ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಂದರ್ಶನ: ಸಂಯುಕ್ತ ಹೋರಾಟ-ನಿರ್ದಿಷ್ಟ ಗುರಿ ಸಾಧನೆಗೆ ವಿಷಯಾಧಾರಿತ ಮೈತ್ರಿ: ಬಡಗಲಪುರ ನಾಗೇಂದ್ರ

|
Google Oneindia Kannada News

ದಿಲ್ಲಿಯಲ್ಲಿ ನಡೆಯುತ್ತಿರುವ ರೈತ ಹೋರಾಟಕ್ಕೆ ಪೂರಕವಾಗಿ ಕರ್ನಾಟಕ ರಾಜ್ಯದಲ್ಲಿ ಐಕ್ಯ ಹೋರಾಟ / ಸಂಯುಕ್ತ ಹೋರಾಟ ಎಂಬ ಎರಡು ಒಕ್ಕೂಟಗಳು ಚಳವಳಿಯಲ್ಲಿ ನಿರತವಾಗಿವೆ. ಈ ಒಕ್ಕೂಟಗಳ ಹಿಂದೆ ರಾಜಕೀಯ ಪಕ್ಷಗಳ ನೆರಳಿದೆ ಎಂಬುದಾಗಿ ಒಕ್ಕೂಟದ ಕೆಲವು ಸದಸ್ಯ ಸಂಘಟನೆಗಳು ಹೇಳುತ್ತಿವೆ. ಮತ್ತೆ ಕೆಲವರು ಯಾವುದೇ ರಾಜಕೀಯ ಪಕ್ಷಗಳ ಪ್ರಭಾವ ಇದರಲ್ಲಿಲ್ಲ ಎಂದು ಹೇಳುತ್ತಿದ್ದಾರೆ.

ಒಕ್ಕೂಟದ ಚಟುವಟಿಕೆಗಳು ಪ್ರಜಾಸತ್ತಾತ್ಮಕವಾಗಿ ಎಲ್ಲರನ್ನೂ ಒಳಗೊಂಡಂತೆ ನಡೆಯುತ್ತಿವೆ ಎಂಬ ಅಭಿಪ್ರಾಯ ಒಂದು ಕಡೆಯಿಂದ ಬಂದರೆ, ಮತ್ತೊಂದು ಕಡೆಯಿಂದ ಇಲ್ಲಿ ಕೆಲ ವ್ಯಕ್ತಿಗಳ ಪ್ರಭಾವ ಹೆಚ್ಚಿದೆ ಎಂಬ ಮಾತುಗಳೂ ಕೇಳಿಬರುತ್ತಿವೆ.

ಸಂದರ್ಶನ; ನಮ್ಮ ಕಾಲಾವಧಿ ಮುಗಿಯುವ ಮುನ್ನ ಸಾಮೂಹಿಕ ನಾಯಕತ್ವ ಬರಲಿ: ಕುರುಬೂರು ಶಾಂತಕುಮಾರ್ಸಂದರ್ಶನ; ನಮ್ಮ ಕಾಲಾವಧಿ ಮುಗಿಯುವ ಮುನ್ನ ಸಾಮೂಹಿಕ ನಾಯಕತ್ವ ಬರಲಿ: ಕುರುಬೂರು ಶಾಂತಕುಮಾರ್

ಇವೆಲ್ಲ "ಸತ್ಯ, ಅರ್ಧ ಸತ್ಯ"ಗಳ ಹಿನ್ನೆಲೆಯಲ್ಲಿ ಸಂಯುಕ್ತ ಹೋರಾಟದ ಭಾಗವಾಗಿರುವ ಕರ್ನಾಟಕ ರಾಜ್ಯ ರೈತ ಸಂಘದ ಮುಖಂಡರಾದ ಬಡಗಲಪುರ ನಾಗೇಂದ್ರ ಅವರನ್ನು ಒನ್ಇಂಡಿಯಾ ಕನ್ನಡ ಸಂದರ್ಶಿಸಿದೆ. ಅವರ ಸಂದರ್ಶನದ ಪೂರ್ಣ ಪಾಠ ಇಲ್ಲಿದೆ.

ಬಡಗಲಪುರ ನಾಗೇಂದ್ರ ಅವರ ಸಂದರ್ಶನ

ಕೃಷಿ ಕಾನೂನುಗಳ ವಿರುದ್ಧದ ಹೋರಾಟಕ್ಕಷ್ಟೇ ಸೀಮಿತವೇ?

ಕೃಷಿ ಕಾನೂನುಗಳ ವಿರುದ್ಧದ ಹೋರಾಟಕ್ಕಷ್ಟೇ ಸೀಮಿತವೇ?

ನಾಗೇಶ್: ಈಗ ಹೊಸದಾಗಿ ಐಕ್ಯ ಹೋರಾಟ ಮತ್ತು ಸಂಯುಕ್ತ ಹೋರಾಟ ಅಂತ ಆಗಿದ್ಯಲ್ಲ, ಅದರಲ್ಲಿ ರಾಜಕೀಯ ಪಕ್ಷಗಳೂ ಸೇರಿವೆ! ಈ ಮೈತ್ರಿ ಪ್ರಸ್ತುತ ಮೂರು ಕೃಷಿ ಕಾನೂನುಗಳ ವಿರುದ್ಧದ ಹೋರಾಟಕ್ಕಷ್ಟೇ ಸೀಮಿತವೇ ಅಥವಾ ಮೈತ್ರಿ ಮುಂದುವರೆಯುತ್ತದೆಯೇ?

ಬಡಗಲಪುರ ನಾಗೇಂದ್ರ: ನಮ್ಮ ರಾಜ್ಯದ ಸಂಯುಕ್ತ ಹೋರಾಟ/ ಐಕ್ಯ ಹೋರಾಟಗಳಲ್ಲಿ ಯಾವುದೇ ರಾಜಕೀಯ ಪಕ್ಷಗಳು ಸೇರಿಲ್ಲ. ಈ ಒಕ್ಕೂಟವು ಪ್ರಸ್ತುತ ದೇಶದಲ್ಲಿ ಹಾಗೂ ರಾಜ್ಯದಲ್ಲಿರುವ ಕೃಷಿ ಬಿಕ್ಕಟ್ಟಿನ ವಿರುದ್ಧ ಹೋರಾಡಲು ಮಾಡಿಕೊಂಡಿರುವ ವಿಷಯಾಧಾರಿತ ಮೈತ್ರಿ.

ರಾಜಕೀಯ ಪಕ್ಷ ನೇರವಾಗಿ ಭಾಗವಹಿಸಿಲ್ಲ

ರಾಜಕೀಯ ಪಕ್ಷ ನೇರವಾಗಿ ಭಾಗವಹಿಸಿಲ್ಲ

ನಾಗೇಶ್: ಗಾಂಧಿ ಪ್ರತಿಮೆಯ ಬಳಿ ನಡೆದ ಐಕ್ಯ ಹೋರಾಟದ ಸಭೆಗಳಿಗೆ ನಾನೂ ಬಂದಿದ್ದೆ. ಅಲ್ಲಿ ಕಾರ್ಯಕರ್ತರು ಸಿಪಿಎಂ, ಸಿಪಿಐ ಬಾವುಟಗಳ ಸಮೇತ ಹಾಜರಿದ್ದರು? ಆ ಬಗ್ಗೆ ಏನೇಳ್ತೀರಿ?

