಚ್ಚಿಸಲು ರಾಜ್ಯ ಸರ್ಕಾರವು ಶೇ.15ರಷ್ಟು ಹೆಚ್ಚುವರಿ ಸಹಾಯಧನ ನೀಡಲಿದೆ. ಈ ಯೋಜನೆಗೆ 50 ಕೋಟಿ ರೂ.ಗಳನ್ನು ಹಂಚಿಕೆ ಮಾಡಲಾಗುವುದು."

"ಅತ್ಯುತ್ತಮ ತರಬೇತಿ, ನೂತನ ಆವಿಷ್ಕಾರಗಳು ಹಾಗೂ ತಂತ್ರಜ್ಞಾನಗಳನ್ನು ಪರಿಚಯಿಸುವ ಮೂಲಕ ತೋಟಗಾರಿಕಾ ಬೆಳೆಗಾರರ ಆರ್ಥಿಕ ಅಭಿವೃದ್ಧಿಗೆ ನೆರವು ನೀಡಲು ಕೊಪ್ಪಳ ಜಿಲ್ಲೆಯ ಸಿರಿವಾರ ಗ್ರಾಮದಲ್ಲಿ ತೋಟಗಾರಿಕೆ ತಂತ್ರಜ್ಞಾನ ಪಾರ್ಕ್ ಅನ್ನು ಅಭಿವೃದ್ಧಿಪಡಿಸಲಾಗುವುದು."

"ವಿನೂತನ ತಂತ್ರಜ್ಞಾನ, ಹೊಸ ಬೆಳೆ ತಳಿಗಳು, ಉತ್ತಮ ನಿರ್ವಹಣಾ ಪದ್ಧತಿಗಳನ್ನು ರೈತರಿಗೆ ಪರಿಚಯಿಸಲು ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆ (IIHR) ಮತ್ತು ರಾಜ್ಯದ ಕೃಷಿ ಮತ್ತು ತೋಟಗಾರಿಕಾ ವಿಶ್ವವಿದ್ಯಾನಿಲಯ ಸಹಯೋಗದೊಂದಿಗೆ ಪ್ರಾತ್ಯಕ್ಷಿಕ ಕ್ಷೇತ್ರಗಳನ್ನು ಅಭಿವೃದ್ಧಿಪಡಿಸುವುದು."

"ರೈತ ಉತ್ಪಾದಕರ ಸಂಸ್ಥೆಗಳು ಮಾರಾಟ ಮಾಡುವ ತೋಟಗಾರಿಕಾ ಉತ್ಪನ್ನಗಳಿಗೆ ಏಕರೂಪದ ಬ್ರಾಂಡಿಂಗ್ ಮತ್ತು ಮಾರುಕಟ್ಟೆ ಸೌಲಭ್ಯಗಳನ್ನು ಒದಗಿಸಿ 'ಬ್ರಾಂಡ್ ವ್ಯಾಲ್ಯೂ' ಹೆಚ್ಚಿಸಲಾಗುವುದು. ರೈತ ಉತ್ಪಾದಕರ ಸಂಸ್ಥೆಗಳ ತೋಟಗಾರಿಕೆ ಉತ್ಪನ್ನಗಳಿಗೆ ಉತ್ತಮ ಮಾರುಕಟ್ಟೆ, ಸಂಪರ್ಕ ಮತ್ತು ಪ್ರಚಾರಕ್ಕಾಗಿ ಏಕೀಕೃತ ಮಾರುಕಟ್ಟೆ ವೇದಿಕೆ ಕಲ್ಪಿಸಿ ತಂತ್ರಜ್ಞಾನ ಅಳವಡಿಕೆಯನ್ನು ಉತ್ತೇಜಿಸಲಾಗುವುದು."

"ಸಣ್ಣ ಮತ್ತು ಅತೀ ಸಣ್ಣ ಹಿಡುವಳಿದಾರರು ಕಡಿಮೆ ಜಮೀನಿನಲ್ಲಿ ಕೃಷಿ, ತೋಟಗಾರಿಕೆ ಮತ್ತಿತರ ಉಪ ಕಸುಬುಗಳನ್ನು ಕೈಗೊಳ್ಳುವ ಮೂಲಕ ಸುಸ್ಥಿರವಾಗಿ ವರ್ಷವಿಡೀ ವರಮಾನ ಪಡೆಯಲು 'ಸಮಗ್ರ ಕೃಷಿ ಪದ್ಧತಿ' ಕಾರ್ಯಕ್ರಮವನ್ನು ಅನುಷ್ಠಾನಗೊಳಿಸಲಾಗುವುದು."

