• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಮಳೆಗಾಲದಲ್ಲಿ ಕರಿಮೆಣಸಿಗೆ ಕಾಡುವ ಸೊರಗು ರೋಗ; ಇಲ್ಲಿದೆ ಸಲಹೆ...

|

ಮಡಿಕೇರಿ, ಜುಲೈ 28: ಕೊಡಗಿನ ಬೆಳೆಗಾರರಿಗೆ ಆದಾಯ ತಂದುಕೊಡುವ ವಾಣಿಜ್ಯ ಬೆಳೆಗಳಲ್ಲಿ ಒಂದಾಗಿರುವ ಕರಿಮೆಣಸಿಗೆ ಮಳೆಗಾಲದಲ್ಲಿ ಸೊರಗು ರೋಗ ಬಾಧಿಸುತ್ತಿದೆ. ಪ್ರತಿವರ್ಷವೂ ರೋಗ ಬಾಧಿಸುತ್ತಿರುವುದರಿಂದ ಬಳ್ಳಿಗಳನ್ನು ರಕ್ಷಿಸಿಕೊಂಡು ಫಸಲು ಪಡೆಯುವುದು ಬೆಳೆಗಾರರಿಗೆ ಸವಾಲಾಗಿದೆ.

ವಾತಾವರಣದಲ್ಲಿ ಆಗುತ್ತಿರುವ ಏರುಪೇರುಗಳು ಒಂದೆಡೆಯಾದರೆ, ಸೊರಗು ರೋಗದ ಹಾವಳಿ ಮತ್ತೊಂದೆಡೆ. ಕರಿಮೆಣಸನ್ನು ಇಲ್ಲಿನ ಬೆಳೆಗಾರರು ಪ್ರತ್ಯೇಕವಾಗಿ ಬೆಳೆಯುತ್ತಿಲ್ಲ. ಕಾಫಿ ತೋಟದ ನಡುವೆ ಇರುವ ಮರಗಳಿಗೆ ಬಳ್ಳಿಯನ್ನು ನೆಟ್ಟು ಮಿಶ್ರ ಬೆಳೆಯಾಗಿ ಬೆಳೆಯುತ್ತಿದ್ದಾರೆ. ಹಿಂದೆ ಇದಕ್ಕೆ ಹೆಚ್ಚಿನ ರೋಗಗಳು ತಗುಲದೆ ಇದ್ದಾಗ ಇದು ಬೆಳೆಗಾರರ ಪಾಲಿಗೆ ಕಡಿಮೆ ಖರ್ಚಿನಲ್ಲಿ ಹೆಚ್ಚಿನ ಆದಾಯ ತರುವ ಬೆಳೆಯಾಗಿತ್ತು. ಆದರೆ ಈಗ ಪರಿಸ್ಥಿತಿ ಬೇರೆಯಾಗಿದೆ.

 ಬೋರಲಾಗಿ ಬಿದ್ದ ಕರಿಮೆಣಸು ಬಳ್ಳಿಗಳು

ಬೋರಲಾಗಿ ಬಿದ್ದ ಕರಿಮೆಣಸು ಬಳ್ಳಿಗಳು

ಆ ದಿನಗಳಲ್ಲಿ ಕಾಫಿ ತೋಟಗಳಲ್ಲಿರುವ ನೆರಳು ಮರದ ಬುಡಕ್ಕೆ ಬಳ್ಳಿ ನೆಟ್ಟು ಒಂದಿಷ್ಟು ಗೊಬ್ಬರ ಹಾಕಿದ್ದೇ ಆದರೆ ಶೀಘ್ರವೇ ಬೆಳೆದು ಫಸಲು ನೀಡುತ್ತಿತ್ತು. ಇದಕ್ಕೆ ರೋಗ ತಗಲುವ ಭಯವೂ ಇರಲಿಲ್ಲ. ಆದರೆ ಕಳೆದ ಎರಡು ದಶಕಗಳಲ್ಲಿ ಎಲ್ಲವೂ ಬದಲಾಗಿದೆ. ಸೊರಗು ರೋಗ ಆಗಿಂದಾಗ್ಗೆ ಕರಿಮೆಣಸಿನ ಬಳ್ಳಿಯನ್ನು ಆಹುತಿ ತೆಗೆದುಕೊಳ್ಳುತ್ತಲೇ ಸಾಗುತ್ತಿದೆ. ಈಗ ಬಹಳಷ್ಟು ಕಡೆಗಳಲ್ಲಿ ಕರಿಮೆಣಸು ಬಳ್ಳಿಗಳು ಒಣಗಿದ, ಬೋರಲಾಗಿ ಬಿದ್ದಿರುವ ದೃಶ್ಯಗಳು ಕಾಣಸಿಗುತ್ತಿವೆ. ಇದು ಸೊರಗು ರೋಗದ ಪರಿಣಾಮವಾಗಿದೆ.

