ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರುಚಿಕರ ಮಡಹಾಗಲಕಾಯಿ ಕಾಡಿನಿಂದ ನಾಡಿಗೆ ಬಂತು...

|
Google Oneindia Kannada News

ಇವತ್ತಿಗೂ ಮಲೆನಾಡಿನ ಕಾಡುಗಳಲ್ಲಿ, ಅದರಲ್ಲೂ ಕೊಡಗಿನಲ್ಲಿ ತುಸು ಹೆಚ್ಚಾಗಿಯೇ ಕಂಡು ಬರುವ ಜನರ ಅಚ್ಚುಮೆಚ್ಚಿನ ಕಾಡು ತರಕಾರಿಯೂ ಆಗಿರುವ ಮಡಹಾಗಲ ಈಗ ಕಾಡಿನಿಂದ ನಾಡಿಗೆ ಬಂದಿದ್ದು, ಇದನ್ನು ತರಕಾರಿಯಾಗಿ ಬೆಳೆಯುವ ಪ್ರಯತ್ನವೂ ನಡೆಯುತ್ತಿದೆ.

ಒಂದು ಕಾಲದಲ್ಲಿ ಕೊಡಗಿನ ಕಾಡುಗಳಲ್ಲಿ ಮಡಹಾಗಲ ಹೇರಳವಾಗಿ ಬೆಳೆಯುತ್ತಿತ್ತು. ಇದಕ್ಕೆ ಪಾವಕ್ಕ, ಕಾಡುಪೀರೆ ಎಂದೆಲ್ಲ ಹೆಸರಿದೆ. ಪಾಂಡವರು ವನವಾಸದಲ್ಲಿದ್ದಾಗ ಇದನ್ನು ಬಳಸಿದ್ದರೆಂದು ಕೆಲವರು ಪಾಂಡವರ ಹಾಗಲ ಎಂದು ಕೂಡ ಕರೆಯುತ್ತಾರೆ. ಹಾಗಲಕಾಯಿ ಜಾತಿಗೆ ಸೇರಿದ ಇದು ಕಹಿಗುಣ ಹೊಂದಿಲ್ಲ. ಆಂಗ್ಲಭಾಷೆಯಲ್ಲಿ ಸ್ಪೈನ್ ‌ಗಾರ್ಡ್ ಎಂದು ಕರೆಯಲಾಗುತ್ತಿದೆ. ಸಾರು ಮಾಡಲು ಏನೂ ತರಕಾರಿ ಸಿಗಲಿಲ್ಲ ಎಂದಾದರೆ ಕಾಡಿಗೆ ಹೋಗಿ ಹುಡುಕಾಡಿ ಮಡಹಾಗಲವನ್ನು ತರುತ್ತಿದ್ದ ಕಾಲವೂ ಇತ್ತು. ಆದರೆ ವರ್ಷದಿಂದ ವರ್ಷಕ್ಕೆ ಅರಣ್ಯಗಳು ನಾಶವಾದ ಬಳಿಕ ಈಗ ಮಡಹಾಗಲ ಕಾಣಸಿಗುವುದೇ ಅಪರೂಪವಾಗಿದೆ. ಮುಂದೆ ಓದಿ...

 ಮಡಹಾಗಲಕ್ಕೆ ಯಾವಾಗಲೂ ಬೇಡಿಕೆ

ಮಡಹಾಗಲಕ್ಕೆ ಯಾವಾಗಲೂ ಬೇಡಿಕೆ

ಕಾಡಿನಲ್ಲಿ ಹುಟ್ಟಿ ಬೆಳೆದು ಕಾಯಿಬಿಟ್ಟು ಪ್ರಾಣಿ ಪಕ್ಷಿಗಳಿಗೆ ಆಹಾರವಾಗುವ ಮಡಹಾಗಲವನ್ನು ಈಗಲೂ ಕೆಲವರು ಕಾಡಿನಿಂದ ಹುಡುಕಿ ತಂದು ಪೇಟೆಗಳಲ್ಲಿ ಮಾರಾಟ ಮಾಡುತ್ತಾರೆ. ಇದರ ರುಚಿಗೆ ಮಾರು ಹೋದ ಜನ ದುಬಾರಿ ಬೆಲೆ ನೀಡಿ ಖರೀದಿಸಿ ವಿವಿಧ ಖಾದ್ಯಗಳನ್ನು ತಯಾರಿಸಿ ಸೇವಿಸುತ್ತಾರೆ. ಹೀಗಾಗಿ ಮಾರುಕಟ್ಟೆಯಲ್ಲಿ ಇದಕ್ಕೆ ಸದಾ ಬೇಡಿಕೆ ಇದ್ದೇ ಇರುತ್ತದೆ. ಇಷ್ಟಕ್ಕೂ ಕಾಡಿನಿಂದ ನಾಡಿಗೆ ತಂದು ಬೆಳೆಯುವ ಪ್ರಯತ್ನ ಇದುವರೆಗೆ ಯಾರೂ ಮಾಡಿದ್ದಿಲ್ಲ. ಇದು ನೈಸರ್ಗಿಕವಾಗಿ ಬೆಳೆಯುವುದರಿಂದ ಅದರ ಬಗ್ಗೆ ಯಾರೂ ತಲೆ ಕೆಡಿಸಿಕೊಂಡಿಲ್ಲ.