ರೈತರಿಗೆ ಉತ್ತಮ ಗುಣಮಟ್ಟದ ಹೈಬ್ರಿಡ್ ಬೀಜ ಮತ್ತು ಬೀಜ ತಂತ್ರಜ್ಞಾನವನ್ನು ಸುಲಭವಾಗಿ ಒದಗಿಸಲು ಅವುಗಳ ಉತ್ಪಾದಕತೆ, ಲಾಭದಾಯಕತೆ ಮತ್ತು ಜನಪ್ರಿಯತೆಯನ್ನು ಹೆಚ್ಚಿಸಲು ಹೊಸ ಹೈಬ್ರಿಡ್ ಬೀಜ ನೀತಿಯನ್ನು ರೂಪಿಸಲಾಗುವುದು.

"ಚಿಕ್ಕಮಗಳೂರು, ದಕ್ಷಿಣ ಕನ್ನಡ, ಶಿವಮೊಗ್ಗ, ಕೊಡಗು ಜಿಲ್ಲೆಯ ಅಡಿಕೆ ಬೆಳೆಗಾರರನ್ನು ತೀವ್ರವಾಗಿ ಬಾಧಿಸುತ್ತಿರುವ ಹಳದಿ ಎಲೆ ರೋಗದ ಕುರಿತು ಸಂಶೋಧನೆ ತೀವ್ರಗೊಳಿಸಲು ಹಾಗೂ ಪರ್ಯಾಯ ಬೆಳೆಯನ್ನು ಪ್ರೋತ್ಸಾಹಿಸಲು 25 ಕೋಟಿ ರೂ.ಗಳಲ್ಲಿ ಕಾರ್ಯಕ್ರಮವನ್ನು ಯೋಜಿಸಲಾಗುವುದು."

"ರಾಜ್ಯಾದಾದ್ಯಂತ ಸುವಾಸನೆಯುಕ್ತ ಮತ್ತು ವೈದ್ಯಕೀಯ ಗಿಡಗಳು, ಹಣ್ಣು ಹಂಪಲು, ತರಕಾರಿಗಳು ಮತ್ತು ಸಾಂಬಾರ ಪದಾರ್ಥಗಳಿಗಾಗಿ ಹೊಸ ಕೃಷಿ ರಫ್ತು ವಲಯ ಸ್ಥಾಪಿಸಲಾಗುವುದು. ಈ ಉತ್ಪನ್ನಗಳ ರಫ್ತಿಗೆ ಅನುವಾಗುವಂತೆ ರಾಜ್ಯದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳಲ್ಲಿ ಅಗತ್ಯ ಸೌಲಭ್ಯಗಳನ್ನು ಒದಗಿಸಲಾಗುವುದು."

ದ್ರಾಕ್ಷಿ ಬೆಳೆಯ ಮೌಲ್ಯವರ್ಧನೆ, ಬ್ರಾಂಡಿಂಗ್ ಹಾಗೂ ಮಾರ್ಕೆಟಿಂಗ್ ಕ್ಷೇತ್ರಗಳ ಉನ್ನತೀಕರಣವನ್ನು ಒಳಗೊಂಡಂತೆ ದ್ರಾಕ್ಷಿ ಕೃಷಿಯನ್ನು ಪ್ರೋತ್ಸಾಹಿಸಲು ಕರ್ನಾಟಕ ದ್ರಾಕ್ಷಾರಸ ಮಂಡಳಿಯನ್ನು ಕರ್ನಾಟಕ ದ್ರಾಕ್ಷಿ ಹಾಗೂ ದ್ರಾಕ್ಷಾರಸ ಮಂಡಳಿಯನ್ನಾಗಿ ಪುನರ್ ರಚಿಸಲಾಗುವುದು.