ಹೆಸರು ಹಾಗೂ ಉದ್ದು ಬೆಳೆ ಸಂರಕ್ಷಣೆಗೆ ರೈತರಿಗೆ ಸಲಹೆಗಳು

ಸೊರಗು ರೋಗ ಇತ್ತೀಚೆಗಿನ ವರ್ಷಗಳಲ್ಲಿ ಶೀಘ್ರಗತಿಯಲ್ಲಿ ವ್ಯಾಪಿಸತೊಡಗಿದೆ. ಈ ರೋಗ ಮೊದಲಿಗೆ ಕೇರಳದ ವೈನಾಡಿನಲ್ಲಿ 1920ರಲ್ಲಿ ಕಾಣಿಸಿಕೊಂಡಿತು ಎನ್ನಲಾಗಿದೆ. ಆದರೆ ಅದು ಕರ್ನಾಟಕದಲ್ಲಿ ನಿಧಾನಗತಿಯಲ್ಲಿಯೇ ಹರಡಿದೆ. ಮೊದಲಿಗೆ ಅಲ್ಲೊಂದು ಇಲ್ಲೊಂದು ಬಳ್ಳಿಗಳು ಸಾವನ್ನಪ್ಪುತ್ತಿದ್ದಾಗ ಬೆಳೆಗಾರರು ಕೂಡ ತಲೆಕೆಡಿಸಿಕೊಂಡಿರಲಿಲ್ಲ. ಆದರೆ 1991ರ ನಂತರ ಕರ್ನಾಟಕದಲ್ಲಿ ತೀವ್ರಗತಿಯಲ್ಲಿ ಹರಡಿದ್ದು, ಇಲ್ಲಿಯವರೆಗೂ ರೋಗವನ್ನು ತಡೆಗಟ್ಟಲು ಸಾಧ್ಯವಾಗಿಲ್ಲ. ಹಾಗಾಗಿ ಪ್ರತಿವರ್ಷವೂ ಸೊರಗು ರೋಗ ಕರಿಮೆಣಸು ಬಳ್ಳಿ ಬಲಿಯಾಗುತ್ತಲೇ ಇವೆ.

 ಬೇರಿಗೆ ಅಕ್ರಮಣ ಮಾಡುವ ಶಿಲೀಂಧ್ರ

ಬೇರಿಗೆ ಅಕ್ರಮಣ ಮಾಡುವ ಶಿಲೀಂಧ್ರ

ಸೊರಗು ರೋಗವು ಫೈಟೋಫೋರಾ ಕ್ಯಾಪ್ಸಿಸಿ ಎಂಬ ಶಿಲೀಂಧ್ರದಿಂದ ಬರುತ್ತದೆ. ಈ ಶಿಲೀಂಧ್ರವು ಮೊದಲು ಬಳ್ಳಿಯ ಬೇರಿಗೆ ಆಕ್ರಮಣ ಮಾಡುತ್ತದೆ. ಇದರಿಂದ ನೀರು, ಆಹಾರಗಳ ಚಲನೆಗೆ ಅಡ್ಡಿಯಾಗಿ ಬೇರು ಸಾಯುತ್ತದೆ. ನಂತರ ಬಳ್ಳಿ ಎಲೆಗಳನ್ನು ಆಕ್ರಮಿಸುತ್ತದೆ. ಮುಖ್ಯವಾಗಿ ಸೊರಗು ರೋಗವು ಮಳೆಗಾಲದಲ್ಲಿ ಹರಡುತ್ತದೆ. ಏಕೆಂದರೆ ಮಳೆಗಾಲದಲ್ಲಿ ಮಳೆಹನಿ ಬಿದ್ದು ಚಿಮ್ಮುವಾಗ ಬಳ್ಳಿ ಹಾಗೂ ಎಲೆಗಳಲ್ಲಿರುವ ಶಿಲೀಂಧ್ರದ ಬೀಜಾಣುಗಳು ಸುಲಭವಾಗಿ ಒಂದು ಗಿಡದಿಂದ ಮತ್ತೊಂದು ಗಿಡಕ್ಕೆ ಹರಡುತ್ತವೆ. ಇನ್ನು 'ಮೆಲೋಯ್ಡೋಗೈನ್ ಇಂಕಾಗ್ನಿಟ' ಎಂಬ ಜಂತು ಹುಳದಿಂದಲೂ ಸೊರಗು ರೋಗ ಹರಡುತ್ತದೆ ಎಂದು ಹೇಳಲಾಗುತ್ತಿದೆ.