ಒಂದು ಎಕರೆಯಲ್ಲಿ ಕೃಷಿ ಬ್ರಹ್ಮಾಂಡಒಂದು ಎಕರೆಯಲ್ಲಿ ಕೃಷಿ ಬ್ರಹ್ಮಾಂಡ

 ಮೂಢನಂಬಿಕೆಯಿಂದ ನಾಡಿಗೆ ಬರಲಿಲ್ಲ

ಮೂಢನಂಬಿಕೆಯಿಂದ ನಾಡಿಗೆ ಬರಲಿಲ್ಲ

ಇದನ್ನು ನೆಟ್ಟು ಬೆಳೆಸಲು ಹಿಂದಿನವರು ಹಿಂದೇಟು ಹಾಕುತ್ತಿದ್ದರು. ಇದಕ್ಕೆ ಮೂಢನಂಬಿಕೆಯೇ ಕಾರಣವಾಗಿತ್ತು. ಅದೇನೆಂದರೆ, ಮಡಹಾಗಲ ಬಳ್ಳಿಯಾಗಿ ಹರಡಿ ಬೆಳೆಯುತ್ತದೆ. ಇದರ ಬೆಳವಣಿಗೆಗೆ ನೆಲದಲ್ಲಿರುವ ಅದರ ಗೆಡ್ಡೆ ಕಾರಣವಾಗಿದೆ. ಈ ಗೆಡ್ಡೆ ನೆಲದಲ್ಲಿ ಬೆಳೆಯುತ್ತಾ ಹೋಗುತ್ತದೆ. ಅದು ದಪ್ಪವಾಗಿ ಗಿಡ ನೆಟ್ಟವನ ತಲೆಯಷ್ಟು ಗಾತ್ರವಾದರೆ, ಆತ ಸಾಯುತ್ತಾನಂತೆ. ಇಂತಹ ಮಾತುಗಳು ಅವತ್ತು ಪ್ರಚಲಿತದಲ್ಲಿತ್ತು. ಹೀಗಾಗಿ ಆಗಿನ ಕಾಲದಲ್ಲಿ ಇದನ್ನು ಬೆಳೆಯುವ ಪ್ರಯತ್ನ ಮಾಡಿರಲಿಲ್ಲ. ಆದರೆ ಅದು ಮೂಢನಂಬಿಕೆಯ ಪರಮಾವಧಿ ಎಂಬುದನ್ನು ತಿಳಿದ ಕೆಲವರು ತಲೆಗೆ ಬುಟ್ಟಿ ಹಾಕಿಕೊಂಡು ನೆಡುತ್ತಿದ್ದರಂತೆ. ಹಾಗೆ ಏಕೆ ಮಾಡುತ್ತಿದ್ದರೆಂದರೆ ಬುಟ್ಟಿಯಷ್ಟು ದೊಡ್ಡದಾಗಿ ಮಡಹಾಗಲದ ಗೆಡ್ಡೆ ಬೆಳೆಯಲ್ಲ. ಹೀಗಾಗಿ ತಮಗೇನು ಆಗಲ್ಲ ಎಂಬುದು ಅವರ ನಂಬಿಕೆಯಾಗಿತ್ತು.