ಬಡಗಲಪುರ ನಾಗೇಂದ್ರ: ಸಿಪಿಎಂ ಪಾರ್ಟಿ ಇಲ್ಲ. ಅಲ್ಲಿ, ಸಿಪಿಎಂ ನ ಪ್ರಾಂತ ರೈತ ಸಂಘ ಇದೆ.

ನಾಗೇಶ್: ಅದು ಪಾರ್ಟಿ ಅಫಿಲಿಯೇಟೆಡ್ ತಾನೆ?

ಬಡಗಲಪುರ ನಾಗೇಂದ್ರ: ನಾವೂ, ರೈತ ಸಂಘ ಸ್ವರಾಜ್ ಇಂಡಿಯಾಕ್ಕೆ ಅಫಿಲಿಯೇಟೆಡ್. ಯಾವುದೇ ರಾಜಕೀಯ ಪಕ್ಷ ನೇರವಾಗಿ ಸಂಯುಕ್ತ ಹೋರಾಟದಲ್ಲೇ ಆಗಲಿ, ಐಕ್ಯ ಹೋರಾಟದಲ್ಲೇ ಆಗಲಿ ಭಾಗವಹಿಸಿಲ್ಲ. ಈಗ ದೆಹಲಿಯ ಮಟ್ಟದಲ್ಲಿ ಕಿಸಾನ್ ಸಂಯುಕ್ತ ಮೋರ್ಚಾ ಇದೆ.

ನೋಡಿ ಎಡಪಂಥದ ಸಿಪಿಐ ಆಗಬಹುದು, ಸಿಪಿಎಂ ಆಗಬಹುದು ಚಳುವಳಿಯಲ್ಲಿವೆ. ಇವತ್ತು 541 ರೈತ ಸಂಘಟನೆಗಳಲ್ಲಿ ಅವೆಲ್ಲ ಭಾಗಿಯಾಗಿವೆ. ಆರೆಸ್ಸೆಸ್ ಹಿನ್ನೆಲೆಯಿಂದ ಬಂದ ರೈತ ಸಂಘಗಳೂ ಕೂಡಾ ಈ ವಿಚಾರದಲ್ಲಿ ಸ್ಪಷ್ಟವಾಗಿದ್ದೀವಿ ಅಂತ ಬಂದು ನಮ್ಮ ಜೊತೆ ಭಾಗಿಯಾಗಿದ್ದಾರೆ. ಮತ್ತೆ ಸ್ಪಷ್ಟಪಡಿಸುತ್ತೇನೆ, ಸಂಯುಕ್ತ ಹೋರಾಟ ಮತ್ತು ಐಕ್ಯ ಹೋರಾಟಗಳಲ್ಲಿ ಯಾವುದೇ ರಾಜಕೀಯ ಪಕ್ಷ ಭಾಗಿಯಾಗಿಲ್ಲ, ಆದರೆ ಸಿಪಿಎಂ, ಸಿಪಿಐ, ಎಡಪಕ್ಷಗಳು ಈಗಿನ ರೈತ ಕಾಯಿದೆಗಳು ಮತ್ತು ಫ್ಯಾಸಿಸ್ಟ್ ಪಾಲಿಟಿಕ್ಸ್ ವಿರುದ್ಧ ಇವೆ.

ಸಂದರ್ಶನ; ರೈತ ಚಳವಳಿ ರಾಜಕೀಯೇತರವಾಗಿರಬೇಕು: ಚುಕ್ಕಿ ನಂಜುಂಡಸ್ವಾಮಿಸಂದರ್ಶನ; ರೈತ ಚಳವಳಿ ರಾಜಕೀಯೇತರವಾಗಿರಬೇಕು: ಚುಕ್ಕಿ ನಂಜುಂಡಸ್ವಾಮಿ

ಎಪಿಎಂಸಿ ಆ್ಯಕ್ಟ್, ಭೂ ಸುಧಾರಣಾ ತಿದ್ದುಪಡಿ ಕಾಯಿದೆ ಮತ್ತು ಇತ್ತೀಚೆಗೆ ಬಂದಿರುವ ಗೋ ಹತ್ಯೆ ನಿಷೇಧ ಕಾಯ್ದೆ, ಇವುಗಳನ್ನು ವಿರೋಧ ಮಾಡುವುದಕ್ಕಾಗಿಯೇ ರೈತ, ದಲಿತ, ಕಾರ್ಮಿಕ, ಮಹಿಳೆ, ವಿದ್ಯಾರ್ಥಿ, ಯುವಜನ ಸಂಘಟನೆಗಳು ಸೇರಿ ಸಂಯುಕ್ತ-ಕರ್ನಾಟಕ ಹೋರಾಟ ಅಂತ ಮಾಡಿಕೊಂಡಿದ್ದೇವೆ. ಯಾಕೆ ಸಂಯುಕ್ತ ಹೋರಾಟ ಅಂತ ಮಾಡಿಕೊಂಡಿದೀವಿ ಅಂದ್ರೆ, ಸಂಯುಕ್ತ ಕಿಸಾನ್ ಮೋರ್ಚಾ ಅಂತ ಇದೆ ದಿಲ್ಲಿಯಲ್ಲಿ. ರೈತರ ವಿಷಯಗಳು ಫೋಕಸ್ ಆದರೂ ಸಹ ದಲಿತರು ಸೇರಿದ್ದಾರೆ, ಕಾರ್ಮಿಕರೂ ಇದ್ದಾರೆ. ಈ ಕಾರಣಕ್ಕಾಗಿ.

ಒಟ್ಟಾಗಿ ಹೋರಾಟ ಮಾಡ್ತಿದೀವಿ

ಒಟ್ಟಾಗಿ ಹೋರಾಟ ಮಾಡ್ತಿದೀವಿ

ನಾಗೇಶ್: ಈಗ ನಿಮ್ಮ ಉತ್ತರಕ್ಕೆ ಪೂರಕವಾಗಿಯೇ ಒಂದು ಪ್ರಶ್ನೆ. ನೀವು ಹಿಂದಿನಿಂದ ನಡೆದು ಬಂದ ಚಳುವಳಿಯ ಮಾರ್ಗ ಸಮಾಜವಾದ ಮತ್ತು ಗಾಂಧಿ ಮಾರ್ಗ. ನಿಮ್ಮ ಸಂಘಟನೆಯ ಸಿದ್ಧಾಂತವನ್ನು ಒಪ್ಪುವಂಥವರು ಸಂಯುಕ್ತ ಹೋರಾಟದಲ್ಲಿ ಇದ್ದಾರಾ? ಅಥವಾ ಈ ಕಾಯ್ದೆಗಳ ವಿಚಾರಕ್ಕೆ ಮಾತ್ರ ಜೊತೆಯಲ್ಲಿದ್ದಾರಾ?

ಬಡಗಲಪುರ ನಾಗೇಂದ್ರ: ಈ ಕಾಯ್ದೆ ವಿಚಾರಕ್ಕೆ ಮಾತ್ರ.