ಸೊರಗು ರೋಗದಲ್ಲಿ ಎರಡು ವಿಧವಿದೆ. ಒಂದು ಶೀಘ್ರಗತಿಯಲ್ಲಿ ಹರಡಿದರೆ, ಮತ್ತೊಂದು ನಿಧಾನಗತಿಯ ಸೊರಗುರೋಗ. ನಿಧಾನಗತಿಯ ಸೊರಗು ರೋಗಕ್ಕೆ ತುತ್ತಾದ ಬಳ್ಳಿಯ ಶಾಖೆ, ಬೇರುಗಳಿಗೆ ಶಿಲೀಂಧ್ರಗಳು ದಾಳಿ ಮಾಡುವುದರಿಂದ ಬೇರು ಸಾಯುತ್ತದೆ. ನೀರು, ಗೊಬ್ಬರ ಬಳ್ಳಿಗೆ ದೊರೆಯದೆ ಎಲೆಗಳು ನಿಧಾನವಾಗಿ ಹಳದಿ ಬಣ್ಣಕ್ಕೆ ತಿರುಗುತ್ತವೆ. ಬಳಿಕ ಉದುರುತ್ತವೆ.

 ಸೊರಗು ರೋಗ ತಡೆಗೆ ಸಂಶೋಧನೆ

ಸೊರಗು ರೋಗ ತಡೆಗೆ ಸಂಶೋಧನೆ

ಈಗಾಗಲೇ ಸೊರಗು ರೋಗವನ್ನು ತಡೆಗಟ್ಟುವಲ್ಲಿ ಹಲವು ಸಂಶೋಧನೆ ನಡೆದಿದ್ದು, ಕೆಲವು ಸುಧಾರಿತ ತಳಿಗಳನ್ನು ಕೂಡ ಬಿಡುಗಡೆ ಮಾಡಲಾಗಿದೆ. ಈ ಹಿಂದೆಯೇ ಕಲ್ಲಿಕೋಟೆಯ ನ್ಯಾಷನಲ್ ರೀಸರ್ಚ್ ಸೆಂಟರ್ ಫಾರ್ ಸ್ಪೈಷಸ್ ಜೈವಿಕ ನಿಯಂತ್ರಣದಿಂದ ಟ್ರೈಕೋಡರ್ಮ್ ಹಾಗೂ ಗ್ಲಿಯೋಕ್ಲಾಡಿಯಂನ ಕೆಲವು ಪ್ರಭೇದಗಳನ್ನು ಉಪಯೋಗಿಸಿ ಸಂಶೋಧನೆ ನಡೆಸಿ ಒಂದಷ್ಟು ಯಶಸ್ಸು ಕಂಡಿದೆ. ಅವರ ಸಂಶೋಧನೆಯ ಪ್ರಕಾರ ರೋಗವನ್ನು ಪೂರ್ಣವಾಗಿ ತಡೆಗಟ್ಟಲು ಸಾಧ್ಯವಿಲ್ಲವಾದರೂ ಕೆಲವು ಕ್ರಮಗಳನ್ನು ಅನುಸರಿಸುವುದರಿಂದ ರೋಗವನ್ನು ಸ್ವಲ್ಪ ಮಟ್ಟಿಗೆ ನಿಯಂತ್ರಿಸಬಹುದು ಎಂಬುದನ್ನು ತೋರಿಸಿಕೊಟ್ಟಿದೆ.

ಬಿತ್ತನೆ ಬೀಜ-ಆತ್ಮ ನಿರ್ಭರ್ ಮತ್ತು ರಫ್ತು ಅವಕಾಶಗಳು...

ಕೆಲವೊಂದು ಕ್ರಮಗಳನ್ನು ಅಳವಡಿಸಿಕೊಳ್ಳುವುದರಿಂದ ರೋಗವನ್ನು ಸಂಪೂರ್ಣ ಗುಣಪಡಿಸಿ ಬಳ್ಳಿಗಳನ್ನು ರಕ್ಷಿಸಿಕೊಳ್ಳುವುದು ಅಸಾಧ್ಯವಾದರೂ ಒಂದಷ್ಟು ಕ್ರಮಗಳನ್ನು ಅಳವಡಿಸಿಕೊಂಡು ರೋಗವನ್ನು ನಿಯಂತ್ರಣ ಮಾಡಬಹುದು ಎಂಬುದು ಕೃಷಿ ತಜ್ಞರ ಅಭಿಪ್ರಾಯವಾಗಿದೆ.

