ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಜಯನಗರ: ಕೈಗೆ ಬಂದ ತುತ್ತು ಬಾಯಿಗೆ ಬರದಂತಾದ ಈರುಳ್ಳಿ ಬೆಳೆದ ರೈತರ ಬದುಕು

By ಭೀಮರಾಜ. ಯು. ವಿಜಯನಗರ
|
Google Oneindia Kannada News

ವಿಜಯನಗರ, ಸೆಪ್ಟೆಂಬರ್ 11: ಈರುಳ್ಳಿ ಬೆಳೆದ ರೈತನ ಬದುಕು ಈಗ ಹೇಗಾಗಿದೆಯೆಂದರೆ, ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದ್ದು, ವಿಜಯನಗರ ಜಿಲ್ಲೆಯ ಹಗರಿಬೊಮ್ಮನಹಳ್ಳಿ ಮತ್ತು ಹೂವಿನಹಡಗಲಿ ತಾಲೂಕುಗಳಲ್ಲಿ ರೈತರ ಬದುಕು ಅಯೋಮಯವಾಗಿದೆ.

ಇದಕ್ಕೆ ತಾಜಾ ಉದಾಹರಣೆ ಎಂದರೆ ಸೆ.8ರಂದು ಈರುಳ್ಳಿ ಬೆಳೆಗೆ ಕೊಳೆ ರೋಗ ಬಾಧೆಯಿಂದ ಹೂವಿನಹಡಗಲಿ ತಾಲೂಕಿನ ಉತ್ತಂಗಿ ಗ್ರಾಮದ ರೈತ ನಾಗೇಂದ್ರಪ್ಪ ತನ್ನ ಎರಡು ಎಕರೆಯಲ್ಲಿ ಬೆಳೆದಿದ್ದ ಬೆಳೆಯನ್ನು ಟ್ರ್ಯಾಕ್ಟರ್ ಮೂಲಕ ನಾಶ ಮಾಡಿದ್ದಾನೆ.

ಕಳೆದ ಮೂರರಿಂದ ನಾಲ್ಕು ವರ್ಷಗಳಿಂದ ರೈತರಿಗೆ ಕೊಳೆ ರೋಗ ಅಂಟಿಕೊಂಡು ಶಾಪವಾಗಿ ಪರಿಣಮಿಸಿದೆ. ಜಿಲ್ಲೆಯ ಎರಡು ತಾಲೂಕುಗಳಲ್ಲಿ ಈ ವರ್ಷ 7 ಸಾವಿರ ಎಕರೆಗೂ ಅಧಿಕ ಈರುಳ್ಳಿ ಬೆಳೆ ಬಿತ್ತನೆ ಮಾಡಲಾಗಿದೆ. ಬಹುತೇಕವಾಗಿ ಈ ಎರಡು ತಾಲ್ಲೂಕುಗಳಾದ್ಯಂತ ಶೇ.30ರಷ್ಟು ಈರುಳ್ಳಿ ಬೆಳೆ ಕೊಳೆ ರೋಗಕ್ಕೆ ತುತ್ತಾಗಿದ್ದರಿಂದ ರೈತ ಪರಿತಪಿಸುತ್ತಿದ್ದಾರೆ.

ಪ್ರತಿ ವರ್ಷ ಕೊಳೆ‌ ರೋಗಕ್ಕೆ ತುತ್ತಾಗುತ್ತಿದೆ

ಪ್ರತಿ ವರ್ಷ ಕೊಳೆ‌ ರೋಗಕ್ಕೆ ತುತ್ತಾಗುತ್ತಿದೆ

ವಿಜಯನಗರ ಜಿಲ್ಲಾದ್ಯಂತ ಹೆಚ್ಚಿನ ಸಂಖ್ಯೆಯಲ್ಲಿ ಈರುಳ್ಳಿ ಬೆಳೆಯನ್ನು ಬೆಳೆಯುತ್ತಾರೆ. ಈರುಳ್ಳಿ ಬೆಳೆದರೆ ಉತ್ತಮ ಬೆಲೆ ಸಿಗುತ್ತದೆ ಎಂಬ ಭರವಸೆಯನ್ನಿಟ್ಟು ರೈತರು ಈರುಳ್ಳಿಯನ್ನು ಬೆಳೆದಿದ್ದಾರೆ. ಆದರೆ ಕಳೆದ 3ರಿಂದ 4 ವರ್ಷಗಳಿಂದ ಈರುಳ್ಳಿ ಬೆಳೆಗೆ ಪ್ರತಿ ವರ್ಷ ಕೊಳೆ‌ ರೋಗಕ್ಕೆ ತುತ್ತಾಗುತ್ತಿದೆ. ಇದಕ್ಕೆ ನಿಖರವಾದ ಕಾರಣ ಏನು ಎಂದು ಕಂಡು ಬರುತ್ತಿಲ್ಲ.

