ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದಕ್ಷಿಣ ಕನ್ನಡದ ಕುಗ್ರಾಮದಲ್ಲಿ ಫಲ‌ನೀಡಿದ 30 ದೇಶದ ನೂರಾರು ಹಣ್ಣುಗಳು!

By ಮಂಗಳೂರು ಪ್ರತಿನಿಧಿ
|
Google Oneindia Kannada News

ಮಂಗಳೂರು, ಸೆಪ್ಟೆಂಬರ್ 10: ಈ ಸಿಟಿ ಜೀವನ ಸಾಕಪ್ಪಾ ಅಂತಾ ಬಹುತೇಕ ಯುವಕರು ತಮ್ಮೂರಿಗೆ ಮರಳಿ ಕೃಷಿಯಲ್ಲಿ ಖುಷಿ ಕಾಣುವ ಯೋಚನೆ ಮಾಡ್ತಾರೆ. ಆದರೆ ಯಾವ ಕೃಷಿ ಮಾಡೋದು? ಕಡಿಮೆ ಖರ್ಚಿನಲ್ಲಿ ಉತ್ತಮ ಇಳುವರಿ ಹೇಗೆ ಪಡೆದುಕೊಳ್ಳುವುದು ಎಂಬ ಮಾಹಿತಿ ಇಲ್ಲದಿರುವುದರಿಂದ ಕೃಷಿಯಲ್ಲಿ ಸೋತು ಮತ್ತೆ ಪಟ್ಟಣದ ಬಸ್ ಹತ್ತುತ್ತಾರೆ.

ಆದರೆ ದಕ್ಷಿಣ ಕನ್ನಡ ಜಿಲ್ಲೆಯ ಮಾದರಿ ಕೃಷಿಕ ಮಾತ್ರ ಯಾರ ಸಹಾಯವೂ ಇಲ್ಲದೇ, ಕೇವಲ ಫೇಸ್‌ಬುಕ್, ಗೂಗಲ್ ಬಳಸಿ ಕೃಷಿಯ ಬಗ್ಗೆ ಜ್ಞಾನ ಸಂಪಾದಿಸಿ ಈಗ ಯಶಸ್ಸು ಕಂಡಿದ್ದಾರೆ. ಅವರ ತೋಟ ಈಗ ಮೂವತ್ತು ದೇಶದ ನೂರಾರು ಹಣ್ಣುಗಳ ನಂದನ ವನವಾಗಿದೆ.

ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ನಾಲ್ಕೂರು ಗ್ರಾಮದ ಬಳಂಜ ಎಂಬ ಹಳ್ಳಿಯಲ್ಲಿ ಈಗ ಹತ್ತಾರು ದೇಶದ ವಿಶೇಷ ಹಣ್ಣುಗಳನ್ನು ಬೆಳೆಯುತ್ತಿರುವ ಮಾದರಿ ಕೃಷಿಕ ಅನಿಲ್ ಬಳಂಜ. ಓದಿನಲ್ಲಿ ಚುರುಕಾಗಿದ್ದಾರೂ, ಪಿಯುಸಿ ಮುಗಿದ ಕೂಡಲೇ ಅನಿಲ್ ಬಳಂಜ ಮನೆ ಕೃಷಿಯತ್ತ ವಾಲಿತ್ತು. ಕೃಷಿ ಕುಟುಂಬದ ಹಿನ್ನಲೆಯುಳ್ಳ ಅನಿಲ್ ಬಳಂಜರ 30 ಎಕರೆ ಜಾಗದ ತೋಟ ಈಗ ಸಂಪೂರ್ಣವಾಗಿ ಹಸಿರಿನಿಂದ ನಳನಳಿಸುತ್ತಿದೆ. ಮೂವತ್ತು ಎಕರೆಯಲ್ಲಿ ವಾಣಿಜ್ಯ ಬೆಳೆಯಾಗಿ 1,500 ರಬ್ಬರ್, 4000 ಅಡಿಕೆ ಬೆಳೆಯನ್ನು ಅನಿಲ್ ಬಳಂಜ ಬೆಳೆದಿದ್ದಾರೆ. ಇದರ ಜೊತೆಗೆ ತೆಂಗು, ಕಾಳುಮೆಣಸು, ಬಾಳೆ ಕೃಷಿಯನ್ನೂ ಮಾಡುತ್ತಿದ್ದಾರೆ. ಇನ್ನು ಇದೆಲ್ಲಕ್ಕಿಂತ ಮುಖ್ಯವಾಗಿ ಅನಿಲ್ ಯಾರೂ ಊಹಿಸದ ರೀತಿ 30ಕ್ಕೂ ಹೆಚ್ಚು ದೇಶದ ಸುಮಾರು 700 ಹಣ್ಣಿನ ಗಿಡವನ್ನು ತಮ್ಮ ಭೂಮಿಯಲ್ಲಿ ಬೆಳೆದಿದ್ದಾರೆ.