 ಮೂಲವ್ಯಾಧಿ, ಮಧುಮೇಹಕ್ಕೆ ರಾಮಬಾಣ

ಮೂಲವ್ಯಾಧಿ, ಮಧುಮೇಹಕ್ಕೆ ರಾಮಬಾಣ

ಇದರ ವಂಶಾಭಿವೃದ್ಧಿಯನ್ನು ಗೆಡ್ಡೆ ಮತ್ತು ಬೀಜದಿಂದ ಮಾಡಬಹುದಾಗಿದೆ. ಕಾಡಿನಲ್ಲಾದರೆ ಅದು ಅಲ್ಲಲ್ಲಿ ಬಿದ್ದು ಅದರ ಪಾಡಿಗೆ ಬೆಳೆಯುತ್ತದೆ. ಹಸಿರು ಬಣ್ಣದ ಹೂಗಳನ್ನು ಬಿಡುತ್ತದೆಯಲ್ಲದೆ, ಕಾಯಿ ಹಸಿರು ಬಣ್ಣವನ್ನು ಹೊಂದಿದ್ದು, ಮೇಲ್ಮೈ ಮುಳ್ಳಿನಂತೆ ಕಾಣುತ್ತದೆ. ಹಣ್ಣಾದರೆ ಹಳದಿ ಬಣ್ಣಕ್ಕೆ ತಿರುಗುತ್ತದೆ. ಸಾಮಾನ್ಯವಾಗಿ ಬೇಸಿಗೆಯಲ್ಲಿ ಬಳ್ಳಿ ಒಣಗಿ ಗೆಡ್ಡೆ ಮಣ್ಣಿನಡಿಯಲ್ಲಿ ಸುಪ್ತಾವಸ್ಥೆಯಲ್ಲಿರುತ್ತದೆ. ಮಳೆ ಬೀಳುತ್ತಿದ್ದಂತೆಯೇ ಚಿಗುರಿ ಮರಗಳನ್ನು ಆಸರೆಯನ್ನಾಗಿಸಿಕೊಂಡು ಹಬ್ಬಿ ಬೆಳೆಯುತ್ತದೆ. ಬಳಿಕ ಹೂ ಬಿಟ್ಟು ಕಾಯಿಯಾಗುತ್ತದೆ. ಈ ಕಾಯಿಯನ್ನು ಮನುಷ್ಯರು ನೋಡಿ ಅದನ್ನು ಕೀಳದಿದ್ದರೆ, ಅದನ್ನು ಕಾಡು ಹಂದಿ, ಪಕ್ಷಿಗಳು ತಿಂದು ಹಾಕುತ್ತವೆ. ಕಾಡುಹಂದಿಗಳು ಗೆಡ್ಡೆ ಸಹಿತ ತಿನ್ನುವುದರಿಂದ ಇದರ ಸಂತತಿ ಕಾಡಿನಲ್ಲಿಯೂ ನಾಶವಾಗುತ್ತಿದೆ. ಮಡಹಾಗಲದಲ್ಲಿ ಔಷಧೀಯ ಗುಣಗಳಿದ್ದು, ವಿಟಮಿನ್ ‌ನ ಆಗರವಾಗಿದೆ. ಮೂಲವ್ಯಾಧಿ ಮತ್ತು ಮಧುಮೇಹಕ್ಕೆ ರಾಮಬಾಣವಾಗಿದೆ.

ಹವಾಮಾನ ಬದಲಾವಣೆ; ಆಲೂಗಡ್ಡೆ ಬೆಳೆಯ ರಕ್ಷಣೆ ಹೇಗೆ?ಹವಾಮಾನ ಬದಲಾವಣೆ; ಆಲೂಗಡ್ಡೆ ಬೆಳೆಯ ರಕ್ಷಣೆ ಹೇಗೆ?

