• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಲಾಕ್‌ಡೌನ್ ಎಫೆಕ್ಟ್: ದ.ಕ ಜಿಲ್ಲೆಯಲ್ಲಿ ನೆಲಕಚ್ಚಿದ ತರಕಾರಿ, ಮೀನುಗಾರಿಕಾ ಉದ್ಯಮ

By ಮಂಗಳೂರು ಪ್ರತಿನಿಧಿ
|
Google Oneindia Kannada News

ಮಂಗಳೂರು, ಮೇ 11: ರಾಜ್ಯ ಸರ್ಕಾರ ಲಾಕ್‌ಡೌನ್ ಮತ್ತಷ್ಟು ಕಠಿಣಗೊಳಿಸಲು ಸೂಚಿಸಿದೆ. ಕೃಷಿ ಉತ್ಪನ್ನ ಸೇರಿದಂತೆ ಆಹಾರ ಸಾಮಾಗ್ರಿಗಳ ವಾಹನಗಳಿಗೂ ಬೆಳಗ್ಗೆ ಹತ್ತು ಗಂಟೆಯ ತನಕ ಮಾತ್ರ ಅವಕಾಶ ನೀಡಿದೆ.

ಸರ್ಕಾರ ಕೊರೊನಾ ನಿಯಂತ್ರಣಕ್ಕಾಗಿ ನಿಯಮ ಬಿಗಿಗೊಳಿಸಿದರೂ, ಇದರ ನೇರ ಹೊಡೆತ ಮಾತ್ರ ಬಡ ಕೃಷಿಕರ ಹೊಟ್ಟೆ ಮೇಲೆ ಬಿದ್ದಿದೆ. ಸಾಲ ಶೂಲವನ್ನು ಹೆಗಲೇರಿಸಿಕೊಂಡು ಕಷ್ಟಪಟ್ಟು ಮಾಡಿದ ಆಹಾರ ಬೆಳೆಗಳು ಕಟಾವಿಗೆ ಬರುವ ಹೊತ್ತಿಗೆ ಸರ್ಕಾರದ ಲಾಕ್‌ಡೌನ್ ಸಿಡಿಲು ಬಡಿದಿದ್ದು, ತರಕಾರಿಗಳೆಲ್ಲಾ ಸಸಿಗಳಲ್ಲೇ ಕೊಳೆಯುವಂತಾಗಿದೆ.

ಈ ಬಾರಿ ಬೆಳೆಗೆ ಕೊರೊನಾಘಾತ

ಈ ಬಾರಿ ಬೆಳೆಗೆ ಕೊರೊನಾಘಾತ

ದಕ್ಷಿಣ ಕನ್ನಡ ಜಿಲ್ಲೆಯ ಪಶ್ಚಿಮ ಘಟ್ಟ ಮೇಲಿನ ಗ್ರಾಮೀಣ ಭಾಗದ ಹಲವು ಪ್ರದೇಶಗಳಲ್ಲಿ ತರಕಾರಿ ಬೆಳೆಯೇ ಪ್ರಾಮುಖ್ಯತೆ ಪಡೆದಿದ್ದು, ಹಲವು ಕುಟುಂಬಗಳು ಕೃಷಿಯನ್ನೇ ನಂಬಿ ಜೀವನ ನಡೆಸುತ್ತಿದೆ. ಆದರೆ ಈ ಬಾರಿ ಬೆಳೆಗೆ ಕೊರೊನಾಘಾತ ಬಾಧಿಸಿದ್ದು, ಫಸಲಿಗೆ ಬೇಡಿಕೆಯೇ ಇಲ್ಲದಂತಾಗಿದೆ.

ಬೇರೆ ಬೆಳೆಯುವುದಕ್ಕೂ ಧೈರ್ಯ ಸಾಕಾಗುತ್ತಿಲ್ಲ

ಬೇರೆ ಬೆಳೆಯುವುದಕ್ಕೂ ಧೈರ್ಯ ಸಾಕಾಗುತ್ತಿಲ್ಲ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರಮುಖವಾಗಿ, ಕುಂಬಳಕಾಯಿ, ಪಡವಲಕಾಯಿ, ಅಲಸಂದೆ, ಸೌತೆಕಾಯಿ ಸೇರಿದಂತೆ ವಿವಿಧ ತರಕಾರಿಗಳನ್ನು ಬೆಳೆದು ಕೃಷಿಕರು ಹಣ ಸಂಪಾದಿಸುತ್ತಿದ್ದಾರೆ. ಒಂದು ಹಂತದ ತರಕಾರಿ ಬೆಳೆದು ಲಾಭ ಪಡೆಯುವ ಹೊತ್ತಿನಲ್ಲೇ ಕೊರೊನಾ ಕಾರಣದಿಂದ ವ್ಯಾಪಾರಸ್ಥರು ತರಕಾರಿ ಖರೀದಿಗೆ ಮುಂದಾಗುತ್ತಿಲ್ಲ. ಮುಂಗಾರು ಆರಂಭದ ಹೊತ್ತಿನಲ್ಲಿ ಬೇರೆ ಬೆಳೆಯುವುದಕ್ಕೂ ಧೈರ್ಯ ಸಾಕಾಗುತ್ತಿಲ್ಲ ಅಂತಾ ತರಕಾರಿ ಕೃಷಿಕ ವಾಮದಪದವಿನ ಪದ್ಮನಾಭ ಅವರು ಅಳಲು ತೋಡಿಕೊಂಡಿದ್ದಾರೆ.

