ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೃಷಿ ಬಿಕ್ಕಟ್ಟಿಗೆ ಪರಿಹಾರ ರೈತರ ಹೊಲದಲ್ಲಿಲ್ಲ, ಬದಲಿಗೆ...

|
Google Oneindia Kannada News

ಕೊರೊನಾ (ಕೋವಿಡ್-19) ಸೋಂಕಿನ ಕಾರಣ ಕಳೆದ ಒಂದೂವರೆ ತಿಂಗಳಿನಿಂದ ಲಾಕ್‌ಡೌನ್ ಆಗಿರುವ ಹಿನ್ನೆಲೆಯಲ್ಲಿ ಎಲ್ಲ ಕ್ಷೇತ್ರಗಳು ಸೊರಗಿವೆ. ಅಲ್ಪ ಸ್ವಲ್ಪ ಉಸಿರಾಡಲು ಅವಕಾಶ ಸಿಕ್ಕಿದ್ದ ಕೃಷಿ ಕ್ಷೇತ್ರದ ಮೇಲೂ ಬಹುದೊಡ್ಡ ಪೆಟ್ಟು ಬಿದ್ದಿದೆ. ಆ ಬಗ್ಗೆ ಚರ್ಚಿಸಿ ಪರಿಹಾರ ಮಾರ್ಗೋಪಾಯಗಳನ್ನು ಕಂಡುಕೊಳ್ಳಲು ಮೇ 7 ರಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ರೈತ ಸಂಘಟನೆಗಳ ಮುಖಂಡರುಗಳ ಸಭೆ ಕರೆದಿದ್ದರು. ಅನೇಕ ಕೃಷಿ ಚಿಂತಕರು, ರೈತ ಮುಖಂಡರು ಮುಖ್ಯಮಂತ್ರಿಗಳ ಸಭೆಯಲ್ಲಿ ಭಾಗವಹಿಸಲು ಸಾಧ್ಯವಾಗಿಲ್ಲ. ಅವರೆಲ್ಲರನ್ನು ಒನ್ಇಂಡಿಯಾ ಸಂಪರ್ಕಿಸಿ ಅವರ ಸಲಹೆ ಸೂಚನೆಗಳ ಸರಣಿಯನ್ನು ಪ್ರಕಟಿಸಿತ್ತು. ಈ ಸರಣಿಯಲ್ಲಿ ಹಲವು ರೈತ ಮುಖಂಡರು, ತಜ್ಞರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದರು.

ಈ ಸರಣಿಯ ಕಡೆಯ ಕಂತನ್ನು ಆಹಾರ ಮತ್ತು ಕೃಷಿ ನೀತಿಗಳ ಅಂತಾರಾಷ್ಟ್ರೀಯ ತಜ್ಞರಾದ ಡಾ.ದೇವಿಂದರ್ ಶರ್ಮಾ ಅವರ ಸಂದರ್ಶನದೊಂದಿಗೆ ಮುಗಿಸುತ್ತಿದ್ದೇವೆ. ಡಾ.ದೇವಿಂದರ್ ಶರ್ಮಾ ಅವರೊಂದಿಗಿನ ಮಾತುಕತೆ ಇಲ್ಲಿದೆ...

 ಡಾ. ದೇವಿಂದರ್ ಶರ್ಮಾ ಮಾತು ಅವರೊಂದಿಗೆ ಮಾತುಕತೆ

ಡಾ. ದೇವಿಂದರ್ ಶರ್ಮಾ ಮಾತು ಅವರೊಂದಿಗೆ ಮಾತುಕತೆ

ಲಾಕ್ ಡೌನ್ ಅವಧಿಯಲ್ಲಿ ಭಾರತೀಯ ರೈತರು ಅನುಭವಿಸಿದ ನಷ್ಟ ಎಷ್ಟು? ಎಷ್ಟು ಪ್ರಮಾಣದ ಕೃಷಿ ಉತ್ಪನ್ನ ಹಾಗೂ ಅದರ ಮೌಲ್ಯವೆಷ್ಟು?

ಕೇರಳದ ರೈತನೊಬ್ಬ ಇಂದು ನನಗೆ ಪತ್ರ ಬರೆದಿದ್ದ. ಆತ 49 ಡ್ರಮ್ ಗಳಷ್ಟು ರಬ್ಬರ್ ಹಾಲು, ಅಂದರೆ 10,000 ಕೆ.ಜಿಯಷ್ಟು (3.25 ಲಕ್ಷ ರೂ. ಮೌಲ್ಯದ) ಹಾಲು ಮಾರಲಾಗದೆ ಹಾಗೆಯೇ ಉಳಿಸಿಕೊಂಡಿರುವುದಾಗಿ ಮತ್ತು ಹಾಳಾಗಿ ಹೋಗುತ್ತಿರುವ ಆ ಉತ್ಪನ್ನವಿಟ್ಟುಕೊಂಡು ಮಾಡುವುದಾದರೂ ಏನು ಎಂಬುದು ಅವನ ಪ್ರಶ್ನೆ.

