ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದಕ್ಷಿಣ ಕನ್ನಡ: ತೋಟದಿಂದ ಅಂಗಳಕ್ಕೆ ರೋಪ್‌ವೇ ಮಾಡಿದ ಅಡಿಕೆ ಕೃಷಿಕ

By ಮಂಗಳೂರು ಪ್ರತಿನಿಧಿ
|
Google Oneindia Kannada News

ಮಂಗಳೂರು, ಡಿಸೆಂಬರ್ 31: ಕರಾವಳಿಯ ಕೃಷಿಕರ ಜೀವನಾಡಿ ಅಡಿಕೆ ಬೆಳೆ. ಭತ್ತ ಸರಿದು ಅಡಿಕೆಯನ್ನು ಮುಖ್ಯ ಬೆಳೆಯನ್ನಾಗಿ ಮಾಡಿದ ಕೃಷಿಕರಿಗೆ ಕೆಲಸಕ್ಕೆ ಜನ ಸಿಗುತ್ತಿಲ್ಲ ಅನ್ನುವುದು ಪ್ರತಿದಿನದ ಗೋಳಾಗಿದೆ. ಅಡಿಕೆ ಬೆಳೆ ಬೆಳೆಯಲು ಸಾಧ್ಯವಿಲ್ಲ. ಕಾಲಕಾಲಕ್ಕೆ ಗೊಬ್ಬರ, ಮದ್ದು ಸಿಂಪಡಣೆ ಅಸಾಧ್ಯ ಅನ್ನುವುದು ಕೃಷಿಕರ ಸರ್ವೇ ಸಾಮಾನ್ಯ ಅಳಲಾಗಿದೆ.

ಅದರಲ್ಲೂ ಕರಾವಳಿ ಮತ್ತು ಕಾಸರಗೋಡು ಜಿಲ್ಲೆಗಳು ಭೌಗೋಳಿಕವಾಗಿ ಏರು ತಗ್ಗಿನಿಂದ ಕೂಡಿದ ಪ್ರದೇಶಗಳಾಗಿದೆ. ಇಲ್ಲಿನ ಹೆಚ್ಚಿನ ಕೃಷಿಕರ ಮನೆ ಮತ್ತು ಅಂಗಳ ಎತ್ತರದಲ್ಲಿದ್ದರೆ, ಕೃಷಿ ತೋಟವಿರುವುದು ಮೂವತ್ತೋ, ನಲವತ್ತೋ ಅಡಿ ಆಳದಲ್ಲಿ. ಕೃಷಿಗೆ ಬೇಕಾದ ಗೊಬ್ಬರ ಇತ್ಯಾದಿ ಮೇಲಿನಿಂದ ಕೆಳಕ್ಕೆ ಹೊರುವ ಕಷ್ಟ ಒಂದೆಡೆಯಾದರೆ, ಅಡಿಕೆ, ತೆಂಗು, ಬಾಳೆ ಇತ್ಯಾದಿ ಕೃಷಿ ಉತ್ಪನ್ನಗಳನ್ನು ಕೆಳಗಿನ ತೋಟದಿಂದ ಮನೆಯೆದುರಿನ ಅಂಗಳಕ್ಕೆ ತರುವ, ಹೊರುವ ಕೆಲಸ ತ್ರಾಸದಾಯಕ ಮತ್ತು ಕಷ್ಟಕರವಾಗಿದೆ. ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವಲ್ಲಿ ಕಾಸರಗೋಡು- ದಕ್ಷಿಣ‌ ಕನ್ನಡ ಗಡಿಭಾಗದ ಕೃಷಿಕರೋರ್ವರು ಯಶಸ್ವಿಯಾಗಿದ್ದಾರೆ.

