ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರೈತರ ಬೆಳೆಗೆ ವೈಜ್ಞಾನಿಕ ಬೆಂಬಲ ಬೆಲೆ ಘೋಷಣೆಗೆ ಆಗ್ರಹಿಸಿ ಪ್ರತಿಭಟನೆ

By ದಾವಣಗೆರೆ ಪ್ರತಿನಿಧಿ
|
Google Oneindia Kannada News

ದಾವಣಗೆರೆ, ನವೆಂಬರ್ 5: ರೈತ ಬೆಳೆಯುವ ಬೆಳೆಗಳಿಗೆ ಉತ್ಪಾದನಾ ವೆಚ್ಚಕ್ಕೆ ಅನುಗುಣವಾಗಿ ವೈಜ್ಞಾನಿಕ ಬೆಂಬಲ ಬೆಲೆ ಘೋಷಿಸಬೇಕೆಂದು ಆಗ್ರಹಿಸಿ ರೈತ ಐಕ್ಯತಾ ಹೋರಾಟ ಸಮಿತಿಯ ಕಾರ್ಯಕರ್ತರು ದಾವಣಗೆರೆ ನಗರದಲ್ಲಿ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದರು.

ನಗರದ ಹೊರ ವಲಯದಲ್ಲಿರುವ ರಾಷ್ಟ್ರೀಯ ಹೆದ್ದಾರಿ-4ರಲ್ಲಿ ಜಮಾಯಿಸಿದ ರೈತ ಐಕ್ಯತಾ ಹೋರಾಟ ಸಮಿತಿಯ ಕಾಯಕರ್ತರು, ರೈತ ವಿರೋಧಿ ನೀತಿಗಳನ್ನು ಜಾರಿಗೆ ತರುತ್ತಿರುವ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ದಾವಣಗೆರೆ: ಒಂದು ಮಳೆ ರೈತರ ಬದುಕನ್ನೇ ಮೂರಾಬಟ್ಟೆ ಮಾಡಿದೆದಾವಣಗೆರೆ: ಒಂದು ಮಳೆ ರೈತರ ಬದುಕನ್ನೇ ಮೂರಾಬಟ್ಟೆ ಮಾಡಿದೆ

ಈ ಸಂದರ್ಭದಲ್ಲಿ ಮಾತನಾಡಿದ ರೈತ ಮುಖಂಡ ಹುಚ್ಚವ್ವನಹಳ್ಳಿ ಮಂಜುನಾಥ್, ಕೇಂದ್ರ ಸರ್ಕಾರ ಮೆಕ್ಕೆಜೋಳಕ್ಕೆ 1850 ರೂ. ಬೆಂಬಲ ಬೆಲೆ ನಿಗದಿ ಮಾಡಿದೆ. ಆದರೆ, ಸ್ಥಳೀಯ ಎಪಿಎಂಸಿ ಮಾರಕಟ್ಟೆಯಲ್ಲಿ ವರ್ತಕರು, ದಲ್ಲಾಲರು 1050 ರಿಂದ 1200 ರೂ.ನಂತೆ ಮೆಕ್ಕೆಜೋಳ ಖರೀದಿಸುತ್ತಿದ್ದಾರೆ. ರೈತರ ಶಾಲು ಹಾಕಿಕೊಂಡು ನಾನು ರೈತರ ಪರವಾಗಿದ್ದೇನೆಂದು ಮೊಸಳೆ ಕಣ್ಣೀರು ಸುರಿಸುವ ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ವರ್ತಕರನ್ನು ನಿಯಂತ್ರಿಸುವ ಶಕ್ತಿ ಇಲ್ಲವೇ? ಎಂದು ಪ್ರಶ್ನಿಸಿದರು.

