ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೈ ಹಿಡಿದ ಇಸ್ರೇಲಿ ಕೃಷಿ; ಹಳಿಯಾಳದ ಎಂಬಿಎ ಪದವೀಧರನ ಕೃಷಿಗಾಥೆ

|
Google Oneindia Kannada News

ಕಾರವಾರ, ಸೆಪ್ಟೆಂಬರ್ 19: ಹಳ್ಳಿ ಬಿಟ್ಟು ಪಟ್ಟಣ ಸೇರುವ ಯುವ ಜನರ ಸಂಖ್ಯೆ ಇತ್ತೀಚಿನ ವರ್ಷಗಳಲ್ಲಿ ಹೆಚ್ಚಾಗುತ್ತಿದೆ. ಆಧುನಿಕ ಜೀವನ ಶೈಲಿಯ ಬೆನ್ನು ಹತ್ತಿರುವ ಯುವಕರು, ಕೃಷಿಯಿಂದ ವಿಮುಖರಾಗುತ್ತಿದ್ದಾರೆ. ಆದರೆ, ಇದಕ್ಕೆ ವ್ಯತಿರಿಕ್ತ ಎಂಬಂತೆ ಎಂಬಿಎ ಪದವೀಧರರೊಬ್ಬರು ಕೃಷಿಯಲ್ಲಿ ತೊಡಗಿಕೊಂಡು ಯಶಸ್ಸು ಕಾಣುತ್ತಿದ್ದಾರೆ.

ಹಳಿಯಾಳದ ವೀರೇಶ ನಾಯ್ಕ ಕೃಷಿಯಲ್ಲಿ ಇಸ್ರೇಲ್ ಮಾದರಿ ಅನುಸರಿಸಿ, ಬೇಸಾಯ ಮಾಡುತ್ತಿದ್ದಾರೆ. ಅವರು ಅಂಕೋಲಾ ಮೂಲದ ನಿವೃತ್ತ ಅರಣ್ಯ ಸಂರಕ್ಷಣಾಧಿಕಾರಿ ಮಹಾದೇವ ನಾಯ್ಕ ಮತ್ತು ಶ್ಯಾಮಲಾ ನಾಯ್ಕ ದಂಪತಿಯ ಪುತ್ರ. ದೆಹಲಿಯ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್‌ನಲ್ಲಿ ಎಂಬಿಎ ಪದವಿಯನ್ನು ಪೂರೈಸಿರುವ ಅವರು, ಕೃಷಿಯನ್ನೇ ನೆಚ್ಚಿಕೊಂಡಿದ್ದಾರೆ.

 ಕಡಿಮೆ ಖರ್ಚಿನಲ್ಲಿ ಕಳೆ ಕೀಳುವ ಯಂತ್ರ ಪರಿಚಯಿಸಿದ ಕೋಲಾರದ ರೈತ ಕಡಿಮೆ ಖರ್ಚಿನಲ್ಲಿ ಕಳೆ ಕೀಳುವ ಯಂತ್ರ ಪರಿಚಯಿಸಿದ ಕೋಲಾರದ ರೈತ

32 ಎಕರೆ ಪ್ರದೇಶದಲ್ಲಿ ಇಸ್ರೇಲ್ ಮಾದರಿ ಕೃಷಿ

32 ಎಕರೆ ಪ್ರದೇಶದಲ್ಲಿ ಇಸ್ರೇಲ್ ಮಾದರಿ ಕೃಷಿ

ಪಿತ್ರಾರ್ಜಿತ ಆಸ್ತಿಯಾದ ಹಳಿಯಾಳದ 10 ಎಕರೆ, ಉಳವಿಯ 15 ಎಕರೆ, ಕೊಡ್ಲಗದ್ದೆಯಲ್ಲಿ 7 ಎಕರೆ, ಒಟ್ಟು 32 ಎಕರೆ ಪ್ರದೇಶದಲ್ಲಿ ಇಸ್ರೇಲ್ ಮಾದರಿಯಲ್ಲಿ ಕೃಷಿ ಮಾಡುತ್ತಿದ್ದಾರೆ. ಹಳಿಯಾಳದ ಕೆಸರೊಳ್ಳಿಯಲ್ಲಿ 'ಗಂಗಾ ಸಸ್ಯಪಾಲನಾಲಯ' ಆರಂಭಿಸಿ, ಸುಧಾರಿತ ತೆಂಗು, ಅಡಿಕೆ, ಬಾಳೆ, ಕಸಿ ಮಾಡಿದ ಮಾವು, ಹಲಸು, ಗೇರು, ಚಿಕ್ಕು, ಲಿಂಬು, ಕಾಳುಮೆಣಸು, ಏಲಕ್ಕಿ, ಶುಂಠಿ, ಪೇರಲ, ಅರಿಶಿನ, ಎಲೆಬಳ್ಳಿ, ಶ್ರೀಗಂಧ, ಸಾಗವಾನಿ, ಹೊನ್ನೆ, ನಂದಿ, ಕಿಂದಳ, ಸೀಸಂ ಹಾಗೂ ಸಾಂಬಾರು ಪದಾರ್ಥಗಳಾದ ಜಾಯಿಕಾಯಿ, ಲವಂಗ, ದಾಲ್ಚಿನಿ ಬೆಳೆಯುತ್ತಿದ್ದಾರೆ. ಅಲ್ಲದೇ, ಈಗ ಕುರಿ ಸಾಕಾಣಿಕೆ, ನಾಟಿ ಕೋಳಿ ಸಾಕಾಣಿಕೆಗೂ ಮುಂದಾಗಿದ್ದು, ಅದರಲ್ಲೂ ಯಶಸ್ಸು ಕಾಣುತ್ತಿದ್ದಾರೆ.