ನಾಗೇಶ್: ಹಾಗಾದ್ರೆ ಸೈದ್ಧಾಂತಿಕವಾಗಿ ನೀವು ಅವರು ಜೊತೆಯಲ್ಲಿ ಇಲ್ಲ?

ಬಡಗಲಪುರ ನಾಗೇಂದ್ರ: ಸಿದ್ಧಾಂತಗಳು ಬೇರೆ ಇರಬಹುದು. ಆದರೆ ಈ ಕಾಯ್ದೆಗಳ ವಿರುದ್ಧ ಮಾತ್ರ ಒಟ್ಟಾಗಿ ಹೋರಾಟ ಮಾಡ್ತಿದೀವಿ.

ನಾಗೇಶ್: ಹಾಗಾದ್ರೆ ಮುಂದೆ ಇದು ಬೇರೆಯೇ ಸ್ವರೂಪ ಪಡೆದುಕೊಳ್ಳಬಹುದೆ? ಅಂದ್ರೆ ಒಟ್ಟಾಗಿ ಮುಂದುವರೆಯಬಹುದು ಅಥವಾ ದೂರವಾಗಲೂಬಹುದಾ?

ಬಡಗಲಪುರ ನಾಗೇಂದ್ರ: ಹೌದು. ಇದು ವಿಷಯಾಧಾರಿತ ಸದ್ಯದ ಮೈತ್ರಿ.

ರೈತರೇ ಸಂಘಟನೆ ಮಾಡಬೇಕು

ರೈತರೇ ಸಂಘಟನೆ ಮಾಡಬೇಕು

ನಾಗೇಶ್: ಪ್ರಾಂತ ರೈತ ಸಂಘ ಕಮ್ಯುನಿಸ್ಟ್ ಪಾರ್ಟಿಗೆ ಅಫಿಲಿಯೇಟೆಡ್. ಅವರೂ ಬಾವುಟ ಹಿಡಿದೇ ಬರುತ್ತಾರೆ. ಈ ಹೋರಾಟ ಮಾಡಲು ನಿಮಗೆ ಸ್ವಂತ ಶಕ್ತಿ ಇರಲಿಲ್ಲವೇ?

ಬಡಗಲಪುರ ನಾಗೇಂದ್ರ: ನಾವು ಕರ್ನಾಟಕದಲ್ಲಿ ಒಂಟಿ ಕಾಲಲ್ಲಿ ನಡೆಯಬಾರದು ಅನ್ನುವ ಭಾವನೆಯಿತ್ತು. ಸಮಗ್ರ ಹೋರಾಟದ ಕಲ್ಪನೆ ಬೇಕು. ಎಲ್ಲ ಸಂಘಟನೆಗಳಿಗೂ ಅವುಗಳದ್ದೇ ಮಿತಿಗಳಿರುತ್ತವೆ. ರೈತರ ವಿಷಯ ಬಂದಾಗ ರೈತರೇ ಸಂಘಟನೆ ಮಾಡಬೇಕು. ಕಾರ್ಮಿಕರ ವಿಷಯಗಳಿಗೆ ಕಾರ್ಮಿಕರೇ ಹೋರಾಟ ಮಾಡಬೇಕು. ಹಾಗೆಯೇ ದಲಿತರು, ಮಹಿಳೆಯರು... ಇತ್ಯಾದಿ. ಆದರೆ ಇದು ಸಮಗ್ರ ಹೋರಾಟ. ಕೃಷಿ ವಿರೋಧಿ ಮಸೂದೆಗಳಿರುವಂಥದ್ದು ಕೇವಲ ರೈತರ ಮೇಲೆ ಅಷ್ಟೇ ಅಲ್ಲ ಎಲ್ಲರ ಮೇಲೂ ಪರಿಣಾಮ ಬೀರುತ್ತದೆ. ಆಹಾರ ಸಾರ್ವಭೌಮತ್ವ, ಆಹಾರ ಭದ್ರತೆ, ರೈತಾಪಿ ಸಂಸ್ಕೃತಿ ಎಲ್ಲವೂ ಇದರಿಂದ ನಾಶವಾಗುತ್ತದೆ. ಆದ್ದರಿಂದ ಇವನ್ನೆಲ್ಲ ವಿರೋಧಿಸುವವರು ಯಾರ್‍ಯಾರಿದ್ದಾರೆ ಎಲ್ಲಾ ಸಮುದಾಯದೊಳಗಿನಿಂದ ಒಂದು ಧ್ವನಿ ಹೊರಡಬೇಕು. ಯಾರಿಗೆಲ್ಲಾ ಸಮಸ್ಯೆಗಳ ಬಗ್ಗೆ ಸ್ಪಷ್ಟತೆ ಇದೆ ಎಲ್ಲರೂ ಸೇರಿ ಐಕ್ಯ ಹೋರಾಟ ಮಾಡಬೇಕು ಅಂತ ಚರ್ಚೆಯಾಗುತ್ತಿತ್ತು, ಸಾಕಷ್ಟು ಸಲಹೆಗಳೂ ಇದ್ದವು. ಅಂತವರನ್ನ ಒಳಗೊಂಡು ಮಾಡಿ ಎಂದು ದೇವನೂರು ಮಹದೇವ ಅವರೂ ಹೇಳಿದ್ದರು. ನಮಗೂ ಕೂಡಾ ಅನ್ನಿಸಿತ್ತು.

ವಿನಾಶದತ್ತ ಭಾಜಪ: ರೈತರ ಮತಕ್ಕೆ ಕಾದಿವೆ ಇತರೆ ಪಕ್ಷಗಳುವಿನಾಶದತ್ತ ಭಾಜಪ: ರೈತರ ಮತಕ್ಕೆ ಕಾದಿವೆ ಇತರೆ ಪಕ್ಷಗಳು

ರೈತ ದಲಿತ ಕಾರ್ಮಿಕ ಐಕ್ಯ ಹೋರಾಟ ಇತ್ತು

ರೈತ ದಲಿತ ಕಾರ್ಮಿಕ ಐಕ್ಯ ಹೋರಾಟ ಇತ್ತು

ನಾಗೇಶ್: ದೇವನೂರು ಮಹದೇವ ಅವರನ್ನು ಈ ವಿಚಾರಕ್ಕಾಗಿ ಸಂಪರ್ಕ ಮಾಡಿದ್ರಾ?

ಬಡಗಲಪುರ ನಾಗೇಂದ್ರ: ಮಹದೇವ್ ಕೂಡಾ ನಮ್ಮೊಟ್ಟಿಗೆ ಇದ್ದಾರೆ. ರೈತ ದಲಿತ ಕಾರ್ಮಿಕ ಐಕ್ಯ ಹೋರಾಟದ ಮಾರ್ಗದರ್ಶಕರು ಅವರು. ಒಗ್ಗೂಡಿ ಮಾಡುವ ಇಂಥಹ ಹೋರಾಟದೊಂದಿಗೆ ಅವರಿರುತ್ತಾರೆ.


ನಾಗೇಶ್: ಐಕ್ಯ ಹೋರಾಟ ಅಂತ ಒಂದೇ ಇದ್ದದ್ದು ನಿನ್ನೆ ಮೊನ್ನೆ ಸಂಯುಕ್ತ ಹುಟ್ಟಿಕೊಳ್ಳಲು ಕಾರಣವೇನು?