ಹಗರಿಬೊಮ್ಮನಹಳ್ಳಿ ತಾಲೂಕಿನ ತಂಬ್ರಹಳ್ಳಿಯ ಗೌರಜ್ಜನವರ ಸೀಗೇನಹಳ್ಳಿ ಹತ್ತಿರದ 2 ಎಕರೆ ಈರುಳ್ಳಿಗೆ ಕೊಳೆ ರೋಗ ತಗುಲಿದ್ದು, ಸಂಪೂರ್ಣ ನಾಶಪಡಿಸಿದ್ದಾರೆ. ಇಲ್ಲಿನ ರೈತರು ಸಸ್ಯ ತಜ್ಞರು ಹೇಳಿದ ಎಲ್ಲ ಔಷಧಿಗಳನ್ನು ರೈತರು ಸಿಂಪಡಣೆ ಮಾಡುತ್ತಲೇ ಇದ್ದಾರೆ. ಆದರೆ ಈ ರೋಗ ಹತೋಟಿಗೆ ಮಾತ್ರ ಬರುತ್ತಿಲ್ಲ. ಇದರಿಂದಾಗಿ ಈರುಳ್ಳಿ ಬೆಳೆದ ರೈತರು ಕಂಗಲಾಗಿದ್ದಾರೆ.

ಹಗರಿಬೊಮ್ಮನಹಳ್ಳಿ ತಾಲ್ಲೂಕಿನಾದ್ಯಂತ ಈರುಳ್ಳಿ ಬೆಳೆ

ಹಗರಿಬೊಮ್ಮನಹಳ್ಳಿ ತಾಲ್ಲೂಕಿನಾದ್ಯಂತ ಈರುಳ್ಳಿ ಬೆಳೆ

ತಾಲ್ಲೂಕಿನ ಹಂಪಸಾಗರ, ಬನ್ನಿಗೋಳ, ಬಸರಕೋಡು, ಕೃಷ್ಣಾಪುರ, ತಂಬ್ರಹಳ್ಳಿ, ಕಿತ್ತೂರು, ಮುತ್ತೂರು, ಚಿಲುಗೋಡು, ದಶಮಾಪುರ, ಯಡ್ರಮ್ಮನಹಳ್ಳಿ ಹಾಗೂ ಹನಸಿ ಮತ್ತು ಕೋಗಳಿ ಹೊಬಳಿ ವ್ಯಾಪ್ತಿಯಲ್ಲಿಯೂ ಸೇರಿ ಬಹುತೇಕ ಗ್ರಾಮಗಳಲ್ಲಿ ಈರುಳ್ಳಿ ಬೆಳೆಯನ್ನು ಹೆಚ್ಚಿನ ಸಂಖ್ಯೆಯಲ್ಲಿ ಬೆಳೆಯುತ್ತಿದ್ದಾರೆ.

ಪ್ರತಿ ವರ್ಷ ಎಷ್ಟೇ ನಷ್ಟವಾದರೂ ಈರುಳ್ಳಿ ಬೆಳೆಯಲು ಮುಂದಾಗಿ ರೈತರು ಕೈ ಸುಟ್ಟುಕೊಳ್ಳುತ್ತಿದ್ದಾರೆ. "ಕಡಿಮೆ ಏನಿಲ್ಲ ಅಂದರೂ ಒಂದು ಎಕರೆಗೆ 60ರಿಂದ 80 ಸಾವಿರ ರೂ.ವರೆಗೂ ಖರ್ಚು ಬರುತ್ತದೆ. ಈ ಬೆಳೆ 3ರಿಂದ 4 ತಿಂಗಳ ಒಳಗೆ ಬೆಳೆ‌ ಬರುತ್ತದೆ, ಅಷ್ಟರೊಳಗೆ ಬರುವ ಈರುಳ್ಳಿ ಬೆಳೆ ಕೊಳೆ ರೋಗಕ್ಕೆ ತುತ್ತಾಗುತ್ತಿದೆ,'' ಎಂದು ಬನ್ನಿಗೋಳ ಈರುಳ್ಳಿ ಬೆಳೆಗಾರ ಹಾಗೂ ಎಪಿಎಂಸಿ ನಾಮ ನಿರ್ದೇಶಕ ಮೈನಳ್ಳಿ ಕೊಟ್ರೇಶಪ್ಪ ಬೇಸರ ವ್ಯಕ್ತಪಡಿಸುತ್ತಾರೆ.