 ಗಿಡ ಬೆಳೆಸುವುದನ್ನು ಹವ್ಯಾಸವಾಗಿ ಆರಂಭಿಸಿದ ಅನಿಲ್

ಗಿಡ ಬೆಳೆಸುವುದನ್ನು ಹವ್ಯಾಸವಾಗಿ ಆರಂಭಿಸಿದ ಅನಿಲ್

ವಿದೇಶಿ ಹಣ್ಣುಗಳ ಗಿಡ ಬೆಳೆಸುವುದನ್ನು ಹವ್ಯಾಸವಾಗಿ ಆರಂಭಿಸಿದ ಅನಿಲ್, ಮೊದಮೊದಲು ವಿದೇಶದಿಂದ ಗಿಡಗಳ ಬೀಜವನ್ನು ತರಿಸಿಕೊಳ್ಳುತ್ತಿದ್ದರು. ಆದರೆ ಈ ವಿಧಾನ ದುಬಾರಿಯಾದ ಹಿನ್ನಲೆಯಲ್ಲಿ ತಾವೇ ವಿದೇಶಿ ಹಣ್ಣುಗಳ ಗಿಡವನ್ನು ತಯಾರು ಮಾಡಿದರು. ಹೀಗೆ ಆರಂಭವಾದ ವಿದೇಶಿ ಹಣ್ಣುಗಳ ಕೃಷಿ ಕಾರ್ಯ ಈಗ ದೊಡ್ಡ ಮಟ್ಟದಲ್ಲಿ ಬೆಳೆದು ನಿಂತಿದೆ. ಬಳಂಜದ ಸಣ್ಣ ಹಳ್ಳಿಯಿಂದಲೇ ವಿದೇಶಿ ಹಣ್ಣುಗಳ ಗಿಡಗಳು ಕೇರಳ, ತಿರುವನಂತಪುರ ಸೇರಿದಂತೆ ಹಲವು ರಾಜ್ಯಗಳಿಗೆ ರವಾನೆಯಾಗುತ್ತಿದೆ.
ಪ್ರಾರಂಭದಲ್ಲಿ ಅನಿಲ್ ಫೇಸ್‌ಬುಕ್‌ನಲ್ಲಿ ಬೇರೆ ದೇಶದ ರೈತರನ್ನು ಸಂಪರ್ಕಿಸಿದರು. ಅವರಿಂದ ಮಾಹಿತಿ ಪಡೆದರು. ಕೆಲವು ಹಣ್ಣಿನ ಬೀಜವನ್ನು ತರಿಸಿಕೊಂಡು ಹಾಕಿದರೆ, ಇನ್ನು ಕೆಲವು ಗಿಡವನ್ನು ತಂದು ಕಸಿ ಮಾಡಿದರು. ವಿದೇಶದ ಕೃಷಿ ಮೇಳಗಳಲ್ಲಿ ಪಾಲ್ಗೊಂಡರು. ಅಲ್ಲಿನ ರೈತರನ್ನು ಭೇಟಿ ಮಾಡಿದರು. ಸದ್ಯ ಇವರ ತೋಟದಲ್ಲಿ ಸುಮಾರು 30 ದೇಶದ 700 ಬಗೆಯ ಹಣ್ಣುಗಳ ಗಿಡಗಳಿವೆ.