 ಶ್ರೀಹರಿ ಭಟ್ ಹೊಸ ಸಂಶೋಧನೆ

ಶ್ರೀಹರಿ ಭಟ್ ಹೊಸ ಸಂಶೋಧನೆ

ಪೆರ್ಲ ಸಮೀಪದ ಸಜಂಗದ್ದೆ ನಿವಾಸಿ ಪ್ರಗತಿಪರ ಕೃಷಿಕರಾಗಿರುವ ಶ್ರೀಹರಿ ಭಟ್ ಹೊಸ ಸಂಶೋಧನೆ ಮಾಡಿದ್ದಾರೆ. ಕರಾವಳಿ ಭಾಗದ ಎಲ್ಲಾ ಕಡೆಗಳಲ್ಲಿ ಸಾಮಾನ್ಯವಾಗಿ ಇರುವಂತೆ ಕೃಷಿ ತೋಟ ಒಂದು ಕಡೆ, ಮನೆ ಒಂದು ಕಡೆಯಂತೆ ಶ್ರೀಹರಿ ಭಟ್ ಅವರದ್ದೂ ಸಮಸ್ಯೆಯಾಗಿದೆ. ಇವರ ಮನೆ ಕೃಷಿ ತೋಟದಲ್ಲಿ ಸುಮಾರು 40 ಅಡಿ ಎತ್ತರದಲ್ಲಿದ್ದು, ಕೃಷಿ ಉತ್ಪನ್ನಗಳನ್ನು ಹಾಗೂ ತೋಟಗಳಿಗೆ ಹಾಕಬೇಕಾದ ಗೊಬ್ಬರಗಳನ್ನು ಹೊತ್ತುಕೊಂಡೇ ಸಾಗಿಸಬೇಕಾದ ಅನಿವಾರ್ಯತೆಯಿತ್ತು. ಈ ಕೆಲಸಕ್ಕಾಗಿಯೇ ಸಾಕಷ್ಟು ಹಣ ಹಾಗೂ ಸಮಯ ಪೋಲಾಗುತ್ತಿರುವುದನ್ನು ಮನಗಂಡ ಶ್ರೀಹರಿ ಭಟ್ ರೋಪ್‌ವೇ ಮೂಲಕ ಕೃಷಿ ಉತ್ಪನ್ನ ಮತ್ತು ಗೊಬ್ಬರಗಳನ್ನು ಕೃಷಿ ತೋಟಕ್ಕೆ ಸಾಗಿಸುವ ಸಾಧನವೊಂದನ್ನು ಪರಿಚಯಿಸಿದ್ದಾರೆ.

 ಮನೆಯಿಂದ ನೇರವಾಗಿ ಕೃಷಿ ತೋಟಕ್ಕೆ ರವಾನೆ

ಮನೆಯಿಂದ ನೇರವಾಗಿ ಕೃಷಿ ತೋಟಕ್ಕೆ ರವಾನೆ

ಈ ಸಾಧನದ ಅಳವಡಿಕೆಯ ಬಳಿಕ ಶ್ರೀಹರಿ ಭಟ್ ಇದೀಗ ಫುಲ್ ಖುಷಿಯಾಗಿದ್ದು, ಇತರ ಕೃಷಿಕರಿಗೂ ತಮ್ಮಂತೆಯೇ ಮಾಡುವಂತೆ ಹುರಿದುಂಬಿಸುತ್ತಿದ್ದಾರೆ. ಮನೆಯಿಂದ ನೇರವಾಗಿ ಕೃಷಿ ತೋಟಕ್ಕೆ ಹಾಗೂ ಕೃಷಿ ತೋಟದಿಂದ ನೇರವಾಗಿ ಮನೆಗೆ ಸಂಪರ್ಕ ಕಲ್ಪಿಸುವ ರೋಪ್‌ವೇ ಒಂದನ್ನು ಶ್ರೀಹರಿ ಭಟ್ ಅಳವಡಿಸಿಕೊಂಡಿದ್ದು, ಗರಿಷ್ಠ 250 ಕಿಲೋಗಿಂತಲೂ ಮಿಕ್ಕಿದ ಸಾಮಾಗ್ರಿಗಳನ್ನು ಈ ರೋಪ್‌ವೇ ಮೂಲಕ ಅನಾಯಾಸವಾಗಿ ಸಾಗಿಸಬಹುದಾದ ವ್ಯವಸ್ಥೆಯನ್ನು ಮಾಡಲಾಗಿದೆ.