ಮೆಕ್ಕೆಜೋಳಕ್ಕೆ 3500 ರೂ. ವೈಜ್ಞಾನಿಕ ಬೆಂಬಲ ಬೆಲೆ

ಮೆಕ್ಕೆಜೋಳಕ್ಕೆ 3500 ರೂ. ವೈಜ್ಞಾನಿಕ ಬೆಂಬಲ ಬೆಲೆ

ಯಡಿಯೂರಪ್ಪರಿಗೆ ನಾಚಿಕೆ, ಮಾನ-ಮರ್ಯಾದೆ ಇದ್ದರೆ, ತಕ್ಷಣವೇ ರೈತರ ಶಾಲು ಧರಿಸುವುದನ್ನು ಬಿಡಬೇಕು ಎಂದು ಒತ್ತಾಯಿಸಿದ ಅವರು, ಯಡಿಯೂರಪ್ಪನವರು ಇನ್ಮುಂದೆ ರೈತರ ಶಾಲು ಹಾಕಿಕೊಳ್ಳುವುದಾದರೆ, ಸರ್ಕಾರ ನಿಗದಿ ಮಾಡಿರುವ ದರಕ್ಕೆ ಕೃಷಿ ಉತ್ಪನ್ನಗಳು ಖರೀದಿ ಆಗುವಂತೆ ನೋಡಿಕೊಳ್ಳಬೇಕು. ಕ್ವಿಂಟಾಲ್ ಮೆಕ್ಕೆಜೋಳಕ್ಕೆ 3500 ರೂ. ವೈಜ್ಞಾನಿಕ ಬೆಂಬಲ ಬೆಲೆ ಘೋಷಿಸಬೇಕೆಂದು ಆಗ್ರಹಿಸಿದರು.

ರೈತರಿಗೆ ಮಾರಕವಾಗುವ ಕಾಯ್ದೆ

ರೈತರಿಗೆ ಮಾರಕವಾಗುವ ಕಾಯ್ದೆ

ಸದನದಲ್ಲಿ ಯಾವುದೇ ರೀತಿಯ ಚರ್ಚೆ ನಡೆಸದೆಯೇ ಭೂಸುಧಾರಣಾ ಮತ್ತು ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ತಂದು ರಾಜ್ಯಪಾಲರ ಅಂಕಿತ ಹಾಕಿಸುವ ಮೂಲಕ ಆ ತಿದ್ದುಪಡಿಗಳನ್ನು ಹಿಂಬಾಗಿಲ ಮೂಲಕ ಜಾರಿ ಮಾಡಲು ಮುಂದಾಗಿರುವ ಸರ್ಕಾರದ ಅಪ್ರಜಾತಾಂತ್ರಿಕ ನೀತಿಯನ್ನು ರೈತರು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ. ಆದ್ದರಿಂದ ತಕ್ಷಣವೇ ರೈತರಿಗೆ ಮಾರಕವಾಗುವ ಕಾಯ್ದೆಗಳಿಗೆ ತಿದ್ದುಪಡಿ ತಂದಿರುವುದನ್ನು ತಕ್ಷಣವೇ ಕೈಬಿಡಬೇಕೆಂದು ಒತ್ತಾಯಿಸಿದರು.