 ದೇಶೀ ಹಣ್ಣುಗಳನ್ನಾಗಿ ಮಾರ್ಪಡಿಸಿದ್ದಾರೆ

ದೇಶೀ ಹಣ್ಣುಗಳನ್ನಾಗಿ ಮಾರ್ಪಡಿಸಿದ್ದಾರೆ

ಅದರಲ್ಲಿ 180 ಬಗೆಯ ಹಣ್ಣುಗಳು ಈಗಾಗಲೇ ಫಲ ಕೊಟ್ಟಿವೆ. ಬರ್ಮಾ, ಇಂಡೋನೇಷ್ಯಾ, ಶ್ರೀಲಂಕಾ, ಬ್ರೆಜಿಲ್, ಜಮೈಕಾ, ಹವಾಯಿ ದೇಶಗಳಲ್ಲಿ ಬೆಳೆಯುವ ಹಣ್ಣುಗಳನ್ನು ಇಲ್ಲೂ ಬೆಳೆಯಬಹುದು ಎಂದು ತೋರಿಸಿ ಕೊಟ್ಟಿದ್ದಾರೆ.
ಆಸ್ಟ್ರೇಲಿಯಾದ ಸೆಡರ್ ಬಯ ಚೆರ್ರಿ, ಬೊಲಿವಿಯಾದ ಅಚಾಚಾ, ಶ್ರೀಲಂಕಾದ ನಮ್ ನಮ್ ಹಣ್ಣು, ಬರ್ಮಾದ ಮರ ದ್ರಾಕ್ಷಿ, ಜಮೈಕಾದ ಕೈಮಿತೋ, ಇಂಡೋನೇಷ್ಯಾದ ಮಕೊತಾದೇವ, ಬ್ರೆಜಿಲ್‌ನ ಬಾಕುಪಾರಿ, ರೊಲಿನಿಯಾ ಮುಕೊಸಾ, ರಷ್ಯನ್ ಪಪಿನೊ, ಗ್ಯಾಕ್, ಮೆಕ್ಸಿಕನ್ ಸಪೋಟಾ, ಜಬೋಟಿಕಾ, ಜ್ಯಾಮ್ ಫ್ರೂಟ್, ಮಲೇಷ್ಯನ್ ವಾಟರ್‌ಮೆಲನ್ ಹೀಗೆ ಕಂಡು ಕೇಳರಿಯದ ಹಣ್ಣುಗಳನ್ನು ಬೆಳೆದಿದ್ದಾರೆ. ವಿದೇಶಿ ಹಣ್ಣುಗಳ ಗಿಡಗಳನ್ನು ತಮ್ಮ ನರ್ಸರಿಯಲ್ಲಿ ಅಭಿವೃದ್ಧಿಪಡಿಸಿ ತಿರುವನಂತಪುರಂ, ಮುಂಬೈ ಹೀಗೆ ಅನೇಕರಿಗೆ ಕೊಟ್ಟಿದ್ದಾರೆ. ಆ ಮೂಲಕ ವಿದೇಶಿ ಹಣ್ಣುಗಳನ್ನು ದೇಶೀ ಹಣ್ಣುಗಳನ್ನಾಗಿ ಮಾರ್ಪಡಿಸಿದ್ದಾರೆ.