ಇದೊಂದು ವಿಶೇಷ ಪ್ರಕರಣವೇನಲ್ಲ. ಈಗಾಗಲೇ ರೈತರು ಉತ್ಪಾದಿಸಿದ ಹಾಲನ್ನು ರಸ್ತೆಗಳಿಗೆ ಸುರಿಯುವ, ಕೋಳಿಗಳನ್ನು ಜೀವಂತವಾಗಿ ಸುಡುವ, ಬೆಳೆದು ನಿಂತ ಹೂವಿನ ಗಿಡಗಳನ್ನು ಕೃಷಿ ಭೂಮಿಯಲ್ಲಿಯೇ ಉತ್ತು ಮಣ್ಣಿಗೆ ಸೇರಿಸುವ, ಮೀನುಗಳು ಮಾರುಕಟ್ಟೆಯಲ್ಲಿಯೇ ಕೊಳೆಯುತ್ತಿರುವ, ತರಕಾರಿ ಬೆಳೆದ ರೈತರು ಅವುಗಳನ್ನು ದನ ಕರುಗಳ ಮುಂದೆ ಎಸೆಯುವ ಸುದ್ದಿಗಳನ್ನು ನೋಡುತ್ತಲೇ ಬಂದಿದ್ದೇವೆ. ಸಪ್ಲೇ ಚೈನ್ ತೊಡಕುಗಳಿಂದ ಬೆಳೆದ ಯಾವ ಬೆಳೆಗೂ ಮಾರುಕಟ್ಟೆಯಲ್ಲಿ ಬೆಲೆಯಿಲ್ಲವಾಗಿ ಸಮಸ್ಯೆ ಅನುಭವಿಸುತ್ತಿರುವ ರೈತರ ಬದುಕನ್ನು ಮಾಧ್ಯಮಗಳಲ್ಲಿ ಕಂಡಿದ್ದೇವೆ.

ಬಾಣಲೆಯಿಂದ ಬೆಂಕಿಗೊ, ಸುಗಮ ಬಾಳುವೆಗೊ?ಬಾಣಲೆಯಿಂದ ಬೆಂಕಿಗೊ, ಸುಗಮ ಬಾಳುವೆಗೊ?

ತರಕಾರಿ ಬೆಳೆಗಾರರು ಸುಮಾರು 25 ಸಾವಿರ ಕೋಟಿ, ಹಾಲು ಉತ್ಪಾದಕರು, 10 ಸಾವಿರ ಕೋಟಿ, ಪೌಲ್ಟ್ರಿ ಉದ್ಯಮ ಸುಮಾರು 20 ಸಾವಿರ ಕೋಟಿ, ಕಬ್ಬಿನ ಬಾಕಿ ಮೊತ್ತ 18 ಸಾವಿರ ಕೋಟಿ ನಷ್ಟ ಆಗಿರುವುದಾಗಿ ಅನೇಕ ಅಧ್ಯಯನಗಳು ತಿಳಿಸಿವೆ. ಇದರ ಜೊತೆಗೆ ಹೂವು ಬೆಳೆಗಾರರು, ತೋಟಗಾರಿಕಾ ಬೆಳೆಗಾರರು, ಹಣ್ಣು ಬೆಳೆಗಾರರು ಬಹಳ ದೊಡ್ಡ ಮೊತ್ತದ ನಷ್ಟ ಅನುಭವಿಸಿದ್ದು, ಮೀನುಗಾರರು ಕೂಡ ತುಂಬಾ ಆರ್ಥಿಕ ನಷ್ಟಕ್ಕೆ ಒಳಗಾಗಿದ್ದಾರೆ. ಒಟ್ಟಾರೆ ಇಡೀ ದೇಶದಲ್ಲಿ ರೈತರು ದೊಡ್ಡ ನಷ್ಟ ಅನುಭವಿಸಿದ್ದಾರೆ. ಇನ್ನೂ ಅನುಭವಿಸುತ್ತಿದ್ದಾರೆ. ಒಟ್ಟು ನಷ್ಟದ ಅಂದಾಜು ಮಾಡಲು ಇನ್ನೂ ಸ್ವಲ್ಪ ಸಮಯ ಬೇಕು.

 ಕೃಷಿ ಕ್ಷೇತ್ರದ ಪ್ರಾಮುಖ್ಯ ಮತ್ತೊಮ್ಮೆ ಸಾಬೀತಾಗಿದೆ

ಕೃಷಿ ಕ್ಷೇತ್ರದ ಪ್ರಾಮುಖ್ಯ ಮತ್ತೊಮ್ಮೆ ಸಾಬೀತಾಗಿದೆ

ಇಂಥ ಇಕ್ಕಟ್ಟಿನ ಸನ್ನಿವೇಶದಲ್ಲಿ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳು ಯಾವ ರೀತಿಯಾಗಿ ಪರಿಹಾರ ಕಾರ್ಯಕ್ರಮಗಳನ್ನು ಕೈಗೊಂಡರೆ ಉತ್ತಮ ಎಂದು ನಿಮಗನಿಸುತ್ತದೆ?

