• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕಲ್ಲಂಗಡಿ ಬೆಳೆಯುವ ರೈತರಿಗೆ ತೋಟಗಾರಿಕಾ ಇಲಾಖೆ ಸಲಹೆ

|

ಕೊಪ್ಪಳ, ಡಿಸೆಂಬರ್ 6: ಮಾವು, ಪಪ್ಪಾಯಿ, ಬಾಳೆ ಸೇರಿದಂತೆ ವಿವಿಧ ತೋಟಗಾರಿಕಾ ಬೆಳೆಗಳನ್ನು ಬೆಳೆಯುವ ಮೂಲಕ ಕೊಪ್ಪಳ ಜಿಲ್ಲೆಯ ರೈತರು ಯಶಸ್ಸುಗಳಿಸಿದ್ದಾರೆ. ತೋಟಗಾರಿಕಾ ಇಲಾಖೆ ಕಲ್ಲಂಗಡಿ ಬೆಳೆಯಲು ಜಿಲ್ಲೆಯ ರೈತರಿಗೆ ಸಲಹೆಯನ್ನು ನೀಡಿದೆ.

ಕಲ್ಲಂಗಡಿ ಒಂದು ಕುಂಬಳ ಜಾತಿಗೆ ಸೇರಿದ ತರಕಾರಿ ಬೆಳೆಯಾಗಿದೆ. ಇದು ಅಲ್ಪಾವಧಿಯ ಬೆಳೆ ನಾಟಿ ಮಾಡಿದ 75 ರಿಂದ 100 ದಿನಗಳಲ್ಲಿ ಫಲಸು ಬರುತ್ತದೆ. ಹೆಚ್ಚಿನ ಲಾಭ ಕೊಡುವ ಬೆಳೆಯೂ ಆಗಿದೆ.

ವಾಟ್ಸಪ್, ಫೇಸ್ ಬುಕ್ ಮೂಲಕ ಮಾವು ಮಾರಿ ಮಾದರಿಯಾದ ರೈತ!

ಹೆಚ್ಚಿನ ಉಷ್ಣಾಂಶವನ್ನು ತಡೆದುಕೊಳ್ಳುವ ಸಾಮರ್ಥ್ಯ ಕಲ್ಲಂಗಡಿ ಬೆಳೆಗೆ ಇದೆ. ಈ ಬೆಳೆಗೆ ಕೊಪ್ಪಳ ಜಿಲ್ಲೆ ತುಂಬಾ ಸೂಕ್ತ ಪ್ರದೇಶವಾಗಿದೆ ಎಂದು ತೋಟಗಾರಿಕಾ ಇಲಾಖೆ ಹೇಳಿದ್ದು, ಜಿಲ್ಲೆಯ ರೈತರು ಕಲ್ಲಂಗಡಿ ಬೆಳೆಯಲು ಬೇಕಾದ ಅಗತ್ಯ ಮಾಹಿತಿಯನ್ನು ಇಲಾಖೆ ನೀಡಿದೆ.

ದೆಹಲಿಗೂ ಪಪ್ಪಾಯ ಕಳಿಸಿ ಮಾದರಿಯಾದ ಕೊಪ್ಪಳದ ರೈತ

ಬೆಳೆ ಬೆಳೆಯಲು ಬೇಕಾದ ಹವಾಮಾನ, ಪ್ರಮುಖ ತಳಿಗಳು, ನಾಟಿ ವಿಧಾನ, ಕಲ್ಲಂಗಡಿ ಬೆಳೆ ಹೇಗೆ ಲಾಭದಾಯಕ ಎಂಬ ಮಾಹಿತಿಯನ್ನು ತೋಟಗಾರಿಕಾ ಇಲಾಖೆ ರೈತರಿಗಾಗಿ ನೀಡಿದೆ. ಇನ್ನೂ ಹೆಚ್ಚಿನ ಮಾಹಿತಿಗಾಗಿ ರೈತರು ತೋಟಗಾರಿಕಾ ಇಲಾಖೆಯನ್ನು ಸಂಪರ್ಕಿಸಬಹುದು.

ಕಲ್ಲು ಭೂಮಿಯಲ್ಲಿ ಅಂಜದೆ ಅಂಜೂರ ಬೆಳೆದ ಕೊಪ್ಪಳ ರೈತ!