 ಚೆಟ್ಟಳ್ಳಿ ತೋಟಗಾರಿಕಾ ಕೇಂದ್ರದಲ್ಲಿ ವಂಶಾಭಿವೃದ್ಧಿ

ಚೆಟ್ಟಳ್ಳಿ ತೋಟಗಾರಿಕಾ ಕೇಂದ್ರದಲ್ಲಿ ವಂಶಾಭಿವೃದ್ಧಿ

ಕಾಡಿನಲ್ಲಿ ಬೆಳೆಯುವ ಮಡಹಾಗಲವನ್ನು ತಂದು ಕೃಷಿ ಮಾಡುವುದು ಕಷ್ಟ. ಆದರೆ ಇಂತಹದ್ದೇ ತಳಿಯನ್ನು ಅಸ್ಸಾಂನಿಂದ ತಂದು ಕೊಡಗಿನಲ್ಲಿ ಬೆಳೆಸುವ ಪ್ರಯತ್ನವನ್ನು ಚೆಟ್ಟಳ್ಳಿಯ ಕೇಂದ್ರೀಯ ತೋಟಗಾರಿಕಾ ಪ್ರಾಯೋಗಿಕ ಕೇಂದ್ರ ಮಾಡಿದ್ದು, ಇದರಲ್ಲಿ ಯಶಸ್ವಿಯೂ ಆಗಿದೆ. ಕೊಡಗಿನ ಮಂದಿ ಮಡಹಾಗಲವನ್ನು ಹೆಚ್ಚು ಇಷ್ಟಪಡುವುದನ್ನು ಅರಿತ ಚೆಟ್ಟಳ್ಳಿ ಕೇಂದ್ರೀಯ ತೋಟಗಾರಿಕಾ ಕೇಂದ್ರದ ಮೇಲ್ವಿಚಾರಕರಾದ ಡಾ. ಭಾರತಿ ಅವರು 2008ರಲ್ಲಿ ಕೊಡಗಿನಲ್ಲಿ ಏಕೆ ಕೃಷಿ ಮಾಡಬಾರದು? ಎಂದು ಆಲೋಚಿಸಿ ಅಸ್ಸಾಂನಲ್ಲಿ ಬೆಳೆಯುತ್ತಿದ್ದ ತಳಿಯನ್ನು ತಂದು ಕೊಡಗಿನ ವಾತಾವರಣದಲ್ಲಿ ಬೆಳೆಯುತ್ತದೆಯಾ ಎಂದು ಪರೀಕ್ಷಿಸುವ ಸಲುವಾಗಿ ಚಿಕ್ಕದಾದ ಸ್ಥಳದಲ್ಲಿ ನೆಟ್ಟರು. ಅದು ಇಲ್ಲಿನ ಹವಾಗುಣಕ್ಕೆ ಹೊಂದಿ ಬೆಳೆಯಲು ಆರಂಭಿಸಿತು. ಇದರಿಂದ ಖುಷಿಗೊಂಡ ಅವರು ಇದರ ವಂಶಾಭಿವೃದ್ಧಿ ಮಾಡಿ ಇದುವರೆಗೆ ಜಿಲ್ಲೆಯಲ್ಲಿ ನಲವತ್ತು ಸಾವಿರಕ್ಕೂ ಹೆಚ್ಚು ಗಿಡಗಳನ್ನು ನೀಡಿದ್ದಾರೆ.

 ರೈತರಿಗೆ ಆದಾಯ ತರುವ ಕೃಷಿಯಾಗುತ್ತಾ?

ರೈತರಿಗೆ ಆದಾಯ ತರುವ ಕೃಷಿಯಾಗುತ್ತಾ?

ಕಾಡಿನಲ್ಲಿರುವ ಮಡಹಾಗಲಕ್ಕೂ ಅಸ್ಸಾಂನಿಂದ ತಂದು ವೃದ್ಧಿ ಮಾಡಿದ ಮಡಹಾಗಲಕ್ಕೂ ಹೆಚ್ಚು ವ್ಯತ್ಯಾಸ ಕಂಡು ಬರದಿದ್ದರೂ ಕಾಡಿನಲ್ಲಿ ಬೆಳೆಯುವ ತಳಿಯಲ್ಲಿ ಪರಾಗಸ್ಪರ್ಶಕ್ರಿಯೆ ಸ್ವಾಭಾವಿಕವಾಗಿದ್ದರೆ, ಅಸ್ಸಾಂನಿಂದ ತಂದು ವೃದ್ಧಿ ಮಾಡಿರುವ ತಳಿಯಲ್ಲಿ ಗಂಡು ಹೂವನ್ನು ಹೆಣ್ಣು ಹೂವಿಗೆ ಸ್ಪರ್ಶಿಸಿ ಕೃತಕ ಪರಾಗಸ್ಪರ್ಶ ಮಾಡಬೇಕಾದ ಅಗತ್ಯವಿದೆ. ಇನ್ನು ಅಸ್ಸಾಂ ತಳಿಯ ಕಾಯಿ ಗಾತ್ರದಲ್ಲಿ ದೊಡ್ಡದಾಗಿದ್ದು, ತೂಕವೂ ಇದೆ. ಒಟ್ಟಾರೆಯಾಗಿ ಹೇಳಬೇಕೆಂದರೆ ಮುಂದಿನ ದಿನಗಳಲ್ಲಿ ಇದನ್ನು ರೈತರು ಬೆಳೆಯುವಂತಾದರೆ ಒಂದಷ್ಟು ಆದಾಯ ಬರುವುದಲ್ಲದೆ ಇದನ್ನು ಇಷ್ಟಪಡುವವರೆಲ್ಲರಿಗೂ ಸಿಗುವಂತಾಗುವುದರಲ್ಲಿ ಎರಡು ಮಾತಿಲ್ಲ.

English summary
Efforts are being made to grow Mada hagala, a spine guard in large scale at kodagu chettalli horticulture centre
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X