ಇದೊಂದು ಅನಿವಾರ್ಯ ವಿಶೇಷ ಸಂದರ್ಭ. ಇಡೀ ಆರ್ಥಿಕ ಚಟುವಟಿಕೆಗಳು ಸ್ತಬ್ಧವಾಗಿವೆ. ಕೃಷಿ ಕ್ಷೇತ್ರ ಮಾತ್ರ ಜಗತ್ತಿಗೆ ಜೀವಸೆಲೆಯಾಗಿ ನಿಂತಿದೆ. ಭಾರತದ ಆರ್ಥಿಕತೆಗೆ ಕೃಷಿ ಕ್ಷೇತ್ರ ಬಹಳ ಮುಖ್ಯ ಎಂದು ಮತ್ತೊಮ್ಮೆ ಸಾಬೀತಾಗಿದೆ. ನಗರ ಪ್ರದೇಶಗಳ ಹೋಟೆಲು, ರೆಸ್ಟೋರೆಂಟ್, ಡಾಬಾಗಳು ಕಳೆದ 50 ದಿನಗಳಿಂದ ಮುಚ್ಚಿದ್ದರೂ ಕೃಷಿ ಉತ್ಪನ್ನಗಳ ಸರಬರಾಜು ನಡೆಯುತ್ತಲೇ ಸಾಗಿದೆ. ಇಂಥದೊಂದು ಸಂಕಟದ ಪರಿಸ್ಥಿತಿಯಲ್ಲಿ ರೈತರಿಗೆ ತತ್ ಕ್ಷಣದ ಪರಿಹಾರ ಅಗತ್ಯ. ಅವರಿಗೆ ನೇರ ಆದಾಯದ ನೆರವು ಬೇಕು. ಅವರ ಕೈಯಲ್ಲಿ ಹೆಚ್ಚಿನ ದುಡ್ಡಿರಬೇಕು. ಹಾಗಾಗಿ ಪ್ರತಿ ರೈತನಿಗೆ, ಗುತ್ತಿಗೆ ರೈತನೂ ಒಳಗೊಂಡಂತೆ ತಲಾ ಹತ್ತು ಸಾವಿರ ರೂಪಾಯಿ ಹಣ ನೀಡಬೇಕು.

ಇದಕ್ಕಾಗಿ ಪ್ರಧಾನ ಮಂತ್ರಿ ಕಿಸಾನ್ ಯೋಜನೆಯ ಹಣ ವಿನಿಯೋಗಿಸಬಾರದು. ಇದರ ಜೊತೆಗೆ ಗೋಧಿ ಬೆಳೆಗಾರರು ಕಟಾವಿನ ಸಂದರ್ಭದಲ್ಲಿ ಅನುಭವಿಸಿದ ಸಮಸ್ಯೆಗಳನ್ನು ಪರಿಗಣಿಸಿ ಪ್ರತಿ ಕ್ವಿಂಟಾಲ್ ‍ಗೆ ಕನಿಷ್ಠ ಬೆಂಬಲ ಬೆಲೆಯ ಜೊತೆಗೆ 100 ರೂಪಾಯಿ ಹೆಚ್ಚಿನ ಹಣ ನಿಡಬೇಕು. ಈಗಿನಿಂದ ಒಂದು ವರ್ಷದ ಅವಧಿಯಲ್ಲಿ ಯಾವುದೇ ಸಾಲದ ಕಂತುಗಳಿಗೆ ರೈತರನ್ನು ಎಳೆದಾಡಬಾರದು. ಇದೇ ಅವಧಿಯಲ್ಲಿ ಬಡ್ಡಿಯನ್ನು ಮನ್ನಾ ಮಾಡಬೇಕು. ಅನೇಕ ವಲಸೆ ಕಾರ್ಮಿಕರು ಹಳ್ಳಿಗಳು ಸೇರಿರುವ ಈ ಸಂದರ್ಭದಲ್ಲಿ ಕೃಷಿ ಕ್ಷೇತ್ರವನ್ನು ಬಲಪಡಿಸಬೇಕಿದೆ. ಇದೀಗ ಹೆಚ್ಚುವರಿ 40,000 ಕೋಟಿ ರೂಪಾಯಿ ಕೊಡುತ್ತಿರುವುದನ್ನು ಸ್ವಾಗತ ಮಾಡುತ್ತಲೇ ಕನಿಷ್ಠ 200 ದಿನಗಳ ಉದ್ಯೋಗ ಖಾತ್ರಿ ಎಲ್ಲರಿಗೂ ಒದಗಿಸಬೇಕು.

 ಆಹಾರ ಪದ್ಧತಿಯ ಬಗ್ಗೆ ಮರುಚಿಂತನೆ ಮಾಡುವ ಸಮಯ ಬಂದಿದೆ

ಆಹಾರ ಪದ್ಧತಿಯ ಬಗ್ಗೆ ಮರುಚಿಂತನೆ ಮಾಡುವ ಸಮಯ ಬಂದಿದೆ

ಅನೇಕ ಸಾವಯವ/ನೈಸರ್ಗಿಕ ಕೃಷಿ ತಜ್ಞರು ಹೇಳುವಂತೆ ‘ಜನ ರೋಗನಿರೋಧಕ ಶಕ್ತಿ ಕಳೆದುಕೊಳ್ಳುತ್ತಿರುವುದು ರಾಸಾಯನಿಕ ಆಹಾರಗಳಿಂದ' (ರಾಸಾಯನಿಕ ಕೀಟನಾಶಕ, ಶಿಲೀಂಧ್ರನಾಶಕ, ಕಳೆನಾಶಕ ಮುಂತಾದವುಗಳ ಸಿಂಪರಣೆಯಿಂದ) ಈ ಮಾತನ್ನು ನೀವು ಒಪ್ಪುತ್ತೀರಾ? ಹೌದಾದರೆ ರಾಸಾಯನಿಕ ಮುಕ್ತ ಆಹಾರ ಬೆಳೆಯುವ ಕ್ರಮದಲ್ಲಿ ವಿಶ್ವಕ್ಕೆ ಆಹಾರ ಭದ್ರತೆ ಒದಗಿಸಬಹುದೇ?