ಬಡಗಲಪುರ ನಾಗೇಂದ್ರ: ರೈತ ದಲಿತ ಕಾರ್ಮಿಕ ಐಕ್ಯ ಹೋರಾಟ ಇತ್ತು. ಅದರಲ್ಲಿ ಪಾರಂಭದ ದಿನಗಳಲ್ಲಿ ಪ್ರಾಂತ ರೈತ ಸಂಘವೂ ಜೊತೆಯಿತ್ತು. ಕೃಷಿ ಕೂಲಿಕಾರರ ಸಂಘಗಳೂ ಇದ್ದವು. ಕಾರ್ಮಿಕ ಸಂಘಟನೆಗಳೂ ಇದ್ದವು. ಮತ್ತೆ ರೈತ ಸಂಘದ ಎಲ್ಲರನ್ನೂ ಅಂದರೆ ಕೋಡಿಹಳ್ಳಿ ಚಂದ್ರಶೇಖರ್, ಚುಕ್ಕಿ ಮತ್ತು ಗಂಗಾಧರ್ ಎಲ್ಲರನ್ನೂ ಆಹ್ವಾನಿಸಿದ್ದೆವು. ಎಲ್ಲರನ್ನೂ ಕರೆಯಬಹುದಾ ಅಂತ ನನ್ನನ್ನು ಸಂಪರ್ಕಿಸಿದವರು ಕೇಳಿದ್ದರು. ಸರಿ ಅಂದಿದ್ದೆವು. ಆಗಸ್ಟ್ 29, 2020 ರಲ್ಲಿ ಆಶೀರ್ವಾದ್ ಹೋಟೆಲ್ ನಲ್ಲಿ ಸಭೆ ಆಯಿತು. ಆಗ ಕೋಡಿಹಳ್ಳಿ ಅವರು ಬರ್ತೀನಿ ಅಂದವರು ಪ್ರತ್ಯೇಕವಾದರು. ಮತ್ತೊಮ್ಮೆ ಮಾತಾಡಿ ಸ್ಪಷ್ಟಪಡಿಸಿಕೊಳ್ಳಲು ನಿರ್ಧಾರ ಮಾಡಿದೆವು. ಗಂಗಾಧರ್ ಜೂಮ್ ಮೀಟಿಂಗಿಗೆ ಬಂದರು. ನಂತರ AIKSCC (ಅಖಿಲ ಭಾರತ ರೈತ ಸಂಘರ್ಷ ಸಮನ್ವಯ ಸಮಿತಿ) ಅಂತ ಇತ್ತು. ಅದರಲ್ಲಿ 9 ಸಂಘಟನೆಗಳು ಭಾಗಿಯಾಗಿದ್ದವು, ನಮ್ಮದು, ಕೋಡಿಹಳ್ಳಿ, ಜನಶಕ್ತಿ, ಪ್ರಾಂತ ರೈತ ಸಂಘ ಸೇರಿದಂತೆ ಎಲ್ಲ 9 ಸಂಘಗಳು.

ಪ್ರಾರಂಭದ ದಿನಗಳಲ್ಲಿ ತೊಂಬತ್ತು ಭಾಗ ಸಂಘಟನೆಗಳು ಐಕ್ಯ ಹೋರಾಟದ ವೇದಿಕೆಯಲ್ಲೇ ಇದ್ದವು. ಆಮೇಲೆ AIKSCC ರೈತ ದಲಿತ ಕಾರ್ಮಿಕ ಐಕ್ಯ ಹೊರಾಟದಲ್ಲೇ ನಡೆಯಲಿ ನಮ್ಮ ಹೋರಾಟ ಎಂಬ ವಾದವಿತ್ತು. ಕೊನೆಯಲ್ಲಿ AIKSCC ಹೆಸರಲ್ಲಿ ನಡೆಯಲಿ ಎಂಬ ಮಾತುಗಳು ಬಂದವು. ದೆಹಲಿಯಲ್ಲಿ 541 ಸಂಘಟನೆಗಳ ಕಿಸಾನ್ ಮೋರ್ಚಾ ಆಗಿದೆ. ಅದೇ ಹೆಸರು ಮಾದರಿಯಲ್ಲಿ ಇಲ್ಲಿಯೂ ಸಂಯುಕ್ತ ಹೋರಾಟ ಅಂತ ಮಾಡೋಣ ಎಂದು ನಿರ್ಧರಿಸಿದೆವು.

ಒಗ್ಗೂಡುವುದು ಹೋರಾಟಕ್ಕೆ ಶಕ್ತಿ

ಒಗ್ಗೂಡುವುದು ಹೋರಾಟಕ್ಕೆ ಶಕ್ತಿ

ನಾಗೇಶ್: ಸರಿ ಅಗತ್ಯವೋ ಅನಿವಾರ್ಯವೋ ಸೇರಿಕೊಂಡಿದ್ದೀರಿ. ಆದರೆ ಯಾವುದೇ ರಾಜಕೀಯ ಪಕ್ಷದ ಅಫಿಲಿಯೇಷನ್ ಇರುವಂತಹ ಸಂಘಟನೆ ಜೊತೆ ಕೈಜೋಡಿಸಿದರೆ ರಾಜ್ಯ ರೈತ ಚಳವಳಿ ದುರ್ಬಲವಾಗುತ್ತದೆ ಎಂದು ನಿಮಗೆ ಅನ್ನಿಸಿಲ್ಲವಾ? ಐಕ್ಯ ಹೋರಾಟದಲ್ಲಿರುವ ರೈತ ನಾಯಕರೇ ಹೇಳ್ತಿದ್ದಾರೆ ಇದಕ್ಕೆ ರಾಜಕೀಯ ವಾಸನೆಯಿದೆ ಅಂತ !?

ಬಡಗಲಪುರ ನಾಗೇಂದ್ರ: ಖಂಡಿತವಾಗಿಯೂ ಇಲ್ಲ. ಯಾಕೆಂದರೆ ರೈತ ಸಂಘಟನೆ ತನ್ನ ಅಸ್ತಿತ್ವವನ್ನು ಯಾವತ್ತೂ ಕಳೆದುಕೊಳ್ಳುವುದಿಲ್ಲ. ಇವತ್ತು ಫ್ಯಾಸಿಸ್ಟ್ ಶಕ್ತಿಗಳು ಬಲಗೊಳ್ಳುತ್ತಿವೆ. ಸಂವಿಧಾನದ ಅಂಗಗಳು ಏನಾಗುತ್ತಿವೆ! ನ್ಯಾಯಾಂಗ ಸೇರಿದಂತೆ ಎಲ್ಲ ಅಂಗಗಳೂ ಸಹ ಫ್ಯಾಸಿಸ್ಟ್ ಮನೋಭಾವಕ್ಕೆ ತಕ್ಕಂತೆ ತಮ್ಮ ನಡೆಯನ್ನು ಬದಲಾಯಿಸಿಕೊಳ್ಳುತ್ತಿವೆ. ಎಲ್ಲ ಸ್ವಾಯತ್ತ ಸಂಸ್ಥೆಗಳೂ ಅದಕ್ಕೆ ಪೂರಕವಾಗಿಯೇ ನಡೆದುಕೊಳ್ಳುತ್ತಿವೆ. ಈ ತರಹದ ಆಡಳಿತ ಇರುವಾಗ ಜನಮುಖಿಯಾಗಿರುವವರೆಲ್ಲರು ಒಗ್ಗೂಡುವುದು ಹೋರಾಟಕ್ಕೆ ಶಕ್ತಿ ತುಂಬುತ್ತದೆಯೇ ಹೊರತು ದುರ್ಬಲ ಅಂತ ನನಗೆ ಅನ್ನಿಸುವುದಿಲ್ಲ.