ರೈತರ ಹಕ್ಕೊತ್ತಾಯ

ರೈತರ ಹಕ್ಕೊತ್ತಾಯ

ಒಟ್ಟಾರೆಯಾಗಿ ರೈತ ಕಷ್ಟಪಟ್ಟು ಉತ್ತಿ- ಬಿತ್ತಿ ಬೆಳೆದ ರೈತನ ಬೆಳೆಗಳು ರೋಗಕ್ಕೆ ಸಿಕ್ಕು ನಲುಗುತ್ತಿವೆ. ಇದರ ಮಧ್ಯೆ ಉತ್ತಮ‌ ಬೆಳೆ ಬೆಳೆದಾಗ ಸೂಕ್ತ ಬೆಂಬಲ ಬೆಲೆ ಸಿಗದೇ ಸಾಲಗಾರನಾಗಿ ಉಳಿಯುತ್ತಾನೆ. ಹಗರಿಬೊಮ್ಮನಹಳ್ಳಿ ತಾಲೂಕಿನದ್ಯಾಂತ ಈರಳ್ಳಿ ಬೆಳೆದ ರೈತರು ಕೊಳೆ ರೋಗಕ್ಕೆ ತುತ್ತಾದವರಿಗೆಲ್ಲ ಸಮೀಕ್ಷೆ ಮಾಡಿ ಸೂಕ್ತ ಪರಿಹಾರ ಒದಗಿಸಬೇಕು ಎಂದು ರೈತ ಮೈನಳ್ಳಿ ಕೊಟ್ರೇಶಪ್ಪ ಒತ್ತಾಯಿಸಿದ್ದಾರೆ.

ಹವಾಮಾನಕ್ಕೆ ಸೂಕ್ತವಲ್ಲದ ಬಿತ್ತನೆ

ಹವಾಮಾನಕ್ಕೆ ಸೂಕ್ತವಲ್ಲದ ಬಿತ್ತನೆ

ಮುಂಗಾರು ಮಳೆ ಸತತವಾಗಿ ಕಳೆದ ಎರಡ್ಮೂರು ವರ್ಷಗಳಿಂದ ಉತ್ತಮ ಆಗುತ್ತಿರುವುದರಿಂದ ಬದಲಾದ ಹವಾಮಾನಕ್ಕೆ ಸೂಕ್ತವಲ್ಲದ ಬಿತ್ತನೆಯ ಹಾಗೂ ಬೇಸಾಯ ಕ್ರಮಗಳ ಪದ್ಧತಿಯನ್ನು ಅನುಸರಿಸುತ್ತಿರುವ ಕಾರಣದಿಂದ ಈರುಳ್ಳಿ ಬೆಳೆಯಲ್ಲಿ ರೋಗಬಾಧೆ ತೀವ್ರವಾಗಿ ಕಂಡುಬರುತ್ತಿದೆ ಎಂದು ಸಸ್ಯರೋಗ ತಜ್ಞರಾದ ಡಾ. ರಾಘವೇಂದ್ರ ಆಚಾರಿ ಹೇಳುತ್ತಾರೆ.

ಪ್ರತಿವರ್ಷ ಈರುಳ್ಳಿ ಬೆಳೆಯುವ ರೈತರು ನಷ್ಟವನ್ನು ಅನುಭವಿಸುತ್ತಿದ್ದಾರೆ. ಇದರಿಂದ ಸಾಲಗಾರರಾಗಿ ಕಂಗಲಾಗಿದ್ದಾರೆ. ಈರುಳ್ಳಿ ಬೆಳೆಯ ನಷ್ಟಕ್ಕೆ ಪರಿಹಾರ ಸಿಗಬೇಕು ಮತ್ತು ಈರುಳ್ಳಿ ಬೆಳೆಗೆ ಸರ್ಕಾರ ಸೂಕ್ತ ಬೆಂಬಲ ಬೆಲೆ ನೀಡಬೇಕು. ಈರುಳ್ಳಿ ಬೆಳೆಯುವ ರೈತರನ್ನು ಒಗ್ಗೂಡಿಸಿ ಬೆಳೆಯ ಪದ್ಧತಿಯ ತರಬೇತಿ ನೀಡಬೇಕು ಆಗ ಮಾತ್ರ ಇದನ್ನು ಸರಿಪಡಿಸಬಹುದೆಂದು ಹಗರಿಬೊಮ್ಮನಹಳ್ಳಿ ಈರುಳ್ಳಿ ಬೆಳೆಗಾರರ ಒಕ್ಕೂಟದ ಅಧ್ಯಕ್ಷರಾದ ಮೋಹನ್ ರೆಡ್ಡಿ ತಿಳಿಸಿದರು.

English summary
Farmers have destroyed the onion crop in the Hagaribommanahalli and Hoovinahadagali taluks of Vijayanagar district.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X