ಇದೀಗ ವಿತ್ತ ಸಚಿವರು ಕಿರು ಆಹಾರ ಉದ್ಯಮಗಳಿಗಾಗಿ 10,000 ಕೋಟಿ ನಿಧಿ ಕಾಯ್ದಿರಿಸಿದ್ದಾರೆ. ಪೌಷ್ಟಿಕ ಆಹಾರ, ಸಾವಯವ ಆಹಾರ ಮತ್ತು ಸಂಘಗಳ ಮುಖೇನ ಆಹಾರ ಪದಾರ್ಥಗಳ ಮೌಲ್ಯವರ್ಧನೆಗೆ ಪ್ರೋತ್ಸಾಹ ನೀಡುವ ಕೆಲಸಕ್ಕೆ ಚಾಲ್ತಿ ನೀಡಿದ್ದಾರೆ. ಬಿಹಾರದಲ್ಲಿ ಬೆಣ್ಣೆಗಾಗಿ, ಕಾಶ್ಮೀರದಲ್ಲಿ ಕೇಸರಿ ಹಾಗೂ ಕರ್ನಾಟಕದಲ್ಲಿ ರಾಗಿ ಉತ್ಪನ್ನಗಳಿಗೆ ಪ್ರೋತ್ಸಾಹ ನೀಡಲಾಗುತ್ತಿದೆ. ಸಾವಯವ ಪದ್ಧತಿಯಲ್ಲಿ ಆಹಾರ ಬೆಳೆಯುವುದರಿಂದ ಅದರಲ್ಲಿ ನೈಸರ್ಗಿಕವಾದ ರೋಗನಿರೋಧಕ ಶಕ್ತಿ ಇರುವ ಕಾರಣಕ್ಕಾಗಿಯೇ ಮತ್ತು ಇದು ಬಹಳ ಕಾಲದಿಂದ ಹೇಳುತ್ತಲೇ ಬರುತ್ತಿರುವ ವಿಷಯವಾಗಿರುವುದರಿಂದಲೇ ಈ ತೀರ್ಮಾನ ಕೈಗೊಂಡಿರುವುದು.

ಕೊರೊನಾ crisisಗೆ ನೈಸರ್ಗಿಕ ಪರಿಹಾರ: ಸುಭಾಷ್ ಪಾಳೇಕರ್ಕೊರೊನಾ crisisಗೆ ನೈಸರ್ಗಿಕ ಪರಿಹಾರ: ಸುಭಾಷ್ ಪಾಳೇಕರ್

ಪೋಷಕಾಂಶವಿಲ್ಲದ ಜೊಳ್ಳು ಉತ್ಪನ್ನ ಬೆಳೆಯುತ್ತಿದ್ದೇವೆ: ತೀವ್ರತರವಾದ ಕೃಷಿ ತಂತ್ರಜ್ಞಾನವು ನಾವು ನಿತ್ಯ ಸೇವಿಸುವ ಆಹಾರದಲ್ಲಿ ಮಿನರಲ್ಸ್ ಹಾಗೂ ವಿಟಮಿನ್ಸ್ ಕಡಿಮೆ ಮಾಡಿವೆ. ಹೆಚ್ಚು ಉತ್ಪಾದನೆಯ ಕಾರಣಕ್ಕಾಗಿ ಹೊಸ ತಳಿಗಳನ್ನು ಆವಿಷ್ಕರಿಸಲಾಗುತ್ತಿದೆ. ಇದರ ಜೊತೆಗೆ ರಾಸಾಯನಿಕಗಳು ಹಾಗೂ ಹಾರ್ಮೋನುಗಳನ್ನು ಕೊಟ್ಟು ಪೋಷಕಾಂಷಗಳಿಲ್ಲದ ಜೊಳ್ಳು ಉತ್ಪನ್ನವನ್ನು ಬೆಳೆಯುತ್ತಿದ್ದೇವೆ. ಇದೀಗ ನಮ್ಮ ಆಹಾರ ಪದ್ಧತಿಯ ಬಗ್ಗೆ ಮರುಚಿಂತನೆ ಮಾಡುವ ಸಮಯ ಬಂದಿದೆ. ಒಮ್ಮೆ ನಿಂತು ಯೋಚಿಸಬೇಕಿದೆ. ನಾವು ತಿನ್ನುತ್ತಿರುವ ಆಹಾರದಿಂದ ನಮ್ಮ ದೇಹ ರೋಗಗಳನ್ನು ತಡೆದುಕೊಳ್ಳುವ ಶಕ್ತಿ ಕಳೆದುಕೊಳ್ಳುತ್ತಿದೆಯೇ ಎಂಬುದನ್ನು ಪರಿಶೀಲಿಸಬೇಕಿದೆ. ಕೊರೊನಾ ಸಾಂಕ್ರಾಮಿಕವು ಸರಿಯಾದ ಸಮಯದಲ್ಲಿಯೇ ನಮ್ಮನ್ನು ಬಡಿದೆಬ್ಬಿಸಿದೆ. ನಾವು ಆಹಾರ ಬೆಳೆವ ಕ್ರಮದ ಬಗ್ಗೆ ನಮ್ಮ ಊಟದ ಬಗ್ಗೆ ಮರುಚಿಂತನೆ ಮಾಡಬೇಕಿದೆ. ಸರ್ಕಾರಗಳನ್ನು ಬೈಯುತ್ತಾ ಕೂರುವ ಬದಲು ನಾವು ಗ್ರಾಹಕರು ಧ್ವನಿ ಎತ್ತಬೇಕಿದೆ.