ಉನ್ನತ ಶಿಕ್ಷಣ ತ್ಯಜಿಸಿದರು

ಉನ್ನತ ಶಿಕ್ಷಣ ತ್ಯಜಿಸಿದರು

'ಯುಪಿಎಸ್ ‌ಸಿ ಅಂತಿಮ ಪರೀಕ್ಷೆವರೆಗೂ ತಲುಪಿದ್ದೆ. ಆದರೆ, ಅಷ್ಟರಲ್ಲೇ ಕೃಷಿಯ ಸೆಳೆತಕ್ಕೂ ಒಳಗಾದೆ. ಇದರಿಂದಾಗಿ ಉನ್ನತ ಶಿಕ್ಷಣವನ್ನು ಅರ್ಧದಲ್ಲೇ ಮೊಟಕುಗೊಳಿಸಿದೆ. ವಿದೇಶಗಳಲ್ಲಿ ಅನುಸರಿಸುತ್ತಿರುವ ಕೃಷಿ ಪದ್ಧತಿ, ಆಧುನಿಕ ತಂತ್ರಜ್ಞಾನದ ಬಳಕೆಯ ಬಗ್ಗೆ ಆಳವಾಗಿ ಅಧ್ಯಯನ ನಡೆಸಿದೆ. ಆ ಮೂಲಕ ಮಾಹಿತಿಗಳನ್ನು ಸಂಗ್ರಹಿಸಿ, ದೆಹಲಿಯಿಂದ ಊರಿಗೆ ಮರಳಿ ಕೃಷಿಯಲ್ಲಿ ತೊಡಗಿಕೊಂಡೆ. ಇದರಲ್ಲೇ ಈಗ ಸಂತೃಪ್ತಿ ಪಡುತ್ತಿದ್ದೇನೆ' ಎನ್ನುತ್ತಾರೆ ವೀರೇಶ.

"ಡ್ರೈ ಬನಾನ"; ಬಾಳೆ ಉಳಿಸಿಕೊಳ್ಳಲು ಬಳ್ಳಾರಿ ರೈತನ ವಿನೂತನ ಪ್ರಯೋಗ

ಸಾವಯವ ಗೊಬ್ಬರ ಬಳಕೆ

ಸಾವಯವ ಗೊಬ್ಬರ ಬಳಕೆ

ವೀರೇಶ ಅವರ ತಂದೆ ಮಹಾದೇವ ನಾಯ್ಕ, ಅರಣ್ಯ ಸಂರಕ್ಷಣಾಧಿಕಾರಿಯಾಗಿ ಕಾರ್ಯನಿರ್ವಹಿಸಿ ನಿವೃತ್ತರಾದವರು. ಹೀಗಾಗಿ, ಅವರಿಂದ ಮತ್ತಷ್ಟು ಪ್ರೋತ್ಸಾಹ ವೀರೇಶ ಅವರಿಗೆ ಸಿಕ್ಕಿತ್ತು. ಕೃಷಿ ಮತ್ತು ತೋಟಗಾರಿಕೆ ಇಲಾಖೆ, ಕೃಷಿ ವಿದ್ಯಾಲಯದ ಮಣ್ಣು ವಿಜ್ಞಾನ ಮತ್ತು ನೀರು ಪರೀಕ್ಷಾ ಕೇಂದ್ರದಿಂದಲೂ ಅವರು ಮಾರ್ಗದರ್ಶನ ಪಡೆದು, ಕೃಷಿ ಮುಂದುವರಿಸಿದ್ದಾರೆ.