ಹವಾಮಾನ, ನಾಟಿ ವಿಧಾನ

ಹವಾಮಾನ, ನಾಟಿ ವಿಧಾನ

ಭೂಮಿಯ ಉಷ್ಣತೆ 20 ಡಿಗ್ರಿ ಸೆಲ್ಸಿಯಸ್ ಹೆಚ್ಚಿದ್ದು ಹವಾಗುಣ 25-32 ಡಿಗ್ರಿ ಸೆಲ್ಸಿಯಸ್ ಇರುವ ಎಲ್ಲಾ ಬಯಲು ಸೀಮೆ ಪ್ರದೇಶ, ನೀರು ಬಸಿದುಹೋಗುವ ಸಾಧಾರಣ ಎರೆ ಮಣ್ಣು, ಮರಳು ಮಿಶ್ರಿತ ಕೆಂಪು ಮಣ್ಣು ಹಾಗೂ ನದಿ ತೀರದ ಪ್ರದೇಶ ಕಲ್ಲಂಗಡಿ ಬೆಳೆಗೆ ಸೂಕ್ತ. ಸವಳು ಮಣ್ಣು ಸೂಕ್ತವಲ್ಲ, ಅಕಾಲಿಕ ಜೋರು ಮಳೆ ಈ ಬೆಳೆಗೆ ಹಾನಿಕಾರಕ.

4 ರಿಂದ 6 ಅಡಿ ಸಾಲಿನಿಂದ ಸಾಲಿಗೆ ಹಾಗೂ 2 ರಿಂದ 3 ಅಡಿ ಬೀಜ/ ಸಸಿಗಳ ನಡುವಿನ ಅಂತರ ಸೂಕ್ತ. ಎಕರೆಗೆ 4000 ರಿಂದ 4500 ಸಸಿಗಳ ಸಂಖ್ಯೆ ಉತ್ತಮ. ಬಿತ್ತುವ ಪೂರ್ವದಲ್ಲಿ ಚೆನ್ನಾಗಿ ಭೂಮಿ ಉಳುಮೆ ಮಾಡಿ 5 ಟನ್ ಕಾಂಪೋಸ್ಟ್ ಗೊಬ್ಬರ ಅಥವಾ 10 ರಿಂದ 12 ಟನ್ ಕೊಟ್ಟಿಗೆ ಗೊಬ್ಬರ ಬೆರೆಸಿ ಮೂರು ವಾರಗಳ ನಂತರ 30 ರಿಂದ 40 ಸೆಂ.ಮೀ. ಎತ್ತರದ ಮಡಿಗಳನ್ನು 4 ರಿಂದ 6 ಅಡಿ ಅಂತರದಲ್ಲಿ ನಿರ್ಮಿಸಿ ಅವುಗಳ ಮೇಲೆ ಲ್ಯಾಟರಲ್ ಗಳನ್ನು ಎಳೆದು ಪ್ಲಾಸ್ಟಿಕ್ ಹೊದಿಕೆ ಹಾಕಿ, 2 ರಿಂದ 3 ಅಡಿಗೊಂದರಂತೆ ನಾಟಿ ಮಾಡಬೇಕು. ತ್ರಿಕೋನಾಕೃತಿಯಲ್ಲಿ ನಾಟಿ ಮಾಡಿದರೆ ಹೆಚ್ಚಿನ ಸಸಿಗಳನ್ನು ನಾಟಿ ಮಾಡಬಹುದು.

ಇಲಾಖೆಯ ಸಲಹೆ

ಇಲಾಖೆಯ ಸಲಹೆ

ಶುಗರ್ ಬೇಬಿ, ಅರ್ಕಾ ಮಾಣಿಕ, ಅರ್ಕಾ ಮಧುರ, ಅರ್ಕಾ ಐಶ್ವರ್ಯ, ಅರ್ಕಾ ಆಕಾಶ ಮತ್ತು ಅಲ್ಲದೇ ವಿವಿಧ ಕಂಪನಿಗಳ ಹೈಬ್ರೀಡ್ ತಳಿಗಳು ಮಾರುಕಟ್ಟೆಯಲ್ಲಿ ಲಭ್ಯ. ಹೂ ಬಿಡುವ ಸಮಯ ಮತ್ತು ಕಾಯಿ ಕಚ್ಚುವ ಸಮಯದಲ್ಲಿ ನೀರಿನ ಅಭಾವ ಇರದಂತೆ ನೋಡಿಕೊಳ್ಳಬೇಕು. ತಳಿಗಳನ್ನಾಧರಿಸಿ ನಾಟಿ ಮಾಡಿದ 3 ರಿಂದ 5 ವಾರಗಳ ನಂತರ ಹೂ ಬಿಡಲು ಆರಂಭವಾಗುತ್ತದೆ. ಮೊದಲು ಗಂಡು ಹೂಗಳು ಆರಂಭವಾಗಿ ನಂತರ ಹೆಣ್ಣು ಹೂಗಳು ಬರುತ್ತವೆ. ಗಂಡು ಹೂಗಳನ್ನು ಕಿತ್ತು ಹಾಕಿ, ಹೆಣ್ಣು ಹೂಗಳನ್ನು ಬೆಳೆಯಲು ಬಿಡಬೇಕು. ಪ್ರತಿ ಬಳ್ಳಿಗೆ ಎರಡೇ ಹೆಣ್ಣು ಹೂ ಬಿಟ್ಟು ಉಳಿದವುಗಳನ್ನು ತೆಗೆದು ಹಾಕಬೇಕು. ಇದು ಕಲ್ಲಂಗಡಿ ಬೇಸಾಯದಲ್ಲಿ ಪ್ರಮುಖ ಚಟುವಟಿಕೆ.