 ನಿಯಂತ್ರಣಕ್ಕೆ ಹಲವು ಕ್ರಮಗಳು

ನಿಯಂತ್ರಣಕ್ಕೆ ಹಲವು ಕ್ರಮಗಳು

ತೋಟದೊಳಗೆ ಬಸಿಲು ಕಾಲುವೆ ತೋಡುವುದರ ಮೂಲಕ ಮಣ್ಣಿನ ತೇವಾಂಶ ಕಡಿಮೆಗೊಳಿಸಿ, ಭೂಮಿಯ ಮೇಲೆ ಕೊಳೆತ ಎಲೆ, ಹುಲ್ಲಿನ ಕಡ್ಡಿಯ ಪದರವಿರುವಂತೆ ಮಾಡಬೇಕು. ಬಳ್ಳಿಯ ಬುಡದಿಂದ ಚಿಗುರಿ ನೆಲದಲ್ಲಿ ಹರಡುವ ಮರಿ ಬಳ್ಳಿಗಳನ್ನು ಕತ್ತರಿಸಿ ಅಥವಾ ಮೇಲೆ ಹಬ್ಬುವಂತೆ ಮಾಡುವುದರಿಂದ ಬಳ್ಳಿಯಿಂದ ಬಳ್ಳಿಗೆ ಹರಡುವ ರೋಗವನ್ನು ತಡೆಗಟ್ಟಬಹುದಾಗಿದೆ. ತೋಟದಲ್ಲಿ ಬಿಸಿಲು ಹಾಯಲು ಸೂಕ್ತವಾಗುವಂತೆ ಮರದ ನೆರಳನ್ನು ತೆಗೆಯಬೇಕು. ರೋಗರಹಿತ ಪಾತಿಯಿಂದಲೇ ಆಯ್ದು ಆರೋಗ್ಯವಂತ ಬಳ್ಳಿಯ ತುಂಡುಗಳನ್ನು ಸಸ್ಯಾಭಿವೃದ್ಧಿಗೆ ಉಪಯೋಗಿಸಬೇಕು.

 'ಮೆಟಲಕ್ಸಿಲ್' ಶಿಲೀಂಧ್ರ ನಾಶಕ ಸಿಂಪಡಣೆ

'ಮೆಟಲಕ್ಸಿಲ್' ಶಿಲೀಂಧ್ರ ನಾಶಕ ಸಿಂಪಡಣೆ

ತೋಟದಲ್ಲಿ ರೋಗವಿದೆ ಎಂದಾದಲ್ಲಿ ನೆಡುವ ಜಾಗವನ್ನು 'ಮೆಟಲಕ್ಸಿಲ್' ಎಂಬ ಶಿಲೀಂಧ್ರ ನಾಶಕದ ಶೇ 0.3 ದ್ರಾವಣದಿಂದ ತೋಯಿಸಬೇಕು. ಮಳೆಗಾಲ ಪ್ರಾರಂಭವಾಗುವ ಮುನ್ನ ಮೇ, ಜೂನ್ ತಿಂಗಳಲ್ಲಿ ಶೇಕಡ ಒಂದರ ಬೋರ್ಡೋ ಮಿಶ್ರಣವನ್ನು ಬಳ್ಳಿಗೆ ಮೊದಲು ಸಿಂಪಡಿಸಬೇಕು. ಈ ರೀತಿಯ ಕೆಲವು ಕ್ರಮಗಳನ್ನು ಮಾಡುವುದರಿಂದ ರೋಗವನ್ನು ಸ್ವಲ್ಪ ಮಟ್ಟಿಗೆ ಹತೋಟಿಗೆ ತರಬಹುದಾಗಿದೆ.

ಇತ್ತೀಚೆಗಿನ ವರ್ಷಗಳಲ್ಲಿ ಕರಿಮೆಣಸಿನ ದರವೂ ಹೆಚ್ಚಾಗಿದ್ದು, ಬೆಳೆಗಾರರಿಗೆ ಆದಾಯ ತಂದುಕೊಡುತ್ತಿದೆ. ಆದರೆ ಸೊರಗು ರೋಗದಿಂದಾಗಿ ಬಳ್ಳಿಯನ್ನು ರಕ್ಷಿಸಿಕೊಳ್ಳುವುದೇ ಕಷ್ಟವಾಗುತ್ತಿರುವುದಂತು ಸತ್ಯ.

English summary
During the rainy season, the disease for black pepper became problematic for farmers in kodagu every year
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X