 ರೈತರನ್ನು ಬಲಿಪಶು ಮಾಡುತ್ತಲೇ ಇರುವ ನೀತಿ ನಿಯಮಗಳು

ರೈತರನ್ನು ಬಲಿಪಶು ಮಾಡುತ್ತಲೇ ಇರುವ ನೀತಿ ನಿಯಮಗಳು

ಈ ಸಂದರ್ಭದಲ್ಲಿ ಕೃಷಿ ಬಿಕ್ಕಟ್ಟಿನ ಬಗ್ಗೆ ಮಾತನಾಡುವಾಗ, ಮೂರು ಭಾಗವಾಗಿ ವಿಂಗಡಿಸಬಹುದು. ಕೊರೊನಾಗೂ ಮುಂಚಿನ ಕೃಷಿ ಬಿಕ್ಕಟ್ಟು. ಕೊರೊನಾ ಸಮಯದ ಕೃಷಿ ಬಿಕ್ಕಟ್ಟು, ಕೊರೊನಾ ನಂತರದ ಕೃಷಿ ಬಿಕ್ಕಟ್ಟು. ಹೀಗಿರುವಾಗ ರೈತ ಸಮುದಾಯದಲ್ಲಿ ಭರವಸೆ ಮೂಡಲು ಸರ್ಕಾರಗಳು ಏನು ಮಾಡಬೇಕು. ತಾವು ಯಾವಾಗಲೂ ಹೇಳುವಂತೆ ಕೃಷಿ ಕ್ಷೇತ್ರವನ್ನು ಬೇಕೆಂತಲೇ ದಟ್ಟ ದರಿದ್ರ ಸ್ಥಿತಿಯಲ್ಲಿ ಇಡಲಾಗುತ್ತಿದೆಯೇ?

ಕೊರೊನಾ ವೈರಸ್ ಬರುವ ಮುನ್ನ ಇರಲಿ, ಲಾಕ್ ಡೌನ್ ಮುಗಿದ ಮೇಲಿರಲಿ, ಕೃಷಿ ಕ್ಷೇತ್ರದ ಕಟು ಸತ್ಯವೇನೆಂದರೆ ಸರ್ಕಾರಗಳ ನೀತಿ ನಿಯಮಗಳು ರೈತರನ್ನು ಬಲಿಪಶು ಮಾಡುತ್ತಲೇ ಬಂದಿವೆ. ಮೂಲಭೂತವಾಗಿ ಸರ್ಕಾರಗಳ ನೀತಿಗಳು ಕೃಷಿಯನ್ನು ದಟ್ಟ ದರಿದ್ರ ಸ್ಥಿತಿಯಲ್ಲಿಯೇ ಇಡುತ್ತಿವೆ. ರೈತರು ಉತ್ಪಾದಿಸಿದ ಬೆಳೆಗಳಿಗೆ ನ್ಯಾಯಯುತ ಬೆಲೆ ಸಿಗದಂತೆ ನೋಡಿಕೊಳ್ಳುತ್ತಿರುವ ಹಿಂದಿನ ಉದ್ದೇಶವೇನೆಂದರೆ, ರೈತರನ್ನು ನಗರಗಳಿಗೆ ವಲಸೆ ಹೋಗುವಂತೆ ಮಾಡುವುದೇ ಆಗಿದೆ. ಏಕೆಂದರೆ ನಗರಗಳಲ್ಲಿ ಕಡಿಮೆ ಸಂಬಳಕ್ಕೆ ಕೆಲಸ ಮಾಡುವ ಕೂಲಿಗಳು ಬೇಕಿದೆ. ಒಂದು ಅಂದಾಜಿನ ಪ್ರಕಾರ ನಗರಗಳಲ್ಲಿ ಸುಮಾರು 14 ಕೋಟಿ ಜನ ಅಸಂಘಟಿತ ಕಾರ್ಮಿಕರಿದ್ದಾರೆ. ಇವರನ್ನು ನಾನು ಯಾವುಗಲೂ ಕೃಷಿ ನಿರಾಶ್ರಿತರೆಂದೇ ಕರೆಯುತ್ತೇನೆ. ವಾಸ್ತವದಲ್ಲಿ ಇವರೆಲ್ಲಾ ಕಳೆದ ಮೂರ್ನಾಲ್ಕು ದಶಕಗಳಲ್ಲಿ ಕೃಷಿಯಿಂದ ಹೊರದಬ್ಬಲ್ಪಟ್ಟವರೇ ಆಗಿದ್ದಾರೆ. ಅವರಿಗೆ ಯಾವುದೇ ದಾರಿ ತೋಚದೆ ನಗರಗಳಲ್ಲಿ ಸಿಗುವ ಯಾವುದೋ ಕೆಲಸಗಳಲ್ಲಿ ಅನ್ನ ನೀರು ಹುಟ್ಟಿಸಿಕೊಳ್ಳುವ ಅನಿವಾರ್ಯತೆಯಿಂದ ಬಂದವರೇ ಆಗಿದ್ದಾರೆ.