ಆರಂಭ ಹಂತದಲ್ಲಿ ರಸ ಹೀರುವ ಕೀಟಗಳು ತುಂಬ ಹಾನಿಯುಂಟು ಮಾಡುತ್ತವೆ. ಇದಕ್ಕಾಗಿ ತಜ್ಞರಿಂದ ಸಲಹೆ ಪಡೆದು ಇಮಿಡಾಕ್ಲೋಪ್ರಿಡ್ ನಂತಹ ಅಂತರ್ವ್ಯಾಪಿ ಕೀಟನಾಶಕಗಳನ್ನು ಸಿಂಪಡಿಸಬೇಕು. ಥ್ರೀಪ್ ನುಸಿ ಈ ಬೆಳೆಗೆ ಮಾರಕವಾಗಿದ್ದು, ಕುಡಿ ಸಾಯುವ ನಂಜಾಣು ರೋಗ ಹರಡುವುದರಿಂದ ಈ ಕೀಟದ ನಿಯಂತ್ರಣ ತುಂಬ ಮುಖ್ಯ. ನಂತರ ಬರುವ ಹಣ್ಣಿನ ನೊಣ ಕೂಡಾ ಹಾನಿಕಾರಕವಾದ್ದರಿಂದ ಅಂಟುಕಾರ್ಡುಗಳ ಬಳಕೆ ಹಾಗೂ ಮೋಹಕ ಬಲೆಗಳ ಬಳಕೆ ತುಂಬ ಸೂಕ್ತ.

ಪ್ರಮುಖ ರೋಗಗಳು

ಪ್ರಮುಖ ರೋಗಗಳು

ಕಲ್ಲಂಗಡಿ ಹಣ್ಣಿನಲ್ಲಿ ಬೂದಿ ರೋಗ, ಬೂಜು ತುಪ್ಪಟ ರೋಗ ಮತ್ತು ಅಂಗಮಾರಿ ರೋಗಗಳ ಹತೋಟಿಗೆ ತಜ್ಞರ ಸಲಹೆ ಪಡೆದು ಸೂಕ್ತ ಶಿಲೀಂಧ್ರನಾಶಕಗಳನ್ನು ಬಳಸಬೇಕು. ಅನವಶ್ಯಕ ರಾಸಾಯನಿಕಗಳ ಬಳಕೆ ಮಾಡಬಾರದು. ಹನಿ ನೀರಾವರಿ ಮುಖಾಂತರ ತಜ್ಞರ ಸಲಹೆ ಪಡೆದು ನೀರಿನಲ್ಲಿ ಕರಗುವ ಗೊಬ್ಬರಗಳನ್ನು ನಿಯಮಿತವಾಗಿ ಕೊಡಬೇಕು. ಈ ಬೆಳೆಗೆ ಸೂಕ್ಷ್ಮ ಮತ್ತು ಲಘು ಪೋಷಕಾಂಶಗಳಾದ ಸತು, ಬೋರಾನ್ ಮತ್ತು ಕ್ಯಾಲ್ಸಿಯಂಗಳನ್ನು ಸೂಕ್ತ ಪ್ರಮಾಣದಲ್ಲಿ ಬಳಸಬೇಕು.

ಬೇಸಿಗೆಯಲ್ಲಿ ಹಣ್ಣು ಪಡೆಯಿರಿ

ಬೇಸಿಗೆಯಲ್ಲಿ ಹಣ್ಣು ಪಡೆಯಿರಿ

ಕಲ್ಲಂಗಡಿ ಬೆಳೆಯನ್ನು ಚಳಿಗಾಲದಲ್ಲಿ ಬೆಳೆಸಿ ಬೇಸಿಗೆಯಲ್ಲಿ ಹಣ್ಣು ಪಡೆದರೆ ಇಳುವರಿ ಜೊತೆಗೆ ರುಚಿಯೂ ಜಾಸ್ತಿ. ಆದ್ದರಿಂದ ಪ್ರಸ್ತುತ ರೈತರು ಕಲ್ಲಂಗಡಿ ಬೆಳೆಗೆ ಆದ್ಯತೆ ನೀಡಬಹುದು. ಹೆಚ್ಚಿನ ಮಾಹಿತಿಗಾಗಿ ತೋಟಗಾರಿಕೆ ಇಲಾಖೆಯ ವಿಷಯ ತಜ್ಞರ 9482672039 ಸಂಖ್ಯೆಗೆ ಕರೆ ಮಾಡಬಹುದು.

English summary
Horticulture department of Karnataka suggested Koppal farmers watermelon cultivation. Department tips to farmers about crop.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X