 10 ಸಾವಿರ ರೂ. ಬೆಲೆ ಬಾಳುವ ಗಿಡಗಳು

10 ಸಾವಿರ ರೂ. ಬೆಲೆ ಬಾಳುವ ಗಿಡಗಳು

ಇನ್ನು ಇವರು ವಿದೇಶಗಳಿಂದ ಈ ಹಣ್ಣಿನ ಗಿಡಗಳನ್ನು ತರುವುದಕ್ಕೂ ಸವಾಲುಗಳಿವೆ. ಯಾಕಂದರೆ ವಿದೇಶದಿಂದ ಗಿಡ, ಬೀಜಗಳನ್ನು ತರುವುದಾದರೂ ಬೀಜಗಳಿಗೂ ಕ್ವಾರಂಟೈನ್ ನಿಯಮವಿದೆ, ಕಾನೂನು ಪ್ರಕ್ರಿಯೆಗಳು ಸಹ ಇದೆ. ಹೀಗಾಗಿ ಇದೆಲ್ಲದಕ್ಕೂ ಒಂದಷ್ಟು ಖರ್ಚು ವೆಚ್ಚ ತಗುಲುವುದರಿಂದ ತಂದ ಬೀಜ ಅಥವಾ ಗಿಡವನ್ನು ಮದರ್ ಪ್ಲ್ಯಾಂಟ್ ಆಗಿ ಬೆಳೆಸಲಾಗುತ್ತೆ. ಇವರ ನರ್ಸರಿಯಲ್ಲಿ ಈಗ 20 ರೂಪಾಯಿಯಿಂದ ಶುರುವಾಗಿ 10 ಸಾವಿರ ರೂ. ಬೆಲೆ ಬಾಳುವ ಗಿಡಗಳು ಸಹ ಇದೆ.

 ಫಲ ನೀಡಲು 8 ರಿಂದ 15 ವರ್ಷ

ಫಲ ನೀಡಲು 8 ರಿಂದ 15 ವರ್ಷ

ಇನ್ನು ಪ್ರಮುಖವಾಗಿ ಇಲ್ಲಿ ಉಷ್ಣವಲಯದ ಹಣ್ಣಿನ ಗಿಡಗಳನಷ್ಟೇ ಬೆಳೆಯಲು ಸಾಧ್ಯ. ಇದಕ್ಕಾಗಿ ಮಲೇಷಿಯಾ, ಥೈಲ್ಯಾಂಡ್, ಕಂಬೋಡಿಯಾ, ವಿಯೆಟ್ನಾಂ, ಬ್ರೆಜಿಲ್ ಸೇರಿದಂತೆ ಉಷ್ಣವಲಯದ ಪ್ರದೇಶಗಳಿಂದಲೇ ಹೆಚ್ಚಿನ ಗಿಡಗಳನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಈಗಾಗಲೇ ಇವರು ನೆಟ್ಟ ಶೇಕಡಾ 40ರಷ್ಟು ಗಿಡಗಳು ಫಲಕೊಟ್ಟಿವೆ. ಕೆಲವು ಗಿಡಗಳು ಫಲ ನೀಡಲು 8 ರಿಂದ 15 ವರ್ಷ ಬೇಕಾಗುತ್ತದೆ. ಹಣ್ಣಿನ ಗಿಡ ಬೆಳೆಯುವುದು ಒಂದು ತಾಳ್ಮೆಯ ಕೆಲಸವೆಂಬುದು ಅನಿಲ್ ಅವರ ಅಭಿಪ್ರಾಯ.
ಇವರ ತೋಟದಲ್ಲಿ ಮೊದಲ ವಿದೇಶಿ ಹಣ್ಣು ಬೆಳೆದದ್ದು ಬ್ರೆಜಿಲ್‌ನ ರೋಲಿನಾ ಡೆಲಿಸಿಯೋಸಾ. ಇದು ಸೀತಾಫಲ ಜಾತಿಗೆ ಸೇರಿದ ಹಣ್ಣು. ಇನ್ನು ಇತ್ತೀಚೆಗೆ ಇವರ ತೋಟದಲ್ಲಿ ಫಲ ನೀಡಿದ್ದು ಇಂಡೋನೇಷಿಯಾದ ಬ್ಲೂಜಾವಾ ಬನಾನ. ಈ ಹಣ್ಣಿನ ಹೊರಮೈ ನೀಲಿ ಬಣ್ಣಕ್ಕಿರುತ್ತದೆ. ಚೆನ್ನಾಗಿ ಮಾಗಿದ ಈ ಹಣ್ಣಿನ ತಿರುಳು ಐಸ್‌ಕ್ರೀಂನಂತೆ ಮೆದುವಾಗಿರುತ್ತದೆ. ಈ ಸಸ್ಯದ ಟಿಷ್ಯೂ ಕಲ್ಚರ್ ತರಿಸಿಕೊಳ್ಳಲು 21,000 ರೂ. ವೆಚ್ಚ ಮಾಡಿದ್ದಾರೆ.