ಬೆಳೆಗಳೆಲ್ಲ ಹಾಳಾಗುವ ಆತಂಕ

ಬೆಳೆಗಳೆಲ್ಲ ಹಾಳಾಗುವ ಆತಂಕ

ಎಪ್ರಿಲ್- ಮೇ ತಿಂಗಳಿನಲ್ಲಿ ಶುಭ ಕಾರ್ಯಗಳು ಅತೀ ಹೆಚ್ಚು ನಡೆಯುವುದರಿಂದ ತರಕಾರಿಗಳು ಒಳ್ಳೆಯ‌ ದರದಲ್ಲಿ ಮಾರಾಟವಾಗುವ ವಿಶ್ವಾಸ ಕೃಷಿಕರದ್ದಾಗಿತ್ತು. ಕಳೆದ ಬಾರಿಯೂ ಲಾಕ್‌ಡೌನ್ ನಿಂದ ಕೈ ಸುಟ್ಟುಕೊಂಡಿದ್ದ ರೈತರು, ಈ ಬಾರಿಯೂ ಬೆಳೆಗಳೆಲ್ಲಾ ಹಾಳಾಗುವ ಆತಂಕದಲ್ಲಿದ್ದಾರೆ. ಗ್ರಾಮೀಣ ಭಾಗದ ರೈತರೆಲ್ಲ ಹೆಚ್ಚಾಗಿ ಮಂಗಳೂರಿನ ಮಾರುಕಟ್ಟೆಗಳಿಗೆ ತರಕಾರಿ ಸಾಗಿಸುತ್ತಿದ್ದು, ಈ ಬಾರಿ ತರಕಾರಿ ತರಬೇಡಿ ಎಂದು ವ್ಯಾಪಾರಸ್ಥರೇ ಹೇಳುತ್ತಿದ್ದಾರೆ.

ಮೀನುಗಾರಿಕೆಗೂ ಕೊರೊನಾ ಬರೆ

ಮೀನುಗಾರಿಕೆಗೂ ಕೊರೊನಾ ಬರೆ

ಕರಾವಳಿಯ ಆರ್ಥಿಕತೆಯಯ ಜೀವನಾಡಿ ಮತ್ಸೋದ್ಯಮಕ್ಕೂ ಕೊರೊನಾ ಕಾರ್ಮೋಡ ಆವರಿಸಿದೆ. ಮೀನುಗಾರಿಕೆಯನ್ನೇ ನಂಬಿ ಜೀವನ ಸಾಗಿಸುತ್ತಿದ್ದ ಸಾವಿರಾರು ಮೀನುಗಾರರು ಈಗ ಅತಂತ್ರರಾಗಿದ್ದಾರೆ.

ಮಂಗಳೂರಿನ ಮೀನುಗಾರಿಕಾ ಬಂದರಿನಲ್ಲಿ ಎರಡು ಸಾವಿರಕ್ಕೂ ಹೆಚ್ಚು ಕಾರ್ಮಿಕರು ಪ್ರತಿನಿತ್ಯ ದುಡಿಯುತ್ತಿದ್ದರು. ಕೋಟ್ಯಂತರ ರೂಪಾಯಿ ವಹಿವಾಟು ಕೇವಲ ಮಂಗಳೂರು ಬಂದರಿನಿಂದಲೇ ನಡೆಯುತ್ತಿತ್ತು. ಆದರೆ ಈ ಬಾರಿ ಬಂದರಿನಲ್ಲಿ ಕೆಲಸ-ಕಾರ್ಯಗಳು ಸಂಪೂರ್ಣ ನಿಂತುಹೋಗಿದೆ. ಮೀನುಗಾರಿಕಾ ಬೋಟ್ ಗಳೆಲ್ಲಾ ದಡದಲ್ಲಿ ಲಂಗರು ಹಾಕಿದ್ದು, ಮೀನುಗಾರ ಮತ್ತೆ ಸಂಕಷ್ಟದ ಕಡಲ ಅಲೆಯೊಳಗೆ ಮರೆಯಾಗಿದ್ದಾನೆ.

English summary
The state government has implemented strict lockdown guidelines, causing loss to the fishing industry, including agricultural products in Dakshina Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X