ಯಾವ ಕಾಯ್ದೆಗೆ ಬೇಕಾದರೂ ತಿದ್ದುಪಡಿ ತನ್ನಿ

ಯಾವ ಕಾಯ್ದೆಗೆ ಬೇಕಾದರೂ ತಿದ್ದುಪಡಿ ತನ್ನಿ

ರೈತ ಮುಖಂಡರು ಹಾಗೂ ಜಿಲ್ಲಾ ಪಂಚಾಯತ್ ಸದಸ್ಯರಾದ ತೇಜಸ್ವಿ ಪಟೇಲ್ ಮಾತನಾಡಿ, ಸುಮಾರು ವರ್ಷಗಳಿಂದ ಕೃಷಿ ಉತ್ಪನ್ನಗಳಿಗೆ ಉತ್ಪಾದನಾ ವೆಚ್ಚದ ಆಧಾರದಲ್ಲಿ ವೈಜ್ಞಾನಿಕ ಬೆಂಬಲ ಬೆಲೆ ನಿಗದಿ ಮಾಡಬೇಕು ಹಾಗೂ ಕನಿಷ್ಠ ಬೆಂಬಲ ಬೆಲೆ ಕಾಯ್ದೆಯನ್ನು ಕಟ್ಟುನಿಟ್ಟಾಗಿ ಜಾರಿಗೆ ತರಬೇಕೆಂದು ರೈತ ಸಂಘಟನೆಗಳು ಮನವಿ ಮಾಡುತ್ತಾ ಬಂದಿವೆ. ಆದರೂ, ಸರ್ಕಾರಗಳು ರೈತರ ಬೇಡಿಕೆಗಳನ್ನು ಈಡೇರಿಸಿಲ್ಲ ಎಂದು ಆರೋಪಿಸಿದರು. ಕೋವಿಡ್ ಸಂದರ್ಭದಲ್ಲಿ ರೈತರು ಮತ್ತು ಜನರು ಸೇರದಿದ್ದ ಕಾರಣಕ್ಕೆ ಸರ್ಕಾರಗಳು ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ತಂದವು. ಯಾವ ಕಾಯ್ದೆಗೆ ಬೇಕಾದರೂ ತಿದ್ದುಪಡಿ ತನ್ನಿ ರಾಷ್ಟ್ರೀಯ, ಅಂತರಾಷ್ಟ್ರೀಯ ವರ್ತಕರಿಗೆ ಬೇಕಾದರೆ ಅವಕಾಶ ಮಾಡಿಕೊಡಿ. ಇದಕ್ಕೆ ನಮ್ಮ ಅಭ್ಯಂತರವಿಲ್ಲ. ಆದರೆ, ಕನಿಷ್ಠ ಬೆಂಬಲ ಬೆಲೆ ಕಾಯ್ದೆಗೆ ಮಾನ್ಯತೆ ನೀಡಿ, ವೈಜ್ಞಾನಿಕವಾಗಿ ಕನಿಷ್ಠ ಬೆಂಬಲ ಬೆಲೆ ನಿಗದಿ ಮಾಡಬೇಕೆಂದು ಆಗ್ರಹಿಸಿದರು.

ಸಾಮರ್ಥ್ಯ ಇಲ್ಲದಿದ್ದರೆ ರಾಜೀನಾಮೆ ನೀಡಿ

ಸಾಮರ್ಥ್ಯ ಇಲ್ಲದಿದ್ದರೆ ರಾಜೀನಾಮೆ ನೀಡಿ

ಎಲ್ಲವನ್ನೂ ಸರ್ಕಾರ ಖಾಸಗೀಕರಣ ಮಾಡುತ್ತಿವೆ. ನಮಗೆ ಸಾರ್ವಜನಿಕ ಸಂಸ್ಥೆಗಳನ್ನು ನಡೆಸಲಾಗುವುದಿಲ್ಲ ಎಂಬ ಸರ್ಕಾರದ ವೈಫಲ್ಯದ ಕಾರಣಕ್ಕೆ ಈ ಖಾಸಗೀಕರಣ ಮಾಡಲಾಗುತ್ತಿದೆ. ನಿಮ್ಮ ಲೋಪ ಮುಚ್ಚಿಕೊಳ್ಳಲು ಸಾರ್ವಜನಿಕ ವಲಯವನ್ನು ಖಾಸಗೀಕರಣ ಮಾಡುವ ಬದಲು, ನಿಮಗೆ ಆ ಸಾಮರ್ಥ್ಯ ಇಲ್ಲದಿದ್ದರೆ ರಾಜೀನಾಮೆ ಕೊಡಬೇಕು ಎಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಸಮಿತಿಯ ಎಚ್.ಜಿ.ಆವರಗೆರೆ, ಉಮೇಶ್, ನಿಟ್ಟುವಳ್ಳಿ ಅಂಜಿನಪ್ಪ, ಹೊನ್ನೂರು ಮುನಿಯಪ್ಪ, ಮಲ್ಲಶೆಟ್ಟಿಹಳ್ಳಿ ಚನ್ನಬಸಪ್ಪ, ಐರಣಿ ಚಂದ್ರು, ಆವರಗೆರೆ ಹನುಮಂತಪ್ಪ, ನಾಗೇಂದ್ರಪ್ಪ, ಬಲ್ಲೂರು ರವಿಕುಮಾರ್, ಪಾಲವ್ವನಹಳ್ಳಿ ಪ್ರಸನ್ನಕುಮಾರ್ ಮತ್ತಿತರರು ಭಾಗವಹಿಸಿದ್ದರು.

English summary
Activists of the Farmers' Union Struggle Committee staged a highway protest in Davanagere demanding the declaration of scientific support Price.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X