ರೈತರಿಗೆ ಪ್ರಯೋಜನಕಾರಿಯಾಗಿರುವ ಈ ರಾಟೆ ರೋಪ್‌ವೇ ತಯಾರಿಸಲು ಒಂದಷ್ಟು ಸಲಕರಣೆಗಳು ಬೇಕಾಗುತ್ತಿದ್ದು, ಶ್ರೀಹರಿ ಭಟ್ ಈ ವಿಧಾನವನ್ನು ಯಶಸ್ವಿಯಾಗಿ ಅಳವಡಿಸಿಕೊಂಡಿದ್ದಾರೆ. ಈ ವಿಧಾನ ಅಳವಡಿಸಲು ಎರಡು ರಾಟೆಗಳು ಮತ್ತು ಕ್ಲಾಂಪ್‌ಗಳನ್ನು ಶ್ರೀಹರಿ ಭಟ್ ಬಳಸಿಕೊಂಡಿದ್ದಾರೆ.

 ಐವತ್ತು ಕೆಜಿ ಭಾರದ ಅಡಿಕೆ ಮೂಟೆ ಸಾಗಿಸಬಹುದು

ಐವತ್ತು ಕೆಜಿ ಭಾರದ ಅಡಿಕೆ ಮೂಟೆ ಸಾಗಿಸಬಹುದು

ಮನೆಯ ಅಂಗಳದಲ್ಲಿ ಒಂಭತ್ತು ಅಡಿ ಉದ್ದದ, ಮೂರಡಿ ಮಣ್ಣಿನೊಳಗೆ ಇಳಿಸಿರುವ ಕಬ್ಬಿಣದ ಗಟ್ಟಿ ಸಲಾಕೆ. ಇನ್ನೊಂದು ಸುಮಾರು ಐವತ್ತು ಅಡಿ ತಗ್ಗಿನಲ್ಲಿ ಇರುವ ತೋಟದಲ್ಲಿ ಏಳು ಅಡಿ ಉದ್ದದ, ಮೂರಡಿ ಮಣ್ಣಿನೊಳಗೆ ಇಳಿಸಿರುವ ಗಟ್ಟಿ ಸಲಾಕೆ. ಇವೆರಡರ ನಡುವೆ 8 ಎಂಎಂ ದಪ್ಪದ ಕಬ್ಬಿಣದ ಕೇಬಲ್ ಎಳೆದು ಕಟ್ಟಿ, ಅದರ ಮೇಲೆ ಚಲಿಸುವ ರಾಟೆ ಅಳವಡಿಸಿದ್ದಾರೆ.

ಕೇಬಲ್ ಮೇಲೆ ಚಲಿಸುವ ರಾಟೆ ಇದ್ದರೆ ಅಂಗಳದ ಕಂಬದ ಬಳಿ ಸ್ಥಿರ ರಾಟೆ ಅಳವಡಿಸಿ ನೈಲಾನ್ ಹಗ್ಗ ಅಳವಡಿಸಲಾಗಿದೆ. ಸ್ಥಿರ ರಾಟೆಯಿಂದ ಕೇಬಲ್ ಮೇಲಿನ ರಾಟೆ ಎಳೆಯಲು ಸಂಪರ್ಕ ಕೊಡಲಾಗಿದೆ. ಇದರ ಗರಿಷ್ಠ ಸಾಮರ್ಥ್ಯ ಇನ್ನೂರೈವತ್ತು ಕೆಜಿಗೂ ಅಧಿಕವಾಗಿದ್ದು, ಸುಮಾರು ನಲವತ್ತು- ಐವತ್ತು ಕೆಜಿ ಭಾರದ ಅಡಿಕೆಯ ಮೂಟೆ ನಿಮಿಷಾರ್ಧದಲ್ಲಿ ತೋಟದಿಂದ ಅಂಗಳಕ್ಕೆ ಅನಾಯಾಸವಾಗಿ ತಲುಪುತ್ತದೆ.

