ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಲೆವೂರಿನಲ್ಲಿ ಕೆಸರು ಗದ್ದೆ ಆಟ: ಮನಸಾರೆ ಸಂಭ್ರಮಿಸಿದ ಯುವಜನತೆ

By ಉಡುಪಿ ಪ್ರತಿನಿಧಿ
|
Google Oneindia Kannada News

ಉಡುಪಿ, ಜುಲೈ.09: ಕರಾವಳಿಯಲ್ಲಿ ಮುಂಗಾರು ಜೋರಾಗಿದೆ. ಕೃಷಿ ಚಟುವಟಿಕೆಗಳು ಸ್ಥಗಿತಗೊಂಡಿವೆ. ಇದರ ಮಧ್ಯೆಯೇ ಉಡುಪಿಯಲ್ಲಿ "ಗ್ರಾಮೀಣ ಕೆಸರು ಗದ್ದೆ ಕ್ರೀಡಾಕೂಟ" ವೈಭವದಿಂದ ನಡೆದಿದೆ.

ಅಲೆವೂರಿನಲ್ಲಿ ಇಂತಹದ್ದೊಂದು ಕ್ರೀಡಾಕೂಟ ದೇಸೀ ಸೊಗಡನ್ನು ಅನಾವರಣಗೊಳಿಸುತಿತ್ತು. ಕೆಸರುಗದ್ದೆ ಕ್ರೀಡಾಕೂಟದಲ್ಲಿ ಹಗ್ಗಜಗ್ಗಾಟ, ವಾಲಿಬಾಲ್, ಕಬ್ಬಡ್ಡಿ, ರನ್ನಿಂಗ್ ಮಾನವ ಪಿರಮಿಡ್ ಮೊದಲಾದ ಸ್ಪರ್ಧೆಗಳಲ್ಲಿ ಪಾಲ್ಗೊಳ್ಳುವ ಮೂಲಕ ಯುವಜನತೆ ಮನಸೋ ಇಚ್ಛೆ ಖುಷಿಪಟ್ಟರು.

ಬಿಸಿಲೂರು ರಾಯಚೂರಿನಲ್ಲಿ ಈಗ ಗ್ರಾಮೀಣ ಕ್ರೀಡೆಗಳದ್ದೇ ಕಾರುಬಾರುಬಿಸಿಲೂರು ರಾಯಚೂರಿನಲ್ಲಿ ಈಗ ಗ್ರಾಮೀಣ ಕ್ರೀಡೆಗಳದ್ದೇ ಕಾರುಬಾರು

ಅಲೆವೂರು ಗ್ರಾಮದಲ್ಲಿ ವರ್ಷಂಪ್ರತಿ ಮುಂಗಾರು ಮಳೆ ಸಂದರ್ಭ ಕ್ರೀಡಾಕೂಟ ಹಮ್ಮಿಕೊಳ್ಳುವ ಇಲ್ಲಿನ ಗ್ರಾಮಸ್ಥರು ಕೆಸರಿನಲ್ಲಿ ಮನಸೋಇಚ್ಛೆ ಆಡಿ-ಕುಣಿದು ಖುಷಿಪಡುತ್ತಾರೆ.

 ಏನೆಲ್ಲಾ ಸ್ಪರ್ಧೆಗಳಿವೆ ಗೊತ್ತಾ?

ಏನೆಲ್ಲಾ ಸ್ಪರ್ಧೆಗಳಿವೆ ಗೊತ್ತಾ?

ಸ್ಥಳೀಯ ಗಣೇಶೋತ್ಸವ ಸಮಿತಿ ಸಂಘಟಿಸುವ ಈ ಕ್ರೀಡಾಕೂಟದಲ್ಲಿ ಮಹಿಳೆಯರು, ಪುರುಷರು, ಮಕ್ಕಳು ಭಾಗವಹಿಸುತ್ತಾರೆ. ಕೆಸರು ಗದ್ದೆಯಲ್ಲಿ ಮಳೆಯ ಸಿಂಚನವಾಗುವಾಗ ನಡೆಯುವ ಈ ಕ್ರೀಡಾಕೂಟವನ್ನು ಕಣ್ತುಂಬಿಸಿಕೊಳ್ಳುವುದೇ ಒಂದು ಮಜಾ. ಇನ್ನು ಕೆಸರಿಗಿಳಿದರೆ ಕೇಳಬೇಕೇ ?

ಈ ಬಾರಿ ವಾಲಿಬಾಲ್, ಓಟ, ಹಗ್ಗಜಗ್ಗಾಟ, ಕಬಡಿ, ಮಾನವ ಪಿರಮಿಡ್ ಮುಂತಾದ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ಗ್ರಾಮಸ್ಥರಲ್ಲದೆ, ಸ್ಥಳೀಯ ಕಾಲೇಜಿನ ವಿದ್ಯಾರ್ಥಿಗಳೂ ಭಾಗವಹಿಸಿ ಖುಷಿಪಟ್ಟರು.