ಗದ್ದೆ ಹಾಗೂ ತೋಟದ ಗಡಿಯಂಚಿನ ಸುತ್ತಲೂ ಗೊಬ್ಬರ ಗಿಡವನ್ನು ನೆಟ್ಟಿದ್ದಾರೆ. ವರ್ಷಕ್ಕೆ ನಾಲ್ಕು ಬಾರಿ ಗೊಬ್ಬರ ಗಿಡದ ಟೊಂಗೆ ಕಡಿದು ಗೊಬ್ಬರದ ಗುಂಡಿಗೆ ಹಾಕುತ್ತಾರೆ. ಇದರೊಂದಿಗೆ, ಎಮ್ಮೆ, ಆಕಳು, ಕುರಿ, ಕೋಳಿಯನ್ನು ಸಾಕಿರುವ ಅವರು, ಅದರ ಹಿಕ್ಕೆಯನ್ನು ಬಳಸಿ ಉತ್ತಮ ಸಾವಯವ ಗೊಬ್ಬರ ಉತ್ಪನ್ನ ಮಾಡುತ್ತಿದ್ದಾರೆ. ಅದನ್ನೇ ಬಳಸಿ ಅವರು ಬೆಳೆ ಬೆಳೆಯುತ್ತಿದ್ದಾರೆ.ಅನೇಕ ವರ್ಷಗಳ ಸತತ ಪರಿಶ್ರಮದ ಪ್ರತಿಫಲವಾಗಿ ವರ್ಷಕ್ಕೆ 15 ರಿಂದ 20 ಲಕ್ಷದವರೆಗೆ ಅವರು ಆದಾಯ ಪಡೆಯುತ್ತಿದ್ದಾರೆ. ವಿವಿಧ ಸಸ್ಯಗಳಿಗಾಗಿ ಅಥವಾ ಅವರ ಕೃಷಿಯ ಬಗೆಗಿನ ಹೆಚ್ಚಿನ ಮಾಹಿತಿಗಾಗಿ ಮೊ.ಸಂ: 7676558888ಗೆ ಸಂಪರ್ಕಿಸಬಹುದು.
ಹಲವಾರು ಗೌರವಾದರಗಳು

ಹಲವಾರು ಗೌರವಾದರಗಳು

ಇವರ ಸಾರ್ಥಕ ಸಾಧನೆಯನ್ನು ಗುರುತಿಸಿ ದೇಶದ ಮಣ್ಣಿನ ಮಗನೆಂದೇ ಪ್ರಸಿದ್ಧರಾದ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರಿಂದ 2017-18 ನೇ ಸಾಲಿನ 'ಶ್ರೇಷ್ಠ ಕೃಷಿಕ' ಪ್ರಶಸ್ತಿ, ಸರ್ಕಾರದ 'ಆತ್ಮ ಯೋಜನೆಯಡಿ' ತಾಲೂಕು ಮಟ್ಟದ 'ಶ್ರೇಷ್ಠ ಕೃಷಿಕ' ಪ್ರಶಸ್ತಿ, 'ಗಾವ್ಕರ್ ಮೆಮೋರಿಯಲ್ ಫೌಂಡೇಶನ್' ವತಿಯಿಂದ 'ಸಾಹಸಿ ಯುವಕ', ಹುಬ್ಬಳ್ಳಿ ಧಾರವಾಡ ನಾಮಧಾರಿ ಸಂಘದ ವತಿಯಿಂದ ನೀಡಲ್ಪಡುವ ಶೂನ್ಯ ಬಂಡವಾಳದ ನೈಸರ್ಗಿಕ ಕೃಷಿ ಪದ್ಧತಿಯಲ್ಲಿ ಉತ್ತಮ ಸಂಶೋಧನೆಗಾಗಿ 'ಶ್ರೇಷ್ಠ ಕೃಷಿಕ' ಪ್ರಶಸ್ತಿ, ಬ್ರಹ್ಮಶ್ರೀ ನಾರಾಯಣಗುರು ಪರಿಪಾಲನಾ ಸಂಘದಿಂದ ಪರಿವರ್ತನಾ ಶ್ರೀ ಪ್ರಶಸ್ತಿ ಸೇರಿದಂತೆ ಅನೇಕ ಸಮ್ಮಾನಗಳಿಗೆ ಭಾಜನರಾಗಿದ್ದಾರೆ.

ಕೃಷಿ ಕ್ಷೇತ್ರವೆಂದೆರೆ ಸದಾ ಅನಿಶ್ಚಿತತೆ ಹಾಗೂ ಪ್ರತಿಕೂಲ ಹವಾಮಾನದ ನಡುವೆ ಕೃಷಿಯನ್ನು ಮಾಡುವುದು ದುಸ್ತರವೆಂದು ಮೂಗು ಮುರಿಯುವ ಜನರ ನಡುವೆ ಹುಬ್ಬೇರಿಸಿ ನೋಡುವಂತೆ ಕೃಷಿಯಲ್ಲಿ ವೀರೇಶ್ ಸಾಧನೆ ಮಾಡಿದ್ದಾರೆ.

English summary
Veeresh Naik from haliyala of uttara kannada district has been successful in farming, following the Israel model,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X