ರೈತರು ನ್ಯಾಯವಾಗಿ ಬರಬೇಕಾದ ಆದಾಯದಿಂದ ವಂಚಿತರಾಗುತ್ತಿದ್ದಾರೆ: ರೈತರು ತಮಗೆ ಬರಬೇಕಾದ ನ್ಯಾಯವಾದ ಆದಾಯದಿಂದ ವಂಚಿತರಾಗಿದ್ದಾರೆ ಎಂದು ನಾನು ಹೇಳುವಾಗ. OECD-ICRIER ಅಧ್ಯಯನದ ವರದಿಯನ್ನು ನಿಮ್ಮ ಮುಂದಿಡುವುದು ಸೂಕ್ತವೆನಿಸುತ್ತದೆ. 2000-2017ರ ಅವಧಿಯ 17 ವರ್ಷಗಳಲ್ಲಿ ಭಾರತೀಯ ರೈತರು 45 ಲಕ್ಷ ಕೋಟಿ ನಷ್ಟ ಅನುಭವಿಸಿದ್ದಾರೆ. ಇದನ್ನೊಮ್ಮೆ ಊಹಿಸಿಕೊಳ್ಳಿ. ಇದು ಬಹುದೊಡ್ಡ ಮೊತ್ತ. ಆದರೂ ದೇಶ ಇದರ ಬಗ್ಗೆ ಕಣ್ಣೆತ್ತಿಯೂ ನೋಡಿಲ್ಲ. ರೈತರು ಇದೇ ಹದಿನೇಳು ವರ್ಷಗಳಲ್ಲಿ 45 ಲಕ್ಷ ಕೋಟಿ ಗಳಿಸಿದ್ದರೆ (ಅಥವಾ ಪ್ರತಿ ವರ್ಷ 2.64 ಲಕ್ಷ ಕೋಟಿ ರೂ) ನಗರಗಳಿಗೆ ವಲಸೆ ಬಂದವರ ಸಂಖ್ಯೆ ಬಹಳ ಕಡಿಮೆ ಇರುತ್ತಿತ್ತು.

ಗ್ರಾಮೀಣ ಆರ್ಥಿಕತೆಯನ್ನು ಬಲಪಡಿಸಬೇಕಾಗಿದೆ: ಇದೀಗ ಹಳ್ಳಿಗಳಿಗೆ ಹಿಂದಿರುಗುತ್ತಿರುವ ಕೃಷಿ ನಿರಾಶ್ರಿತರು ಯಾವ ನಗರಗಳಿಗೆ ಉತ್ತಮ ಅವಕಾಶಗಳಿಗಾಗಿ ಬಂದರೋ ಈಗ ಅವರಿಂದಲೇ ತಿರಸ್ಕರಿಸಲ್ಪಟ್ಟಿದ್ದಾರೆ. ಮತ್ತೆ ಹಳ್ಳೀ ದಾರಿ ಹಿಡಿದಿರುವುದರಿಂದ ಗ್ರಾಮೀಣ ಆರ್ಥಿಕತೆಯನ್ನು ಬಲಪಡಿಸಬೇಕಾದ ಅನಿವಾರ್ಯತೆಯನ್ನು ನಾವು ಮನಗಾಣಬೇಕಿದೆ. ಕೃಷಿ ಕ್ಷೇತ್ರವನ್ನು ಆರ್ಥಿಕವಾಗಿ ಸಬಲಗೊಳಿಸಬೇಕಿದೆ. ರೈತರಿಗೆ ಲಾಭದಾಯಕ ಬೆಲೆ ಸಿಗುವಂತೆ ಮಾಡಬೇಕಿದೆ. ಆರ್ಥಿಕ ನೀತಿಗಳನ್ನು ಮರುಪರಿಶೀಲಿಸಬೇಕಿದೆ. ಹೊಸದಾಗಿ ರೂಪಿಸಬೇಕಿದೆ. ಹಳ್ಳಿಗರನ್ನು ನಗರಗಳತ್ತ ವಲಸೆ ಹೋಗುವುದನ್ನು ತಡೆಯಬೇಕಿದೆ. ಕೃಷಿ ಕ್ಷೇತ್ರದಲ್ಲಿ ಕಳೆದು ಹೋದ ವೈಭವವನ್ನು ಮತ್ತೆ ಮರು ಸ್ಥಾಪನೆ ಮಾಡಬೇಕಿದೆ. ಕೃಷಿಯನ್ನು ಆರ್ಥಿಕವಾಗಿ ಬಲಗೊಳಿಸಬೇಕಿದೆ.

ನೀವು ಓದುಗರು ಇಂಥ ಕಟು ವಾಸ್ತವವನ್ನು ಅರಿತಾಗ ಮಾತ್ರ ಬದಲಾವಣೆ ಸಾಧ್ಯ. ನೀವು ಧ್ವನಿ ಎತ್ತದೆ ಹೋದರೆ, ನೀತಿಗಳಲ್ಲಿ ಬದಲಾವಣೆ ಕೇಳದೇ ಹೋದಲ್ಲಿ, ಸಾಮಾಜಿಕ ಜಾಲತಾಣಗಳನ್ನು ಇದಕ್ಕೆ ಬಳಸದೇ ಹೋದರೆ ಏನೂ ಆಗಲಾರದು. ನೀವು ಸುಮ್ಮನಿರುವುದು ತರವಲ್ಲ. ಅದು ನಿಮ್ಮ ಸೋಲು. ಎದ್ದು ನಿಲ್ಲಿ.

 ರೈತರೇ ದುರಾಸೆಗೆ ಬಿದ್ದು ದಿಕ್ಕು ತಪ್ಪಬೇಡಿ...

ರೈತರೇ ದುರಾಸೆಗೆ ಬಿದ್ದು ದಿಕ್ಕು ತಪ್ಪಬೇಡಿ...

ಸುಸ್ಥಿರ ಕೃಷಿ ಮತ್ತು ಸುಸ್ಥಿರ ಬದುಕಿನೆಡೆಗೆ ನಡೆಯಲು ರೈತರಿಗೆ ನಿಮ್ಮ ಸಲಹೆ ಏನು?