 ಸಾರ್ವಜನಿಕ ಗಣೇಶೋತ್ಸವ ಸಮಿತಿ

ಸಾರ್ವಜನಿಕ ಗಣೇಶೋತ್ಸವ ಸಮಿತಿ

ಉಡುಪಿಯ ಅಲೆವೂರು ಸಾರ್ವಜನಿಕ ಗಣೇಶೊತ್ಸವ ಸಮಿತಿ ಕಳೆದ ಹತ್ತು ವರ್ಷಗಳಿಂದ ಕೆಸರು ಗದ್ದೆಯ ಗ್ರಾಮೀಣ ಕ್ರೀಡೆಗಳನ್ನು ಆಯೋಜಿಸಿಕೊಂಡು ಬಂದಿದೆ. ಜನರು ಈ ದಿನಕ್ಕಾಗೇ ಕಾಯುತ್ತಾರೆನೋ ಎಂಬಷ್ಟು ಹುಮ್ಮಸ್ಸು ಅಲೆವೂರ ಗದ್ದೆಯಲ್ಲಿ ಮನೆಮಾಡಿರುತ್ತದೆ.

ಊರ ಹಿರಿಯರೇ ಇರಲಿ-ಮಕ್ಕಳಿರಲಿ-ಮಹಿಳೆಯರಿರಲಿ ಪ್ರತಿಯೊಬ್ಬನಿಗೂ ಇಲ್ಲಿ ಮಣ್ಣಿನ ಸ್ನಾನದ ಕಡ್ಡಾಯ. ತಪ್ಪಿಸಿಕೊಂಡರೆ ಅಟ್ಟಾಡಿಸಿಯಾದರೂ ಅವನನ್ನು ಕೆಸರಲ್ಲಿ ಹಣ್ಣುಗಾಯಿ ನೀರುಗಾಯಿ ಮಾಡ್ತಾರೆ. ಸಂಭ್ರಮಿಸುವುದೊಂದೇ ಎಲ್ಲರ ಉದ್ದೇಶ.

 ಆಯೋಜನೆಯ ಹಿಂದಿನ ಉದ್ದೇಶ ಇದೇ

ಆಯೋಜನೆಯ ಹಿಂದಿನ ಉದ್ದೇಶ ಇದೇ

ಗೋಣಿ ಚೀಲದ ಓಟ, ಮಾನವ ಪಿರಾಮೆಡ್, ಹಗ್ಗಜಗ್ಗಾಟ, ಹೀಗೆ ಆಡಿದ್ದೇ ಆಟ. ಕೆಸರಲ್ಲಿ ತೋಯುವುದೊಂದೇ ಇವರ ಉದ್ದೇಶ. ವೃದ್ಧರಿಂದ ಹಿಡಿದು ಮಕ್ಕಳತನಕ ತುಳುಜನಪದ ಮತ್ತು ಹಿಂದಿ ಸಿನಿಮಾದ ಹಾಡಿನ ಹಿಮ್ಮೇಳಕ್ಕೆ ಹೆಜ್ಜೆ ಹಾಕಿ ತಮ್ಮನೇ ತಾವು ಮರೆತು ಕುಣಿಯುತ್ತಾರೆ.

ಸ್ಪರ್ಧೆಯಲ್ಲಿ ಮಹಿಳೆಯರೂ ತಮ್ಮ ಮುಜುಗರವನ್ನೆಲ್ಲಾ ಬಿಟ್ಟು ಮಣ್ಣುಮೆತ್ತಿಕೊಂಡು ಆಟವಾಡುತ್ತಾರೆ. ಕರಾವಳಿಯ ಕೃಷಿ ಜೀವನ ಪದ್ಧತಿ ಬೇರೆಡೆಗಿಂತ ಭಿನ್ನ. ಮಳೆಗಾಲ ಬಂತಂದ್ರೆ ಕರಾವಳಿ ಭಾಗದಲ್ಲಿ ಕೃಷಿ ಚುರುಕುಗೊಳ್ಳುತ್ತದೆ.

ಆದರೆ ಕೃಷಿಯಿಂದ ಜನರೀಗ ವಿಮುಖರಾಗ್ತಿದಾರೆ. ಇಂತಹ ಪರಿಸ್ಥಿತಿಯಲ್ಲಿ ಕೃಷಿ ಸಂಸ್ಕೃತಿ ಕಣ್ಮರೆಯಾಗಬಾರದು ಎಂಬ ಕಾಳಜಿ ಈ ಗ್ರಾಮೀಣ ಕ್ರೀಡೆಗಳ ಆಯೋಜನೆಯ ಹಿಂದಿದೆ.