ಕೆಲವರಿಗೆ ರಾಜಕೀಯ ಪಕ್ಷಗಳ ಜೊತೆ ಹೊಂದಾಣಿಕೆ

ಕೆಲವರಿಗೆ ರಾಜಕೀಯ ಪಕ್ಷಗಳ ಜೊತೆ ಹೊಂದಾಣಿಕೆ

ನಾಗೇಶ್: ಈಗ ಕರ್ನಾಟಕದ ಮಟ್ಟಿಗೆ ಹೆಚ್.ಎಸ್.ರುದ್ರಪ್ಪ, ಎನ್.ಡಿ.ಸುಂದರೇಶ್, ಪ್ರೊ. ಎಂ.ಡಿ.ಎನ್ ಕಟ್ಟಿ ಬೆಳೆಸಿದ ರೈತ ಸಂಘದಲ್ಲಿ ಬಹಳ ಕಾಲದವರೆಗೂ ಬಿರುಕು ಬಂದಿರಲಿಲ್ಲ. ನಂತರ ಸಾಕಷ್ಟು ಬಣಗಳಾದವು. ಎಲ್ಲರೂ ಒಟ್ಟಿಗಿದ್ರೆ ನಿಮ್ಮ ಶಕ್ತಿ ಜಾಸ್ತಿ ಆಗ್ತಿತ್ತು ಆನ್ಸಲ್ವಾ?

ಬಡಗಲಪುರ ನಾಗೇಂದ್ರ: ಖಂಡಿತಾ. ನಿಮ್ಮ ಆಲೋಚನೆ ಮತ್ತು ಅಭಿಪ್ರಾಯ ತುಂಬಾ ಮುಕ್ತವಾಗಿದೆ. ಅದು ಎಲ್ಲರ ನಿರೀಕ್ಷೆ ಕೂಡಾ. ಆದರೆ ಏಕೆ ಸಾಧ್ಯವಾಗಲ್ಲ ಅನ್ನೋದನ್ನ ನಾನು ಕೆಲವು ಉದಾಹರಣೆಗಳ ಮೂಲಕ ವಿವರಿಸುತ್ತೇನೆ. 1983ರಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಸೇರಿದಂತೆ ಕೆಲವರು ಹೊರಹೋದರಲ್ಲ, ಆಗ ಕೆಲವರಿಗೆ ರಾಜಕೀಯ ಪಕ್ಷಗಳ ಜೊತೆ ಹೊಂದಾಣಿಕೆ ಮಾಡಿಕೊಳ್ಳಬೇಕು ಅಂತ ಇತ್ತು, ಕೆಲವರಿಗೆ ಅದು ಬೇಡವಾಗಿತ್ತು. ಸಮಸ್ಯೆಯನ್ನು ತುಲನಾತ್ಮಕವಾಗಿ ಬಗೆಹರಿಸಲು ಸಾಧ್ಯವಾಗದೇ ಒಡಕುಂಟಾಯಿತು.

ಪ್ರೊಫೆಸರ್ ನಮಗೆಲ್ಲರಿಗೂ ಇವತ್ತಿಗೂ ಗುರುಗಳೇ, ನನಗೂ ಗುರುಗಳೇ, ಪುಟ್ಟಣ್ಣಯ್ಯನವರಿಗೂ ಗುರುಗಳೇ, ಅವರ ಬಗ್ಗೆ ಯಾರೂ ಕೂಡಾ ಭಿನ್ನಾಭಿಪ್ರಾಯ ವ್ಯಕ್ತಪಡಿಸಲ್ಲ. ಅಂದು ಒಡಕು ಮೂಡಿದ ಸಂದರ್ಭದಲ್ಲಿ ನಾಯಕತ್ವದ ವಿಚಾರದಲ್ಲಿ, ತನ್ನ ಮೇಲಿನ ಪ್ರಶ್ನೆಗಳು ಬಂದಾಗ ಅದನ್ನ ಮುಕ್ತವಾಗಿ ಬಗೆಹರಿಸಿಕೊಳ್ಳಬೇಕಿತ್ತು. ಅಂದು ಒಬ್ಬರಿಗೊಬ್ಬರ ನಡುವೆ ಮನಸ್ತಾಪಗಳನ್ನು ಹುಟ್ಟುಹಾಕುವ ಜನರೇ ಹೆಚ್ಚಾಗಿದ್ದರು. ಅದು ವ್ಯಕ್ತಿ ದ್ವೇಷ ಆಗಬಾರದಿತ್ತು. ಅಲ್ಲಿಂದಲೇ ನಮ್ಮ ರೈತ ಚಳವಳಿಗೆ ಅಪಾಯವಾಗಿದ್ದು. ಅದಾದ ನಂತರ ಅಶಿಸ್ತಿನ ಕ್ರಿಯೆಗಳು ಪ್ರಾರಂಭವಾದವು, ಹತ್ತಾರು ಸಂಘಟನೆಗಳು ಹುಟ್ಟಿಕೊಂಡವು.

ಪ್ರೊ.ಎಂ.ಡಿ.ಎನ್ ತೀರಿಕೊಂಡ ನಂತರ ನಾನೇ ಪುಟ್ಟಣ್ಣಯ್ಯ ಅವರನ್ನು ಅಮೃತಭೂಮಿಗೆ ಕರೆದುಕೊಂಡು ಹೋಗಿದ್ದೆ. ಅಶೋಕ್, ಚುಕ್ಕಿ, ಶೇಷಾರೆಡ್ಡಿ ಮುಂತಾದವರು ಇದ್ದರು. ಒಂದು ಮಾಡುವ ಪ್ರಕ್ರಿಯೆ ಮುಂದುವರೆಯಿತು. ಕೋಡಿಹಳ್ಳಿ ನಾವು ಒಂದಾದೆವು. ಆದರೆ ಮನಸ್ಸಿನಿಂದ ಒಂದಾಗಲಿಲ್ಲ. ಸಾಂಘಿಕವಾದ ನಿಯಮಕ್ಕೆ ಒಳಪಡಲಿಲ್ಲ. ಕಸಿವಿಸಿಗಳಾಯ್ತು. ಒಂದು ಕೋರ್ ಕಮಿಟಿಯನ್ನೂ ಮಾಡಿದೆವು. ಅಧ್ಯಕ್ಷರು ಯಾರಾಗಬೇಕೆಂಬ ವಿಷಯವಾಗಿ ಚರ್ಚೆ ನಡೆಯಿತು. ಅದನ್ನು ನಾವು ನಿರ್ಧರಿಸಲು ಬರುವುದಿಲ್ಲ, ರಾಜ್ಯ ಕಾರ್ಯಕಾರಿ ಸಮಿತಿ ಅಥವಾ ಪೂರ್ಣ ರಾಜ್ಯ ಸಮಿತಿ ನಿರ್ಧಾರ ಮಾಡಬೇಕು. ನಾವೆಲ್ಲಾ ಸಮಸ್ಯೆಗಳನ್ನು ಬಗೆಹರಿಸಿ ಒಟ್ಟಿಗೆ ತೆಗೆದುಕೊಂಡು ಹೋಗಲು, ನೀತಿ ನಿಯಮಗಳನ್ನು ರೂಪಿಸಲು, ಸಂಘಟನೆ ಕಟ್ಟಲು ಯಾವ ಆಶೋತ್ತರಗಳನ್ನು ಇಟ್ಟುಕೊಳ್ಳಬೇಕು ಎಂದು ಚರ್ಚೆ ಮಾಡುತ್ತಿದ್ದೆವು.