ನನ್ನ ರೈತ ಬಂಧುಗಳಿಗೆ ಹೇಳುವ ಮೊದಲ ಮಾತೆಂದರೆ, ನಿಮಗೆ ದುರಾಸೆ ಬೇಡ. ಹೆಚ್ಚಿನ ಉತ್ಪಾದನೆಯೆಂಬ ಓಟದಲ್ಲಿ ನೀವು ಮುನ್ನುಗ್ಗಬೇಡಿ. ನಿಮ್ಮ ಬೆಳೆಯ ಉತ್ಪಾದಕತೆ ಹೆಚ್ಚಾದಲ್ಲಿ ಹೆಚ್ಚಿನ ಆದಾಯ ಬರುವುದೆಂದು ಹೇಳಿ ನಿಮ್ಮನ್ನು ದಿಕ್ಕು ತಪ್ಪಿಸಲಾಗುತ್ತಿದೆ. ನೀವು ಬಳಸುತ್ತಿರುವ ರಾಸಾಯನಿಕ ಗೊಬ್ಬರ ಹಾಗೂ ರಾಸಾಯನಿಕ ಕೀಟನಾಶಕಗಳು ಪರಿಸರಕ್ಕೆ ಮಾರಕ ಎಂಬುದು ನಿಮಗೇ ಗೊತ್ತಿದೆ. ಬೆಳೆ ಉತ್ಪಾದನಾ ವೆಚ್ಚ ಹೆಚ್ಚಾಗಿರುವ ಕಾರಣ ನಿಮ್ಮ ಆದಾಯ ಕಡಿಮೆ ಆಗಿದೆ ಎಂಬ ಸತ್ಯವೂ ನಿಮಗೆ ಗೊತ್ತಿದೆ. ಬಹುಸಂಖ್ಯಾತ ರೈತರು ಸಾಲಗಳಲ್ಲಿ ಬದುಕುತ್ತಿದ್ದೀರಿ, ಹೀಗೆ ಬದುಕುವುದು ನರಕದಲ್ಲಿ ಬದುಕಿದಂತೆ ಎಂಬ ಸತ್ಯ ನೀವು ಅರಿತಿದ್ದೀರಿ. ಪ್ರತಿ ವರ್ಷ ನಿಮ್ಮ ಸಾಲಗಳು ಏರುತ್ತಲೇ ಸಾಗಿ ಸಾಲದ ಸುಳಿಯಲ್ಲಿ ಸಿಲುಕುತ್ತಿದ್ದೀರಿ. ರೈತರ ಆತ್ಮಹತ್ಯೆಗಳು ಸಾಲು ಸಾಲಾಗಿ ನಡೆಯುತ್ತಲೇ ಇವೆ. ನಿಮ್ಮ ನೆರೆಹೊರೆಯ ರೈತ ಸಾಲದ ಬಾಧೆ ಹೊರಲಾಗದೆ ಆತ್ಮಹತ್ಯೆಗೆ ಶರಣಾಗಿದ್ದನ್ನು ನೀವು ನೋಡುತ್ತಲೇ ಇದ್ದೀರಿ.

ಕೃಷಿ ಕ್ಷೇತ್ರದಲ್ಲಿ ಅದಾಗಲೇ ಇದ್ದ ಸಮಸ್ಯೆಗಳನ್ನು ‘ಕೊರೊನಾ' ಎತ್ತಿ ತೋರಿಸುತ್ತಿದೆಕೃಷಿ ಕ್ಷೇತ್ರದಲ್ಲಿ ಅದಾಗಲೇ ಇದ್ದ ಸಮಸ್ಯೆಗಳನ್ನು ‘ಕೊರೊನಾ' ಎತ್ತಿ ತೋರಿಸುತ್ತಿದೆ

ಪಂಜಾಬ್ ರೈತರ ಬಗ್ಗೆ ಹೇಳಲೇಬೇಕಾದ ಸತ್ಯವಿದೆ: ಪಂಜಾಬ್ ರಾಜ್ಯದ ಉದಾಹರಣೆ ತೆಗೆದುಕೊಳ್ಳಿ. ಇಲ್ಲಿ ಶೇಕಡಾ 98ರಷ್ಟು ಕೃಷಿ ಭೂಮಿಗೆ ಖಾತ್ರಿಯಾದ ನೀರಾವರಿ ಸೌಲಭ್ಯವಿದೆ. ಅಂದರೆ ಬೆಳೆವ ಪ್ರತಿ ಕಾಳಿಗೂ ನೀರಾವರಿ ಸೌಲಭ್ಯವಿದೆ. ಉತ್ಪಾದಕತೆಯಲ್ಲಿ (ಭತ್ತ, ಗೋಧಿ, ಜೋಳ) ವಿಶ್ವದಲ್ಲಿಯೇ ಅತಿ ಹೆಚ್ಚು ಪ್ರಮಾಣವನ್ನು ಪಂಜಾಬ್ ದಾಖಲಿಸಿದೆ. ಎಲ್ಲಾ ರಾಜ್ಯಗಳು ಪಂಜಾಬ್ ನತ್ತ ಮುಖ ಮಾಡುತ್ತವೆ. ಆದರೆ ಪಂಜಾಬ್ ರೈತರ ಬಗ್ಗೆ ಅತಿ ಕಡಿಮೆ ಹೇಳಲಾದ ಸತ್ಯವೊಂದಿದೆ. ಇಲ್ಲಿ ರೈತರ ಆತ್ಮಹತ್ಯೆಗಳು ದುಪ್ಪಟ್ಟಾಗಿವೆ. 2000 ದಿಂದ 2015ರ ಅವಧಿಯಲ್ಲಿ ರೈತರು ಮತ್ತು ಕೃಷಿ ಕಾರ್ಮಿಕರ ಆತ್ಮಹತ್ಯೆ ಪ್ರಕರಣಗಳು 16,600.