 ಜನಪ್ರಿಯಗೊಳ್ಳುತ್ತಿರುವ ಕ್ರೀಡೆ

ಜನಪ್ರಿಯಗೊಳ್ಳುತ್ತಿರುವ ಕ್ರೀಡೆ

ದಿನವಿಡೀ ಮಳೆನೀರಿನಲ್ಲಿ, ಗದ್ದೆ ಮಣ್ಣಿನಲ್ಲಿ ಕೆಲಸ ಮಾಡೋ ರೈತನಿಗೆ ಯಾವ ರೋಗ ಜಾಡ್ಯಗಳೂ ಹತ್ತಿರ ಸುಳಿಯುವುದಿಲ್ಲ. ಕೆಸರಿಗೆ ತನ್ನದೇ ಆದ ಆಯುರ್ವೇದಿಯ ಮಹತ್ವವಿದೆ ಅನ್ನೋ ಬಲವಾದ ನಂಬಿಕೆಯೂ ಈ ಕೃಷಿಕ ಜನರದ್ದು. ಹೀಗಾಗಿ ವರ್ಷದಿಂದ ವರ್ಷಕ್ಕೆ ಈ ಕ್ರೀಡೆ ಜನಪ್ರಿಯಗೊಳ್ಳುತ್ತಿದೆ.

ಒಮ್ಮೆ ಗದ್ದೆಗಿಳಿದರೆ ಇಳಿವಯಸ್ಸಿನವರೂ ಮಕ್ಕಳಾಗಿ ಬಿಡ್ತಾರೆ. ಇಲ್ಲಂತೂ ಮೋಜಿಗೆ ಬರವಿಲ್ಲ, ಒಬ್ಬರನ್ನೊಬ್ಬರು ಎಳೆಯುತ್ತಾ, ಕೆಸರು ನೀರಿನಲ್ಲಿ ಮುಳುಗೇಳುತ್ತಾ ಸಂಭ್ರಮಿಸುವುದನ್ನು ನೋಡೋದೇ ಕಣ್ಣಿಗೊಂದು ಹಬ್ಬ.

 ತವರು ಮಣ್ಣಿನ ನಂಟು ಗಟ್ಟಿ

ತವರು ಮಣ್ಣಿನ ನಂಟು ಗಟ್ಟಿ

ಈ ಕ್ರೀಡಾಕೂಟದಲ್ಲಿ ಪಾಲ್ಗೊಳ್ಬೇಕು ಅಂತಾನೇ ದೂರದ ಮುಂಬೈ ಮತ್ತಿತರ ಕಡೆಗಳಲ್ಲಿರುವ ಅಲೆವೂರ ಗ್ರಾಮಸ್ಥರು ಎಲ್ಲಾ ಕೆಲಸ ಬದಿಗೊತ್ತಿ ತವರಿಗೆ ಬರ್ತಾರೆ. ಅವರೂ ಕೂಡ ಊರ ಮಂದಿಯೊಂದಿಗೆ ವರ್ಷಕ್ಕೊಮ್ಮೆ ಬೆರೆತು ತವರು ಮಣ್ಣಿನ ನಂಟನ್ನು ಗಟ್ಟಿಗೊಳಿಸುತ್ತಾರೆ.

ಈ ಬಾರಿ ಕಾಲೇಜು ವಿದ್ಯಾರ್ಥಿನಿಯರ ದಂಡೇ ಇಲ್ಲಿಗಾಗಮಿಸಿ ಸಂಭ್ರಮಿಸಿತು. ಆಧುನಿಕತೆಯ ಭರಾಟೆಯಲ್ಲಿ ಗ್ರಾಮೀಣ ಕ್ರೀಡೆಗಳು ಕಣ್ಮರೆಯಾಗುತ್ತಿವೆ. ಜೊತೆಗೆ ಗ್ರಾಮೀಣ ಭಾಗದ ಜನತೆ ಕೃಷಿಯಿಂದ ಮೆಲ್ಲಮೆಲ್ಲನೆ ದೂರವಾಗುತ್ತಿದ್ದಾರೆ.

ಇಂತಹ ಸಂಕ್ರಮಣದ ಕಾಲದಲ್ಲಿ ಊರ ಜನರಿಗೆ ವರ್ಷಕ್ಕೊಮ್ಮೆ ಮಣ್ಣಿನ ಜೊತೆ ಬೆರೆಯಲು ಅಲೆವೂರು ಗಣೇಶೋತ್ಸವ ಸಮಿತಿ ಅನುವು ಮಾಡಿಕೊಡುತ್ತಿರುವುದು ಪ್ರಶಂಸನೀಯ.

English summary
Monsoon is heavy on the coast. Agricultural activities have stopped. Meanwhile, "Grameena Kesaragadde Kridakuta" was held in Udupi with great splendor.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X