 ಕೃಷಿ ಮಾಡಲು ಸವಾಲುಗಳೇ ಸಾಧನ

ಕೃಷಿ ಮಾಡಲು ಸವಾಲುಗಳೇ ಸಾಧನ

ಅನಿಲ್ ಅವರ ಬಳಂಜ ಫಾರ್ಮಿಗೆ ನಿತ್ಯ ಕೃಷಿ ಆಸಕ್ತರು, ಅಧ್ಯಯನಕ್ಕಾಗಿ ವಿದ್ಯಾರ್ಥಿಗಳ ತಂಡ ಬರುತ್ತಿರುತ್ತದೆ. ಹೀಗಾಗಿ ಆರು ಎಕರೆಯನ್ನು ಮೀಸಲಿಟ್ಟು ಹೊಸತೊಂದು ಮ್ಯೂಸಿಯಂ ಥರದ ವಿದೇಶಿ ಹಣ್ಣುಗಳ ಫಾರ್ಮ್ ರೂಪಿಸುತ್ತಿದ್ದಾರೆ. ಅದರಲ್ಲಿ ಎಲ್ಲಾ ಥರದ ಹಣ್ಣಿನ ಗಿಡ ಬೆಳೆಸುತ್ತಿದ್ದು, ಆಸಕ್ತಿ ಇರುವ ಎಲ್ಲರಿಗೂ ತಮ್ಮ ಕೃಷಿಯ ಬಗೆಗಿನ ಪ್ರತಿಯೊಂದು ಮಾಹಿತಿ ನೀಡುವ ನಿರ್ಧಾರ ಮಾಡಿದ್ದಾರೆ.
ಒಟ್ಟಿನಲ್ಲಿ ಕೃಷಿ ಮಾಡಲು ಸವಾಲುಗಳೇ ಸಾಧನ ಅನ್ನುವುದನ್ನು ಅನಿಲ್ ನಿರೂಪಿಸಿದ್ದಾರೆ. ಸಣ್ಣ ಕುಗ್ರಾಮದ ಮಣ್ಣು ಮೂವತ್ತು ದೇಶದ ನೂರಾರು ಹಣ್ಣುಗಳಿಗೂ ಜೀವ ನೀಡುತ್ತದೆ ಅನ್ನೋದೇ ವಿಶೇಷವಾಗಿದೆ. ಅನಿಲ್ ಅವರ ಈ ಹವ್ಯಾಸ ಸಂಶೋಧನೆಗೆ ಮತ್ತು ಹೊಸ ಹೊಸ ತಳಿಗಳನ್ನು ದೇಶದ ಕೃಷಿ ಪರಿಸರಕ್ಕೆ ಒಗ್ಗಿಸಿಕೊಳ್ಳುವ ಒಂದು ಜಾಣ ನಡೆ ಎಲ್ಲರೂ ಮೆಚ್ಚುವಂತದ್ದು.

English summary
Farmer Anil Balanja of Belthangady taluk in Dakshina Kannada district grow over 700 varieties of tropical fruits that are popular in 30 Countries.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X