 ಶೇ.50ರಷ್ಟು ಶ್ರಮ ಹಾಗೂ ಸಮಯದ ಉಳಿತಾಯ

ಶೇ.50ರಷ್ಟು ಶ್ರಮ ಹಾಗೂ ಸಮಯದ ಉಳಿತಾಯ

ತೋಟದ ಮೂಲೆ ಮೂಲೆ ತಲುಪಲು ತೋಟದ ನಡುವೆ ಮಾರ್ಗ ನಿರ್ಮಿಸಲಾಗಿದೆ. ಜೊತೆಗೆ ಎರಡು ಚಕ್ರದ ಮಾನವ ಚಾಲಿತ ಕೈಗಾಡಿಯೂ ಇದ್ದು, ಎಲ್ಲಾ ಕಡೆಯಿಂದ ಹೆಚ್ಚಿನ ಪ್ರಯಾಸವಿಲ್ಲದೆ ಅಡಿಕೆಗಳನ್ನು ಸಂಗ್ರಹಿಸಿ ರೋಪ್‌ವೇ ಇರುವ ಜಾಗದಲ್ಲಿ ಶೇಖರಿಸಲಾಗುತ್ತದೆ. ಹೀಗೆ ಶೇಖರಿಸಿದ ಕೃಷಿ ಉತ್ಪನ್ನಗಳನ್ನು ಗೋಣಿ ಚೀಲದಲ್ಲಿ ತುಂಬಿ ನೇರವಾಗಿ ಮನೆಯ ಅಂಗಳದಲ್ಲಿ ಡಂಪ್ ಮಾಡುವ ವ್ಯವಸ್ಥೆಯನ್ನು ರೂಪಿಸಲಾಗಿದೆ. ಅತ್ಯಂತ ಕಡಿಮೆ ಖರ್ಚಿನ ಈ ಸಾಧನಕ್ಕೆ ಸುಮಾರು 15 ಸಾವಿರ ರೂಪಾಯಿಗಳ ವೆಚ್ಚ ತಗುಲುತ್ತಿದ್ದು, ಈ ವೆಚ್ಚವನ್ನು ಕೇವಲ 25 ಕಿಲೋ ಅಡಿಕೆ ಮಾರಿ ಪಡೆಯಬಹುದು ಎನ್ನುತ್ತಾರೆ ಶ್ರೀಹರಿ ಭಟ್.

ಈ ರಾಟೆಯಿಂದಾಗಿ ಸುಮಾರು ಶೇ.50ರಷ್ಟು ಶ್ರಮ ಹಾಗೂ ಸಮಯದ ಉಳಿತಾಯವಾಗಿದ್ದು, ಈ ರೀತಿಯ ತೋಟದ ವ್ಯವಸ್ಥೆಯನ್ನು ಹೊಂದಿರುವ ಕೃಷಿಕರು ಇಂಥ ಸಾಧನದತ್ತ ಗಮನಹರಿಸಬೇಕು ಎನ್ನುವ ಅಭಿಪ್ರಾಯಗಳೂ ಕೇಳಿ ಬರುತ್ತಿದೆ.

ರಾಟೆ ಸಾಧನ ಕೃಷಿಕರಿಗೆ ಅನುಕೂಲತೆ ಕಲ್ಪಿಸಲಿದೆ. ಕರಾವಳಿ ಭಾಗದ ಹೆಚ್ಚಿನ ಕೃಷಿ ಜಮೀನುಗಳು ಭೌಗೋಳಿಕವಾಗಿ ಏರು ತಗ್ಗಿನಿಂದ ಕೂಡಿವೆ. ಅವರೆಲ್ಲರಿಗೂ ಈ ಸಾಧನ ಹೊರೆ ಹಗುರಾಗಿಸುವುದರಲ್ಲಿ ಸಂದೇಹವೇ ಇಲ್ಲ.

English summary
Dakshina Kannada farmer Shrihari Bhat has made a ropeway to bring farm produce from the garden to the house yard.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X