2012 ನವೆಂಬರ್ ನಲ್ಲಿ ಮುರುಘಾ ಮಠದವರು ಎಲ್ಲರನ್ನೂ ಒಟ್ಟಾಗಿಸಬೇಕೆಂದು ಕರೆದಿದ್ದರು. ಆಗ ರೈತರ ಆತ್ಮಹತ್ಯೆಯಂತಹ ವಿಷಯಗಳ ವಿರುದ್ಧ ಚರ್ಚಾಗೋಷ್ಠಿಗಳನ್ನು ಮಠದವರು ಮಾಡುತ್ತಿದ್ದರು. ಎಲ್ಲರೂ ಹೋಗುವುದು ಸರಿಯಲ್ಲವೆಂದೂ, ಕರೆಗೆ ಗೌರವ ನೀಡುವ ಸಲುವಾಗಿ ನಾಲ್ಕೈದು ಜನ ಹೋಗಿ ಏನೆಂದು ತಿಳಿದುಕೊಳ್ಳುವುದು ಮತ್ತು ಅಲ್ಲಿ ಯಾವುದೇ ನಿರ್ಧಾರವನ್ನು ತೆಗೆದುಕೊಳ್ಳದೇ ಇರುವಂತೆ ಮೈಸೂರಿನಲ್ಲಿ ನಡೆದ ಸಭೆಯಲ್ಲಿ ತೀರ್ಮಾನಿಸಿದ್ದೆವು. ಆದರೆ ಅಲ್ಲಿ ನಡೆದದ್ದೇ ಬೇರೆ. ಅಧ್ಯಕ್ಷರು, ಕಾರ್ಯದರ್ಶಿ ಮತ್ತು ಇತರೆ ಪದಾಧಿಕಾರಿಗಳು ಯಾರೆಂದು ಅಲ್ಲಿ ಘೋಷಿಸಿಯೇ ಬಿಟ್ಟರು. ಇದನ್ನು ಚಾಮರಸ ಮಾಲಿ ಪಾಟೀಲ್ ಮತ್ತು ಮಂಡ್ಯದ ಅಶೋಕ್ ಅಲ್ಲಿಯೇ ವಿರೋಧಿಸಿದ್ದರು. 26 ಜಿಲ್ಲೆಗಳು ಅದರ ವಿರುದ್ಧ ಸಿಡಿದೆದ್ದವು.

ಮಠಗಳಿಗೆ ಹೋಗಿ ತೀರ್ಮಾನ ಮಾಡಿಕೊಳ್ಳುವಂತಹ ತಾತ್ವಿಕ ದಾರಿದ್ರ್ಯ ಬಂತಲ್ಲ ಎಂದು ಎಲ್ಲರೂ ಸಿಡಿದೆದ್ದೆವು. ಮಠದಲ್ಲಾದ ತೀರ್ಮಾನ ತಿರಸ್ಕರಿಸಿ ನಿರ್ಣಯ ಮಾಡಿದೆವು. ಮಠಕ್ಕೆ ಹೋಗಿದ್ದ ಕೋಡಿಹಳ್ಳಿ, ಬಸವರಾಜಪ್ಪ ಮತ್ತು ಪುಟ್ಟಣ್ಣಯ್ಯನವರು ಸಂಘದಲ್ಲಿ ಒಂದು ವರ್ಷದ ಕಾಲ ಪದಾಧಿಕಾರಿಯಾಗದೆ ಹಿರಿಯ ಕಾರ್ಯಕರ್ತರಾಗಿ ದುಡಿಯಬೇಕೆಂದು ತೀರ್ಮಾನಿಸಿದೆವು. ಸಂಘದ ತೀರ್ಮಾನವನ್ನು ಒಪ್ಪಿಕೊಂಡು ಕೆ.ಎಸ್.ಪುಟ್ಟಣ್ಣಯ್ಯನವರು ಅವರ ದೊಡ್ಡತನ ಪ್ರದರ್ಶಿಸಿದರು.

ಈಗ ವಿಚಾರಕ್ಕಿಂತ ವ್ಯಕ್ತಿಕೇಂದ್ರಿತ ಸಂಘಟನೆಗಳಾಗಿವೆ. ಯಾವುದೋ ಕಾರಣಗಳಿಗೆ ನಾಯಕರಾಗುತ್ತಾರೆ. ಎಲೆಕ್ಟ್ರಾನಿಕ್ ಮೀಡಿಯಾ ಬಂದ ನಂತರವಂತೂ ಕೆಲವರು ಮೂರನೇ ದರ್ಜೆಯ ಪುಡಾರಿಗಳಂತೆ ವರ್ತಿಸಲು ಆರಂಭಿಸಿದ್ದಾರೆ. ಇದೆಲ್ಲಕ್ಕೂ ತಡೆಹಾಕಿ ಹೊಸ ರೂಪ ಕೂಡಬೇಕಿದೆ. ಅದಕ್ಕಾಗಿ ಹೊಸ ಸಂವಿಧಾನ ಮಾಡಿದ್ದೇವೆ, ಬದಲಾವಣೆಗಳನ್ನು ಮಾಡಿದ್ದೇವೆ. ಸಂಘದ ಪದಾಧಿಕಾರಿಗಳಾಗಬೇಕಾದರೆ ಏನು ಅರ್ಹತೆ ಇರಬೇಕೆಂದು ವಿವರಿಸಿದ್ದೇವೆ. ಚಳವಳಿಗಾರರ ಮೇಲೂ ಭ್ರಷ್ಟಾಚಾರದ ಆರೋಪಗಳಿವೆ. ಕೆಲವರು ಭ್ರಷ್ಟರಾಗಿರೋದು ಸತ್ಯ, ಅದನ್ನ ಮುಚ್ಚಿಡಲು ಸಾಧ್ಯವಿಲ್ಲ. ಹಾಗಾಗಿ ಪ್ರತಿ ವರ್ಷ ರಾಜ್ಯ ಪದಾಧಿಕಾರಿಗಳು ತಮ್ಮ ಆಸ್ತಿಯನ್ನು ಘೋಷಿಸಬೇಕು, ಹಾಗೂ ರಾಜ್ಯ ಮತ್ತು ಜಿಲ್ಲಾ ಪದಾಧಿಕಾರಿಗಳು ಯಾವುದೇ ಜಾತಿ ಸಂಘದ ಪದಾಧಿಕಾರಿಗಳಾಗಿರಕೂಡದು ಎಂದು ಸಂವಿಧಾನದಲ್ಲಿ ಅಳವಡಿಸಿಕೊಂಡಿದ್ದೇವೆ.