ಸ್ಪರ್ಧೆಗೆ ಇಳಿದು ಆಹಾರ ಉತ್ಪಾದಿಸಬೇಡಿ: ನೀವು ಇದರಿಂದ ಪಾಠ ಕಲಿಯುವ ಸಮಯ. ನಿಮ್ಮ ಅಕ್ಕಪಕ್ಕದ ರೈತ ಹೆಚ್ಚಿನ ಪ್ರಮಾಣದ ಗೊಬ್ಬರ ಹಾಗೂ ಕೀಟನಾಶಕ ಸಿಂಪಡಿಸುತ್ತಿದ್ದಾನೆ ಎಂದು ಅವನೊಂದಿಗೆ ಸ್ಪರ್ಧೆಗೆ ಇಳಿಯಬೇಡಿ. ಸುರಕ್ಷಿತ ರೀತಿಯಲ್ಲಿ ಆಹಾರ ಉತ್ಪಾದಿಸಿ. ಕಳೆದ ಹಲವು ದಶಕಗಳಿಂದ ನಿಮಗೆ ಸಿಗಬೇಕಾದ ನ್ಯಾಯಯುತ ಬೆಲೆ ಸಿಗದೆ ನೋಡಿಕೊಂಡಿರುವ ಸರ್ಕಾರಗಳ ಬಗ್ಗೆ ನಿಮ್ಮ ಗಮನ ಹರಿಸಿ. ನ್ಯಾಯಯುತ ಬೆಲೆ ಪಡೆಯುವುದು ನಿಮ್ಮ ಗುರಿಯಾಗಬೇಕು. ನಾನು ಹಿಂದೆ ಒಂದು ಲೆಕ್ಕಾಚಾರವನ್ನು ಹೇಳುತ್ತಿದ್ದದ್ದು ನಿಮ್ಮ ನೆನಪಿನಲ್ಲಿರಬಹುದು.

ನಿಮ್ಮ ಆದಾಯವನ್ನು ನೀವು ಅರಿಯಬೇಕಿದೆ: 1970-2015ರ 45 ವರ್ಷದ ಅವಧಿಯಲ್ಲಿ ಸರ್ಕಾರಿ ನೌಕರರ ಸಂಬಳ 120 ರಿಂದ 150 ಪಟ್ಟು ಹೆಚ್ಚಾಗಿದೆ. ಶಾಲಾ ಶಿಕ್ಷಕರು ಮತ್ತು ಪ್ರೊಫೆಸರ್ ಗಳ ಬೇಸಿಕ್ ಸಂಬಳ 150-170 ಪಟ್ಟು ಹೆಚ್ಚಾಗಿದೆ. ಆದರೆ ಇದೇ 45 ವರ್ಷ ಅವಧಿಯಲ್ಲಿ ಗೋಧಿ ಬೆಲೆ ಕೇವಲ 19 ಪಟ್ಟು ಹೆಚ್ಚಿದೆ. ಇದೇ ಪ್ರಮಾಣದಲ್ಲಿ ಸರ್ಕಾರಿ ನೌಕರರ, ಶಿಕ್ಷಕರ, ವಿಶ್ವವಿದ್ಯಾಲಯಗಳ ಪ್ರೊಫೆಸರ್ ಗಳ ಸಂಬಳ ಹೆಚ್ಚಾಗಿದ್ದಲ್ಲಿ ಅವರಲ್ಲಿ ಅನೇಕರು ಇಷ್ಟೊತ್ತಿಗೆ ಕೆಲಸ ಬಿಡುತ್ತಿದ್ದರು. ಕೆಲವರು ಆತ್ಮಹತ್ಯೆ ಮಾಡಿಕೊಂಡಿರುತ್ತಿದ್ದರು. ರೈತರಾದ ನೀವು ಸಂಕಷ್ಟದಲ್ಲಿ ಬದುಕುತ್ತಿರುವುದಕ್ಕೆ ಕಾರಣ ನಿಮಗೆ ಕೃಷಿ ಹೇಗೆ ಮಾಡಬೇಕೆಂದು ಗೊತ್ತಿಲ್ಲವೆಂದಲ್ಲ. ನೀವು ತಿಳಿಯಬೇಕಾದ್ದು ನಿಮಗೆ ಬರಬೇಕಾದ ಆದಾಯ ಹೇಗೆ ಉದ್ದೇಶಪೂರ್ವಕವಾಗಿ ಕಡಿಮೆ ಮಾಡಲಾಗಿದೆ ಮತ್ತು ಗ್ರಾಹಕರಿಗೆ ಕಡಿಮೆ ಬೆಲೆಯಲ್ಲಿ ಆಹಾರ ಒದಗಿಸಲು ಮಾಡುತ್ತಿರುವ ನೀತಿಗಳಿವು ಎಂದು ಅರಿಯಬೇಕಿದೆ.

ಕೃಷಿ ಬಿಕ್ಕಟ್ಟಿಗೆ ಪರಿಹಾರ ಕೃಷಿ ಭೂಮಿಯಲ್ಲಿಲ್ಲ, ಬದಲಿಗೆ ಆರ್ಥಿಕತೆಯಲ್ಲಿದೆ...

English summary
Food And Trade Policy Analyst Dr Devinder Sharma speaks about how to handle agriculture crisis in this situation and what government should do to overcome this
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X