"ನಮ್ಮ ಸರ್ಕಾರವು ಓಕಳಿಪುರಂನಲ್ಲಿ ರೇಷ್ಮೆ ಇಲಾಖೆಗೆ ಸೇರಿದ ಜಮೀನಿನಲ್ಲಿ ಇಲಾಖೆಯ ಎಲ್ಲಾ ಕಚೇರಿಗಳು, ಸಂಬಂಧಿತ ಸಂಸ್ಥೆಗಳು ಹಾಗೂ ವಾಣಿಜ್ಯ ಮಳಿಗೆಗಳಿಗೆ ಸ್ಥಳಾವಕಾಶ ಕಲ್ಪಿಸಲು ಖಾಸಗಿ ಸಹಭಾಗಿತ್ವದಲ್ಲಿ 150 ಕೋಟಿ ರೂ.ಗಳ ವೆಚ್ಚದಲ್ಲಿ ರೇಷ್ಮೆ ಭವನ ನಿರ್ಮಿಸಲಿದೆ."

"ರಾಮನಗರದಲ್ಲಿ ಅತ್ಯಾಧುನಿಕ ಸೌಲಭ್ಯಗಳನ್ನು ಒಳಗೊಂಡ ಹೈ-ಟೆಕ್ ರೇಷ್ಮೆಗೂಡು ಮಾರುಕಟ್ಟೆಯನ್ನು ರೇಷ್ಮೆ ಭಾಗೀದಾರರ ಹಿತಕ್ಕಾಗಿ ನಬಾರ್ಡ್ ಸಹಾಯದೊಂದಿಗೆ 75 ಕೋಟಿ ರೂ.ಗಳ ವೆಚ್ಚದಲ್ಲಿ ನಿರ್ಮಾಣ ಮಾಡಲಾಗುವುದು."

"ಯಶವಂತಪುರ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ವತಿಯಿಂದ ಬೈಯಪ್ಪನಹಳ್ಳಿಯ 8 ಎಕರೆ ಜಮೀನಿನಲ್ಲಿ 50 ಕೋಟಿ ರೂ.ಗಳ ವೆಚ್ಚದಲ್ಲಿ ಸುಸಜ್ಜಿತ ಹೂವಿನ ಮಾರುಕಟ್ಟೆ ನಿರ್ಮಾಣ."

"ಸಿಂಗೇನ ಅಗ್ರಹಾರದ ಹಣ್ಣು ಮಾರುಕಟ್ಟೆಗೆ ಹೊಂದಿಕೊಂಡಿರುವ ಗುಳಿಮಂಗಳ ಗ್ರಾಮದ 42 ಎಕರೆ ಪ್ರದೇಶದಲ್ಲಿ ಅತ್ಯಾಧುನಿಕ ತರಕಾರಿ ಮಾರುಕಟ್ಟೆಯನ್ನು ನಿರ್ಮಾಣ."

"ಬಳ್ಳಾರಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯಿಂದ ಆಲದಹಳ್ಳಿ ಗ್ರಾಮದಲ್ಲಿ ಅತ್ಯಾಧುನಿಕ ಸೌಲಭ್ಯಗಳುಳ್ಳ ಒಣಮೆಣಸಿನಕಾಯಿ ಮಾರುಕಟ್ಟೆಯನ್ನು ಸಾರ್ವಜನಿಕ-ಖಾಸಗಿ ಸಹಭಾಗಿತ್ವದಲ್ಲಿ ಸ್ಥಾಪಿಸಲಾಗುವುದು."

"ಚಾಮರಾಜನಗರದಲ್ಲಿ ಅರಿಶಿನ ಮಾರುಕಟ್ಟೆಯನ್ನು ಸಾರ್ವಜನಿಕ - ಖಾಸಗಿ ಸಹಭಾಗಿತ್ವದಲ್ಲಿ ಸಮಗ್ರವಾಗಿ ಅಭಿವೃದ್ಧಿಪಡಿಸಲಾಗುವುದು."

"ಮೆಣಸಿನಕಾಯಿ ಬೆಳೆಯುವ ರೈತರಿಗೆ ಸ್ಪರ್ಧಾತ್ಮಕ ದರ ಬ್ಯಾಡಗಿ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ 'ಆಧುನಿಕ ಗುಣವಿಶ್ಲೇಷಣಾ ಘಟಕ'ವನ್ನು ನಾಲ್ಕು ಕೋಟಿ ರೂ. ಗಳ ವೆಚ್ಚದಲ್ಲಿ ಸ್ಥಾಪಿಸಲಾಗುವುದು."