ಸಂಘಟಿತ ರೈತ ಚಳವಳಿ ಅನಿವಾರ್ಯ; ರಾಜಕೀಯ ಪಕ್ಷದೊಂದಿಗೆ ಹೊಂದಾಣಿಕೆ ಅಲ್ಲಸಂಘಟಿತ ರೈತ ಚಳವಳಿ ಅನಿವಾರ್ಯ; ರಾಜಕೀಯ ಪಕ್ಷದೊಂದಿಗೆ ಹೊಂದಾಣಿಕೆ ಅಲ್ಲ

ಪಾರದರ್ಶಕತೆಯನ್ನು ಕಾಯ್ದುಕೊಳ್ಳುತ್ತಿದ್ದೇವೆ

ಪಾರದರ್ಶಕತೆಯನ್ನು ಕಾಯ್ದುಕೊಳ್ಳುತ್ತಿದ್ದೇವೆ

ನಾಗೇಶ್: ಹಿಂದೆ ಚಳುವಳಿಗೆ ಯಾರಿಂದ ದೇಣಿಗೆ ಪಡೆಯಬಹುದು ಯಾರಿಂದ ಪಡೆಯಬಾರದು ಎಂಬ ಪಟ್ಟಿಯಿತ್ತು. ಅದನ್ನೇನಾದರೂ ನಿಮ್ಮ ಸಂವಿಧಾನದಲ್ಲಿ ಅಳವಡಿಸಿಕೊಂಡಿದ್ದೀರಾ?

ಬಡಗಲಪುರ ನಾಗೇಂದ್ರ: ಖಂಡಿತ. ಜೊತೆಗೆ ಇದನ್ನು online ಮಾಡಿದ್ದೇವೆ. ಎಲ್ಲ ವಿಷಯಗಳಲ್ಲೂ ರೈತಸಂಘದಾಚೆಗೂ ಪಾರದರ್ಶಕತೆಯನ್ನು ಕಾಯ್ದುಕೊಳ್ಳುತ್ತಿದ್ದೇವೆ. ಮೂಲ ಧ್ಯೇಯೋದ್ದೇಶಗಳನ್ನು ಬದಲಾಯಿಸದೆ ಇನ್ನೂ ಗಟ್ಟಿಗೊಳಿಸಿದ್ದೇವೆ. ಒಟ್ಟು 55 ಪರಿಚ್ಚೇಧಗಳಿವೆ. ಆ ಸಂವಿಧಾನವನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತೇನೆ.


ನಾಗೇಶ್: ಮಾತಿನ ಮಧ್ಯೆ ಒಮ್ಮೆ ಮಠಕ್ಕೋಗುವ ದಾರಿದ್ರ್ಯ ಬಂತು ಅಂತ ಹೇಳಿದಿರಿ. ಈಗಲೂ ರೈತ ಸಂಘಕ್ಕೆ ರಾಜಕೀಯ ಪಕ್ಷಗಳಿಗೆ ಅಫಿಲಿಯೇಟ್ ಆದ ಸಂಘಟನೆಗಳೊಂದಿಗೆ ಕೈ ಜೋಡಿಸುವ ದಾರಿದ್ರ್ಯ ಬಂತಾ? ರೈತ ಸಂಘದ ಶಕ್ತಿ ಕಡಿಮೆ ಆಗಿದೆಯೇ ! ಏನನ್ನಿಸುತ್ತೆ ನಿಮಗೆ?

ಬಡಗಲಪುರ ನಾಗೇಂದ್ರ: ಖಂಡಿತವಾಗಿಯೂ ಇಲ್ಲ. ಈಗ ನಮ್ಮ ಶಕ್ತಿ ಕಡಿಮೆಯಾಗಿದೆ ಅಂತ ಒಂದಾಗಿರುವುದಲ್ಲ. ಫ್ಯಾಸಿಸ್ಟ್ ಧೋರಣೆಯ ವಿರುದ್ಧ ಸಮಾನ ಮನಸ್ಕರ, ಅಹಿಂಸೆಯನ್ನ ಒಪ್ಪಿದವರ ಮತ್ತು ಜನಪರರ ಹೋರಾಟವಷ್ಟೇ.

ಹಿಂಸೆಯನ್ನು ಬಿಟ್ಟವರು ಇದ್ದಾರೆ

ಹಿಂಸೆಯನ್ನು ಬಿಟ್ಟವರು ಇದ್ದಾರೆ

ನಾಗೇಶ್: ಎಲ್ಲರೂ ಅಹಿಂಸೆಯನ್ನು ನಂಬಿದವರೇ ಇದ್ದಾರಾ ನಿಮ್ಮ ಜೊತೆಯಲ್ಲಿ. ಹಿಂಸೆಯನ್ನು ಒಪ್ಪಿದವರು ಇಲ್ಲವಾ?

ಬಡಗಲಪುರ ನಾಗೇಂದ್ರ: ಹಿಂಸೆಯನ್ನು ಬಿಟ್ಟವರು ಇದ್ದಾರೆ.


ನಾಗೇಶ್: ಹಿಂಸೆಯನ್ನು ಒಪ್ಪಿ ಬಿಟ್ಟವರು ಸಮಾಜಕ್ಕೆ ತಪ್ಪೊಪ್ಪಿಗೆ ಕೊಟ್ಟಿದ್ದಾರಾ?

ಬಡಗಲಪುರ ನಾಗೇಂದ್ರ: ಮುಖ್ಯವಾಹಿನಿಗೆ ಬರುತ್ತೇವೆ ಎಂದು ಸರ್ಕಾರದ ಮುಂದೆ ಹೇಳಿ ಬಂಧನಕ್ಕೊಳಗಾಗಿದ್ದಾರೆ.

ನಾಗೇಶ್: ಸರಿ ಅದಿರಲಿ, ಈಗ ರೈತ ಸಂಘದ ಒಂದು ಬಣದವರು ಶಿವಮೊಗ್ಗ, ಹಾವೇರಿ, ಮತ್ತು ಬೆಳಗಾವಿಯಲ್ಲಿ ಮುಂದಿನ ತಿಂಗಳು (ಮಾರ್ಚ್ 20, 21 & 22) ಸಮಾವೇಶ ಆಯೋಜಿಸಿದ್ದಾರೆ. ಅದಕ್ಕೆ ಎಲ್ಲರನ್ನೂ ಕರೆದಿದ್ದೇವೆ ಅಂತಲೂ ಹೇಳಿದ್ದಾರೆ? ನೀವು ಅದರಲ್ಲಿ ಭಾಗಿಯಾಗುವಿರಾ?

ಬಡಗಲಪುರ ನಾಗೇಂದ್ರ: ನಾವು ಭಾಗವಹಿಸುತ್ತಿಲ್ಲ. ಶಿವಮೊಗ್ಗ, ಹಾವೇರಿ, ಬೆಳಗಾವಿ ಸಭೆಯ ವಿಚಾರಕ್ಕೆ ಸಂಬಂಧಿಸಿದಂತೆ ಆಂತರಿಕವಾಗಿ ಚರ್ಚೆ ಮಾಡಿ ನಿರ್ಧಾರ ಮಾಡಿದ್ದೇವೆ, ನಾವು ಯಾರೂ ಅಲ್ಲಿ ಭಾಗವಹಿಸುತ್ತಿಲ್ಲ.