"ಮಹದಾಯಿ ನ್ಯಾಯಾಧಿಕರಣದ ತೀರ್ಪಿನನ್ವಯ ರಾಜ್ಯದ ಕಳಸಾ ಮತ್ತು ಬಂಡೂರಿ ನಾಲಾ ತಿರುವು ಯೋಜನೆಗಳಿಗೆ ಹಂಚಿಕೆಯಾದ ನೀರಿನ ಬಳಕೆಗೆ ಒಟ್ಟು 1677 ಕೋಟಿ ರೂ. ವರದಿಗಳಿಗೆ ಆಡಳಿತಾತ್ಮಕ ಅನುಮೋದನೆ."

"ಟಿ.ಎ.ಪಿ.ಸಿ.ಎಂ.ಎಸ್ ಹಾಗೂ ಇತರೆ ಸಹಕಾರ ಸಂಸ್ಥೆಗಳು ಹೊಂದಿರುವ ಗೋದಾಮುಗಳಲ್ಲಿ ಸಂಗ್ರಹಿಸಿಡಲು ರೈತರು ಪಾವತಿಸುವ ಸಂಗ್ರಹಣಾ ಶುಲ್ಕದಲ್ಲಿ ಶೇ.25 ರಷ್ಟು ಸಹಾಯಧನವನ್ನು ಸರ್ಕಾರದ ವತಿಯಿಂದ ಒದಗಿಸಲಾಗುವುದು. ಈ ಉದ್ದೇಶಕ್ಕಾಗಿ 25 ಕೋಟಿ ರೂ. ಅನುದಾನ ನಿಗದಿಪಡಿಸಲಾಗಿದೆ."

"ರಾಜ್ಯದ ಪ್ರಾಥಮಿಕ ಕೃಷಿ ಪತ್ತಿನ ಸಂಘಗಳು ( PACS ) ಹಾಗೂ ಟಿ.ಎ.ಪಿ.ಸಿ.ಎಂ.ಎಸ್.ಗಳು, ರೈತರು ಬೆಳೆದ ಕೃಷಿ ಉತ್ಪನ್ನಗಳನ್ನು ಗೋದಾಮುಗಳಲ್ಲಿ ಶೇಖರಣೆ ಮಾಡಿ ಇದರ ಮೇಲೆ ಮಾರುಕಟ್ಟೆ ಬೆಲೆಯ ಶೇ.60 ರಷ್ಟು ಅಡಮಾನ ಸಾಲವನ್ನು ಶೇ.11ರ ಬಡ್ಡಿ ದರದಲ್ಲಿ ವಿತರಿಸುತ್ತಿವೆ."

"ಸದರಿ ಸಾಲಗಳ ಮೇಲೆ ಗರಿಷ್ಟ ಆರು ತಿಂಗಳ ಅವಧಿಗೆ ಶೇ.4 ರ ಬಡ್ಡಿ ಸಹಾಯಧನವನ್ನು ರಾಜ್ಯ ಸರ್ಕಾರವು ನೀಡಲು ಐದು ಕೋಟಿ ರೂ.ಗಳನ್ನು ಆಯವ್ಯಯದಲ್ಲಿ ಪ್ರಸ್ತಾಪಿಸಲಾಗಿದೆ."

"5500 ಪ್ರಾಥಮಿಕ ಪತ್ತಿನ ಸಹಕಾರ ಸಂಘಗಳ ಕಾರ್ಯಕ್ಷಮತೆಯನ್ನು ಹೆಚ್ಚಿಸಲು ಅವುಗಳನ್ನು 198 ಕೋಟಿ ರೂ ವೆಚ್ಚದಲ್ಲಿ ರೂ. ಗಣಕೀಕರಣಗೊಳಿಸಲಾಗುವುದು."

"ಬ್ಯಾಂಕಿನಲ್ಲಿ ಸರ್ಕಾರದ ಪ್ರೋತ್ಸಾಹಿಸಲು ಹಾಗೂ ಷೇರು ಬಂಡವಾಳ ಹೆಚ್ಚಿಸುವ ಉದ್ದೇಶದಿಂದ 21 ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕುಗಳಿಗೆ 10 ಲಕ್ಷ ರೂ.ಗಳ ಗರಿಷ್ಠ ಮಿತಿಗೊಳಪಟ್ಟು ಶೇ.25 ರಷ್ಟು ಷೇರು ಬಂಡವಾಳ ನೀಡಲಾಗುವುದು."

English summary
Chief Minister BS Yediyurappa has presented the budget for 2021-22, major allocations to agriculture sector.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X