ಕರ್ನಾಟಕದಲ್ಲಿ ಸೆಪ್ಟೆಂಬರ್ ನಿಂದ ರೈತ ಕಾರ್ಮಿಕ ದಲಿತ ಐಕ್ಯ ಹೋರಾಟ ನಡೆಯುತ್ತಿದೆ. ನಮಗೆ ಎಲ್ಲರನ್ನೂ ಕರೆಯಬೇಕು ಎಂಬ ಆಸೆಯಿತ್ತು. ಪ್ರಕಾಶ್ ಕಮ್ಮರಡಿಯವರು ಕರೆದಾಗ ಬರುತ್ತೇವೆ ಎಂದ ಅನೇಕ ನಾಯಕರು ಸಭೆಗೆ ಬರಲಿಲ್ಲ. ನಮ್ಮ ಉದ್ದೇಶ ಉತ್ತರ ಮತ್ತು ದಕ್ಷಿಣದ ಚಳವಳಿಯನ್ನು ಒಂದುಗೂಡಿಸುವುದು. ಅದಕ್ಕಾಗಿ ಕಾರ್ಯಕ್ರಮ ಮಾಡುವ ಬಗ್ಗೆ ಒಂದು ಪ್ರಸ್ತಾಪ ಇಟ್ಟಿದ್ದೆ. ಅದಕ್ಕೆ ಯಾವುದೇ ಉತ್ತರ ಬರಲಿಲ್ಲ. ರಾಕೇಶ್ ಟಿಕಾಯತ್ ಕಾರ್ಯಕ್ರಮವನ್ನು ಒಟ್ಟಾಗಿ ಯಶಸ್ವಿಗೊಳಿಸಬೇಕೆಂಬ ಉದ್ದೇಶ ಇತ್ತು. ಆದರೆ ಕೆಲವರು ಒಟ್ಟಾಗಿ ಕಾರ್ಯಕ್ರಮ ರೂಪಿಸದೆ ಕಾರ್ಯಕ್ರಮ ಘೋಷಣೆ ಮಾಡಿ ನಮ್ಮನ್ನು ಆಹ್ವಾನಿಸಿದ್ದಾರೆ.


ಅವರು ಇಲ್ಲಿಗೆ ಬಂದಾಗ ಒಟ್ಟಾಗಿ ಒಂದು ಕಾರ್ಯಕ್ರಮ ಮಾಡುವ ಉದ್ದೇಶವಿದೆ. ಆದರೆ ಮೇಲಿನ ಜಾಗಗಳಲ್ಲಿ ನಾವು ಭಾಗವಹಿಸುತ್ತಿಲ್ಲ. ನಾವು ಆ ಸಭೆಗಳಿಗೆ ಹೋಗುವುದಿಲ್ಲ ಅಂದರೂ ಸಹ, ಮುಂದಿನ ದಿನಗಳಲ್ಲಿ ಎಲ್ಲರೂ ಒಟ್ಟಾಗಿ ಹೋರಾಟ ಮಾಡಲು ಯಾವುದೇ ಅಡ್ಡಿಯಲ್ಲ.

ರೈತ ಚಳವಳಿಗೆ ವಿಚಾರ ಸ್ಪಷ್ಟತೆ ಇರಬೇಕು

ರೈತ ಚಳವಳಿಗೆ ವಿಚಾರ ಸ್ಪಷ್ಟತೆ ಇರಬೇಕು

ನಾಗೇಶ್: ಒಟ್ಟಾರೆ ರೈತ ಚಳವಳಿ ಇನ್ನು ಮುಂದೆ ಯಾವ ದಿಕ್ಕಿನಲ್ಲಿ ನಡೆದರೆ ನಿಮಗೆ ಸರಿ ಅನಿಸುತ್ತದೆ?

ಬಡಗಲಪುರ ನಾಗೇಂದ್ರ: ರೈತ ಚಳವಳಿಗೆ ವಿಚಾರ ಸ್ಪಷ್ಟತೆ ಇರಬೇಕು. ಸವಾಲುಗಳು ಗೊತ್ತಿರಬೇಕು. ಸವಾಲುಗಳಿಗೆ ಮುಖಾಮುಖಿಯಾಗುವುದು, ಅದನ್ನು ಹೇಗೆ ನಿಭಾಯಿಸುವುದು ಎಂಬ ಬಗ್ಗೆ ತಿಳುವಳಿಕೆ ಇರಬೇಕು. ಎಲ್ಲರನ್ನೂ ಒಗ್ಗೂಡುವ ಉದ್ದೇಶವಿರಬೇಕು. ಆದರೆ ತಾತ್ವಿಕ ನೆಲೆಗಟ್ಟಿನಲ್ಲಿ, ನಿಷ್ಪಕ್ಷಪಾತದಿಂದ ಒಗ್ಗೂಡದೆ ಹೋದರೆ, ಮೇಲ್ನೋಟಕ್ಕೆ ಒಂದಾಗಿದ್ದಾರೆ ಎಂದು ಅನಿಸಬಹುದಷ್ಟೇ. ಒಳಗೆ ಟೊಳ್ಳಾಗಿರುತ್ತದೆ. ರೈತ ಸಂಘ ತಾಯಿಯಂತೆ ಇರಬೇಕು.

ನಾಗೇಶ್: ಸಾಮೂಹಿಕ ನಾಯಕತ್ವದ ಬಗ್ಗೆ ನಿಮ್ಮ ಅಭಿಪ್ರಾಯವೇನು?

ಬಡಗಲಪುರ ನಾಗೇಂದ್ರ: ಅದರ ಸ್ವರೂಪ ಮೇಲ್ನೋಟಕ್ಕೆ ಚೆನ್ನಾಗಿದೆ. ಗಾಂಧಿ ಹೇಳುತ್ತಿದ್ದ 'ಯಾವುದೇ ಗಡಿ, ರೇಖೆ ಇಲ್ಲದೆ ಇಡೀ ಪ್ರಪಂಚವೇ ಒಂದು ದೇಶ ಆಗಬೇಕು' ಅನ್ನುವ ಮಾತಿನಂತೆ. ಆದರೆ ಸಾಮೂಹಿಕ ನಾಯಕತ್ವ ಅನ್ನುವುದಕ್ಕಿಂತ ಸಾಮೂಹಿಕ ಚಿಂತನೆಯಾಗಬೇಕು. ಸಮಾನ ಚಿಂತನೆಗಳಿದ್ದಾಗ ಸಾಮೂಹಿಕ ನಾಯಕತ್ವ ಸಾಧ್ಯ. ಆದರೆ ಇಂದಿನ ಪರಿಸ್ಥಿತಿಯಲ್ಲಿ ಸಾಮೂಹಿಕ ನಾಯಕತ್ವ ಅನ್ನುವ ವಿಚಾರ ಕೇಳಲು ಅದ್ಭುತವಾಗಿದೆಯೇ ವಿನಾಃ ಪ್ರಾಯೋಗಿಕವಾಗಿ ಕಷ್ಟಸಾಧ್ಯ.

English summary
Some union members say that political parties have been behind the farmer unions. Again, some say there is no political party influence.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X